ಇರುವುದೆಲ್ಲವ‌ ಬಿಟ್ಟು ಇರದುದರೆಡೆ ತುಡಿಯಲದುವೆ ಜೀವನವು....

ಇರುವುದೆಲ್ಲವ‌ ಬಿಟ್ಟು ಇರದುದರೆಡೆ ತುಡಿಯಲದುವೆ ಜೀವನವು....

“ ನನ್ನ ದೇಶದಲ್ಲಿ ಸಂಸ್ಕೃತ ಶ್ಲೋಕಗಳೊಂದಿಗೆ  ಯಾರಾದರೂ ಸ್ವಾಗತಿಸಿದ್ದರೆ ದೊಡ್ಡ ಕೋಲಾಹಲವೇ ಸೃಷ್ಟಿಯಾಗುತ್ತದೆ.”

ನರೇಂದ್ರ ಮೋದಿಯವರು ಐರ್ಲೆಂಡಿನ ಮಕ್ಕಳ ಸಂಸ್ಕೃತ ಸ್ವಾಗತವನ್ನು ಆನಂದಿಸಿ ಉದ್ಗರಿಸಿದ ಮಾತು ನನ್ನನ್ನು ಚಿಂತನೆಗೆ ಹಚ್ಚಿತು. ಏನಪ್ಪಾ… ಯಾರೋ ಭಗವಂತನ ಕಡೆಯವರಾ? ಅಂತ ಹುಬ್ಬೇರಿಸಬೇಡಿ. ನಾನೊಬ್ಬಳು ಸಂಸ್ಕೃತ ಶಿಕ್ಷಕಿ, ಮಿಗಿಲಾಗಿ ಸಂಸ್ಕೃತಪ್ರೇಮಿ! ನಮ್ಮ ದೇಶದಲ್ಲಿ ಏದುಸಿರು ಬಿಡುತ್ತಾ ನಡೆಯುವ ಭಾಷೆಗೆ ಪ್ರಪಂಚದ ಇನ್ನೆಲ್ಲೋ ಮೂಲೆಯಲ್ಲಿ ಪಲ್ಲಕ್ಕಿ ಸೇವೆ. ತನ್ನ ಜನ್ಮಭೂಮಿಯಲ್ಲಿ ಅದರ ಹೆಸರೆತ್ತಲೂ ಉದಾಸೀನ . ಅಲ್ಲೆಲ್ಲೋ  ಅದಕ್ಕೆ  ರಾಜಸನ್ಮಾನ! ಎಂದೆನಿಸಿತು ಅಷ್ಟೇ!

