ಭಾಗ ೧೪ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಆರ್ಯರು ಬಂದರಾ? ಭಾರತೀಯರು ಹೋದರಾ?"

ಭಾಗ ೧೪ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಆರ್ಯರು ಬಂದರಾ? ಭಾರತೀಯರು ಹೋದರಾ?"

ಚಿತ್ರ

            ಭಾರತೀಯ ಜನಾಂಗವು ಅನಾದಿಕಾಲದಿಂದಲೂ ಭರತ ಖಂಡದಲ್ಲಿ ಜೀವನವನ್ನು ಸಾಗಿಸುತ್ತಿದೆ. ಹೀಗೆಂದು ವೇದಗಳು, ಪುರಾಣೇತಿಹಾಸಗಳು ಸಾರಿವೆ. ಆದರೆ ಭಾರತೀಯ ಜನಾಂಗವು ಬೇರೆ ಪ್ರಾಂತಗಳಿಂದ ಭರತ ಖಂಡಕ್ಕೆ ವಲಸೆ ಬಂದರೆಂದೂ, ಈ ಪ್ರದೇಶದೊಳಗೆ ದುರಾಕ್ರಮಣದಿಂದ ನುಸುಳಿ ದುರಾಕ್ರಮಣ ಮಾಡಿದರೆಂದೂ, ಬ್ರಿಟಿಷರು ಹೇಳಿ ಹೋಗಿದ್ದಾರೆ, ಆದರೆ ಎಷ್ಟು ಶತಮಾನಗಳ ಅಥವಾ  ಎಷ್ಟು ಸಹಸ್ರ ವರ್ಷಗಳ ಕೆಳಗೆ ಹೀಗೆ ವಲಸೆ ಬಂದರು ಎನ್ನುವುದನ್ನು ಮಾತ್ರ ಹೇಳಲಾರದೇ ಹೋದರು! ಬ್ರಿಟಿಷ್ ಇತಿಹಾಸಕಾರರ ಪ್ರಕಾರ ಹೊರಗಿನಿಂದ ಬಂದು ಈ ನೆಲದ ಮೂಲನಿವಾಸಗಳ ಮೇಲೆ ದುರಾಕ್ರಮಣ ಮಾಡಿದವರು "ಆರ್ಯರು!" ಅವರು ಅಲ್ಲಿಯವರೆಗೂ ಇದ್ದ ಸಿಂಧೂ ಕಣಿವೆ ನಾಗರೀಕತೆಯನ್ನು ಹಾಳುಗೆಡವಿ ಹೊಸ ನಾಗರೀಕತೆಯನ್ನು ನೆಲೆಗೊಳಿಸಿದರಂತೆ! ಆ ಹೊಸ ನಾಗರೀಕತೆಯ ಹೆಸರು ’ವೇದಕಾಲೀನ ನಾಗರೀಕತೆ’ಯಂತೆ. ಅಂಥಹ ಬೃಹತ್ ದುರಾಕ್ರಮಣಕಾರರಿಗೆ ’ಅಗ್ನಿ’ ಎಂದರೆ ಭಯವುಂಟಾಯಿತಂತೆ, ಅದಕ್ಕಾಗಿ ಅವರು ಅಗ್ನಿಯನ್ನು ಸ್ತುತಿಸುತ್ತಾ ಗಟ್ಟಿಯಾಗಿ ರೋಧಿಸಿದರಂತೆ! ಆ ರೋಧನೆಗಳೇ ಋಗ್ವೇದದ ಆರಂಭಿಕ ವಾಕ್ಯಗಳೆಂದು ಪರಂಗಿಗಳು ಪಾಠಗಳನ್ನು ಹೇಳಿಕೊಟ್ಟು ಹೋಗಿದ್ದಾರೆ. "ಸ್ವಾಮಿ, ಇದು ನಿಮ್ಮ ಮನೆಯಲ್ಲ, ನೀವೂ ಸಹ ಈ ಮನೆಗೆ ನಮ್ಮಂತೆ ಹೊರಗಿನಿಂದ ಬಂದವರು, ಇಲ್ಲಿಗೆ ಅಕ್ರಮವಾಗಿ ನುಸುಳಿದವರು........ ನಿಮ್ಮ ವೇದ, ನಿಮ್ಮ ಪುರಾಣ, ನಿಮ್ಮ ಚರಿತ್ರೆ, ನಿಮ್ಮ ಭಾಷೆ - ಇವೆಲ್ಲವೂ ಹೊರಗಿನಿಂದ ಬಂದವರು ಕಲಿಸಿಕೊಟ್ಟಂಥಹವೇ! ನೀವು ಆ ಹೊರಗಿನಿಂದ ಬಂದವರ ವಾರಸುದಾರರು! ಆರ್ಯರು ಹೊರಗಿನಿಂದ ಬಂದಂತೆ ನಾವೂ ಸಹ ಬಂದುದರಲ್ಲಿ ತಪ್ಪೇನಿದೆ?" ಎಂದು ಆಂಗ್ಲರು ತಮ್ಮ ’ಅಕ್ರಮ’ಗಳನ್ನು ’ಸಕ್ರಮ’ಗೊಳಿಸಿಕೊಂಡರು. ಇಂದಿಗೂ ಈ ಸುಳ್ಳನ್ನು ನಂಬುವವರು ಅಧಿಕ ಸಂಖ್ಯೆಯಲ್ಲಿದ್ದಾರೆಂದರೆ ಅದಕ್ಕೆ ಕಾರಣವಾಗಿರುವುದು....... ಮೆಕಾಲೆ ವಿದ್ಯಾವಿಧಾನ!
                              *****
ಯಯಾತಿ ದೇವಯಾನಿಯ ಚಿತ್ರಕೃಪೆ : ಗೂಗಲ್ 
 
ಆರ್ಯರು ಬಂದರಾ? ಭಾರತೀಯರು ಹೋದರಾ?"
ಸ್ವಗೃಹದ ಅಂಗಳದೊಳಗೆ
ನೆಲೆಗೊಂಡ ಅಸದಳ ಮಮಕಾರವು
ನುಸುಳಿದವನ ಮನದೊಳಗೆ
ಮೂಡುವುದೆ ಸಹಜ ಪ್ರೇಮಾಂಕುರವು?
