ಯಕ್ಷ ಪ್ರಶ್ನೆ
ಯಕ್ಷ ಪ್ರಶ್ನೆ
ಇದು ನಿಜವೆ. ಅದ್ಹೇಗೆ ಸಾಧ್ಯ, ಸುಮಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಇವರಿಗಿಂತ ಅವರು ಆ ಕೆಲಸದಲ್ಲಿ ದಕ್ಷರೇ..
ಇದು ಹೇಗೆ ಸಾಧ್ಯ.
ನೋಡಿ ಸ್ವಾಮಿ ಕಳೆದ ಶುಕ್ರವಾರ ಹೀಗೊಂದು ಪ್ರಸಂಗ ನಡೆಯಿತು. ಬೆಂಗಳೂರು ವಿಮಾನ ನಿಲ್ದಾನ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯ ಹತ್ತಿರವಿರುವ ಅದ್ಯಾವುದೋ ಮೇಲ್ಸೇತುವೆ ಬಳಿ ಬಸ್ಸಿಗಾಗಿ ಕಾಯುತ್ತಿರಲಾಗಿ, ತಕ್ಷಣ ಒಂದು ಮಹಿಳಾ ನಿರ್ವಾಹಕರಿರುವ (ಕಂಡಕ್ಟರ್ – ಇಂಗ್ಲೀಷಿನಲ್ಲೂ ಏಕೆ ಹಾಕಿರುವೆನೆಂದು ನಂತರ ತಿಳಿಸುವೆ) ಬಸ್ ಬಂದು ನಿಂತಿತು. ಸರಿ ಎಂದು ಹತ್ತಿದೆ.
ಎಷ್ಟೋ ಬಸ್ಸುಗಳಲ್ಲಿ ಈಗ ನಿರ್ವಾಹಕಿಯರಿರುತ್ತಾರಾಗಿ, ಹಾಗಾಗಿ ಇದೊಂದು ವಿಶೇಷ ಎನಿಸಲಿಲ್ಲ. ಆಕೆ ಹಣೆಗೆ ದಪ್ಪ ಕುಂಕುಮ ಇಟ್ಟುಕೊಂಡಿದ್ದರು. ನೋಡಿದರೆ ಸಾಕು ಪುಣ್ಯಾತ್ಮೆ ಎಂದು ಹೇಳಬಹುದು. ಆದರೆ ವಿಷಯ ಅದಲ್ಲ. ಸಾಮಾನ್ಯವಾಗಿ ನಿರ್ವಾಹಕರು ಕೇವಲ ಟಿಕೇಟು(ಇದಕ್ಕೆ ಕನ್ನಡ ಪದ ಏನು) ಕೊಟ್ಟು ತಮ್ಮ ಕರ್ತವ್ಯ ಮುಗಿಯಿತು ಎಂದು ತಿಳಿಯುತ್ತಾರೆ. ಆದರೆ ಈ ನಿರ್ವಾಹಕಿಯಲ್ಲಿ ಒಂದು ವಿಶೇಷ ಗುಣವಿತ್ತು. ಅದೇನೆಂದರೆ ಪ್ರಯಾಣಿಕರು ಎಲ್ಲಿ ಕುಳಿತುಕೊಳ್ಳಬೇಕು, ಎಲ್ಲಿ ನಿಂತುಕೊಳ್ಳಬೇಕು ಎಂದೂ ಸಹ ಗಮನವಿಡುತ್ತಿದ್ದಳು.
ಅವರವರು ಇಳಿಯುವ ನಿಲ್ದಾಗಳಿಗನುಗುಣವಾಗಿ ಹೀಗೆ ಹೇಳುತ್ತಿದ್ದರು.
ಪ್ರಸಂಗ ೧. ಸ್ವಾಮಿ ಇವರು ಜಂಕ್ಷನ್ ನಲ್ಲಿ ಇಳಿಯುತ್ತಾರೆ, ನೀವು ಮಡಿವಾಳ, ಹಾಗಾಗಿ ಸ್ವಲ್ಪ ಹಿಂದೆ ಹೋಗಿ ಕುಳಿತುಕೊಳ್ಳಿ ಇವರು ಇಲ್ಲಿ ಕುಳಿತುಕೊಳ್ಳಲಿ.
ಪ್ರಸಂಗ ೨.
ಯಾರೋ ಇಬ್ಬರು, ಮಾತನಾಡಿಕೊಂಡು ಮಡಿವಾಳ ಮಸೀದಿ ಎಂದರು,
ನಿ: .ಯಾಕೆ ಅನುಮಾನ ಯಾವ ಕಡೆ ಹೋಗ್ಬೇಕು.
ಪ್ರ: ಆಕ್ಚುಲಿ ನಾವು ಬನಶಂಕರಿ ಕಡೆ ಹೋಗ್ಬೇಕು.
