ಕನ್ನಡದ ಏತ್ವಗಳು
ಕನ್ನಡದಲ್ಲಿ ನಾವು ಸಣ್ಣವರಿದ್ದಾಗ (ಕೆಲವರು ದೊಡ್ಡವರಾದರೂ ಕಲಿಯುವುದಿಲ್ಲ, ಅದು ಬಿಡಿ) ಕನ್ನಡದಲ್ಲಿ ಎರಡು ಏತ್ವಗಳನ್ನು ಕಲಿತಿರುತ್ತೇವೆ.
ಅಂದರೆ,
ಕ ಕ್ಕೇತ್ವ ಕೆ (ಕ್ + ಎ = ಕೆ)
ಕ ಕ್ಕೇತ್ವಂದೀರ್ಘಾ ಕೇ (ಕ್ + ಏ = ಕೇ)
ಬೆಳೆಯುತ್ತಾ ಬೆಳೆಯುತ್ತಾ, ನನಗೆ ಕನ್ನಡದಲ್ಲಿ ಮತ್ತೊಂದು ಏತ್ವದ ಅವಶ್ಯಕತೆಯಿದೆ ಎಂದನಿಸಲು ಪ್ರಾರಂಭವಾಗಿತ್ತು. ಕೆಲವೆಡೆ ನಾವು ಏತ್ವ ಇಲ್ಲದೆ ಏತ್ವನ್‌ದೀರ್ಘ(ಅಂದರೆ ಏತ್ವ ಇಲ್ಲದ ಕ ಪದಕ್ಕಲ್ಲಿ ಗುಡ್ಸಿನ್‌ದೀರ್ಘ ಅಥವಾ ಏತ್ವನ್‌ದೀರ್ಘಾ) ಬರೆದಿರುವುದನ್ನು ಕಾಣುತ್ತೇವೆ. ಅದು ತಪ್ಪು ಎಂದು ಬಹಳ ಹಿಂದೆ ತಿಳಿದಿದ್ದೆ, ಆದರೆ ಅದು ಸರಿಯಿರಲೂಬಹುದು ಎಂದನಿಸಲು ಶುರುವಾಗಿದೆ.
ಹಿಂದೆ ಏತ್ವ ಇಲ್ಲದ ಏತ್ವನ್‌ದೀರ್ಘ ಎಲ್ಲಿ ಹೇಗೆ ಬಳಸುತ್ತಿದ್ದರೋ ಏನೋ ನನಗೆ ತಿಳಿಯದು. ಯಾರಿಗಾದರು ತಿಳಿದಿದ್ದರೆ ತಮ್ಮ ಅರಿವನ್ನು ಹಂಚಿಕೊಳ್ಳುವುದು.
ಆದರೆ ಈಗ ಸಮಸ್ಯೆ ನೋಡಿ.
ಇಂಗ್ಲೀಷಿನ Bank, Cat ಎನ್ನುವುದನ್ನು ನಾವು ಬ್ಯಾಂಕ್(ಬ್ಹಾಂಕ್), ಕ್ಯಾಟ್(ಕ್ಹಾಟ್) ಎಂದು ಬರೆಯುವುದನ್ನು ಕಂಡಿದ್ದೇವೆ. ಉಚ್ಛಾರದ ವಿಷಯ ಬಂದಾಗ ಒಂದು ರೀತಿ ಇದು ಕನ್ನಡದ ಅಸಹಾಯಕತೆಯನ್ನು ತೋರಿಸುತ್ತದೆ.
ಆದರೆ ನೋಡಿ, ನಾವು ಇಲ್ಲಿ ಸ್ವಲ್ಪ ಪ್ರಬುದ್ಧರಾಗಿ ಯೋಚಿಸಬೇಕಾಗುತ್ತದೆ. ಕನ್ನಡದಲ್ಲಿ ಈಗ ಸದ್ಯಕ್ಕೆ ಏತ್ವ ಇಲ್ಲದ ಏತ್ವನ್‌ದೀರ್ಘಕ್ಕೆ ನಿಷೇಧವಿದೆ(ಹಾಗೆಯೇ ಗುಡಿಸಿಲ್ಲದ ಗುಡ್ಸಿನ್‌ದೀರ್ಘ, ಇದು ನನಗೆ ತಿಳಿದ ಮಟ್ಟಿಗೆ. ಆದರೆ ಇದು ತಪ್ಪಿರಲೂಬಹುದು). ನಾವೇಕೆ ಅದನ್ನು ಬರಮಾಡಿಕೊಳ್ಳಬಾರದು.
ಬ ಕ್ಕೆ ಏತ್ವ ಇಲ್ಲದ ಏತ್ವನ್‌ದೀರ್ಘವನ್ನು Bank ನಲ್ಲಿರುವ Baನಂತೆ ಬಳಸಬಹುದೇ ?
ಹಾಗೇನಾದರು ಬರಮಾಡಿಕೊಂಡರೆ, ಕನ್ನಡದ ಒಂದು ಕೊರತೆ ನಿವಾರಣೆಯಾಗುತ್ತದೆ.
Unicode Consortium ಪ್ರಕಾರ, 0CD5 ಎನ್ನುವುದು ಏತ್ವನ್‌ದೀರ್ಘವನ್ನು(ಹಾಗೆಯೇ ಗುಡ್ಸಿನ್‌ದೀರ್ಘವನ್ನು) ಸೂಚಿಸುತ್ತದೆ.
