ಕನ್ನಡದಲ್ಲಿನ ಒತ್ತಕ್ಷರಗಳು - ಭಾಗ ಎರಡು (೨)
ಇದು "ಕನ್ನಡದಲ್ಲಿನ ಒತ್ತಕ್ಷರಗಳು" ಚರ್ಚೆಯ ಮುಂದುವರಿದ ಭಾಗ. ಇದರ ಮೊದಲ ಕಂತು ಈ ಕೊಂಡಿಯಲ್ಲಿದೆ. ಕುತೂಹಲವಿದ್ದರೆ ಓದಿ ನೋಡಿ.
ಅಲ್ಲಿ ನಾನು "ಅಷ್ಟು, ಇಷ್ಟು, ಎಷ್ಟು" ಪದಗಳ ಬಳಕೆ ತೋರಿಸಿ ಕನ್ನಡದಲ್ಲಿ ಸಂಸ್ಕೃತದ ಹೊರತಾಗಿಯೂ ಸಂಯುಕ್ತಾಕ್ಷರಗಳು ಇದೆ ಎಂದು ಪ್ರತಿಪಾದಿಸಿದ್ದೆ. ಆದರೆ ಸಂಗನಗೌಡರು ಮತ್ತಷ್ಟು ಬಳಕೆಯನ್ನು ತೋರಿಸಲು ಕೇಳಿದ್ದರು.
"ಸಮ್ಮುಕಕ್ಕರಗಳು, ಕನ್ನಡದಲ್ಲಿ ತಾನೇ ತಾನಾಗಿ ಬೆಳೆದು ಹುಟ್ಟಿವೆ ಎಂಬುದಕ್ಕೆ ಬೇರೇ ಕನ್ನಡ ಪದದ ಮಾದರಿ ಕೊಡಿ. ಇಲ್ಲಿ ನೀಡಿದ ಒಂದೇ ಒಂದು ಮಾದರಿಯ ಸರಿ ಬಳಕೆ ಹೇಗೆ ಎಂಬುದನ್ನು ಬರೆದಿದ್ದೇನೆ, ಬೇರೆ ಯಾವುದಾದರೂ ಪದವನ್ನು ಹುಡುಕಿ."
ಸರಿ ಈ "ಅಷ್ಟು, ಇಷ್ಚು, ಎಷ್ಟು" ಗಳನ್ನು ಬಿಟ್ಟು ಬೇರೆ ಪದಗಳ ಹುಡುಕಾಟದಲ್ಲಿದ್ದಾಗ ನನಗೆ ಸಿಕ್ಕಿದ್ದು, ಮತ್ತಷ್ಟು ಕುತೂಹಲವನ್ನುಂಟು ಮಾಡುವ ಪದಗಳು. ಇವುಗಳಲ್ಲಿ ಕೆಲವು ಬಹಳ ಹಿಂದೆಯೇ ಬಳಸಲ್ಪಟ್ಟಿವೆ. (ಗಮನಿಸಿ ನಾನು ನುಸುಳಿವೆ ಪದ ಬಳಸಿಲ್ಲ).
೧. ಅಣ್ಮು ಎಂದರೆ ಪರಾಕ್ರಮ
೨. ಸೂಳ್ಪಡೆಯಲಪ್ಪುದು
೩. ತಾಳ್ಮೆ
೪. ಜಾಣ್ಮೆ
೫. ಕ್ರಿಯಾಪದಗಳಲ್ಲಿ ಸಂಯುಕ್ತಾಕ್ಷರದ ಬಳಕೆ
ಮಾಡಲ್ಪಟ್ಟಿದೆ
ಬಳಸಲ್ಪಟ್ಟಿದೆ
ಹೇಳಲ್ಪಟ್ಟಿದೆ
ಕತ್ತರಿಸಲ್ಪಟ್ಟಿದೆ
ಕಟ್ಟಲ್ಪಟ್ಟಿತ್ತು.
......ಹೀಗೆ.
ಇವೆಲ್ಲವೂ ಕನ್ನಡ ಪದಗಳಲ್ಲವೇ ?
ಇದರಲ್ಲಿ ಮೊದಲೆರೆಡು ಪಂಪನ ವಿಕ್ರಮಾರ್ಜುನ ವಿಜಯದಲ್ಲಿ ಬಳಲ್ಪಟ್ಟಿದೆ. ಇದರ ಬಗ್ಗೆ ಸಂಪದದಲ್ಲಿಯೇ ಮಾತುಕತೆ ನಡೆದಿತ್ತು.
ಸವಿಯೊದಗು.

- Login or register to post comments
- 1036 hits
- Email this forum





RSS:
ಮತ್ತೊಂದಿಷ್ಟು
ಸುನಿಲರೇ,
ತುಂಬ ಸರಿಯಾಗಿ ಬರೆದಿದ್ದೀರಿ. ಜೊತೆಗೆ ಮತ್ತೊಂದಿಷ್ಟು ಉದಾಹರಣೆಗಳಿಲ್ಲಿವೆ:
ಹಳಗನ್ನಡ:
ಮೆಲ್ವಾತು, ನಲ್ಮೆ, ಪೊಳ್ತು, ಬೆಳ್ದಿಂಗಳು, ಪೆರ್ಮೆ, ಬೆಳ್ಮುಗಿಲು, ಆಯ್ತು, ಅಲ್ತೆ ಇತ್ಯಾದಿ. ಉದಾ:
"ಋಷಿವರ್ಯ, ತಪದಲ್ಲಿ ಕುಳ್ಳಿರಿದು ನೀವೆನಿತು ಪೊಳ್ತಾಯ್ತು?" "ಯುಗವೆರಡು ಕಳೆದಾಯ್ತು"
"ಕನ್ನಡಂ ಕತ್ತುರಿಯಲ್ತೆ!"
ನಡುಗನ್ನಡ:
ಕೇಳ್ವ, ಪೇಳ್ವುದು, ಕೇಳ್ದರಿಗೆ, ಬೀಳ್ಕೊಡು, ಸೀಳ್ಗರೆ, ಹೊಯ್ಲು, ನಿಡುಸುಯ್ದು ಇತ್ಯಾದಿ. ಉದಾ:
ಗಿಳಿಯ ಮರಿಯನು ತಂದು ಪಂಜರ
ದೊಳಗೆ ಪೋಷಿಸಿ, ಕಲಿಸಿ ಮೃದುನುಡಿಗಳನು
ಲಾಲಿಸಿ ಕೇಳ್ವ ಪರಿಣತರಂತೆ ನೀನೆನಗೆ |(ಕನಕದಾಸರು)
"...ಬಳಿಕ ಪೇಳ್ವುದು ಜಯವ"
"..ಬಾಯ ಬಸಿರಿನ ನೊಸಲ ಹೊಯ್ಲಿನ"
"....ಮಾಳ್ಪುದು ಮತಿಗೆ ಮಂಗಳವ"
"..ಸೂಳು ಬಂಟರು ಹೊಯ್ದರೊಳಗೊಳಗೆ"
"..ಭಾರತದೊಳೊಂದಕ್ಷರವ ಕೇಳ್ದರಿಗೆ" (ಕುಮಾರವ್ಯಾಸ)
ಹೊಸಗನ್ನಡದ ದೈನಂದಿನ ಪದಗಳಾದ : ಇಡ್ಲಿ, ಕುಡ್ಲು, ಒಯ್ದು, ಕುಯ್ದು, ಕಣ್ಮಣಿ ಇತ್ಯಾದಿ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಸರಿ
ಮೊದಲ ನಾಕೂ ಪದಗಳನ್ನು ನೀವು ಹಳೆಗನ್ನಡದಿಂದ ಹೆಕ್ಕಿದ್ದೀರಿ. ಹಳೆಗನ್ನಡದ ಬಗ್ಗೆ ಒಂದು ಇಚಾರವನ್ನು ಮೊದಲೇ ಹೇಳುವೆ. ಹಳೆಗನ್ನಡದಲ್ಲಿ ಹೆಚ್ಚಾನೆಚ್ಚಿನ ಪದಗಳು 'ಕ್' ನಂತೆ ಗಕ್ಕನೆ ಕೊನೆಯಾಗುತ್ತವೆ. ಹೊಸಗನ್ನಡದಲ್ಲಿ ಹಾಗಿಲ್ಲ.