ಎಮ್ಮ ಮನೆಯ ಸುಡುತಿರುವ
ಬೆಂಕಿಯ ಜ್ವಾಲೆಗಳ ಹೊತ್ತಿಸಿದವರಾರು?
ನಮ್ಮ ಮನೆಯ ಗೋಡೆಗಳನೊಡೆಯಲು
ಹಾರೆ, ಗುದ್ದಲಿಗಳ ಕೊಟ್ಟವರಾರು?
          ಅದೊಂದು ಉದ್ಯಾನವನ, ಅದರೊಳಗೆ ಒಂದು ದೊಡ್ಡ ಈಜುಕೊಳವಿತ್ತು. ಅವಿವಾಹಿತರಾದ ಅನೇಕ ಯುವತಿಯರು ಆ ಈಜುಕೊಳದಲ್ಲಿ ಜಲಕ್ರೀಡೆಯಾಡುತ್ತಿದ್ದರು. ಆ ಯುವತಿಯರ ಬೃಂದಕ್ಕೆ ಹಿರೇಮಣಿಯಾಗಿದ್ದವಳು ಶರ್ಮಿಷ್ಠೆ; ಆಕೆ ರಾಕ್ಷಸ ರಾಜನಾದ ವೃಷಪರ್ವನ ಮಗಳು. ವೃಷಪರ್ವನಿಗೆ ಶುಕ್ರಾಚಾರ್ಯರು ಗುರುಗಳು ಹಾಗು ಪುರೋಹಿತರಾಗಿದ್ದರು, ಅವರ ಮಗಳು ದೇವಯಾನಿ. ಗುರುಪುತ್ರಿಯಾದ ದೇವಯಾನಿಯೂ ಸಹ ಆ ಗುಂಪಿನಲ್ಲಿ ಜಲಕ್ರೀಡೆಯಾಡುತ್ತಿದ್ದಳು. ದೊರೆಯ ಮಗಳಾದ ಶರ್ಮಿಷ್ಠೆ ಸಹಜವಾಗಿ ಆ ಗುಂಪಿಗೆ ನಾಯಕಿಯಾಗಿದ್ದಳು, ಆದರೆ ದೇವಯಾನಿಗೆ ಮಾತ್ರ ತಾನು ಶರ್ಮಿಷ್ಠೆಗಿಂತ ಶ್ರೇಷ್ಠಳಾದವಳು ಎನ್ನುವ ಅಹಂಕಾರವಿತ್ತು, ಏಕೆಂದರೆ ತಾನು ವಿದ್ವಾಂಸರಾದ ಗುರುಗಳ ಮಗಳಲ್ಲವೇ! ಹೀಗೆ ಆ ಕನ್ಯಾಮಣಿಗಳು ಆ ಈಜುಕೊಳದ ದಡನ್ನು ತಮ್ಮ ಜಲಕ್ರೀಡೆಯಿಂದ ಅಲ್ಲೋಲಕಲ್ಲೋಲಗೊಳಿಸುತ್ತಿದ್ದಾಗ ಪ್ರಕೃತಿಯಲ್ಲಿಯೂ ಅಲ್ಲೋಲಕಲ್ಲೋಲವುಂಟಾಗಿ ಸುಂಟರಗಾಳಿ ಬೀಸಿತು. ದಡದಲ್ಲಿದ್ದ ಬಟ್ಟೆಗಳನ್ನೆಲ್ಲಾ ಆ ಸುಂಟರಗಾಳಿ ಹೊತ್ತೊಯ್ದು ಮತ್ತೊಂಡೆದೆ ಗುಡ್ಡೆ ಹಾಕಿತು. ಆ ಸುಂಟರಗಾಳಿ ಮತ್ತಷ್ಟು ಭಯಂಕರ ಸ್ವರೂಪವನ್ನು ಪಡೆಯಬಹುದೆಂದು ಹೆದರಿ ಆ ಹುಡುಗಿಯರೆಲ್ಲರೂ ದಂಡೆಯ ಮೇಲೆ ಬಂದು ಅವಸರವಸರವಾಗಿ ಬಟ್ಟೆಗಳನ್ನು ತೊಟ್ಟುಕೊಂಡರು. ಆ ಗಡಿಬಿಡಿಯಲ್ಲಿ ದೇವಯಾನಿಯ ಬಟ್ಟೆಗಳನ್ನು ಶರ್ಮಿಷ್ಠೆಯು ಧರಿಸಿದಳು. "ಏನೋ ಪರಪಾಟಿನಿಂದ ತೊಟ್ಟುಕೊಂಡಿದ್ದಾಳೆ, ಹೋಗಲಿ ಬಿಡು" ಎಂದು ದೇವಯಾನಿ ಸುಮ್ಮನಾಗದೆ, "ಏನೇ! ರಾಕ್ಷಸಿ! ನನಗೆ ಶಿಷ್ಯೆಯಾಗಿರುವ ನೀನು ನನ್ನ ಬಟ್ಟೆಗಳನ್ನು ಅದು ಹೇಗೆ  ತಾನೆ ತೊಟ್ಟುಕೊಂಡೆ? ಶಿಷ್ಟಾಚಾರ ತಿಳಿಯದ ನಿನಗೆ ಒಳಿತುಂಟಾಗದು!" ಎಂದು ಕೋಪಿಷ್ಠೆಯಾಗಿ ಶರ್ಮಿಷ್ಠೆಯ ಮೇಲೆ ಸಿಡುಕಿದಳು ಎಂದು ವ್ಯಾಸರು ಮಹಾಭಾರತದಲ್ಲಿ ವಿವರಿಸಿದ್ದಾರೆ.