ಈ 0CD5(ೕ) ದೀರ್ಘವು ವ್ಯಂಜನಕ್ಕೆ ಉದಾ: ಬಕ್ಕೆ ಸೇರಿದಾಗ ಬೕ ಎಂಬುದನ್ನು ಕೂಡಿಸಿ ಬರೆದು ನಾವು ಇಂಗ್ಲೀಷಿನ Bank ನಲ್ಲಿರುವ Ba ನಂತೆ, Catನಲ್ಲಿರುವ catನಂತೆ, Batನಲ್ಲಿರುವ Baನಂತೆ, Chat ನಲ್ಲಿರುವ chaನಂತೆ ಬಳಸಬಹುದಲ್ಲವೇ.
ಈ ನಿಟ್ಟಿನಲ್ಲಿ ಏನಾದರೂ ಚರ್ಚೆಗಳಾಗಿವೆಯೇ ?
ಹಾಗೆಯೇ ಮತ್ತೊಂದು ವಿಷಯವೇನೆಂದರೆ, Windows XPಯಲ್ಲಾಗಲೀ, 2003 ಅಲ್ಲಾಗಲೀ, IE6.0, IE7.0, Word 2003ರಲ್ಲಾಗಲೀ ಇದನ್ನು ಟೈಪಲು ಸಾಧ್ಯವೇ? ನನ್ನ ಬಳಿ ಇರುವುದು ಎಲ್ಲವೂ Legal.
- Login or register to post comments
- 1310 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
Re: ಕನ್ನಡದ ಏತ್ವಗಳು
ಸುನೀಲ್‍ರವರೇ,
ಕನ್ನಡದಲ್ಲಿ ಈ ರೀತಿಯ ಏತ್ವ ಇಲದ ಏತ್ವಂದೀರ್ಘದ ಅವಶ್ಯಕತೆ ಇದೆಯೇ? ಉದಾಹರಣೆಗೆ Bank ನಲ್ಲಿ "Ba"ನ ಉಚ್ಛಾರ ಮಾಡೊದು "ಬ್ಯಾ" ಅಂತ ಅಲ್ಲವಾ? ಏತ್ವ ಇಲ್ಲದ ಏತ್ವಂದೀರ್ಘ ಅಂದರೆ "ಇಳೀ" ಬಳಸುತ್ತೀವಲ್ಲ ಅದಕ್ಕೆ ಸಮ ಆಗಲಿಲ್ಲವೇ?
Bank, Cat ಇವುಗಳನ್ನು ಕನ್ನಡದಲ್ಲಿ ಬ್ಯಾಂಕ್, ಕ್ಯಾಟ್ ಅಂತಲೇ ಬರೆಯೋದು ಸೂಕ್ತ ಅಂತ ನನ್ನ ಅನಿಸಿಕೆ. ಇದು ನಾವು ಹೇಗೆ ಪದಗಳನ್ನು ಉಚ್ಛಾರಣೆ ಮಾಡುತ್ತೀವೋ ಅದಕ್ಕೆ ತಕ್ಕಂತೆಯೇ ಇದೆ. ಏನಂತೀರಾ?
ಇದು ಕೆಲವು ಬೇರೆ ಭಾಷೆಯ ಪದಗಳನ್ನು ಕನ್ನಡೀಕರಿಸುವಾಗ ಎದುರಾಗಬಹುದಾದ ಸಮಸ್ಯೆ ಆಯಿತು. ಆದರೆ ಕನ್ನಡದ್ದಲ್ಲೇ ಬರೆಯುವಾಗ ಏತ್ವ ಇಲ್ಲದ ಏತ್ವಂದೀರ್ಘದ ಅವಶ್ಯಕತೆ ಇದೆಯೇ? ನಿಮ್ಮ ಅನಿಸಿಕೆ ಏನು?
- ಶ್ಯಾಮ್ ಕಿಶೋರ್ (ನನ್ನ ಬ್ಲಾಗ್: ಮನದ ಮಾತು)
ಉ: ಕನ್ನಡದ ಏತ್ವಗಳು
ಧನ್ಯವಾದಗಳು ಶ್ಯಾಮ್‌ರವರೇ ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಕ್ಕೆ. ನೀವು ಮೊದಲು ಮಾಡಿದ ಅನುಮಾನಗಳಿಗೆ ಉತ್ತರವನ್ನೀಯುವ ಪ್ರಯತ್ನವನ್ನು ಮಾಡಿದ್ದೇನೆ.
ಹೌದು, ಕನ್ನಡದ್ದೇ ಪದಗಳನ್ನು ಬರೆಯುವಾಗ ಇದರ ಅವಶ್ಯಕತೆ ಇಲ್ಲ. ಸಮಸ್ಯೆ ಇರುವುದು ಪಾರಿಭಾಷಿಕ ಪದಗಳನ್ನು ಬರೆಯುವಾಗ. ಆದರೆ ನೋಡಿ ಸಂಸ್ಕೃತವನ್ನು ಬರಮಾಡಿಕೊಂಡಾಗ ನಾವುಗಳು ಋ,ೠಗಳನ್ನೂ ಹಾಗು ಲೃ ಮತ್ತು ಲೄಗಳನ್ನು ಬೇಡವಾಗಿದ್ದರೂ ಬರಮಾಡಿಕೊಂಡಿದ್ದೆವು.
ಹೌದು. ಇದರ ಕುರಿತೇ ನಾನು ಚರ್ಚಿಸಲು ಬಯಸಿದ್ದು. "ಸದ್ಯಕ್ಕೆ ಕನ್ನಡದಲ್ಲಿ ಇವುಗಳಿಗೆ ನಿಷೇಧವಿದೆ" ಅಂತ ತಿಳಿದಿದ್ದೇನೆ. ಆದರೆ ಹೀಗೆ ಬರೆಯುವುದು ತಪ್ಪೋ ಸರಿಯೋ ತಿಳಿದಿಲ್ಲ.
