June 14, 2010 - 12:45pm
ಗೆಳೆಯರೆ,
ನಮ್ಮ ಪರಿಚಯದವರೊಬ್ಬರಿಗೆ ಹರ್ಪಿಸ್ (ಸರ್ಪಸುತ್ತು) ಆಗಿದೆ. ನಾನು ಅಲ್ಲಿ, ಇಲ್ಲಿ ಇದರ ಬಗ್ಗೆ ಕೇಳಿದ್ದೆನಾದರೂ, ತುಂಬಾ ಹತ್ತಿರದಿಂದ ನೋಡಿದ್ದು ಇದೇ ಮೊದಲು. ನಾನು ಗೂಗಲಿಸಿದಾಗ, ಇದೊಂದು ವೈರಸ್ಸಿನಿಂದ ಉಂಟಾಗುವುದೆಂದೂ, ಕ್ರಮೇಣ ವೈರಸ್ ತಾನಾಗಿಯೇ ಇಳಿಯುತ್ತದೆ, ಹೀಗೆ ಮುಂತಾದ ಮಾಹಿತಿ ಸಿಕ್ಕಿದೆ. ನಾನು ಮಾತನಾಡಿಸಿದ ಹೆಚ್ಚಿನವರು ಇದಕ್ಕೆ ಪರಿಹಾರ ಇಲ್ಲವೆಂದೂ, ಮಂತ್ರ ಹಾಕಿಸಬೇಕು ಎಂಬ ಧಾಟಿಯಲ್ಲಿಯೇ ಮಾತನಾಡಿದ್ದಾರೆ.
ಈ ಸರ್ಪಸುತ್ತುವಿನ ಬಗ್ಗೆ ಮಾಹಿತಿ ಇದ್ದರೆ ಯಾರಾದರು ತಿಳಿಸಿಕೊಡಿ.
ಇದರ ಗುಣಲಕ್ಷಣಗಳೇನು ?
ಇದು ಬರಲು ಕಾರಣಗಳೇನು ?
ಇದಕ್ಕೆ ಪರಿಹಾರ ?
ರೋಗಿಯ ಆರೈಗೆ ಹೇಗಿರಬೇಕು ?
ಆರೈಕೆ ಮಾಡುವವರು ಯಾವ ರೀತಿಯ ಮುಂಜಾಗ್ರತೆ ವಹಿಸಬೇಕು ?
Forums:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಉ: ಮಾಹಿತಿ ಬೇಕಾಗಿದೆ : ಹರ್ಪಿಸ್ - ಸರ್ಪಸುತ್ತು
ಬಹಳ ಹಿಮ್ದೆ ನನಗೂ ಆಗಿತ್ತು, ಡಾಕ್ಟರ್ ಬಳಿ ಹೋದಾಗ ಅವರು ಪಥ್ಯ ಮಾಡಲು ಹೇಳಿ ಆಯುರ್ವೇದವನ್ನೇ ಶಿಫಾರಸು ಮಾಡಿದ್ದರು.
ನಂತರ ನಮ್ಮ ಮನೆ ಸಮೀಪದ ಅಜ್ಜಿಯೊಬ್ಬರು ಯಾವುದೋ ಸೊಪ್ಪನ್ನು(ಅವರು ಹೆಸರು ಹೇಳುವುದಿಲ್ಲವಂತೆ) ದನದ ಮೂತ್ರದಲ್ಲಿ ಅರೆದು ಹಚ್ಚಲು ಹೇಳಿದ್ದರು, ಅದರಂತೆ ಮಾಡಿದಾಗ ೩ ದಿನದಲ್ಲಿ ಗುಣಮುಖನಾಗಿದ್ದೆ.
