ಪೋಲೀಸ್ ಪಾಡು

ಪೋಲೀಸ್ ಪಾಡು

    ಸಾಮಾನ್ಯವಾಗಿ ಪೋಲೀಸ್  ಅಂದ ಕೂಡಲೇ  ನಮ್ಮ ಮನಸ್ಸಿಗೆ  ಮೂಡುವುದು ಅವರ ದೌರ್ಜನ್ಯ ಹಾಗೂ ದರ್ಪದ ಚಿತ್ರಣವೇ.  ಆದರೆ, ನಿಜ ಜೀವನದಲ್ಲಿ, ಕೆಳಹಂತದ ಪೋಲೀಸರ  ಪಾಡು, ನಾಯಿಪಾಡಾಗಿರುವುದು ಆಶ್ಚರ್ಯವಾದರೂ ಸತ್ಯ.  ಇತ್ತೀಚಿನ  ಪೋಲೀಸರ ಎರಡು ಆತ್ಮಹತ್ಯೆ  ಹಾಗೂ ಒಂದು ರಾಜೀನಾಮೆಯ ಕಥನ ಅವರ ಇಂದಿನ ಸ್ಥಿತಿಗತಿಗೆ  ಹಿಡಿದ ಕನ್ನಡಿ.

    ಭಾರತದಲ್ಲಿ `ಭ್ರಷ್ಟಾಚಾರ'ದ  ಸಮನಾರ್ಥಕ ಪದವೇ `ಕಂದಾಯ ಇಲಾಖೆ'.  ಇದಕ್ಕೆ  ಸರಿಸಾಟಿಯಾಗಿ  ಪೈಪೋಟಿ ನೀಡುತ್ತಿದೆ, ಪೋಲೀಸ್ ಇಲಾಖೆ.  ಆದರೆ, ಇದಕ್ಕೆ  ಮೂಲ ಕಾರಣ, ಕನಿಷ್ಠತಮವಾದ ಅವರ ಸಂಬಳ. ಪ್ರಾಮಾಣಿಕವಾಗಿ ಸಂಸಾರದ ಖರ್ಚುಗಳನ್ನು ಸರಿದೂಗಿಸಲಾಗದೇ, `ಯಾರಿಗೆ ಸಾಲುತ್ತೆ ಸಂಬಳ' ಅಂತ‌ ಹಾಡುತ್ತ‌, ವಾಮಮಾರ್ಗಕ್ಕೆ  ಅನಿವಾರ್ಯತೆಯಿಂದ ಇಳಿಯುತ್ತಾರೆ.  ನಂತರ, `ನೀರಿಗಿಳಿದವನಿಗೆ  ಛಳಿಯೇನು ಮಳೆಯೇನು' ಅನ್ನುತ್ತ ಭ್ರಷ್ಟಾಚಾರದಲ್ಲೇ ಮುಳುಗಿಬಿಡುತ್ತಾರೆ.  ಅಲ್ಲಾ, ಪೋಲೀಸರು ಮಹಾಭ್ರಷ್ಟರು  ಅಂತ ಘಂಟಾಘೋಷವಾಗಿ ಹೇಳುತ್ತೀವಲ್ಲಾ, ನಾವುಗಳು ಸಾಚಾನೇ ಸ್ವಾಮೀ? ಹೆಲ್ಮೆಟ್ ಇಲ್ಲದೇ ಸ್ಟೈಲಾಗಿ ಹೋಗ್ತೀವಲ್ಲಾ, ಅದು ತಪ್ಪಲ್ವಾ? One way ನಲ್ಲಿ ರಾಜಾರೋಷವಾಗಿ  ನುಗ್ತೀವಲ್ಲಾ, ಅದು ಸರೀನಾ? ದುಡ್ಡು ಉಳಿಸೋಕ್ಕೆ ಒಂದೇ ಆಟೋನಲ್ಲಿ 5-6 ಜನ ತುಂಬ್ಕೊಂಡು ಹೋಗ್ತೀವಲ್ಲಾ, ಅದು ತಪ್ಪಲ್ವಾ?  ಪೋಲೀಸರಲ್ಲಿನ ಭ್ರಷ್ಟಾಚಾರದ ಬಯಕೆಗೆ ನೀರೆರೆದು ಪೋಷಿಸಿ (ನಮ್ಮ ತಪ್ಪನ್ನು ಮರೆಮಾಚಿ) ಅವರನ್ನು  ಕಳ್ಳರೆನ್ನುವುದು  ಸರಿಯಾ? ಕ್ಷಮಿಸಿ, ನಾನಿಲ್ಲಿ ಪೋಲೀಸರ ಭ್ರಷ್ಟಾಚಾರವನ್ನು ಸಮರ್ಥಿಸುತ್ತಿಲ್ಲ.  ನಾವೂ ಅದರಲ್ಲಿ ಸಮಭಾಗೀದಾರರು ಅನ್ನುತ್ತಿದ್ದೀನಷ್ಟೇ.