            "ಕಸ್ಮಾತ್ ಗೃಹ್ಣೋಸಿ ಮೇ ವಸ್ತ್ರಂ
             ಶಿಷ್ಯಾಭೂತ್ವಾ ಮಹಾಸುರಿl
             ಸಮುದಾಚಾರ ಹೀನಾಯಾಃ
             ನತೇ ಸಾಧು ಭವಿಷ್ಯತಿ.....ll
          ವಾಸ್ತವವಾಗಿ ಅಲ್ಲಿ ಪರಪಾಟಾಗಿದ್ದು ನಿಜ. ಆಮೇಲೆ ಅವರವರ ಬಟ್ಟೆಗಳನ್ನು ಅವರವರು ಹಾಕಿಕೊಂಡು ನಗುನಗುತ್ತಾ ತಂತಮ್ಮ ಮನೆಗಳಿಗೆ ಹೋಗಬಹುದಾಗಿತ್ತು. ಆದರೆ ಆ ಸುಂಟರಗಾಳಿಯಲ್ಲಿಯೂ ದೇವಯಾನಿ ಪಂಚಾಯತಿ ಇಟ್ಟುಕೊಂಡಳು, ಇದರಿಂದ ಸಹಜವಾಗಿಯೆ ಶರ್ಮಿಷ್ಠೆಗೆ ಕೋಪ ಬಂದಿತು. "ನಮ್ಮ ತಂದೆ ಕುಳಿತುಕೊಂಡಾಗಲೂ, ಮಲಗಿಕೊಂಡಾಗಲೂ ಸಹ ನಿಮ್ಮ ತಂದೆ ತಲೆತಗ್ಗಿಸಿ ನಿಂತುಕೊಂಡೇ ಅವರನ್ನು ಹೊಗಳುತ್ತಿರುತ್ತಾರೆ......" ಎಂದು ದೇವಯಾನಿಯನ್ನು ಮೂದಲಿಸಿದಳು.
          "ನಾನು ಪ್ರಶಂಸೆಗಳನ್ನು ಸ್ವೀಕರಿಸುವವನ ಮಗಳು, ನೀನಾದರೋ ಯಾಚಕನ ಮಗಳು....... ಯಾಚತಃ ತ್ವಂ ಹಿ ದುಹಿತಾ, ಸುತಾಹಂ ಸ್ತೂಯ ಮಾನಸ್ಯ....." ಎಂದು ದೇವಯಾನಿಯನ್ನು ಮಾತಿನಿಂದ ತಿವಿದು ಅವಳನ್ನು ಹಿಡಿದೆಳೆದು ಹಾಳು ಬಾವಿಯೊಂದರೊಳಗೆ ಶರ್ಮಿಷ್ಠೆಯು ತಳ್ಳಿದಳು. ಆಮೇಲೆ ಶರ್ಮಿಷ್ಠೆಯು ತನ್ನ ಇತರ ಗೆಳತಿಯರೊಂದಿಗೆ ತನ್ನ ಮನೆಗೆ ಹೊರಟು ಹೋದಳು! ಅವಮಾನ ಭಾರದಿಂದ ಕುಸಿದ ಸ್ಥಿತಿಯಲ್ಲಿ ಬಾವಿಯಲ್ಲಿ ಕುಳಿತಿದ್ದ  ದೇವಯಾನಿಯನ್ನು ಯಯಾತಿ ಮಹಾರಾಜನು ನೋಡಿದನು. ಇದು ಕೃತಯುಗದಲ್ಲಿ ನಡೆದ ಕಥೆ.
          ಪರಸ್ಪರ ಪರಿಚಯಗಳನ್ನು ಹೇಳಿಕೊಂಡ ನಂತರ ದೇವಯಾನಿಯು ಯಯಾತಿ ಮಹಾರಾಜನನ್ನುದ್ದೇಶಿಸಿ, "ರಾಜಾ ಇದು ನನ್ನ ಬಲಹಸ್ತ, ತಾಮ್ರ ವರ್ಣದಿಂದ ಕೂಡಿದ ನಖಗಳನ್ನು ಹೊಂದಿದೆ...... - ಏಷ ಮೇ ದಕ್ಷಿಣೋ ರಾಜನ್, ಪಾಣಿಃ ತಾಮ್ರನಖಾಂಗುಳಿಃ......" ಎಂದು ತನ್ನ ಬಲಗೈಯ ಕುರಿತ ಹಿರಿಮೆಯನ್ನು ಹೊಗಳಿಕೊಳ್ಳುತ್ತಾಳೆ. ಆ ಕೈಯ್ಯನ್ನು ಹಿಡಿದು ಈ ಕೂಪದಿಂದ ತನ್ನನ್ನು ಉದ್ಧರಿಸೆಂದು ದೇವಯಾನಿಯು ಯಯಾತಿಯನ್ನು ಕೋರುತ್ತಾಳೆ. ಯಯಾತಿಯು ಆಕೆಯನ್ನು ಬಾವಿಯಿಂದ ಮೇಲೆತ್ತಿದ. ಹೀಗೆ ’ಪಾಣಿಗ್ರಹಣ’ವಾಗುತ್ತಲೇ ಯಯಾತಿಯನ್ನು ತನ್ನ ಪತಿಯನ್ನಾಗಿ ದೇವಯಾನಿಯು ಪರಿಭಾವಿಸುತ್ತಾಳೆ. ಅವರಿಬ್ಬರೂ ನಗರದ ಹೊರವಲಯಕ್ಕೆ ಸೇರಿಕೊಂಡ ಮೇಲೆ, ದೇವಯಾನಿಯು ತನ್ನ ತಂದೆಯಾದ ಶುಕ್ರಾಚಾರ್ಯನನ್ನು ಅಲ್ಲಿಗೆ ಬರಮಾಡಿಕೊಳ್ಳುತ್ತಾಳೆ. ಇನ್ನು ತಾನು ಆ ನಗರದೊಳಕ್ಕೆ ಕಾಲಿಡೆನೆಂದೂ ತನಗೆ ಶರ್ಮಿಷ್ಠೆಯಿಂದ ಘೋರವಾದ ಅಪಮಾನವು ಉಂಟಾಯಿತೆಂದೂ ದೇವಯಾನಿಯು ಆಗ್ರಹಪೂರ್ವಕವಾಗಿ ರೋಧಿಸಿದಳು. "ಪಾಪ, ಶರ್ಮಿಷ್ಠೆ ನಿನಗಿಂತ ಬಹಳ ಚಿಕ್ಕವಳು, ಅವಳ ಮೇಲೆ ನಿನಗೆಂತಹ ಸಿಟ್ಟು? ಇರಲಿ ಮನೆಗೆ ಹೋಗೋಣ ನಡೆ" ಎಂದು ಶುಕ್ರನು ಅವಳನ್ನು ಸಮಾಧಾನ ಪಡಿಸಲೆತ್ನಿಸಿದ.
