ಕನ್ನಡಿಗರೇಕೆ ಹೀಗೆ?
ನೀವು ಇದನ್ನು ಗಮನಿಸಿರುತ್ತೀರೋ ಇಲ್ಲವೋ ಗೊತ್ತಿಲ್ಲ. office ಗಳಲ್ಲಿ, ಅದರಲ್ಲೂ cosmopolitan ಆಗುತ್ತಿರುವ ಬೆಂಗಳೂರಿನಲ್ಲಂತೂ ಕನ್ನಡಕ್ಕೆ ಪ್ರಾಧಾನ್ಯತೆ ದೊರಕುತ್ತಿಲ್ಲ.
ಮೊದಲನೆಯದಾಗಿ, ಇದು ಬೇರೆ ಯಾವುದೇ ಭಾಷೆಯ ಬಗ್ಗೆ ಹೇಳುವುದಕ್ಕಲ್ಲ. ಏನಿದ್ದರೂ ಕನ್ನಡ ಜನರ ಬಗ್ಗೆ.
ನಾನು ಕೆಲಸ ಮಾಡುತ್ತಿರುವಲ್ಲಿ, ಭಾರತದ ಎಲ್ಲಾ ಕಡೆಗಳಿಂದ ಬಂದವರೂ ಇದ್ದಾರೆ. ಪಕ್ಕದ ಆಂಧ್ರ, ತಮಿಳುನಾಡಿನವರಿಂದ ದಿಲ್ಲಿಯವರೆಗೂ, ಕೇರಳದವರೆಗೂ ಇದ್ದಾರೆ. ನಾನು ನೋಡಿದ ಹಾಗೆ, ಕೆಲಸಕ್ಕೆ ಸೇರುವಾಗ ಸಾಮಾನ್ಯವಾಗಿ, ಒಬ್ಬರಿಗೊಬ್ಬರು ಗೊತ್ತೇ ಇರುವುದಿಲ್ಲ. ಆದರೆ, ಸೇರಿ ಒಂದು ತಿಂಗಳಾಗುವಷ್ತರಲ್ಲಿ, ಒಂದು ಪ್ರದೇಶದವರೆಲ್ಲ ತುಂಬಾ close ಆಗ್ಬಿಡ್ತಾರೆ.
ಆದ್ರೆ ನಮ್ಮ ಕನ್ನಡದವರೆಲ್ಲ ಯಾಕೆ ಹಾಗೋ ಗೊತ್ತಿಲ್ಲ. ಸೇರಿ ಎಷ್ತೋ ತಿಂಗಳಾದರೂ ಬಹಳಷ್ತು ಜನ ಪರಿಚಯವೇ ಆಗಿರಲ್ಲ.
ಜೊತೆಗೇ, ಬೇರೆಯವರೆಲ್ಲಾ ಅವರವರ ಭಾಷೆಯಲ್ಲಿ ಮಾತನಾಡಿಕೊಂಡರೆ, ನಮ್ಮವರು ಕನ್ನಡದಲ್ಲಿ ಮಾತಾಡಿದರೆ "ಚೆನ್ನಾಗಿರಲ್ಲವೇನೋ..." ಅನ್ನುವ ಹಾಗಾಡ್ತಾರೆ.
ಈ ಭಾವನೆ ಬದಲಾಗದಿದ್ದರೆ, ಮುಂದೆ ಕನ್ನಡಕ್ಕಾಗುವ ನಷ್ತ ದೊಡ್ಡ ಪ್ರಮಾಣದ್ದಾಗಿರುವುದು ಖಂಡಿತ.
ಸದಸ್ಯರು ತಮ್ಮ ತಮ್ಮ ಅಭಿಪ್ರಾಯ/ಅನುಭವಗಳನ್ನು ಹಂಚಿಕೊಂಡರೆ ಪ್ರಶಂಸನೀಯ.
-ಮೇಘಶ್ಯಾಂ

- Login or register to post comments
- 909 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ನಮ್ಮಲ್ಲೇಕೆ ಈ ಕೀಳರಿಮೆ?
ನನಗನ್ಸುತ್ತೆ, ನಾವು ಕನ್ನಡಿಗರು ಯಾಕ್ ಹೀಗೆ ಯಾಕ್ ಹೀಗಲ್ಲ ಅಂತ ಪದೇ ಪದೇ ವಿಚಾರ ಮಾಡ್ತಾ ಮಾಡ್ತಾ ನಮ್ ನಮ್ಮಲ್ಲೇ ಕೀಳರಿಮೆ ಬೆಳಸ್ಕೊಳ್ತಾ ಇದ್ದೀವಿ ಅಂತ! ನೀವೆಲ್ಲಾ ಏನ್ಹೇಳ್ತೀರಿ?
