ಭಾಗ ೧೯ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಬ್ರಿಟಿಷರು ಪ್ರಸಾದಿಸಿದ ಭೌಗೋಳಿಕ ವಾರಸತ್ವವಿದು.....!

ಭಾಗ ೧೯ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಬ್ರಿಟಿಷರು ಪ್ರಸಾದಿಸಿದ ಭೌಗೋಳಿಕ ವಾರಸತ್ವವಿದು.....!

ಚಿತ್ರ

ಅಖಂಡ ಭಾರತ್, ಪ್ರಾನ್ಸಿಸ್ ಯಂಗ್ ಹಸ್‌ಬೆಂಡ್ ಚಿತ್ರಕೃಪೆ: ಗೂಗಲ್       
            ಕೌರವರೂ ಪಾಂಡವರೂ ಅಂತಿಮ ಯುದ್ಧಕ್ಕಾಗಿ ಸನ್ನದ್ಧರಾಗಿದ್ದ ಸಮಯ...... ಎರಡೂ ಪಕ್ಷಗಳ ಸೈನಿಕರೂ ಕುರುಕ್ಷೇತ್ರ ಯುದ್ಧ ಭೂಮಿಯೆಡೆಗೆ ಸಾಗುತ್ತಿದ್ದ ಸಮಯವದು! ದ್ವಾಪರಯುಗವು ಇನ್ನೂ ಮೂವತ್ತಾರು ವರ್ಷಗಳಲ್ಲಿ ಪರಿಸಮಾಪ್ತವಾಗುತ್ತಿದ್ದ ಸಂಧ್ಯಾಕಾಲವದು! ಕ್ರಿಸ್ತಪೂರ್ವ ಮೂರುಸಾವಿರದ ನೂರಾ ಮುವ್ವತ್ತೆಂಟು ವರ್ಷಗಳ ಹಿಂದಿನ ಸಂಗತಿ ಅದು!
          ಎರಡೂ ಪಕ್ಷಗಳ ಒಳಿತನ್ನು ಬಯಸಿ ಬಲರಾಮನು ಯುದ್ಧದಲ್ಲಿ ಪಾಲ್ಗೊಳ್ಳಲಿಲ್ಲ. ಮಹಾಕವಿ ಕಾಳಿದಾಸನು ವಿವರಿಸಿದಂತೆ ಆ ಯದುಕುಲ ವೀರನು "ಬಂಧು ಪ್ರೀತ್ಯಾ ಸಮರ ವಿಮುಖಃ - ಬಂಧುಗಳ ಮೇಲಿನ ಮಮಕಾರದಿಂದ ಯುದ್ಧಕ್ಕೆ ವಿಮುಖನಾಗಿದ್ದ". ರಾಜ್ಯಾಧಿಕಾರದ ವಿವಾದವನ್ನು ತಮ್ಮನಾದ ಕೃಷ್ಣನಿಗೆ ಒಪ್ಪಿಸಿ ಬಲರಾಮನು ತೀರ್ಥಯಾತ್ರೆಗೆ ಹೊರಟು ಹೋದನಂತೆ. ಬಲರಾಮನಂತೆಯೇ ಅನೇಕ ಮಂದಿ ಕ್ಷತ್ರಿಯ ವೀರರು ಯುದ್ಧದಿಂದ ದೂರವುಳಿದರು. ಕೆಲವರು ದೂರ ಪ್ರಾಂತಗಳಿಗೆ ಹೊರಟು ಹೋದರು. ’ರೂಪತಿ’ ಎನ್ನುವ ಕ್ಷತ್ರಿಯ ಯುವಕನೊಬ್ಬ ಹೀಗೆ ಸಮರ ವಿಮುಖನಾಗಿ ಹಿಮಾಲಯದ ಕಡೆಗೆ ನಡೆದ..... ತ್ರಿವಿಷ್ಠಪದದ ಸೀಮೆಯನ್ನು ತಲುಪಿದ!
          ರೂಪತಿಯ ಕಥೆಯನ್ನು ಇಂದಿಗೂ ಟಿಬೆಟ್ಟಿನ ಜನರು ಹೇಳಿಕೊಳ್ಳುತ್ತಾರೆ. ಆಧುನಿಕ ಟಿಬೆಟ್ಟಿನ ಚರಿತ್ರೆ ’ರೂಪತಿ’ಯಿಂದ ಆರಂಭಗೊಳ್ಳುತ್ತದೆ. ಹಾಗೆ ಹಿಮಾಲಯವನ್ನು ಸೇರಿದ ರೂಪತಿ ಮಾನಸ ಸರೋವರದಲ್ಲಿ ಸ್ನಾನ ಮಾಡಿದ, ಸ್ನಾನ ಮಾಡಿದ ನಂತರ ಕೈಲಾಸ ಪರ್ವತದೆಡೆಗೆ ನಡೆದ. ಕೈಲಾಸ ಪರ್ವತವನ್ನು ದರ್ಶಿಸಿ, ಪರಿಕ್ರಮ ಮಾಡಿದ ನಂತರ ರೂಪತಿಯು ಅಲ್ಲೇ ಉಳಿದುಕೊಂಡನು. ಅವನು ಮಾನಸ ಸರೋವರ ಪ್ರಾಂತದಲ್ಲಿ ಧ್ಯಾನ ಮಗ್ನನಾದನು.
