ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.

— ಜೇನ್ ಫೊಂಡಾ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಜೆ.ಡಿ.ಎಸ್. ರಸ್ತೆ ಬಂತು! ಬಿ.ಜೆ.ಪಿ. ರಸ್ತೆ ಬಂತು!

ಶೀರ್ಷಿಕೆ ನೋಡಿ, ಇದೇನು ರಸ್ತೆಗಳಿಗೆ ರಾಜಕೀಯ ಪಕ್ಷಗಳ ಹೆಸರನ್ನಿಡುವುದು ಯಾವಾಗ ಶುರುವಾಯಿತು ಎಂದು ಕೊಳ್ಳಬೇಡಿ. ಇದು ಜನರೇ ನೀಡಿರುವ ಹೆಸರುಗಳು!


ಕಳೆದ ದೀಪಾವಳಿಯಲ್ಲಿ ಆ ಮಾರ್ಗದಲ್ಲಿ ಪ್ರಯಾಣ ಮಾಡುವಾಗ ಈ ಹೆಸರುಗಳು ನನ್ನ ಕಿವಿಗೆ ಬಿದ್ದವು. ಅದರ ಬಗ್ಗೆ ವಿವರಿಸಿದಾಗ ನನಗೆ ಸಿಕ್ಕ ಮಾಹಿತಿ ಇದು.


ಚೆನ್ನರಾಯಪಟ್ಟಣದಿಂದ ಅರಕಲಗೂಡಿನವರೆಗೆ ಸುಮಾರು ನಲವತ್ತೈದು ಕಿ.ಮೀ. ರಸ್ತೆ ಅಗಲೀಕರಣ ಕಾಮಗಾರಿ ಕುಮಾರಸ್ವಾಮಿ ಮುಖ್ಯಂತ್ರಿಯಾಗಿದ್ದಾಗ ಆರಂಭವಾಗಿತ್ತು. ಅತ್ಯುತ್ತಮ ಗುಣಮಟ್ಟದ ದ್ವಿಪಥ ರಸ್ತೆ ನಿರ್ಮಾಣದ ಉದ್ದೇಶವಾಗಿತ್ತು. ಜೊತೆಗೆ ನೀರಾವರಿ ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆಯನ್ನೂ, ಹೇಮಾವತೀ ಸಕ್ಕರೆ ಕಾರ್ಖಾನೆ ಪ್ರದೇಶದಲ್ಲಿ (ಸುಮಾರು ಎರಡು ಕಿ.ಮೀ) ಸಂಪೂರ್ಣ ಕಾಂಕ್ರೀಟಿನಿಂದ ಕೂಡಿದ ಚತುಷ್ಪಥ ರಸ್ತೆ ಹಾಗೂ ಫುಟ್ ಪಾತ್ ನಿರ್ಮಾಣದ ಗುರಿಯೂ ಇತ್ತು. ಕೆಲಸ ಭರದಿಂದ ಸಾಗುತ್ತಿದ್ದಾಗ ಮೊದಲು ರಾಷ್ಟ್ರಪತಿ ಆಡಳಿತ, ನಂತರ ಚುನಾವಣೆ ನಡೆದು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ವಿರೋಧ ಪಕ್ಷಗಳ ಶಾಸಕರಿರುವ ಕ್ಷೇತ್ರಗಳಲ್ಲಿನ ಕಾಮಗಾರಿಗಳು ವೇಗ ಕಳೆದುಕೊಂಡವು. ಆ ರಸ್ತೆ ಇರುವ ಜಾಗ ಶ್ರವಣ ಬೆಳಗೊಳ - ಹೊಳೆನರಸೀಪುರ - ಅರಕಲಗೂಡು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಮೊದಲೆರಡು ಕ್ಷೇತ್ರಗಳಲ್ಲಿ ಜೆಡಿಎಸ್ ರಸ್ತೆಯಿದ್ದರೆ, ಅರಕಲಗೂಡಿನಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.


ಈ ರಸ್ತೆಯ ಕಾಮಗಾರಿಯನ್ನು ಪೂರ್ಣ ನಿಲ್ಲಿಸಲು ಹಾಗೂ ಆಗಿರುವ ಕೆಲಸಕ್ಕಷ್ಟೇ ಬಿಲ್ ನೀಡಲು ಕಂಟ್ರಾಕ್ಟ್ ದಾರರಿಗೆ ಸೂಚನೆ ಹೋಯಿತು. ಅವರೂ ಅಷ್ಟನ್ನೇ ಮಾಡಿದರು.


