ವೇದ ಪುರುಷನ ಸುತನ ಸುತನ...
ಹೊಸದಾಗಿ ಕುಮಾರವ್ಯಾಸ ಭಾರತ ಓದಲು ಪ್ರಾರಂಭ ಮಾಡಿದ್ದೇನೆ.
ಪೀಠಿಕಾಸಂಧಿಯ ಕೊನೆಯ ಪದ್ಯದ ಅರ್ಥ ಸ್ಪಷ್ಟವಾಗಲಿಲ್ಲ.
ಯಾರಾದರು ತಿಳಿಸಿಕೊಟ್ಟರೆ ಉಪಯೋಗವಾಗುತ್ತದೆ.
======= ೨೩====================
ವೇದ ಪುರುಷನ ಸುತನ ಸುತನ ಸ
ಹೋದರನ ಹೆಮ್ಮಗನ ಮಗನ ತ
ಳೋದರಿಯ ಮಾತುಳನ ರೂಪನನತುಳ ಭುಜಬಲದಿ
ಕಾದಿ ಗೆಲಿದನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿ ಮೂರುತಿ ಸಲಹೋ ಗದುಗಿನ ವೀರನಾರಯಣ
=================================
ಧನ್ಯವಾದಗಳೊಂದಿಗೆ
-ಸುಚರಾ

- Login or register to post comments
- 1254 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಕರ್ಣಾಟ ಭಾರತ ಕಥಾ ಮಂಜರಿ
ಸುಚರರೆ,
ನೀವು ಕುವೆಂಪು ಮತ್ತು ಮಾಸ್ತಿಯವರು ಸಂಪಾದಿಸಿರುವ, ಮೈಸೂರು ವಿಶ್ವವಿದ್ಯಾಲಯವು ಪ್ರಕಾಶಿಸಿದ "ಕರ್ಣಾಟ ಭಾರತ ಕಥಾ ಮಂಜರಿ"ಯನ್ನು ಓದುತ್ತಿರುವಿರೆ?
"ಕರ್ಣಾಟ ಭಾರತ ಕಥಾ ಮಂಜರಿ"ಗೆ ಯಾರು ವಿವರಣೆಯನ್ನು ಬರೆದಿಲ್ಲವೆ?
ಉ: ಕರ್ಣಾಟ ಭಾರತ ಕಥಾ ಮಂಜರಿ
ಮಹೇಶ್ ರವರೆ
ಹೌದು. ನಾನು ಓದುತ್ತಿರುವುದು ಅದೇ ಆವೃತ್ತಿಯನ್ನು.
ಅಂತರ್ಜಾಲ ಆವೃತ್ತಿಗೆ ನಾನೂ ಕೈ ಜೋಡಿಸಲು ಸಿದ್ಢ. ನಾನು ಈ ಪದ್ಯವನ್ನು ಇಲ್ಲಿ ಹಾಕಲು ಅದೂ ಒಂದು ಕಾರಣವೇ
ಇನ್ನು ವಿವರಣೆ/ತಾತ್ಪರ್ಯದ ಬಗ್ಗೆ ನನಗೂ ತಿಳಿದಿಲ್ಲ. ಪುಸ್ತಕದಂಗಡಿಯಲ್ಲಿ ಕಾಣಿಸಿದ್ದು ಗದ್ಯಾನುವಾದದ ಒಂದು ಪುಸ್ತಕ ಅಷ್ಟೆ.
ಇನ್ನೂ ಈ ಪದ್ಯದ ಅರ್ಥ ಪೂರ್ಣವಾಗಲಿಲ್ಲವೆಂದು ನನಗೆ ತೋರುತ್ತದೆ.
- ಸುಚರ
ಹೀಗಿರಬಹುದೇ ?
ಆದಿ ಮೂರುತಿ ಕೃಷ್ಣನೇ ಇರಬೇಕು - ಕುಮಾರವ್ಯಾಸನಿಗೆ ಕೃಷ್ಣನಲ್ಲಿ ಅಪಾರ ಭಕ್ತಿ. ಗದುಗಿನ ಭಾರತ ಕೃಷ್ಣನ ಅವಸಾನದೊಂದಿಗೇ ಮುಗಿಯುತ್ತದೆ.
ನಾದಿನಿ - ದೇವಕಿ - ವಸುದೇವ,ಕುಂತಿ ಸುರಸೇನನ ಮಕ್ಕಳು. ದೇವಕಿ ಕುಂತಿಯ ನಾದಿನಿ ಹಾಗೂ ಕುಂತಿ ಕೃಷ್ಣನ ಅತ್ತೆ.
