ತಂಜಾವೂರೀಕರಣ
- ದನಿಗೂಡು: ಏಕೆ ಕನ್ನಡಿಗ ಶಿಲ್ಪಿಗಳನ್ನು ಕಡೆಗಣಿಸಲಾಗಿದೆ? By: Shyam Kishore (Jan 24 2007 - 12:21pm)
- ತಂಜಾವೂರೀಕರಣ By: ismail (Jan 24 2007 - 8:32pm)
- Re: ತಂಜಾವೂರೀಕರಣ By: ವೈಭವ (Jan 25 2007 - 9:28am)
- ಮತ್ತಷ್ಟು ತಂಜಾವೂರೀಕರಣ ಉದಾಹರಣೆಗಳು By: Sunil Jayaprakash (Jan 24 2007 - 11:06pm)
- ತಂಜಾವೂರೀಕರಣ By: ismail (Jan 24 2007 - 8:32pm)

RSS:
ತಂಜಾವೂರೀಕರಣ
ಇತ್ತೀಚೆಗೆ ಎಲ್ಲಾದರೂ ದೇವಾಲಯಗಳ ನವೀಕರಣದ ನಡೆಯುತ್ತಿದೆ ಎಂಬ ಸುದ್ದಿ ಓದಿದರೆ ನನಗೆ ಭಯವಾಗುತ್ತದೆ. ಏಕೆಂದರೆ ನವೀಕರಣದ ಹೆಸರಿನಲ್ಲಿ ಕರ್ನಾಟಕದ ದೇವಾಲಯಗಳ ತಂಜಾವೂರೀಕರಣ ನಡೆಯುತ್ತಿದೆ. ಇದರ ಅತ್ಯುತ್ತಮ ಉದಾಹರಣೆ ಎಂದರೆ ಮುರುಡೇಶ್ವರ. ಅಲ್ಲಿನ ಗೋಪುರದಿಂದ ಆರಂಭಿಸಿ ಶಿಲ್ಪಗಳವರೆಗೆ ಎಲ್ಲವೂ ತಮಿಳುನಾಡಿನ ಯಾವುದೋ ದೇವಸ್ಥಾನವನ್ನು ನೆನಪಿಸುತ್ತಿರುತ್ತದೆ. ದೇವಾಲಯಗಳ ಪುನರ್ ಪ್ರತಿಷ್ಟಾ ಬ್ರಹ್ಮಕಲಶಗಳಿಗೆ ಭಾಷಣಕ್ಕೆ ಹೋದರೆ ಅಲ್ಲಿಯೇ ಇದನ್ನು ಖಂಡಿಸಿ ಮಾತನಾಡುವ ಧೈರ್ಯ ತೋರುವುದು ಡಾ.ಎಂ. ಪ್ರಭಾಕರ ಜೋಶಿ ಮಾತ್ರ. ದಕ್ಷಿಣ ಕನ್ನಡದಲ್ಲಿ ಅವರ ಪ್ರಯತ್ನದಿಂದ ಕೆಲವು ದೇವಾಲಯಗಳ ತಂಜಾವೂರೀಕರಣ ತಪ್ಪಿದೆ.
ಇಲ್ಲಿರುವ ದೊಡ್ಡ ಸಮಸ್ಯೆ ಎಂದರೆ ದೇವಾಲಯಗಳ ಜೀರ್ಣೋದ್ಧಾರ ಮಾಡುವವರಿಗೆ ಭಕ್ತಿ ಇರುತ್ತದೆ, ಹಣ ಇರುತ್ತದೆ. ಆದರೆ ಕಲಾತ್ಮಕ ಔಚಿತ್ಯವೆಂದರೇನೆಂದೇ ತಿಳಿದಿರುವುದಿಲ್ಲ. ಈ ಬಗ್ಗೆ ನಾವು ಮಾತನಾಡಿದರೆ ಸಾಕಾಗುವುದಿಲ್ಲ. ಇಂಥದ್ದರ ಕುರಿತು ವ್ಯಾಪಕವಾಗಿ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕು. ದೇವಾಲಯ ಎಂದರೆ ಕೇವಲ ದೇವಾಲಯ ಮಾತ್ರ ಅಲ್ಲ ನಮ್ಮ ವಾಸ್ತುಶಿಲ್ಲ ಪರಂಪರೆಯ ತುಣುಕು ಎಂಬುದನ್ನು ಮರೆಯಬೇಡಿ ಎಂದು ಯಾರು ಹೇಳುವುದು?
ಇದು ಕೇವಲ ದೇವಾಲಯಗಳಿಗೆ ಮಾತ್ರ ಸಂಬಂಧಿಸಿದ ವಿಷಯ ಅಲ್ಲ. ಮಸೀದಿಗಳ ವಿಷಯದಲ್ಲಿಯೂ ಇದು ನಿಜ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 800 ವರ್ಷಗಳಷ್ಟು ಹಳೆಯದಾದ ಒಂದು ಮಸೀದಿಯನ್ನು ಏಳೆಂಟು ವರ್ಷಗಳ ಹಿಂದೆ ನವೀಕರಿಸಲಾಯಿತು. ಮೂಲವಾಸ್ತುವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಕಾಂಕ್ರೀಟ್ ಕಟ್ಟಡ ಸುತ್ತುವರಿಯಿತು. ಮಧ್ಯದ ಭಾಗ ಉಳಿದುಕೊಂಡದ್ದು ಕೆಲವರ ತೀವ್ರ ಆಕ್ಷೇಪದಿಂದ. ಹೀಗೆ ಆಕ್ಷೇಪಿಸದವು ಕಾಂಕ್ರೀಟ್ ಕಟ್ಟಡಗಳಾದವು.
ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಸೀದಿಗಳ ವಾಸ್ತು ಮತ್ತು ಜೈನ ಬಸದಿಗಳ ವಾಸ್ತುವಿನ ಮಧ್ಯೆ ಬಹುದೊಡ್ಡ ಸಾಮ್ಯವಿದೆ. ಮುಗುಳಿ ಎಂದು ಕರೆಯಲಾಗುವ ಕಲಶವೂ ಈ ಮಸೀದಿಗಳಿಗೆ ಇರುತ್ತಿತ್ತು. ಇದನ್ನು ಅನುಸ್ಥಾಪಿಸುವ ತಜ್ಞರೂ ಇದ್ದರು. ನಮ್ಮ ಕುಟುಂಬದಲ್ಲಿ ನನ್ನ ತಂದೆಗೆ ಇದರ ತಂತ್ರ ತಿಳಿದಿತ್ತು. ಸಂಪೂರ್ಣ ಮರದ ಚಾವಣಿ ಇರುವ ಈ ಕಟ್ಟಡಗಳಲ್ಲಿ ಮಧ್ಯಭಾಗದಲ್ಲಿ ಮುಗುಳಿಯನ್ನು ಕೂರಿಸುವ ಕೆಲಸಕ್ಕೆ ವಿಶೇಷ ಕೌಶಲ್ಯ ಬೇಕಿತ್ತು. ಇದೆಲ್ಲಾ ಯಾರಾ ಗಮನಕ್ಕೂ ಬರುವುದಿಲ್ಲ. ಈಗ ಹಂತು ಹೊದಿಸಬೇಕಾಗಿಲ್ಲ. ಕಾಂಕ್ರೀಟ್ ಹಾಕಿದರೆ ಸಾಕು ಎಂಬುದನ್ನು ಮಾತ್ರ ಜೀರ್ಣೋದ್ಧಾರ ಪ್ರಿಯರು ಅರಿತಿರುವುದು.
ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net