ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು
ಈ ವಿಷಯ ಬರೆಯಲು ಹೊರಟಾಗ ನನಗೆ ಬಂದ ಮೊದಲ ಸಂಶಯ ಇದನ್ನು ಯಾವ ವರ್ಗದಲ್ಲಿ ಸೇರಿಸಬೇಕು ಎಂಬುದು. ರಾಜಕೀಯವೇ ಸೂಕ್ತ ಎಂದು ಅದಕ್ಕೆ ಸೇರಿಸಿದ್ದೇನೆ. ಇತ್ತೀಚೆಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವಿಶ್ವೇಶ್ವರ ಭಟ್ ತಮ್ಮ ನೂರೆಂಟು ಮಾತು ಅಂಕಣದಲ್ಲಿ ಕರ್ನಾಟಕದ ಮಠಗಳ ಬಗ್ಗೆ ಬರೆದಿದ್ದರು. ಈ ಮಠಗಳು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕಾಣಿಕೆಗಳು ಇತ್ಯಾದಿಗಳನ್ನು ವಿವರಿಸಿದ್ದ ಲೇಖನದಲ್ಲಿ ಮಠಗಳ ಸಾಧನೆಗಳನ್ನು ಪಟ್ಟಿ ಮಾಡಲಾಗಿತ್ತು.
ಈ ಲೇಖನ ಓದಿದಾಗ ಕೆಲಕಾಲದ ಹಿಂದೆ ನಮ್ಮ ಕಾಲೇಜಿನಲ್ಲಿ ಉಪನ್ಯಾಸ ನೀಡಿದ್ದ ಎ.ನಾರಾಯಣ ಅವರು ಎತ್ತಿದ್ದ ಪ್ರಶ್ನೆಯೊಂದು ನೆನಪಾಯಿತು. ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳಿಗಿರುವ ಇರುವ ಸ್ಥಾನ ಯಾವುದು? ಇವುಗಳನ್ನು ಎನ್.ಜಿ.ಓಗಳು ಎಂದು ಕರೆಯುವಂತೆ ಇಲ್ಲ. ಶಿಕ್ಷಣ ಸಂಸ್ಥೆಗಳೆಂದು ಹೇಳಲೂ ಸಾಧ್ಯವಿಲ್ಲ. ಇವು ರಾಜಕೀಯ ಪಕ್ಷಗಳೂ ಅಲ್ಲ. ಧರ್ಮ ಪ್ರಸಾರವನ್ನು ಮಾಡುವ ಸಂಸ್ಥೆಗಳೆಂದು ವರ್ಗೀಕರಿಸಲೂ ಸಾಧ್ಯವಿಲ್ಲ. ಏಕೆಂದರೆ ಕರ್ನಾಟಕದಲ್ಲಿ ಇರುವ ಎಲ್ಲಾ ಪ್ರಭಾವೀ ಮಠಗಳೂ ರಾಜಕೀಯದಲ್ಲೂ ತಮ್ಮ ಪ್ರಭಾವವನ್ನು ಉಳಿಸಿಕೊಂಡಿವೆ. ಕೆಲವು ಮಠಗಳಂತೂ ಅಭ್ಯರ್ಥಿಗಳ ಸೋಲು ಗೆಲುವನ್ನು ನಿರ್ಧರಿಸುವಷ್ಟು ಪ್ರಬಲ ಎನ್ನಲಾಗುತ್ತಿದೆ. ಹಾಗಿದ್ದರೆ ಈ ಮಠಗಳು ಏನು?
ಡೆವಲಪ್ ಮೆಂಟ್ ಸ್ಟಡೀಸ್ ಎಂದು ಕರೆಯುವ ಅಧ್ಯಯನ ವಿಭಾಗದಲ್ಲಿ ಈಗ ರಿಲಿಜನ್ ಮತ್ತು ಡೆವಲಪ್ ಮೆಂಟ್ ಗಳ ಮಧ್ಯೆ ಇರುವ ಸಂಬಂಧದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳ ಸ್ಥಾನ ಏನು ಎಂಬುದನ್ನು ನಿರ್ಧರಿಸಬೇಕಾದ ಅಗತ್ಯವಿದೆ. ಮಠಗಳು ಶಿಕ್ಷಣ ಕ್ಷೇತ್ರದಲ್ಲಿ ಬಹಳ ಕೆಲಸ ಮಾಡುತ್ತಿವೆ ಎಂಬುದು ನಿಜ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಕೆಲಸ ಮಾಡಬೇಕಿರುವುದು ಸರಕಾರ. ಸರಕಾರ ಅದನ್ನು ಮಾಡದೇ ಇದ್ದರೆ ಅದು ಅದರ ವೈಫಲ್ಯವನ್ನು ಸೂಚಿಸುತ್ತದೆ. ಈ ವೈಫಲ್ಯವನ್ನು ಸರಿಪಡಿಸುವಂತೆ ಒತ್ತಡ ಹೇರಬೇಕಾದ ಸಮುದಾಯಕ್ಕೆ ಚಾರಿಟಿಯ ಮೂಲಕ ಆ ಸವಲತ್ತನ್ನು ಒದಗಿಸುವುದು ಪ್ರಜಾಪ್ರಭುತ್ವದ ಅಡಿಗಲ್ಲನ್ನೇ ಸಡಿಲಗೊಳಿಸುವುದಿಲ್ಲವೇ?
ಉದಾಹರಣೆಗೆ ಒಂದು ಊರಿನಲ್ಲಿ ಶಾಲೆ ಇಲ್ಲ ಎಂದು ಭಾವಿಸೋಣ. ಇಲ್ಲಿ ಸರಕಾರ ಒಂದು ಶಾಲೆಯನ್ನು ಸ್ಥಾಪಿಸಬೇಕು. ಅದಕ್ಕೆ ಬೇಕಾದ ಒತ್ತಡವನ್ನು ಊರಿನವರು ಹೇರಬೇಕು. ಮಠವೊಂದು ಬಂದು ಇಲ್ಲಿ ಶಾಲೆಯೊಂದನ್ನು ಸ್ಥಾಪಿಸಿದರೆ ಆ ಊರಿನಲ್ಲಿ ಶಾಲೆಯೇ ಒಂದು ಕಾರಣವಾಗಿ ಮೂಡಬಹುದಾಗಿದ್ದ ರಾಜಕೀಯ ಪ್ರಜ್ಞೆಯೇ ಇಲ್ಲವಾಗುತ್ತದೆ.