          ರೂಪತಿಯು ಟಿಬೆಟ್ಟಿಗೆ ಕಾಲಿಡುವ ಸಮಯದಲ್ಲಿ ಆ ಪ್ರಾಂತದಲ್ಲೆಲ್ಲಾ ಚಿಕ್ಕ ಪುಟ್ಟ ರಾಜ್ಯಗಳಿದ್ದವು. ಪ್ರಕೃತಿ ಆರಾಧನೆಯನ್ನೇ ಪ್ರಧಾನವಾಗಿರಿಸಿಕೊಂಡು ಜೀವನ ಯಾತ್ರೆಯನ್ನು ಸಾಗಿಸುತ್ತಿದ್ದ ಆ ವನವಾಸಿಗಳ ಧರ್ಮವೂ ಸಹ ವನಧರ್ಮವೇ. ತಮ್ಮತಮ್ಮೊಳಗೆ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದ ಆ ವನವಾಸಿಗಳ ನಾಯಕರುಗಳು ನಿಧಾನವಾಗಿ ರೂಪತಿಯ ಅನುಚರರಾದರು. ಸಮಸ್ತ ಟಿಬೆಟ್ಟು ರಾಜ್ಯವನ್ನು ಸಮೈಕ್ಯಗೊಳಿಸಿ ನೂತನ ರಾಜ್ಯವನ್ನು ಸ್ಥಾಪಿಸಿದ ರೂಪತಿ ಕಲಿಯುಗದ ಪ್ರಪ್ರಥಮ ಪರಿಪಾಲಕ! ಅಂದಿಗೆ ಟಿಬೆಟ್ಟು ಭರತ ಖಂಡದಿಂದ ತುಂಡಾಗಿರಲಿಲ್ಲ. ಕೈಲಾಸ ಪರ್ವತ, ಮಾಂಧಾತ ಪರ್ವತ, ಮಾನಸ ಸರೋವರ ಮೊದಲಾದವು ಟಿಬೆಟ್ ಪ್ರಾಂತದಲ್ಲಿ ಇವೆ! ವಿದೇಶಿಯರು ಭರತ ಖಂಡವನ್ನು ದುರಾಕ್ರಮಣ ಮಾಡಿದ ಕಾಲಖಂಡದಲ್ಲಿ ಟಿಬೆಟ್ಟು ಅನ್ಯಾಕ್ರಾಂತವಾಗಿರಲಿಲ್ಲ, ಹಾಗಾಗಿ ಅದು ಸ್ವತಂತ್ರ ಪ್ರಪತ್ತಿಯನ್ನು ಮುಂದುವರೆಸಿತು. ಈ ಸಮಸ್ತ ಚಾರಿತ್ರಿಕ ವಾಸ್ತವಗಳನ್ನು ಮೆಕಾಲೆ ವಿದ್ಯೆ ಆಪೋಶನ ತೆಗೆದುಕೊಂಡಿತು! ನಮ್ಮ ರಾಷ್ಟ್ರೀಯ ಭೌಗೋಳಿಕ ಸ್ಪೃಹೆಗೆ ಗ್ರಹಣ ಹಿಡಿಯಿತು. ಬ್ರಿಟಿಷ್ ಸರ್ಕಾರದ ಆಡಳಿತ ವಿಧಾನವು ಭರತ ಖಂಡದ ಅನೇಕಾನೇಕ ಭೂಭಾಗಳನ್ನು ತುಂಡರಿಸಿತು. ಹಾಗೆ ನಾವು ಅನೇಕ ಭೂಭಾಗಳನ್ನು ಕಳೆದುಕೊಂಡ ಸಂಗತಿಯನ್ನು ಭಾರತೀಯರು ಮರೆಯುವಂತೆ ಮಾಡಿದ್ದು ಮೆಕಾಲೆ ವಿದ್ಯೆ!
          ’ವನ್’ ಧರ್ಮವು ’ಬನ್’ ಧರ್ಮವಾಯಿತು. ’ವನವಾಸಿ’ ಪ್ರಜೆಗಳು ’ಬನ್‌ಪಾಸ್’ಗಳಾದರು. ಟಿಬೆಟ್ಟಿಯನ್ನರು ಬೌದ್ಧ ಧರ್ಮವನ್ನು ಸ್ವೀಕರಿಸಿದ ನಂತರವೂ ಸಹ ಭಾರತೀಯರಂತೆಯೇ ಓಂಕಾರವನ್ನು ಮಂತ್ರಗಳ ಪೂರ್ವದಲ್ಲಿ ಸೇರಿಸಿ ಉಚ್ಛರಿಸುವುದನ್ನು ಮುಂದುವರೆಸಿದರು. ಬೌದ್ಧ ಧರ್ಮವು ಭಾರತದ ಇತರ ಪ್ರಾಂತಗಳಲ್ಲಿ ಅಸ್ತಮಿಸುತ್ತಿದ್ದ ಸಮಯದಲ್ಲಿ ಕ್ರಿ.ಶ. ಮೂರನೇ ಶತಮಾನದಲ್ಲಿ ಅದು ಟಿಬೆಟ್ಟಿನಾದ್ಯಂತ ವ್ಯಾಪಿಸಿತು. ಅದಕ್ಕೂ ಪೂರ್ವದಲ್ಲಿ ಸಾವಿರ ವರ್ಷಗಳಿಗೂ ಅಧಿಕ ಕಾಲ ಬೌದ್ಧಮತವು ಇತರೆಡೆಯಲ್ಲಿ ಪ್ರಬಲವಾಗಿತ್ತು, ಆದರೂ ಸಹ ಅದರ ಗಂಧ ಗಾಳಿಗಳು ಟಿಬೆಟ್ಟಿಗೆ ಸೋಕಿರಲಿಲ್ಲ! ಚೀನಾ ದೇಶಕ್ಕೆ ಟಿಬೆಟ್ಟಿನೊಂದಿಗೆ ಸಾಂಸ್ಕೃತಿಕ ಸಂಬಂಧಗಳೇ ಇರಲಿಲ್ಲ! ಏಕೆಂದರೆ ಟಿಬೆಟ್ ಭಾರತದ ಅಂತರ್ಭಾಗವಾದ್ದರಿಂದ! ಲಿಚ್ಛವೀಯ ವಂಶದವರು ನೇಪಾಳ್ - ಟಿಬೆಟ್ಟು ಪ್ರಾಂತಗಳ ಸರಿಹದ್ದಿನವರು...... ಆ ವಂಶದ ಹೆಣ್ಣುಮಕ್ಕಳು ಗುಪ್ತ ವಂಶ, ಶಾತವಾಹನ ವಂಶಗಳ ಸೊಸೆಯಂದಿರು! ವೈಶಾಲಿ (ಬಿಹಾರ್) ಪ್ರಾಂತದಲ್ಲಿ ಲಿಚ್ಛವೀಕುಲದ ವಂಶಸ್ಥರು ರಾಜ್ಯಸ್ಥಾಪನೆ ಮಾಡಿದರು. ಈ ಲಿಚ್ಛವೀ ವಂಶಸ್ಥರಲ್ಲೇ ಕೆಲವರು ಕೋಸಲ ಪ್ರಾಂತವನ್ನೂ ಸಹ ಪರಿಪಾಲಿಸಿದರು. ಪ್ರಸೇನಜಿತ್ ಇಂತಹವರಲ್ಲಿ ಒಬ್ಬ, ಅವನ ಐದನೇ ಕುಮಾರನು ಟಿಬೆಟ್ಟಿಗೆ ಹೋಗಿ ಅಲ್ಲಿ ರಾಜನಾದನು. ಟಿಬೆಟ್ಟಿನ ಜನರು ಅವನನ್ನು ’ನ್ಯಾಕ್ಷ್ರೀ ಸಂಪೂ’ ಎನ್ನುವ ಹೆಸರಿನಿಂದ ಕರೆದರು. ಟಿಬೆಟ್ ರಾಜವಂಶದಲ್ಲಿ ಇದು ಎರಡನೆಯದಾದ ಪ್ರಧಾನ ರಾಜವಂಶ. ಈ ವಂಶದವರು ಟಿಬೆಟ್ಟಿನಲ್ಲಿ ಆಡಳಿತಾರೂಢರಾಗಿದ್ದಾಗ ಮತ್ತು ತದನಂತರ ದಕ್ಷಿಣದಿಂದ ಟಿಬೆಟ್‌ಗೆ ಹೋದ ಬೌದ್ಧಧರ್ಮ ಪ್ರಚಾರಕರು ಅಲ್ಲಿ ಬೌದ್ಧಮತವು ನೆಲಗೊಳ್ಳಲು ಕಾರಣರಾದರು! ಟಿಬೆಟ್-ಕೋಸಲ-ವೈಶಾಲಿ ಪ್ರಾಂತಗಳ ಅನುಬಂಧವನ್ನು ಕುರಿತು, ’ರೆಲಿಜಿಯನ್ ಇನ್ ದ ಹಿಮಾಲಯಾಸ್ - ಹಿಮಾಲಯದಲ್ಲಿ ಧರ್ಮ’ ಎನ್ನುವ ತಮ್ಮ ಗ್ರಂಥದಲ್ಲಿ ಇ.