ಮಾದರಿಗೆ, ಪೇಳ್, ತಾಳ್, ರಾಮನ್, ರಾಜನ್ ಹೀಗೆ. ಇದು ಹೆಚ್ಚಾಗಿ ಎಲ್ಲರಿಗೂ ಗೊತ್ತಿದ್ದದ್ದೇ.
ಇವು ಹೊಸಗನ್ನಡದಲ್ಲಿ ತಾಳು,ರಾಮನು,ರಾಜನು ಹೀಗೆ ಆಗಿವೆ.
ಹಾಗಾಗಿ, ತಾಳ್ಮೆ ಎಂಬುದನ್ನು ಹಳೆಗನ್ನಡದಲ್ಲಿ ತಾಳ್‍ಮೆ ಎಂದೇ ಬರೆಯುತ್ತಿದ್ದಿರಬೇಕು.
ಹೊಸಗನ್ನಡದಂತೆ ತಾಳ್‍ಮೆ - ತಾಳುಮೆ. ಇದನ್ನು ದುಡಿ - ದುಡಿಮೆ, ಉಳು - ಉಳುಮೆ ಇಂತ ಪದಗಳೊಂದಿಗೆ ಹೋಲಿಸಿ.
ಜಾಣ್ಮೆ - ಜಾಣ್‍ಮೆ - ಜಾಣಮೆ, ಜಾಣತನ
ಅಣ್‍ಮು ಎಂದರೆ ಸೂರತನ.
ಸೂಳ್‍ಪಡೆಯಲಪ್ಪುದು.
ಇನ್ನು ಕೆಲಸಪದಗಳನ್ನು ನೋಡೋಣ.
ಕೆಲಸಪದಗಳೂ ಹಳೆಗನ್ನಡದಲ್ಲಿ ಗಕ್ಕನೆ ಕೊನೆಯಾಗುತ್ತಿದ್ದವು. ಮಾಡಲ್, ನೀಡಲ್, ಪೇಳಲ್, ಕೇಳಲ್ ಹೀಗೆ. ಅವುಗಳಿಗೆ ಪಡು ಸೇರಿಸಿದರೆ ಕೇಳಲ್‍ಪಡು, ಹೇಳಲ್‍ಪಡು ಅವುಗಳನ್ನು ಹೀಗೆಯೇ ಬರೆಯುತ್ತಿದ್ದಿರಬೇಕು. ಸಮ್ಮುಕಕ್ಕರದಂತೆ ಒಂದು ಅಕ್ಕರದ ಕೆಳಗೆ ಬೇರೊಂದು ಅಕ್ಕರವನ್ನು ಬರೆದು ಅಲ್ಲ.
ಅಕ್ಕರ ಎಂಬುದು ಸಕ್ಕದದ ಪದ. ಒತ್ತು ಇದು ಕನ್ನಡ ಪದ. ಸಮ್ಮುಕ(ಸಂಯುಕ್ತ) ಇದು ಸಕ್ಕದದ ಪದ. ಅಂದರೆ ಅಕ್ಕರ ಎಂಬ ಪದಕ್ಕೆ ಕನ್ನಡ ಪದ ಇದ್ದಿರಬೇಕು, ಸಮ್ಮುಕಕ್ಕರಗಳು ಕನ್ನಡದಲ್ಲೇ ಬೆಳೆದಿದ್ದರೆ 'ಸಂಯುಕ್ತ' ಎಂಬ ಪದಕ್ಕೆ ಕನ್ನಡದಲ್ಲಿ ಪದವೇಕೇ ಇಲ್ಲ? ಇದಕ್ಕಿಂತ ಪುರಾವೆ ಬೇಕೆ, ಸಮ್ಮುಕಕ್ಕರಗಳು ಎಂಬ ಇಚಾರವೇ ಕನ್ನಡದಲ್ಲಿ ಇಲ್ಲ. ಇದು ದಿಟವಾಗಿ ಸಕ್ಕದದಿಂದ ಬಂದದ್ದು.
ನಿಮ್ಮ ಸಂಗನಗೌಡ.
ತಾಳ್, ತಾಳು ಮತ್ತು ಮೇಲು
ಸಂಗನಗೌಡರೆ,
ನಿಮ್ಮ ಜತುನಕ್ಕೆ ಸವಿಯೊದಗು. ಕೆಲವು ಅನುಮಾನಗಳನ್ನು ತಿಳಿಯಾಗಿಸಿಕೊಳ್ಳುವತ್ತ ಗಮನ ನೀಡೋಣ.
ಹಾಗಾಗಿ, ತಾಳ್ಮೆ ಎಂಬುದನ್ನು ಹಳೆಗನ್ನಡದಲ್ಲಿ ತಾಳ್‍ಮೆ ಎಂದೇ ಬರೆಯುತ್ತಿದ್ದಿರಬೇಕು.
ಹೀಗಾಗಿರಲು ಸಾಧ್ಯವೇ ಇಲ್ಲ. ಹೀಗಾಗಿದ್ದಿದ್ದರೆ, ಕನ್ನಡದಲ್ಲಿ "ಸಮ್ಮುಕಕ್ಕರವಷ್ಟೇ" ಅಲ್ಲ, ಯಾವ "ಒತ್ತಕ್ಕರವೂ" ಇರಬಾರದಿತ್ತು, ತಮಿಳಿನ ಹಾಗೆ. ತಮಿಳಿನಲ್ಲಿ "ಒತ್ತಕ್ಕರವಿಲ್ಲ", ಅಲ್ಲಿ ಎಲ್ಲವನ್ನೂ ಬಿಡಿಸಿಬರೆಯುತ್ತಾರೆ. ನಾವೇಕೆ ಅವರನ್ನು, ನಮ್ಮದೇ ಗಟ್ಟಿಯಾದ ತಳಹದಿಯಿದ್ದೂ ಕೂಡ, ಅನುಸರಿಸಬೇಕು.
"ಒತ್ತಕ್ಕರ"ಗಳನ್ನು ಹೀಗೆ ಬರೆಯುವುದು ಕನ್ನಡದಲ್ಲಿರುವ ಒಂದು ವಿಶಿಷ್ಟತೆ. ನಮ್ಮ "ಕನ್ನಡ ಲಿಪಿ" "ಮುದ್ರಣ ಮಾದ್ಯಮದ ಅನುಕೂಲಕ್ಕಾಗಿ" ಬದಲಾಗಿಲ್ಲ, ಇತರ ಕೆಲವು ಭಾಷೆಗಳ ಹಾಗೆ.
ಮೊದಲ ನಾಕೂ ಪದಗಳನ್ನು ನೀವು ಹಳೆಗನ್ನಡದಿಂದ ಹೆಕ್ಕಿದ್ದೀರಿ.
ನೀವೇ ಒಪ್ಪಿಕೊಂಡಂತೆ ಹಳೆಗನ್ನಡದಲ್ಲಿ ಈ ಬಳಕೆಗಳು ಇವೆ. ಅಂದರೆ ಕನ್ನಡದಲ್ಲಿ "ಸಮ್ಮುಕಕ್ಕರಗಳು " ಕನ್ನಡದಲ್ಲಿ ಹುಟ್ಟಿವೆ ಎಂದರ್ಥವಲ್ಲವೆ ?, ಆದರೆ ನಾವು ಅವುಗಳ ಬೆಳವಣಿಗೆಗೆ ದಾರಿ ಮಾಡಿಕೊಡುತ್ತಿಲ್ಲ. ಏಕೆ ಎಂಬುದು ನನಗೆ ನಿಲುಕದಾಗಿದೆ ? ನೀವೇನು ಹೇಳ ಬಯುಸುತ್ತೀರಿ ಇದಕ್ಕೆ ?