    ಪೋಲೀಸರ ನಾಯಿಪಾಡು, ಸಾರ್ವಜನಿಕರಿಗೆ, ಹಿಂದೆಂದಿಗಿಂತಲೂ ಇಂದು ಜಾಸ್ತಿ ಗೋಚರವಾಗುತ್ತಿದೆ. ಯಾ ಅವರ ಅರಿವಿಗೆ ಬರುತ್ತಿದೆ.  ಸತ್ಯವನ್ನು ಸಾರ್ವಜನಿಕರೆದುರು ತಂದ ಕೀರ್ತಿ ಕೆಲ ಪತ್ರಿಕಾ ಮಾಧ್ಯಮಗಳಿಗೆ ಸಲ್ಲುತ್ತದೆ. ಹಾಗಾಗಿಯೇ, ಇತ್ತೀಚೆಗೆ ಸುದ್ಧಿಯಾದ `ಪೋಲೀಸ್ ಪ್ರತಿಭಟನೆ' ಗೆ  ಸಾಕಷ್ಟು ಸಾರ್ವಜನಿಕ ಬೆಂಬಲ ದೊರಕಿತು.  ಸರ್ಕಾರದ ಆಶ್ವಾಸನೆ ಹಾಗೂ ಬೆದರಿಕೆಗಳಿಂದ ಪ್ರತಿಭಟನೆಯನ್ನು ಅವರು ಹಿಂಪಡೆದರೂ, ಜನರ ದೃಷ್ಟಿಯಲ್ಲಿ ಹೀರೋಗಳಾದವರು ಪೋಲೀಸರೇ.

    ಪೋಲೀಸರ ಇಂದಿನ  ನಾಯಿಪಾಡಿನ ಪರಿಸ್ಥಿತಿಗೆ  ಬಹಳ ಆಯಾಮಗಳಿವೆ.  ಅವುಗಳಲ್ಲಿ  ಪ್ರಮುಖವಾದದ್ದು ಪೋಲೀಸರ ಲಭ್ಯತೆ.  ನ್ಯಾಯವಾಗಿ  ಇರಬೇಕಾದ  ಪರಿಮಾಣಕ್ಕಿಂತ ಬಹಳ ಕಡಿಮೆ ಪ್ರಮಾಣದಲ್ಲಿ  ಪೋಲೀಸ್ ಸಂಖ್ಯೆಯಿದ್ದು, ಇರುವವರೇ ಅಷ್ಟೂ ಕೆಲಸದ ಭಾರವನ್ನು ಹೊರಬೇಕಾದ  ಪರಿಸ್ಥಿತಿ ಇದೆ.  ಮೊದಲೇ ಒತ್ತಡದಲ್ಲಿ  ನಿರ್ವಹಿಸುವಂಥ ಕಾರ್ಯ, ಜೊತೆಗೆ ಕಾರ್ಯಬಾಹುಳ್ಯ ! ದಿನದ  12 ರಿಂದ 14 ಘಂಟೆ  ಕಾರ್ಯನಿರ್ವಹಣೆ ಪೋಲೀಸರ ಸಾಮಾನ್ಯ ದಿನಚರಿಯಾದರೆ, ಕೆಲವೊಮ್ಮೆ  ಪರಿಸ್ಥಿತಿಯ ದೆಸೆಯಿಂದಾಗಿ  ಅವರು ಸತತವಾಗಿ  2-3 ದಿನ ಕಾರ್ಯನಿರ್ವಹಿಸಬೇಕಾಗುತ್ತದೆ ! ಅವರೂ ಮನುಷ್ಯರಲ್ಲವೇ? ಮನುಷ್ಯ ಇಷ್ಟೊಂದು  ಒತ್ತಡದಲ್ಲಿದ್ದಾಗ, ಅವರಿಂದ  ಯಾವಾಗಲೂ ಸೌಜನ್ಯ ನಿರೀಕ್ಷಿಸುವುದು ತಪ್ಪಾಗುತ್ತದೆ.  ತುಂಬಾ ಒತ್ತಡದಲ್ಲಿ ಕುಕ್ಕರ್ ಕೂಡಾ ಸಿಡಿಯುತ್ತದೆ - ನೆನಪಿರಲಿ.  ಅಪರೂಪಕ್ಕಿರಬೇಕಾದ ಬಹುವಾದ ಒತ್ತಡ, ಪ್ರತಿದಿನವೂ  ಇರುವುದರಿಂದಲೇ ಪೋಲೀಸರು  ಅಷ್ಟು ಕಟುವಾಗಿ ವರ್ತಿಸುತ್ತಾರೆಂದು ನಿರ್ಣಯಿಸಲು  ನಾವು ಮನಶ್ಶಾಸ್ತ್ರಜ್ಞರೇ ಆಗಬೇಕೆಂದಿಲ್ಲ‌.