ಇದರರ್ಥ ನನಗೆ ಇರೋ ಸಂಗತಿ ಏನು ಅಂತ ಗೊತ್ತಿಲ್ಲ ಅಂತಲ್ಲ. ನಾನೊಪ್ಕೊತೀನಿ, ನಮ್ಮ ಜನರು ಹೊರಗಡೆ ಪರಸ್ಪರ ಮಾತಾಡ್ಕೊಳ್ಳೊವಾಗ ಕನ್ನಡ ಬಳಸೊದ್ ಬಹಳ ಕಮ್ಮಿ. ಆದರೆ, ನನ್ನ ಪ್ರಕಾರ, ಇದೆಲ್ಲಾ ನಮ್ ಮೇಲಿದೆ. ಅಂದರೆ, ಇ ಹೊತ್ನಿಂದ, ನಾವೆಲ್ಲಾ ಉಳಿದ್ ಕನ್ನಡ್ದೋರ್ ಹತ್ರ ಕನ್ನಡ್ದಲ್ಲೇ ಮಾತಾಡೋಣ (ಸ್ವಲ್ಪ ಇಂಗ್ಲಿಷ್ ಕಲಬೆರಕೆ ಆಗ್ಬಹುದು ಆದರೆ, ಆ ಮಟ್ಟಿಗೆ ಸ್ವಲ್ಪ ಸುಧಾರಿಸ್ಕೊಬೇಕು!!), ಮತ್ತು ಕನ್ನಡಿಗರೇ ಹೀಗೆ, ಹಾಗೆ, ಅಂತ ಹೇಳೋದನ್ನ ನಿಲ್ಲಿಸ್ ಬಿಡೋಣ. ಆಗ್ ನೋಡಿ ಹೇಗ್ ಈ ಭಾವನೆ ಬದಲಾಗುತ್ತೆ ಅಂತ!
ಇದು ನನ್ ಅಭಿಪ್ರಾಯ. ನಿಮ್ಮೆಲ್ಲರ ಅನಿಸಿಕೆ ಏನು?
ಅಭಿಮಾನ್ಯ ಶೂನ್ಯತೆಯೇ ಎಲ್ಲದಕ್ಕೂ ಉತ್ತರವಲ್ಲ
ನಮ್ಮವರ ಅಭಿಮಾನ್ಯಶೂನ್ಯತೆಯ ಬಗ್ಗೆ ಯಾವಾಗಲೂ ನಾವು ಮುಂದು.
ಆದರೆ,
೧. ಹೊರಗಿನಿಂದ ಬಂದವರು ತಮ್ಮತನವನ್ನು ಉಳಿಸಿಕೊಳ್ಳುವುದಕ್ಕೆ ಹೆಚ್ಚು ಪ್ರಯತ್ನ ಪಡುತ್ತಾರೆ. ಅದಕ್ಕಾಗಿ ತಮ್ಮವರನ್ನು ಮೊದಲು ಹುಡುಕುತ್ತಾರೆ. ಇದಕ್ಕೆ ನಾವು ಹೊರತಲ್ಲ. ಉದಾಹರೆಣೆಗೆ ನಾನು ಗೋವಾ ಪ್ರವಾಸಕ್ಕೆ ಹೋದಾಗ ಕನ್ನಡ ಅಕ್ಷರಗಳನ್ನು ನೋಡಿದಾಗಲೆಲ್ಲ ಹಲ್ಲು ಕಿರಿಯುವಷ್ಟು ಸಂತೋಷವಾಗುತ್ತಿತ್ತು.
೨. ಕನ್ನಡದಲ್ಲಿ ಖಂಡಿತ ಮಾತನಾಡಿ. ಬಹಳಷ್ಟು ಜನ ನಿಸಾರ್ ಅಹಮದ್ ಹೇಳಿದಂತೆ "ಕುರಿಗಳು ಸಾರ್ ಕುರಿಗಳು".. ನೀವು ಶುರು ಮಾಡಿದ್ರ ಅವರೂ "ಚೆನ್ನಾಗಿರಲ್ಲವೇನೋ..." ಅನ್ನೋ ಭಯ ಬಿಟ್ಟು ಮಾತಾಡ್ತಾರೆ. ಹಾಗಂತ, ಇದು ಒಂದೇ ದಿನದಲ್ಲಿ ಆಗೋ ಕೆಲಸ ಅಲ್ಲ. ಮಂದಸ್ಮಿತರಾಗಿಯೇ ಕನ್ನಡದಲ್ಲಿ ಮಾತನಾಡಿ. ಕನ್ನಡ ಮಾತಾಡೊಲ್ಲ ಅನ್ನೋ ಒಂದು ಮಾತಿಗೆ ನಿಷ್ಟುರ ಕಟ್ಟಿಕೊಳ್ಳೋದು ಬೇಡ ಅಲ್ವೆ?
