ವ್ಯಾಕರಣ : ಕೆಂದೆಳನೀರು
ಮಹೇಶರು ಕೇಳಿದ ಪ್ರಶ್ನೆಗೆ ಉತ್ತರ ಬರೆಯಲು ಹೊರಟಂತೆ ನನಗೆನ್ನಿಸಿತು - ಸಂಪದದಲ್ಲಿ 'ಕನ್ನಡ ವ್ಯಾಕರಣ' ವಿಭಾಗ ತೆರೆದು ಅಲ್ಲೇಕೆ ಇಂತಹ ಚರ್ಚೆ ಮಾಡಬಾರದು? ಆದ್ದರಿಂದ ಹೊಸಲೇಖನವನ್ನಾಗಿ ಸೇರಿಸಿದ್ದೇನೆ; ನಾಡಿಗರೇ, ವ್ಯಾಕರಣ ವಿಭಾಗಕ್ಕೆ ಸೇರಿಸುವಿರೇನೋ ನೋಡಿ.
೧. ಕೆಂದೆಳನೀರು
ಇದು ಸಮಾಸದಿಂದಲ್ಲದೆ, ರೂಢಿಯಿಂದಾದದ್ದು ಎನಿಸುತ್ತದೆ. ಬಹುಶಃ ಹೀಗಾಗಿರಬಹುದು:
ಕಂದು + ಎಳನೀರು (ಕಂದುಬಣ್ಣದ ಎಳನೀರು) -> ಕಂದೆಳನೀರು (ಲೋಪಸಂಧಿ) -> ಕೆಂದೆಳನೀರು (ಕೆಂಪಗೆ ಕಾಣುವುದರಿಂದ ರೂಢಿಯಲ್ಲಿ ಹೀಗಾಗಿರಬಹುದು).
ಅಥವಾ:
ಕೆಂಚು + ಎಳನೀರು (ಕೆಂಚಾದ ಎಳನೀರು) -> ಕೆಂಚೆಳನೀರು -> ಕೆಂಜೆಳನೀರು -> ಕೆಂದೆಳನೀರು.
ಇದೇ ರೀತಿ ಕೆಂದೆತ್ತು (ಕೆಂಪಾದ, ಕೆಂಚಾದ ಎತ್ತು) ಕೂಡ ಕಂದೆತ್ತಿನಿಂದ ಬಂದಿರುವ ಸಾಧ್ಯತೆಯಿದೆ.
೨. ಕೆಂ, ಮುಂ, ಹಿಂ, ಹೆರ್ .. ಇವನ್ನು ಕನ್ನಡ ಉಪಸರ್ಗಗಳೆನ್ನಬಹುದೇ?
ಉಪಸರ್ಗವೆನ್ನಲು ಸ್ವಲ್ಪ ಕಷ್ಟ; ಏಕೆಂದರೆ ಉಪಸರ್ಗದ ವಿವರಣೆ ಹೀಗಿದೆ:
ಉಪಸರ್ಗೇಣ ಧಾತ್ವರ್ಥೋ ಬಲಾದನ್ಯತ್ರ ನೀಯತೇ \
ಪ್ರಹಾರಾಹಾರಸಂಹಾರವಿಹಾರಪರಿಹಾರವತ್ \\
ತಾ: ಉಪಸರ್ಗದಿಂದ ಧಾತುವಿನ ಅರ್ಥವು ಬಲವಂತವಾಗಿ ಬೇರೆಡೆ ಎಳೆಯಲ್ಪಡುತ್ತದೆ.
ಪ್ರ-ಹಾರ, ಆ-ಹಾರ, ಸಂ-ಹಾರ, ವಿ-ಹಾರ, ಪರಿ-ಹಾರ ದಂತೆ!