    ಇನ್ನೊಂದು ಆಯಾಮ, ನಾನು  ಮೊದಲೇ  ಹೇಳಿದಂತೆ, ಪೋಲೀಸರ  ಕಡಿಮೆ ಸಂಬಳ.  ಅವರು  ಮಾಡುವ ಕೆಲಸದ‌ 10%ಗೂ ಕಡಿಮೆ  ಕೆಲಸ ಮಾಡುವ ಸರ್ಕಾರೀ ನೌಕರರಿಗೆ  ಅವರ 2-3 ಪಟ್ಟು ಜಾಸ್ತಿ ಸಂಬಳವಿದೆ. ಸಕಾರಣವಿದ್ದರೂ ಪೋಲೀಸರು ಪ್ರತಿಭಟನೆ  ನಡೆಸಕೂಡದು ಅನ್ನುವ ಸರ್ಕಾರ, ಅವರ  ಸ್ಥಿತಿಗತಿಗಳು ಅವರು ಮಾಡುವ  ಕೆಲಸಕ್ಕೆ ತಕ್ಕುದಾಗಿರಬೇಕೆಂದು ಯೋಚಿಸದಿರುವ ಹಿಂದೆ ಯಾವ ಹುನ್ನಾರವಿದೆಯೋ ತಿಳಿಯದು.   ಯಾವುದೇ ಪಕ್ಷದ ಸರ್ಕಾರವಿದ್ದರೂ  ಪೋಲೀಸರ ಗತಿ ಮಾತ್ರ  ಅಧೋಗತಿಯೇ ಸೈ.  ರಾಜಕಾರಣಿಗಳಿಗೆ ಜೀತದಾಳಿನಂತಹ ಪೋಲೀಸಪ್ಪ ಬೇಕು. ತಮ್ಮ ತಾಳಕ್ಕೆ  ತಕ್ಕಂತೆ ಕುಣಿಯಬಲ್ಲಂಥವರೇ ಅವರಿಗೆ ಬೇಕು. ಅಂಥವರನ್ನೇ ತಮ್ಮ ಕ್ಷೇತ್ರಕ್ಕೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ.  ತಮ್ಮ ಕ್ಷೇತ್ರದಲ್ಲಿ `ಯಾವುದೇ ರೀತಿ'ಯಲ್ಲಿಯಾದರೂ ತಮ್ಮ ಮಾತೇ ನಡೆಯಬೇಕೆಂಬ  ಜಹಗೀರ್ದಾರೀ ನಡವಳಿಕೆ.  ತಮ್ಮ ಮಾತಿಗೆ  ಕವಡೆ ಕಿಮ್ಮತ್ತು  ಕೊಡದ ಅಧಿಕಾರಿಗೆ  ವರ್ಗಾವಣೆ ಶಿಕ್ಷೆ.  ಅನುಪಮಾ ಶೆಣೈ, ಒರ್ವ‌ ದಕ್ಷ‌ DYSP, ಪರಮೇಶ್ವರ ನಾಯ್ಕ ಅನ್ನುವ ಕ್ಷುಲ್ಲಕ ರಾಜಕಾರಣಿಯ ಕಾಟ‌ ತಾಳಲಾರದೇ ತಾನೇ ರಾಜೀನಾಮೆ ಬಿಸಾಕಿದ್ದು?