ನಾನಂತೂ ನಮ್ಮ ಆಫೀಸಿನಲ್ಲಿ ಕನ್ನಡಿಗರ ಜೊತೆ ಕನ್ನಡದಲ್ಲೇ ಮಾತನಾಡುವುದು. ಕನ್ನಡೇತರರಿಗೂ ಅವಕಾಶ ಸಿಕ್ಕಾಗಲೆಲ್ಲಾ ಸ್ವಲ್ಪ ಕನ್ನಡದ ಬಗ್ಗೆ ಉಪದೇಶ(ಕೊರೆತ) ಮಾಡುತ್ತೇನೆ.
ಕನ್ನಡದ ಕೆಚ್ಚು
ನಾವೆಲ್ಲ ಬಹುಶಃ ಬರಿ ಬೆಂಗಳೂರು ಅಥವಾ ಕರ್ನಾಟಕದಾಚೆ ಇರುವವರಿರಬೇಕು.
ನಾನೇ ನೋಡಿರವಂತೆ ನಮ್ಮೂರಿನಲ್ಲಿ ಯಾರಾದರು ಸಿಕ್ಕಾಬಟ್ಟೆ ಇಂಗ್ಲೀಷಿನಲ್ಲಿ ನಲಿದರೆ, ಅವರ ಮುಖಕ್ಕೆ ಹೊಡೆದಂತೆ "ನಿಮಗೆ ಕನ್ನಡ ಬರೋಲ್ವೆ?" ಎಂದು ನೇರವಾಗಿ ಕೇಳಿಬಿಡುತ್ತಾರೆ. ಮನೆಯವರಾದರೆ ಆಯಿತು!, ಉಗಿದು ಉಪ್ಪಿನಕಾಯಿ ಹಾಕುತ್ತಾರೆ.
ಇಂದಿಗೂ ಕನ್ನಡವು ಮಂಡ್ಯ, ಮೈಸೂರು, ಹುಬ್ಬಳ್ಳಿ, ಹಾಸನ, ಚಿಕ್ಕಮಗಳೂರು, ತುಮಕೂರು, ಚಾಮರಾಜನಗರ, ಶಿವಮೊಗ್ಗ ಮುಂತಾದ ಜಿಲ್ಲೆಗಳು, ಅಲ್ಲದೆ ಕಡಲಾಚೆಯೂ ರಾರಾಜಿಸುತ್ತಿದೆ.
ನಮ್ಮೂರಿನಲ್ಲಿ ಕನ್ನಡಸಿನಿನಮಾ ಬಿಟ್ಟು ಬೇರಾವ ಸಿನಿಮಾ ಓಡದು. ಅದು ಗಬ್ಬೋ ಗಿಬ್ಬೋ, ರಿಮೇಕೋ, ಗಿಮೇಕೋ ಅದು ಕನ್ನಡಸಿನಿಮಾ ಎಂದು ಜನ ಹೋಗುತ್ತಾರೆ.
ಆದರೆ ನಾನು ಗಮನಿಸಿದ್ದೀನಿ, ಈ ಹಾಳು ಬೆಂಗಳೂರಿನಂತ ಪಟ್ಟಣದವರಿಗೆ, ಬಂದಿರುವುದು ದೊಡ್ಡರೋಗ. ಬನ್ನಿ ಕನ್ನಡ ಚಿತ್ರಕ್ಕೆ ಹೋಗೋಣ ಎಂದರೆ, "ಅವೇನು ಬರಿ ರಿಮೇಕು ಎನ್ನುವರು". ಸರಿ ಮಾತಾಡಿಸಿದರೆ, ಏನೋ ಬಹಳ ಸಭ್ಯರು, ಇವರನ್ನು ಬಿಟ್ಟರಿಲ್ಲವೆಂಬಂತೆ ಮೊದಲು ಒಂದು ಕಂತೆ ಸಂಸ್ಕೃತದ ಪೊಳ್ಳು ಶಿಷ್ಟಾಚಾರಗಳು, ಮುಂದೆ ಒಂದು ಮಣ ಇಂಗ್ಲೀಷು, ಇನ್ನೊಂದು ಮಣ ಸಂಸ್ಕೃತ ಸೇರಿಸಿ ಮೇಲೆ ಒಂದು ಚಟಾಕು ಕನ್ನಡದೊಂದಿಗೆ ಮಾತಾಡುತ್ತಾರೆ.