ಅಣ್ಣ - ಧರ್ಮರಾಯ ಅಥವಾ ಭೀಮ
ಇನ್ನು
ವೇದಪುರುಷನ ಸುತನ ಸುತನ ಸಹೋದರನ - ವ್ಯಾಸರ ಮಕ್ಕಳಾದ ಪಾಂಡು ಅಥವಾ ಧೃತರಾಷ್ಟ್ರರ ಮಕ್ಕಳಾದ ಕೌರವರು ಅಥವಾ ಪಾಂಡವರು
ಹೆಮ್ಮಗ - ಕೌರವರ ಮಕ್ಕಳೆಲ್ಲಾ ಕುರುಕ್ಷೇತ್ರದಲ್ಲಿ ಸಾವಪ್ಪಿದರು ಅಲ್ಲದೇ ಅವರ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ . ಪಾಂಡವರ ಹಿರಿಯ ಮಗನೆಂದರೆ - ಘಟೋತ್ಕಚ ಅಥವಾ ಅಭಿಮನ್ಯು
ಹೆಮ್ಮಗನ ಮಗ - ಘಟೋತ್ಕಚನ ಮಕ್ಕಳ ಬಗ್ಗೆ ತಿಳಿದಿಲ್ಲ. ಅಭಿಮನ್ಯುವಿನ ಮಗ ಪರೀಕ್ಷಿತ
ತಳೋದರಿಯ ಮಾತುಳನ ರೂಪ - ಕೀಚಕ. ಅಭಿಮನ್ಯುವಿನ ತಾಯಿ ಉತ್ತರೆ. ವಿರಾಟ ರಾಜನ ಮಗಳು. ಕೀಚಕ ಅವಳಿಗೆ ಮಾವನಾಗಬೇಕು
ಅತುಳ ಭುಜಬಲದಿ ಗೆಲಿದವ - ಭೀಮ
ಗೆಲಿದನಣ್ಣನವ್ವೆಯ ನಾದಿನಿಯ ಜಠರದಲಿ ಜನಿಸಿದನಾದಿ ಮೂರುತಿ - ಭೀಮನ ಅಣ್ಣ ಧರ್ಮರಾಯನ ತಾಯಿ ಕುಂತಿಯ ನಾದಿನಿಯಾದ ದೇವಕಿಯ ಗರ್ಭದಲ್ಲಿ ಜನಿಸಿದ ಶ್ರೀ ಕೃಷ್ಣ
-ಸ್ಮಿತಾ
ವಿ:ಕರ್ಣಾಟ ಭಾರತ ಕಥಾ ಮಂಜರಿ-ಅಂತರ್ಜಾಲಾವೃತ್ತಿ
ಧನ್ಯವಾದಗಳು ಸ್ಮಿತೆಯರಿಗೆ.
ನಾನು "ಕರ್ಣಾಟ ಭಾರತ ಕಥಾ ಮಂಜರಿ"ಯ ಕೆಲವು ಪದ್ಯಗಳನ್ನು ಗಮಕ-ತರಗತಿಯಲ್ಲಿ ಕಲಿತೆನು.
ಆದರೆ ಅರ್ಥವು ಸರಿಯಾಗಿ ತಿಳಿಯದು.
ನಾವು ಯಾಕೆ "ಕರ್ಣಾಟ ಭಾರತ ಕಥಾ ಮಂಜರಿ"ಯ ಅಂತರ್ಜಾಲಾವೃತ್ತಿಯನ್ನು ಮಾಡಲು ಪ್ರಾರಂಭಿಸಬಾರದು?
ಹರಿ ಪ್ರಸಾದರು ಸಂಪದದ ಜೊತೆಗೆ ಇದಕ್ಕೆ ಅವಕಾಶ ನೀಡಿವರು ಎಂದು ಕೊಳ್ಳೋಣ.
ಮೂಲ ಪದ್ಯವನ್ನು ಮತ್ತು ನಮ್ಮ ತಿಳಿವಳಿಕೆಗೆ ತಕ್ಕ ಅರ್ಥವನ್ನು ಬರೆಯೋಣ. ತಿಳಿದವರು ನೋಡಿದಾಗ ಸಲಹೆಗಳನ್ನು ನೀಡುವರು.
ಹನಿಹನಿಗೂಡಿದರೆ ಹಳ್ಳ....
ಹನಿ ಹನಿ ಗೂಡಿದ್ರೆ ಹಳ್ಳ
ಹನಿ ಹನಿ ಗೂಡಿದ್ರೆ ಹಳ್ಳ. ತೆನೆ ತೆನೆ ಗೂಡಿದ್ರೆ ವಳ್ಳ.
