ಪುರಂದರದಾಸರು ರಚಿಸಿರುವ ಈ ಒಗಟಿನ ಕೀರ್ತನೆಯ ಅರ್ಥ ಬಿಡಿಸುವಿರಾ?
ಪ್ರಿಯ ಸಂಪದ್ಬಾಂಧವರೇ,
ನಾನು ಈ ಕೆಳಗೆ ಕೊಟ್ಟಿರುವುದು ಪುರಂದರದಾಸರು ರಚಿಸಿರುವ ಒಂದು ಅತ್ಯಂತ ಜನಪ್ರಿಯ ಆದರೆ ಜಟಿಲ ಕೀರ್ತನೆ. ನನಗಂತೂ ಅದರ ಅರ್ಥವೇ ತಿಳಿಯುತ್ತಿಲ್ಲ. ತಮ್ಮಲ್ಲಿ ಯಾರಾದರೂ ಅರ್ಥ ವಿವರಿಸುವಿರಾ?
ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ||
ಎರಡು ಬರಿದು ಒಂದು ತುಂಬಲಿಲ್ಲ || ೧ ||
ತುಂಬಲಿಲ್ಲದ ಕೆರೆಗೆ ಬಂದರು ಮೂವರೊಡ್ಡರು ||
ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ || ೨ ||
ಕಾಲಿಲ್ಲದ ಒಡ್ಡರಿಗೆ ಕೊಟ್ಟರು ಮೂರು ಎಮ್ಮೆಗಳ ||
ಎರಡು ಬರಡು ಒಂದಕ್ಕೆ ಕರುವೇ ಇಲ್ಲ || ೩ ||
ಕರುವಿಲ್ಲದ ಎಮ್ಮೆಗೆ ಕೊಟ್ಟರು ಮೂರು ಹೊನ್ನುಗಳ ||
ಎರಡು ಸವಕಲು ಒಂದು ಸಲ್ಲಲೇ ಇಲ್ಲ || ೪ ||
ಸಲ್ಲದಾ ಹೊನ್ನುಗಳಿಗೆ ಬಂದರು ಮೂರು ನೋಟಗರು ||
ಇಬ್ಬರು ಕುರುಡರು ಒಬ್ಬಗೆ ಕಣ್ಣೇ ಇಲ್ಲ || ೫ ||
ಕಣ್ಣಿಲ್ಲದ ನೋಟಗರಿಗೆ ಕೊಟ್ಟರು ಮೂರು ಊರುಗಳ ||
ಎರಡು ಹಾಳು ಒಂದಕೆ ಒಕ್ಕಲೇ ಇಲ್ಲ || ೬ ||
ಒಕ್ಕಲಿಲ್ಲದ ಊರಿಗೆ ಬಂದರು ಮೂರು ಕುಂಬಾರರು ||
ಇಬ್ಬರು ಚೊಂಟರು ಒಬ್ಬನಿಗೆ ಕೈಯೇ ಇಲ್ಲ || ೭ ||
ಕೈಯಿಲ್ಲದ ಕುಂಬಾರರು ಮಾಡ್ಯಾರು ಮೂರು ಮಡಿಕೆಗಳ ||
ಎರಡು ಒಡಕು ಒಂದಕೆ ಬುಡವೇ ಇಲ್ಲ || ೮ ||
ಬುಡವಿಲ್ಲದ ಗಡಿಗೆಗೆ ಹಾಕಿದರು ಮೂರು ಅಕ್ಕಿಗಳ ||
ಎರಡು ಹಂಜಕ್ಕಿ ಒಂದು ಬೇಯಲೇ ಇಲ್ಲ || ೯ ||
ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು ||
ಇಬ್ಬರು ಉಣ್ಣರು ಒಬ್ಬಗೆ ಹಸಿವೇ ಇಲ್ಲ || ೧೦ ||
ಹಸಿವಿಲ್ಲದ ನೆಂಟರಿಗೆ ಕೊಟ್ಟರು ಮೂರು ಟೊಣಪೆಗಳ ||
ಎರಡು ಸೋಂಕವು ಒಂದು ತಾಕಲೇ ಇಲ್ಲ || ೧೧ ||
ಇನ್ನು ಈ ಅರ್ಥಗಳೆಲ್ಲ ಪುರಂದರವಿಠಲ ಬಲ್ಲ ||
ಅನ್ಯರಾರೂ ತಿಳಿದವರಿಲ್ಲ || ೧೨ ||
ದಾಸವರೇಣ್ಯರೇನೋ ಅನ್ಯಾರಾರೂ ತಿಳಿದವರಿಲ್ಲ ಎಂದಿದ್ದಾರೆ. ಹಾಗಾದರೆ ಈ ಒಗಟಿನ ಅರ್ಥ?