ಅದು ಹೇಗೆ ಸಾಧ್ಯ. ಬ್ಯಾ = Bya, ಕ್ಯಾ = Kya ಆಗುತ್ತದೆ ಅಲ್ಲವೇ ?
ಹೊಳೆಯಿತು: ಏತ್ವ ಇಲ್ಲದ ಇಳಿ ಮತ್ತು ಐತ್ವ
ಗೆಳೆಯರೆ,
ನನ್ನ ಅನುಮಾನ ನಿಜವಾಗಿತು ಅಂತ ಕಾಣುತ್ತದೆ. Microsoft Arial Unicode MS ಮತ್ತು Tungaದಲ್ಲಿ Font Rules ಇಲ್ಲ ಅಂತ ಕಾಣುತ್ತದೆ. ಆದರೆ Kedageಯಲ್ಲಿ ಇದೆ, ಕೇದಗೆಯನ್ನು ಬಳಸಿದಾಗ ನನಗೆ ಏತ್ವ ಇಲ್ಲದ ಇಳಿ ಮತ್ತು ಐತ್ವಗಳನ್ನು ಟೈಪಲು ಸಾಧ್ಯವಾಯಿತು.
ಸವಿಯೊದಗು.
Re: ಹೊಳೆಯಿತು: ಏತ್ವ ಇಲ್ಲದ ಇಳಿ ಮತ್ತು ಐತ್ವ
ಸುನೀಲ್‍ರವರೇ,
ನಿಮ್ಮ ವಿವರಣಾತ್ಮಕ ಉತ್ತರಕ್ಕೆ ಧನ್ಯವಾದಗಳು.
ಇದೊಂದು ರೀತಿ ಆಸಕ್ತಿದಾಯಕವಾಗಿದೆ! "ಕೇದಗೆ" ಬಳಸಿ ಇವನ್ನು ಟೈಪಿಸಲು ಸಾಧ್ಯವಾಗಬಹುದು ನಿಜ. ಆದರೆ "Bank"ನ್ನು "ಬ್ಯಾಂಕ್" ಅಂತ ಬರೆಯದೇ "ಬ<ಏತ್ವ ಇಲ್ಲದ ಏತ್ವಂದೀರ್ಘ>ಂಕ್" ಅಂತ ಬರೆದರೆ ಓದುವಾಗ ಕಷ್ಟವಾಗುತ್ತದೆ (ಕಷ್ಟಕ್ಕಿಂತ ಹೆಚ್ಚು ಗೊಂದಲ ಅನ್ನಬಹುದು) ಅಲ್ಲವೇ? ನನಗೆ ಹಾಗಂತ ಅನ್ನಿಸಿತು. ನೀವೇನಂತೀರಾ?
ನೀವೇ ನೋಡಿ, ಸಂಸ್ಕೃತದಿಂದ "ಋ, ೠ, ಲೃ, ಲೄ"ಗಳನ್ನು ಬರಮಾಡಿಕೊಂಡರೂ "ಲೃ, ಲೄ"ಗಳು ಬಳಕೆಯ ಕಾಠಿಣ್ಯದಿಂದಾಗಿ ಕ್ರಮೇಣ ಕನ್ನಡ ವರ್ಣಮಾಲೆಯಲ್ಲಿ ಸ್ಥಾನ ಪಡೆಯಲೇ ಇಲ್ಲ ಅಲ್ಲವಾ? ಇನ್ನು "ೠ"ವನ್ನು ಅಧಿಕೃತವಾಗಿ ವರ್ಣಮಾಲೆಯಲ್ಲಿ ಉಳಿಸಿಕೊಂಡರೂ ಅದರ ಬಳಕೆ ಬಹಳವೇ ಅಪರೂಪ. ಪ್ರಾಯಶಃ ಬಳಕೆಯೇ ಇವುಗಳ (ಈ ರೀತಿಯ ವಿಶೇಷ ಅಕ್ಷರಗಳ) ಅಸ್ತಿತ್ವವನ್ನು ನಿರ್ಧರಿಸುತ್ತೋ ಏನೋ?
- ಶ್ಯಾಮ್ ಕಿಶೋರ್
Re: ಏತ್ವ; ಅರ್ಧ ಚಂದ್ರಾಕಾರ?
ಈ ನಿಟ್ಟಿನಲ್ಲಿ (ಏತ್ವವಿರುವ ಪದಗಳ ಮೇಲೆ) ಅರ್ಧ ಚಂದ್ರಾಕಾರದ (ಪುಸ್ತಕಗಳಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ, ಇತರ ಭಾಷೆಗಳಂತೆ ಕನ್ನಡದಲ್ಲೂ ಕೂಡ) ಬಳಕೆ ಮಾಡುವುದಿಲ್ಲವೆ? ಅದನ್ನೇ ಯುನಿಕೋಡ್ ಮುಖಾಂತರ ಕಂಪ್ಯೂಟರ್|ನಲ್ಲಿ ಬಳಸಬಹುದಲ್ಲವೆ? ಇದಕ್ಕೆ ಉದಾಹರಣೆ ಕೊಡುವ ಅಂದರೆ ಟೈಪ್ ಮಾಡಲಾಗುವುದಿಲ್ಲವಲ್ಲ!
ಉ : ನುಕ್ತದ ಗೊಂದಲ
ಹೌದು. ಒಪ್ಪಬೇಕಾದ ಮಾತು. ಹೊಸತನ್ನು ನೋಡಿದಾಗ ಗೊಂದಲಗಳುಂಟಾಗುವುದು ಸಹಜ. ಈ ಬಗ್ಗೆ ಯಾರಾದರು ವಿದ್ವಾಂಸರು ಸಾರ್ವಜನಿಕ ಚರ್ಚೆ ಆರಂಭಿಸಿದರೆ ತುಂಬಾ ಉಪಕಾರವಾಗುತ್ತದೆ.