ಉ: ಮಾಹಿತಿ ಬೇಕಾಗಿದೆ : ಹರ್ಪಿಸ್ - ಸರ್ಪಸುತ್ತು
ಇದಕ್ಕೆ ಆಯುರ್ವೇದ, ನಾಟಿ, ಇಂಗ್ಲೀಷ್ ಮೆಡಿಸಿನ್ನು ಎಲ್ಲಾ ಲಭ್ಯವಿದೆ ಈಗ. ಯಾವುದು ಅನುಕೂಲವೋ ಅದನ್ನು ಆಯ್ದುಕೊಂಡು ಗುಣಪಡಿಸಬಹುದು.
ಉ: ಮಾಹಿತಿ ಬೇಕಾಗಿದೆ : ಹರ್ಪಿಸ್ - ಸರ್ಪಸುತ್ತು
ಸರ್ಪಸುತ್ತಿಗೆ ಔಷಧಿ ಮೊದಲು ಒಂದೆರಡು ದಿನದಲ್ಲೇ ಪ್ರಾರಂಭಿಸಿದರೆ ಹೆಚ್ಚು ಪರಿಣಾಮಕಾರಿಯಂತೆ. ಇಲ್ಲವಾದರೆ ಬರೀ ನೋವು/ನವೆ ನಿವಾರಕಗಳ ಮೊರೆ ಹೋಗಬೇಕಷ್ಟೇ. ಒಟ್ಟಿನಲ್ಲಿ ಚಿಕ್ಕಂದಿನಲ್ಲಿ ಸೀತಾಳೆ ಸಿಡುಬು ಬಂದವರಿಗೆಲ್ಲ ಹರ್ಪಿಸ್ ಬರಬಹುದಾಗಿದ್ದು, ದೇಹವು ಯಾವುದಾದರೂ ರೀತಿಯಲ್ಲಿ ಸೂಕ್ಷ್ಮ (vulnerable) ಸ್ಥಿತಿಯಲ್ಲಿದ್ದಾಗ ಇದು ಹೊಮ್ಮುವ ಸಾಧ್ಯತೆ ಹೆಚ್ಚು ಅಂತ ಕೇಳಿದ್ದೇನೆ.
ಉ: ಮಾಹಿತಿ ಬೇಕಾಗಿದೆ : ಹರ್ಪಿಸ್ - ಸರ್ಪಸುತ್ತು
ಸುನಿಲ್ ಅವರೇ,
ನಾನು ವೈದ್ಯನಲ್ಲ. ಆದರೂ, ಓದಿ ತಿಳಿದ ಒಂದಿಷ್ಟು ಮಾಹಿತಿ ಇಲ್ಲಿದೆ. ಸಂಪದದ ವೈದ್ಯರಲ್ಲಿ ಯಾರಾದರೂ ಇದನ್ನು ಓದಿ ತಪ್ಪುಗಳಿದ್ದರೆ ತಿದ್ದಬೇಕಾಗಿ ಕೇಳಿಕೊಳ್ಳುವೆ.
ಇಂಗ್ಲೀಷಿನ Herpes zoster ಅಥವಾ shingles ರೋಗಕ್ಕೆ ಕನ್ನಡದಲ್ಲಿ ಸರ್ಪಸುತ್ತು ಎಂಬ ಪದ ಬಳಕೆಯಲ್ಲಿದೆ.
