ಗುಜರಾತಿನಲ್ಲಿ ಬಾನಿಗೇರಲು ಗಜರಾಜನಾದ ಗಣೇಶ

ಗುಜರಾತಿನಲ್ಲಿ ಬಾನಿಗೇರಲು ಗಜರಾಜನಾದ ಗಣೇಶ

ಬರಹ

ಗಾಳಿಪಟ ಹಾರಿಸುವ ಮಂಗಳೂರಿನ ಹವ್ಯಾಸಿ ತಂಡದವರು ಗಣೇಶನ ರೂಪದಲ್ಲಿ ಸುಂದರವಾದ ಗಾಳಿಪಟವನ್ನು ತಯಾರಿಸಿದ್ದು, 'ಒಂದು ಧರ್ಮಕ್ಕೆ ಸೇರಿದವರೆಲ್ಲರ ಭಾವನೆಗಳಿಗೆ ಧಕ್ಕೆಯಾಗುವುದರಿಂದ ಅದನ್ನು ಹಾರಿಸಬಾರದೆಂದು' ಕೇವಲ ಬೆರಳೆಣಿಕೆಯಷ್ಟಿರುವ ಕೆಲವು 'ಸ್ವಯಂಘೋಷಿತ ಧರ್ಮ ಸಂರಕ್ಷಕರು' ಬೆದರಿಕೆಯನ್ನೊಡ್ಡಿದ್ದರಿಂದ ಅದನ್ನು ಮಂಗಳೂರಿನ ಕಡಲತೀರದಲ್ಲಿ ಬಾನಿಗೇರಿಸಲಾಗದೆ ಅದು ಮೂಲೆ ಸೇರಬೇಕಾಯಿತು.[ಚಿತ್ರ-ವರದಿ ಇಲ್ಲಿದೆ] ಸರ್ವರಿಗೂ ಪ್ರಿಯವಾದ ಗಣೇಶನ ಸುಂದರವಾದ ವದನವನ್ನು ಹೊತ್ತ ಗಾಳಿಪಟವನ್ನು ಹಾರಿಸುವುದರಿಂದ ಧಾರ್ಮಿಕ ಭಾವನೆಗಳಿಗೆ ಅದೆಂತು ಹಾನಿಯಾಗುತ್ತದೆ ಎನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲದಿದ್ದರೂ, 'ನಾವು ಹೇಳಿದ್ದನ್ನು ಪ್ರಶ್ನಿಸದೆಯೇ ಒಪ್ಪಿಕೊಳ್ಳಲೇ ಬೇಕು' ಎನ್ನುವವರ ಭಯೋತ್ಪಾದನೆಯ ಮುಂದೆ ಗಣೇಶನೂ ಅಸಹಾಯಕನಾಗಿ ಅಡಗಿಕೊಳ್ಳಬೇಕಾಯಿತು. ದಿನಗಟ್ಟಲೆ ಹಗಲಿರುಳೆನ್ನದೆ ದುಡಿದು, ವಿದೇಶದಿಂದ ತರಿಸಿದ ಬಟ್ಟೆಯನ್ನೂ, ಇತರ ದುಬಾರಿ ಸಾಮಾಗ್ರಿಗಳನ್ನೂ ಬಳಸಿ, ತಮ್ಮ ಕಲಾವಂತಿಕೆಯೆನ್ನೆಲ್ಲ ಧಾರೆಯೆರೆದು ಭಕ್ತಿ-ಪ್ರೀತಿಗಳಿಂದ ರಚಿಸಿದ ಕಲಾಕೃತಿಯನ್ನು ಸಾರ್ವಜನಿಕರೆದುರು ತೆರೆದಿಡಲಾಗದೆ ಟೀಂ ಮಂಗಳೂರಿನ ಕಲಾವಿದರೆಲ್ಲ ಕೈ ಚೆಲ್ಲಬೇಕಾಯಿತು. ಬುದ್ಧಿವಂತರಿಂದ ತುಂಬಿತುಳುಕುತ್ತಿರುವ ದಕ್ಷಿಣ ಕನ್ನಡದಲ್ಲಿ ಇದೊಂದು ಸುದ್ದಿಯೇ ಆಗಲಿಲ್ಲ.

ಆದರೆ ಸೃಜನಶೀಲತೆಯನ್ನು ಕಟ್ಟಿಹಾಕಲು ಸಾಧ್ಯವೇ? ಗಣೇಶನನ್ನು ರೂಪಾಂತರಿಸಲಾಯಿತು. ವಕ್ರದಂತವು ಹೋಗಿ ಪೂರ್ಣದಂತವು ಬಂತು, ಗಣೇಶನ ಮುಖವು ಬದಲಾಗಿ ಗಜರಾಜನದಾಯಿತು. ಗುಜರಾತಿನ ಅಹಮದಾಬಾದಿನಲ್ಲಿ ಗಜರಾಜನನ್ನು ಬಾನಿಗೇರಿಸಲಾಯಿತು, ಎಲ್ಲರ ಮೆಚ್ಚುಗೆಯೂ ಬಂತು,  ಸ್ವತಃ ಮುಖ್ಯಮಂತ್ರಿ ಮೋದಿಯ ಕೈಗಳಿಂದಲೇ ಬಹುಮಾನವೂ ಸಿಕ್ಕಿತು.

ಈ ಸಾಧನೆಯಿಂದ ಕಲಾವಿದರಿಗೆ ಸಂತೋಷವಾಯಿತೇ ಗೊತ್ತಿಲ್ಲ. ಗುಜರಾತಿನ ಜನತೆಗಾಗಲೀ, ಮುಖ್ಯಮಂತ್ರಿ ಮೋದಿಗಾಗಲೀ ಗಣೇಶನು ರೂಪ ಬದಲಿಸಿ ಗಜರಾಜನಾದ ವೃತ್ತಾಂತದ ಅರಿವಿತ್ತೇ ಎನ್ನುವುದೂ ಗೊತ್ತಿಲ್ಲ. ಅಂತೂ ಸ್ವಯಂಘೋಷಿತ ಧರ್ಮ ಸಂರಕ್ಷಕರ ಭಯೋತ್ಪಾದನೆಯು ಗಣೇಶನ ಸುಂದರ ಕಲಾಕೃತಿಗೇ ಎರವಾಯಿತು.