45 ಕಿ.ಮೀ. ರಸ್ತೆಯಲ್ಲಿ ಸುಮಾರು ಶೇಕಡಾ 60ರಷ್ಟು ಕೆಲಸವಷ್ಟೇ ಆಗಿದೆ. ಒಟ್ಟು ಹತ್ತು ಕಡೆ ಹಳೆಯ ರಸ್ತೆ, ಹಾಗೂ ಹೊಸ ರಸ್ತೆ ನಿರ್ಮಾಣಕ್ಕೆ ಅಗೆದು ಹಾಕಿದ್ದರಿಂದ ಇನ್ನೂ ಹದಗೆಟ್ಟಿರುವ ರಸ್ತೆ ಹಾಗೇ ಉಳಿದಿದೆ! ಅರಕಲಗೂಡಿನಿಂದ ಹೊಳೆನರಸೀಪುರದ ನಡುವೆ ಆರು ಬಾರಿ, ಹೊಳೆನರಸೀಪುರದಿಂದ ಚೆನ್ನರಾಯಪಟ್ಟಣದ ವರೆಗೆ ನಾಲ್ಕು ಬಾರಿ ತೀರಾ ಹದಗೆಟ್ಟಿರುವ ರಸ್ತೆಗಳಲ್ಲಿ ಕೆಲ ಕಿ.ಮೀ. ಪ್ರಯಾಣಿಸಬೇಕಾಗಿದೆ. ಹೊಸ ರಸ್ತೆಯಲ್ಲಿ ಪ್ರಯಾಣ ಮಾಡುವಾಗ ನಿದ್ದೆಗೆ ಜಾರುವ ಸನ್ನಾಹದಲ್ಲಿದ್ದ ಪ್ರಯಾಣಿಕರು ಒಮ್ಮೆಲೆ ನೆಗೆದು ಬೀಳುವ ಬಸ್ಸಿನಲ್ಲಿ ನಗೆಪಾಟಲಿಗೀಡಾಗುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ! ಅಯ್ಯೋ ಈ ರಸ್ತೆಯಲ್ಲಿ ಯಾಕಾದರೂ ಬಂದೆವೋ ಎಂದುಕೊಳ್ಳುತ್ತಾ ಒಂದೆರಡು ಕಿಲೋಮೀಟರ್ ಸಂಚರಿಸುವುದಲ್ಲಿ ಮತ್ತೆ ಗುಣಮಟ್ಟದ ಹೊಸ ರಸ್ತೆ ಬಂದು ಖುಷಿಪಡುವುದನ್ನೂ ನೋಡಿದ್ದೇನೆ.


ಉತ್ತಮ ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಜನ ಅದನ್ನು ಜೆಡಿಎಸ್ ರಸ್ತೆ ಎಂದೂ, ಕೆಟ್ಟ ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಅದನ್ನು ಬಿಜೆಪಿ ರಸ್ತೆಯೆಂದೂ ತಮಾಷೆಯಾಗಿ ಕರೆಯುತ್ತಾರೆ.


ಈ ಬಾರಿ ಅಲ್ಲಿ ಪ್ರಯಾಣ ಮಾಡುವಾಗ ಹಲವಾರು ಫೋಟೋಗಳನ್ನು ತೆಗೆದೆ.  ದುರಂತವೆಂದರೆ ಆ ಮಾರ್ಗದಲ್ಲಿ ಸಂಚರಸಸುತ್ತಿದ್ದ ಬಸ್ಸುಗಳ ಸಂಖ್ಯೆಯನ್ನು (ವಿಶೇಷವಾಗಿ ದೂರ ಪ್ರಯಾಣದ ಬಸ್ಸುಗಳನ್ನು) ಕೆಟ್ಟ ರಸ್ತೆಯ ಕಾರಣದಿಂದ ಇಳಿಸಲಾಗಿದೆ. ಕೊನೆಗೆ ಜನರೇ ಈ ರಾಜಕೀಯದ ಬಿಸಿಯನ್ನು ಅನುಭವಿಸಬೇಕಾಗಿದೆ.


ಅದರ ನಡುವೆಯೂ ಜನ ತಮಾಷೆಯಾಗಿ ಜೆಡಿಎಸ್ ರಸ್ತೆ! ಬಿಜೆಪಿ ರಸ್ತೆ! ಎಂದು ಎಂಜಾಯ್ ವಮಾಡುವುದನ್ನು ನೋಡಿ ನಗುವುದೋ ಅಳುವುದೋ ತಿಳಿಯದಾಗಿದೆ.


