ರಾತ್ರಿ ೧೦:೩೦ ಗೆ
- ರಾತ್ರಿ ೧೦:೩೦ ಗೆ By: benaka (Sep 19 2006 - 11:37am)
- ಭಾರತೀಯರ ಬೇಜವಾಬ್ದಾರಿ By: hpn (Sep 21 2006 - 12:16am)
- ಯೂ. ಜಿ. ಸಿ. ಕಾರ್ಯಕ್ರಮಗಳು By: gvmt (Sep 18 2006 - 8:08pm)
- ಉ: ಯೂ. ಜಿ. ಸಿ. ಕಾರ್ಯಕ್ರಮಗಳು ಈಗಲೂ ಬೆಳಿಗ್ಗೆ ಇವೆ ; ಜ್ಞಾನವಾಣಿ FM By: shreekant.mishrikoti (Sep 19 2006 - 2:25pm)
- ಒಪ್ಪಬಹುದಾದಂತಹ ಮಾತು By: hpn (Sep 14 2006 - 2:09am)

RSS:
ರಾತ್ರಿ ೧೦:೩೦ ಗೆ
ಗೆಳೆಯರೇ,
ಖಂಡಿತವಾಗಿ ಭಾರತದಲ್ಲಿಯೂ 'ಮಾಹಿತಿ ತಲುಪಿಸುವ ಪ್ರಯತ್ನ' ನಡೆದಿದೆ ಎಂದು ಗೊತ್ತು; ಆದರೆ ಬಹುಪಾಲು ಅದು ಸರ್ಕಾರೀ ಸ್ವಾಮ್ಯದ ದೂರದರ್ಶನಕ್ಕೇ ಮೀಸಲಾಗಿರುವುದು ಖೇದಕರ ಸಂಗತಿ. ನಾನೂ ಯು.ಜಿ.ಸಿ. ಯ ಕಾರ್ಯಕ್ರಮಗಳನ್ನು ಬಹುವಾಗಿ ಮೆಚ್ಚಿದ್ದಿದೆ; ಆದರೆ ಅದು ಪ್ರಸಾರವಾಗುವ ವೇಳೆಗೆ ನಾವೆಲ್ಲ ಶಾಲಾಕಾಲೇಜುಗಳಲ್ಲಿರುತ್ತಿದ್ದೆವು. ಹಿಂದಿರುಗಿದ ನಂತರ ಅಂತಹ ಒಂದು ಕಾರ್ಯಕ್ರಮವೂ ಇರುತ್ತಿರಲಿಲ್ಲ; ಇದರ ಬಗ್ಗೆ ದೂದಕ್ಕೆ ಹಲವು ಬಾರಿ ದೂರಿತ್ತರೂ, ಧನಿಕ ಜಾಹೀರಾತು-ಪ್ರಾಯೋಜಕರೆಲ್ಲ ರಾತ್ರಿಯ ಧಾರಾವಾಹಿಯ ಕೈಹಿಡಿದು, ಯು.ಜಿ.ಸಿಯ ಕಾರ್ಯಕ್ರಮಗಳಿಗೆ ಯಾರೂ ಸಿಗದೆ ಹೋಗಿ, ಪ್ರಸಾರವೇ ನಿಂತದ್ದೂ ಇತಿಹಾಸ!