ಈ ರೋಗದ ಅತ್ಯಂತ ಪ್ರಮುಖ ಗುಣಲಕ್ಷಣಗಳು ಎಂದರೆ "ಉರಿ"ಯುವಂಥ ನೋವು/ತುರಿಕೆ ಮತ್ತು ಗುಳ್ಳೆಗಳು ಏಳುವುದು. ಸಾಧಾರಣವಾಗಿ ಸೊಂಟ, ಹೊಟ್ಟೆ, ಬೆನ್ನುಗಳಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆಯಾದರೂ, ಒಮ್ಮೊಮ್ಮೆ, ಮುಖದ ಮೇಲೆ, ಕಣ್ಣು ಹಾಗೂ ಕಿವಿಗಳ ಹತ್ತಿರವೂ ಹಾಗೂ ಬೇರೆಡೆಯಲ್ಲೂ ಗುಳ್ಳೆಗಳು ಏಳಬಹುದು. ನೋವು ಸುರುವಾದ ಒಂದೆರಡು ದಿನಗಳಲ್ಲಿ ಗುಳ್ಳೆಗಳು ಕಾಣಿಸಿಕೊಂಡು ನಾಲ್ಕೈದು ದಿನಗಳವರೆಗೂ ಆಗಾಗ ಮತ್ತಷ್ಟು ಗುಳ್ಳೆಗಳು ಕಾಣುತ್ತವೆ. ಆದರೆ, ಈ ರೋಗ ಎಲ್ಲರಲ್ಲಿಯೂ ಒಂದೇ ಸಮನಾದ ತೀವ್ರತೆ ಹೊಂದಿರುವುದಿಲ್ಲ. ಅಂದರೆ, ಕೆಲವರಲ್ಲಿ ಇದು ಸ್ವಲ್ಪದರಲ್ಲಿ ಗುಣವಾದರೆ, ಇನ್ನು ಕೆಲವರಲ್ಲಿ ತುಂಬಾ ತೊಂದರೆ ಕೊಡುತ್ತದೆ. ಕೆಲವರಿಗೆ ತಲೆನೋವು, ಜ್ವರ ಹಾಗೂ ನಡುಕಗಳು ಬರಬಹುದು.
ಈ ರೋಗವೂ ಸಹ ಸಿಡುಬು (chickenpox) ರೋಗವನ್ನು ಉಂಟುಮಾಡುವ Varicella zoster ವೈರಸ್ಸಿನಿಂದಲೇ ಬರುತ್ತದೆ. ಸಾಧಾರಣವಾಗಿ, ಐವತ್ತು ವರ್ಷಗಳ ನಂತರದವರಲ್ಲಿ ಮತ್ತು ಈಗಾಗಲೇ ಒಮ್ಮೆ chickenpox ಆದವರಲ್ಲಿ ಕಾಣಿಸಿಕೊಳ್ಳುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಆದವರಲ್ಲಿ ಈ ರೋಗ ಬರುವ ಸಾಧ್ಯತೆ ಹೆಚ್ಚು. ನರವೊಂದರಲ್ಲಿ ಅಡಗಿಕೊಂಡಿದ್ದ ವೈರಸ್ ಪುನರ್ಚಾಲನೆ (reactivation) ಹೊಂದಿದಾಗ ಈ ರೋಗ ಬರುತ್ತದೆ ಎಂದು ತಿಳಿಯಲಾಗಿದೆ. Varicella zoster ಸಹ Herpes simplex virus ಜಾತಿಗೆ ಸೇರಿದ ವೈರಸ್ ಆಗಿದ್ದರೂ Herpes zoster ರೋಗ ಬೇರೆ; Herpes simplex virus 1, Herpes simplex virus 2 ರಿಂದ ಬರುವ ರೋಗಗಳು ಬೇರೆ.