ರಾಜಕಾರಣಿಗಳು ಪೋಲೀಸರನ್ನು ಜೀತದಾಳಿನಂತೆ ನೋಡುತ್ತಾರೆ ಅಂದೆನಲ್ಲವೇ?  ಶಾಂತಂ ಪಾಪಂ, ತಪ್ಪು ತಪ್ಪು.  ಪಾಪ ಪೋಲೀಸರು  ತಮ್ಮ ಹಿರೀಕರಿಗೆ  ಜೀತದಾಳಾಗಿ  ದುಡಿಯಬೇಕಾದ ಅನಿವಾರ್ಯತೆಯನ್ನು, `ಆರ್ಡರ್ಲೀ' ಪದ್ಧತಿ  ತಂದಿಟ್ಟಿದೆ. ಅಧಿಕೃತವಾಗಿ, ರಾಜಾರೋಷವಾಗಿ  ನಡೆಯುವ ಈ ಜೀತ ಪದ್ಧತಿಯನ್ನು ಕೊನೆಗಾಣಿಸಲು ಯಾವ ಪಕ್ಷದ ಸರ್ಕಾರವೂ ಮುಂದಾಗದಿರುವುದನ್ನು ನೋಡಿದರೆ, ನಾವಿರುವುದು ಪ್ರಜಾಪ್ರಭುತ್ವದಲ್ಲಿಯಾ ಅನ್ನುವ ಅನುಮಾನ ಯಾರಿಗಾದರೂ  ಬಾರದಿರದು.  ಮೇಲ್ದರ್ಜೆ ಪೋಲೀಸ್ ಹಾಗೂ ರಾಜಕಾರಣಿಗಳ ನಡುವಿನ  ಒಳ ಒಪ್ಪಂದದ  ಬಲಿಪಶುಗಳು ಯಾವಾಗಲೂ  ಈ ಕೆಳಹಂತದ‌ ಪೋಲೀಸರೇ.  ಸ್ವಂತದ `ಯಾವುದೇ' ಕೆಲಸಕ್ಕೆ ಪೋಲೀಸರನ್ನು ಬಳಸಲು ಅನುಕೂಲ ಮಾಡಿರುವ  ಈ ಪದ್ಧತಿಯನ್ನು ಸದಾ ಮುಂದುವರೆಸುತ್ತಿದ್ದಾರೆ, ನಮ್ಮ ರಾಜಕಾರಣಿಗಳು. `ಅನುಕೂಲ'ಗಳನ್ನು ಅವರಾದರೂ  ಅನಾಯಾಸವಾಗಿ  ಯಾಕೆ ಬಿಟ್ಟಾರು?!

    ನನ್ನ ಪ್ರಕಾರ, ಪೋಲೀಸರ  ಇಂದಿನ ಈ  ಹೀನಾಯ  ಪರಿಸ್ಥಿತಿಗೆ, ಅವರ ನೇಮಕಾತಿಯಲ್ಲಿನ  ವ್ಯಾಪಕ ಭ್ರಷ್ಟಾಚಾರವೇ ಮೂಲ ಕಾರಣ.  ಈಗಂತೂ ಪೋಲೀಸ್ ಇಲಾಖೆಯಲ್ಲಿ ಅರ್ಹತೆ ಆಧಾರದಲ್ಲಿ ಆಯ್ಕೆಯಾಗುವುದು ಕನ್ನಡಿಯ ಗಂಟು. ದುಡ್ಡು ಕೊಟ್ಟೋ, ವಶೀಲಿ ಬಾಜಿ ನಡೆಸಿಯೋ  ಆಯ್ಕೆಯಾದ  ಪೋಲೀಸರು,  ಸದಾ ಅವರ ಮರ್ಜಿಯಲ್ಲಿಯೇ  ಇರುತ್ತಾರೆ.  ದಕ್ಷತೆಯಿಂದ  ಕೆಲಸ ಮಾಡುವ ಪೋಲೀಸರಿಗೆ, ಸರ್ಕಾರದಿಂದ  `ವರ್ಗಾವಣೆ' ಶಿಕ್ಷೆ ಯಾವಾಗಲೂ ಕಾದಿರುತ್ತದೆ.  ಹಾಗಾಗಿ, ಪರಿಹಾರವಿಲ್ಲದಂತೆ ಶಿಕ್ಷೆ ಅನುಭವಿಸುವ ಬದಲು, ಅಂಥ ರಾಜಕಾರಣಿಯ  ತಾಳಕ್ಕೆ ತಕ್ಕಂತೆ ಕುಣಿಯುವುದೇ ಲೇಸೆನ್ನಿಸಿಬಿಡ್ತದೆ, ಪೋಲೀಸರಿಗೆ. ಇಷ್ಟರ ಜೊತೆ ಮೇಲಧಿಕಾರಿಗಳ ಒತ್ತಡವೂ ಸೇರಿ, ಪೋಲೀಸರು  ಸಾರ್ವಜನಿಕರೊಂದಿಗೆ ವ್ಯವಹರಿಸುವಾಗ ಅವರನ್ನು ಸೌಜನ್ಯರಹಿತರನ್ನಾಗಿಸಿ ಬಿಡುತ್ತದೆ, ಪರಿಸ್ಥಿತಿ.