ವಿಪಕ್ಷಗಳ ಶಾಸಕರಿರುವ ಕ್ಷೇತ್ರಗಳನ್ನು ಇಷ್ಟರಮಟ್ಟಿಗೆ ಕಡೆಗಣಿಸುವುದು ಸರಿಯೇ? ಈ ಸರ್ಕಾರ ಬಿ.ಜೆ.ಪಿ. ಶಾಸಕರಿರುವ ಕ್ಷೇತ್ರಗಳಿಗೆ ಮಾತ್ರ ಸರ್ಕಾರವೇ? ಅಥವಾ ಇಡೀ ಕರ್ನಾಟಕದ ಸರ್ಕಾರವೇ? ಎಂಬುದು ನನ್ನ ಪ್ರಶ್ನೆ.

Your rating: None Average: 5 (3 votes)

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಜೆ.ಡಿ.ಎಸ್. ರಸ್ತೆ ಬಂತು! ಬಿ.ಜೆ.ಪಿ. ರಸ್ತೆ ಬಂತು!

BRS's picture

ಈ ಲೇಖನಕ್ಕೆ ಪೂರಕವೆನ್ನಬಹುದಾದ ಅಭಿಪ್ರಾಯವೊಂದನ್ನು ಹೊಳೆನರಸೀಪುರದ ಸಾರ್ವಜನಿಕರು ಇಂದಿನ (6.01.2010) ಪ್ರಜಾವಾಣಿಯ ವಾಚಕರವಾಣಿಯಲ್ಲಿ ವ್ಯಕ್ತಪಡಿಸಿರುತ್ತಾರೆ. ಅದನ್ನು ಯಥಾವತ್ ಇಲ್ಲಿ ದಾಖಲಿಸುತ್ತಿದ್ದೇನೆ.
ರಸ್ತೆ ಕಾಮಗಾರಿ ಪೂರ್ಣಗೊಳಿಸಿ
ಚನ್ನರಾಯಪಟ್ಟಣದಿಂದ ಹೊಳೆನರಸೀಪುರಕ್ಕೆ ಸಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿಯನ್ನು ಕಳೆದ ಐದು ವರ್ಷಗಳ ಹಿಂದೆ ಕೈಗೊಂಡಿದ್ದು ಅರ್ಧಕ್ಕೇ ಕೆಲಸ ನಿಂತು ಹೋಗಿರುತ್ತದೆ.
ಕಾಮಗಾರಿಯ ಸಲುವಾಗಿ ಹಳೆಯ ರಸ್ತೆಯನ್ನು ಸಂಪೂರ್ಣವಾಗಿ ಅಗೆಯಲಾಗಿದ್ದು, ಸುಮಾರು ಒಂದರಿಂದ ಎರಡು ಅಡಿಗಳಷ್ಟು ಆಳದ ಗುಂಡಿಗಳು ಉಂಟಾಗಿವೆ. ಕಾಮಗಾರಿ ನಡೆಯುತ್ತಿರುವ ರಸ್ತೆಯಲ್ಲಿ ಸುಮಾರು 10 ಕಿಲೋಮೀಟರ್ ಉದ್ದಕ್ಕೂ ಇಂಥದ್ದೇ ಗೋಳು. ಪ್ರತಿ ದಿನ ನೂರಾರು ವಾಹನಗಳು ಹಾಗೂ ಸಾವಿರಾರು ಪ್ರಯಾಣಿಕರು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಪದೇ ಪದೇ ಅಪಘಾತಗಳು ಸಂಭವಿಸುತ್ತಲೇ ಇವೆ. ಪ್ರಯಾಣಿಕರಂತೂ ಹಿಡಿ ಶಾಪ ಹಾಕುತ್ತಾ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಾಡಬೇಕಾಗಿದೆ.
ಪ್ರಮುಖರು ಹಾಗೂ ರಾಜಕಾರಣಿಗಳು ಸದಾ ಸಂಚರಿಸುವ ಈ ರಸ್ತೆಯ ಗೋಳು ಯಾರ ಕಣ್ಣಿಗೂ ಬೀಳದಿರುವುದು ದುರದೃಷ್ಟವೇ ಸರಿ. ಈ ರಸ್ತೆಯಲ್ಲಿ ಮತ್ತಷ್ಟು ದುರಂತಗಳು ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸಿ ನಿಂತಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ವಿನಂತಿ.
-ಸಾರ್ವಜನಿಕರು
ಹೊಳೆನರಸೀಪುರ