ಸಾಧಾರಣವಾಗಿ, ಎರಡು ಮೂರು ವಾರಗಳಲ್ಲಿ Herpes zoster ರೋಗವು ತಾನೇ ತಾನಾಗಿ ಕಡಿಮೆಯಾಗುತ್ತದೆ. ಅಮೆರಿಕಾದಲ್ಲಿ ಇದಕ್ಕೆ ಲಸಿಕೆ ಕೊಡುವ ಪದ್ಧತಿ ಸುರುವಾದ ಮೇಲೆ ಈ ರೋಗ ತುಂಬಾ ಕಡಿಮೆಯಾಗಿದೆ. ಭಾರತದಲ್ಲಿ ಲಸಿಕೆ ಲಭ್ಯವಿದೆಯೋ ಎಂಬುದು ನನಗೆ ಗೊತ್ತಿಲ್ಲ. ಉಳಿದಂತೆ, ರೋಗ ಸುರುವಾಗುತ್ತಿರುವಾಗಲೇ, ಅಂದರೆ ಮೊದಲ ಒಂದೆರಡು ದಿನಗಳಲ್ಲಿಯೇ acyclovir ಇತ್ಯಾದಿ ಆಂಟಿವೈರಲ್ ಔಷಧಿಗಳಿಂದ ರೋಗದ ಅವಧಿ ಕಡಿಮೆಯಾಗುತ್ತದೆ ಎಂದು ತಿಳಿದುಬಂದಿದೆ. ನೋವನ್ನು ಕಡಿಮೆ ಮಾಡಲು ಔಷಧ, ಚರ್ಮದ ಸೌಖ್ಯಕ್ಕಾಗಿ ಕಾಲಮಿನ್ ಇತ್ಯಾದಿ ಮುಲಾಮುಗಳು, ಔಷಧ ಸೇರಿಸಿದ ತಂಪು ನೀರಿನ ಪಟ್ಟಿ ಇತ್ಯಾದಿಗಳ ಕುರಿತು ವೈದ್ಯರ ಸಲಹೆ ಮೇರೆಗೆ ನಿರ್ಧರಿಸಬಹುದು.
ಈ ರೋಗವು ಒಂದರ್ಥದಲ್ಲಿ ಸಾಂಕ್ರಾಮಿಕ ಅಲ್ಲ. ಆದರೆ Herpes zoster ರೋಗಿಯ ಸಂಪರ್ಕದಲ್ಲಿ ಬಂದರೆ, ಈವರೆಗೂ chickenpox ಆಗದೇ ಇರುವ ವ್ಯಕ್ತಿಗೆ chickenpox ಆಗುವ ಸಂಭವವಿದೆ. ಒಮ್ಮೆ chickenpox ಆಗಿರುವವರಿಗೆ Herpes zoster ರೋಗಿಯ ಸಂಪರ್ಕದಲ್ಲಿ ಬರುವುದರಿಂದ ತೊಂದರೆ ಇಲ್ಲ.
ವಯಸ್ಸಾದವರಲ್ಲಿ ಗುಳ್ಳೆಗಳು ಕಡಿಮೆಯಾದ ಮೇಲೂ postherpetic neuralgia ದಿಂದ ನೋವು ಬಹಳ ದಿನಗಳ ವರೆಗೆ ಇರಬಹುದು. ಕಿವಿಯ ಹತ್ತಿರ ಗುಳ್ಳೆಗಳಾದಲ್ಲಿ, ತದನಂತರ ಕಿವಿ ಮಂದವಾಗಬಹುದು.
ಒಟ್ಟಿನಲ್ಲಿ, ನಿಮ್ಮ ಪರಿಚಯದವರನ್ನು ತಡಮಾಡದೇ ತಜ್ಞ ವೈದ್ಯರಿಗೆ ತೋರಿಸಿ ಎಂದು ನನ್ನ ಸಲಹೆ.