ಟಿ. ಆಟ್‌ಕಿನ್‌ಸನ್ ಅವರು ವಿವರಿಸಿದ್ದಾರೆ. ಆವರಿಗೆ ಸಿಕ್ಕ ಆಧಾರಗಳು ಟಿಬೆಟ್ಟಿನಲ್ಲಿ ಮೆಕಾಲೆ ಮಾರೀಚ ಮೃಗವು ನುಸುಳದೇ ಇದ್ದದ್ದರಿಂದ ಅಲ್ಲಿ ಸಜೀವವಾಗಿ ದೊರಕಿದ ಭಾರತದ ಭೌಗೋಳಿಕ ಹಾಗು ಚಾರಿತ್ರಿಕ ಸ್ಮೃತಿಗಳು! ಅದರರ್ಥ ಟಿಬೆಟ್ ಭಾರತದಲ್ಲಿನ ಅಂತರ್ಭಾಗ! ಕ್ರಿಸ್ತ ಶಕ ೧೯೫೦ರಲ್ಲಿ ಚೀನಾ ದೇಶವು ಟಿಬೆಟ್ಟನ್ನು ಸಂಪೂರ್ಣವಾಗಿ ದುರಾಕ್ರಮಿಸಿತು. ಕ್ರಿಸ್ತ ಶಕ ೧೯೫೯ರಲ್ಲಿ ಟಿಬೆಟ್ಟಿಯನ್ನರ ಧರ್ಮಗುರು ದಲೈಲಾಮಾ ಅವರು ನಮ್ಮ ದೇಶಕ್ಕೆ ತಮ್ಮ ಸಾವಿರಾರು ಅನುಯಾಯಿಗಳೊಂದಿಗೆ ವಲಸೆ ಬಂದರು. ಅಂದಿನಿಂದ ಈ ಭಾರತೀಯ ಸ್ಮೃತಿಯನ್ನು ಟಿಬೆಟ್ ಪ್ರಜೆಗಳಿಂದ ವಿಸ್ಮೃತಗೊಳಿಸಲು ಚೀನಾದ ಮಾವೋಯಿಸ್ಟ್ ವಿದ್ಯಾವಿಧಾನವು ಸಹಾಯಕವಾಗಿದೆ........
          ಇತ್ತೀಚಿನ ಪ್ರಮುಖ ಲೇಖಕರು (ಮೆಕಾಲೆ ವಿದ್ಯಾವಿಧಾನಗ್ರಸ್ತರು) ಬರೆದ ಚರಿತ್ರೆಯ ಪುಸ್ತಕಗಳಲ್ಲಿ ಭಾರತ ಹಾಗು ಟಿಬೆಟ್ಟಿನ ಸಂಬಂಧಗಳು ಕ್ರಿಸ್ತ ಶಕ ಆರನೆಯ ಶತಮಾನದಿಂದೀಚೆಗೆ ಆರಂಭಗೊಂಡವೆಂದು ಬರೆಯುತ್ತಾರೆ. ಅದಕ್ಕೂ ಪೂರ್ವದಲ್ಲಿ ಭಾರತ ಹಾಗು ಟಿಬೆಟ್‌ಗಳ ನಡುವೆ ಇದ್ದ ಸಂಬಂಧದ ಕುರಿತು ತಿಳಿಯದೆಂದೂ ಬರೆಯುತ್ತಾರೆ, ಏಕೆಂದರೆ ಕ್ರಿಸ್ತ ಶಕ ೧೯ನೇ ಶತಮಾನದ ಕಡೆಯವರೆಗೂ ಬ್ರಿಟಿಷರು ಟಿಬೆಟ್ಟನ್ನು ಅಷ್ಟಾಗಿ ಪರಿಗಣಿಸಲಿಲ್ಲ! ಅವರು ಭೌಗೋಳಿಕವಾಗಿ ಟಿಬೆಟ್ಟನ್ನು ಭಾರತದ ಅಂತರ್ಭಾಗವೆಂದು ಗುರುತಿಸಲಿಲ್ಲ! "ಹಾಗೆ ಗುರುತಿಸದೇ ಇದ್ದದ್ದು ತಪ್ಪು" ಎನ್ನುವ ಸ್ಪೃಹೆ ಭಾರತೀಯ ವಿದ್ಯಾವಂತರಲ್ಲಿ ಲೋಪಿಸಿತ್ತು. ಭಾರತ ದೇಶದ ಭೌಗೋಳಿಕ ಸ್ವರೂಪದ ಸಮಗ್ರತೆಯು ಆಗಲೇ ತುಂಡಾಗಿ ಹೋಗಿತ್ತು! ಅಫ್ಘಾನಿಸ್ತಾನ್, ಬರ್ಮಾ, ಟಿಬೆಟ್ - ಈ ಮೂರು ಅತಿ ದೊಡ್ಡ ಭೂಭಾಗಳು ಬ್ರಿಟಿಷರ ಆಡಳಿತಾವಧಿಯಲ್ಲಿ ಭಾರತದ ಪ್ರಧಾನ ಭೂಭಾಗದಿಂದ ಸದ್ದಿಲ್ಲದೆ ದೂರವಾದವು. ೧೯೪೭ರಲ್ಲಿ ದೇಶ ವಿಭಜನೆ ನಡೆದಾಗ - ದೇಶವು ಇಬ್ಬಾಗವಾಗುತ್ತಿದೆ ಎನ್ನುವ ವಿಷಾದನೀಯ ವಾಸ್ತವವು ಈ ದೇಶದ ಪ್ರಜೆಗಳ ಅರಿವಿಗೆ ಬಂದಿತ್ತು. ಆದರೆ ಅದಕ್ಕೂ ಮುಂಚೆ ದೇಶ ವಿಭಜನೆಯಾಗಿ ಹೋಗಿತ್ತು ಎನ್ನುವ ಕಲ್ಪನೆಯೂ ನಮ್ಮ ಮನಸ್ಸಿಗೆ ತಟ್ಟಲಿಲ್ಲ. ಕೇವಲ ಬ್ರಿಟಿಷರು ಆಕ್ರಮಿಸಿದ ಭೂಭಾಗಗಳು ಮಾತ್ರವೇ ಭಾರತಭೂಮಿ ಎನ್ನುವ ಭ್ರಮೆಯು ವ್ಯಾಪಿಸಿದ್ದು ಅದಕ್ಕೆ ಮೊದಲನೆ ಕಾರಣ. ಬ್ರಿಟಿಷರ ಆಡಳಿತ ವ್ಯವಸ್ಥೆಯ ವಾರಸತ್ವವನ್ನು (ಉತ್ತರಾಧಿಕಾರ) ಯಥಾವತ್ತಾಗಿ ನಾವು ಸ್ವೀಕರಿಸಿದ್ದು ಎರಡನೆ ಕಾರಣ! ಇದು ಆ ಭ್ರಮೆಯನ್ನು ಇಮ್ಮಡಿಗೊಳಿಸಿತು. ಈ ವಾರಸತ್ವವನ್ನು ಕುರುಡಾಗಿ ಸ್ವೀಕರಿಸುವಂತೆ ಮಾಡಿದ್ದೂ ಕೂಡಾ ಮೆಕಾಲೆ ವಿದ್ಯಾವಿಧಾನವೆ!