ಕನ್ನಡದ ವೈಶಿಷ್ಟ್ಯವೆಂದರೆ, ಪದಗಳನ್ನು ಮೂಲಭಾಷೆಯಲ್ಲಿ ಹೇಗಿದೆಯೋ ಹಾಗೆಯೇ ಸ್ವೀಕರಿಸುವುದು. ಹಿಂದೆ ಸಂಸ್ಕೃತವನ್ನು ಮತ್ತು ಪರ್ಷಿಯನ್ ಗಳನ್ನು ಅರಿಗಿಸಿಕೊಂಡಿತು, ಈಗ ಇಂಗ್ಲೀಷಿನ್ನೂ ಅರಗಿಸಿಕೊಳ್ಳುತ್ತಿದೆ.
"ಮೊಹಮ್ಮದ್ ಝಫರ್" ಎನ್ನುವಾಗ ಝ ಮತ್ತು ಫ ಅಕ್ಷರಗಳ ಕೆಳಗೆ ಎರಡು ಚುಕ್ಕೆಗಳನ್ನು ಇಡುತ್ತೇವಲ್ಲವೇ ? ಈ ಪರಂಪರೆ ಯಾವಾಗ ಪ್ರಾರಂಭವಾಯಿತು ?. ಈ ಚುಕ್ಕೆಯಿಡುವ ಸಂಪ್ರದಾಯ ಕನ್ನಡದಲ್ಲಿ ಮುಂಚಿನಿಂದಲೇ ಇತ್ತೇ ಅಥವಾ ಮುಂದೆ ಬರಮಾಡಿಕೊಂಡಿತೇ ?.
ನನಗೇನೋ ಈ ಚುಕ್ಕೆ ಸಂಪ್ರದಾಯ, ವಿಕಾಸದ ಹಾದಿಯಲ್ಲಿ ನಮ್ಮ ಲಿಪಿ, ಇತ್ತೀಚೆಗೆ(relatively) ಬರಮಾಡಿಕೊಂಡ ಹಾಗೆ ಅನಿಸುತ್ತೆ.
Re: ಕನ್ನಡದ ಏತ್ವಗಳು - ನನ್ನದೂ ಅಕ್ಕಿಕಾಳಿರಲಿ! - ಹಾವು? ಹಾಂವು?
ಈ ಚರ್ಚೆಯಲ್ಲಿ ಸ್ವಲ್ಪ ತಿಳಿಯಿತು ; ಸ್ವಲ್ಪ ತಿಳಿಯಲಿಲ್ಲ ; ನನ್ನ ವ್ಯಾಕರಣ ಸ್ವಲ್ಪ ತುಟ್ಟಿ. ಆದರೂ ನನ್ನದೂ ಅಕ್ಕಿಕಾಳಿರಲಿ ಅಂತ ಬರೆಯುತ್ತಿದ್ದೇನೆ!
ನಾನಂತೂ ಏತ್ವ / ಏತ್ವಂದೀರ್ಘ ಎಂದು ಕಲಿತಿಲ್ಲ;
ಬಹುಶ: ಉತ್ತರ ಕರ್ನಾಟಕದಲ್ಲಿ ಹಾಗೆ ಕಲಿಸುವದೇ ಇಲ್ಲ.
ಬಹುಶ: ನಿಮ್ಮ ಸಮಸ್ಯೆ - ನಾನು ಅರ್ಥ ಮಾಡಿಕೊಂಡ ಹಾಗೆ - ಉಚ್ಚಾರವನ್ನು ಅಕ್ಷರದಲ್ಲಿ ಪ್ರತಿನಿಧಿಸುವಲ್ಲಿನ ಸಮಸ್ಯೆಗಳ ಕುರಿತು .
ಹಿಂದೆ ಇದನ್ನು ಅರ್ಧಚಂದ್ರ / ಕೆಳಗೆ ಬಿಂದುಗಳನ್ನಿಡುವದು / s ಬಳಸುವದು -( 'ಅ' ಮತ್ತು 'ಆ'ಗಳ ನಡುವಿನ ಒಂದು ಸ್ವರ ಪ್ರತಿನಿಧಿಸಲು) ಇತ್ಯಾದಿ ಪದ್ಧತಿಗಳಿಂದ ಪರಿಹರಿಸಿಕೊಂಡಿದ್ದರು.
ಮುಂದಿನ ಸಮಸ್ಯೆ - ಎಲ್ಲರ ಒಪ್ಪಿಗೆ ಮತ್ತು ಸಮರೂಪತೆ. ಆಗ ಅಷ್ಟು ದೊಡ್ಡ ಸಮಸ್ಯೆ ಆಗಿರಲಿಲ್ಲ. ಯಾರು ತಮಗೆ ಹೇಗೆ ಬೇಕೋ ಹಾಗೆ ಬರೆದುಕೊಂಡರೆ ಆಗುತ್ತಿತ್ತು.
ಈಗ ತಂತ್ರಜ್ಞಾನ ಸಮರೂಪತೆಯ ಸಮಸ್ಯೆಗೆ ತೊಡಕಿಕೊಂಡಿದೆ ಅಷ್ಟೇ. ಫಾಂಟು , ಯೂನಿಕೋಡು, ಕೀಬೋರ್ಡ್ ಇತ್ಯಾದಿ.