- Login or register to post comments
- 259 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಪುರಂದರದಾಸರು ರಚಿಸಿರುವ ಈ ಒಗಟಿನ ಕೀರ್ತನೆಯ ಅರ್ಥ ಬಿಡಿಸುವಿರಾ?
ಕ್ಷಮಿಸಿ ಶ್ರೀಯುತ ಹಂಸಾನಂದಿಯವರು ಈ ಪ್ರಶ್ನೆಯನ್ನು ಈಗಾಗಲೇ ಮೇ ೨೦೦೭ರಲ್ಲಿ ಕೇಳಿದ್ದಾರೆ. ಆಗ ನಾನು ಸಂಪದದ ಸದಸ್ಯನಾಗಿರಲಿಲ್ಲ. ಹಾಗಾಗಿ ಈ ಪುನರಾವರ್ತನೆ. ಆದಾಗ್ಯೂ ಯಾರಾದರೂ ಈ ಕೀರ್ತನೆಯ ಅರ್ಥವನ್ನು ಬಿಡಿಸಿ ಹೇಳಿದರೆ ಧನ್ಯ.
ಉ: ಪುರಂದರದಾಸರು ರಚಿಸಿರುವ ಈ ಒಗಟಿನ ಕೀರ್ತನೆಯ ಅರ್ಥ ಬಿಡಿಸುವಿರಾ?
ಹೌದು ಅಗಿಲೆನಾಗರೆ, ಎಲ್ಲರಿಗೂ ಹಂಸಾನಂದಿಯವರು ಆ ಕೊಂಡಿ ಸಿಗಲಿ ಎಂಬ ಇಚ್ಚೆಯೊಂದಿಗೆ. ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ ..... (ಮತ್ತೊಂದು ಒಗಟಿನ ಪದ)
ಉ: ಪುರಂದರದಾಸರು ರಚಿಸಿರುವ ಈ ಒಗಟಿನ ಕೀರ್ತನೆಯ ಅರ್ಥ ಬಿಡಿಸುವಿರಾ?
ದಾಸರ ಪದ್ಯಗಳನ್ನು ಬಿಡಿಸಿ ಹೇಳುವಷ್ಟು ಜ್ಞಾನ ನನಗಿಲ್ಲವಾದರೂ ನನಗನ್ನಿಸಿದ್ದು, ದಾಸರು ಬದುಕನ್ನು ಅರ್ಥಪೂರ್ಣವಾಗಿ ಕಳೆಯಲು ಪ್ರೇರೇಪಿಸುತ್ತಿದ್ದಾರೇನೋ ಎಂದು. ಮೊದಲ ಸಾಲಿನಲ್ಲಿ ನಂಬಲಸಾಧ್ಯವಾದ ವಿಷಯವನ್ನು ಹೇಳಿ, ಎರಡನೆಯ ಸಾಲಿನಲ್ಲಿ ಅದಕ್ಕೆ ಕೊಕ್ಕೆ ಹಾಕಿ ಇನ್ನೊಂದು ಅಸಾಧ್ಯವಾದ ಮಾತನ್ನು ಬರೆದಿದ್ದಾರೆ
ನಿಜಕ್ಕೂ ಒಳ್ಳೆಯ puzzling poem. ಕೆಲವೊಮ್ಮೆ ನಾವು ಅರ್ಥವಿಲ್ಲದ, ಗುರಿಯಿಲ್ಲದ ಕೆಲಸಗಳನ್ನು ಮಾಡುತ್ತಿರುತ್ತೀವಿ. ಕೆಲಸ ಮಾಡುವುದಕ್ಕೆ ಮುಂಚೆ ಇದು ಸಾಧ್ಯವೇ, ಸರಿಯೇ, ಉಚಿತವೇ ಎಂದೆಲ್ಲ ಯೋಚಿಸಿ ಮುನ್ನಡೆಯಬೇಕೆಂದು ತಿಳಿ ಹೇಳುತ್ತಿರಬಹುದು. ಅಥವ ನಾನು ಈಗ ಬರೆಯುತ್ತಿರುವುದೂ ಅರ್ಥವಿಲ್ಲದ್ದಿರಬಹುದು, ಆ ಪುರಂದರ ವಿಠಲನೇ ಬಲ್ಲ! 
~ಕಲ್ಪನ