ನಾನು ಕೆಲಸಮಾಡುವ ಶಿಕ್ಷಣಸಂಸ್ಥೆಯಲ್ಲಿ ಮಕ್ಕಳಿಗೆ ಐದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ  ತಮ್ಮ ಆಯ್ಕೆಯ ಭಾಷೆಯೊಂದನ್ನು ದ್ವಿತೀಯ/ತೃತೀಯ ಭಾಷೆಯಾಗಿ ಕಲಿಯುವ ಅವಕಾಶವಿದೆ. ಇದಕ್ಕಾಗಿ ನಾಲ್ಕನೇ ತರಗತಿಯ ಮಕ್ಕಳ ಪಾಲಕರಿಗೆ ವರ್ಷದ ಕೊನೆಯಲ್ಲಿ ನಮ್ಮಲ್ಲಿ ಕಲಿಸಲಾಗುವ ವಿವಿಧ ಭಾಷೆಗಳ ಬಗ್ಗೆ ಮಾಹಿತಿಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ನಮ್ಮಲ್ಲಿ  ಹಿಂದಿ, ಕನ್ನಡ, ಸಂಸ್ಕೃತ, ಫ಼ರೆಂಚ್ , ಜರ್ಮನ್, ಸ್ಪಾನಿಶ್, ಜಪಾನಿಸ್ ಭಾಷೆಗಳಲ್ಲಿ ಶಿಕ್ಷಣ ಲಭ್ಯವಿದೆ. ಅಂದು ಸಹಜವಾಗಿಯೇ ಭಾಷಾಶಿಕ್ಷಕರು ತಮ್ಮ ಸರಕನ್ನು ಉತ್ಸಾಹದಿಂದ  ಪ್ರಸ್ತುತಪಡಿಸುತ್ತಾರೆ. ಹಿಂದಿ , ಕನ್ನಡಗಳಿಗೆ ರಾಷ್ಟ್ರಭಾಷೆ- ರಾಜ್ಯಭಾಷೆ ಯೆಂಬ ಶ್ರೀರಕ್ಷೆಯಿದೆ. ವಿದೇಶೀ ಭಾಷೆಗಳಿಗೆ ತಮ್ಮದೇ ಆದ ಪ್ರಭಾವಳಿಯಿದೆ. ಆ ಭಾಷೆಯನ್ನು ಕಲಿತರೆ ಮಗುವಿಗೆ ಭವಿಷ್ಯದಲ್ಲಿ ಒದಗಿಬರಬಹುದಾದ ಉದ್ಯೋಗಾವಕಾಶಗಳು, ಸಾಮಾಜಿಕ ಸ್ಥಾನಮಾನಗಳು …. ಓಹ್…. ಒಂದೇ .. ಎರಡೇ… ಅನೇಕಾನೇಕ ಆಮಿಷಗಳಿವೆ. ಆ ಶುಭದಿನದಂದು ನಮ್ಮ ಬಡಪಾಯಿ ಸಂಸ್ಕೃತ ’ಸ್ಕೋರಿಂಗ್ ಸಬ್ಜೆಕ್ಟ್’ ಎಂಬ  ಮಸುಕಾದ ಕಿರೀಟದೊಂದಿಗೆ ಸಭೆಯಲ್ಲಿ ವಿರಾಜಮಾನವಾಗುತ್ತದೆ. ಆದರೆ ಅಲ್ಲಿ ನೆರೆಯುವ ಸುಶಿಕ್ಷಿತ, ವಿದೇಶಗಳ ರುಚಿ ಉಂಡು ಬಂದ , ಉಚ್ಚ ವರ್ಗದ ಪಾಲಕರು ಅದ್ರಿಂದ ಏನ್ರೀ ಯೂಸು?…. ಯಾರ್ರೀ ಮಾತಾಡ್ತಾರೆ ಈಗಿನ ಕಾಲದಲ್ಲಿ? …. ಜಾಬ್ ಅಪರ್ಚನಿಟೀಸ್  ಏನಿದೆ ಅದರಲ್ಲಿ?….. ದುಡ್ಡು?….. ಹೆಸರು?….. ಎಂಬ ತರ್ಕಬದ್ಧ ಪ್ರಶ್ನೆಗಳ ಚೂಪು ಬಾಣಗಳನ್ನು ಪ್ರಯೋಗಿಸಲಾರಂಭಿಸಿದೊಡನೆಯೇ  ನಡುಗುವ ಸರದಿ ಸಂಸ್ಕೃತದ್ದು.  ವೈಜ್ಞಾನಿಕವಾದ ವ್ಯಾಕರಣ, ಅಪಾರ ಶಬ್ದಸಂಪತ್ತು, ಮಗುವಿನ ಉಚ್ಚಾರ ಶುದ್ಧೀಕರಣಗೊಳಿಸುವ ಅದ್ಭುತಶಕ್ತಿ, ಮಗುವಿನಲ್ಲಿ ಸಾತ್ವಿಕಗುಣಗಳನ್ನು ಉದ್ದೀಪನಗೊಳಿಸುವ ನಂದಾದೀಪದಂತಿರುವ ಈ ಸಂಸ್ಕೃತಸರಸ್ವತಿ  ಅಂದು ಲಕ್ಷ್ಮೀಕಟಾಕ್ಷವಿಲ್ಲದೇ ತತ್ತರಿಸುವುದನ್ನು ಕಂಡಾಗ ನನಗೆ ಸಂಕಟವಾಗುತ್ತದೆ. ಅಯ್ಯೋ…ಒಂದು ಕಡೆ ಅಕ್ಷಯನಿಧಿ- ಇನ್ನೊದೆಡೆ ಸಂಸ್ಕಾರದಾರಿದ್ರ್ಯ!! ಬಹುಶ: ಇದೇ ಸಮಾಜದ ನೀತಿ. ಹಿತ್ತಲಗಿಡ ಮದ್ದಲ್ಲ……