ಇದು ಸಮಸ್ಯೆಯ ಒಂದು ಮುಖ. ಈಗ ಕರ್ನಾಟಕದ ವಿಷಯವನ್ನೇ ಪರಿಗಣಿಸುವುದಾದರೆ ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಮಠಗಳು ಕುರುಡರಿಗೆ ಶಿಕ್ಷಣ ನೀಡುವ ಸಂಸ್ಥೆಗಳು, ಉಚಿತ ವಸತಿ ನಿಲಯ, ಉಚಿತ ಪ್ರಾಥಮಿಕ ಶಿಕ್ಷಣಗಳನ್ನು ನೀಡುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಪಿಟೇಷನ್ ಸಂಸ್ಥೆಗಳನ್ನೂ ಸ್ಥಾಪಿಸಿಕೊಂಡಿಲ್ಲವೇ?
ತಾತ್ವಿಕವಾಗಿ ನೋಡುವುದಾದರೆ ವಿರಕ್ತಿ ಇರಬೇಕಾದ ಜಾಗದಲ್ಲಿ ಐಷಾರಾಮ ತುಂಬಿಲ್ಲವೇ? ಧರ್ಮ ಸಂಸ್ಥಾಪನೆ ಅಥವಾ ನೀತಿ ಬದ್ಧ ಜೀವನವೊಂದನ್ನು ಬೋಧಿಸಬೇಕಾದ ಯತಿಗಳು ತಮ್ಮದೇ ಆದ ರಾಜಕೀಯ ಒಲವುಗಳನ್ನು ಪ್ರತಿಪಾದಿಸುತ್ತಿದ್ದಾರಲ್ಲವೇ? ಆದರೆ ರಾಜಕೀಯ ಪಕ್ಷವಾಗದೆ, ಎನ್ ಜಿ ಓವೂ ಆಗದೆ ಈ ಎಲ್ಲವುಗಳ ಅನುಕೂಲಗಳನ್ನು ಅನುಭವಿಸುವ ಮಠಗಳು ಸಮಾಜದ ಮೇಲೆ ನಿಜಕ್ಕೂ ಬೀರುತ್ತಿರುವ ಪರಿಣಾಮ ಏನು ಮತ್ತು ಆದುನಿಕ ಪ್ರಜಾಪ್ರಭುತ್ವದಲ್ಲಿ ಅವುಗಳ ಸ್ಥಾನವನ್ನು ಹೊಸತಾಗಿ ನಿರ್ಧರಿಸುವ ಅಗತ್ಯವಿಲ್ಲವೇ?

- Printer-friendly version
- Login or register to post comments
- 943 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು
ಈ ಬಗ್ಗೆ ಚುಟುಕಾಗಿ ನಾನೊಂದು ಕಡೆ ಹಿಂದೆ ಬರೆದಿದ್ದೆ, http://sampada.net/blog/03/01/2007/2706
ಮಠಗಳು ಶಿಕ್ಷಣ ಕ್ಷೇತ್ರದಲ್ಲಿ ಬಹಳ ಕೆಲಸ ಮಾಡುತ್ತಿವೆ ಎಂಬುದು ನಿಜ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಕೆಲಸ ಮಾಡಬೇಕಿರುವುದು ಸರಕಾರ. ಸರಕಾರ ಅದನ್ನು ಮಾಡದೇ ಇದ್ದರೆ ಅದು ಅದರ ವೈಫಲ್ಯವನ್ನು ಸೂಚಿಸುತ್ತದೆ. ಈ ವೈಫಲ್ಯವನ್ನು ಸರಿಪಡಿಸುವಂತೆ ಒತ್ತಡ ಹೇರಬೇಕಾದ ಸಮುದಾಯಕ್ಕೆ ಚಾರಿಟಿಯ ಮೂಲಕ ಆ ಸವಲತ್ತನ್ನು ಒದಗಿಸುವುದು ಪ್ರಜಾಪ್ರಭುತ್ವದ ಅಡಿಗಲ್ಲನ್ನೇ ಸಡಿಲಗೊಳಿಸುವುದಿಲ್ಲವೇ?
ಬೆಳವಣಿಗೆ (ಅಭಿವ್ರದ್ಧಿ) ಅನ್ನುವದು ಬರೀ ಹಣವಂತಿಕೆಯ ಬೆಳವಣಿಗೆ ಅಲ್ಲ. ಎಲ್ಲಾ ಬಗೆಯಲ್ಲೂ ನಾವು ಬೆಳವಣಿಗೆ ಕಾಣಬೇಕಾಗುತ್ತದೆ. ಮಠದ ಸ್ವಾಮಿಗಳು ಸಂಸಾರ
ಬಿಟ್ಟಿರುವದರಿಂದ ಅವರಿಗೆ ನಮ್ಮಂತೆ ಬರೀ ಒಂದು ಕುಟುಂಬದ ಚಿಂತೆ ಇರುವದಿಲ್ಲ, ಒಂದು ಇಡೀ ಸಮುದಾಯದ ಚಿಂತೆ ಇರುತ್ತದೆ. ಆಯಾ ಕಾಲದಲ್ಲಿ ಮಂದಿಗೆ ಏನು
ಬೇಕಿದೆಯೋ ಅದನ್ನು ಒದಗಿಸುವುದು ಹೇಗೆ ಎಂಬ ಒಂದು ಕಳಕಳಿ ಇರುವದರಿಂದ ಮಠಗಳು ಮಂದಿಗೆ ಮಾನ್ಯವಾಗಿವೆ.
ಆದರೆ ರಾಜಕಾರಣಿಗಳಿಗೆ ಇಂತ ಕಳಕಳಿ ಇರುವದಿಲ್ಲ.
ಆಡಳಿತದಲ್ಲಿ ಪ್ರಜೆಯ ಪಾಲ್ಗೊಳ್ಳುವಿಕೆಯನ್ನು ತಡೆಯುವ ಮಠ
ನಾನು ಯಾಮಿನಿಯವರ ಅಭಿಪ್ರಾಯವನ್ನು ಒಪ್ಪುತ್ತೇನೆ. ಇನ್ನು ಸ್ವಾಮೀಜಿಗಳಿಗೆ ಕಳಕಳಿ ಇದೆ, ರಾಜಕಾರಣಿಗಳಿಗೆ ಇಲ್ಲ ಎಂದಾದರೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಗುವ ಬದಲಿಗೆ ವ್ಯಾಟಿಕನ್ ನಂತೆಯೋ, ಸೌದಿ ಅರೇಬಿಯಾದಂತೆಯೋ ಇಲ್ಲೊಂದು ಧಾರ್ಮಿಕ ಪ್ರಭುತ್ವ ಇರುತ್ತಿತ್ತು. ಪ್ರಜಾಸತ್ತಾತ್ಮಕ ಸರಕಾರ ಬರುವ ಮೊದಲು ಅಂದರ ಬ್ರಿಟಿಶ್ ರಾಜ್ ಗೂ ಮೊದಲು ಇದ್ದ ಧಾರ್ಮಿಕತೆಯನ್ನೇ ಆಧಾರವಾಗಿಟ್ಟುಕೊಂಡಿದ್ದ ಆಡಳಿತ ವ್ಯವಸ್ಥೆಗಳು ಪ್ರಜಾಪ್ರಭುತ್ವ ಒದಗಿಸಿರುವ ಯಾವ ಸವಲತ್ತನ್ನೂ ಒದಗಿಸಿರಲಿಲ್ಲ ಎಂಬ ಅಂಶವನ್ನು ಮರೆಯಲು ಸಾಧ್ಯವೇ?