ಉ: ಜೆ.ಡಿ.ಎಸ್. ರಸ್ತೆ ಬಂತು! ಬಿ.ಜೆ.ಪಿ. ರಸ್ತೆ ಬಂತು!

manju787's picture

ಸೆಪ್ಟೆಂಬರ್ ೨೦೦೯ರಲ್ಲಿ ಸಿಕ್ಕ ಕೆಲವು ರಜಾ ದಿನಗಳನ್ನು ಕಳೆಯಲು ಬೆಂಗಳೂರಿಗೆ ಬಂದಾಗ ಈ ರಸ್ತೆಯ ಅನುಭವ ನನಗೆ ಚೆನ್ನಾಗಿಯೇ ಆಯಿತು! ರಸ್ತೆಯ ತುಂಬಾ ಎರಡು ಮೂರು ಅಡಿ ಅಳದ ಗುಂಡಿಗಳು, ಅದರ ಜೊತೆಗೆ ಕುಂಭದ್ರೋಣ ಮಳೆ ಬೇರೆ ಸುರಿಯುತ್ತಿತ್ತು! ಹೇಗೆ ಹೇಳಲಿ ನಮ್ಮ ಫಜೀತಿ? ಅಂದು ನನ್ನೂರಿಗೆ , ಹೇಮಾವತಿಯ ದಡಕ್ಕೆ ಹೋಗಲು ಹಾತೊರೆದ ಮನಸ್ಸು, ವಾಪಸ್ಸು ಬರುವಾಗ ಮತ್ತೊಮ್ಮೆ ಇಲ್ಲಿಗೆ ಬರಬೇಡ ಎಂದು ಆಣತಿ ನೀಡಿತ್ತು. ಇಂಥಾ ಕೆಟ್ಟ ರಾಜಕೀಯ ಮಾಡಿ ರಸ್ತೆಗಳನ್ನು ಹಾಳು ಮಾಡಿ ನಗುವವರಿಗೆ ಏನನ್ನಬೇಕೋ ತಿಳಿಯುತ್ತಿಲ್ಲ. ಸೇಡಿನ ರಾಜಕೀಯ ಮಾಡುವವರಿಗೆ ಜನರು ಅನುಭವಿಸುವ ಕಷ್ಟಗಳು ಹೇಗೆ ಅರ್ಥವಾಗುತ್ತವೆ? ಉತ್ತಮ ಲೇಖನಕ್ಕಾಗಿ ವಂದನೆಗಳು ಬಿಆರೆಸ್.

ಉ: ಜೆ.ಡಿ.ಎಸ್. ರಸ್ತೆ ಬಂತು! ಬಿ.ಜೆ.ಪಿ. ರಸ್ತೆ ಬಂತು!

modmani's picture

ಹೆ ಹೆ .. ಎಲ್ಲವನ್ನೂ ನಗುನಗುತ್ತಾ ಸ್ವೀಕರಿಸುವುದು ಕನ್ನಡಿಗರ ಹುಟ್ಟುಗುಣ ಅಲ್ಲವೇ..! ಈ ರಸ್ತೆಯಲ್ಲಿ ಓಡಾಡುವ ಕಷ್ಟ ಬೇಡವೆಂದು ನಾನು ಮೈಸೂರು ಮಾರ್ಗವಾಗಿ ಹೊಳೆನರಸೀಪುರಕ್ಕೆ ಹೋಗುವುದಿದೆ. ಅಥವಾ ಚನ್ನರಾಯಪಟ್ಟಣದಿಂದ ಅಡೇನಹಳ್ಳಿ ಮಾರ್ಗವಾಗಿ ಹೊಳೆನರಸೀಪುರಕ್ಕೆ..

ಏನೇ ಆದರೂ ಸೇಡಿನ ರಾಜಕಾರಣ ಮಾಡುವ ರಾಜಕಾರಣಿಗಳಿಗೆ ಧಿಕ್ಕಾರ

ಉ: ಜೆ.ಡಿ.ಎಸ್. ರಸ್ತೆ ಬಂತು! ಬಿ.ಜೆ.ಪಿ. ರಸ್ತೆ ಬಂತು!

manju787's picture

ಓಹೋ, ನನ್ನ ಧಿಕ್ಕಾರದ ಕೂಗಿಗೆ ಇನ್ನೊಂದು ಧ್ವನಿ ಸೇರಿದ೦ತಾಯ್ತು!!

