ಮೊದಲ ಮೊನಚು - ಜಿ.ಪಿ.ರಾಜರತ್ನಂ
- ಮೂರನೆಯ ಮೊನಚು - ಮಡಿ ಭಾಷೆ. ಮಡಿ ಭಾಷೆ By: Sunil Jayaprakash (Sep 28 2006 - 5:26pm)
- ಎರಡನೆಯ ಮೊನಚು - ಅ ಆ ಇ ಈ ಹಾಡು By: Sunil Jayaprakash (Sep 28 2006 - 11:48am)
- ಮೊದಲ ಮೊನಚು - ಜಿ.ಪಿ.ರಾಜರತ್ನಂ By: Sunil Jayaprakash (Sep 27 2006 - 6:01pm)

RSS:
ಮೊದಲ ಮೊನಚು - ಜಿ.ಪಿ.ರಾಜರತ್ನಂ
ಈ ಹಾಡನ್ನು ನಾನು ಮೊದಲ ಬಾರಿ ಕೇಳಿದ್ದು, ಒಂದನೇ ಕ್ಲಾಸಿನಲ್ಲಿದ್ದಾಗ. ನಮ್ಮ ತಂದೆಯವರು, ಹರಿಹರದ ಬಸ್ ಸ್ಟಾಂಡಿನಲ್ಲಿ, "ರತ್ನನ ಪದಗಳು" ಪುಸ್ತಕವನ್ನು ಕೊಂಡುಕೊಂಡಿದ್ದರು. ಹರಿಹರದಿಂದ ದಾವಣಗೆರೆಗೆ ಬಸ್ಸಿನಲ್ಲಿ ನಾವೆಲ್ಲರೂ ಹೋಗುತ್ತಿದ್ದಾಗ, ನಮ್ಮ ತಂದೆಯವರು ಇದನ್ನು ನಮಗೆ ಹೇಳಿಕೊಟ್ಟಿದ್ದರು. ಪದ್ಯವನ್ನು ಕೇಳಿ ಎಲ್ಲರೂ ಎದ್ದೂ ಬಿದ್ದೂ ನಕ್ಕಿದ್ದೆವು. ಈ ಪುಸ್ತಕ ಈಗಲೂ ನಮ್ಮ ಮನೆಯಲ್ಲಿದೆ. ಆದರೆ ಅಂದಿನಿಂದ ಇಂದಿನವರೆಗೂ ನನಗೆ ಈ ಪದ್ಯದಲ್ಲಿರಬಹುದಾದ ತೀವ್ರತೆಯನ್ನು ಗ್ರಹಿಸಲು ಸಾಧ್ಯವಾಗಿಲ್ಲ.
ಸರಿ, ಪೀಠಿಕೆಯಾಯಿತು. ಮೇಲಿನ ಬ್ಲಾಗಿನಲ್ಲಿ ತಿಳಿಸಿದಂತೆ ಆ ಪದ್ಯದ ಚರಣಗಳನ್ನು ಈ ಕಾಮೆಂಟಿನಲ್ಲಿ ಹಾಕುತ್ತಿದ್ದೇನೆ. ಓದಿ ಆನಂದಿಸಿ.
ಯೆಂಡಾ ಯೆಡ್ತಿ ಕನ್ನಡ್ ಪದಗೋಳ್ ಅಂದ್ರೆ ರತ್ನಂಗ್ ಪ್ರಾಣ,
ಬುಂಡೇನ್ ಎತ್ತಿ ಕುಡುದ್ ಬುಟ್ಟಾಂದ್ರೆ ತಕ್ಕೋ ಪದಗಳ್ ಬಾಣ.
ಬಗವಂತೇಂದ್ರಾ, ಬೂಮಿಗಿಳ್ದ್ ನಮ್ತಾಕ್ ಬಂದಾಂತನ್ನು,
ಪರ್ ಗಿರೀಕ್ಸೆ ಮಾಡ್ತಾನವ್ನು, ಬಕ್ತನ್ ಮೇಲ್ ಅವನ್ ಕಣ್ಣು.