ಕೆಲಸಪದಗಳೂ ಹಳೆಗನ್ನಡದಲ್ಲಿ ಗಕ್ಕನೆ ಕೊನೆಯಾಗುತ್ತಿದ್ದವು. ಮಾಡಲ್, ನೀಡಲ್, ಪೇಳಲ್, ಕೇಳಲ್ ಹೀಗೆ. ಅವುಗಳಿಗೆ ಪಡು ಸೇರಿಸಿದರೆ ಕೇಳಲ್‍ಪಡು, ಹೇಳಲ್‍ಪಡು ಅವುಗಳನ್ನು ಹೀಗೆಯೇ ಬರೆಯುತ್ತಿದ್ದಿರಬೇಕು. ಸಮ್ಮುಕಕ್ಕರದಂತೆ ಒಂದು ಅಕ್ಕರದ ಕೆಳಗೆ ಬೇರೊಂದು ಅಕ್ಕರವನ್ನು ಬರೆದು ಅಲ್ಲ.
ಸಂಸ್ಕೃತದಲ್ಲಿ "ಒತ್ತಕ್ಕರ"ಗಳನ್ನು ಒಂದರ ಕೆಳಗೊಂದು ಬರೆಯುವುದಿಲ್ಲ. ಪಕ್ಕದಲ್ಲಿ ಬರೆಯುತ್ತಾರೆ. ಕೆಳಗಡೆ ಬರೆಯುವುದು ಕನ್ನಡ ಮತ್ತು ನನಗೆ ತಿಳಿದ ಮಟ್ಟಿಗೆ ತೆಲುಗಿನ ವಿಶಿಷ್ಟತೆ.
ನನ್ನ ಕೆಲವು ಮಾತುಗಳು (ಇಚಾರಗಳಲ್ಲ).
೧. "ಸಂಸ್ಕೃತದ ಪ್ರಭಾವದಿಂದ" ಹೊರಬರಲು ಕನ್ನಡವು ಬೇರೆ ನುಡಿಗಳ ಮೊರೆ ಹೋಗಬೇಕಿಲ್ಲ. ಕನ್ನಡವು ತನ್ನ ತನದಿಂದಲೇ ಗಟ್ಟಿಯಾಗುವ ಗುಣಗಳನ್ನು ಹೊಂದಿದೆ. ಆದರೆ ನಾವು ಈ ದಿಸೆಯಲ್ಲಿ ಮತ್ತಷ್ಟು ಚಿಂತನೆ ನಡೆಸಬೇಕಿದೆ ಮತ್ತು ನುಡಿಯ ಮೇಲಿನ ನಮ್ಮ ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕಿದೆ.
೨. ನನ್ನ ಆಕ್ಷೇಪವಿರುವುದು "ಕನ್ನಡಕ್ಕೆ ಸಮುಕಕ್ಕರ ಇಲ್ಲವೇ ಇಲ್ಲ ಮತ್ತು ಬೇಕೇ ಇಲ್ಲ" ಎಂಬ ಮಾತಿಗೆ ಅಷ್ಟೇ. ಉಳಿದಂತೆ ನಿಮ್ಮ ಕೈ ಜೋಡಿಸಲು ನಾನೂ ಸಿದ್ಧಿನಿದ್ದೇನೆ. ಎಷ್ಟು ಸಾಧ್ಯವೋ ಅಷ್ಟು ಸಂಸ್ಕೃತದ ಪದಗಳನ್ನು ಬಳಸದಿರಲು ಜತುನಗೈಯೋಣ.
೩. ಕನ್ನಡದಲ್ಲಿ "ಸಮುಕಕ್ಕರ"ಗಳನ್ನು ಉಳಿಸಿಕೊಳ್ಳುವುದರಿಂದ ನಮಗೆ "permutation and combination" ನಿಂದಾಗಿ ಹೊಸಪದಗಳನ್ನು ರೂಪಿಸಲು ಮತ್ತಷ್ಟು ಬಲ ಬರುತ್ತದೆ. ಆದರೆ ಅವುಗಳನ್ನು ಬೇಡವೆಂದರೆ ಪದಗಳ ಭಂಡಾರ ಕುಗ್ಗುತ್ತದೆ.
ಹಾಗೆಯೇ, ಈ ಗಕ್ಕನೆ ಕೊನೆಗೊಳ್ಳುವ ಪದಗಳ ಚರ್ಚೆಗಾಗಿ ಮತ್ತೊಂದು ಪದದ ಹುಡುಕಾಟ ನಡೆಸಿದೆ. ಆಗ ನನಗೆ ಸಿಕ್ಕಿದ್ದು ಮತ್ತಷ್ಟು ಪದಗಳು.
ಮೇಲಿನ ಮೈ - ಮೇಲ್ಮೈ - ಅಥವಾ ಮೇಲ್ಮಯ್. ಇದು ಸಮಾಸ, ಸಂಧಿಯಲ್ಲ. ಈ ಪದವನ್ನು "ಹೊರಗಿನ ಪದರ" ಎಂಬ ಅರ್ಥದಲ್ಲಿ ಬಳಸುತ್ತಿದ್ದೇವೆ.
ಹಳೆಗನ್ನಡದ "ಮೇಲ್" ಪದ ಹೊಸಗನ್ನಡದಲ್ಲಿ "ಮೇಲು" ಆಗಿದೆಯೋ ಅಥವಾ "ಮೇಲೆ" ಆಗಿದೆಯೋ. ಎರಡರ ಅರ್ಥವೂ ಬೇರೆ ಅಲ್ಲವೇ.
ಹಾಗೆಯೇ ಮತ್ತೊಂದು ಮಹತ್ವವಾದ ಪದವನ್ನು ಗಣನೆಗೆ ತೆಗೆದುಕೊಳ್ಳೋಣ.
ಕಂಡು - ಅನುಸ್ವಾರ(ಅಂ) ನಿಮಯದ ಪ್ರಕಾರ ಇದು "ಕಣ್ಡು" ಎಂದು. ಇಲ್ಲಿ ಯಾವುದೇ ಸಂಧಿಯಿಲ್ಲ. ಕಣ್ಣು("ಹಳೆಗನ್ನಡದ ಕಣ್" ಅಥವಾ "ಹೊಸಗನ್ನಡದ ಕಣ್ಣು" ಯಾವುದಾಗಿದ್ದರೂ ಪರವಾಗಿಲ್ಲ, ಸಮಾಸದ ಪ್ರಕಾರ ಸರಿಯಾಗಿಯೇ ಹೊಂದುತ್ತದೆ) ಮತ್ತು ನೋಡು ಪದಗಳ ಜೋಡಣೆಯಾಗಿ(ಸಮಾಸವಾಗಿ) ಕಣ್ಡು ವಾಗಿದೆ. ಹಾಗೆಯೇ, ತಂಡ, ಕಂತೆ, ಮುಂತಾದವು.
ಇದಕ್ಕಿಂತಲೂ ಪುರಾವೆ ಬೇಕೆ, ಕನ್ನಡದಲ್ಲಿ ಸಂಸ್ಕೃತದ ಹೊರತಾಗಿಯೂ ಸಮ್ಮಕಕ್ಕರಗಳಿವೆ ಎಂಬುದನ್ನು ಹೇಳಲು.
ಅಂದಹಾಗೆ, ಹಳೆಗನ್ನಡದ ಮೇಲೇಕೆ ಹುಸಿ-ಮುನಿಸು ನಿಮಗೆ. ನಮಗೆ ಭದ್ರವಾದ ಅಡಿಪಾಯವನ್ನು ಅದು ಹಾಕಿಕೊಟ್ಟಿದೆಯಲ್ಲಾ.