ರಾವಣನು ತಪಸ್ಸು ಮಾಡಿದ ಪ್ರಾಂತದಲ್ಲಿ ’ರಾಕ್ಷಸ ತಾಳ್’ (ರಾಕ್ಷಸ ತಟಾಕ) ಇದೆ. ಮಾನಸ ಸರೋವರದ ನೀರನ್ನು ಪವಿತ್ರವಾಗಿ ಕಾಣುವ ಟಿಬೆಟಿಯನ್ನರು ಇಂದಿಗೂ ಕೂಡಾ ರಾಕ್ಷಸ ತಟಾಕದ ನೀರನ್ನು ಮಾತ್ರ ಮುಟ್ಟುವುದಿಲ್ಲ. ಈ ಎರಡೂ ತಟಾಕಗಳೂ ಸಹ ಮಾಂಧಾತ ಪರ್ವತ ಮತ್ತು ಕೈಲಾಸ ಪರ್ವತಗಳ ಮಧ್ಯೆ ಇವೆ. ದುರ್ಗಾದೇವಿಯನ್ನು ತಾರಾ ದೇವಿಯಾಗಿ ಟಿಬೆಟಿಯನ್ನರು ಆರಾಧಿಸುತ್ತಾರೆ. ಕೈಲಾಸ ಪರ್ವತವನ್ನು ಮೊಟ್ಟ ಮೊದಲ ಬಾರಿಗೆ ಪ್ರದಕ್ಷಿಣೆ ಮಾಡಿದವನು ಒಬ್ಬ ಲಾಮಾ! ಈ ಲಾಮಾ ಗುರುಗಳು ಬೌದ್ಧ ಧರ್ಮವು ಹುಟ್ಟುವುದಕ್ಕೆ ಮುಂಚಿನಿಂದಲೂ ಇದ್ದರು! ಆ ಲಾಮಾನಿಗೆ ತಾರಾದೇವಿ ದಾರಿ ತೋರಿಸಿದಳೆಂದು ಸಾರುವ ಜಾನಪದ ಗೀತೆಗಳು ಟಿಬೆಟ್ ಪ್ರಜೆಗಳ ನಾಲಿಗೆಯಲ್ಲಿ ಇಂದಿಗೂ ನಲಿಯುತ್ತಿವೆ! ಪಾಂಡವರು, ಆದಿ ಶಂಕರರು ಮೊದಲಾದವರು ಕೈಲಾಸ ಪರ್ವತೆದೆಡೆಗೆ ಸಾಗಿದರು! ಕ್ರಿಸ್ತಪೂರ್ವ ೧೮೮೭ರಲ್ಲಿ ಗೌತಮ ಬುದ್ಧನು ಜನಿಸಿ ಬೌದ್ಧಮತದ ಪ್ರಸಾರಕ್ಕೆ ಕಾರಣನಾದನು. ಕ್ರಿಸ್ತಪೂರ್ವ ೧೪೭೨ರಲ್ಲಿ ಅಶೋಕ ಸಾಮ್ರಾಟನ ಕಾಲದಲ್ಲಿ ಬೌದ್ಧಧರ್ಮವು ಚೀನಾ ಮುಂತಾದ ವಿದೇಶಗಳಿಗೆ ವ್ಯಾಪಿಸಿತು. ಟಿಬೆಟ್ಟನ್ನು ಬೌದ್ಧರು ಪರಿಗಣಿಸಲಿಲ್ಲ - ಬಹುಶಃ ಹಿಮಚ್ಛಾದಿತ ಪ್ರದೇಶವಾದ್ದರಿಂದ! ಕ್ರಿಸ್ತಪೂರ್ವ ೫೦೯ನೇ ಸಂವತ್ಸರದಲ್ಲಿ ಆದಿಶಂಕರರು ಜನ್ಮತಾಳಿದ ನಂತರ ದೇಶದಲ್ಲೆಲ್ಲಾ ಬೌದ್ಧ ಮತವು ಕ್ಷೀಣಿಸಿತು. ಆದರೆ ಪಾರಶೀಕ ಸಾಮ್ರಾಜ್ಯದ ಭಾಗವಾಗಿ ದುರಾಕ್ರಮಣಕ್ಕೆ ತುತ್ತಾಗಿದ್ದ ಅಫ್ಘಾನಿಸ್ತಾನದಲ್ಲಿ ಮಾತ್ರ ಬೌದ್ಧಮತವು ಇನ್ನೂ ಭದ್ರವಾಗಿ ನೆಲೆಯೂರಿತ್ತು. ಅದೇ ವಿಧವಾಗಿ ಇತ್ತ ತುದಿಯಲ್ಲಿದ್ದ ಬರ್ಮಾ ದೇಶದಲ್ಲಿಯೂ ಕೂಡಾ ಬೌದ್ಧ ಧರ್ಮವಯ ನೆಲೆಗೊಂಡಿತ್ತು! ಹಾಗಾಗಿ ಹೊಸ ಪ್ರದೇಶಗಳನ್ನು ಹುಡುಕಿಕೊಂಡು ಹೊರಟ ಬೌದ್ಧ ಧರ್ಮ ಪ್ರಚಾರಕರಿಗೆ ಕ್ರಿಸ್ತಪೂರ್ವ ಎರಡು ಮೂರನೇ ಶತಮಾನಗಳಲ್ಲಿ ಟಿಬೆಟ್ಟಿನ ರಾಜರ ಕರೆ ಬಂದಿತು.