ಅಂದರೆ, ಹೃ/ಹರ್ ಎಂಬ ಧಾತುವಿನ 'ಸೆಳೆ' ಎಂಬರ್ಥವು ಪ್ರ, ಆ, ಸಂ, ವಿ, ಪರಿ ಎಂಬ ಬಿಡಿಭಾಗಗಳು ಸೇರಿದೊಡನೆಯೇ, ಪ್ರ-ಹಾರ(ಹೊಡೆ), ಆ-ಹಾರ(ತೆಗೆದುಕೊಂಡು ಬಾ), ಸಂ-ಹಾರ(ಕೊಲ್ಲು), ವಿ-ಹಾರ(ಸುತ್ತಾಡು), ಪರಿ-ಹಾರ(ಬಗೆಹರಿಸು)
ಎಂದು ಬದಲಾಗುತ್ತದೆ!
ಕನ್ನಡದಲ್ಲಿ ಕೆಂ, ಮುಂ, ಹಿಂ, ಹೆರ್ ಇತ್ಯಾದಿಗಳು ನಾಮಪದಗಳಿಗೆ ಬಳಕೆಯಾಗುವುದೇ ಹೆಚ್ಚು. ಕ್ರಿಯಾಧಾತುವಿಗೆ ಸೇರುವುದೂ ಉಂಟು; ಆದರೂ ಧಾತುವಿನ ಅರ್ಥವನ್ನು ಬದಲಿಸುವ ಸಮಯ ಬಹಳ ಕಡಿಮೆ. ಆದರೂ ಇಲ್ಲದಿಲ್ಲ. ಉದಾ:
ಮುಂ + ನಡೆ = ಮುನ್ನಡೆ
ಹಿಂ + ತಿರುಗು = ಹಿಂದಿರುಗು
ಬೆಂ + ಹತ್ತು = ಬೆಂಬತ್ತು
ಈ ಸಂದರ್ಭದಲ್ಲಿ ಇವನ್ನು ಉಪಸರ್ಗವೆಂದರೂ ತಪ್ಪೇನಿಲ್ಲ ಎನಿಸುತ್ತದೆ.
ನಿಮ್ಮವ
ಬೆನಕ

- Login or register to post comments
- 1214 hits
- Email this forum





RSS:
ವ್ಯಾಕರಣ
ಮಹೇಶರು ಕೇಳಿದ ಪ್ರಶ್ನೆಗೆ ಉತ್ತರ ಬರೆಯಲು ಹೊರಟಂತೆ ನನಗೆನ್ನಿಸಿತು - ಸಂಪದದಲ್ಲಿ 'ಕನ್ನಡ ವ್ಯಾಕರಣ' ವಿಭಾಗ ತೆರೆದು ಅಲ್ಲೇಕೆ ಇಂತಹ ಚರ್ಚೆ ಮಾಡಬಾರದು? ಆದ್ದರಿಂದ ಹೊಸಲೇಖವನ್ನಾಗಿ ಸೇರಿಸಿದ್ದೇನೆ; ನಾಡಿಗರೇ, ವ್ಯಾಕರಣ ವಿಭಾಗಕ್ಕೆ ಸೇರಿಸುವಿರೇನೋ ನೋಡಿ.
ಬೆನಕ
ಕೆಂದೆಳೆನೀರು
ಸಂಧಿಗಳು ನನ್ನ ಪ್ರಕಾರ, ನಜರು ಸ್ವಾಭಾವಿಕವಾಗೆರಡು ಪದದಗಳನ್ನು ಕೂಡಿಸುಚ್ಚರಿಸುವಾಗ ಮೂಡುತ್ತವೆ.
ಹಳೆಯ ಸೂತ್ರಗಳು ಬದಲಾಗಬೇಕು. ಹೊಸಸೂತ್ರಗಳ ಸೇರ/ಸೇರಿಸಬೇಕು.
ತಣ್+ನೀರು = ತಣ್ಣೀರು ಇದು "ಣ"ಕಾರ ಆದೇಶ ಸಂಧಿ.