ಒಟ್ಟಿನಲ್ಲಿ ನಾನು ಹೇಳಬೇಕಿರುವುದೇನಪ್ಪಾ ಎಂದರೆ, "ಸಮ್ಮುಕಕ್ಕರಗಳು - ಸಂಯುಕ್ತಾಕ್ಷರಗಳು" ಕನ್ನಡದಲ್ಲಿ ಸಂಸ್ಕೃತದ ಹೊರತಾಗಿಯೂ ಹುಟ್ಟಿದೆ.
ಹಾಗೆಯೇ ಮತ್ತೊಂದು ಮಾತು. ಸದರಿ ಕನ್ನಡದಲ್ಲಿ ಅನೇಕ ಬಾರಿ ಸಂಸ್ಕೃತದ ಪದಗಳನ್ನು ಬರೆಯಲು ಸಂಯುಕ್ತಾಕ್ಷರಗಳನ್ನು ಬಳಸುತ್ತಿದ್ದೇವೆ. ಆದರೆ ಅದಕ್ಕೂ ಈ ಚರ್ಚೆಗೂ ಸಂಬಂಧವಿಲ್ಲ. ಈ ಚರ್ಚೆಯಿರುವುದು "ಕನ್ನಡದಲ್ಲಿ ಸಂಸ್ಕೃತದ ಹೊರತಾಗಿಯೂ ಸಮ್ಮುಕಕ್ಕರವಿದೆಯೇ ಇಲ್ಲವೇ ಎಂಬುದಾಗಿ ಅಷ್ಟೇ".
ಸವಿಯೊದಗು.
ತುಸು ಆಳಕ್ಕೆ
ಇನ್ನೂ ತುಸು ಆಳಕ್ಕಿಳಿದು ನೋಡೋಣ.
ಅಂದಹಾಗೆ, ಹಳೆಗನ್ನಡದ ಮೇಲೇಕೆ ಹುಸಿ-ಮುನಿಸು ನಿಮಗೆ.
ಹಾಗೇನಿಲ್ಲವಲ್ಲಾ, ಬಹಳಾಗಿ ಇದು ನಿಮಗೇ ಅನುವಹಿಸುತ್ತದೆ. ಹಳೆಗನ್ನಡದಲ್ಲಿ ಪದಗಳನ್ನು ಗಕ್ಕನೆ ಕೊನೆಯಾಗಿಸಿ ಬರೆಯುತ್ತಿದ್ದರು. ಆ ಬಗೆಯ ಬಳಕೆ ಆಡು ಮಾತಿನಲ್ಲಿಯೂ ಇದೆ. ತಾಳ್ಮೆ ಎಂದು ಬರೆದರೆ 'ಳ್ಮೆ' ಒಂದು ಇಡೀ ಅಕ್ಕರವಾಗಿ ಬಿಡುವುದರಿಂದ, 'ತಾಳ್' ಮತ್ತು 'ತಾಳ್ಮೆ' ಗೆ ಹೋಲಿಕೆ ಮಾಡುವುದು ತುಸು ಜಟಿಲವಾಗುತ್ತದೆ. ತಾಳ್ - ತಾಳು ಆಗಿದೆ. ಹೊಸಗನ್ನಡದಲ್ಲಿ ಅದು ಆದ ರೂಪ ಬದಲಾವಣೆಯನ್ನು ಗೌರವದಿಂದ ಕಾಣಬೇಕಲ್ಲವೇ?
ಬರೆಯುವಾಗ ಇಲ್ಲವೇ ಮಾತನಾಡುವಾಗ, ಇದು ಕನ್ನಡದ್ದು, ಇದು ಹೊರಗಿನದು ಎಂದು ಹೆಕ್ಕುತ್ತಾ ಕುಳಿತುಕೊಳ್ಳಲಾಗದು, ಅದರ ಬದಲು ಕನ್ನಡದ್ದೇ ಅನ್ನಬಹುದಾದ ಬರವಣಿಗೆಯ ಬಗೆಯನ್ನು(ನಿಯಮವನ್ನು)ತಿಳಿದುಕೊಂಡು, ಅದನ್ನು ಪಾಲನೆ ಮಾಡಿಕೊಂಡು ಹೋದರೆ ಸಾಕಲ್ಲವೇ?
ತಾಳ್‍ಮೆ ಎಂಬಲ್ಲಿ 'ತಾಳ್' ಎಂಬ ಪದಕ್ಕೆ ತಿಳಿವಿದೆ. ಅದೇ ಪ್ರಯತ್ನ-'ಪ್‍ರಯತ್‍ನ' ಎಂಬಲ್ಲಿ ಪ್ರ-ಪ್+ರ ಮತ್ತು ತ್ನ-ತ್+ನ ಇಲ್ಲಿ ಪ್ ಮತ್ತು ತ್ ಕ್ಕೆ ಯಾವುದೇ ತಿಳಿವು ಬರುವುದಿಲ್ಲ.
ಇನ್ನು ಗಕ್ಕನೆ ಕೊನೆಯಾಗಿಸಿ ಮಾತನಾಡುವುದರ ಬಳಕೆಗೆ ಬೇಕಾದಿನಿತು ಮಾದರಿ ನೀಡಬಹುದು.
"ಕನಸಲ್ ಮನಸಲ್ ನೀನೇ"
"ತಾಳ್, ಬಂದೆ"
"ಏನ್ ಹೇಳು" "ಹೋಗ್ ಆಚೆ"
ದಿನದಿನದ ಮಾತುಗಳನ್ನು ಕಿವಿಗೊಟ್ಟು ಕೇಳಿ, ಈ ಬಗೆಯ ಬಳಕೆ ಹಾಸು ಹೂಕ್ಕಾಗಿರುವುದು ತಿಳಿವುದು. ಹಾಗಿದ್ದರೆ ಅದೆಲ್ಲವೂ ತಮಿಳೇ?
ಗಕ್ಕನೆ ಕೊನೆಯಾಗುವಿಕೆ ಕನ್ನಡದಲ್ಲಿ ಬರುಬರುತ್ತ ಕಡಿಮೆಯಾಗುತ್ತ ಬಂದಿದೆ, ಅದು ಇನ್ನೂ ನಡೆದೇ ಇದೆ. ಆ ಬದಲಾವಣೆಯನ್ನು ಗೌರವದಿಂದ ಕಾಣೋಣ ಮತ್ತು ಮುನ್ನಡೆಸೋಣ.
ಕಂಡು - ಅನುಸ್ವಾರ(ಅಂ) ನಿಮಯದ ಪ್ರಕಾರ ಇದು "ಕಣ್ಡು" ಎಂದು. ಇಲ್ಲಿ ಯಾವುದೇ ಸಂಧಿಯಿಲ್ಲ. ಕಣ್ಣು("ಹಳೆಗನ್ನಡದ ಕಣ್" ಅಥವಾ "ಹೊಸಗನ್ನಡದ ಕಣ್ಣು" ಯಾವುದಾಗಿದ್ದರೂ ಪರವಾಗಿಲ್ಲ, ಸಮಾಸದ ಪ್ರಕಾರ ಸರಿಯಾಗಿಯೇ ಹೊಂದುತ್ತದೆ) ಮತ್ತು ನೋಡು ಪದಗಳ ಜೋಡಣೆಯಾಗಿ(ಸಮಾಸವಾಗಿ) ಕಣ್ಡು ವಾಗಿದೆ. ಹಾಗೆಯೇ, ತಂಡ, ಕಂತೆ, ಮುಂತಾದವು.
ಇದಕ್ಕಿಂತಲೂ ಪುರಾವೆ ಬೇಕೆ, ಕನ್ನಡದಲ್ಲಿ ಸಂಸ್ಕೃತದ ಹೊರತಾಗಿಯೂ ಸಮ್ಮಕಕ್ಕರಗಳಿವೆ ಎಂಬುದನ್ನು ಹೇಳಲು.