          ಕ್ರಿಸ್ತ ಶಕ ಒಂದನೇ ಶತಮಾನದಲ್ಲಿ ಜೀವಿಸಿ, ಹೊಸ ಶಕವನ್ನು ಸ್ಥಾಪಿಸಿದ ಶಾಲಿವಾಹನನದು ಪ್ರಮರ ವಂಶ. ಶಾಲಿವಾಹನನು ಭಾರತ ದೇಶದ ಕಟ್ಟ ಕಡೆಯ ಸಾಮ್ರಾಟ. ಎರಡನೇ ಶತಮಾನದಿಂದ ಎಂಟನೇ ಶತಮಾನದವರೆಗೆ ಸಮೈಕ್ಯ ರಾಜ್ಯಾಂಗ ವ್ಯವಸ್ಥೆಯು (ಕೇಂದ್ರ ಪ್ರಭುತ್ವ)  ವಿಚ್ಛಿನ್ನವಾಯಿತು. ಈ ಪರಿಸ್ಥಿತಿಯಲ್ಲಿ ಬೌದ್ಧ ಧರ್ಮವು ಟಿಬೆಟ್ಟಿನಲ್ಲಿ ಬೇರೂರಿತು ಆದರೆ ಬರ್ಮಾ ಪ್ರಾಂತದಿಂದ ದೂರವಾಗುತ್ತಾ ಹೋಯಿತು. ನೇಪಾಳಕ್ಕೆ ಉತ್ತರ ದಿಕ್ಕಿನಲ್ಲಿದ್ದ ಹಾಗು ಈಶಾನ್ಯ ಭಾರತದ ಪ್ರಾಂತಗಳನ್ನು ವಿದೇಶೀಯ ಇಸ್ಲಾಮೀ ಮತಾಂಧರು ಆಕ್ರಮಿಸಲಾರದೇ ಹೋದರು! ಬಿಹಾರ್ ಹಾಗು ಉತ್ತರ ವಂಗ ಪ್ರಾಂತಗಳನ್ನು ಧ್ವಂಸಗೈದ ಬಕ್ತಿಯಾರ್ ಖಿಲ್ಜಿಯನ್ನು ಅಸ್ಸಾಂ ಹಾಗು ಟಿಬೆಟ್ ಪ್ರಾಂತಗಳಲ್ಲಿನ ವನವಾಸಿ ಪ್ರಜೆಗಳು ಅವನನ್ನು ಯುದ್ಧದಲ್ಲಿ ಹಣ್ಣುಗಾಯಿ, ನೀರುಗಾಯಿ ಮಾಡಿ ಸೋಲಿಸಿದರು. ಅತ್ಯಂತ ಹೇಯವಾಗಿ ಪೈಶಾಚಿಕ ಕೃತ್ಯಗಳನ್ನೆಸಗಿದ ಬಕ್ತಿಯಾರ್ ಖಿಲ್ಜಿಯನ್ನು ಕ್ರಿ.ಶ. ೧೨೦೫ರಲ್ಲಿ ಅಸ್ಸಾಂ ಹಾಗು ಟಿಬೆಟ್ಟಿನ ಗಿರಿಪುತ್ರರು ಮಣ್ಣುಮುಕ್ಕಿಸಿದರು. ಖಿಲ್ಜಿಯು ಬ್ರಹ್ಮಪುತ್ರಾ ನದಿಯನ್ನು ದಾಟುವವರೆಗೆ ಸುಮ್ಮನಿದ್ದು ಅನಂತರ ಅವನಿಗೆ ದಿಗ್ಬಂಧನ ಹಾಕಿದರು. ಹತ್ತು ಸಾವಿರ ಆಶ್ವದಳವನ್ನು ಕಳೆದುಕೊಂಡ ಖಿಲ್ಜಿ ಪ್ರಾಣವನ್ನು ಮಾತ್ರ ಉಳಿಸಿಕೊಳ್ಳುವಲ್ಲಿ ಸಫಲನಾದ. (ರೋಗಗ್ರಸ್ತನಾಗಿದ್ದ ಬಕ್ತಿಯಾರ್ ಖಿಲ್ಜಿಯು ನಿದ್ರಿಸುತ್ತಿದ್ದ ಸಮಯದಲ್ಲಿ ಅವನ ಅನುಚರನಾದ ಅಲಿ ಮರ್ದಾನನು, ಖಿಲ್ಜಿಯ ಮುಖವನ್ನು ಬಟ್ಟೆಯಿಂದ ಮುಚ್ಚಿ ಅವನ ಗುಂಡಿಗೆಯೊಳಗೆ ದೊಡ್ಡ ಭಲ್ಲೆಯೊಂದನ್ನು ಚುಚ್ಚುವುದರ ಮೂಲಕ ಸಾಯಿಸಿದನು. ನಲಂದಾ ವಿಶ್ವವಿದ್ಯಾಲಯವನ್ನು ಸಂಪೂರ್ಣವಾಗಿ ಬೆಂಕಿಗೆ ಆಹುತಿ ಮಾಡಿ, ಒಂದೇ ದಿನ ಎಂಟು ಸಾವಿರ ಬೌದ್ಧ ಭಿಕ್ಷುಗಳನ್ನು ಹತ್ಯೆಗೈದಿದ್ದ ಖಿಲ್ಜಿಯ ಕಥೆ ಹೀಗೆ ಧಾರುಣ ಅಂತ್ಯವನ್ನು ಕಂಡಿತು).