ಖಂಡಿತ ಮುಂದುವಿರಿಸಿ. ನೀವು ಲೇಖನಗಳನ್ನು ಇಲ್ಲಿಯೇ ಅಂದರೆ ಸಂಪದದಲ್ಲೇ ಹಾಕಬಹುದು ಅಥವಾ ಕನ್ನಡ ವಿಕಿಪೀಡಿಯಾದಲ್ಲಿ ಹಾಕಿ ಸಂಪದದಿಂದ ಅದಕ್ಕೊಂದು ಕೊಂಡಿ ಸಹ ಕೊಡಬಹುದು, ಒಂದು ಬ್ಲಾಗ್ ಇಲ್ಲವೇ ಸಾಹಿತ್ಯ ಪುಟದ ಮೂಲಕ. ಇಲ್ಲವೇ, ಮೂಲ ಲೇಖನವನ್ನು ವಿಕಿಪೀಡಿಯಾದಲ್ಲಿ ಹಾಕಿ, ಚರ್ಚೆಗಳನ್ನು ಸಂಪದದಲ್ಲಿ ನಡೆಸಬಹುದು. ಹಾಗೆಯೇ ವಿಕಿಪೀಡಿಯಾದಿಂದ ಒಂದು ಕೊಂಡಿಯನ್ನು ಸಂಪದಕ್ಕೂ ಕೊಡಬಹುದು.
ಎಲ್ಲರ ಅನುಕೂಲಕ್ಕೆ ತಕ್ಕಂತೆ ಇವೆಲ್ಲವನ್ನೂ ಬಳಸೋಣ.
ಉ: ಹೀಗಿರಬಹುದೇ ?
ಘತೋತ್ಕಚನ ಮಗ ಬರ್ಬರೀಕ! ಇವನ ಸಾವಿಗೆ ಪರೋಕ್ಷವಾಗಿ ಕೃಷ್ಣನೇ ಕಾರಣನಾಗುತ್ತಾನೆ.
- ನಾಸೋ
Re: ವೇದ ಪುರುಷನ ಸುತನ ಸುತನ...
ಹೀಗೆ ನೋಡೋಣ:
ಆದಿ ಮೂರುತಿ = ಕೃಷ್ಣ, ಗದುಗಿನ ವೀರನಾರಯಣ
ಜಠರದಲಿ ಜನಿಸಿದನು = ದೇವಕಿಯು ಮಗ,
ನಾದಿನಿಯ ಜಠರದಲಿ = ದೇವಕಿಯು ಯಾರ ನಾದಿನಿ?
ಭುಜಬಲದಿ ಕಾದಿ ಗೆಲಿದನ = ಭೀಮನ
ಅಣ್ಣನವ್ವೆಯ = ಅಣ್ಣನ ಅಮ್ಮ = ಕುಂತಿ(ದೇವಕಿಯು ಕುಂತಿಯ ನಾದಿನಿ, ಹೇಗೆ?)
ಮಾತುಳ(ಲ) = ಮಾವ/ತಾಯಿಯ ಒಡಹುಟ್ಟಿದಾತ
ಇಷ್ಟೆ ನನಗೆ ಹೊಳೆದದ್ದು
ಈ ಪದ್ಯದ ಅರ್ಥ ಹೀಗಿರಬಹುದೇ?
ನನಗೆ ನೆನಪಿರುವಂತೆ ಈ ಪದ್ಯದ ಅರ್ಥ ಬರೆಯಲು ಪ್ರಯತ್ನಿಸುತ್ತಿದ್ದೇನೆ. ತಪ್ಪಾಗಿದ್ದರೆ ಬಲ್ಲವರು ತಿದ್ದಬೇಕು. ಈ ಪದ್ಯಕ್ಕೆ ಸಂಬಂಧಿಸಿದಂತೆ ಬಿಂದೂರಾಯರು ಮತ್ತು ಮಂಜೇಶ್ವರ ಗೋವಿಂದ ಪೈಗಳು ಬರೆದದ್ದನ್ನು ಓದಿದ್ದೆ. ವೇಂಕಟಾಚಲ ಶಾಸ್ತ್ರಿಯವರ ಅಭಿನಂದನಾ ಗ್ರಂಥದಲ್ಲಿ ಈ ಪದ್ಯಕ್ಕೆ ಸಂಬಂಧಿಸಿದ ದೊಡ್ಡ ವಿವರಣೆಯೇ ಇದೆ. ಸದ್ಯಕ್ಕೆ ಯಾವ ಪುಸ್ತಕಗ ನನಗೆ ಸಿಗುತ್ತಿಲ್ಲ. ನನಗೆ ನೆನಪಿರುವುದು ಈ ಕೆಳಗೆ ಇದೆ.