ಸರಿ ಇನ್ನು ಇವುಗಳ ಇಚಾರಕ್ಕೆ ಬರೋಣ(ಇಚಾರ,ಮಾತು ಬೇರೆ ಬೇರೆ ಅಲ್ಲವೇ?).
ಈ ಪದಗಳನ್ನು ನೋಡಿ. ಇಡೀ ಪದವನ್ನು ನಿಲ್ಲದೇ ಓದಿ.
ಒಙ್‍ಕಿ , ಅಙ್‍ಗಿ, ಮಙ್‍ಕೆ
ಕೊಞ್‍ಚ, ಸಞ್‍ಚು, ಅಞ್‍ಜು
ಕಣ್‍ಡು, ಉಣ್‍ಡು, ಕೊಣ್‍ಡು
ಕನ್‍ತೆ, ಅನ್‍ತೆ, ಸನ್‍ತೆ
ಕಮ್‍ಬಣಿ, ತುಮ್‍ಬಾ, ಕೊಮ್‍ಬು
ಮೇಲಿನ ಎಲ್ಲ ಮಾದರಿಗಳಲ್ಲಿ ನಡುವಿನ ಅಕ್ಕರವನ್ನು ತೆಗೆದು '೦' ಸೇರಿಸಿ ಬರೆಯಲಾಗುತ್ತದೆ. 'ಅಂ' ಇದು ಹೇಗೆ ಬಂದಿತೆಂದರೆ,
ಕ, ಇದನ್ನು ಮೂಗಿನಲ್ಲಿ ಹೇಳಬೇಕಾದರೆ 'ಕಂ' (ಇದನ್ನು 'ಕಮ್' ಅನ್ನಬಾರದು 'ಕ'ವನ್ನು ಮೂಗಿನಲ್ಲಿ ಹೇಳಬೇಕು.) ಹೀಗೆ ಒಂದು ಅಕ್ಕರದ ಮೇಲೆ ಚುಕ್ಕೆ ಇಟ್ಟು ಅದನ್ನು ಮೂಗಿನಲ್ಲಿ ಹೇಳುವುದು ಸಕ್ಕದದ ಪದ್ದತಿ.
ಮೇಲಿನ ಮಾದರಿಗಳನ್ನು ತುಸು ಗಮನ ಕೊಟ್ಟು ನೋಡಿ. ಕ,ಗ ಗಳ ಹಿಂದೆ ಙ್ ಬಂದಿದೆ. ಚ,ಜ ಗಳ ಹಿಂದೆ ಞ್ ಬಂದಿದೆ. ಹಾಗೆ ಟ,ಡ ಗಳ ಹಿಂದೆ ಣ್, ತ,ದ ಗಳ ಹಿಂದೆ ನ್ ಮತ್ತು ಪ,ಬ ಗಳ ಹಿಂದೆ ಮ್ ಬಂದಿದೆ. ಕಮ್‍ಬಣಿ ಎಂಬಲ್ಲಿ, 'ಕ'ವನ್ನು ಮೂಗಿನಲ್ಲಿ ಹೇಳಿ 'ಬಣಿ' ಹೇಳಿದರೆ ಅದು 'ಕಮ್‍ಬಣಿ' ಯಂತೆಯೇ ಕೇಳುವುದರಿಂದ ಆ ರೀತಿ ಬರೆಯುಯ ಬಗೆ ಬಳಕೆಗೆ ಬಂದಿರಬೇಕು.
ಗಕ್ಕನೆಕೊನೆಗೊಳ್ಳುವ ಪದಗಳು - ಒತ್ತಕ್ಷರಗಳ ಮುಂದುವರಿದ ಕಂತು
"ಕನಸಲ್ ಮನಸಲ್ ನೀನೇ"
"ತಾಳ್, ಬಂದೆ"
"ಏನ್ ಹೇಳು" "ಹೋಗ್ ಆಚೆ"
ದಿನದಿನದ ಮಾತುಗಳನ್ನು ಕಿವಿಗೊಟ್ಟು ಕೇಳಿ, ಈ ಬಗೆಯ ಬಳಕೆ ಹಾಸು ಹೂಕ್ಕಾಗಿರುವುದು ತಿಳಿವುದು. ಹಾಗಿದ್ದರೆ ಅದೆಲ್ಲವೂ ತಮಿಳೇ?
ಇವುಗಳನ್ನು ತಮಿಳವು ಎಂದು ಯಾರು ಹೇಳಿದ್ದು. ನಾನು ಹೇಳಿದ್ದು, "ತಮಿಳಿನಲ್ಲಿ ಸಂಯುಕ್ತಾಕ್ಷರಗಳಷ್ಟೇ ಅಲ್ಲ, ಒತ್ತಕ್ಷರಗಳೇ ಇಲ್ಲ. ಸಂಯುಕ್ತಾಕ್ಷರಗಳನ್ನು ಬಿಡಿಸಿ ಬರೆದರೆ, ನಾವು ತಮಿಳನ್ನು ಅನುಸರಿಸಿದಂತಾಗುತ್ತದೆ. ನಾವೇಕೆ ಅವರನ್ನು, ನಮ್ಮದೇ ಗಟ್ಟಿಯಾದ ತಳಹದಿಯಿದ್ದೂ ಅವರನ್ನು ಹಿಂಬಾಲಿಸಬೇಕು." ಎಂದಷ್ಟೇ ನಾನು ಹೇಳಿದ್ದು ಮತ್ತು ಹೇಳುತ್ತಿರುವುದು.
ಹಾಗೆಯೇ ನಾನು ಹಿಂದೆಯೇ ಹೇಳಿದ್ದೇನೆ. "ನ್" ನಿಂದ ಕೊನೆಗೊಂಡ ಮಾತ್ರಕ್ಕೆ ತಮಿಳು ಹೆಸರಿದು ಎಂಬ ನಿರ್ಣಯಕ್ಕೆ ಬರಬಾರದು ಎಂದು. ಇರಲಿ ಆ ವಿಚಾರ ಬೇಡ. ಮೂಲ ಚರ್ಚೆಗೆ ಬರೋಣ.
ಗಕ್ಕನೆ ಕೊನೆಯಾಗುವಿಕೆ ಕನ್ನಡದಲ್ಲಿ ಬರುಬರುತ್ತ ಕಡಿಮೆಯಾಗುತ್ತ ಬಂದಿದೆ, ಅದು ಇನ್ನೂ ನಡೆದೇ ಇದೆ. ಆ ಬದಲಾವಣೆಯನ್ನು ಗೌರವದಿಂದ ಕಾಣೋಣ ಮತ್ತು ಮುನ್ನಡೆಸೋಣ.
ಹೌದು. ಯಾರು ಇಲ್ಲವೆಂದರು, ಬರಬರುತ್ತಾ ನಾವು ಸ್ವರಗಳನ್ನು ಹೆಚ್ಚು ಉಪಯೋಗಿಸುತ್ತಿದ್ದೇವೆ. ಇವುಗಳನ್ನು ಗೌರವದಿಂದಲೇ ನಾವೆಲ್ಲರೂ ಕಂಡಿದ್ದೇವಲ್ಲಾ. ಆದರೆ ಚರ್ಚೆ ನಡೆಯುತ್ತಿರುವುದು "ಕನ್ನಡದಲ್ಲಿ ಸಮ್ಮಕಕ್ಕರಗಳು ಇದೆಯೇ ಇಲ್ಲವೇ ಎಂಬುದಾಗಿ". ಅಂದ ಹಾಗೆ ಇಲ್ಲಿ ಹಳೆಗನ್ನಡ ಮತ್ತು ಹೊಸಗನ್ನಡದ ಬಗೆಗಿನ ಪ್ರಶ್ನೆಯೇ ಅಪ್ರಸ್ತುತ. ಹಳೆಗನ್ನಡದಲ್ಲಿ "ಸಮ್ಮಕಕ್ಕರಗಳು" ಇದೆಯೆಂದರೆ "ಕನ್ನಡದಲ್ಲಿ ಹುಟ್ಟಿದೆ" ಎಂತಲೇ ಅರ್ಥ.