ಯಾಮಿನಿಯವರು ಹೇಳಿದಂತೆ ಶಾಲೆಗಳನ್ನು ತೆರೆಯುವುದು ಸರಕಾರದ ಕೆಲಸ. ಅದನ್ನು ಸರಕಾರದ ಮಾಡದೇ ಇದ್ದರೆ ಆ ಸರಕಾರವನ್ನು ಆರಿಸಿರುವ ನಾವು ಕೇಳಬೇಕು. ಇದಿಷ್ಟು ಸಹಜವಾಗಿ ಆದಬೇಕಾದ ಬೆಳವಣಿಗೆ. ಇಲ್ಲಿ ಮಠ ತನ್ನ 'ಸೇವೆ'ಯ ಮೂಲಕ ಮಧ್ಯ ಪ್ರವೇಶ ಮಾಡಿದಾಗ ಸರಕಾರದ ತಪ್ಪನ್ನು ಪ್ರಶ್ನಿಸದೇ ಹೋಗಿಬಿಡುವ ಅಪಾಯವಿದೆಯೆಲ್ಲಾ. ಅದು ಪ್ರಜಾಪ್ರಭುತ್ವವನ್ನು ಒಳಗಿನಿಂದಲೇ ಶಿಥಿಲಗೊಳಿಸುತ್ತದೆ. ಅಂದರೆ ಪ್ರಜಾಸತ್ತೆಯಲ್ಲಿ ಪ್ರಜೆಯ ಪಾಲ್ಗೊಳ್ಳುವಿಕೆಯನ್ನು ಪರೋಕ್ಷವಾಗಿ ತಡೆಯುತ್ತದೆ.
ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net
Re: ಆಡಳಿತದಲ್ಲಿ ಪ್ರಜೆಯ ಪಾಲ್ಗೊಳ್ಳುವಿಕೆಯನ್ನು ತಡೆಯುವ ಮಠ
ಮಾಡದಿರುವವರನ್ನು ತೆಗಳುವದಕ್ಕಿಂತ ಮಾಡುವವರನ್ನು ಹೊಗಳುವದು ಲೇಸು ಅಲ್ಲವೇ?
ಸರಕಾರದಂತೆ ಮಟಗಳಿಗೂ ಒಂದು ಹೊಣೆಯಿದೆ, ಆ ಹೊಣೆ ಬರೀ 'ನೀತಿ ಬೋಧನೆ' ಆಗಬೇಕಿಲ್ಲ. ಶಾಲೆಗಳನ್ನು ಹುಟ್ಟು ಹಾಕುವದೂ ಆ ಹೊಣೆಯ ಒಂದು ಪಾಲು.
ಇಸ್ಮಾಯಿಲ್‍ರು ಹೇಳುವಂತೆ ಕೇಳುವದು ನಮ್ಮ ಹೊಣೆಯಾದರೂ ಕೇಳುವದಾದರೂ ಯಾರನ್ನು?
ಮಾಡುವದಕ್ಕೆ ಕಾರಣ ಒಂದೇ, ಆದರೆ ಮಾಡದಿರುವದಕ್ಕೆ ಕಾರಣ ನೂರಾರು ಸಿಗುತ್ತವೆ.
Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು
ನೀವು ಹೇಳಿರುವುದನ್ನು(ಮಠಗಳು ರಾಜಕೀಯ ಪ್ರಙ್ನೆ ಬೆಳೆಯಲು ಬಿಡುತ್ತಿಲ್ಲ) ನಾನು ಮೊದಮೊದಲು ಒಪ್ಪಿದರೂ
ಅಮೇಲೆ ನನಗೆ ನಾನೆ ತರ್ಕಿಸಿಕೊಂಡಾಗ ಅದನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಾಗಲಿಲ್ಲ. ಅದನ್ನು ಒಂದು ಉದಾಹರಣೆಯೊಂದಿಗೆ ವಿವರಿಸಲು ಯತ್ನಿಸುತ್ತೇನೆ.
ಚಾಮರಾಜನಗರ ನಮ್ಮ ರಾಜ್ಯದಲ್ಲಿರುವ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದು. ಇಲ್ಲಿ ಅಭಿವೃದ್ದಿಯಿರಲಿ ನಮ್ಮ ಸರ್ಕಾರದ ಯಾವ ಮಂತ್ರಿಯು ( ಮುಖ್ಯಮಂತ್ರಿಯಂತು ಇಲ್ಲವೆ ಇಲ್ಲ ಬಿಡಿ) ಹೋಗುವುದಿಲ್ಲ ಏಕೆಂದರೆ ಅವರು ತಮ್ಮ ಅಧಿಕಾರ ಕಳೆದುಕೊಳ್ಳುತ್ತೇವೆಂಬ ವಿಚಿತ್ರವಾದ ಮೂಢನಂಬಿಕೆ. ಹಾಗಾಗಿ ಇದು ಜಿಲ್ಲಾ ಕೇಂದ್ರವಾಗಿದ್ದರೂ ಅಭಿವೃದ್ಧಿ ಕಾರ್ಯಗಳು ಕೇವಲ ಮರೀಚಿಕೆಯಾಗಿ ಉಳಿದಿದೆ. ಇಷ್ಟಾದರೂ ಇಲ್ಲಿನ ಜನ ಇದರ ವಿರುದ್ಧ ದಿನವೂ ಪ್ರತಿಭಟನೆ ಮಾಡುತ್ತಲೆ ಇದ್ದಾರೆ. ಇಂತಹ ಹಿಂದುಳಿದ ಪ್ರದೇಶದಲ್ಲೂ ಈ ಭಾಗದ ಪ್ರಸಿದ್ಧ ಮಠ(ಗಳು) ಇಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದಲ್ಲದೆ ತನ್ನ ಮಿತಿಯೊಳಗೆ ಮಾಡಬಹುದಾದ ಇನ್ನಿತರ ಸಮಾಜಮುಖಿಯಂಥ ಕೆಲಸಗಳನ್ನು ಮಾಡುತ್ತಾ ಬಂದಿದೆ. ಆಂದರೆ ಇಲ್ಲಿ ಪ್ರಜೆಗಳಿಂದಲೆ ಚುನಾಯಿತವಾದ ಸರ್ಕಾರ ಈ ಭಾಗವನ್ನು ಕಡೆಗಣಿಸಿದ್ದರೂ ಆ ಭಾಗದಲ್ಲೆ ಮಠಗಳು ಸಮಾಜವನ್ನು ಮೇಲೆತ್ತುವಲ್ಲಿ ನಿರತವಾಗಿದೆ. ಇಷ್ಟಾದರೂ ಇಲ್ಲಿನ ಜನ, ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ದಿನವೂ ಪ್ರತಿಭಟನೆ ಮಾಡುತ್ತಲೆ ಇದ್ದಾರೆ. ಅಂದ ಮೇಲೆ ಮಠಗಳು ರಾಜಕೀಯ ಪ್ರಙ್ನೆ ಬೆಳೆಯಲು ಬಿಡುತ್ತಿಲ್ಲ ಎಂದರೆ ಒಪ್ಪಿಕೊಳ್ಳಬಹುದೆ ?