ಉ: ಮಾಹಿತಿ ಬೇಕಾಗಿದೆ : ಹರ್ಪಿಸ್ - ಸರ್ಪಸುತ್ತು
ಸುನಿಲ್ ಸರ್ಪ ಸುತ್ತು ಅಥವಾ ಸರ್ಪ ಹುಣ್ಣು ಅನ್ನುವ ಈ ರೋಗ ದೇಹದ ಹೆಚ್ಚಿನ ಶಾಖದಿಂದಾಗಿ ಬರುತ್ತದೆ. ನೋಡಲು ಹಾವಿನ ಮಾದರಿಯಲ್ಲಿದ್ದು, ಹೆಚ್ಚಿನ ಉರಿ ಹಾಗೂ ನೋವು ಕಾಣಿಸಿಕೊಳ್ಳುತ್ತದೆ. ಮಲಗಲು ಬಿಡುವುದೇ ಇಲ್ಲ. ಹಾವಿನ ಮುಖ ಮತ್ತು ಬಾಲ ಕೂಡಬಾರದೆಂದು ಹೇಳುತ್ತಾರೆ. ಅವೆರಡೂ ಸೇರಿದರೆ ಸಾಯುತ್ತಾರೆ ಎನ್ನುವ ಮಾತುಗಳೂ ಇದೆ. ಆದರೆ ಇದು ಶುದ್ದ ಸುಳ್ಳು ಇವೆರಡೂ ವೈಜ್ಞಾನಿಕವಾಗಿ ಕೂಡಲು ಸಾಧ್ಯವೇ ಇಲ್ಲ. ಹಾವಿನ ಪಕ್ಕದಲ್ಲಿ ಗರುಡ ಬರೆಯುವ ಪದ್ದತಿ ಇದೆ. ಆದರೆ ನನ್ನ ಸಲಹೆಯೇನೆಂದರೆ ತಕ್ಷಣವೇ ನ್ಯೂರೋ ಸ್ಪೆಷಲಿಸ್ಟ್ ರನ್ನು ಭೇಟಿಯಾಗಿ ಎರಡು ಮೂರು ದಿನಗಳಲ್ಲೇ ವಾಸಿಯಾಗುತ್ತದೆ. ನಿಮ್ಮ ಪ್ರಶ್ನೆಗಳನ್ನು ನೋಡಿದಾಗ ನನ್ನ ಅಮ್ಮ ಅನುಭವಿಸಿದ ಯಾತನೆ ನೆನಪಿಗೆ ಬಂತು. ನಾನು ಸತ್ತು ಹೋಗ್ತೀನಿ ಅಂತಾ ಜೋರಾಗಿ ರಾತ್ರಿಯಿಡೀ ಅಳ್ತಿದ್ಲು. ಈಗ ಅಮ್ಮಾ ಇಲ್ಲ.
ಉ: ಮಾಹಿತಿ ಬೇಕಾಗಿದೆ : ಹರ್ಪಿಸ್ - ಸರ್ಪಸುತ್ತು
ಸುರೇಶ್ ನಾಡಿಗ್,
ನಿಮ್ಮ ತಾಯಿಯವರು ಸರ್ಪಸುತ್ತಿನ ನೋವಿನಿಂದ ನರಳಿದ್ದು ತಿಳಿದು ವ್ಯಥೆಯಾಯಿತು. ಸರ್ಪಸುತ್ತಿನ ನೋವಿನ ಕೆಲವರಲ್ಲಿ ಎಷ್ಟು ತೀವ್ರವಾಗಿರುತ್ತದೆ ಎಂಬುದಕ್ಕೆ ನಿಮ್ಮ ಮಾತೇ ಸಾಕ್ಷಿಯಾಗಿದೆ. ಒಂದು ಕಾಲದಲ್ಲಿ ನೋವನ್ನು ತಾಳಲಾಗದೇ ನೋವನ್ನು ಪ್ರವಹಿಸುವ ನರಕ್ಕೆ ಆಲ್ಕೋಹಾಲನ್ನು ಚುಚ್ಚಿ ಆ ನರವನ್ನೇ ನಾಶಪಡಿಸುವ ರಣವೈದ್ಯವನ್ನು ಮಾಡುತ್ತಿದ್ದರು. ಈಗ ಅಂತಹ ದುಃಸ್ಥಿತಿ ಇಲ್ಲ ಎನ್ನುವುದೇ ಸಮಾಧಾನ.