ವೇದ ಪುರುಷನ=ನಾರಾಯಣನ, ಸುತನ=ಆದಿ ಬ್ರಹ್ಮನ, ಸುತನ=ಕಾಶ್ಯಪ ಬ್ರಹ್ಮನ, ಸ
ಹೋದರನ=ಪುಲಸ್ತ್ಯ ಬ್ರಹ್ಮನ, ಹೆಮ್ಮಗನ=ಹಿರೇ ಮಗನಾದ ದೇವೇಂದ್ರನ, ಮಗನ=ಅರ್ಜುನನ, ತ
ಳೋದರಿಯ=ಅರ್ಜುನ ಸ್ತ್ರೀಯಾದ ಸುಭದ್ರೆಯ, ಮಾತುಳನ ರೂಪನ=ಸುಭದ್ರೆಯ ಮಾವನಾದ ಕಂಸನಂತೆಯೇ ಇರುವ ಜರಾಸಂಧನ, ಅತುಳ ಭುಜಬಲದಿ ಕಾದಿ ಗೆಲಿದನ=ಜರಾಸಂಧನೊಂದಿಗೆ ಮಲ್ಲಯುದ್ಧ ಮಾಡಿ ಗೆದ್ದ ಭೀಮನ, ಅಣ್ಣನ=ಧರ್ಮರಾಯನ, ಅವ್ವೆಯ=ಕುಂತಿಯ, ನಾದಿನಿಯ=ದೇವಕಿಯ ಜಠರದಲ್ಲಿ ಜನಿಸಿದವನು.
ಇದೇ ಪದ್ಯವನ್ನು ಗೋವಿಂದ ಪೈಗಳು ಸ್ವಲ್ಪ ಬೇರೇ ರೀತಿಯಲ್ಲಿ ಅನುವಾದಿಸಿದ್ದಾರೆ. ಅದು ನನಗೆ ನೆನಪಿಲ್ಲ. ಈ ಪದ್ಯದಲ್ಲಿ ಇರುವ ಒಂದು ಪಾಠಾಂತರದ ಬಗ್ಗೆ ಬಹಳ ಚರ್ಚೆಗಳು ನಡೆದಿವೆ. ಕುಮಾರವ್ಯಾಸ ಭಾರತದ ಹಳೆಯ ಅಂದರೆ ಪ್ರತಿಗಳಲ್ಲಿ ಅಂದರೆ 1912ರಲ್ಲಿ ಮುದ್ರಿತವಾದ ಆವೃತ್ತಿಯಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ತಂದಿರುವ ಕುಮಾರವ್ಯಾಸ ಭಾರತದಲ್ಲಿ ಈ ಪದ್ಯ ಸ್ವಲ್ಪ ಭಿನ್ನವಾಗಿದೆ. `ತಳೋದರಿಯ ಮಾತುಳನ ಮಾವನ' ಎಂದು ಅವುಗಳಲ್ಲಿರುವ ಭಾಗ ಅಕಾಡೆಮಿ ತಂದಿರುವ ಪರಿಷ್ಕೃತ ಆವೃತ್ತಿಯಲ್ಲಿ `ತಳೋದರಿಯ ಮಾತುಳನ ರೂಪನ' ಎಂದಿದೆ. ಮಾತುಳನ ಮಾವನ ಎಂಬುದನ್ನು ಪರಿಗಣಿಸಿ ಅರ್ಥ ಮಾಡಿಕೊಂಡರೆ ಸುಭದ್ರೆಯ ಮಾವನಾದ ಕಂಸನ ಮಾವ ಜರಾಸಂಧ ಎಂದಾಗುತ್ತದೆ.
ಬಹಳ ದಿನಗಳ ಹಿಂದೆ ಓದಿದ ಈ ವಿಷಯವನ್ನು ಮತ್ತೆ ನೆನಪಿಸಿ ಕೊಟ್ಟದ್ದಕ್ಕೆ ಸುಚರ ಅವರಿಗೆ ಧನ್ಯವಾದಗಳು. ನನ್ನ ಗ್ರಂಥಾಲಯದ ದೂಳು ಜಾಡಿಸಿ ಪಾಠಾಂತರದ ಕುರಿತ ಚರ್ಚೆಯನ್ನು ಒಂದೆರಡು ದಿನದಲ್ಲಿ ಸರಿಯಾದ ರೂಪದಲ್ಲಿ ಒದಗಿಸಲು ಪ್ರಯತ್ನಿಸುತ್ತೇನೆ.
ಇಸ್ಮಾಯಿಲ್
ಉ: ಈ ಪದ್ಯದ ಅರ್ಥ ಹೀಗಿರಬಹುದೇ?
ಇಸ್ಮಾಯಿಲ್ರಿಗೆ,
ಧನ್ಯವಾದಗಳು....
ನಿಜವಾಗಲು ಬಹಳ ಕಷ್ಟಪಟ್ಟು, ತಲೆಕೆಡೆಸಿಕೊಂಡರು ಸಹ ನನಗೆ ಹೊಳೆಯಲಿಲ್ಲ.
ಇದು ಓದುವುದರಿಂದ ಎಂತಹ ಜ್ಞಾನಸಂಪಾದನೆಯಾಗುವುದೆಂದು ತೋರಿಸಿಕೊಡುತ್ತದೆ.