ಆದರೆ ಒಂದು ಮಾತು ನಾವು ಗಮನದಲ್ಲಿಡುವದು ಒಳ್ಳೆಯದು. ನುಡಿದದ್ದೆಲ್ಲವನ್ನೂ ಅಕ್ಷರದಲ್ಲಿಡಲು ಅಸಾಧ್ಯ. ಹತ್ತಿರದ ರೂಪದಲ್ಲಿ ಇಡಬಹುದು ಅಷ್ಟೇ. ಈ ಬಗ್ಗೆ ಮಾಸ್ತಿಯವರ ಒಂದು ಲೇಖನ ನೋಡಿದ್ದೆ. ಅದರಲ್ಲಿ ಅವರು ಉದಾಹರಣೆ ಕೊಡುವ ಹಾಗೆ. 'ಹಾವು' ಶಬ್ದವನ್ನೇ ಗಮನಿಸಿ. ಇಲ್ಲಿ ನಾವು ಅನುಸ್ವಾರ( ಅಥವಾ ಅನುನಾಸಿಕ? - ನನ್ನ ವ್ಯಾಕರಣ ಜ್ಞಾನ ಬಲು ಕಡಿಮೆ) ಒಂದನ್ನು (ಹಾಂವು?) ಉಚ್ಚರಿಸುತ್ತೇವೆ ಅಲ್ಲವೆ? ಬರೆಯುವಾಗ ಮಾತ್ರ ಹಾವು ಎಂದು ಬರೆಯುತ್ತೇವೆ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ನನ್ನ ಅನಿಸಿಕೆ: ಕನ್ನಡದ ಏತ್ವಗಳು ಮತ್ತು ಕಾಗುಣಿತ
ಯಾವುದೇ ಹೊಸತನ್ನು ಒಗ್ಗಿಸಿಕೊಳ್ಳುವಾಗ ಕಷ್ಟ ಮತ್ತು ಗೊಂದಲ ಇದ್ದೇ ಇರುತ್ತೆ. ಇದನ್ನು ನಾನು ಪೂರ್ಣವಾಗಿ ಒಪ್ಪುತ್ತೇನೆ. ನನ್ನ ಅಭಿಪ್ರಾಯ ಇದ್ದದ್ದು ಈವರೆಗಿನ ಚಿನ್ಹೆಗಳಲ್ಲಿ ಅಕ್ಷರದ ಮತ್ತು ಅವುಗಳ ದೀರ್ಘ ಇತ್ಯಾದಿಗಳ ನಡುವೆ ಖಾಲಿ ಜಾಗವಿರಲಿಲ್ಲ. ಈ ರೀತಿ ಟೈಪಿಸಿದಲ್ಲಿ ಆ ಒಂದು ಖಾಲಿ ಜಾಗ ಬರಬಹುದು, ಆದ್ದರಿಂದ ಗೊಂದಲವುಂಟಾಗಬಹುದು ಅಂತ. ಈ ಬಗ್ಗೆ ಭಾಷಾತಜ್ಞರು ಕೊಂಚ ಗಮನ ಹರಿಸಿದರೆ ನಮಗೂ ಹೊಸ ದಿಕ್ಕು ತೋಚಬಹುದೇನೋ?
ಕಾಗುಣಿತ ಕಲಿಕೆಯಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ನನಗೆ ತಿಳಿದಂತೆ ಬಹಳ ಬೇಧವಿದೆ. ಕೆಲವು ಕಡೆ "ತಲೆಕೊಟ್ಟು" ಅನ್ನುವುದಕ್ಕೆ ಬರೀ "ಕೊಟ್ಟು" ಅನ್ನುವುದೂ ಬಳಕೆಯಲ್ಲಿದೆ!
ಇನ್ನು ಮಿಶ್ರಿಕೋಟಿಯವರು ಬರೆದಂತೆ ಭಾಷೆಯ ಪ್ರತಿ ಮಗ್ಗುಲನ್ನೊ ತೆರೆದು ತೋರಿಸುವಂತೆ ಬರೆಯುವುದು ನಿಜಕ್ಕೊ ಅಸಾಧ್ಯವೇ ಸರಿ. ಕೆಲವೊಮ್ಮೆ ಆದಷ್ಟೂ ಹತ್ತಿರದ ರೂಪಕ್ಕೆ ಹೊಂದಿಕೊಳ್ಲಬೇಕಾಗುತ್ತೆ. ಇದು ಪ್ರತಿ ಭಾಷೆಯಲ್ಲೂ ಆಯಾ ಲಿಪಿಯ ಮಿತಿಯೇನೋ?
- ಶ್ಯಾಮ್ ಕಿಶೋರ್
Techonologyಯ ಮೊನಾಪಲಿ(=ದರ್ಪ ದಾರ್ಷ್ಟ್ಯ ಕೊಬ್ಬು??)
ನಿಮ್ಮ ಅಭಿಪ್ರಾಯಕ್ಕೆ ದನಿಗೂಡುವಂತೆ ಕೇದಗೆಯಲ್ಲಿ ನಾನು ಹೇಳಬೇಕಿದ್ದನ್ನು ಟೈಪಿ ಚಿತ್ರವನ್ನು ಏರಿಸಿದ್ದೇನೆ.
ಮೊದಲನೆಯದು ಕೄ - ಇದನ್ನು ಬೇಡ ಎಂದು ಈಗಾಗಲೇ ನಾವು ಕನ್ನಡಿಗರು ತೀರ್ಮಾನಿಸಿದ್ದೇವೆ.
ಎರಡನೆಯದು ಮತ್ತು ಮೂರನೆಯದು ಈಗ ಬಳಕೆಯಲ್ಲಿಲ್ಲ.
