~
ಭಾರತೀಯ ಶಾಸ್ತ್ರೀಯ ಸಂಗೀತ-ಒಂದು ಇಣುಕು (ಭಾಗ ೩)
- ಭಾರತೀಯ ಶಾಸ್ತ್ರೀಯ ಸಂಗೀತ-ಒಂದು ಇಣುಕು (ಭಾಗ ೩) By: srikanth (Aug 16 2006 - 1:14am)
- ಒಂದು ತಿದ್ದುಪಡಿ By: benaka (Jul 5 2006 - 10:39am)
- ಉ: ಒಂದು ತಿದ್ದುಪಡಿ By: hamsanandi (Aug 24 2007 - 5:19am)
- ಉ: ಒಂದು ತಿದ್ದುಪಡಿ By: srikanth (Jul 5 2006 - 10:59am)
- ಭಾರತೀಯ ಶಾಸ್ತ್ರೀಯ ಸಂಗೀತ ...... By: venkatesh (Jul 4 2006 - 1:33pm)
- ಧನ್ಯವಾದಗಳು By: srikanth (Jul 4 2006 - 2:36pm)
- ಭಾರತೀಯ ಶಾಸ್ತ್ರೀಯ ಸಂಗೀತ-ಒಂದು ಇಣುಕು (ಭಾಗ ೨) By: srikanth (Jul 3 2006 - 8:13pm)
- ನಾದಯೋಗ By: ismail (May 22 2006 - 4:22pm)

RSS:
ಭಾರತೀಯ ಶಾಸ್ತ್ರೀಯ ಸಂಗೀತ-ಒಂದು ಇಣುಕು (ಭಾಗ ೩)
ದಕ್ಷಿಣದಲ್ಲಿ ಕರ್ಣಾಟಕ ಸಂಗೀತ ಪದ್ಧತಿಯ ಬೆಳವಣಿಗೆ ತೀವ್ರಗತಿಯಲ್ಲಿ ಆಗುತ್ತಿರಬೇಕಾದರೆ, ಉತ್ತರದಲ್ಲಿ ಹಿಂದೂಸ್ಥಾನಿ ಪದ್ಧತಿಯು ಅರಮನೆಗಳ ಬಂಧಿಯಾಗಿ ನಿಂತನೀರಾಗತೊಡಗಿತ್ತು.ಔರಂಗಜೇಬನು ಸಂಗೀತದ ಮೇಲೆ ನಿಷೇಧ ಹೇರಿದ್ದು ಕೂಡ ಹಿಂದೂಸ್ಥಾನಿ ಸಂಗೀತಕ್ಕೆ ಪ್ರತಿಕೂಲವಾಗಿತ್ತು.ಆಗ ಈ ಪದ್ಧತಿಯು ಅವಸಾನಗೊಳ್ಳದಂತೆ ಕಾಪಾಡಿದ ಶ್ರೇಯ, ಅರಮನೆಗಳಲ್ಲಿ ಗಾಯನ-ನೃತ್ಯಗಳಿಗೆ ನೇಮಿಸಲಾಗಿದ್ದ "ಬೈಜಿ"ಗಳಿಗೆ ಸಲ್ಲುತ್ತದೆ. ಆದರೆ ಬೈಜಿಗಳೊಂದಿಗಿನ ಸಂಯೋಜನೆಯಿಂದಾಗಿ ಹಿಂದೂಸ್ಥಾನಿ ಪದ್ಧತಿಯು ಜನಸಾಮಾನ್ಯರ ಮನ್ನಣೆ ಸಿಗಲಿಲ್ಲ.ಬದಲಿಗೆ ಹಾಡು-ಕುಣಿತ ಮುಜುಗರ,ಅಗೌರವಗಳಿಗೆ ಕಾರಣವಾಗುವ ವಿಷಯಗಳಾಗಿಹೋದವು.
ಮುಘಲ್ ಸಾಮ್ರಾಜ್ಯದ ಅವಸಾನದ ಕಾಲದಲ್ಲೂ, ಮಹಮದ್ ಶಾಹ್ "ರಂಗೀಲೆ" ನಂತಹ ಕಲಾಪೋಷಕರ ಸಹಾಯದಿಂದ ಹಿಂದೂಸ್ಥಾನಿ ಪದ್ಧತಿಯು ಬದುಕುಳಿಯಿತು. ಈತನ ಆಸ್ಥಾನದಲ್ಲಿದ್ದ ನ್ಯಾಮತ್ ಖಾನ್ "ಸದರಂಗ್" ಮತ್ತು ಫೀರೋಜ್ ಖಾನ್ "ಅದರಂಗ್" (ಸದರಂಗ್ ಮತ್ತು ಅದರಂಗ್ ಅವರಿಬ್ಬರ ಕಾವ್ಯನಾಮಗಳು) ಖಯಾಲ್ ಶೈಲಿಯನ್ನು ಪ್ರಖ್ಯಾತಗೊಳಿಸಿದರು.ಧ್ರುಪದ್ ಶೈಲಿಯು ಅವಸಾನವಾಗತೊಡಗಿ ಖಯಾಲ್ ಅದರ ಸ್ಥಾನದಲ್ಲಿ ವಿಜ್ರಂಭಿಸತೊಡಗಿತು.