ಈ ಪದ್ಯದ ಅರ್ಥವನ್ನು ತಿಳಿಯುವುದರ ಜೊತೆಗೆ, ಇನ್ನು ಎಷ್ಟೊಂದು ಮಾಹಿತಿಗಳು ನಮಗೆ ದೊರೆತವು.
ಮತ್ತೆ ಈ ಪದ್ಯವನ್ನು ಇಲ್ಲಿ ಪ್ರಸ್ತಾಪಿಸಿದ ಸುಚರರಿಗೆ ಮತ್ತು ಅದಕ್ಕೆ ಅರ್ಥವನ್ನು ಬರೆದ ಇಸ್ಮಾಯಿಲ್ರಿಗೆ, ಇತರಿರಿಗೆ ಧನ್ಯವಾದಗಳು.!
ಧನ್ಯವಾದಗಳು
ಈ ಪದ್ಯದ ಅರ್ಥವನ್ನು ಬಹಳ ಸುಂದರವಾಗಿ ವಿವರಿಸಿದ ಇಸ್ಮಾಯಿಲ್ ರವರಿಗೆ ನಾನು ಚಿರಋಣಿ.
ಹಾಗೆ ಈ ಪ್ರಯತ್ನದಲ್ಲಿ ಜೊತೆ ಗೂಡಿದ ಇತರರಿಗೂ ಧನ್ಯವಾದಗಳು.
ಇಸ್ಮಾಯಿಲ್ ರವರೆ ಇಲ್ಲಿ ಕೆಲವು ಪುಸ್ತಕಗಳ ಬಗ್ಗೆ ಪ್ರಸ್ತಾಪಿಸಿದ್ದೀರಿ.
ಅವುಗಳ ಪೂರ್ಣ ಹೆಸರು, ಲೇಖಕರು, ಪ್ರಕಾಶಕರು ಇವುಗಳ ಬಗ್ಗೆ ತಿಳಿಸಿಕೊಟ್ಟರೆ ಉಪಯೋಗವಾಗುತ್ತದೆ.
ಹಳೆಯ ಪುಸ್ತಕಗಳಾದರೆ ಈಗ ಪ್ರತಿಗಳು ಮುಗಿದಿರಬಹುದೇನೊ ?
ಮಹೇಶ್ ರವರೆ ಇನ್ನು ಅಂತರ್ಜಾಲ ಆವೃತ್ತಿಯ ಬಗ್ಗೆ ಏನು ಯೋಚಿಸುತ್ತಿರುವಿರಿ ?
ಬಹಳ ಜನ ಆಸಕ್ತರೆಂದು ತೋರುತ್ತಿದೆ.
ಕಷ್ಟ ಬಂದಾಗ ಆಶ್ರಯಿಸಲು ಇಸ್ಮಾಯಿಲರೂ ಇದ್ದಾರೆ.
ಪ್ರಯತ್ನ ಮಾಡೋಣವೇ ?
ಸುಚರ
Re: ಧನ್ಯವಾದಗಳು
ಮಹೇಶ್ ರವರೆ ಇನ್ನು ಅಂತರ್ಜಾಲ ಆವೃತ್ತಿಯ ಬಗ್ಗೆ ಏನು ಯೋಚಿಸುತ್ತಿರುವಿರಿ ?
ಬಹಳ ಜನ ಆಸಕ್ತರೆಂದು ತೋರುತ್ತಿದೆ.
ಕಷ್ಟ ಬಂದಾಗ ಆಶ್ರಯಿಸಲು ಇಸ್ಮಾಯಿಲರೂ ಇದ್ದಾರೆ.
ಪ್ರಯತ್ನ ಮಾಡೋಣವೇ ?
ಸುಚರರೆ,
ನಿನ್ನೆ ನಾನು ನಿಮಗೆರಡು ಖಾಸಗಿ ಸಂದೇಶಗಳನ್ನು (private message) ಕಳುಹಿಸಿದೆನು.
ಶ್ರೀಕಾಂತರು ಕೂಡ ಇದರಲ್ಲಿ ಆಸಕ್ತಿ ತೋರಿಸಿದರು. ಇನ್ನು ಇಸ್ಮಾಯಿಲರು ನಮ್ಮ ಕೈಬಿಡರು.
ಮತ್ತೇನು.. HPNರವನ್ನು ಹಿಡಿದು ಕಾರ್ಯಸಾಧಿಸೋಣ. ನಾನು ಸುಮ್ಮನೆ ವಾರಾಂತ್ಯದ ದಿನಗಳನ್ನು ವ್ಯರ್ಥಮಾಡುತ್ತಿದ್ದೇನೆ.
ನನ್ನೀ ಜನುಮದಲ್ಲಿ ಅಂತಹ ಮಹಾಙ್ಕೃತಿಯನ್ನು ಓದಿದ ಹಾಗು ಆಗುವುದು. ಕನ್ನಡಕ್ಕೆ ಅಳಿಲುಸೇವೆಯು ಆಗುವುದು.