೧೯೨೬ ರಲ್ಲಿ ಮೈಸೂರು- ಚಾ.ನಗರ(ಮೈಸೂರು- ನಂಜನಗೂಡು ಮಾರ್ಗ ೧೮೯೫ ರಲ್ಲೆ ಮಾಡಲಾಗಿತ್ತು) ಕ್ಕೆ ಮೀಟರ ಗೇಜ್ ರೈಲು ಮಾರ್ಗ ಮಾಡಲಾಯಿತು. ಈಗ ಅಂದರೆ ೨೦೦೭ ರಲ್ಲಿ ಇದನ್ನು ಬ್ರಾಡ್ ಗೇಜ್ ಗೆ ಪರಿವರ್ತಿಸುವ ಕಾರ್ಯ ನಡೆಯುತ್ತಿದೆ. ಅಂದರೆ ನಮ್ಮ ಸರ್ಕಾರದಿಂದ ಆಗಬೇಕಾದ ಈ ಕೆಲಸಕ್ಕೆ ಒಂದು ಶತಮಾನವೆ ಬೇಕಾಯಿತು. ಹಾಗದರೆ ನಾವು ಸರಕಾರದಿಂದಲೆ ಎಲ್ಲ ಕೆಲಸಗಳು ನಡೆಯುತ್ತವೆ ಎಂದು ಒಪ್ಪಿಕೊಳ್ಳುವುದು ಎಷ್ಟರ ಮಟ್ಟಿಗೆ ಪ್ರಾಕ್ಟಿಕಲ್ ? ಹಾಗಾದರೆ ಒಂದು ಮಠದ ಸಾಮುದಾಯಿಕ ಸೇವೆ (ಕಮ್ಯೂನಿಟಿ ಸರ್ವಿಸ್) ಯಿಂದ ಸಮಾಜಕ್ಕೆ ಒಳ್ಳೆಯದಾದರೆ ನಾವು ಏಕೆ ಅದನ್ನು ಹೊಗಳದೆ ಹೋದರೂ ಪರವಾಗಿಲ್ಲ ಒಪ್ಪಿಕೊಳ್ಳಬಾರ್ದಾ?
ಇನ್ನು ಕೆಲವು ಮಠಗಳು ಗೋ ತಳಿಗಳ ಸಂರಕ್ಷಣೆ(ಶಿವಮೊಗ್ಗ ಜಿಲ್ಲೆಗೆ), 'ಮೂಢನಂಬಿಕೆ' ತೊಲಗಿಸುವುದು(ಚಿತ್ರದುರ್ಗಕ್ಕೆ ಭೇಟಿ ಕೊಡಿ) ಮತ್ತು ಗ್ರಾಮೀಣ(ಗುಡಿ) ಕೈಗಾರಿಕೆಗಳನ್ನು ನಡೆಸಲು ಪ್ರೋತ್ಸಾಹಿಸುವುದು( ದ.ಕ. ಜಿಲ್ಲೆಗೆ ಭೇಟಿ ಕೊಡಿ), ಇಂಥ ಒಳ್ಳೊಳ್ಳೆ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ನಮ್ಮ ಸರ್ಕಾರಗಳೆ ಇವುನ್ನೆಲ್ಲ ಮಾಡಿದ್ದರೆ ಮಠಗಳಿಗೆ ಇವುನ್ನ ಮಾಡಲು ಅವಕಾಶವೆ ಇರುತ್ತಿರಲಿಲ್ಲ. ಈಗಲು 'ದಾಸೋಹ' ದಂತಹ(ಙ್ನಾನ, ಅನ್ನ, ಅಕ್ಷರ) ಉತ್ತಮ ಸಂಸ್ಕೃತಿ ಉಳಿದಿರುವುದು ಈ ನಮ್ಮ ಮಠಗಳಲ್ಲಿ ಅಂದರೆ ರಾಜಕೀಯವಾಗಿ ನಾವು ಏನನ್ನು ಸಾಧಿಸಲು ಸಾಧ್ಯವಾಗಿಲ್ಲವೊ ಅಲ್ಲಿ ಮಠಗಳು ತಮ್ಮನ್ನು ಗುರುತಿಸಿಕೊಂಡಿವೆ.
ಇನ್ನೊಂದು ವಿಚಾರ ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕು ....ನಮ್ಮಲ್ಲಿ ಎರಡು ಪಂಥದ ಮಠಗಳಿವೆ.. ಒಂದು ವಿರಕ್ತ ಮಠ, ಇನ್ನೊಂದು ಪಟ್ಟದ ಮಠ.
ಪಟ್ಟದ ಮಠಗಳನ್ನು ನಾವು ಆಧ್ಯಾತ್ಮ ಕೇಂದ್ರಗಳನ್ನಾಗಿ ಪರಿಗಣಿಸಬಾರದು. ಇಂದಿಗೂ ಹಲವು ವಿರಕ್ತ ಮಠಗಳು ಆಧ್ಯಾತ್ಮವನ್ನೆ ಧ್ಯೇಯವನ್ನಾಗಿಸಿಕೊಂಡಿದೆ.
ಪಟ್ಟದ ಮಠಗಳನ್ನು ನಾವು ಒಂದು ಖಾಸಗಿ ಸಂಸ್ಥೆಯಂತೆ ಪರಿಗಣಿಸಬೇಕು ಹಾಗು ಆ ಮಠಾಧೀಶ ಆ ಸಂಸ್ಥೆಯ ಮುಖ್ಯಸ್ಥ ಅಷ್ಟೆ. ಇದನ್ನು ನಮ್ಮ ಜನರು ಅರಿಯಬೇಕು. ಖಾಸಗಿ ಸಂಸ್ಥೆಗಳು ಸ್ವಲ್ಪವಾದರೂ ಲಾಭಕ್ಕಾಗೇ ನಡೆಯುತ್ತವೆ ಎಂಬುದು ನಮಗೆ ತಿಳಿದಿರುವ ವಿಚಾರವೆ.