ನಿ: ಸರಿ ಹಾಗಾದರೆ, ಮಡಿವಾಳ ಮಸೀದಿ ಬೇಡ, ಇನ್ನೊಂದು ನಿಲ್ದಾಣದ ಹೆಸರನ್ನು ಹೇಳಿದರು. (ಬಸವನಗುಡಿ ಹತ್ತಿರವಿದ್ದು ಬಸವನಗುಡಿಯನ್ನೇ ಸರಿಯಾಗಿ ನೋಡಿಲ್ಲದ ನನಗೆ ಆ ನಿಲ್ದಾಣದ ನೆನಪಿಲ್ಲ. ಅವರು ಇಳಿಯುತ್ತಿದ್ದಾಗ ನೋಡಿದೆ, ಮಹಾಯೋಗಿ ವೇಮನ ರಸ್ತೆ ಅಂತ ಬರೆದಿತ್ತು).
ಪ್ರಸಂಗ ೩
ಏ ಮರಿ, ನೀನು ಮಸೀದಿ ಹತ್ತಿರ ಅಲ್ವೇನೋ ಇಳಿಯೋದು, ಸ್ವಲ್ಪ ಆಕಡೆ ನಿಂತ್ಕೋ, ಇವರು ಈಕಡೆ ನಿಂತ್ಕೊಳ್ಲಿ, ಬೇಗ ಇಳೀತಾರೆ.
ಇನ್ನೂ ಕೆಲವು.
ಹೀಗೆ ಪ್ರಯಾಣಿಕರ ಅಗತ್ಯಗಳಿಗನುಗುಣವಾಗಿ ಕೇವಲ ಟಿಕೇಟಲ್ಲದೆ, ಪ್ರಯಾಣಿಕರ ಕ್ಷೇಮವನ್ನೂ ಗಮನಿಸುತ್ತಿದ್ದ ಆ ನಿರ್ವಾಹಕಿಯ ಬಗ್ಗೆ ಗೌರವ ಮೂಡಿತು.
ಅಂದಹಾಗೆ ನನ್ನ ಪ್ರಶ್ನೆ ನಿರ್ವಾಹಕಿಯದ್ದಲ್ಲ. ನಾಲ್ಕು ದಿನಗಳಿಂದ ಒಂದು ಪ್ರಶ್ನೆ ಕೊರಿತಾ ಇದೆ. ಇಷ್ಟು ಚೆನ್ನಾಗಿ(ಕೆಲವರಿಗೆ ನಾಜೂಕಾಗಿ ಪದ ಇಷ್ಟವಾಗಬಹುದು) ಕೆಲಸ ನಿರ್ವಹಿಸುತ್ತಿದ್ದ ಆ ಮಹಿಳೆಯನ್ನು ನೋಡಿ ಒಂದು ವಿಚಾರ ಚರ್ಚಿಸಬೇಕು ಎನಿಸುತ್ತಿದೆ. ಮಹಿಳೆಯರು ಪುರುಷರಿಗಿಂತ ಉತ್ತಮ ನಿರ್ವಾಹಕರಾಗಬಲ್ಲರೇ. ಇಲ್ಲಿ ನಿರ್ವಾಹಕ ಪದ ಇಂಗ್ಲೀಷಿನ ಮ್ಯಾನೇಜರ್ ಪದಕ್ಕೆ ಸಮನಾಗಿ ಬಳಸಿದ್ದೇನೆ. ಮೇಲಿನ ಪ್ರಸಂಗದಲ್ಲಿ ನಿರ್ವಾಹಕ ಕಂಡಕ್ಟರ್ ಆಗಿದ್ದ. ಅಂದರೆ ಒಬ್ಬ ಮಹಿಳಾ ಮ್ಯಾನೇಜರ್ ಪುರುಷ ಮ್ಯಾನೇಜರ್ ಗಿಂತ ಸಫಲವಾಗಬಲ್ಲಳೆ.
ಮಹಿಳೆಯರಿಗೆ ಈ ಮ್ಯಾನೇಜ್ ಮಾಡುವ ಕೆಲಸ ಹುಟ್ಟಿನಿಂದಲೇ ಪರಂಪರಾಗತವಾಗಿ ಬಂದಿರುವುದರಿಂದ ಅನೇಕ ಅವಕಾಶಗಳಿರುವ ಈ ಸ್ಪರ್ಧಾ ಪ್ರಪಂಚದಲ್ಲಿ ಇವರು (ಮಹಿಳೆಯರು) ಅವರನ್ನು(ಪುರುಷರನ್ನು) ಹಿಂದಿಕ್ಕುತ್ತಾರೆಯೆ.
ಆದರೆ ನೋಡಿ ಒಂದು ವಿಚಾರದಲ್ಲಿ, ಇವರು ಸ್ವಲ್ಪ ಹಿಂದೆ. ಸಂಪದದಲ್ಲಿ ಪ್ರಕಟವಾದ ವಿವಾಹದ ವಯಸ್ಸು ಲೇಖನಕ್ಕೆ ಒಬ್ಬ ಮಹಿಳೆಯೂ ಉತ್ತಿರಿಸಿಲ್ಲ. 