    
    ಹಿಂದೆ ರಾಜನಿಗೆ ಸೈನ್ಯದ ಬಲವಿದ್ದಂತೆ, ಈಗ ಸರ್ಕಾರಕ್ಕೆ ಪೋಲೀಸ್ ಬಲ.  ಹಾಗಾಗಿ ಪೋಲೀಸರು  ಆಳುವ ಪಕ್ಷದ ಅನಧಿಕೃತ ಕಾರ್ಯಕರ್ತರು ! ಬೀಜೇಪಿ ಸರ್ಕಾರದಡಿ ಕಾರ್ಯ ನಿರ್ವಹಿಸುವ  ದೆಹಲಿ ಪೋಲೀಸರಿಗೆ  ಬರೀ ಆಪ್ ಗುಂಡಾಗಳಷ್ಟೇ ಸಿಗುತ್ತಾರೆ.  ಕರ್ನಾಟಕದಲ್ಲಿನ‌ ಕಾಂಗ್ರೆಸ್ ಪೋಲೀಸರಿಗೆ ಬೀಜೇಪಿ, ಜೇಡೀಎಸ್ ಗೂಂಡಾಗಳಷ್ಟೇ ಕಾಣುತ್ತಾರೆ. ಆಳುವ ಪಕ್ಷದ  ಮರ್ಜಿಯಲ್ಲಿಯೇ ಅವರು ಮಾಡುವ ತನಿಖೆಗಳೂ ಕೂಡ. ತನಿಖೆಯ ಅಂತಿಮ ವರದಿಯನ್ನು ನಾವು ಊಹಿಸಬಹುದು - ಆಳುತ್ತಿರುವ ಪಕ್ಷದ ಆಧಾರದ ಮೇಲೆ!! ಹೀಗೆ ರಾಜಕಾರಣಿಗಳು ಸಕಲ ರೀತಿಯಲ್ಲಿಯೂ ಪೋಲೀಸರ ಮೇಲೆ ಒತ್ತಡವನ್ನು ಹೇರುತ್ತಿರುತ್ತಾರೆ. ಇದು ಮಿತಿ ಮೀರಿದಾಗ DYSP ಗಣಪತಿಯಂಥವರ ಜೀವನ ಆತ್ಮಹತ್ಯೆಯಲ್ಲಿ ಪರ್ಯವಸಾನವಾಗುತ್ತದೆ.

    ಎಂಥದೇ ಪರಿಸ್ಥಿತಿಯಲ್ಲಿಯೂ ರಜೆಯಿಲ್ಲದಂತೆ ದುಡಿಯಬೇಕಾದಂಥ ಅನಿವಾರ್ಯತೆಗೆ ತುಳಿಯಲ್ಪಟ್ಟಂಥ ಪೋಲೀಸರಿಗೆ ಇದೇ ಕಾರಣಕ್ಕಾಗಿಯೇ ಹೆಣ್ಣುಗಳು ಸಿಗುವುದು ದುಸ್ತರವಾಗಿಬಿಟ್ಟಿದೆ. ಅವರ ವಸತಿ ಗೃಹಗಳಂತೂ ಸ್ಲಂಗಳಿಗಿಂತ ಕೆಳ ಸ್ಥಿತಿಯಲ್ಲಿವೆ. ಪೋಲೀಸರ ಈ ಹೀನಾಯ ಸ್ಥಿತಿಗಳಿಗೆ ಕಾರಣಗಳು ಹಾಗೂ ಪರಿಹಾರ ಹುಡುಕುವ ಕಾರ್ಯಗಳು 'ಧರ್ಮವೀರ ಆಯೋಗ'ದಂತೆ ಬಹಳಷ್ಟು ಆಯೋಗಗಳಿಂದ ಆಗಿವೆ.  ಆದರೆ ಪ್ರಯೋಜನವೇನು? ಸರ್ಕಾರವೇ ಕಿವುಡಾಗಿ ಕುಳಿತಾಗ?!! ನ್ಯಾಯವಾಗಿ ಇರಬೇಕಾದಷ್ಟು ಪ್ರಮಾಣದಲ್ಲಿ ಪೋಲೀಸರ ನೇಮಕಾತಿ ಆದಲ್ಲಿ ಅವರ ಈ ಪಾಡು ಸ್ವಲ್ಪವಾದರೂ ಸುಧಾರಿಸೀತು!