ಮುಂದೆ ಬ್ರೀಟಿಷರು ಭಾರತವನ್ನು ಆಕ್ರಮಿಸಿದಾಗ, ಭಾರತದ ಸಾಮಂತ ರಾಜರ ಆಶ್ರಯದಲ್ಲಿ ಹಲವಾರು ಖಯಾಲ್ ಘರಾನಗಳು ಪ್ರಾರಂಭವಾದವು. ೧೮ನೇ ಶತಮಾನದಲ್ಲಿ ಹಿಂದೂಸ್ಥಾನಿ ಸಂಗೀತವು ತೀವ್ರಗತಿಯಲ್ಲಿ ಬೆಳೆಯತೊಡಗಿತು.
ಹಿಂದುಸ್ಥಾನಿ ಸಂಗೀತದ ವೈವಿಧ್ಯತೆಗೆ ಈ "ಘರಾನ"ಗಳ ಇರುವಿಕೆ ಕಾರಣ.ಕರ್ಣಾಟಕ ಸಂಗೀತ ಪದ್ಧತಿಯಲ್ಲಾದಂತೆ ಸಂಗೀತವನ್ನು ಪ್ರಮಾಣೀಕರಿಸುವ ಪ್ರಯತ್ನ ಹಿಂದುಸ್ಥಾನಿ ಸಂಗೀತದಲ್ಲಿ ಆಗಲೇ ಇಲ್ಲ.ಜೊತೆಗೆ ಖಯಾಲ್ ಗಳನ್ನು ಜಾಗರೂಕತೆಯಿಂದ ತಮ್ಮ ಕುಟುಂಬದೊಳಗೆ ಕಾಯ್ದಿಟ್ಟುಕೊಳ್ಳುವ ಪರಿಪಾಠವಿದ್ದುದ್ದರಿಂದ ಸಂಗೀತದ ಬಗ್ಗೆ ಮುಕ್ತವಾದ ಚರ್ಚೆಗಳು ಸಾಧ್ಯವಿರಲಿಲ್ಲ.ಹಿಂದುಸ್ಥಾನಿ ಪದ್ಧತಿಯಲ್ಲಿ ಒಟ್ಟು ೩೨ ಘರಾನಗಳು ಇವೆ(ಗಾಯನ ಹಾಗು ವಾದ್ಯ ಘರಾನಗಳು ಎರಡನ್ನೂ ಸೇರಿಸಿ).ಆದರೆ ಕೆಲವು ಘರಾನಗಳು, ಆ ಶೈಲಿಯನ್ನು ಮುಂದಕ್ಕೆ ಕೊಂಡೊಯ್ಯುವ ಕಲಾವಿದರಿಲ್ಲದೆ ಅವಸಾನಗೊಂಡಿವೆ.ಮತ್ತೆ ಕೆಲವು ಅಪ್ರಸ್ತುತವಾಗಿವೆ.ಇವುಗಳಲ್ಲಿ ಗ್ವಾಲಿಯರ್,ಕಿರಾಣ,ಜೈಪುರ್-ಅತ್ರೌಳಿ ಘರಾನಗಳು ಪ್ರಮುಖ ಗಾಯನ ಘರಾನಗಳು. ಮೈಹರ್,ಪಂಜಾಬ್ (ತಬಲ) ಘರಾನಗಳು ಪ್ರಮುಖ ವಾದ್ಯ ಘರಾನಗಳು.