          ಬೇರೆಯವರ ಮೇಲೆ ದ್ವೇಷವನ್ನು ಬೆಳೆಸಿಕೊಳ್ಳಬಾರದೆಂದು ಶುಕ್ರಾಚಾರ್ಯನು ದೇವಯಾನಿಯನ್ನು ಸಮಾಧಾನಗೊಳಿಸಲೆತ್ನಿಸದನೆಂದು ತೆಲುಗಿನ ಆದಿಕವಿ ನನ್ನಯ ವಿವರಿಸಿದ್ದಾನೆ. ಸಾಸಿರ ಯಜ್ಞಗಳನ್ನು ಮಾಡಿದವರಿಗಿಂತ ಇತರರ ಮೇಲೆ ಕ್ರೋಧವಿಲ್ಲದವನು ದೊಡ್ಡವನು ಎಂದು ಶುಕ್ರಾಚಾರ್ಯನು ಮಗಳಿಗೆ ಬುದ್ಧಿ ಹೇಳುತ್ತಾನೆ. ಬನ್ನಕ್ಕೀಡಾದರೂ (ಅವಮಾನ) ಸಹ ದ್ವೇಷವನ್ನು ಸಾಧಿಸದವರು ಧರ್ಮಜ್ಞರೆಂದು ನನ್ನಯ ತನ್ನ ಕವಿತೆಯಲ್ಲಿ ಹೇಳಿದ್ದಾನೆ.
"ಅಲಿಗಿನ ನಲುಗಕ ಯೆಗ್ಗುಲು
ಪಲಿಕಿನ ಮಱಿ ವಿನನಿ ಯಟ್ಲು ಪ್ರತಿವಚನಂಬುಲ್
ಪಲಕಕ, ಬನ್ನಮುಪಡಿ ಯೆದ
ದಲಪಕ ಯುನ್ನತಡೆ ಚೂವೆ ಧರ್ಮಜ್ಞುಡಿಲನ್"
ಮೇಲಿನ ತೆಲುಗು ಪದ್ಯದ ಸ್ಥೂಲ ಭಾವಾನುವಾದ ಹೀಗಿದೆ -
ಸಿಟ್ಟಾದರೂ ಸಿಡುಕದ ಕಟುನುಡಿಗಳ
ಪಲುಕಿಗೆ ಕಿವುಡನಾಗಿಹ ಪ್ರತಿನುಡಿಗಳ
ಆಡದವ ಅಪಮಾನಿತನಾದರೂ ಚಿಂತಿಸದವ
ಧರ್ಮಜ್ಞನು ಇದಕೆ ಸಂಶಯ ಬೇಡ!
            ಆದರೆ ದೇವಯಾನಿ ತನ್ನ ತಂದೆಯ ಹಿತನುಡಿಗಳನ್ನು ಕೇಳಲಿಲ್ಲ. ದೇವಯಾನಿಯ ಮೇಲಿನ ಅತಿಯಾದ ಪ್ರೀತಿಯಿಂದ ಶುಕ್ರನು, ಶುಕ್ರನ ಮೇಲಿನ ಅತಿಯಾದ ಭಯದಿಂದ ವೃಷಪರ್ವನು, ತಂದೆಯ ಮೇಲಿನ ಪ್ರೇಮಾಭಿಮಾನ ಹಾಗು ಪ್ರಜೆಗಳ ಮೇಲಿನ ಮಮಕಾರದಿಂದಾಗಿ ಶರ್ಮಿಷ್ಠೆಯು ದೇವಯಾನಿಗೆ ಶರಣಾದರು. ಶರ್ಮಿಷ್ಠೆಯು ದೇವಯಾನಿಯ ದಾಸಿಯಾಗಲು ಒಪ್ಪಿದಳು! ಶರ್ಮಿಷ್ಠೆಯನ್ನು ನೋಡಿ ಯಯಾತಿಗೆ ಅವಳ ಮೇಲೆ ಪ್ರೇಮಾಂಕುರವಾಯಿತು. ಆದರೆ ದೇವಯಾನಿ ಬಲವಂತವಾಗಿ ಯಯಾತಿಯನ್ನು ಒಪ್ಪಿಸಿ ತನ್ನ ತಂದೆಯಿಂದಲೂ ಅವನ ಮೇಲೆ ಒತ್ತಡ ಹೇರಿ ಅವನನ್ನು ಮದುವೆಯಾದಳು. ದೇವಯಾನಿಯು ತನ್ನ ದಾಸಿಯಾದ ಶರ್ಮಿಷ್ಠೆಯನ್ನು ಕರೆದುಕೊಂಡು ತನ್ನ ಅತ್ತೆಯ ಮನೆಗೆ ಹೋದಳು. ಶರ್ಮಿಷ್ಠೆಯ ಇಷ್ಟದಂತೆ ಯಯಾತಿಯು ಆಕೆಯನ್ನೂ ವರಿಸಿದ. ದೇವಯಾನಿಗೆ ಯದು, ತುರ್ವಸು ಎಂಬ ಇಬ್ಬರು ಮಕ್ಕಳು ಹಾಗು ಶರ್ಮಿಷ್ಠೆಗೆ ದ್ರುಹ್ಯ, ಅನು, ಪುರು ಎನ್ನುವ ಮೂರು ಜನ ಮಕ್ಕಳಾದರು.