          ದೇಶೀ ರಾಜರು, ಪಡುವಣದೆಡೆಗೆ ತಿರುಗಿ ಇಸ್ಲಾಮ್ ಬೀಭತ್ಸಕಾರರೊಂದಿಗೆ ಸಂಘರ್ಷವನ್ನು ಸಾಗಿಸಿದ ಸುಮಾರು ಸಾವಿರ ವರ್ಷಗಳಲ್ಲಿ ಟಿಬೆಟ್ ಹಾಗು ಬರ್ಮಾ ಪ್ರಾಂತಗಳು ಸುರಕ್ಷಿತವಾಗಿಯೇ ಇದ್ದವು. ದುರಾಕ್ರಮಣಕಾರರು ನುಸುಳಲಾರದಂತಹ ಭಾರತೀಯ ಪ್ರಾಂತಗಳಿವು! ಬ್ರಿಟಿಷರು ಟಿಬೆಟ್ ಅಷ್ಟೇ ಅಲ್ಲ, ಈಶಾನ್ಯ ಭಾರತವನ್ನೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಲಾಭದಾಯಕವಲ್ಲದ ಆ ಪ್ರಾಂತಗಳು ಪರಂಗಿ ದರೋಡೆಕೋರರನ್ನು ಆಕರ್ಷಿಸಲಿಲ್ಲ. ಆದರೆ ಚೀನಿಯರ ದಾಳಿಗಳು ಪ್ರಬಲಗೊಂಡಾಗ ಟಿಬೆಟ್ಟಿನ ಲಾಮಾಗಳು ’ಬ್ರಿಟಿಷ್ ಭಾರತ ಪ್ರಭುತ್ವ’ದ ಸಹಾಯವನ್ನು ಯಾಚಿಸುವುದು ಮೊದಲಾಯಿತು. ಕ್ರಿ.ಶ. ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ ಟಿಬೆಟ್ಟಿನಲ್ಲಿದ್ದ ಬ್ರಿಟಿಷ್ ಅಧಿಕಾರಿಗಳ ದಂಡ ಯಾತ್ರೆಗಳು ಈಶಾನ್ಯ ದಿಕ್ಕಿನಾದ್ಯಂತ ಆರಂಭವಾದವು. ಬ್ರಹ್ಮಪುತ್ರ ನದಿಯ ಉತ್ತರಕ್ಕೆ ಹಾಗು ಈಶಾನ್ಯ ಭಾಗಗಳಲ್ಲಿದ್ದ ಗಿರಿಜನರ ಸಂತೆಗಳ ಮೇಲೆ ಬ್ರಿಟಿಷರು ಸುಂಕವನ್ನೂ ವಿಧಿಸಿದರು. ಕ್ರಿ.ಶ. ೧೮೮೦ರಿಂದ ಸುಮಾರು ಮುವ್ವತ್ತು ವರ್ಷಗಳ ಕಾಲ ಆ ಪ್ರಾಂತಗಳ ಪ್ರಜೆಗಳು ಭಯಂಕರವಾದ ಬೀಭತ್ಸಕಾಂಡಕ್ಕೆ ಗುರಿಯಾದರು. ಬ್ರಿಟಿಷ್ ಸೈನಿಕರು ಗಿರಿಜನ ಗ್ರಾಮಗಳನ್ನು ಸುಟ್ಟು ಹಾಕುತ್ತಿದ್ದರು. ಸಂತೆಗಳ ಮೇಲೆ ದಾಳಿ ಮಾಡಿ ಧವಸ, ಧಾನ್ಯಗಳನ್ನು, ಸಾಮಾನು ಸರಂಜಾಮುಗಳನ್ನೂ ದೋಚುತ್ತಿದ್ದರು. ಆ ವನವಾಸಿಗಳು ಮತ್ತಷ್ಟು ಕಾಡಿನೊಳಕ್ಕೆ ಹೊಕ್ಕು ಅಲ್ಲಿ ತಮ್ಮ ಗ್ರಾಮಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು. ಬ್ರಹ್ಮಪುತ್ರಾ ನದಿಯ ಮೇಲ್ಗಡೆ ಇದ್ದ ಪ್ರಾಂತವು ಆ ವಿಧವಾಗಿ ಬ್ರಿಟಿಷರ ಭೌತಿಕ ಬೀಭತ್ಸಕಾಂಡಕ್ಕೆ ಗುರಿಯಾಯಿತು. ಹೊಸ ಹೊಸ ಜಾಗಗಳಲ್ಲಿ ಅವರು ಸಂತೆಗಳನ್ನು ನಡೆಸುವುದನ್ನು ಆರಂಭಿಸಿದರು. ಇಷ್ಟನ್ನೆಲ್ಲಾ ಬ್ರಿಟಿಷರು ಏಕೆ ಮಾಡಿದರು? ಏಕೆಂದರೆ, ಒಂದು ಕಾಲದಲ್ಲಿ ಕೆಲಸಕ್ಕೆ ಬಾರದ ಭೂಭಾಗಗಳು ಈಗ ಬ್ರಿಟಿಷರಿಗೆ ಲಾಭದಾಯಕ ಭೂಭಾಗಗಳಾಗಿ ಮಾರ್ಪಟ್ಟಿದ್ದವು! ೧೯೦೩ರಲ್ಲಿ ’ ಪ್ರಾನ್ಸಿಸ್ ಯಂಗ್ ಹಸ್‌ಬೆಂಡ್’ ಎನ್ನುವ ಬಿಳಿಯನೊಬ್ಬ ಟಿಬೆಟ್ಟಿನೊಳಕ್ಕೆ ನುಸುಳಿ ಅದರ ರಾಜಧಾನಿಯಾದ ಲ್ಹಾಸಾ ಪಟ್ಟಣವನ್ನು ಸೇರಿದನು. ಆಗ ದಲೈಲಾಮಾ ಚೀನಾ ದೇಶಕ್ಕೆ ಪಲಾಯನ ಮಾಡಿದನು! ಆಗಿನಿಂದ ಟಿಬೆಟ್ ಚೀನಾ ಹಾಗು ಬ್ರಿಟಿಷರ ನಡುವೆ ಸಿಲುಕಿ ನುಜ್ಜುಗುಜ್ಜಾಯಿತು.
          ಕಥೆ ಇನ್ನೂ ಬಹಳ ಇದೆ, ಆದರೆ ಬ್ರಿಟಿಷರು ಅಂದು ಟಿಬೆಟ್ಟನ್ನು ಆಕ್ರಮಿಸಿಕೊಂಡಿದ್ದರೆ ೧೯೪೭ರ ನಂತರ ಟಿಬೆಟ್ ನಮ್ಮ ದೇಶದ ಅಂತರ್ಭಾಗವಾಗಿ ಮುಂದುವರೆಯುತ್ತಿತ್ತು! ಏಕೆಂದರೆ ಬ್ರಿಟಿಷರು ನಿರ್ಧರಿಸಿದ ಎಲ್ಲೆಗಳನ್ನು ೧೯೪೭ರ ನಂತರವೂ ನಾವು ಯಥಾವತ್ತಾಗಿ ಸ್ವೀಕರಿಸಿದ್ದೇವೆ. "ನಿಮ್ಮ ದೇಶ ಇಷ್ಟರವರೆಗೇನೆ" ಎಂದು ಮೆಕಾಲೆ ವಿದ್ಯೆ ನಮ್ಮ ತಲೆ ಸವರಿದೆ!
          ಆ ದಿನಗಳಲ್ಲಿ ಚೀನಾ ಎಂದರೆ ಬ್ರಿಟಿಷರಿಗೆ ಭಯವಿರಲಿಲ್ಲ, ಆದರೆ ರಷ್ಯಾ ಎಂದರೆ ಭಯಪಡುತ್ತಿದ್ದರು. ಆದ್ದರಿಂದ ಟಿಬೆಟ್ಟನ್ನು ಆಕ್ರಮಿಸಿ ಚೀನಾದವರ ಮನಸ್ತಾಪ ಕಟ್ಟಿಕೊಳ್ಳುವುದು ಬ್ರಿಟಿಷರಿಗೆ ಬೇಕಿರಲಿಲ್ಲ. ಮೇಲಾಗಿ ರಷ್ಯಾ ಪ್ರಾಬಲ್ಯದಿಂದ ಟಿಬೆಟ್ಟನ್ನು ದೂರವುಳಿಸುವುದು ಬ್ರಿಟಿಷರ ಹುನ್ನಾರವಾಗಿತ್ತು. ಆದ್ದರಿಂದ ಬ್ರಿಟಿಷರು ಚೀನಾದೊಂದಿಗೆ ಮೈತ್ರಿಯನ್ನು ಏರ್ಪಡಿಸಿಕೊಂಡಿದ್ದರು! ಟಿಬೆಟ್ಟಿನ ಮೇಲೆ ಚೀನೀಯರು ಹಾಗು ಇಂಗ್ಲೀಷರು ಸಂಯುಕ್ತವಾಗಿ ದೌರ್ಜನ್ಯವನ್ನು ಮುಂದುವರೆಸಿದರು. ಜವಾಹರ್ ಲಾಲ್ ನೆಹರೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಟಿಬೆಟ್ಟಿನಿಂದ ನಮ್ಮ ಸೈನಿಕ ಸ್ಥಾವರಗಳನ್ನು ಹಾಗೂ ತಂತಿ ಟಪಾಲಿನ ಕಾರ್ಯಾಲಯಗಳನ್ನೂ ಅಲ್ಲಿಂದ ತೆರವುಗೊಳಿಸಿದರು. ಟಿಬೆಟ್ಟಿನ ಸ್ವಾತಂತ್ರ್ಯವು ಸತ್ತು ಹೋಯಿತೆಂದು ಪ್ರಕಟಿಸಿದರು!