ಸರ್ಪಸುತ್ತಿನ ಬಗ್ಗೆ ಅಗತ್ಯ ಮಾಹಿತಿಯನ್ನು ಶ್ರೀಶಿವರಾಮಶಾಸ್ತ್ರಿಗಳು ನೀಡಿದ್ದಾರೆ. ಮತ್ತೆ ಹೆಚ್ಚಿಗೆ ಹೇಳುವುದೇನೂ ಇಲ್ಲ. ಶಾಸ್ತ್ರಿಯವರಿಗೆ ಅಭಿನಂದನೆಗಳು. ಏಸೈಕ್ಲೋವಿರ್ ಎಂಬ ಔಷಧವಿದೆ. ಇದು ಗುಳಿಗೆಯ ರೂಪದಲ್ಲಿ ಹಾಗೂ ಲೇಪನದ ರೂಪದಲ್ಲಿ ದೊರೆಯುತ್ತದೆ. ಸರ್ಪಸುತ್ತನ್ನು ನಿಯಂತ್ರಿಸಲು ಮೂಲತಃ ಈ ಔಷಧಿ ಸಾಕು. ಗುಳಿಗೆಯನ್ನು ತಿನ್ನಬೇಕು ಹಾಗೂ ಲೇಪನವನ್ನು ಸರ್ಪಸುತ್ತಿನ ನೀರು ತುಂಬಿದ ಗುಳ್ಳೆಗಳ ಮೇಲೆ ಹಚ್ಚಬೇಕು. ಪೂರಕ ಔಷಧಗಳ ಅಗತ್ಯದ ಬಗ್ಗೆ ವ್ಯಕ್ತಿಯನ್ನು ವೈಯುಕ್ತಿಕವಾಗಿ ಪರೀಕ್ಷಿಸಿ ನಿರ್ಧರಿಸಬೇಕಾಗುತ್ತದೆ. ಏಸೈಕ್ಲೋವಿರ್ ಗುಳಿಗೆಯನ್ನು ಎಷ್ಟು ತೆಗೆದುಕೊಳ್ಳಬೇಕು ಹಾಗೂ ಎಲ್ಲಿಯವರೆಗೆ ಮುಂದುವರೆಸಬೇಕು ಎನ್ನುವುದನ್ನು ಸಾಮಾನ್ಯವಾಗಿ ಲೇಖನಗಳಲ್ಲಿ ಬರೆಯಬಾರದು ಎಂಬ ನೀತಿಯಿದೆ. ಹಾಗಾಗಿ ಆ ವಿವರವನ್ನು ಇಲ್ಲಿ ನಾನು ದಾಖಲಿಸುತ್ತಿಲ್ಲ. ಕ್ಷಮಿಸಿ.
>>ಸುನಿಲ್ ಸರ್ಪ ಸುತ್ತು ಅಥವಾ ಸರ್ಪ ಹುಣ್ಣು ಅನ್ನುವ ಈ ರೋಗ ದೇಹದ ಹೆಚ್ಚಿನ ಶಾಖದಿಂದಾಗಿ ಬರುತ್ತದೆ. ನೋಡಲು ಹಾವಿನ ಮಾದರಿಯಲ್ಲಿದ್ದು, ಹೆಚ್ಚಿನ ಉರಿ ಹಾಗೂ ನೋವು ಕಾಣಿಸಿಕೊಳ್ಳುತ್ತದೆ. ಮಲಗಲು ಬಿಡುವುದೇ ಇಲ್ಲ. ಹಾವಿನ ಮುಖ ಮತ್ತು ಬಾಲ ಕೂಡಬಾರದೆಂದು ಹೇಳುತ್ತಾರೆ. ಅವೆರಡೂ ಸೇರಿದರೆ ಸಾಯುತ್ತಾರೆ ಎನ್ನುವ ಮಾತುಗಳೂ ಇದೆ. ಆದರೆ ಇದು ಶುದ್ದ ಸುಳ್ಳು ಇವೆರಡೂ ವೈಜ್ಞಾನಿಕವಾಗಿ ಕೂಡಲು ಸಾಧ್ಯವೇ ಇಲ್ಲ. ಹಾವಿನ ಪಕ್ಕದಲ್ಲಿ ಗರುಡ ಬರೆಯುವ ಪದ್ದತಿ ಇದೆ.<<
ಇದೊಂದು ಜನಸಾಮಾನ್ಯರಲ್ಲಿರುವ ಮೂಢನಂಬಿಕೆ. ಹಾವಿನ ಮುಖ ಹಾಗೂ ಬಾಲ ಕೂಡಬಾರದು, ಕೂಡಿದರೆ ಸಾವು ಶತಃಸಿದ್ಧ ಎಂಬ ನಂಬಿಕೆಗೆ ಯಾವುದೇ ವೈಜ್ಞಾನಿಕ ಪುರಾವೆಯಿಲ್ಲ. ಇಂತಹ ನಂಬಿಕೆಗಳಿಗೆ ಸಾಧ್ಯವಾದಷ್ಟರ ಮಟ್ಟಿಗೆ ಪ್ರಚಾರವನ್ನು ನೀಡದಿರುವುದು ಒಳಿತು.