          ತನ್ನ ಮಾತನ್ನು ಕೇಳದ ಯದುವಿಗೆ ಯಯಾತಿಯು ರಾಜ್ಯಾಧಿಕಾರವನ್ನು ಕೊಡಲಿಲ್ಲ. ಅದಕ್ಕಾಗಿ ಯದುವಂಶೀಯರು ಎಂದಿಗೂ ಪಾಲಕರಾಗಲಿಲ್ಲ. ಅವನ ಮಾತನ್ನು ಕೇಳದ ಉಳಿದ ಮೂರು ಜನ - ತುರ್ವಸ, ದ್ರುಹ್ಯ, ಅನು ಇವರುಗಳನ್ನೂ ಸಹ ಯಯಾತಿಯು ರಾಜ್ಯಭ್ರಷ್ಠರನ್ನಾಗಿ ಮಾಡಿದ. ಪಿತೃವಾಕ್ಯ ಪರಿಪಾಲಕನಾದ ಪುರುವು ಯಯಾತಿಯ ನಂತರ ರಾಜ್ಯಾಧಿಕಾರವನ್ನು ಹೊಂದಿದ. ಅವನ ಸಂತತಿಯವರೇ ದ್ವಾಪರ ಯುಗದ ಕೌರವರು ಮತ್ತು ಪಾಂಡವರು...... ತುರ್ವಸು ಹಾಗು ದ್ರುಹ್ಯರನ್ನು ಯಯಾತಿಯು ತನ್ನ ರಾಜ್ಯದಿಂದಲೇ ಹೊಡೆದೋಡಿಸಿದ, ಅವರಿಬ್ಬರೂ ವೇದ ಸಂಸ್ಕೃತಿಯಿಂದ ದೂರವಾದ ಮ್ಲೇಚ್ಛಾಚಾರಗಳನ್ನು ರೂಢಿಸಿಕೊಂಡ ದೇಶಗಳಿಗೆ ವಲಸೆ ಹೋದರು. ಅನು ಎನ್ನುವವನು ಭಾರತದಲ್ಲೇ ನೆಲೆನಿಂತರು ಅವನ ಸಂತತಿಯು ಮುಂದುವರೆಯಲಿಲ್ಲ.
        ಹೀಗೆ ಭಾರತದಿಂದ ವಿವಿಧ ಕಾರಣಗಳಿಗೆ, ವಿವಿಧ ಕಾಲಗಳಲ್ಲಿ ಅನೇಕ ಮಂದಿ ವಿದೇಶಗಳಿಗೆ ವಲಸೆ ಹೋದರು. ಅವರು ಭಾರತೀಯತೆಯನ್ನು ಮರೆತು ಕಾಲಾಂತರದಲ್ಲಿ ಪಶುಸಮಾನರಾಗಿ ಮಾರ್ಪಾಡುಗೊಂಡು, ದೋಚಿಕೊಳ್ಳುವ ಜನಾಂಗಗಳೊಳಗೆ ಬೆರೆತುಹೋದರು. ಯಯಾತಿಯ ಪುತ್ರರು ಬಹಿಷ್ಕೃತರಾಗಿ ಭರತ ಖಂಡದಿಂದ ನಿರ್ಗಮಿಸುವ ಕಾಲಕ್ಕಾಗಲೇ ವಿದೇಶಗಳಲ್ಲಿ ಚಿತ್ರ-ವಿಚಿತ್ರವಾದ ಆಚಾರಗಳನ್ನು ಅನುಸರಿಸುತ್ತಿದ್ದ ಜನಾಂಗಗಳು ಸ್ಥಿರಗೊಂಡಿದ್ದವು. ಅವರಲ್ಲಿ ಹಸಿಮಾಂಸವನ್ನು ತಿನ್ನುತ್ತಿದ್ದ ಜನಾಂಗಗಳೂ ಇದ್ದವೆಂದು ಭಾರತೀಯರು ರಚಿಸಿರುವ ಚರಿತ್ರೆಯಲ್ಲಿ ದಾಖಲಾಗಿದೆ. ಈ ಚರಿತ್ರೆಯನ್ನು ಮೆಕಾಲೆ ವಿದ್ಯೆ ಅದಲುಬದಲು ಮಾಡಿತು. ಬೇರೆ ದೇಶಗಳಿಂದ ಬಂದ "ಆರ್ಯ"ರು ಭರತ ಖಂಡದಲ್ಲಿ ಸ್ಥಿರಪಟ್ಟರೆಂದು ಬ್ರಿಟಿಷ್ ಇತಿಹಾಸಕಾರರು ಬರೆದಿದ್ದಾರೆ. ಮೆಕಾಲೆಯ ಕುಟಿಲ ಯೋಜನೆಯನ್ನು ಮುಂದುವರೆಸಲು ಟೊಂಕ ಕಟ್ಟಿ ನಿಂತ ಮಾರ್ಕ್ಸಿಷ್ಟರು ಅದನ್ನು ಇನ್ನೊಂದಷ್ಟು ಹಿಗ್ಗಾಮುಗ್ಗ ಎಳೆದು ಆರ್ಯರು ಪಡುವಣದಿಂದ ಮತ್ತು ವಾಯವ್ಯ ದಿಕ್ಕುಗಳಿಂದ ಇಲ್ಲಿಗೆ ಬಂದು ವಕ್ಕರಿಸಿದರು ಎಂದು ಬರೆದಿದ್ದಾರೆ. ಅವರು ಭಾರತ ದೇಶದೊಳಗೆ ಕಾಲಿಡುತ್ತಾ ಇಂದ್ರಪ್ರಸ್ಥ, ಹಸ್ತಿನಾಪುರ ಮೊದಲಾದ ಪ್ರಾಂತಗಳಲ್ಲಿ ನೆಲೆನಿಂತರಂತೆ. ಆ ಸಮಯದಲ್ಲಿ ಮಹಾಭಾರತ ಯುದ್ಧವೆನ್ನುವುದು ನಡೆದಿರಬಹುದು ಅಥವಾ ಜರುಗಿದೆಯೆಂದು ಆರ್ಯರು ಬರೆದುಕೊಂಡಿದ್ದಾರೆಂತೆ. ಆಮೇಲೆ ಆರ್ಯರು, ಗಂಗಾ-ಯಮುನ ನದಿಗಳ ಬೆನ್ನು ಹತ್ತಿ ಮೂಡಣ ದಿಕ್ಕಿನತ್ತ ಪಯಣಿಸಿ ಅಲ್ಲಿನ ಅಯೋಧ್ಯಾ ಪ್ರಾಂತದಲ್ಲಿ ಸ್ಥಿರಪಟ್ಟರಂತೆ. ಆಗ ಬಹುಶಃ ರಾಮಾಯಣ ಜರುಗಿತಂತೆ. ಆದ್ದರಿಂದ ಕೃಷ್ಣನ ತರುವಾಯ ರಾಮನ ಅವತಾರವಾಯಿತಂತೆ - ಈ ವಿಧವಾದ ಚಿತ್ರವಿಚಿತ್ರವಾದ ಚರಿತ್ರೆಯನ್ನು ಸಹ ಮೆಕಾಲೆ-ಮಾರ್ಕಿಸ್ಟ್‌ ಕೂಟದವರು ಪ್ರಚಾರ ಮಾಡಿದರು. ಮೆಕಾಲೆ ವಿದ್ಯಾವಿಧಾನದ ಪುಣ್ಯವಿಶೇಷದಿಂದಾಗಿ ಇತಿಹಾಸ ಸಂಶೋಧಕರಿಗೆ ಸಂಸ್ಕೃತ ಜ್ಞಾನವು ಶೂನ್ಯವಾದ ಸ್ಥಿತಿ ಏರ್ಪಟ್ಟಿತು. ’ಏಷಿಯಾಟಿಕ್ ಸೊಸೈಟಿ’ಯವರು ಇಂಗ್ಲೀಷಿನಲ್ಲೇ ಬರೆದ ಅಬದ್ಧಗಳು, "ಇರಬಹುದು", "ಆಗಿರಬಹುದು" ಮೊದಲಾದವೆಲ್ಲಾ ಆಮೇಲಾಮೇಲೆ ನಿರೂಪಿಸಬಲ್ಲಂತಹ ನಿಜಗಳಾಗಿ ಮಾರ್ಪಟ್ಟವು. ಅವೇ ನಮ್ಮ ಚರಿತ್ರೆಗೆ ಮೂಲ ಪ್ರಮಾಣಗಳಾಗಿ ಬದಲಾದವು! "ಆದ್ದರಿಂದ ಭಾರತೀಯರು ಹೊರಕ್ಕೆ ಹೋದರು" ಎನ್ನುವ ಸತ್ಯವು ಸಮಾಧಿಯಾಗಿ "ಆರ್ಯರು ಹೊರಗಡೆಯಿಂದ ಬಂದು ಸ್ಥಿರಪಟ್ಟರು" ಎನ್ನುವ ಅಬದ್ಧಗಳು ಹಾಗೂ ಹಸಿ ಸುಳ್ಳುಗಳು ನಿಜವಾಗಿ ಅವೇ ಅಂತಿಮ ಪ್ರಮಾಣಗಳಾದವು.
          ಭರತ ಖಂಡದ ಸರಸ್ವತೀ ದೃಷದ್ವತೀ ನದಿಗಳ ಮಧ್ಯದಲ್ಲಿನ ಪ್ರದೇಶವಾದ "ಬ್ರಹ್ಮಾವರ್ತ"ದಲ್ಲಿ ಪ್ರಪ್ರಥಮ ಮಾನವನು ಸಂಚರಿಸಿದನೆಂದೂ, ಮೊದಲ ನಾಗರೀಕತೆ ಇಲ್ಲಿ ವಿಕಾಸಗೊಂಡಿತೆಂದೂ ಶ್ರುತಿ, ಪುರಾಣೇತಿಹಾಸಗಳ ವಾಕ್ಯಗಳನ್ನು ಉಲ್ಲೇಖಿಸುತ್ತಾ, ಸ್ಮತಿಗಳಲ್ಲಿ ಹೇಳಲ್ಪಟ್ಟ ವಿಷಯಗಳನ್ನು ಉದಾಹರಿಸುತ್ತಾ ಸ್ವದೇಶಿ ಇತಿಹಾಸಕಾರರು "ಸಮಾನಾಂತರ" ಚರಿತ್ರೆಯನ್ನೂ ಬರೆದಿದ್ದಾರೆ. ಈ ಸಮಾನಾಂತರ ಚರಿತ್ರೆಯನ್ನು ಬ್ರಿಟಿಷರು ಪ್ರಚಾರಗೊಳ್ಳದಂತೆ ನೋಡಿಕೊಂಡರು. ಸ್ವಾತಂತ್ರಾನಂತರ ಮಾರ್ಕ್ಸಿಷ್ಟ್ ಇತಿಹಾಸಕಾರರು ಅದೇ ಕೆಲಸವನ್ನು ಮಾಡಿದರು. ವಿಲಿಯಮ್ ಜೋನ್ಸ್‌ನ ಕಾಲದಿಂದಲೂ ಸ್ವದೇಶಿ ಇತಿಹಾಸಕಾರರು ಈ ಅಪಪ್ರಚಾರಗಳ ವಿರುದ್ಧ ಹೋರಾಡುತ್ತಲೇ ಬರುತ್ತಿದ್ದಾರೆ. ಅಂಥಹವರ ಹೆಸರುಗಳನ್ನು ಇಪ್ಪತ್ತನೆಯ ಶತಮಾನದ ಕೋಟಾ ವೆಂಕಟಾಚಲಂ, ಪಿ.ಎನ್. ಓಕ್, ಶ್ರೀ ರಾಮ್ ಸಾಠೆ ಮೊದಲಾದವರ ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಸ್ವದೇಶಿ ಚರಿತ್ರೆಕಾರರು ಆಧಾರವಾಗಿಟ್ಟುಕೊಂಡ ಪುರಾಣೇತಿಹಾಸ ಗ್ರಂಥಗಳು ಸಂಸ್ಕೃತ ಭಾಷೆಯಲ್ಲಿವೆ. ಆದ್ದರಿಂದ ಮೆಕಾಲೆ ಪಂಡಿತರು ಅವನ್ನು ಕಪೋಲಕಲ್ಪಿತ ಕಥೆಗಳೆಂದು ಪ್ರಚಾರ ಮಾಡಿದರು. ಆದರೆ ಪುರಾಣ ಮತ್ತು ಮಹಾಭಾರತದಂತಹ ಇತಿಹಾಸ ಗ್ರಂಥಗಳನ್ನು ರಚಿಸಿದವರು ಅವುಗಳು ವಾಸ್ತವವಾಗಿ ಜರುಗಿದ ಸಂಘಟನೆಗಳೆಂದು