ಹಾಗೆ ನೋಡಿದರೆ ಇದು ಉದ್ದನೆಯ ಪಟ್ಟಿ. ನಮ್ಮ ಆಹಾರಕ್ಕೆ ವಿದೇಶಗಳಲ್ಲಿ ಎಲ್ಲಿಲ್ಲದ ಬೇಡಿಕೆ- ನಮಗೆ ಕಾರ್ನ್ಫ಼ಲೇಕ್, ಬ್ರೆಡ್ ಸಾಂಡ್ವಿಚ್ ಇಷ್ಟ…. , ಯೋಗ- ಆಯುರ್ವೇದಕ್ಕೆ ವಿಶ್ವಮಾನ್ಯತೆ- ನಮಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೇ ಬೇಕು, ನಮ್ಮ ಮನೆಯಲ್ಲಿ ಇಂಗ್ಲೀಷ್ ಮಾತಾಡಿದರೆ ಒಂಥರಾ ನೆಮ್ಮದಿ….. ನಮ್ಮ ಕೌಟುಂಬಿಕ ವ್ಯವಸ್ಥೆಯನ್ನು ಮುರಿಯುವುದರಲ್ಲಿ ಎಲ್ಲಿಲ್ಲದ ಆಸಕ್ತಿ….

ಇವತ್ತು ಬೆಳಗ್ಗೆ  ಹೀಗೆ ಯೋಚಿಸುತ್ತಾ ಶಾಲೆಗೆ ಹೊರಟೆ.  ಗೇಟು ತೆಗೆದು ಹೊರಗೆ ಬಂದರೆ ಮನುವಿನ ವ್ಯವಸ್ಥೆಯಲ್ಲಿ ಸಾಮಾಜಿಕವಾಗಿ ಕೆಳಗಿರುವ ನಮ್ಮ ಎದುರುಗಡೆಯ ಮನೆಯಿಂದ ವೇದಮಂತ್ರಗಳು ಕಿವಿಗಪ್ಪಳಿಸಲಾರಂಭಿಸಿದವು. ಸೂರ್ಯೋದಯಕ್ಕೂ ಮುನ್ನವೇ ಎದ್ದು ಸ್ನಾನ- ಪೂಜೆಗಳನ್ನು ಮುಗಿಸಿದ್ದ ದಂಪತಿ ನನ್ನನ್ನು ನೋಡಿ ಮುಗುಳ್ನಕ್ಕರು. ಯಾಕೋ ಏನೋ…           “ ಸಂಧ್ಯಾವಂದನೆಯಿಂದ ನಮ್ಮ  ದೇಹಕ್ಕೆ ಲಾಭಗಳಿವೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿಲ್ಲ” ಎಂದು ನನ್ನೊಡನೆ ವಾದಕ್ಕಿಳಿಯುವ ನನ್ನ ಮಗನ ನೆನಪು ಮನಸ್ಸಿನಲ್ಲಿ ಹಾದುಹೋಯಿತು.