ಇನ್ನು ಮಠಗಳು ಜಾತಿ ರಾಜಕಾರಣ ಮಾಡುತ್ತವೆ ಎಂದು ದೂಷಿಸುತ್ತೇವೆ ಆದರೆ ಇದು ಎಷ್ಟರ ಮಟ್ಟಿಗೆ ಸಾರ್ವತ್ರಿಕ ಸತ್ಯ ಎಂದು ಯೋಚಿಸಬೇಕಾಗುತ್ತದೆ. ಏಕೆಂದರೆ ಮಠಾಧೀಶರು ರಾಜಕೀಯ ಮಾಡಿದರೆ ಖಂಡಿತ ಜನರು ಒಪ್ಪುವುದಿಲ್ಲ( ಇದನ್ನು ನಾನೆ ಕಣ್ಣಾರೆ ಗಮನಿಸಿದ್ದೇನೆ). ಅವರು ಗಳಿಸುವ ಗೌರವವನ್ನು ಕಳೆದುಕೊಳ್ಳುತ್ತಾರೆ ಏಕೆಂದರೆ ಈವತ್ತಿನ ರಾಜಕೀಯ ಎಷ್ಟು ಕೊಳಕಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ನಮ್ಮ ಕೆಲವು ಮುಖಂಡರು ಆ ಜಾತಿಯ ಮಠಾಧೀಶರನ್ನು ಭೇಟಿಯನ್ನು ಮಾಡಿದರೆ ಆ ಜಾತಿಯ ಮತಗಳನ್ನೆಲ್ಲ ಪಡೆಯಬಹುದು ಎಂಬ ಹುಚ್ಚು ಕಲ್ಪನೆಯಿದೆ. ಅದನ್ನೆ ಪತ್ರಿಕೆಗಳೂ ಕೂಡ ಬಿಂಬಿಸುತ್ತವೆ. ಈ ರಾಜಕಾರಣಿಗಳು ಈ ಹುಚ್ಚು ಕಲ್ಪನೆಯಿಂದ ಹೊಸ ಮಠಗಳನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಹುಟ್ಟು ಹಾಕುತ್ತಿದ್ದಾರೆ. ಇದು ನಮ್ಮ ರಾಜಕೀಯದ ದೊಡ್ಡ ದುರಂತ ಹಾಗು ಅಪಾಯಕಾರಿ ಬೆಳವಣಿಗೆ. ಇದನ್ನು ಖಂಡಿತ ನಾವು ಖಂಡಿಸಲೇಬೇಕು.
ನಾವು ಸೂಚ್ಯ ಸತ್ಯಗಳನ್ನು(ಇಂಪ್ಲೈಡ್ ಟ್ರೂತ್) ಒಪ್ಪುವ ಮೊದಲು ಅದನ್ನು ವಾಸ್ತವಿಕತೆಯೆಂಬ ಮಸೂರದಿಂದ ನೋಡುವುದು ಸೂಕ್ತವಲ್ಲವೆ?
-ಜೈ ಕರ್ನಾಟಕ
Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು
ಶ್ರೀ ವಿಶ್ವೇಶ್ವರ ಭಟ್ ಅವರ ಮೂಲ ಲೇಖನ ಮತ್ತು ಶ್ರೀ ಸಂಗನಗೌಡ ಅವರ ಪ್ರತಿಕ್ರಿಯೆಗಳಿಗೆ ಬಹಳ ಪ್ರಬುದ್ಧವಾದ ಮುಂದುವರಿಕೆಯನ್ನು ನೀವು ನೀಡಿದ್ದೀರಿ. ಇಂತಹ ವಿಷಯಗಳ ಬಗ್ಗೆ ಚರ್ಚೆ ಮಾಡುವುದು ಅತ್ಯಗತ್ಯ. ಸುಮಾರು ನಲವತ್ತು ವರ್ಷಗಳ ಹಿಂದೆ, ಕೆಲವು ಜಾತಿಗಳಿಗೆ ಸೇರಿದ್ದ ಮಠಗಳು ಶ್ಯೆಕ್ಷಣಿಕ ಕೆಲಸ ಮಾಡಿದ ಬಗೆಗೂ ಇಂದಿನ ಸನ್ನಿವೇಶಕ್ಕೂ ಬಹಳ ವ್ಯತ್ಯಾಸವಿದೆ. ಅಂದು ನಿರಕ್ಷರತೆ ಹೆಚ್ಚಾಗಿ ಇದ್ದಾಗ, ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆಗಳನ್ನು ತೆಗೆದ, ವಿದ್ಯಾರ್ಥಿನಿಲಯಗಳನ್ನು ನಡೆಸಿದ ಮಠಗಳು ಕೆಲವು ಮಿತಿಗಳ ಒಳಗೆ ಒಳ್ಳೆಯ ಕೆಲಸ ಮಾಡಿದವು. ತಮ್ಮ ಧಾರ್ಮಿಕ ಓಲುವೆಗಳು ಶಿಕ್ಷಣಕ್ಕೆ ಅಡ್ಡಿಯಾಗದಂತೆ ಎಚ್ಚರ ವಹಿಸಿದವು. ಆದರೆ, ಇಂದಿನ ಸನ್ನಿವೇಶವೇ ಬೇರೆ. ಇಲ್ಲಿ ಯಾಮಿನಿಯವರು ಹೇಳಿರುವುದು ನೂರಕ್ಕೆ ನೂರರಷ್ಟು ಸರಿ. ಇಂದು ಮಠಗಳು ಮತ್ತು ರಾಜಕಾರಣಿಗಳ ನಡುವೆ ಇರುವುದು ಅಪವಿತ್ರ ಮೈತ್ರಿ. ಅವು ಜಾತಿರಾಜಕಾರಣದ ಅಂತೆಯೇ ಶಕ್ತಿ ರಾಜಕಾರಣದ ಅಡ್ಡೆಗಳಾಗಿ ಪರಿಣಮಿಸಿವೆ. ಶಿಕ್ಷಣಸಂಸ್ಥೆಗಳು ಆದಾಯಮೂಲವಾಗಿದೆಯೇ ವಿನಾ ಕನಿಷ್ಠ ಪಕ್ಷ ತಮ್ಮ ಜಾತಿಯ ಬದವರಲ್ಲಿಯೂ ಆಸಕ್ತವಾಗಿಲ್ಲ. ಅವು ಸರ್ಕಾರದ ನೆರವನ್ನು ಪಡೆಯುತ್ತಲೇ ತಮ್ಮದೇ ಆದ ಕೋಟೆಗಳನ್ನು ಕಟ್ಟಿಕೊಳ್ಳುತ್ತಿವೆ. ಇಲ್ಲಿ ಯಾವುದೇ ವಿಧವಾದ ಚಾರಿಟಿ ಕೂಡ ಇಲ್ಲ. ಧರ್ಮ, ಅಧ್ಯಾತ್ಮ ಮುಂತಾದ ಪದಗಳನ್ನು ಬಳಸುವ ನೈತಿಕ ನೆಲೆಗಟ್ಟನ್ನೇ ಬಹುಪಾಲು ಮಠಾಧಿಪತಿಗಳು ಕಳೆದುಕೊಂಡಿದ್ದಾರೆ.