ಈ ಘರಾನಗಳ ಸ್ಥಾಪಕರು ಸಂಗೀತದ ಮೇಧಾವಿಗಳಾಗಿದ್ದು ಅವರ ಬಗ್ಗೆ ಹಲವಾರು ಕಥೆಗಳು ಪ್ರಚಲಿತವಾಗಿವೆ.ಅವರ ಮೇಧಾವಿತನದ ಜೊತೆಗೆ ತಿಳಿಗೇಡಿತನವನ್ನು ಸೂಚಿಸುವಂತಹ ವಿಚಿತ್ರ ನಂಬಿಕೆಗಳ ಕಥೆಗಳನ್ನು ಓದಿದಾಗ ಸ್ವಲ್ಪ ಆಶ್ಚರ್ಯವಾಯಿತು.ಮೈಹರ್ ಘರಾನದ ಸ್ಥಾಪಕ ಅಲ್ಲವುದ್ದೀನ್ ಖಾನ್,ಸೇನಿ ಘರಾನದ ಸಂಗೀತಗಾರ ವಜೀರ್ ಖಾನ್ ರಲ್ಲಿ ಸಂಗೀತ ಕಲಿಯುವ ಅವಕಾಶ ಸಿಗದಿದ್ದಾಗ ವಿಷಸೇವಿಸುವ ನಿರ್ಧಾರಕ್ಕೆ ಬಂದದ್ದು,ಜೈಪುರ್ ಅತ್ರೌಳಿ ಘರಾನದ ಸ್ಥಾಪಕ ಅಲ್ಲಾ ದಿಯ ಖಾನ್ ತಾನು ಬ್ರಾಹ್ಮಣ ಕುಲಸ್ಥನೆಂದು ಬಲವಾಗಿ ನಂಬಿದ್ದರಿಂದ ಸಾಯುವ ಕಾಲದಲ್ಲಿ ಅಪಖ್ಯಾತಿ ತಂದುಕೊಂಡದ್ದು, ಮುಂತಾದುವುಗಳು ಹಿಂದುಸ್ಥಾನಿ ಸಂಗೀತದ ಮಟ್ಟಿಗೆ ನಮ್ಮ ಅಜ್ಜ-ಅಜ್ಜಿ ಹೇಳುವ ಅವರ ಕಾಲದ ಕಥೆಗಳಂತೆ ಆಸಕ್ತಿ ಕೆರಳಿಸುವ ಕಥೆಗಳು.
ಇದೇ ಕಾಲದಲ್ಲಿ ಠುಮ್ರಿ, ಠಪ್ಪ, ತರಾನ ಮತ್ತು ಗಜಲ್ ಶೈಲಿಯ ಗಾಯನಗಳು ಬೆಳೆದವು.ಆದರೆ ಇವು ಖಯಾಲ್ ಶೈಲಿಯನ್ನು ಬದಿಗೊತ್ತದೆ ಅದಕ್ಕೆ ಒತ್ತಾಸೆಯಾಗಿದ್ದವು.
೧೯ನೇ ಶತಮಾನದಲ್ಲಿ ಅರಮನೆಯ ಸಂಗೀತವಾಗಿದ್ದ ಹಿಂದುಸ್ಥಾನಿ ಸಂಗೀತವನ್ನು ಜನಸಾಮನ್ಯರಿಗೆ ತಲುಪಿಸುವ ಪ್ರಯತ್ನ ನಡೆಯಿತು.ವೃತ್ತಿಯಿಂದ ವಕೀಲರಾಗಿದ್ದ ಚತುರ್ಪಂಡಿತ್ ಭತ್ಖಂಡೆಯವರು ದಕ್ಷಿಣ ಭಾರತದ ಸಂಗೀತ ಕೇಂದ್ರಗಳಾಗಿದ್ದ ಸ್ಥಳಗಳಿಗೆ ಭೇಟಿಕೊಟ್ಟು, ವೆಂಕಟಮಖಿಯ ಮೇಳಕರ್ತ ರಾಗಗಳ ವಿಂಗಡಣೆಯನ್ನು ಅಧ್ಯಯನ ಮಾಡಿ ಹಿಂದೂಸ್ಥಾನಿ ರಾಗಗಳಿಗೆ ಒಂದು ವಿಂಗಡನಾ ಕ್ರಮವನ್ನು ಸಿದ್ಧಪಡಿಸುವ ಪ್ರಯತ್ನಮಾಡಿದರು.