ಹಾಗೆಯೇ ಹೊಸಗನ್ನಡದಲ್ಲೂ ಅನೇಕ ಬಳಕೆಗಳನ್ನು ಈಗಾಗಲೇ ಬೆನಕ ಮತ್ತು ನಾನು ಹಿಂದಿನ ಕಾಮೆಂಟುಗಳಲ್ಲಿ ತೋರಿಸಿದ್ದೇವೆ.
ಕ,ಗ ಗಳ ಹಿಂದೆ ಙ್ ಬಂದಿದೆ. ಚ,ಜ ಗಳ ಹಿಂದೆ ಞ್ ಬಂದಿದೆ. ಹಾಗೆ ಟ,ಡ ಗಳ ಹಿಂದೆ ಣ್, ತ,ದ ಗಳ ಹಿಂದೆ ನ್ ಮತ್ತು ಪ,ಬ ಗಳ ಹಿಂದೆ ಮ್ ಬಂದಿದೆ. ಕಮ್‍ಬಣಿ ಎಂಬಲ್ಲಿ, 'ಕ'ವನ್ನು ಮೂಗಿನಲ್ಲಿ ಹೇಳಿ 'ಬಣಿ' ಹೇಳಿದರೆ ಅದು 'ಕಮ್‍ಬಣಿ' ಯಂತೆಯೇ ಕೇಳುವುದರಿಂದ ಆ ರೀತಿ ಬರೆಯುಯ ಬಗೆ ಬಳಕೆಗೆ ಬಂದಿರಬೇಕು.
ಇದನ್ನೇ ಅಲ್ಲವೇ ನಾನು ಹಿಂದಿನ ಕಾಮೆಂಟಿನಲ್ಲಿ ಅನುಸ್ವಾರದ(ಅಂ) ನಿಯಮವೆಂದಿರುವುದು. ಒಂದು ವ್ಯಂಜನದ ಹಿಂದೆ ಅದೇ ವರ್ಗದ ಅನುನಾಸಿಕ ಬಂದರೆ ಅದನ್ನು ಹೀಗೆ ಬರೆಯುತ್ತೇವೆ. ಆದರೆ ಚರ್ಚೆ ನಡೆಯಬೇಕಿರುವುದು "ಸಂಯುಕ್ತಾಕ್ಷರಗಳ" ಬಗ್ಗೆ.
ಕಣ್ಡು - ಇದು ಸಮಾಸ ಪ್ರಕಾರ ಸರಿಯಾದ ಪ್ರಯೋಗ ಎಂದು ಹೇಳಿದ್ದಕ್ಕೆ ನೀವು ಉತ್ತರವನ್ನಿತ್ತಿಲ್ಲ.
ಅಂದ ಹಾಗೆ ಒಂದು ಮಾತು ಕಂಬನಿ - ಕಮ್ ಬನಿ ಯಲ್ಲ - ಕಣ್ಣು ಮತ್ತು ಪನಿ(ಹನಿ ನೀರು) ಗೆ ಸಂಬಂಧಿಸಿದ್ದು. ಕಣ್ಣಿನ ಪನಿ ಅಥವಾ ಕಣ್ಣಿನಲ್ಲಿರುವ ಪನಿ - ಕಂಬನಿ, ಯಾವ ಸಮಾಸ ತಿಳಿದಿಲ್ಲ ನನಗೆ.
ಅಂದ ಹಾಗೆ, ನಿಮ್ಮ ನಿಲುವನ್ನು ತಿಳಿದುಕೊಳ್ಳುವುದು ನನಗೆ ಜಟಿಲವಾಗುತ್ತಿದೆ. ನಿಮ್ಮ ಕಾಮೆಂಟುಗಳನಲ್ಲಿ ನೀವು 'ಕನ್ನಡಲ್ಲಿ ಸಮ್ಮುಕಕ್ಕರ ಇಲ್ಲ' ಎಂಬುದರ ಪರವಾಗಿ ಮಾತನಾಡುತ್ತಿಲ್ಲ. ಸರಿ ಚರ್ಚೆಯ ಸಾಗಿಗಾಗಿ ನಾನು ಕೆಲವು ಆಯ್ಕೆಗಳನ್ನು ಬರೆಯುತ್ತೇನೆ. ನೀವು ಇವುಗಳ ಬಗ್ಗೆ ಏನಾದರು ಹೇಳ ಬಯುಸುವಿರಾ ನೋಡಿ.
೧. ಸಂಯುಕ್ತಾಕ್ಷರಗಳು "ಈಗಿನಷ್ಟೇ ಅಲ್ಲ, ಹಳೆಗನ್ನಡದಲ್ಲೂ ಇಲ್ಲ. ಒಟ್ಟಿನಲ್ಲಿ ಕನ್ನಡದಲ್ಲಿ ಇಲ್ಲವೇ ಇಲ್ಲ".
೨. ಸಂಯುಕ್ತಾಕ್ಷರಗಳು "ಈಗಿನ ಕನ್ನಡದಲ್ಲಿ ಇಲ್ಲ, ಆದರೆ ಹಳೆಗನ್ನಡದಲ್ಲಿ ಇತ್ತು".
೩. ಸಂಯುಕ್ತಾಕ್ಷರಗಳು "ಈಗಿನ ಕನ್ನಡದಲ್ಲಿ ಕಡಿಮೆಯಾಗಿದೆ, ಆದರೆ ಹಳೆಗನ್ನಡದಲ್ಲಿ (ಈಗಿನ ಕನ್ನಡಕ್ಕೆ) ಹೋಲಿಸಿದರೆ ಅವುಗಳ ಬಳಕೆ ಹೆಚ್ಚಿತ್ತು".
ಸರಿ ಕನ್ನಡದಲ್ಲಿ 'ಸಮ್ಮುಕಕ್ಕರಗಳು' ಇವೆ ಎಂಬುದಕ್ಕೆ ನಾನು ಇನ್ನೊಂದು ಬಳಕೆಯನ್ನು ತೋರಿಸುತ್ತೇನೆ. ನೋಡಿ.
ಒಡ್ಯಾಣ - ಇದರ ಬಗ್ಗೆ ನೀವು ಏನು ಹೇಳುತ್ತೀರಿ ?.
ನನ್ನ ಆಯಿಕೆ
ಸರಿ ನನ್ನ ಆಯಿಕೆ,
೧) ಬೆರೆತಕ್ಕರಗಳು ಕನ್ನಡದಲ್ಲಿ ಇಲ್ಲವೇ ಇಲ್ಲ.
'ಆಯ್ಕೆ' ಎಂದು ಬರೆಯಬಾರದು, 'ಆಯು' ಎಂದರೆ 'ಹೆಕ್ಕು'. ಆಯಿ ಇದು ಕೆಲಸ ಪದ. ಆಯಿ-ಆಯಿಕೆ. ಹೆಚ್ಚಿನವರಿಗೆ 'ಆಯ್ಕೆ' ಪದ ಗೊತ್ತಿರುತ್ತದೆ ಆದರೆ 'ಆಯಿ' ಪದ ಗೊತ್ತಿರುವದಿಲ್ಲ. ಏಕೆಂದರೆ 'ಯ್ಕೆ' ಒಂದು ಇಡೀ ಅಕ್ಕರವಾಗಿ 'ಆಯಿ' ಮತ್ತು 'ಆಯಿಕೆ' ಪದಕ್ಕೆ ನೆಂಟಿರುವುದೇ ಗೊತ್ತಾಗುವದಿಲ್ಲ. ನಾವು 'ಆಯ್ಕೆ ಮಾಡು' ಎನ್ನುತ್ತೇವೆ, ಆದರೆ 'ಆಯಿ' ಎಂಬ ಇಡೀ ಕೆಲಸಪದ ಆಗಲೇ ಇರುವಾಗ 'ಆಯಿಕೆ ಮಾಡು' ಎನ್ನುವುದೇಕೆ? ಅದರಂತೆ ತಾಳ್ಮೆ ಬರೆಯುವುದು ಸರಿಯಲ್ಲ , 'ತಾಳುಮೆ' ಸರಿ ಬಳಕೆ.