ಕಣ್+ಪನಿ = ಕಂಬನಿ, ಇದು "ಮ"ಕಾರ ಮತ್ತು "ಬ"ಕಾರ ಆದೇಶ ಸಂಧಿ.
ಹೋರಾಟ = ಹೋರ + ಆಟ ?
ಹಾಗಾದರೆ ಹೋರ ಎಂದರೇನು?
ಹೀಗೆ ಸುಮಾರು ಪದಗಳಿಗೆ ಸಮಗ್ರಾರ್ಥವು ಗೊತ್ತು ಹೊರತು, ಬಿಡಿಸಿ ವಿವರಣೆಯು ಸಿಗದು.
ಸವಿಯೊದಗೆ,
ಮಹೇಶ
ಹೋರಾಟ
ಮಹೇಶರೇ,
ಹೋರಾಟ ಎಂಬುದನ್ನು ಹೋರ + ಆಟ ಎಂದು ಬಿಡಿಸುವುದು ಆಭಾಸ!
ನಿಜವಾಗಿ ಅದು ಹೋರು + ಆಟ = ಹೋರಾಟ (ಲೋಪಸಂಧಿ)
ಪೋರ್ - ಹೋರ್ - ಹೋರು = ಕಾದು, ಸೆಣೆಸು ಎಂದರ್ಥ.
ಇದೊಂದು ಅಪರೂಪದ ಪದ. ಕ್ರಿಯೆಗಿಂತ ಅದರ ನಾಮಪದದ ರೂಪವೇ ಹೆಚ್ಚು ಬಳಕೆಯಲ್ಲಿದೆ.ಕನ್ನಡ ತದ್ಧಿತವೇ ಇರಬಹುದು.
ಕೆಲವಕ್ಕೆ ಬಿಡಿಯರ್ಥ ತಿಳಿಯಲು ಹಳೆಗನ್ನಡ ಚೆನ್ನಾಗಿ ಗೊತ್ತಿರಬೇಕಾಗುತ್ತದೆ; ಈಗದು ಬಹಳ ಕಷ್ಟ!
ಉದಾಹರಣೆಗೆ ನಡುಗನ್ನಡದ 'ಮೇಲುದ' ಎಂಬ ಪದವನ್ನೇ ನೋಡಿ. ಹೊದಿಕೆ/ಉತ್ತರೀಯಕ್ಕೆ ಸರಿಯಾದ ಪದ.
ಬಿಡಿಸಿದರೆ ಮೇಲ್ + ಉದ = ಮೇಲಿನ ನೀರು ಎಂದಾಗುತ್ತದೆ! ಈ ಪದ ನೆನೆಪಾದಾಗಲೆಲ್ಲ ಕುಮಾರವ್ಯಾಸನ ಈ ಸಾಲುಗಳು ನೆನಪಾಗುತ್ತವೆ:
ಜವನ ಮೀಸೆಯನೆಳೆದನೋ ಭೈ
ರವನ ದಾಡೆಯಲುಗಿಸಿದನೋ ಮೃ
ತ್ಯುವಿನ ಮೇಲುದ ಸೆಳೆದನೋ ಕೇಸರಿಯ ಕೆಣಕಿದನೋ !
(ವಿರಾಟಪರ್ವ)
ನಿಮ್ಮವ
ಬೆನಕ
ಭಲೆ ಚದುರರೇ!
ಬೆನಕರೆ,
ನನಗೆ ಹಳೆಗನ್ನಡವನ್ನೋದಲು ಬಹಳ ಕಷ್ಟ. ನಾನು ಹೆಚ್ಚು ಸಂಸ್ಕೃತವನ್ನೇ ಓದಿರುವುದು.
ನಿಮ್ಮ ವಿವರಣೆಗೆ ಎರಡು ಮಾತಿಲ್ಲ. ನಾನು ಬೆಂಗಳೂರಿನಲ್ಲಿ ಯಾರಾದರು ಹಳೆಗನ್ನಡವನ್ನು ಕಲಿಸುವರೆಯೆಂದು ಹುಡುಕುತ್ತಿದ್ದೇನೆ.
ನಾನು ಇನ್ನು ಕೆಲವು ಪದಗಳನ್ನು ಪ್ರಸ್ತಾಪಿಸುವೆನು. ಅವಕ್ಕೂ ಹೀಗೆ ವಿವರಿಸಿ. ನನ(ಮ)ಗೆ ಬಹಳ ಉಪಕಾರಗಳಾಗುವುವು.
ಚತುರ = ಚದುರ(ತದ್ಭವ)
ಪೋಲಿಕಾ = ಹೋಳಿಗೆ(ತದ್ಭವ?)
"ಮಕ್ಕಳು" ಇದು ಹೇಗೆ? ತಮಿಳಿನಲ್ಲಿ ಮಕ್ಕಳು ಎಂದರೆ ಜನರೆಂದು.
ಸವಿಯೊದಗೆ,
ಮಹೇಶ
ಮಗುಗಳು !!
ಮಹೇಶರೇ,
೧.ಚತುರ(ತ್ಸ) - ಚದುರ(ದ್ಭ) (ಕೊಳಲನೂದುವ ಚದುರನಾರೆ...)
೨.ಪೋಲಿಕಾ(ತತ್ಸಮ) ಎಂದರೆ ಒಂದು ವಿಧದ ಸಿಹಿರೊಟ್ಟಿ ಎಂಬರ್ಥ ಸಂಸ್ಕೃತದಲ್ಲಿದೆ. ಅದರ ರೂಪಾಂತರ ಹೀಗೆನಿಸುತ್ತದೆ:
ಪೋಲಿಕಾ -> ಪೋಲಿಕೈ(ತಮಿಳು) -> ಪೋಳಿಗೈ -> ಪೋಳಿಗೆ -> ಹೋಳಿಗೆ (ತದ್ಭವ)
ನಿಮ್ಮ ಊಹೆ ಸರಿಯಿದೆ.
೩. ಮಕ್ಕಳು ಎಂಬ ಪದ 'ಮಗು' ಎಂಬುದರ ಬಹುವಚನವಾದರೂ, ಇತರ ಪದಗಳಂತೆ 'ಕಳ್/ಗಳ್' ಪ್ರತ್ಯಯ ಸೇರಿ ಆಗಿಲ್ಲವೆಂದು ನನ್ನ ಅನಿಸಿಕೆ.
ಅದು ಶಿಶುಗಳ ಗುಂಪು ಎಂಬುದಕ್ಕೆ ಒಂದೇಪದ. 'ಜನ' ಎಂಬ ಪದವೂ ಹೀಗೆಯೇ - ವ್ಯಕ್ತಿಗಳ ಗುಂಪು ಎಂಬುದಕ್ಕೆ ಒಂದೇ ಪದ. ಮಾರ್ಪಾಟು ಹೀಗಿರಬಹುದು:
ಮಕ್ಕಳ್(ತಮಿಳು: ಪ್ರಜೆಗಳು, ಶಿಶುಗಳು, ಕಿರಿಯರು) -> ಮಕ್ಕಳು(ಕನ್ನಡ: ಶಿಶುಗಳು, ಪ್ರಜೆಗಳು).
ಆದ್ದರಿಂದ, ಮಗು + ಗಳು --> ಮಗುಗಳು ! ಇದೆ, ಈ ಪದ ಕನ್ನಡದಲ್ಲಿದೆ! ಮಗುಗಳು ಎಂಬ ಪ್ರಯೋಗವಿರುವ ಪ್ರಸಿದ್ಧ ಉದಾಹರಣೆ ಇಲ್ಲಿದೆ:
ಜಗದೋದ್ಧಾರನ ಆಡಿಸಿದಳ್ ಯಶೋದೆ ..... |ಪಲ್ಲವಿ|
ಜಗದೋದ್ಧಾರನ ಮಗನೆಂದು ತಿಳಿಯುತ ..... |ಅನುಪಲ್ಲವಿ|
ಚರಣ-೧
ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳ್ ಯಶೋದೆ
........