          ಕ್ರಿ.ಶ. ೧೯೩೫ರಲ್ಲಿ ಬರ್ಮಾ ಪ್ರಾಂತದಲ್ಲೆಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಏನೆಂದು ತೀರ್ಮಾನಿಸಿದರು? ”ಭಾರತದೇಶದಿಂದ ಬರ್ಮಾ ಪ್ರಾಂತವನ್ನು ಬೇರೆ ಮಾಡಬಾರದೆಂದು’ ಅವರು ಅಕ್ರೋಶಪಟ್ಟರು, ಅಲವತ್ತುಕೊಂಡರು, ಕೈಗಳನ್ನು ಜೋಡಿಸಿ ಕಾಂಗ್ರೆಸ್ ಹೋರಾಟಗಾರರನ್ನು ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಕೋರಿಕೊಂಡರು!" ಆದರೆ ಕಾಂಗ್ರೆಸ್ಸಿಗರು ’ಬರ್ಮಾ ಭಾರತದ ಭಾಗವಲ್ಲ’ ಎಂದು ನಿರ್ಧರಿಸಿದರು! ಕ್ರಿ.ಶ. ೧೮೮೫ಕ್ಕೂ ಪೂರ್ವದಲ್ಲಿಯೇ ಬರ್ಮಾ ಪ್ರಾಂತವು ಬ್ರಿಟಿಷರೊಂದಿಗೆ ಸುಮಾರು ಒಂದು ನೂರು ವರ್ಷಗಳ ಕಾಲ ಹೋರಾಡಿತ್ತು. ಕ್ರಿ.ಶ.೧೮೮೫ರ ಹೊತ್ತಿಗಾಗಲೇ ಬರ್ಮಾವನ್ನೂ ಸಹ ’ಶ್ವೇತ’ಕತ್ತಲೆ ಆವರಿಸಿ ಬಿಟ್ಟಿತ್ತು. ಆಗ, ಕಾಂಗ್ರೆಸ್ ಬರ್ಮಾವನ್ನು ಭಾರತದೊಂದಿಗೆ ವಿಲೀನಗೊಳಿಸಬಾರದೆಂದು ತೀರ್ಮಾನಿಸಿತು. ತಲತಲಾಂತರಗಳ ಸ್ಪೃಹೆಯನ್ನು ಮೆಕಾಲೆ ನುಂಗಿ ನೀರುಕುಡಿದ..... ಸಂಸ್ಕೃತ ಭಾಷೆಗೆ ದೂರವಾದ ವಿದ್ಯಾವಂತರಿಗೆ ತಲೆಮಾರುಗಳ ಭರತಭೂಮಿಯ ಸ್ವರೂಪದ ಕುರಿತು ತಿಳಿದಿರಲಿಲ್ಲ! ತಿಳಿದವರು ಹೇಳಿದರೆ ಅದನ್ನವರು ನಂಬಲಿಲ್ಲ... ಅದೇ ಮೆಕಾಲೆ ಮಾಯೆ!
*****
ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ  ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಈಗ ನಿಮ್ಮ ಮುಂದಿರುವುದು ಈ ಸರಣಿಯ ಹತ್ತೊಂಬತ್ತನೆಯ ಕಂತು, "ವಾರು ಪ್ರಸಾಂದಿಂಚಿನ ಭೌಗೋಳಿಕ ವಾರಸತ್ವಮ್ ಇದಿ.. - ಬ್ರಿಟಿಷರು ಪ್ರಸಾದಿಸಿದ ಭೌಗೋಳಿಕ ವಾರಸತ್ವವಿದು.....!
            ಈ ಸರಣಿಯ ಹದಿನೆಂಟನೆಯ ಕಂತು, "ಮೇಧಾವಿಗಳು ಬ್ರಿಟಿಷರಿಗೆ ಸಹಜ ಮಿತ್ರರು!" ಎನ್ನುವ ಲೇಖನಕ್ಕೆ ಈ ಕೊಂಡಿಯನ್ನು ನೋಡಿ - https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AE-...