ಉ: ಜೆ.ಡಿ.ಎಸ್. ರಸ್ತೆ ಬಂತು! ಬಿ.ಜೆ.ಪಿ. ರಸ್ತೆ ಬಂತು!

asuhegde's picture

ವಿಪಕ್ಷಗಳಲ್ಲಿರುವ ಶಾಸಕರುಗಳು ತಮ್ಮ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ, ಎಲ್ಲಿ ಯಾವ ಯಾವ ರೀತಿ ಅಧಿಕಾರದಲ್ಲಿರುವ ಪಕ್ಷದಿಂದ ಅಥವಾ ಶಾಸಕರು ಅಥವಾ ಅಧಿಕಾರಿಗಳಿಂದ ಈ ಕಾರ್ಯಗಳಿಗೆ ತಡೆ ಆಗಿದೆ ಅನ್ನುವುದನ್ನು ಬಹಿರಂಗ ಪಡಿಸಲಿ.

ವಿರೋಧ ಪಕ್ಷದಲ್ಲಿ ಇರುವುದು ಬರೀ ವಿರೋಧ ವ್ಯಕ್ತಪಡಿಸುವುದಕ್ಕಷ್ಟೇ ಅಂತ ಭಾವಿಸಿಕೊಂಡಿರುವವರು ಬಹಳಷ್ಟಿದ್ದಾರೆ.

ನಾನು ಯಾವ ಪಕ್ಷವನ್ನೂ ಬೆಂಬಲಿಸಿ ಮಾತಾಡುತ್ತಿಲ್ಲ.

ರಾಜಕೀಯದಲ್ಲಿ ನನಗೆಲ್ಲರೂ ಒಂದೇ.

- ಆಸು ಹೆಗ್ಡೆ.

ಉ: ಜೆ.ಡಿ.ಎಸ್. ರಸ್ತೆ ಬಂತು! ಬಿ.ಜೆ.ಪಿ. ರಸ್ತೆ ಬಂತು!

Rakesh Shetty's picture

ನಿಜ ಸರ್, ಇದು ಎಲ್ಲ ಪಕ್ಷಗಳಿಗೆ, ಪಕ್ಷಗಳ ಶಾಸಕರು,ಸಚಿವರಿಗೆ ಅಂಟಿರುವ ರೋಗ. ಒಂದು ಪಕ್ಷದವರು ಶುರು ಮಾಡಿದ ಕೆಲಸಗಳು ಅವರ ಅವಧಿಯಲ್ಲಿ ಮುಗಿದರೆ ಮುಗಿದ ಹಾಗೆ ಇಲ್ಲದಿದ್ದರೆ ಅಷ್ಟೇ! , ಗೌಡ್ರು ಬಂದ್ರೆ ಹಾಸನ ಅಂತಾರೆ, ಯಡ್ಡಿ ಶಿವಮೊಗ್ಗ ಅಂತಾರೆ,ಕುಮಾರ ರಾಮನಗರ!

ಜನ ಕೈಗೆ ತಗೊಬೇಕಾದದ್ದನ್ನ ತಗೊಂಡ್ರೆನೆ ಕೆಲಸ ಆಗೋದು ,ಆದ್ರೆ ಎಲ್ಲದಕ್ಕಿಂತ ಮೊದಲು ನಾವು ಜನಗಳೇ ಸರಿ ಇಲ್ಲ. ವೋಟು ಹಾಕ್ರಪ್ಪ ಅಂದ್ರೆ 'ಎಷ್ಟು ಕೊಡ್ತಿರಾ?' ಅನ್ನೋವ್ರೆ ಜಾಸ್ತಿ!, ಅವ್ರು ಕೊಡ್ತಾರೆ ಗೆದ್ದು ಬಂದಮೇಲೆ 'ಬಿಟ್ಟಿ ಗೆದ್ದಿಲ್ಲ,ಕೊಟ್ಟು ಬಂದಿದ್ದೀನಿ' ಅಂತಾರೆ.

ನನಗು ನಿಮ್ಮದೇ ಡೌಟ್ ಬರುತ್ತೆ ಇವರೆಲ್ಲ ತಮ್ಮ ತವರು ಜಿಲ್ಲೆಗಳ ಮುಖ್ಯಮಂತ್ರಿಗಳೋ? ಇಲ್ಲ ರಾಜ್ಯಕ್ಕೋ?