"ಎಂಡಾ ಕುಡಿಯಾದ್ ಬುಟ್ ಬುಡ್ ರತ್ನಾ", ಅಂತ್ ಅವನೇನಾರಂದ್ರೆ,
ಮೂಗ್ ಮೂರ್ ಚೂರಾಗ್ ಮುರುಸ್ ಕೊಂತೀನಿ ದೇವರ್ ಮಾತಿಗ್ ಅಡ್ ಬಂದ್ರೆ.
"ಎಂಡ ಬುಟ್ಟೆ ಎಡ್ತೀನ್ ಬುಟ್ ಬುಡೇಂತ"ವನೇನಾರಂದ್ರೆ,
ಕಳ್ ದೋಯ್ತಂತ ಕುಣದಾಡ್ತೀನಿ ದೊಡ್ದೊಂದ್ ಕಾಟ ತೊಂದ್ರೆ.
"ಕನ್ನಡ್ ಪದಗಳ್ ಆಡಾದ್ನಲ್ಲಾ ನಿಲ್ಲಿಸ್ ಬಿಡ್ ಬೇಕ್ ರತ್ನಾ",
ಅಂತವ್ನೇನಾರಂದ್ರೆ, ದೇವ್ರಾದ್ರೇನು ಮಾಡ್ತೀನೌನ್ಗೆ ಖತ್ನ.
ಆಗ್ನೇ ಮಾಡೋ ಐಗೋಳೆಲ್ಲಾ ದೇವ್ರೆ ಆಗ್ಲೀ ಎಲ್ಲಾ,
ಕನ್ನಡ್ ಸುದ್ದೀಗೇನ್ರಾ ಬಂದ್ರೆ ಮಾನಾ ಉಳ್ಸಾಕಿಲ್ಲಾ.
ನರಕಕ್ಕೀಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲಾಸಾಕಿದ್ರೂನೆ,
ಮೂಗ್ ನಲ್ ಕನ್ನಡ್ ಪದವಾಡ್ತೀನಿ ನನ್ ಮನಸನ್ನೀ ಕಾಣೆ.
ಎಂಡಾ ಓಗ್ಲಿ, ಎಡ್ತೀ ಓಗ್ಲಿ, ಎಲ್ಲಾ ಕೊಚ್ ಕೊಂಡ್ ಓಗ್ಲಿ,
ಪರಪಂಚ್ ಇರೋತನ್ಕಾ ಮುಂದೆ ಕನ್ನಡ್ ಪದಗೋಳ್ ನುಗ್ಲಿ.
ಪರಪಂಚ್ ಇರೋತನ್ಕಾ ಮುಂದೆ ಕನ್ನಡ್ ಪದಗೋಳ್ ನುಗ್ಲಿ.
ಇಲ್ಲಿ ಗಮನಿಸಬೇಕಾದ ಅಂಶಗಳೆಂದರೆ, "ಪರ್ ಪಂಚ್ ಇರೋತನ್ಕಾ" ಎಂದು ಹೇಳುವಾಗ ಕನ್ನಡದ ಉಳಿವಿಗಾಗಿ ನಮ್ಮಲ್ಲಿ ಇರಬೇಕಾದ ತೀವ್ರತೆ ಮತ್ತು "ಮುಂದೆ ಕನ್ನಡ್ ಪದಗೋಳ್ ನುಗ್ಲಿ"
ಎನ್ನುವಾಗ ನಮ್ಮ ನುಡಿಯ ಬೆಳವಣಿಗೆಗೆ ನಮಗಿರಬೇಕಾದ ಕಾಳಜಿ ಮತ್ತು ಬದ್ಧತೆ.
ಸರಿ ಕನಸನ್ನು ಹೇಳಲು ಇನ್ನೂ ಸಮಯವಿದೆ. ಕಾಯುತ್ತಿರಿ.
ಸವಿಯೊದಗು.