ಅದಕ್ಕೇ ಅಡಿಗರು ಹೇಳಿದ್ದು- ಇರುವುದೆಲ್ಲವ ಬಿಟ್ಟು ಇರದುದರೆಡೆ ತುಡಿಯಲದುವೆ ಜೀವನವು…

Comments

Submitted by nageshamysore Wed, 09/30/2015 - 17:31

ನಿಮ್ಮ ಮಾತು ನಿಜ ವೇದ ಮೇಡಂ. ಈಗಿನ ವಿದ್ಯಾರ್ಜನೆಯ ಗುರಿ ಜ್ಞಾನಾರ್ಜನೆಯಲ್ಲ - ಅದು ಭವಿಷ್ಯದ ಬದುಕನ್ನು ಉಜ್ವಲವಾಗಿಸಬಲ್ಲ ವಾಣಿಜ್ಯ ಸಲಕರಣೆ. ಹೀಗಾಗಿ ಲಾಭನಷ್ಟದ ಲೆಕ್ಕಾಚಾರದಲ್ಲೆ ನಿರ್ಧಾರಗಳಾಗುವುದು. ಭಾಷೆಗಳಾದರೂ ಅಷ್ಟೆ, ಮತ್ತೊಂದಾದರು ಅಷ್ಟೆ :-)

ಹೌದು ಸರ್ ನಮ್ಮ‌ ಶಾಲೆಯ‌ ಮಕ್ಕಳನ್ನು ನೋಡಿದರೆ ಬಹಳ ದು:ಖವಾಗುತ್ತದೆ. ಎಂಥ‌ ಸಾಂಸ್ಕ್ಱುತಿಕ‌ ಬಡತನ‌... ನೆಲದ‌ ಸವಿಯುಣ್ಣದ‌ , ಸಿರಿಗಂಧವಿರದ‌ ಸುಂದರ‌ ಪುಷ್ಪಗಳು ನಮ್ಮ‌ ಮಕ್ಕಳು...

ಯೋಚನೆಗೆ ಹಚ್ಚುವ ಬರಹ. ಒಂದು ಭಾಷೆಯೊಂದಿಗೆ ಸಂಸ್ಕಾರ, ಸಂಸ್ಕೃತಿಯನ್ನು ಕೂಡ ನಾವು ಕಳೆದುಕೊಳ್ಳುತ್ತಿದ್ದೇವೆ. ಶ್ರೀಮಂತ ಭಾಷೆಯೊಂದನ್ನು ಕಳೆದುಕೊಂಡು ನತದೃಷ್ಟರಾಗುತ್ತಿದ್ದೇವೆ. ಕನ್ನಡವೂ ಕೂಡ ಇದೇ ದಾರಿ ಹಿಡಿದಿರುವುದು ವಾಸ್ತವ ಮತ್ತು ವಿಷಾದನೀಯ.

Submitted by kavinagaraj Sat, 10/10/2015 - 20:03

ಇಂದಿನ ಆಡಳಿತ ವ್ಯವಸ್ಥೆ ಇಂತಹ ದುರವಸ್ಥೆಗೆ ಸಿಂಹಪಾಲಿನ ಕೊಡುಗೆ ನೀಡಿದೆ. ಖಾಲಿ ಇರುವ ಸಂಸ್ಕೃತ ಅಧ್ಯಾಪಕರ ಭರ್ತಿ ದಶಕಗಳಿಂದ ಮಾಡಿಯೇ ಇಲ್ಲ. ತಾನಾಗಿ ಸಂಸ್ಕೃತ ಮರೆಗೆ ಸರಿಯಬೇಕೆಂಬ ಗುಪ್ತಗುರಿ ಇದ್ದರೂ ಇದ್ದೀತು! ಆಸಕ್ತರಿಂದ ಮಾತ್ರ ಸಂಸ್ಕೃತ ಉಳಿಯುತ್ತಿದೆಯಷ್ಟೇ.

ಅನುಮಾನವೇ ಇಲ್ಲ‌. ಸಂಸ್ಕ್ಱುತ‌ ತಾನಾಗಿಯೇ ಸಾಯಲಿ ಎಂಬುದೇ ಉದ್ದೇಶ‌.