ಹೇಳಿದ್ದಾರೆ. ಬ್ರಿಟಿಷರು ಹಾಗು ಇಸ್ಲಾಮಿಕ್ ಜಿಹಾದಿಗಳು ನಮ್ಮ ದೇಶಕ್ಕೆ ಬರುವ ಪೂರ್ವದಲ್ಲಿಯೇ ಈ ಚಾರಿತ್ರಿಕ ಗ್ರಂಥಗಳನ್ನು ಬರೆದಿದ್ದಾರೆ. ಒಂದು ವೇಳೆ ನಮ್ಮ ಪೂರ್ವಿಕರು ಸುಳ್ಳು ಸಂಗತಿಗಳನ್ನು ಬರೆದಿದ್ದಾರೆ ಎನ್ನುವುದಾದರೆ ಅವರಿಗೆ ಯಾರನ್ನು ಮೋಸಗೊಳಿಸುವ ಅವಶ್ಯಕತೆಯಿತ್ತು? ಇಸ್ಲಾಂ, ಕ್ರೈಸ್ತ ಮತಗಳು ಹುಟ್ಟುವುದಕ್ಕೆ ಮುಂಚೆ ರೋಮ್ ಹಾಗು ಗ್ರೀಕ್ ನಾಗರೀಕತೆಗಳು ಜನ್ಮತಾಳುವ ಮುಂಚೆ ರಚಿತವಾದ ಗ್ರಂಥಗಳಲ್ಲಿ ಭಾರತೀಯರು ಸುಳ್ಳುಗಳನ್ನು ಯಾವ ಕಾರಣಕ್ಕಾಗಿ ಬರೆದುಕೊಂಡಿರಬಹುದು? ನಮ್ಮ ದಿನಚರಿ ಪುಸ್ತಕದಲ್ಲಿ ನಾವು ಸುಳ್ಳುಗಳನ್ನು ಯಾವ ಕಾರಣಕ್ಕಾಗಿ ಬರೆದುಕೊಳ್ಳುತ್ತೇವೆ? ಮಹಮದ್ ಬಿನ್ ಕಾಸಿಮ್‌ನಿಂದ ಮೊದಲುಗೊಂಡು ಮೆಕಾಲೆಯವರೆಗೂ ಗತಿಸಿದ ಹನ್ನೆರಡುನೂರಾ ಇಪ್ಪತ್ತೆರಡು ಸಂವತ್ಸರಗಳ ಕಾಲದಲ್ಲಿಯೂ ಕೂಡಾ ನಮ್ಮವರು ಚರಿತ್ರೆಯನ್ನು ಆಗಾಗ ಬರೆದಿಟ್ಟಿದ್ದಾರೆ. ಆದರೆ ನಿರಂತರ ಯುದ್ಧಗಳಲ್ಲಿ ಬಸವಳಿದ ಜನಾಂಗವು ಚರಿತ್ರೆಯನ್ನು ಬರೆಯಲಿಕ್ಕೆ ವಿಶೇಷವಾದ ಪ್ರಾಧಾನ್ಯತೆಯನ್ನು ಕೊಡಲಿಲ್ಲವಷ್ಟೆ! ಅನೇಕಾನೇಕ ಗ್ರಂಥಗಳನ್ನೂ, ಚಾರಿತ್ರಿಕ ಗ್ರಂಥಗಳನ್ನೂ ಸಹ ಇಸ್ಲಾಮಿಕ್ ಜಿಹಾದಿಗಳು ಸುಟ್ಟು ಹಾಕಿದರು. ಕೂಪ ಮಂಡೂಕಗಳಂತೆ ಸಮುದ್ರದ ಔನ್ಯತ್ಯವನ್ನು ಗ್ರಹಿಸಲಾಗದ ಬ್ರಿಟಿಷರು ಪುರಾಣೇತಿಹಾಸ ಗ್ರಂಥಗಳಲ್ಲಿ ಭಾರತೀಯ ಚಾರಿತ್ರಿಕ ಪರಿಮಾಣವನ್ನು ಮೊದಮೊದಲು ಅಳೆಯಲಾರದೆ ಹೋದರು, ಆದರೆ ಅವಿಗಳ ಅಗಾಧತೆಯು ಗ್ರಹಿಕೆಗೆ ಸಿಕ್ಕ ನಂತರ ಮೋಸ ಮಾಡಿದರು!
                   ಸರ್ಗಶ್ಚ ಪ್ರತಿಸರ್ಗಶ್ಚ ವಂಶೋ ಮನ್ವಂತರಾಣಿ ಚ l
                   ವಂಶಾನುಚರಿತಂ ಚೇತಿ ಪುರಾಣಂ ಪಂಚ ಲಕ್ಷಣಂ ll
          "ಸೃಷ್ಟಿಯನ್ನು ಕುರಿತು ಮತ್ತೆ ಮತ್ತೆ ಮರುಕಳಿಸುವ ಸೃಷ್ಟಿಯನ್ನು ಕುರಿತು, ಮುನಿಗಳ ವಂಶಗಳ ಕುರಿತು, ಮನ್ವಂತರಗಳ ಕುರಿತು, ರಾಜವಂಶಗಳ ಕುರಿತು ಹೇಳುವುದೇ ಪುರಾಣಗಳ ಐದು ಲಕ್ಷಣಗಳು". ಅದೇ ವಿಧವಾಗಿ,
                   ಧರ್ಮಾರ್ಥ ಕಾಮಮೋಕ್ಷಾಣಾಂ ಉಪದೇಶ ಸಮನ್ವಿತಂ l
                   ಪೂರ್ವವೃತ್ತಂ ಕಥಾರೂಪಂ ಇತಿಹಾಸಂ ಪ್ರಚಕ್ಷತೇ ll
          "ಚರಿತ್ರೆ, ಇತಿಹಾಸಗಳೊಂದಿಗೆ, ಪುರಷಾರ್ಥ ಸಿದ್ಧಿ ಸಾಧನೆಗೆ ಪೂರಕವಾದ ಉಪದೇಶಗಳನ್ನು ಮತ್ತು ಪೂರ್ವದಲ್ಲಿ ನಡೆದ ಸಂಗತಿಗಳನ್ನು ಕಥಾರೂಪದಲ್ಲಿ ಹೇಳುವುದು...." ಪುರಾಣಗಳ ಲಕ್ಷಣ.