 

Rating
No votes yet

Comments

Submitted by makara Mon, 01/23/2017 - 20:16

ಅಚಾತುರ್ಯದಿಂದ‌ ಈ ಪಂಕ್ತಿ ಮೂಲ ಲೇಖನದಲ್ಲಿ ಬಿಟ್ಟು ಹೋಗಿದೆ. ಅದನ್ನೂ ಸೇರಿಸಿಕೊಂಡು ಓದಿಕೊಳ್ಳಬೇಕಾಗಿ ವಾಚಕರಲ್ಲಿ ಈ ಮೂಲಕ‌ ಮನವಿ ಮಾಡಿಕೊಳ್ಳುತ್ತಿದ್ದೇನೆ. <<"ಬ್ರಿಟಿಷರು ಪರಿಗಣಿಸದ ಭರತಖಂಡದ ಭೂಭಾಗಗಳನ್ನು ನಮ್ಮ ರಾಜಕೀಯ ನೇತಾರರೂ ಸಹ ಗಣನೆಗೆ ತೆಗೆದುಕೊಳ್ಳಲಿಲ್ಲ. ಬ್ರಿಟಿಷರು ಆಕ್ರಮಿಸಿದ ಭಾರತಭೂಮಿ ಮಾತ್ರವೇ ನಮ್ಮ ಸಮಗ್ರ ಭೌಗೋಳಿಕ ಪ್ರಾದೇಶಿಕ ಸ್ವರೂಪ" ಎನ್ನುವ ಭ್ರಮೆ ಕ್ರಿ.ಶ. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಹಾಗೂ ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ನಮ್ಮ ಮೇಧಾವಿಗಳನ್ನು ಪ್ರಭಾವಿತಗೊಳಿಸಿತು. ಕಾಂಗ್ರೆಸ್ಸಿನ ಸ್ವಾತಂತ್ರೋದ್ಯಮದ ಆರಂಭ ಮತ್ತು ಬ್ರಿಟಿಷರು ಬರ್ಮಾವನ್ನು ಸಂಪೂರ್ಣವಾಗಿ ತಮ್ಮ ತೆಕ್ಕೆಯೊಳಗೆ ತೆಗೆದುಕೊಳ್ಳುವುದು ಎರಡೂ ಒಂದೇ ಬಾರಿಗೆ ನಡೆದವು. ಆರಂಭಿಕ ದಿನಗಳಲ್ಲಿ, ಕಾಂಗ್ರೆಸ್‌ನ ವಾರ್ಷಿಕ ಮಹಾಸಭೆಗಳಲ್ಲಿ "ಬರ್ಮಾವನ್ನು ಭಾರತದೊಳಗೆ ಸೇರಿಸಬೇಡಿ" ಎಂದು ಬ್ರಿಟನ್ನಿನ ಮಹಾರಾಣಿಯನ್ನು ಅಭ್ಯರ್ಥಿಸುವ ತೀರ್ಮಾನವನ್ನೂ ಸಹ ಕಾಂಗ್ರೆಸ್ಸಿಗರು ತೆಗೆದುಕೊಳ್ಳುತ್ತಿದ್ದರು. ಬ್ರಿಟಿಷರು ಆಕ್ರಮಿಸದೇ ಇದ್ದ ಪ್ರಾಂತಗಳು ವಾಸ್ತವವಾಗಿ ಸ್ವತಂತ್ರವಾಗಿ ಉಳಿದುಕೊಂಡ ಭಾರತದ ಭೂಭಾಗಳಷ್ಟೆ! ಆದರೆ ಕಥೆ ಪಲ್ಲಟಗೊಂಡಿತು! ಬ್ರಿಟಿಷರು ಆಕ್ರಮಿಸಿದ ಪ್ರಾಂತಗಳು ಮಾತ್ರವೇ "ಅನಾದಿಕಾಲದಿಂದಲೂ ಇದ್ದ ಭಾರತ ಭೂಮಿ" ಆಯಿತು! ನಮ್ಮ ಮೇಧಾವಿಗಳು ಹಾಗೆ ತಿಳಿದುಕೊಂಡರು!! ಹಾಗಾಗಿ ಟಿಬೆಟ್, ನೇಪಾಳ್ ಮೊದಲಾದವು ನಮ್ಮವೆಂದು ನಾವು ಭಾವಿಸಲಿಲ್ಲ! ೧೯೩೫ರಲ್ಲಿ ಬರ್ಮಾವನ್ನು ಬ್ರಿಟಿಷರು ಬೇರ್ಪಡಿಸಿದಾಗ ನಾವು ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ! ಗಾಂಧಾರ, ರಾಮಠ, ಹಾರ, ಬರ್ಬರ, ಉತ್ತರ ಜ್ಯೋತಿಷ, ದರದ, ಅಭೀರ, ಉರಗ, ಉತ್ತರಬಾಹ್ಲೀಕ, ಯೋನ ದೇಶಗಳು ಇಂದಿನ ಅಫ್ಘಾನಿಸ್ತಾನ್ ಪ್ರಾಂತದೊಳಗಿನ ಪ್ರಾಚೀನ ರಾಜ್ಯಗಳು. ಎರಡೂವರೆ ಲಕ್ಷ ಚದರ ಮೈಲುಗಳ ವ್ಯಾಪ್ತಿ ಪ್ರದೇಶವನ್ನು ಹೊಂದಿದ ಅಫ್ಘಾನಿಸ್ತಾನ್ ತೆಲಂಗಾಣವನ್ನೊಳಗೊಂಡ ಸಂಯುಕ್ತ ಆಂಧ್ರ ಪ್ರದೇಶ ರಾಜ್ಯಕ್ಕಿಂತ ಎರಡೂವರೆ ಪಟ್ಟು ಹೆಚ್ಚು ವಿಸ್ತೀರ್ಣವನ್ನು ಹೊಂದಿದೆ. ಬ್ರಿಟಿಷರು ಮುಂಚಿನಿಂದಲೂ ಅಫ್ಘಾನಿಸ್ತಾನವನ್ನು ಭಾರತದ ಭೂಭಾಗವೆಂದು ಗುರುತಿಸಲಿಲ್ಲ. ಬ್ರಿಟಿಷರು ತಾವು ಕಂಡುಕೊಂಡ ಭಾರತ ಉಪಖಂಡದೊಳಗೆ, ಅಫ್ಘಾನಿಸ್ತಾನ್ ಅಥವಾ ಟಿಬೆಟ್ಟನ್ನಾಗಲಿ ಸೇರಿಸಲಿಲ್ಲ.... ಹೀಗೆ ನಮ್ಮ ಭೌಗೋಳಿಕ ಸ್ವರೂಪವನ್ನು ಬ್ರಿಟಿಷ್ ವಿದ್ಯಾವಿಧಾನವು ನಿಯಂತ್ರಿಸಿತು. >> ವಂದನೆಗಳೊಂದಿಗೆ ಶ್ರೀಧರ್ ಬಂಡ್ರಿ :)

Submitted by makara Tue, 01/31/2017 - 15:32

ಈ ಸರಣಿಯನ್ನು ಓದಿ ಎಂದಿನಂತೆ ಪ್ರೋತ್ಸಾಹಿಸುತ್ತಿರುವ ಸಮಸ್ತ ಸಂಪದದ ವಾಚಕರಿಗೆ ಧನ್ಯವಾದಗಳು. ಅದರೊಂದಿಗೆ ಈ ಸರಣಿಯನ್ನು ತಮ್ಮ ಮೊಗಹೊತ್ತಗೆಯಲ್ಲಿ ಹಂಚಿಕೊಂಡು ನಿರಂತರ ಪ್ರೋತ್ಸಾಹ ಹಾಗು ಈ ವಿಷಯಗಳು ಹೆಚ್ಚು ಓದುಗರನ್ನು ತಲುಪಲು ಸಹಾಯಕರಾಗಿರುವ ಮಿತ್ರ ನಾಗೇಶರಿಗೂ ಧನ್ಯವಾದಗಳು. ಆಸಕ್ತರು, ಈ ಸರಣಿಯ ಮುಂದಿನ ಲೇಖನಕ್ಕೆ ಈ ಕೊಂಡಿಯನ್ನು ನೋಡಬಹುದು.https://sampada.net/blog/ಭಾಗ-೨೦-ಮೇಕೆಯ-ತೊಗಲು-ಹೊದ್ದ-ತೋಳ-ಮೆಕಾಲೆ-ವಿದ್ಯಾ-ವಿಧಾನ-ಕೇಂದ್ರೀಯ-ರಾಜ್ಯಾಂಗ-ವ್ಯವಸ್ಥೆ-ಏರ್ಪಟ್ಟಿದ್ದು-ಯಾವಾಗ/31-1-2017/47437