ನೀವೇನಂತೀರಿ, ಇಸ್ಮಾಯಿಲರೆ?
ನನ್ನ ವಿ-ಅಂಚೆ ವಿಳಾಸ : bogadi.mahesh@gmail.com
ಸ್ವಲ್ಪ ಸಾಬರ ತಮಾಷೆ
ಪದ್ಯದ ಅರ್ಥ ಅಲ್ಪ ಸ್ವಲ್ಪ ನನಗೆ ನೆನಪಿತ್ತು. ಆದರೆ ವೇದಪುರುಷ ಎಂದರೆ ವ್ಯಾಸ ಎಂದು ಭಾವಿಸಿ ಲೆಕ್ಕಾಚಾರ ತಪ್ಪುತ್ತಿದ್ದಾಗ ನೆರವಾದದ್ದು ನನ್ನ ಪ್ರಿಯ ಶತ್ರು ರಾಜಶೇಖರ ಹೆಗಡೆ. `ಸಾಬರಿಗೆ ಕಾವ್ಯ ಅರ್ಥವಾಗುವುದಿಲ್ಲ' ಎಂದು ಛೇಡಿಸುತ್ತಲೇ ನನ್ನಲ್ಲಿ ಸದಾ ಕಾವ್ಯದ ಕುರಿತೇ ಚರ್ಚಿಸುವ ರಾಜಶೇಖರ ಹೆಗಡೆ ವೇದಪುರುಷ ಅಂದರೆ ಆದಿನಾರಾಯಣ ಎಂದ ತಕ್ಷಣ ಎಲ್ಲ ಸಮಸ್ಯೆಗಳೂ ಪರಿಹಾರವಾದವು. ಇನ್ನು ಪಾಠಾಂತರಗಳ ಕುರಿತ ಚರ್ಚೆ, ಗೋವಿಂದ ಪೈ ಅವರು ನೀಡಿದ ಅರ್ಥಗಳ ಬಗ್ಗೆ ಕನ್ನಡ ಪ್ರಾಧ್ಯಾಪಕ ಸತ್ಯನಾರಾಯಣ ಮಲ್ಲಿಪಟ್ಟಣ ಮಾಹಿತಿ ಒದಗಿಸುವ ಭರವಸೆ ನೀಡಿದ್ದಾರೆ. ಅವರ ಕೊರಿಯರ್ ಇನ್ನೂ ತಲುಪಿಲ್ಲ. ನನ್ನ ಮನೆ ಬದಲಾವಣೆಯ ದಿನಗಳಲ್ಲಿ ಕಾಣೆಯಾದ ಕೆಲವು ಪುಸ್ತಕಗಳನ್ನು ಹುಡುಕುವ ಕೆಲಸವನ್ನು ಪತ್ತೇದಾರ ಪುರುಷೋತ್ತಮ ಇಲ್ಲವೇ ಮಧುಸೂದನನಿಗೆ ವಹಿಸುವ ಯೋಚನೆಯಲ್ಲಿದ್ದೇನೆ.
ಇಸ್ಮಾಯಿಲ್
ತಲೆಬರಹ
ಸಾರ್ ತಲೆಬರಹ ನೋಡಿ, 'ಯಾರಪ್ಪಾ ಇದು ಹೀಗೆ ತಲೆಹರಟೆ ಬರೆದಿರೋದು' ಅಂತ ತುಂಬಾ ಕೋಪ ಬಂದಿತು. ನೋಡಿದ್ರೆ ಇಸ್ಮಾಯಿಲ್ ಅವರು.
ಆದರೂ ಸಾಬರು ಅನ್ನುವ ಉಪಯೋಗಿಸುವುದು ಬೇಡ ಸರ್. ಹಾಗೆಂದರೆ ನೀವು ಬೇರೆ ಅಂತ ಗಣಿಸಿದ ಹಾಗಾಗುವುದು. ಇಲ್ಲೇ ನೀವು ಎಷ್ಟು ಚೆನ್ನಾಗಿ ಅರ್ಥೈಸಿದ್ದೀರಿ. ಹಿಂದೂ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವವರನ್ನು ಭೇದಿಸುವುದು ಬೇಡ ಅಲ್ವೇ?
ನಿಮಗೆ ಗೊತ್ತಲ್ವಾ ಕರೀಂಖಾನರ ಪ್ರಸಿದ್ಧ ಚಲನಚಿತ್ರಗೀತೆ ಯಾವುದು ಅಂತ - ಶ್ರೀ ಗೌರಿ ಜಗದೀಶ್ವರಿ. ಅದನ್ನು ತರಾತುರಿಯಲ್ಲಿ ಬರೆದಿದ್ದಂತೆ. ಚಿತ್ರ ನಿರ್ಮಾಪಕರು ಯೋಚಿಸಲು ಅವರಿಗೆ ಅವಕಾಶವೇ ಕೊಟ್ಟಿರಲಿಲ್ಲವಂತೆ.