ಕೆಲವರಂತೂ ಒಂದೇ ಸಮನೆ, ಕನ್ನಡ ಪಾತಾಳಕ್ಕೆ ಬಿದ್ದು ಹೋಗಿದೆ, ಎತ್ರಪ್ಪೋ ಎಂದು ಬಡಿದುಕೊಳ್ಳುವರು. ಆದರೆ ಅವರು ಮಾತ್ರ ಯಾವುದಕ್ಕೂ ಮುನ್ನುಗರು. ಬರಿ ಹಿಂದೆ ಕುಳಿತು ಒಂದು ಮಣ ಮಾತಾಡವುದರಲ್ಲಿ ಎತ್ತಿದಕೈ. (ನನ್ನಂತೆ ? )
ಇರಲಿ, ಈ ಎದೆಯುರಿ, ಹಲ್ಲಕಡಿತಗಳಲ್ಲೆ ಒಂದೆಡೆ ಇಡೋಣ.
ಇಲ್ಲಿ ಸಂಪದದಲ್ಲಿ ಸೇರಿದವರಾದರು ಕಡೆಪಕ್ಷ, ನಮ್ಮ ಮನೆಗಳಲ್ಲಿ ಸರಿಯಾಗಿ ಕನ್ನಡ ಮಾತಾಡೋಣ. ಕನ್ನಡವಿಲ್ಲವೆಂದು ಕೊರಗದೆ, ಬೆಂಗಳೂರಿನಲ್ಲಿ ಮುಖ್ಯವಾಗಿ, ಮತ್ತುಎಲ್ಲೆಡೆ ಕನ್ನಡವು ಬೆಳದಿಂಗಳ ಚಂದಿರನಂತೆ ತಂಪಗಿದ್ದರೂ, ಸುತ್ತಲಿರುವ ಎಲ್ಲ ಗ್ರಹಚುಕ್ಕಿಗಳಿಗಿಂತ ಹೊಳೆಯುವಂತೆ ಬೆಳಗಿಸೋಣ. (ಗ್ರಹ ಯಾವುದೆಂದು ಗೊತ್ತಲ್ಲ
).
"ಪುರುಷಪ್ರಯತ್ನವಿಲ್ಲದೆ ದೈವಾನುಗ್ರಹವೂ ಫಲಿಸದು".
ಇದು ಒಬ್ಬರು, ಇಬ್ಬರು ಮಾಡುವ ಕೆಲಸವಲ್ಲ. ಕೋಟಿಕೋಟಿ(ಕೋಟಿ ಇಲ್ಲದಿದ್ದರು, ಸಾವಿರವಾದರು ಸಾಕು, ಸಂಪದದಂತೆ
) ಕನ್ನಡಿಗರ ಒಕ್ಕೊರಲು ಬೇಕು, ಕೆಚ್ಚದೆ ಬೇಕು, ನುಡಿಯೊಲವಿರಬೇಕು. ಇವೆಲ್ಲವೂ ನಮ್ಮಲ್ಲಿದೆ, ಆದರದು ಅಡಗಿದೆ, ಮಲಗಿದೆ ಅದನ್ನು ಹೊರಗೆ ತಂದು, ಬಡಿದೆಬ್ಬಿಸಬೇಕಷ್ಟೆ.
ಕನ್ನಡಿಗರು ನಿರಭಿಮಾನಿಗಳಲ್ಲ. ನಮ್ಮ ಅಭಿಮಾನವನ್ನು ನಾವು ಹೆಚ್ಚು ಪ್ರದರ್ಶಿಸಿವುದಿಲ್ಲವಷ್ಟೆ. ಕಾಣದ್ದು ಇಲ್ಲವೆಂದಲ್ಲ. ಅದು ಕೇವಲ ನಮಗೆ ಕಾಣದಷ್ಟೆ.
ಕೊಸರು : ೨೨೦೦ ವರುಷಗಳಿಂದ ಬದುಕುತ್ತಿರುವ ಕನ್ನಡವು ಬಲಹೇನವೆ, ಇಂತಹ ನುಡಿಯನಾಡುವವರಿಗೆ ಕೀಳರಿಮೆಯೆ? ..
-ಮಹೇಶ