ಈ ಸನ್ನಿವೇಶವನ್ನು ಎದುರಿಸುವುದಾಗಲೀ ಬದಲಾಯಿಸುವುದಾಗಲೀ ಕಷ್ಟ ಸಾಧ್ಯ. ಈಚೆಗೆ ಕಲೆ ಮತ್ತು ಸಂಸ್ಕತಿಗಳ ವಕ್ತಾರರೂ ಕೂಡ ಈ ಬಗ್ಗೆ ಸಂಕೋಚ ತೋರಿಸುತ್ತಿಲ್ಲ. ಇಂದಿನ ಸನ್ನಿವೇಶದಲ್ಲಿ ಇವು ತಾವು ಮಾಡಬೇಕಾದುದನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಮಾಡುತ್ತಿವೆ.
ಇದೇ ಮಾತನ್ನು ಮಠಗಳು ಎಂದು ಕರೆಸಿಕೊಳ್ಳದ, ಆದರೆ ಹಿಂದೂ ಧರ್ಮದ ರಾಯಭಾರಿಗಳೆಂಬ ಹೆಸರಿನಲ್ಲಿ ಅಧ್ಯಾತ್ಮವನ್ನು ಮಾರಾಟದ ಸರಕಾಗಿ ಮಾರ್ಪಡಿಸಿರುವ `ದೇವಮಾನವರಿ'ಗೂ ಅನ್ವಯಿಸಬಹುದು. ಈ ಚರ್ಚೆಯನ್ನು ಎತ್ತಿದವರಿಗೆ ಮತ್ತು ಮುಂದುವರೆಸಿದವರಿಗೆ ವಂದನೆಗಳು.
H.S.Raghavendra Rao
ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು
ಚರ್ಚೆಗೆ ಹಾಕಿರುವ ಲೇಖನದಲ್ಲಿರುವ ವಿಚಾರಗಳ ಬಗ್ಗೆ ನನ್ನ ಅನಿಸಿಕೆಗಳು ಈ ಕೆಳಕಂಡಂತಿವೆ:
೧. ಮೂಲ ಲೇಖನದಲ್ಲಿ ಉದಾಹರಣೆಯಲ್ಲಿ ಹೇಳಿರುವಂತೆ ಸರಕಾರ ತೆರೆಯಬೇಕಿದ್ದ ಶಾಲೆಯೊಂದನ್ನು ಮಠವೊಂದು ತೆರೆಯುವುದರಿಂದ ರಾಜಕೀಯ ಪ್ರಜ್ಞೆ ಬೆಳೆಯುವುದನ್ನು ತಡೆದಂತೆ ಎಂಬ ಹೇಳಿಕೆ ನಿಜಕ್ಕೂ ನಾಣ್ಯದ ಒಂದು ಮುಖ ಮಾತ್ರ ತೋರಿಸಿದಂತಾಗಲಿಲ್ಲವೇ? ಇವತ್ತಿಗೂ ಮಠದ ಪ್ರಭಾವವಿಲ್ಲದ, ಅಥವಾ ಮಠಗಳ ನೆರಳೂ ಬೀಳದ ಹಳ್ಳಿ/ಊರುಗಳು ನಮ್ಮಲ್ಲಿ ಸಾವಿರಾರಿವೆ. ಅಂತಹ ಊರುಗಳಲ್ಲಿ ಕೂಡಾ ಶಾಲೆ, ರಸ್ತೆ, ಆಸ್ಪತ್ರೆ ಮೊದಲಾದ ಮೂಲಭೂತ ಸೌಲಭ್ಯಗಳು ಇಂದಿಗೂ ಇಲ್ಲ, ಹೌದು ತಾನೇ? ಹಾಗಿದ್ದಲ್ಲಿ ಈ ವೇಳೆಗಾಗಲೇ ಅಂತಹ ಊರುಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಬೇಕಿತ್ತಲ್ಲವೇ? ಹಾಗಾಗಿ ಬೇರೆಯ factors ಕೂಡ ಈ "ರಾಜಕೀಯ ಪ್ರಜ್ಞೆ"ಯನ್ನು ಪ್ರಚೋದಿಸುತ್ತವೆ ಅಂತ ನನಗನ್ನಿಸುತ್ತಿದೆ. ಈ ಬಗ್ಗೆ ನಾನು ಓದಿಲ್ಲವಾದ್ದರಿಂದ ಹೆಚ್ಚು ಬರೆಯಲಾರೆ. ಯಾವುದೋ ಊರಿನ ಉಸಾಬರಿ ಏತಕ್ಕೆ? ಬೆಂಗಳೂರಿನಲ್ಲೇ ಎಷ್ಟು ಬಡಾವಣೆಗಳಲ್ಲಿ ರಸ್ತೆ ಸರಿಯಾಗಿವೆ ಅಂತ ಹೇಳಿ ನೋಡೋಣ! ಹೀಗಿರುವಾಗ, ಒಬ್ಬ ಮಠಾಧಿಪತಿ ಅಂಥಹ ಊರಿನಲ್ಲಿ ಶಾಲೆಯೊಂದನ್ನು ತೆರೆದಲ್ಲಿ ಅದು ಹೇಗೆ ರಾಜಕೀಯ ಪ್ರಜ್ಞೆಯನ್ನು ತುಳಿದಂತಾಗುತ್ತದೆ? ಈ ಐದು ದಶಕಗಳಿಂದ ರಾಜಕೀಯ, ಸಾಮಾಜಿಕ ಪ್ರಜ್ಞೆ ಮೂಡಿಲ್ಲ. ಹಾಗಿದ್ದಾಗ ಮಠದಿಂದ at least ಶಿಕ್ಷಣವಾದರೂ ಆ ಊರಿಗೆ ದೊರೆತಂತೆ ಆಯಿತಲ್ಲ. ಯಾರಿಗೆ ಗೊತ್ತು, ಆ ಶಾಲೆಯಲ್ಲಿ ಓದಿದ ಹುಡುಗ(ಹುಡುಗಿ)ಯೊಬ್ಬ ನಾಳೆ ಸತ್ಪ್ರಜೆಯಾಗಿ, ತನ್ನಲ್ಲಿ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬಹುದೇನೋ? ಆಗ ಇದರಿಂದ ಒಳ್ಳೆಯದೇ ಆದಂತಾಗಲಿಲ್ಲವೇ? ಏನಂತೀರಾ?