ಇನ್ನು 'ಮುಕ್ತ'ದಂತಹ ಧಾರಾವಾಹಿ ಅತಿವಿರಳ; ಸೀತಾರಾಂ ಅವರ ಪ್ರಯತ್ನ ಉತ್ತಮವೆಂಬುದರಲ್ಲಿ ಎರಡು ಮಾತಿಲ್ಲ. ಚಂದನದಲ್ಲಿ ಹೆಚ್ಚು ನಿರೀಕ್ಷಿಸುವಂತಿಲ್ಲ; ಕ್ಷಮಿಸಿ ಅದೇನು ಕಾಕತಾಳೀಯವೋ ಏನೋ, ನಾನು ಚಂದನ ನೋಡುವಾಗೆಲ್ಲ, ಯಕ್ಷಗಾನವೋ, ಡೊಳ್ಳುಕುಣಿತವೋ ಬರುತ್ತಿದ್ದುದು ಸ್ವಲ್ಪ ಬೇಸರವೆನಿಸಿತ್ತು; ಇರಲಿ ಅದೂ ನಮ್ಮ ಸಂಸ್ಕೃತಿಯ ಅಂಗ. ಆದರೂ ನಮ್ಮ ಹೆಗ್ಗಳಿಕೆಯೆಂದು ಹೇಳಿಕೊಳ್ಳುವ ಗಣಕ ಚಿತ್ರಣ - ಗ್ರಾಫಿಕ್ಸ್ ಅನ್ನು ಉಪಯೋಗಿಸಿ, ಎಲ್ಲರಿಗೆ ತಿಳಿಯುವಂತೆ ವಿವಿಧ ವಿಚಾರಗಳನ್ನು ಬಿತ್ತರಿಸಬಹುದಲ್ಲವೇ? ಹೋಗಲಿ, ಚಂದನಕ್ಕೇನೋ ಆರ್ಥಿಕ ತೊಂದರೆಯಿರಬಹುದು; ಇತರ ವಾಹಿನಿಗಳೇನು ಮಾಡುತ್ತಿವೆ? ಬರಿಯ ಚಿತ್ರಲೋಕದ ಸುದ್ದಿಗಳು, ಚಲನಚಿತ್ರ, ಚಿತ್ರಗೀತೆಗಳ ಚಿತ್ರಾನ್ನವನ್ನೇ ಉಣಬಡಿಸುತ್ತಿರುವ ವಾಹಿನಿಗಳು, ಸ್ವಲ್ಪವಾದರೂ ಇತ್ತ ಗಮನ ಹರಿಸಬಾರದೆ?
ಜಪಾನಿನಲ್ಲಿ ನಾನು ಇಲ್ಲಿಯವರೆಗೆ ವಾರ್ತೆಗಳಲ್ಲಿ ಹೆಣ, ರಕ್ತ, ಕೊಲೆಯಾದವನ, ಸತ್ತವನ ಮುಖ ನೋಡಿದ್ದೇ ಇಲ್ಲ; ಎಲ್ಲವೂ ಗಣಕ-ಚಿತ್ರಣದಲ್ಲಿ ಲಭ್ಯ! ನಮ್ಮಲ್ಲಿ ಕ್ರೈಂಡೈರಿ, ಪೋಲೀಸ್ ಡೈರಿ ಇತ್ಯಾದಿಗಳನ್ನು ನೋಡಿ ಆಶ್ಚರ್ಯವಾಯಿತು! ರಕ್ತಸಿಕ್ತ ಚಿತ್ರಗಳನ್ನು ತೋರಿಸಿ ಕೊನೆಗೆ ಆ ಕಾರ್ಯಕ್ರಮ ಮಾಡುವುದಾದರೂ ಏನು? ಕಿರಿಯರಲ್ಲಿ ಕುತೂಹಲ, ಭಯ, ಭಾವಾವೇಶ, 'ಹೇಗೆ ಮಾಡಬಹುದೆಂಬ' ಸಚಿತ್ರ ಉದಾಹರಣೆ!? ನನ್ನ ಮಿತ್ರರೊಬ್ಬರು ಹೇಳುತ್ತಿದ್ದರು:
"ಥೂ! ನಮ್ಮನೇಯವ್ರಿಗೆಲ್ಲಾ ರಾತ್ರಿ ೧೦:೩೦ ಗೆ ಟೀವೀಲಿ ಎರಡು ಹೆಣ ಬೀಳೋವರ್ಗೂ ನಿದ್ದೇನೇ ಬರೋಲ್ಲಯ್ಯಾ! ನನ್ ಮಗನಂತೂ ನೆನ್ನೆ ಚಾಕು ಹಿಡಿದು ಅದೆಂಥದೋ ದಂಡುಪಾಳ್ಯ ಅಂತ ಆಟಶುರುಮಾಡಿದ್ದ!"
ನಮಗೆ ಬೇಕಿರುವುದು ಇಂಥ ಮಾಹಿತಿಯಂತೂ ಖಂಡಿತಾ ಅಲ್ಲ!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.