ನಾನು ಹೇಳುತ್ತಿರುವುದು ಎರಡನೆಯದರ ಬಗ್ಗೆ, ಎರಡನೆಯದನ್ನು Cat ನಲ್ಲಿರುವ Caನಂತೆ ಬಳಸಬಹುದೇ? ಎಂಬುದನ್ನು ಭಾಷಾ ವಿದ್ವಾಂಸರು ಸಾರ್ವಜನಿಕವಾಗಿ ಚರ್ಚಿಸಬೇಕು ಎಂಬುದಾಗಿ. ಈಗ ಇದು ಕ್ಯಾ ಆಗಿದೆ.
ನಾವುಗಳು ಪಾರಿಭಾಷಿಕ ಪದಗಳನ್ನು ಬೇಡ ಎನ್ನಲು ಸಾಧ್ಯವೇ ಇಲ್ಲ. ನಾವುಗಳು ಕಾಫಿಯನ್ನು Coffee ಆಗಿಯೇ ಬರಮಾಡಿಕೊಂಡಿದ್ದೇವೆ(ಅಂದರೆ ಫ ಬರೆದು ಅದರ ಕೆಳಗೆ ಎರಡು ಚುಕ್ಕೆ ಇಡಲು ಅವಕಾಶ ಮಾಡಿಕೊಟ್ಟಿದ್ದೇವೆ). Xerox, Bazaar ಮತ್ತಷ್ಟು ಉದಾಹರಣೆಗಳು. ಹೀಗೆ ಕನ್ನಡವು ಪಾರಿಭಾಷಿಕ ಪದಗಳಿಗಾಗಿ ಎರಡು ಚುಕ್ಕೆಗಳನ್ನು ಇಟ್ಟುಕೊಳ್ಳುವ ಸಂಪ್ರದಾಯವನ್ನು ಪಾಲಿಸುತ್ತಿದೆ. ಹಾಗೆಯೇ ನಾವುಗಳು Bank, Cat ಗಳಲ್ಲಿರುವ ಏತ್ವವನ್ನೂ ಸ್ವೀಕರಿಸಬೇಕು.
ಒಟ್ಟಿನಲ್ಲಿ ಈ ವಿಷಯವನ್ನು ಕುರಿತು ಭಾಷಾ ವಿದ್ವಾಂಸರು ಸಾರ್ವಜನಿಕವಾಗಿ ಚರ್ಚಿಸಬೇಕು.
Re: ಹಾವು? ಹಾಂವು?, ಬರೆದಂತೆ ಉಚ್ಛಾರ??
ಆದರೆ ಒಂದು ಮಾತು ನಾವು ಗಮನದಲ್ಲಿಡುವದು ಒಳ್ಳೆಯದು. ನುಡಿದದ್ದೆಲ್ಲವನ್ನೂ ಅಕ್ಷರದಲ್ಲಿಡಲು ಅಸಾಧ್ಯ. ಹತ್ತಿರದ ರೂಪದಲ್ಲಿ ಇಡಬಹುದು ಅಷ್ಟೇ.
ಇಲ್ಲಿ ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳ ಮೇಲಿರುವ ಟೀಕೆ ನೆನಪಿಗೆ ಬರುತ್ತದೆ; ಈ ಎರಡೂ ಭಾಷೆಗಳಲ್ಲಿ ಬರೆಯುವುದರಲ್ಲಿ ಮತ್ತು ಬರೆದುದನ್ನು ಉಚ್ಛಾರ ಮಾಡುವುದರಲ್ಲಿ ವ್ಯತ್ಯಾಸವಿದೆ. ಪದ ಬಳಕ ಗೊತ್ತಿದ್ದಲ್ಲಿ ಮಾತ್ರ ಜನರಿಗೆ ಹೇಗೆ ಬರೆಯಬೇಕು, ಮತ್ತು ಬರೆದುದನ್ನು ಹೇಗೆ ಉಚ್ಛಾರ ಮಾಡಬೇಕು ಎಂಬುದು ತಿಳಿದಿರುತ್ತದೆ ... ಕನ್ನಡ, ಅದರಂತೆ ಇತರ ಭಾರತೀಯ ಮತ್ತು ಕೆಲವು ಯುರೋಪಿಯನ್ ಭಾಷೆಗಳಲ್ಲಿ ಬರೆದಂತೆ ಉಚ್ಛಾರ ಮಾಡುತ್ತೇವೆ ಎಂದು ಹೆಮ್ಮೆ ಪಡುವುದಿಲ್ಲವೆ?
ಗಮನಿಸಬೇಕಾದ ವಿಷಯವೆಂದರೆ, ಆಂಗ್ಲ (e.g., bank, cat, restaurant, etc.) ಅಥವಾ ಅದರಂತಿರುವ ಇತರ ಪರಕೀಯ ಭಾಷಾ ಪದಗಳ ಬಳಕೆಯಲ್ಲಿ (ಕನ್ನಡದಲ್ಲಿ) ಮಾತ್ರ ಈ ಗೊಂದಲವೇಳುತ್ತದೆ!
ಉ: Re: ಹಾವು? ಹಾಂವು?, ಬರೆದಂತೆ ಉಚ್ಛಾರ??
ಚರ್ಚೆಯಾಗುತ್ತಿರುವ ವಿಷಯ ಸ್ವಲ್ಪ ಕುತೂಹಲ ಕೆರಳಿಸಿದ್ದರಿಂದ ನನ್ನ ಈ ಪ್ರತಿಕ್ರಿಯೆ ನೀಡುತ್ತಿದ್ದೇನೆ. ಈ ಹೊಸ ಪ್ರಯೋಗದ ಅಗತ್ಯ ಇಲ್ಲ ಎಂಬ ಖಚಿತ ನಿಲುವು ನನ್ನದು. ಇದಕ್ಕೆ ನಾನು ನೀಡುವ ಸಮರ್ಥನೆಗಳು ಹೀಗಿವೆ-
೧. ’Bank' ಎಂಬ ಶಬ್ದವನ್ನು ಶಿವರಾಮ ಕಾರಂತರಂಥವರು ಕೂಡ ’ಬೇಂಕು’ ಎಂದು ಬರೆಯುತ್ತಿದ್ದರು. ನಂತರ ಅದನ್ನು ’ಬ್ಯಾಂಕು’ ಎಂದು ಬರೆಯುವುದು ರೂಢಿಗೆ ಬಂತು. ಉಚ್ಚಾರಣೆಗೆ ಸಾಧ್ಯವಾದಷ್ಟು ಹತ್ತಿರವಾದ್ದನ್ನು ಬರೆಯುವ ಪ್ರಯಾಸವೇ ಬಹುಶಃ ಇದಕ್ಕೆ ಕಾರಣ. ಏನಿದ್ದರೂ ಕನ್ನಡದಲ್ಲಿ ಬಳಕೆಯಲ್ಲಿರುವ ಅಕ್ಷರಗಳನ್ನೇ ಇದಕ್ಕೆ ಬಳಸಲಾಗುತ್ತಿತ್ತು ಮತ್ತು ಅದೇ ಸಹಜ ಕೂಡ.
೨. ಇಲ್ಲಿ ಸೂಚಿಸಿರುವ ಹೊಸ ಪ್ರಯೊಗದ ಬದಲಿಗೆ ಇಂಗ್ಲಿಷ್ ಶಬ್ದಗಳನ್ನು ಇದ್ದ ಹಾಗೆಯೇ ಇಂಗ್ಲಿಷ್ ನಲ್ಲೇ ಬರೆದರೆ ಏನು ತಪ್ಪು? ನಾವು ಮಾತನಾಡುವಾಗ ಎಷ್ಟೋ ಆಂಗ್ಲ ಶಬ್ದಗಳನ್ನು ಪ್ರಯೋಗಿಸುವುದಿಲ್ಲವೇ? ಇರುವ ಕನ್ನಡ ಭಾಷೆ ಯನ್ನು ಇನ್ನೂ ಕ್ಲಿಷ್ಟವಾಗಿಸುವ ಪ್ರಯತ್ನ ಬೇಕೇ?
೩. ಹಾಗೆ ನೋಡಿದರೆ ಇಂಗ್ಲಿಷ್ ನ ಎಲ್ಲ ರೀತಿಯ ಉಚ್ಚಾರಣೆಗಳಿಗೆ ಸಮನಾದ ಕನ್ನಡ ಅಕ್ಷರಗಳು ಸಿಗಲಾರವು. ಉದಾಹರಣೆಗೆ 'Thanks' ಎಂಬಲ್ಲಿನ 'TH' - ತ್ ಅಥವಾ ಥ್ ಎರಡೂ ಅಲ್ಲ. ಅದನ್ನು ಕನ್ನಡದಲ್ಲಿ ಬರೆಯಲು ಸಾಧ್ಯವೇ ಇಲ್ಲ.
ಕೊಸರು: ಕನ್ನಡದ ಏತ್ವಗಳು - ಮರೆತು ಹೋಗುವ ಮುನ್ನ ಒಂದಷ್ಟು
ಇದೊಂದು ರೀತಿಯ ಟಿಪ್ಪಣಿ ಅಷ್ಟೇ. ನನಗೆ ನೆನಪಿರುವ ಕೆಲವು ಅಂಶಗಳನ್ನು ಮರೆತು ಹೋಗುವ ಮುನ್ನ ನಿಮ್ಮೊಂದಿಗೆ ಹಂಚಿಕೊಂಡುಬಿಡೋಣ ಅಂತ!
೧. "ತರಂಗ"ದಲ್ಲಿ ಸುಮಾರು ೮-೯ ವರ್ಷಗಳ ಹಿಂದೆ "ಅಂತರ ರಾಷ್ಟ್ರೀಯ, ಅಂತಾರಾಷ್ಟ್ರೀಯ, ಅಂತರ್ರಾಷ್ಟ್ರೀಯ" ಇವುಗಳಲ್ಲಿ ಯಾವುದು ಸರಿ/ತಪ್ಪು ಅಂತ ಸುದೀರ್ಘ ಚರ್ಚೆ ನಡೆದಿತ್ತು. ಕೊನೆಯ ನಿರ್ಣಯ ನೆನಪಿಲ್ಲ. ಆದರೆ ಸುಮಾರು ಭಾಷಾತಜ್ಞರು ಅದರಲ್ಲಿ ಭಾಗವಹಿಸಿದ್ದರು ಅಂತ ನೆನಪು. ಈ ವಿಷಯದ ಬಗ್ಗೆ ಕೂಡಾ ಅಂತಹ ಒಂದು ಆರೋಗ್ಯಕರ ಚರ್ಚೆ ಆರಂಭವಾದಲ್ಲಿ ಚೆನ್ನಾಗಿರುತ್ತದೆ ಅಂತನ್ನಿಸಿತು.