೨. ಎಲ್ಲಾ ಮಠಗಳೂ ಎಲ್ಲ ಕಾಲದಲ್ಲಿಯೂ ಬರಿಯ ಆಧ್ಯಾತ್ಮಿಕ ಕೇಂದ್ರಗಳೆ ಆಗಿದ್ದವು ಅಂತಲ್ಲ. ಕೆಲವು ಮಠಗಳ ಧ್ಯೇಯವೇ ಸಮಾಜಮುಖಿಯಾಗಿರಬಹುದಲ್ಲ. ಅಲ್ಲಿ ಕಾವಿ ಕೂಡ ಇರುವುದಿಲ್ಲ. ಉದಾ: ಮಲ್ಲಾಡಿಹಳ್ಳಿ ಮಠ, ಬಾಬಾ ಆಮ್ಟೆ "ಆನಂದಾಶ್ರಮ". ನಿಮಗೆ ಅವುಗಳನ್ನು "ಮಠ/ಆಶ್ರಮ" ಅಂತ ಕರೆಯೋದಕ್ಕೆ (conventional ಆಗಿ) ಆಗೋದಿಲ್ಲ. ಏಕೆಂದರೆ ಅವುಗಳ ಧ್ಯೇಯವೇ ಬೇರೆ. ಸೇವೆಯ ಮೂಲಕ ಜನರ ನೋವಿಗೆ ಸ್ಪಂದಿಸಿ, ಆ ಮೂಲಕ ನೈತಿಕ ಪ್ರಜ್ಞೆ ಮೂಡಿಸುವುದು ಅವುಗಳ ಧ್ಯೇಯ. ಹಾಗಿರುವಾಗ, ಅಂಥ ಮಠವೊಂದು ಶಾಲೆಯೊಂದನ್ನು/ಆಸ್ಪತ್ರೆಯೊಂದನ್ನು ತೆರೆಯುತ್ತೇನೆ ಅಂದಾಗ ಬೇಡ ಅಂದರೆ ನಮ್ಮದೇ ತಪ್ಪಾಗಲೂಬಹುದು ಅಲ್ಲವೇ? ಇದು ನನ್ನ ಅನಿಸಿಕೆ. ನನ್ನ ಅಧ್ಯಯನದ ವಿಷಯವೂ ಇದಲ್ಲ. ಹಾಗಾಗಿ ಇದರಲ್ಲಿ ತಪ್ಪಿದ್ದಲ್ಲಿ ಹೇಳಿ. ಈ ರೀತಿಯ ಮಠ/ಮಠಾಧಿಪತಿಯ ವಿಚಾರ ಬಂದಾಗಲೆಲ್ಲ ಭೈರಪ್ಪನವರ "ಗ್ರಹಣ" ಕಾದಂಬರಿ ಪದೇ ಪದೇ ಮುಂದೆ ನಿಲ್ಲುತ್ತೆ.
೩. ಇನ್ನು ರಾಜಕೀಯ ಪ್ರಜ್ಞೆ. ನನ್ನದೇ ಅನುಭವ (ಬಹಳ ಹಳೆಯದೂ ಅಲ್ಲ, ಕೇವಲ ೨ ವರ್ಷ ಹಿಂದಿನದ್ದು) ಹೇಳುತ್ತೀನಿ. ಕೇಳಿದ ನಂತರ, ಏನನ್ನಬೇಕು ಅಂತ ನೀವೇ ಹೇಳಿ: ಬೆಂಗಳೂರಿನಲ್ಲಿ ನಮ್ಮ ಮನೆ ಇರೋದು ರೆವಿನ್ಯೂ ನಿವೇಶನವೊಂದರಲ್ಲಿ. ನಮ್ಮ ಬೀದಿಯಲ್ಲಿ ಒಟ್ಟು ೨೦-೨೫ ಮನೆಗಳಿವೆ. ಅಲ್ಲಿಗಿನ್ನೂ ತಾರು ರಸ್ತೆ ಬಂದಿಲ್ಲ. ಇದರ ಬಗ್ಗೆ ನಮ್ಮ ಕಾರ್ಪೊರೇಟರ್ ಹತ್ತಿರ ಮಾತಾಡಿ, ಬೇಕಿದ್ದಲ್ಲಿ ಅವರ ಮನೆಯ ಮುಂದೆ ಸತ್ಯಾಗ್ರಹ ಕುಳಿತು, ನಮ್ಮ ಹಕ್ಕನ್ನು ನಾವು ಪಡೆಯೋಣ ಅಂತ ಹೊರಟಿದ್ದಕ್ಕೆ ಬೀದಿಯಲ್ಲಿನ ೨೦ ಮನೆಗಳಿಂದ ನಾಲ್ಕು ಜನ ಮುಂದೆ ಬಂದರು. ಉಳಿದ ಸುಮಾರು ೪೦ ಜನರೂ "ಗಪ್ ಚುಪ್"! "ಏನಾದರೂ ಹೆಚ್ಚು ಕಡಿಮೆ ಆದರೆ..ರೆ...ರೆ..." ಬರೀ ಇದೇ ಮಾತು. ಯಾವುದೋ ಸಿನೆಮಾದಲ್ಲಿ ಉಮೇಶ್ ಹೇಳುವಂತೆ "ಅವರೇನಾದರೂ ಅಪಾರ್ಥ ಮಾಡಿಕೊಂಡರೆ, ಮನೆಯಿಂದ ಹೊರಗೆ ಹಾಕಿದರೆ..." ಅನ್ನುವ ರೀತಿ. ಪ್ರೋತ್ಸಾಹ ಕೊಡದಿರುವ ೪೦ ಜನರಲ್ಲಿ ಸುಮಾರು ೩೫ ಜನ ಪದವೀಧರರು! ಇದಕ್ಕೇನನ್ನುತ್ತೀರಾ? ನಮ್ಮಲ್ಲಿ "ಬೆಕ್ಕಿಗೆ ಗಂಟೆ ಕಟ್ಟಬೇಕು" ಅಂತ ಹೇಳಿ, "ಹೌದು, ಹೌದು, ಕಟ್ಟಲೇಬೇಕು. ಕಟ್ಟಿದಲ್ಲಿ ಹಾಗಿರುತ್ತೆ, ಹೀಗಿರುತ್ತೆ.." ಅಂತ ಉತ್ತರನ ಬಡಾಯಿ ಕೊಚ್ಚುತ್ತಾರೆಯೇ ಹೊರತು "ಸರಿ ನಡಿ, ಕಟ್ಟೋಣ" ಅಂತ ಹೊರಟರೆ "ಏ, ಯಾಕೆ ಬೇಕೋ ಮಾರಾಯ, ಬೆಕ್ಕು ಪರಚಿದರೆ?" ಅನ್ನುವವರೇ ಹೆಚ್ಚು. ನಗರಗಳಲ್ಲೇ ಹೀಗಿರುವಾಗ ಇನ್ನು ಹಳ್ಳಿಗಳ ಕಥೆ ಏನಾಗಬೇಕು ಹೇಳಿ?