ಆದರೆ ಹಿಂದುಸ್ಥಾನಿ ರಾಗಗಳ ವಿಂಗಡನೆ ಸುಲಭದ ಕೆಲಸವಾಗಿರಲ್ಲಿಲ್ಲ.ಅವರು ಸ್ವರಗುಂಪುಗಳ ಆಧಾರದ ಮೇಲೆ ರಾಗಗಳನ್ನು ೧೦ ಪ್ರಭೇದಗಳಾಗಿ ವಿಂಗಡಿಸಿದರು. ಈ ವಿಂಗಡನೆಯನ್ನು ಎಲ್ಲರೂ ಒಪ್ಪಿ ಪ್ರಮಾಣೀಕರಿಸಿಲ್ಲವಾದರೂ,ಹಿಂದೂಸ್ಥಾನಿ ಸಂಗೀತದ ಮಟ್ಟಿಗೆ ಅದೊಂದೇ ಚಾಲ್ತಿಯಲ್ಲಿರುವ ರಾಗ ವಿಂಗಡನ ಕ್ರಮ ಎಂದರೆ ತಪ್ಪಾಗಲಾರದು.ಅವರ ಪರಿಶ್ರಮದ ಫಲವಾಗಿ ಹಿಂದುಸ್ಥಾನಿ ಸಂಗೀತ ಪದ್ಧತಿಯ ವಿವರಣೆ ಇರುವ "ಹಿಂದುಸ್ಥಾನಿ ಸಂಗೀತ ಪದ್ಧತಿ" ಎಂಬ ೪ ಸಂಪುಟಗಳ ಮರಾಠಿ ಪುಸ್ತಕವನ್ನು ೧೯೦೯-೩೨ ರ ಕಾಲದಲ್ಲಿ ರಚಿಸಲ್ಪಟ್ಟಿತು.ಭತ್ಖಂಡೆಯವರು ೪೦೦೦ ವರ್ಷಗಳಲ್ಲಿ ಮೊದಲ ಬಾರಿಗೆ ಸಂಗೀತವನ್ನು ಸ್ವರಪ್ರಸ್ತಾರಗಳ ಮೂಲಕ ಬರೆಯುವ ವಿಧಾನವನ್ನು ಬಳಕೆಗೆ ತಂದರು.ಜೊತೆಗೆ ವಿವಿಧ ಘರಾನಗಳ ಸುಮಾರು ೨೦೦೦ ಸಾವಿರ ರಚನೆಗಳನ್ನು ಶೇಖರಿಸಿ ಜನಸಾಮನ್ಯರಿಗೆ ಅವು ಸುಲಭವಾಗಿ ದೊರಕುವಂತೆ ಮಾಡಿದರು.ಬರೋಡದಲ್ಲಿ ಸಂಗೀತದ ಕಾಲೇಜೊಂದನ್ನು ಸ್ಥಾಪಿಸಿ ಅಲ್ಲಿನ ತರಗತಿಗಳಿಗೆ ಪಠ್ಯಪುಸ್ತಕಗಳನ್ನು "ಕ್ರಮಿಕ ಪುಸ್ತಕ ಮಾಲಿಕಾ" ಎಂಬ ಶೀರ್ಷಿಕೆಯಲ್ಲಿ ಬರೆದರು.
ಬರೋಡ ಮಹಾರಾಜರ ಸಹಾಯದಿಂದ ೧೯೧೬ ಅಖಿಲ ಭಾರತ ಸಂಗೀತ ಸಮಾವೇಶವನ್ನು ಆಯೋಜಿಸಿದರು. ಅದು ವಾರ್ಷಿಕ ಸಮಾವೇಶದ ಸ್ವರೂಪ ಪಡೆದು ೧೯೨೫ರಲ್ಲಿ ಲಖ್ನೌ ನಲ್ಲಿ ಮತ್ತೊಂದು ಸಂಗೀತದ ಕಾಲೇಜು ಸ್ಥಾಪಿತವಾಯಿತು.ಇಷ್ಟೆಲ್ಲ ಸಾಧನೆ ಮಾಡಿದ ಭತ್ಖಂಡೆಯವರನ್ನು ಅಧುನಿಕ ಹಿಂದುಸ್ಥಾನಿ ಸಂಗೀತದ ಜನಕ ಎಂದರೆ ತಪ್ಪಾಗಲಾರದು.