- Login or register to post comments
- 577 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಮಾನವೀಯ
ಮಾನವೀಯ ಮೌಲ್ಯಗಳನ್ನು ಹೊಂದಿರುವ ಆ ನಿರ್ವಾಹಕಿಯ ಕುರಿತು ಕೇಳಿ ತುಂಬಾ ಸಂತಸವಾಯಿತು.ಅಂತಹ ಒತ್ತಡದಲ್ಲೂ ಅಷ್ಟು ಸಹನೆಯಿಂದ ಕೆಲಸಮಾಡುವುದು ಸುಲಭವಲ್ಲಾ.
ಇನ್ನು ನಿಮ್ಮ ಪ್ರಶ್ನೆಗೆ ನನ್ನ ಉತ್ತರ ಹೌದು ಎಂದು. ಮಹಿಳೆ ತನ್ನನ್ನು ತಾನು ಪೂರ್ತಿಯಾಗಿ ತೊಡಗಿಸಿಕೊಂಡು ಕೆಲಸವನ್ನು ಪ್ರೀತಿಸುತ್ತಾ ಮಾಡುತ್ತಾಳೆ(ಎರಡೂಕಡೆ ಕೆಲವು ಅಪರಾಧಗಳೂ ಇರುತ್ತವೆ).ಬುದ್ದಿಯನ್ನು ಉಪಯೋಗಿಸಿ ಮಾಡುವ ಯಾವಕೆಲಸದಲ್ಲಾದರೂ ಅವಳು ಅಷ್ಟೊಂದು ಪ್ರಯಾಸವಿಲ್ಲದೆ ಪುರುಷರನ್ನು ಮೀರಿಸ ಬಲ್ಲಳು ಅನ್ನುವುದಕ್ಕಿಂತ ಹೆಚ್ಚಿನ ಯಶಸ್ಸನ್ನು ಪಡೆಯಬಲ್ಲಳು.ಇನ್ನು ಮ್ಯಾನೇಜ್ ಮಾಡುವ ಗುಣವಂತೂ ಅವಳಲ್ಲಿ ಮೊದಲಿಂದಲೇ ಇದೆ,ಅಂದರೆ ಅವಳು ಉತ್ತಮ ಮ್ಯಾನೇಜರ್ ಖಂಡಿತ ಆಗಬಲ್ಲಳು.ಇನ್ನೊಂದು ವಿಷಯ ಮಹಿಳೆಯರ ಮುನ್ನಡೆಯನ್ನು ಪುರುಷರ ಹಿನ್ನೆಡೆ ಅಂದುಕೊಳ್ಳಬೇಡಿ.
ನನ್ನದೊಂದು ಮಾತು
ನನ್ನದೊಂದು ಮಾತನ್ನು ಇಲ್ಲಿ ತಿಳಿಸಬಯಸುವೆ.
೪೫ವರ್ಷಗಳಿಂದ ಇಲ್ಲಿಯವರೆವಿಗೆ ನನ್ನ ಜೀವನವನ್ನು ರೂಪಿಸಿದ ಮೂವರು ಹೆಂಗಸರಲ್ಲಿ ನಾ ಕಂಡದ್ದೇನೆಂದರೆ, ಹೆಂಗಸರಲ್ಲಿ ಕಷ್ಟ ಸಹಿಷ್ಣುತೆ ಜಾಸ್ತಿ ಇರುತ್ತದೆ.
ತಿಳಿದವರು ಹೇಳ್ತಾರೆ, ಕಷ್ಟ ಬಂದಷ್ಟೂ ಅದನ್ನು ತಡೆದುಕೊಳ್ಳುವ ಅಥವಾ ನಿವಾರಿಸುವ ಶಕ್ತಿ ಹೆಚ್ಚುವುದಂತೆ. ಇದು ಶತ:ಪ್ರತಿಶತ ಸತ್ಯ. ಗಂಡಸರಿಗಿಂತ ಹೆಚ್ಚಿನ ಕಷ್ಟಗಳು ಬರುವುದು ಹೆಣ್ಣುಮಕ್ಕಳಿಗೆ.
ಮೊದಲಿಗೆ ನನ್ನ ತಾಯಿ, ನಂತರ ನನ್ನ ಪತ್ನಿ ನನಗೆ ಪಾಠ ಕಲಿಸಿದವರು. ಈಗ ನನ್ನ ಮಗಳನ್ನೂ ನೋಡ್ತಿದ್ದೀನಿ, ಹಾಗೆಯೇ ನನ್ನ ಮಗನನ್ನೂ ನೋಡ್ತಿದ್ದೀನಿ. ಮಗಳಿಗಿರುವ ಶಕ್ತಿ ಮಗನಿಗಿಲ್ಲ. ಅಷ್ಟೇನು ನನ್ನಲ್ಲೇ ಇಲ್ಲ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net