ಇನ್ನೂ ನಿಸಾರರ ಬೆಣ್ಣೆ ಕದ್ದ ನಮ್ಮ ಕೃಷ್ಣ ... ಆಹ್! ಷರೀಫರ ಗೀತೆಗಳು. ಇವರೆಲ್ಲರೂ ನಮಗೆ ದೃಷ್ಟಿಯನ್ನೀಯುವ ಕಣ್ಣುಗಳು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಜಾರ್ಜ್ ಬುಷ್ ಮರೆತಿರಾ?
ಛೆ, ನೀವು ಜಾಗತಿಕ ಪೊಲೀಸ್ ಜಾರ್ಜ್ ಬುಷ್ ಗೆ ಈ ಕೆಲಸ ವಹಿಸಿಕೊಟ್ಟರೆ ಒಳ್ಳೆಯದು. ಇರಾಕ್ ನಲ್ಲಿ ಸಮೂಹ ನಾಶದ ಅಸ್ತ್ರ ಹುಡುಕಿದ ಹಾಗೆ ಹುಡುಕಿಕೊಟ್ಟಾರು!
ವ್ಯಾಸರೂ ಶ್ರೀಮನ್ನಾರಾಯಣನೂ ಬೇರೆ ಬೇರೆಯೇನಲ್ಲ!
ಇಸ್ಮಾಯಿಲ್ ಸಾಹೇಬ್ರೇ, ಗದುಗಿನ ವೀರನಾರಾಯಣನ ಸ್ಮರಣೆಮಾಡುವ ಮಂಗಲಪದ್ಯದ ವ್ಯಾಖ್ಯಾನವನ್ನು ಎಲ್ಲರೂ ಯಥಾಶಕ್ತಿಯಿಂದ ಮಾಡಲು ಪ್ರಯತ್ನಿಸುತ್ತಿರುವುದು ಸಂತಸದ ವಿಚಾರ. ವಿಷಯವೊಂದನ್ನು ಸುಲಲಿತವಾಗಿ ವಿವರಿಸಲು ನೀವು ಮಾಡುವ ಪ್ರಯತ್ನ ತುಂಬಾ ಒಳ್ಳೇದು. ಮೊನ್ನೆ ವೇದಪುರುಷನೆಂದರೆ ಯಾರು ಎನ್ನುವ ವಿಚಾರ ಮಾಡುತ್ತಾ "ವ್ಯಾಸ ಎಂದು ಭಾವಿಸಿ ಲೆಕ್ಕಾಚಾರ ತಪ್ಪುತ್ತಿದ್ದಾಗ ರಾಜಶೇಖರ ಹೆಗಡೆಯವರು ವೇದಪುರುಷನೆಂದರೆ ಆದಿನಾರಾಯಣ ಎಂದು ತಿಳಿಸಿ, ಸಮಸ್ಯೆಗಳು ಪರಿಹಾರವಾದವು" ಎಂದಿರಿ. ಹೆಗಡೆಯವರು ಹೇಳಿದ ವಿಷಯವೇನೋ ಸೆಂಟ್ ಪರ್ಸೆಂಟ್ ಸರಿಯಾದ ಉತ್ತರವೇ. ಆದರೆ ನಿಮ್ಮ ವಿಶ್ಲೇಷಣೆಯ ಯತ್ನದಲ್ಲಿ "ವ್ಯಾಸ ಎಂದು ತಪ್ಪಾಗಿ ಭಾವಿಸಿ" ಅಂದಿರಲ್ಲ, ಅದೇನೂ ತಪ್ಪಲ್ಲ ಎಂದು ನನ್ನ ಅಭಿಪ್ರಾಯ. ಯಾಕೆಂದರೆ ವೇದವಿಭಾಗ ಮಾಡಲು ನಾರಾಯಣನೇ ವ್ಯಾಸರೂಪದಿಂದ ಅವತರಿಸಿದ ಎನ್ನುವುದು ಪುರಾಣ ಹಾಗೂ ಇತಿಹಾಸದಿಂದ ತಿಳಿಯುತ್ತದೆ. ವೇದವಿಭಾಗ ಮಾಡಿದ್ದು ಮಾತ್ರವಲ್ಲ, ವೇದಾರ್ಥನಿರ್ಣಾಯಕವಾದ ಬ್ರಹ್ಮಸೂತ್ರಗಳನ್ನು ರಚಿಸಿದ್ದು ಸಹ ಭಗವಾನ್ ವ್ಯಾಸರೇ. ಇದನ್ನು ಬ್ರಹ್ಮಸೂತ್ರಕ್ಕೆ ವ್ಯಾಖ್ಯಾನಗಳನ್ನು ರಚಿಸಿದ ಬಹುತೇಕ ಮಹನೀಯರು ಒಪ್ಪುತ್ತಾರೆ. ಆಚಾರ್ಯ ಮಧ್ವರು ಈ ಕುರಿತು ವಿಫುಲವಾದ ಪ್ರಮಾಣಗಳನ್ನು ವಿವರಿಸಿದ್ದಾರೆ. ಆಚಾರ್ಯ ಆದಿಶಂಕರರ ಅಭಿಪ್ರಾಯದ ಬಗ್ಗೆ ನನಗೆ ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಶ್ರೀರಾಮಾನುಜಾಚಾರ್ಯರು ವ್ಯಾಸನು ಒಬ್ಬ ಋಷಿ (ವ್ಯಾಸಃ ಕಶ್ಚನ ಋಷಿಃ) ಎಂದಷ್ಟೇ ಹೇಳಿದ್ದಾರೆ. ಆದರೆ ಭಾರತದ ಉದ್ದಗಲಕ್ಕೂ ಗ್ರಂಥರಚನೆಕಾರರು ಹಾಗೂ ಗ್ರಂಥದ ಅಧ್ಯಯನಾಸಕ್ತರೂ ವ್ಯಾಸರನ್ನು ಭಗವಂತನ ಅವತಾರವೆಂದೇ ತಿಳಿದು ಗೌರವಿಸುದನ್ನು ನಾನು ನೋಡಿದ್ದೇನೆ. ನಾನು ಉತ್ತರ ದಕ್ಷಿಣಗಳೆರಡನ್ನೂ ಸಾಕಷ್ಟು ಬಾರಿ ಸುತ್ತಿದ್ದೇನಾದ್ದರಿಂದ ಇದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕಲೆ ಹಾಕಲು ಸಾಧ್ಯವಾಯಿತು. ಮಹಾಭಾರತ ಯುದ್ಧವಾದ ನಂತರ ಅಶ್ವತ್ಥಾಮ ಹಾಗು ಅರ್ಜುನರು ಪರಸ್ಪರ ಎದುರಿಸಲು ಪ್ರಯೋಗಿಸಿದ ಬ್ರಹ್ಮಾಸ್ತ್ರವನ್ನು ತಡೆದು ಉಪಶಮನಗೊಳಿಸಿದ್ದು ವೇದವ್ಯಾಸರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಕೇವಲ ನಾರಾಯಣನಿಂದ ಮಾತ್ರ ತಡೆಯಲ್ಪಡಲು ಸಾಧ್ಯವಾದ ಈ ಅಸ್ತ್ರವನ್ನು ವ್ಯಾಸರಿಂದ ಉಪಶಮನಗೊಳಿಸಲು ಸಾಧ್ಯವಾಗಿದ್ದು ಸ್ವಯಂ (ಆದಿ)ನಾರಾಯಣನಾದ್ದರಿಂದಲೇ. ಉತ್ತರದಲ್ಲಿ ಬದರಿಕಾಶ್ರಮ, ಶುಕಸ್ಥಲ, ನೈಮಿಶಾರಣ್ಯ, ಉತ್ತರಕಾಶಿ, ದೆಹಲಿ, ಕುರುಕ್ಷೇತ್ರವೇ ಮೊದಲಾದ ಕಡೆಗಳಲ್ಲೂ ದಕ್ಷಿಣದ ಉಡುಪಿ, ಮಂತ್ರಾಲಯದಂತಹ ಕೆಲವು ಸ್ಥಳಗಳಲ್ಲಿಯೂ ಶ್ರೀವೇದವ್ಯಾಸರನ್ನು ಭಗವಂತನ ಅವತಾರ ರೂಪವೆಂಬ ಚಿಂತನೆಯಲ್ಲಿ ಪೂಜಿಸುವುದನ್ನು ನಾವು ನೋಡಬಹುದು. ಇರಲಿ, ಮಂಗಲಪದ್ಯವನ್ನು ನೀವು ವ್ಯಾಖ್ಯಾನಿಸಿದ ರೀತಿ ಚೆನ್ನಾಗಿದೆ. ವ್ಯಾಸರನ್ನು ಕುರಿತು ಒಂದಿಷ್ಟು ಮಾಹಿತಿ ಕೊಡೋಣ ಅನ್ನಿಸಿತು ಅಷ್ಟೇ.
****************************
ಎನಗಿಂತ ಕಿರಿಯರಿಲ್ಲ
***************************
ಬಹಳ ಚೆನ್ನಾಗಿದೆ
ಇಸ್ಮಾಯಿಲರೇ, ಬಹಳ ಚೆನ್ನಾಗಿ ಅರ್ಥೈಸಿದ್ದೀರಿ. ಇದರ ಬಗ್ಗೆ ನನಗೆ ಏನೇನೂ ಅರ್ಥವಾಗಿರಲಿಲ್ಲ.
ಧನ್ಯವಾದಗಳು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net