    ಇಂತಿಪ್ಪ‌ ಪೋಲೀಸರಲ್ಲಿ ನನ್ನದೊಂದು ಮನವಿ. ನಿಮ್ಮ  ಈ ಪರಿಪಾಟಲು ಕಂಡ  ಸಾರ್ವಜನಿಕರು  ನಿಮ್ಮೊಂದಿಗಿದ್ದಾರೆ.  ಖಿನ್ನತೆಯಿಂದ ಆತ್ಮಹತ್ಯೆಯಂತಹ `ಅಂತಿಮ ನಿರ್ಧಾರ'ಗಳನ್ನು ದುಡುಕಿ ತೆಗೆದುಕೊಳ್ಳಬೇಡಿ. ಸಮಾಜ ನಿಮ್ಮೊಂದಿಗಿದೆಯೆನ್ನುವ ಧನಾತ್ಮಕ ಆಲೋಚನೆಯಿದ್ದಾಗ, ಖಿನ್ನತೆ ನಿಮ್ಮ ಬಳಿಯೂ  ಸುಳಿಯುವುದಿಲ್ಲ. ಇನ್ನು ಮುಂದಾದರೂ ಪೋಲೀಸರ ಪರಿಸ್ಥಿತಿ  ಸುಧಾರಿಸೀತು ಅಂತ ಆಶಿಸುತ್ತಾ, ಎಲ್ಲ ಪೋಲೀಸರಿಗೆ ಇದೋ ನನ್ನ ಸಲಾಂ.

 

Comments

Submitted by H A Patil Mon, 07/25/2016 - 11:55

ಸಂತೋಷ ಶಾಸ್ತ್ರೀ ಯವರಿಗೆ ವಂದನೆಗಳು
ಪೋಲೀಸ್‍ ಪಾಡು ಒಂದು ಸಕಾಲಿಕ ಬರಹ ಇಲಾಖೆಯ ಸರ್ಕಾರದ ಮತ್ತು ಸಮಾಜದ ಎಲ್ಲ ಮಗ್ಗಲುಗಳ ಕುರಿತು ಸಂಕ್ಷೀಪ್ತವಾಗಿ ಗ್ರಹಿಸಿ ದಾಖಲಿಸಿದ್ದೀರಿ, ಸಮಾಜ ಸರ್ಕಾರಗಳ ಕನ್ನಡಿ ನಮ್ಮ ವ್ಯವಸ್ಥೆ ಈ ನಿಟ್ಟಿನಲ್ಲಿ ಜನ ಸಮಾಜ ಮತ್ತು ರಾಜಕೀಯ ವ್ಯವಸ್ಥೆಗಳು ವಸ್ತು ನಿಷ್ಟವಾಗಿ ಯೋಚಿಸಿ ಕಾರ್ಯನಿರತರಾದರೆ ಈಪ್ರಕ್ಷುಬ್ಧತೆಯನ್ನು ಕಡಿಮೆ ಮಾಡಬಹುದು ಒಳ್ಳೆಯ ಯೋಚನೆಗೆ ಹಚ್ಚುವಂತಹ ಲೇಖನ ಬರೆದಿದ್ದೀರಿ ಧನ್ಯವಾದಗಳು.

Submitted by santhosha shastry Tue, 07/26/2016 - 22:41

In reply to by H A Patil

ಪಾಟೀಲರಲ್ಲಿ ವಂದನೆಗಳು. ನಿಜ‌, ನೀವಂದಂತೆ ಸಮಾಜದಲ್ಲಿ ಸರ್ಕಾರವೂ ಒಳಗೊಂಡಂತೆ ಎಲ್ಲರೂ ಮನಸ್ಸು ಮಾಡಿದಲ್ಲಿ ಮಾತ್ರ‌ ಬದಲಾವಣೆಯನ್ನು ತರಲು ಸಾಧ್ಯ‌.