ಒಡ್ಯಾಣ - ಒಡ್ಡಿಯಾಣ. ಒಡ್ಡಿಯಾಣ ಇದನ್ನು ಮಾತಿನಲ್ಲಿ ಹೇಳುವಾಗ ಅದು 'ಒಡ್ಯಾಣ'ವಾಗಿ ಕೇಳಿಸುತ್ತದೆ.
ಇದರಂತೆ ಮಾಡ್ಯಾಳೆ/ಮಾಡ್ಯಾಳು, ಇಂತಹ ಬಳಕೆಗಳು ಆಡು ಮಾತಿನಲ್ಲಿವೆ. ಅದು 'ಮಾಡಿಯಾಳೆ', 'ಮಾಡಿಯಾಳು'.
'ಸತ್ಯಾ' ಎಂದರೆ ಆಣೆ,ದಿಟ ಎಂಬುದು ಎಲ್ಲರಿಗೂ ಗೊತ್ತು. 'ಸತ್ತೆಯಾ' ಎಂಬುದನ್ನು ಹೇಳುವಾಗ ಅದು 'ಸತ್ಯಾ' ಆಗುತ್ತದೆ. ಆಗ ನಾವು ಸಕ್ಕದದಿಂದ ತಂದ 'ಸತ್ಯ' ಮತ್ತು ಕನ್ನಡದ 'ಸತ್ತೆಯಾ' ಯಾವುದು ಎಂಬ ಅನುಮಾನ ಬರುತ್ತದೆ, ಆಗ ಕನ್ನಡ ಜಟಿಲ ಎನಿಸತೊಡಗುತ್ತದೆ.
ಇನ್ನು ಕಣ್‍ಡು,ಅಙ್‍ಗಿ ಇವುಗಳಿಗೆ ಬರೋಣ.
ಇವುಗಳನ್ನೇ ಮಾದರಿಯಾಗಿಟ್ಟುಕೊಂಡು ನೀವು ಬೆರೆತಕ್ಕರಗಳು ಕನ್ನಡದಲ್ಲಿಯೇ ಹುಟ್ಟಿದವು ಎನ್ನುತ್ತಿರುವಿರಿ.
ಉಣ್ಣು - ಉಣ್‍ಡು - ಉಣ್ಡು ಸರಿ,
ಅನ್ನು - ಅನ್ದು ಸರಿ,
ಕೊಳ್ಳು - ಕೊಳ್ಡು ಆಗಬೇಕಿತ್ತು. ಏಕೆ ಕೊಣ್ಡು ಆಯಿತು? ಬೆರೆತಕ್ಕರ ಕನ್ನಡದಲ್ಲಿಯೇ ಹುಟ್ಟಿದ್ದಾದರೆ ಅದು 'ಕೊಳ್ಡು' ಎಂದೇ ಇರಬೇಕಾಗಿತ್ತಲ್ಲವೇ?
ಏಕೆ 'ಕೊಣ್ಡು' ಆಯಿತು? ತಿಳಿಸಿ.
ಇನ್ನೊಂದು ಮಾತು
ನಾವೇಕೆ ಅವರನ್ನು, ನಮ್ಮದೇ ಗಟ್ಟಿಯಾದ ತಳಹದಿಯಿದ್ದೂ ಕೂಡ, ಅನುಸರಿಸಬೇಕು.
ಅನುಸಾರ - ಅನುಸರಿಸು
ಹಿಂಬಾಲ - ಹಿಂಬಾಲಿಸು
ಈ ಬಗೆಯ ಬಳಕೆ ಸರಿಯೇ? ಏಕೆಂದರೆ 'ಇಸು' ಇದು ಯಾವಾಗಲೂ ಕೆಲಸಪದಕ್ಕೆ ಸೇರುತ್ತದೆ. ಅಂದರೆ 'ಇಸು' ಇರುವ ಪದದಿಂದ ಆ 'ಇಸು'ವನ್ನು ತೆಗೆದು ಹಾಕಿದಾಗ, ಉಳಿಯುವ ಪದ ಒಂದು ಕೆಲಸಪದವಾಗಿರಬೇಕು.
ಮಾದರಿಗೆ,
ನುಡಿ - ನುಡಿಸು
ಹೇಳು - ಹೇಳಿಸು ಹಲವಾರು. ನಾನು ಮೊದಲು ಬರೆದ ಮಾದರಿಗಳಲ್ಲಿ ಅನುಸಾರ ಮತ್ತು ಹಿಂಬಾಲ ಇವು ಹೆಸರುಪದಗಳಾಗಿವೆ. ಅದಕ್ಕಾಗೆ ಹಾಗೆ ಬರೆಯುವುದು ತಪ್ಪು ಅನಿಸುತ್ತದೆ. 'ಇಸು' ವಿನ ಬಳಕೆಯ ಬಗ್ಗೆ ಬರೆದಿರುವುದನ್ನು ಇಲ್ಲಿ ಓದಿ.
ಉ: ಸರಿ
ಒತ್ತಕ್ಷರಗಳು ಬೇಱೆ. ಸಂಯುಕ್ತಾಕ್ಷರಗಳು ಬೇಱೆ. ಒತ್ತಕ್ಷರಗಳೆಂದರೆ ಒಂದೇ ವ್ಯಂಜನ ಒತ್ತಲ್ಪಟ್ಟು ಉಚ್ಚರಿಸಲ್ಪಡುವುದು. ಉದಾ: ಕ್ಕ, ಚ್ಚ, ಟ್ಟ, ತ್ತ, ನ್ನ ಇತ್ಯಾದಿ. ಆದರೆ ಸಂಯುಕ್ತಾಕ್ಷರಗಳೆಂದರೆ ಕ್ಷ, ಕ್ಲ ಇತ್ಯಾದಿ ವಿಜಾತೀಯ ವ್ಯಂಜನಗಳು ಸೇರಿ ಆಗುವ ಅಕ್ಷರಗಳು. ಮಾನ್ಯ ಸುನೀಲ್‍ರವರು ನಿಜಕ್ಕೂ ಕನ್ನಡವನ್ನು ಚೆನ್ನಾಗಿ ಗಮನಿಸಿದ್ದರೆ ಸಂಯುಕ್ತಾಕ್ಷರಗಳು ಸಂಸ್ಕೃತಕ್ಕಿಂತ ಕಡಿಮೆ. ಪೂರ್ವದ ವ್ಯಂಜನ ನ್, ಣ್, ಯ್, ರ್, ಲ್, ಳ್, ೞ್ ಹಾಗೂ ಕೆಲವು ವೇಳೆ ಱ್ ಇದ್ದಾಗ ಮಾತ್ರ ಸಂಯುಕ್ತಾಕ್ಷರಗಳನ್ನು ಮಾಡಬಹುದು. ಇನ್ನೊಂದು ವಿಶೇಷವೆಂದರೆ ’ಱ್’ ನ ಉಚ್ಚಾರ ದಂತಮೂಲೀಯ ಕಂಪಿತವಾಗಿರುವುದರಿಂದ ಹೆಚ್ಚಾಗಿ ಹೞಗನ್ನಡ ಹಾಗೂ ಹೊಸಗನ್ನಡದಲ್ಲಿ ’ಱ್ಱ್’ ನಿಜವಾಗಿ ’ತ್ತ್’ ಆಗುತ್ತದೆ. ಗಮನಿಸಿ ತಮಿೞಿನ ಮಱ್ಱುಂ ಕನ್ನಡದಲ್ಲಿ ಮತ್ತು ’ನೆಱ್ಱಿ ’ ಕನ್ನಡದಲ್ಲಿ ’ನೆತ್ತಿ’ ಇತ್ಯಾದಿ. ಮಾನ್ಯ ಸುನೀಲರವರು ಇದನ್ನು ಗಮನಿಸದಿರುವುದು ದುರದೃಷ್ಟಕರ. ಹಾಗಾಗಿ ಅವರ ಸಂಯುಕ್ತಾಕ್ಷರಗಳ ಉದಾಹರೆಣೆಯಲ್ಲಿ ’ಜಾಣ್ಮೆ’, ’ಮೇಲ್ಮೆ’ ಇತ್ಯಾದಿ ಕನ್ನಡದ ನಿಯಮಿತ ಸಂಯುಕ್ತಾಕ್ಷರಗಳು ದೊರೆಯುತ್ತವೆ. ಸಂಸ್ಕೃತ ಬಿಟ್ಟರೆ ಇನ್ನಾವ ಭಾರತೀಯ ಭಾಷೆಗಳಲ್ಲಿ ವಿಸ್ತಾರವಾದ ಸಂಯುಕ್ತಾಕ್ಷರಗಳ ಸಂಯೋಜನೆ (Combination) ಕಾಣುವುದಿಲ್ಲ.