ಭತ್ಖಂಡೆಯವರು ಕೆಲಸಗಳು ಹಿಂದುಸ್ಥಾನಿ ಸಂಗೀತದ ತಾಂತ್ರಿಕತೆಯ ಸುಧಾರಣೆಗಳಿಗೆ ಮಾತ್ರ ಸೀಮಿತವಾಗಿತ್ತು. ಜನಸಾಮಾನ್ಯರಿಗೆ ಸಂಗೀತವನ್ನು ತಲುಪಿಸಿದ ಶ್ರೇಯ ವಿಷ್ಣು ದಿಗಂಬರ್ ಪಲೂಸ್ಕರ್ ರಿಗೆ ಸಲ್ಲುತ್ತದೆ.ಅಪಘಾತವೊಂದರಲ್ಲಿ ತಮ್ಮ ದೃಷ್ಟಿ ಕಳೆದುಕೊಂಡರೂ, ಉತ್ತರ ಭಾರತದ ಉದ್ದಗಲಕ್ಕೂ ಸಂಚರಿಸಿದರು. ಲಾಹೋರ್ ನಲ್ಲಿ ವಾಸವಾಗಿದ್ದಾಗ, ಗುರುಸೇವೆಯಲ್ಲಿ ಸಮಯವನ್ನು ಕಳೆಯುವುದು ವ್ಯರ್ಥವೆನ್ನಿಸಿ ೧೯೦೧ ರಲ್ಲಿ "ಗಂಧರ್ವ ಮಹಾವಿದ್ಯಾಲಯ" ಹೆಸರಿನ ಸಂಗೀತಶಾಲೆಯನ್ನು ಪ್ರಾರಂಭಿಸಿದರು. ರಾಜಮನೆತನಗಳಿಂದ ಯಾವ ಸಹಾಯವಿಲ್ಲ ಜನರಿಂದ ಪಡೆದ ಚಂದ ಹಣದಿಂದ ಪ್ರಾರಂಭವಾದ ಈ ಶಾಲೆ, ಹಿಂದೂಸ್ಥಾನಿ ಸಂಗೀತವನ್ನು ಕಲಿಯಬಯಸಿದ ಎಲ್ಲರಿಗೂ ದೊರಕುವಂತೆ ಮಾಡಿತು.ತಮ್ಮ ಸಂಗೀತ ಕಾರ್ಯಕ್ರಮಗಳಿಂದ ಸಂಪಾದಿಸಿದ ಹಣವನ್ನು ಪಲೂಸ್ಕರ್ ಶಾಲೆಯ ನಿರ್ವಹಣೆ,ಹಾಗು ಬೆಳವಣಿಗೆಗೆ ವ್ಯಯಿಸಿದರು.ಜನರಿಂದ ಜನರಿಗಾಗಿ ಸ್ಥಾಪಿಸಲ್ಪಟ್ಟ ಮೊದಲ ಸಂಗೀತ ಶಾಲೆಯಿದು ಸಂಗೀತ ಕಲಿಕೆಯ ಅವಿನಾಭಾವ ಅಂಗವಾಗಿದ್ದ ಗುರು-ಶಿಷ್ಯ ಪರಂಪರೆಯು ಇದರಿಂದಾಗಿ ಅಪ್ರಸ್ತುತವಾಯಿತು.೧೯೦೮ರಲ್ಲಿ ಪಲೂಸ್ಕರ್ ಮುಂಬೈಗೆ ಮರಳಿ ಗಂಧರ್ವ ವಿದ್ಯಾಲಯದ ಶಾಖೆಯೊಂದನ್ನು ಸ್ಥಾಪಿಸಿದರು.ಸಂಗೀತ ಕಲಿಸುವ ಜೊತೆಗೆ ವಿಧ್ಯಾರ್ಥಿಗಳನ್ನು ಕಠಿಣ ಮೌಲಿಕ ಶಿಕ್ಷಣಕ್ಕೆ ಗುರಿಪಡಿಸಲಾಗುತ್ತಿತ್ತು. ಮುಂದೆ ಅವರಲ್ಲಿ ಹಲವರು ದಕ್ಷ ಹಾಗು ಮೇಧಾವಿ ಕಲಾವಿದರಾಗಿ, ಅಂದಿನ ಸಂಗೀತಗಾರರಿಗೆ ಅಂಟಿದ್ದ ಚಾರಿತ್ರ್ಯವಿಲ್ಲದ ಸೋಮಾರಿಗಳೆಂಬ ಹಣೆಪಟ್ಟಿಯನ್ನು ಅಳಿಸುವಲ್ಲಿ ಕಾರಣರಾದರು.ಆದರೆ ಹಣಕಾಸಿನ ಕೊರತೆಯಿಂದಾಗಿ ೧೯೨೬ರಲ್ಲಿ ಗಂಧರ್ವ ವಿದ್ಯಾಲಯ ಹರಾಜಾಯಿತು. ಭತ್ಖಂಡೆ ಹಾಗು ಪಲುಸ್ಕರ್ ರವರು ಹಿಂದುಸ್ಥಾನಿ ಸಂಗೀತದ ಬುನಾದಿಯನ್ನು ಗಟ್ಟಿಗೊಳಿಸಿದ್ದರಿಂದ ಈಗ ಅದು ಅಪ್ರಸ್ತುತವಾಗದೇ ಪ್ರಚಲಿತವಾಗಿದೆ ಎಂದರೆ ಅತಿಶಯೋಕ್ತಿ ಆಗದು.
(ಸಶೇಷ)
ಶ್ರೀಕಾಂತ್
http://kavisamaya.blogspot.com