"ತಾರೀಕುಗಳು, ದಸ್ತಾವೇಜುಗಳು ಚರಿತ್ರೆಯನ್ನು ರೂಪಿಸುವುದಿಲ್ಲವಯ್ಯಾ" ಎಂದು ಗರ್ಜಿಸಿದ ತೆಲುಗಿನ ಕ್ರಾಂತಿಕಾರಿ ಕವಿ ಶ್ರೀ ಶ್ರೀ (ಶ್ರೀರಂಗಂ ಶ್ರೀನಿವಾಸರಾವು) ಅವರು ಬಹುಶಃ ಈ ವಿಷಯಗಳನ್ನು ತಿಳಿದುಕೊಂಡಿದ್ದರೆಂದು ಕಾಣಿಸುತ್ತದೆ. ಮನ್ವಂತರಗಳ ಕಾಲದಲ್ಲಿ ಹುಟ್ಟಿ ಪರಿಪಾಲಸಿದ ರಾಜರ ಹಾಗು ಇತರರ ವಿಷಯಗಳನ್ನೊಂಡ ಚರಿತ್ರೆಯನ್ನು ದಿನಾಂಕಗಳೊಂದಿಗೆ ಬರೆಯುತ್ತಾ ಸಾಗಿದರೆ ಅದು ಭೂಮಿಯಿಂದ ಸೂರ್ಯನವರೆಗೆ ತಾಳೆಗರಿಯ ಗ್ರಂಥಗಳ ಪರ್ವತದಷ್ಟಾಗಿ ಬಿಡುತ್ತಿತ್ತೆಂದು ಶ್ರೀ ವಿಶ್ವನಾಥ ಸತ್ಯನಾರಾಯಣ ಅವರು ವ್ಯಾಖ್ಯಾನಿಸಿದ್ದಾರೆ. ಆದ್ದರಿಂದ ಕೇವಲ ಶುಭ ಸಂಸ್ಕಾರಗಳ ಕುರಿತು ಮತ್ತು ಆ ಒಳ್ಳೆಯ ಸಂಸ್ಕಾರಗಳ ಪ್ರದಾತರ ಕುರಿತಷ್ಟೆ ನಮ್ಮ ಇತಿಹಾಸಕಾರರು ಬರೆದಿದ್ದಾರೆ. ಆದರೆ, ತಾರೀಖುಗಳನ್ನು ಬ್ರಿಟಿಷರು ಅದಲು-ಬದಲು ಮಾಡಿದರು! "ಚರಿತ್ರೆ ಎನ್ನುವುದು ಕೇವಲ ಹಲವು ಶತಮಾನಗಳ ಒಳಗೆ ಅಥವಾ ಬಹಳವೆಂದರೆ ಕೆಲವು ಸಾವಿರ ವರ್ಷಗಳೊಳಗೆ ಇರಬೇಕು. ಅಷ್ಟೇ ಹೊರತು ಮನ್ವಂತರಗಳಷ್ಟು, ಕೋಟ್ಯಾದಿ ವರ್ಷಗಳಷ್ಟಿರುವ ಕಲ್ಪಕಾಲದಷ್ಟು ಹೇಗಿದ್ದೀತು?" ಎನ್ನುವ ಪಾಠವನ್ನು ಮೆಕಾಲೆ ವಿದ್ಯಾವಿಧಾನವು ನಮಗೆ ಕಲಿಸಿಕೊಟ್ಟಿತು. ಆದ್ದರಿಂದ ಐದು ಸಾವಿರ ವರ್ಷಗಳ ಹಿಂದೆ ನಡೆದ ವಿಷಯಗಳನ್ನು ಕುರಿತು ಹೇಳಲು "ಇತಿಹಾಸ ಪೂರ್ವಯುಗ"ವೆನ್ನುವ ಶಬ್ದವನ್ನು ಹುಟ್ಟುಹಾಕಲಾಯಿತು! ಈ ಇತಿಹಾಸಪೂರ್ವ ಯುಗದಲ್ಲಿ ಚರಿತ್ರೆಯಿದ್ದಿಲ್ಲವೇ? ಮನುಷ್ಯರು ಇರಲಿಲ್ಲವೇ? ಆದರೆ ಅಸಂಬದ್ಧವೆನಿಸುವ ಈ "ಪ್ರೀ ಹಿಸ್ಟಾರಿಕ್ ಪೀರಿಯಡ್" ಎನ್ನುವುದು ನಮ್ಮ ವಿಶ್ವವಿದ್ಯಾಲಯಗಳ, ಶಾಲಾ ಕಾಲೇಜುಗಳ  ಚರಿತ್ರೆಯ ಪಾಠಗಳಲ್ಲಿ  ಇನ್ನೂ ಬಳಕೆಯಲ್ಲಿ ಇದೆ ಎನ್ನುವುದೇ ವಿಪರ್ಯಾಸ!
                                            *****
         ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ  ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಈಗ ನಿಮ್ಮ ಮುಂದಿರುವುದು ಈ ಸರಣಿಯ ಹದಿನಾಲ್ಕನೆಯ ಕಂತು, "ಆರ್ಯುಲು ವಚ್ಚಾಆ? ಭಾರತೀಯುಲು ವೆಳ್ಳಾರಾ? - ಆರ್ಯರು ಬಂದರಾ? ಭಾರತೀಯರು ಹೋದರಾ?"
 
   ಈ ಸರಣಿಯ ಹದಿಮೂರನೆಯ ಕಂತು ನಮ್ಮದೆನ್ನುವುದು ಬದಲಾಗುತ್ತಿದೆ! ಮಾಯವಾಗಿ ಹೋಗುತ್ತಿದೆ........! ಎನ್ನುವ ಲೇಖನಕ್ಕೆ ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%A9-...
 

Rating
No votes yet

Comments

Submitted by makara Tue, 12/27/2016 - 09:32

ಈ ಲೇಖನವನ್ನು ’ಫೇಸ್ ಬುಕ್’ ಸಾಮಾಜಿಕ ಜಾಲತಾಣದಲ್ಲಿ ಹಂಚಿದ ಮಿತ್ರರಾದ ನಾಗೇಶರಿಗೂ ಹಾಗೂ ಸಹೃದಿಯೀ ಸಂಪದದ ವಾಚಕ ಮಿತ್ರರಿಗೂ ಧನ್ಯವಾದಗಳು. ಈ ಸರಣಿಯ ಹದಿನೈದನೆಯ ಕಂತು, ಜನಾಂಗಗಳನ್ನು ನಿರ್ಮೂಲಿಸಿದ್ದು ಯಾರು?" ಎನ್ನುವ ಮುಂದಿನ ಲೇಖನವನ್ನು ಓದಲು ಈ ಕೊಂಡಿಯನ್ನು ನೋಡಿ.https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AB-...