೨. "ಚುಟುಕ" ಎನ್ನುವ ನಿಯತಕಾಲಿಕದಲ್ಲಿ, ಈಗ್ಗೆ ಸುಮಾರು ೧೦ ವರ್ಷಗಳ ಹಿಂದೆ "ಪೇರೂರು ಜಾರು" ಎಂಬವರು ಕನ್ನಡ ಭಾಷೆಯು ನಿಂತ ನೀರಾಗಬಾರದು ಅಂತ ನೂರಾರು ಹೊಸ ಪ್ರಯೋಗಗಳನ್ನು ಮಾಡಲು ಯತ್ನಿಸಿದ್ದರು. ಅದರಲ್ಲಿ ಒಂದು ಪ್ರಯೋಗ "ಒತ್ತಕ್ಷರಗಳ ಸಹಾಯವಿಲ್ಲದೇ ಉಚ್ಛಾರಣೆ ಮಾಡಿದಂತೆಯೇ ಬರೆಯುವುದರ" ಬಗ್ಗೆ. ಉದಾಹರಣೆಗೆ: "ಕೈ" ಅನ್ನುವುದನ್ನು "ಕಯ್‌ಇ ಅಥವಾ ಕಯ್" (?!) ಅಂತ, "ಮೈಸೂರು" ಅನ್ನುವುದನ್ನು "ಮಯ್‍ಸೂರು" ಹೀಗೇ. ಎಲ್ಲವೂ ಸಲ್ಲುತ್ತದೆ ಅಂತಲ್ಲ. ಅವರು (ಪೇರೂರು ಜಾರು) ಎಲ್ಲಿದ್ದಾರೋ ಗೊತ್ತಿಲ್ಲ. ಅವರುಗಳೂ ಕೂಡ ಇಂತಹ ಚರ್ಚೆಗಳಲ್ಲಿ ಭಾಗವಹಿಸಿದರೆ ಹೇಗಿರುತ್ತೆ ಅಂತ ಅನ್ನಿಸಿತು.
ಈ ರೀತಿಯ ಚರ್ಚೆಗಳಾದಾಗಲೇ ಅಲ್ಲವೇ ನಮಗೆ ಯಾವುದಾದರೂ ಬುಡಮಟ್ಟದ ವ್ಯಾಕರಣ ಪುಸ್ತಕ ಓದಬೇಕು ಅಂತ ಅನ್ನಿಸೋದು! ಅಷ್ಟೇ ಸಾಕಲ್ಲ ಈ ಚರ್ಚೆಗಳು ಸಾರ್ಥಕವಾಯಿತು ಅಂತ ಹೇಳೋಕೆ.
- ಶ್ಯಾಮ್ ಕಿಶೋರ್
ಉ: ಕೊಸರು: ಕನ್ನಡದ ಏತ್ವಗಳು - ಮರೆತು ಹೋಗುವ ಮುನ್ನ ಒಂದಷ್ಟು
"ತರಂಗ"ದಲ್ಲಿ ಸುಮಾರು ೮-೯ ವರ್ಷಗಳ ಹಿಂದೆ "ಅಂತರ ರಾಷ್ಟ್ರೀಯ, ಅಂತಾರಾಷ್ಟ್ರೀಯ, ಅಂತರ್ರಾಷ್ಟ್ರೀಯ" ಇವುಗಳಲ್ಲಿ ಯಾವುದು ಸರಿ/ತಪ್ಪು ಅಂತ ಸುದೀರ್ಘ ಚರ್ಚೆ ನಡೆದಿತ್ತು. ಕೊನೆಯ ನಿರ್ಣಯ ನೆನಪಿಲ್ಲ. ಆದರೆ ಸುಮಾರು ಭಾಷಾತಜ್ಞರು ಅದರಲ್ಲಿ ಭಾಗವಹಿಸಿದ್ದರು ಅಂತ ನೆನಪು. ಈ ವಿಷಯದ ಬಗ್ಗೆ ಕೂಡಾ ಅಂತಹ ಒಂದು ಆರೋಗ್ಯಕರ ಚರ್ಚೆ ಆರಂಭವಾದಲ್ಲಿ ಚೆನ್ನಾಗಿರುತ್ತದೆ ಅಂತನ್ನಿಸಿತು.
ಈ ಟಿಪ್ಪಣಿಯನ್ನು ಹಿಂದೆ ಗಮನಿಸಿರಲಿಲ್ಲ . ಈಗ ನೋಡಿ ಈ ಪ್ರತಿಕ್ರಿಯೆ ಬರೆಯುತ್ತಿದ್ದೇನೆ.
ಮೊದಲೆಲ್ಲ ಅಂತರ್ರಾಷ್ಟ್ರೀಯ ಅಂತರ್ರಾಜ್ಯ ಎಂದೇ ಬಳಸುತ್ತಿದ್ದರು . ಈಗ ಅಂತಾರಾಷ್ಟ್ರೀಯ ಎಲ್ಲರೂ ಬಳಸುತ್ತಿದ್ದಾರೆ .
ಸಂಸ್ಕೃತದಲ್ಲಿ ಅಂತರ್ರಾಷ್ಟ್ರೀಯ ಸರಿ .
ಆದರೆ ಕನ್ನಡದಲ್ಲಿ ಎರಡು ರಕಾರಗಳು ಒಟ್ಟಿಗೆ ಬರಬಾರದಂತೆ . ಕಿವಿಗೆ ಕರ್ಕಶವಾಗುವದಂತೆ . ಅದಕ್ಕಾಗಿ ಅಂತಾರಾಷ್ಟ್ರೀಯ ಸರಿ ಅಂತೆ .
ಈ ವಿಷಯ ಒಂದೆರಡು ವರ್ಷ ಹಿಂದಿನ ಕಸ್ತೂರಿಯಲ್ಲಿ ಭಾಷೆಯ ಕುರಿತಾದ ಅಂಕಣದಲ್ಲಿ ಬಂದಿತ್ತು.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಕೊಸರು: ಕನ್ನಡದ ಏತ್ವಗಳು - ಮರೆತು ಹೋಗುವ ಮುನ್ನ ಒಂದಷ್ಟು
ತಾವರೆಯೋ ತಾಂವರೆಯೋ, ಕಿವಿಯೋ ಕಿಂವಿಯೋ, ಸವಱು ಅಥವಾ ಸಂವಱು ನೀವೇ ಹೇೞಿ ನೋಡೋಣ.