ಉ: ಸರಿ
kannadakanda,
ನಂನಿ.
ಸಂಮುಕಕ್ಕರಗಳು ಕನ್ನಡತನಕ್ಕೆ ಒಗ್ಗುವದಿಲ್ಲ ಅಂಬುದು ನನ್ನ ಅಲುಗದ ನಂಬುಗೆ. ಅಂದಿನಿಂದ ನನ್ನ ಬರವಣಿಗೆಯಲ್ಲಿ ಬೇರೆ ಬೇರೆ ಕೂಡಕ್ಕರಗಳು ನುಸುಳಿದ್ದು ತುಂಬ ಕಡಿಮೆ. ಬೇರೆ ಬೇರೆ ಕೂಡಕ್ಕರಗಳು ಕನ್ನಡಕ್ಕೆ ಒಗ್ಗುವದಿಲ್ಲ ಅನ್ನುವದಕ್ಕಾಗೆ ತದ್ಭವ ಅನ್ನುವ ಒಳಅರಿಮೆ ಹುಟ್ಟಿದ್ದು.
ಉ: ಸರಿ
ಶಂಕರ ಭಟ್ಟರ ಹೊತ್ತಗೆ ಓದಿ...
ಕನ್ನಡದಲ್ಲಿ ಇರೋದು ಬಱೀ ಒತ್ತಕ್ಕರಗಳು...
ಆದ್ರೆ ರ, ಲ, ಳ, ಇದಕ್ಕೆ ಹೊರತು
ತಾಳ್ಮೆ, ಮೇಲ್ಮೆ, ಇವನ್ನು ತಾಳುಮೆ, ಮೇಲುಮೆ ಎಂದು ಹೊಸಗನ್ನಡದಲ್ಲಿ ಬರೆಯಬೋದು ಏಕೆಂದರೆ ಹೊಸಗನ್ನಡದಲ್ಲಿ ತಾಳ್ => ತಾಳು, ಮೇಲ್ => ಮೇಲು ಆಗಿದೆ.
=====================================
ಮಾಯ್ಸ!
ಉ: ಸರಿ
ನನಗೆ ಸ್ವಲ್ಪ ಅನುಮಾನ ಇದೆ. ನಮಗೆ ನಮ್ಮ ಸಂಸ್ಕೃತ ಮೇಷ್ಟರು ಸಜಾತೀಯ ಸಂಯುಕ್ತಾಕ್ಷರ, ವಿಜಾತೀಯ ಸಂಯುಕ್ತಾಕ್ಷರ ಎಂಬುದಾಗಿ ಎರಡು ರೀತಿ ಹೇಳಿಕೊಟ್ಟಿದ್ರಲ್ಲಾ!!!!! ಸಂಯುಕ್ತಾಕ್ಷರ ಎಂದರೆ ಬರೀ ವಿಜಾತೀಯದ್ದಾಗಿರದ್ದರೆ ಈ ರೀತಿಯ ವಿಂಗಡನೆ ಏಕೆ ಇರುತ್ತಿತ್ತು ?
ಆಯ್ತು, ನೀವು ಹೇಳುವಂತೆ, ಕನ್ನಡದಲ್ಲಿ ಸಂಸ್ಕೃತದಲ್ಲಿಯಷ್ಟು ಸಂಯುಕ್ತಾಕ್ಷರಗಳ ವಿಸ್ತಾರ ಕಡಿಮೆ ಎಂಬುದನ್ನು ನಾನೂ ಒಪ್ಪುತ್ತೇನೆ. ಆದರೆ "ಕನ್ನಡದಲ್ಲಿ ಸಂಯುಕ್ತಾಕ್ಷರಗಳು ಇಲ್ಲ" ಎಂಬುದರ ಬಗ್ಗೆಯಷ್ಟೇ ನನ್ನ ತಕರಾರು ಇರೋದು. ಕಡಿಮೆ ಎನ್ನುವುದಕ್ಕೂ, ಇಲ್ಲವೇ ಇಲ್ಲ ಎನ್ನುವುದಕ್ಕೂ ವ್ಯತ್ಯಾಸ ಇದೆ ಅಲ್ವೇ ?
ಉ: ಸರಿ
ಒತ್ತಕ್ಕರ = ಸಜಾತೀಯ ಸಂಯುಕ್ತಾಕ್ಷರ, ಕ್ಕ, ಗ್ಗ ಇವು ಅಂತ ಕನ್ನಡದ ಕಂದ ಹೇಳೋದು..
ಆದ್ರೆ ಕನ್ನಡದಲ್ಲಿ ಒತ್ತಕ್ಕರ = ಸಜಾತೀಯ, ವಿಜಾತೀಯ ಎಲ್ಲ ಅಂತ ಕಲಿತ್ತಿದ್ದೀವಿ.!
ಕನ್ನಡದಲ್ಲಿ ಸಂಯುಕ್ತಾಕ್ಷರಗಳು ಬಲು ಕಡಮೆ. ಅದಕ್ಕೆ ಒಂದು ಕಟ್ಟಳೆಯೂ ಇದೆ.
=====================================
ಮಾಯ್ಸ!
ಉ: ಸರಿ
ಹೆಚ್ಚಿನ ಜನಗಳಿಗೆ ಎಲ್ಲಾ ತೆಱನಾದ ಸಂಯುಕ್ತಾಕ್ಷರಗಳನ್ನು ಉಚ್ಚರಿಸಲಾರರು. ಉದಾಹರಣೆಗೆ ಸಂಸ್ಕೃತದ ವತ್ಸ ಹಿಂದಿಯಲ್ಲಿ ಬಚ್ಚಾವಾಗುತ್ತದೆ. ನೀವು ನಿಜಕ್ಕೂ ಗಮನಿಸಿದರೆ ಉತ್ತರ ಭಾರತದ ಭಾಷೆಗಳೆಲ್ಲ ಸಂಸ್ಕೃತದ ಅಪಭ್ಹ್ರಂಶ. ಅಷ್ಟ್ತೇ ಏಕೆ? ಉತ್ತರ ಭಾರತೀಯರಿಗೆ ಙ, ಞ, ಳ, ೞ, ಱ ಉಚ್ಚರಿಸಲು ಬಾರದು. ಆಗ ತಮ್ಮ ಉಚ್ಚಾರಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವುದೇ ಆಗಿದೆ. ಪ್ರಾಯಶಃ ನಿಮ್ಮ ಉಪಾಧ್ಯಾಯರು ’ಕ’ ದಿಂದ ’ಮ’ದವರೆಗಿನ ವರ್ಗೀಯ ವ್ಯಂಜನಗಳ ನಡುವೆ ಆಗುವ ಸಂಯುಕ್ಟಾಕ್ಷರಗಳನ್ನು ಸಜಾತೀಯ ಸಂಯುಕ್ತಾಕ್ಷರಗಳೆಂದಿರಬಹುದು.