ಸುಪ್ತವಾಗಿದ್ದ ವೈರಸ್ಸುಗಳು ಜಾಗೃತವಾಗಲು ಮುಖ್ಯ ಕಾರಣ ರೋಗನಿರೋಧಕ ಶಕ್ತಿಯ ದುರ್ಬಲತೆ. ಮುಖ್ಯವಾಗಿ ಮಾನಸಿಕ ಒತ್ತಡವು ತೀವ್ರವಾಗಿದ್ದಾಗ ಸರ್ಪಸುತ್ತು ಕಂಡುಬರುವುದನ್ನು ನನ್ನ ಅನುಭವದಲ್ಲಿ ನೋಡಿದ್ದೇನೆ. ಹಾಗಾಗಿ ರೋಗಿಯ ಮಾನಸಿಕ ಹಿನ್ನೆಲೆ, ಮುಖ್ಯವಾಗಿ ಒತ್ತಡಗಳನ್ನು ತಿಳಿದು ಅದಕ್ಕೆ ಸೂಕ್ತ ಸಾಂತ್ವನವನ್ನು ನೀಡಬೇಕಾಗುತ್ತದೆ. ಈ ಬಗ್ಗೆ ಸುನೀಲ್ ಪ್ರಕಾಶ್ ಅವರು ವಿಶೇಷ ಗಮನವನ್ನು ನೀಡುವುದು ಒಳ್ಳೆಯದು.
-ನಾಸೋ
ಉ: ಮಾಹಿತಿ ಬೇಕಾಗಿದೆ : ಹರ್ಪಿಸ್ - ಸರ್ಪಸುತ್ತು
ಡಾ. ನಾಸೋ ಅವರೇ,
ವಿದೇಶ ಪ್ರಯಾಣದ ತಯಾರಿ ಇತ್ಯಾದಿ ಕಾರ್ಯ ಬಾಹುಳ್ಯದ ನಡುವೆಯೂ, ಸುನೀಲರವರಿಗೆ ಸೂಕ್ತ ಮಾರ್ಗದರ್ಶನ ಒದಗಿಸಿ ಹಿರಿಮೆ ತೋರಿದ್ದೀರಿ.
[ಸರ್ಪಸುತ್ತಿನ ಬಗ್ಗೆ ಅಗತ್ಯ ಮಾಹಿತಿಯನ್ನು ಶ್ರೀಶಿವರಾಮಶಾಸ್ತ್ರಿಗಳು ನೀಡಿದ್ದಾರೆ. ಮತ್ತೆ ಹೆಚ್ಚಿಗೆ ಹೇಳುವುದೇನೂ ಇಲ್ಲ. ಶಾಸ್ತ್ರಿಯವರಿಗೆ ಅಭಿನಂದನೆಗಳು.]
ನನ್ನ ಪ್ರತಿಕ್ರಿಯೆಯನ್ನು ಅನುಮೋದಿಸಿದ್ದಕ್ಕೆ ಧನ್ಯವಾದಗಳು.