(ಪುರಂದರದಾಸರ ದೇವರನಾಮ)
ಬೇರೆಯ ವ್ಯುತ್ಪತ್ತಿ ತಿಳಿದವರು ತಿಳಿಸಿದರೆ ಉಪಕಾರವಾಗುತ್ತದೆ.
ನಿಮ್ಮವ
ಬೆನಕ
ಜ್ಞಾನ ಭಂಡಾರ,
ಬೆನಕರೇ, ಎಲ್ಲಿ ಅಡಗಿಸಿಟ್ಟಿದ್ದೀರಿ ಇಷ್ಟೆಲ್ಲ ಜ್ಞಾನವನ್ನು? ನಿಮ್ಮ ಪ್ರವಾಸ ಕಥನ ನೋಡಿದರೆ ನಿಮಗೆ ೩೦ ವರ್ಷ ಇರಬಹುದು ಎನ್ನಿಸುತ್ತದೆ. ಆದರೆ ನಿಮ್ಮ ಜ್ಞಾನ ನೋಡಿದರೆ ೭೦ ಇರಬಹುದೇ?. ತಮ್ಮ ಭಾವ ಚಿತ್ರ ಮತ್ತು ಜನ್ಮದಿನ ಮುಚ್ಚಿಡಬೇಡ್ರಿ. ತಿಳಿದಿದ್ರೂ ಮುಚ್ಚಿಟ್ಟರೆ ವಿಕ್ರಂ ಮತ್ತು ಬೇತಾಳ.....!
ಅಹೋರಾತ್ರ
ಸಾಹಿತ್ಯ ಭಂಡಾರ
ಅದಿರ್ಲಿ. ಸಾಹಿತ್ಯ ಭಂಡಾರವಾದ ನೀವ್ಯಾಕೆ ಮುಸುಕು ಧರಿಸಿದ್ದೀರಿ. ನಿಮಗೆ ಅಂಚೆ ಸ್ವೀಕರಿಸುವ ಮನಸ್ಸಿಲ್ಲವೇ?
ನಿಮ್ಮ ಎಲ್ಲ ಕೃತಿಗಳಿಗೂ ನನ್ನ ಒಂದು ಸಾಲಿನ ಪ್ರತಿಕ್ರಿಯೆ - ಸೂಪರ್, ಸಂಪದದ ಶ್ರೀಮಂತಿಕೆಯನ್ನು ಹೆಚ್ಚಿಸುತ್ತಿರುವ ಅಸಾಮಾನ್ಯ. ರಾತ್ರಿ ಹಗಲು ಸಾಹಿತ್ಯ ಕೃಷಿ ನಡೆಸುತ್ತಿರುವ (ನನ್ನ ಅನಿಸಿಕೆಯಷ್ಟೆ - ತಪ್ಪಿದ್ದರೆ ತಿದ್ದಿ) ಅಹೋರಾತ್ರ.
ವ್ಯಾಕರಣವನ್ನು ಸರಳವಾಗಿ ಜೀರ್ಣವಾಗುವಂತೆ ಉಣಬಡಿಸುತ್ತಿರುವ ಬೆನಕರಿಗೆ ಸಹಸ್ರ ವಂದನೆಗಳು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ತಮ್ಮ ಆಶಿರ್ವಾದ 'ಶ್ರೀ' ನಿವಾಸರೆ.
ಅಹೋರಾತ್ರ
ಮೇಲುದ - ಮೇಲುಡೆ ಇರಬಹುದೇ?
ಮೇಲುದ ಮೇಲುಡೆ ಇರಬಹುದೆ ? ಮೇಲುಡೆ - ಮೇಲ್ + ಉಡೆ ? ( ಉಡುಗೆ?)
-ಶ್ರೀಕಾಂತ ಮಿಶ್ರೀಕೋಟಿ
ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