ಉ: ಮಾಹಿತಿ ಬೇಕಾಗಿದೆ : ಹರ್ಪಿಸ್ - ಸರ್ಪಸುತ್ತು
ಹರ್ಪಿಸ್ ಈಗ ೬ ತಿಂಗಳ ಕೆಳಗೆ ನಮ್ಮತ್ತೆಯವರಿಗೆ ಆದಾಗ ಗುಳ್ಳೆಗಳು ಕಾಣಿಸಿಕೊಳ್ಳುವ ಮುನ್ನ ನೋವಾಯಿತು. ನಂತರ ೩-೪ ಗುಳ್ಳೆಗಳಾದವು. ತಕ್ಷಣ ಆಸ್ಪತ್ರೆಗೆ ತೋರಿಸಿದಾಗ, ವೈಧ್ಯರು ಮಾತ್ರೆಯ ಜೊತೆಗೆ ಮುಲಾಮನ್ನು ಕೊಟ್ಟರು.
ಇನ್ನೊಂದು ವಿಷಯ ನೆನಪಿಲ್ಲಿಡಬೇಕು: ಹರ್ಪಿಸ್ ಆದವರು ಕಾಟನ್ ಬಟ್ಟೆಯನ್ನು ಧರಿಸಬೇಕು
ಉ: ಮಾಹಿತಿ ಬೇಕಾಗಿದೆ : ಹರ್ಪಿಸ್ - ಸರ್ಪಸುತ್ತು
@ಗೆಳೆಯರೆ, ನಿಮ್ಮೆಲ್ಲರ ಹಾರೈಕೆ ಮತ್ತು ಸಲಹೆಗಳಿಂದಾಗ ಈಗ ನಮ್ಮವರು ಗುಣಮುಖರಾಗಿದ್ದಾರೆ.
@ನಾಸೋ, ನೀವು ಹೇಳಿದ ಮಾನಸಿಕ ಒತ್ತಡದ ಬಗ್ಗೆಯೂ ವಿವರಿಸಿ ಹೇಳಿದ್ದೇನೆ. ಸದ್ಯಕ್ಕೆ ಗುಣಮುಖರಾಗಿದ್ದಾರೆ.
ಉ: ಮಾಹಿತಿ ಬೇಕಾಗಿದೆ : ಹರ್ಪಿಸ್ - ಸರ್ಪಸುತ್ತು
ನನಗೂ ಹರ್ಪಿಸ್ ಆಗಿದೆ ಅಂತ ಡಾಕ್ಟರರು ಹೇಳಿದ್ದಾರೆ. ಕನ್ನಡದಲ್ಲಿ ಹೆಚ್ಚಿನ ಮಾಹಿತಿಗಾಗಿ ಹುಡುಕಿದಾಗ ಬಂದದ್ದು ಸಂಪದಕ್ಕೇ. ಪ್ರಶ್ನೆ ಕೇಳಿದ 'ನನ್ನಿ' ಸುನೀಲರಿಗೂ , ಭಾಗವಹಿಸಿದ ಎಲ್ಲರಿಗೂ , ಅದರಲ್ಲೂ ವಿಶೇಷವಾಗಿ ಶಿವರಾಮಶಾಸ್ತ್ರಿ ಹಾಗೂ ಸಂಪದದ ಕುಟುಂಬವೈದ್ಯರಾದ ನಾ.ಸೋಮೇಶ್ವರರಿಗೂ ತುಂಬ ಧನ್ಯವಾದಗಳು. ಈಗ ಪ್ರಿಸ್ಕ್ರಿಪ್ಶನ್ ನೋಡಲಾಗಿ HERPES ZOLSTER ಎಂದು ಬರಿದಿದ್ದಾರೆ. ಇತರ ಗುಳಿಗೆಗಳ ಜತೆಗೆ acicilovir ಮುಲಾಮನ್ನೂ ಹಚ್ಚಲು ಹೇಳಿದ್ದಾರೆ.
ಇಷ್ಟೆಲ್ಲ ಮಾಹಿತಿ ಹಂಚಿಕೊಳ್ಳಲು ಕಾರಣವಾದ ಸಂಪದಕ್ಕೂ ಹರಿಪ್ರಸಾದ ನಾಡಿಗರಿಗೂ ಧನ್ಯವಾದಗಳು.