೪. ನನ್ನ ಅಭಿಪ್ರಾಯದಲ್ಲಿ. ಒಳ್ಳೆಯ ಕೆಲಸ ಆಗುವಂತಿದ್ದಲ್ಲಿ ಆಗಲಿ ಬಿಡಿ. ಸ್ವಾಗತಿಸೋಣ. ಮಠಾಧಿಪತಿ ಅದನ್ನು ತನ್ನ "ಹೆಸರಿ"ಗಾಗಿ ಮಾಡಿದರು ಅಂತಲೇ ಇಟ್ಟುಕೊಳ್ಳೋಣ. ಇದು ಪ್ರತಿಫಲ ಬಯಸಿ ಕೆಲಸ ಮಾಡುವ "ಮಧ್ಯಮ" ಮಟ್ಟದ ನಡವಳಿಕೆ ನಿಜ, ನಾನೂ ಒಪ್ಪುತ್ತೇನೆ. ಆದರೆ ನಮ್ಮ ರಾಜಕಾರಣಿಗಳಿಗಿಂತ ಇದು ಉತ್ತಮವಾಗಲಿಲ್ಲವೇ? ಕೆಲಸ ಮಾಡದೇ ಇದ್ದರೂ "ಬಡವರ ಬಂಧು, ಧೀಮಂತ ನಾಯಕ(ಕಿ)" ಅಂತೆಲ್ಲ ಹಾಕಿಕೊಳ್ಳುವ ಅವರ ವಿರುದ್ಧ ನಮ್ಮ ರಾಜಕೀಯ ಪ್ರಜ್ಞೆಯನ್ನು ಮೊದಲು ಬೆಳೆಸಿಕೊಳ್ಳಬೇಕಲ್ಲವೇ? ನಮ್ಮ ನೇತಾರರಿಗೆ ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತೆ? ನಾವು ತೆರಿಗೆದಾರರು ಕೊಟ್ಟ ಹಣ ಅಥವಾ ಬೊಕ್ಕಸದ ಹಣ ತಾನೇ? ಇದರ ಬಗ್ಗೆ, ಇಂಥ ಸಿಂಪಲ್ ಅನ್ನಿಸುವ ವಿಷಯದ ಬಗ್ಗೆ ಎಲ್ಲಿ ಚರ್ಚೆ ನಡೆಯುತ್ತೆ ಹೇಳಿ? ಚರ್ಚೆ ನಡೆಯಬಹುದು, ಬೇಕಾದರೆ ಸಾವಿರ ಕಾಮೆಂಟ್ಸ್ ಬರುತ್ತೆ. ಆದರೆ ಅವರ ವಿರುದ್ಧ ಕ್ರಮ ಎಲ್ಲಿ ತಗೋತಾರೆ? ಇದೂ ಪ್ರಜಾಪ್ರಭುತ್ವದ ಅವನತಿ ತಾನೇ? ಆದರೆ ನೀವು ಹೇಳಿರುವಂತೆ ಮಠದ ಕೆಲಸವೊಂದು "ಜಾತಿ ವಿಭಜನೆಗೋ", "ಮತಾಂತರಕ್ಕೋ", "ರಾಜಕೀಯ ಓಟಿನ ಬ್ಯಾಂಕಿಗಾಗಿಯೋ" ನಡೆದಲ್ಲಿ ಮನಸ್ಸಿಗೆ ಬಹಳ ಬೇಸರವಾಗುತ್ತದೆ.
೫. ಕೊನೆಯದಾಗಿ, ನಾನು "ಎಡ/ಬಲ" ಹೀಗೆ ಯಾವ ಪಂಥೀಯನೂ ಅಲ್ಲ! ಮಠಗಳನ್ನು, ಅವುಗಳು ಮಾಡುವ ಎಲ್ಲವನ್ನೂ ಸಂಪೂರ್ಣ (ಕುರುಡು ನಂಬಿಕೆಯಿಂದ) ಬೆಂಬಲಿಸುತ್ತಿದ್ದೀನಿ ಅಂತಲೂ ಅಲ್ಲ. ಕೆಲವು ಮಠಗಳು ಈಗಲೂ ಬರಿಯ ಆಧ್ಯಾತ್ಮಿಕತೆಗೇ ತಮ್ಮನ್ನು ಸೀಮಿತವಾಗಿಟ್ಟುಕೊಂಡಿವೆ. ಒಂದು ಉದಾ: ರಾಮಕೃಷ್ಣಾಶ್ರಮ. ಆದರೆ ಬಹುಶಃ "ಗುರುಮನೆ" ಮತ್ತು "ಅರಮನೆ (ಅಧಿಕಾರ)"ದ ನಡುವಣ ಈ ನಂಟು ಇವತ್ತಿನದಲ್ಲ. ಹಂಪಿ-ವಿದ್ಯಾರಣ್ಯರು, ಶಿವಾಜಿ-ರಾಮದಾಸರು ಹೀಗೆ ದೊಡ್ದ ಪರಂಪರೆಯೇ ಇದೆ ಅಲ್ಲವೇ? ಒಂದು ರೀತಿಯಲ್ಲಿ ಮಠವೂ ಸಮಾಜದ ಅಂಗ ತಾನೇ? ಮಠಾಧಿಪತಿಯೂ ಕೊನೆಗೆ ಸಮಾಜದಲ್ಲಿ ಒಬ್ಬ ನಾಗರಿಕ ತಾನೇ?
- ಶ್ಯಾಮ್ ಕಿಶೋರ್
ಪ್ರತಿಕ್ರಿಯೆಗೆ ಜೊತೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು
ಶ್ಯಾಮ್ ಕಿಶೋರರ ಐದು ಪಾಯಿಂಟುಗಳಿದೆ ನನ್ನದು ಪಾಸ್ಟ್ಯುಲೇಟ್ ಗಳಿದ್ದ ಹಾಗೆಂದು ತಿಳಿಯುವುದು.
೨.೧. ಶ್ಯಾಮ್‌ರವರು ವಿದ್ಯಾರಣ್ಯರ ಕುರಿತು ಉದಾಹರಿಸಿದರು. ಧರ್ಮಕ್ಕೆ ರಾಜಕೀಯ ಆಗಬೇಕು ಮತ್ತು ರಾಜಕೀಯಕ್ಕೆ ಧರ್ಮ ಆಗಬೇಕು ಎಂಬ ತತ್ವದ ಪೂರ್ಣ ಜ್ಞಾನವಿದ್ದುದರಿಂದಲೇ ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗಿಳಿದುದು. ಹಾಗೆಯೇ, ಕೃಷ್ಣದೇವರಾಯ ಮತ್ತು ತಿರುಪತಿಯ ವೆಂಕಟೇಶ್ವರನ ನಡುವೆ ಇದ್ದ ಗುಟ್ಟಾದ ವ್ಯವಹಾರಗಳನ್ನು ಅಭ್ಯಾಸಮಾಡುವ ಯಾರಿಗಾದರೂ ಇದು ತಿಳಿಯುತ್ತದೆ. ಒಟ್ಟಿನಲ್ಲಿ ಮಠಗಳು ಎಂದ ಮಾತ್ರಕ್ಕೆ ಅವು ಆಧ್ಯಾತ್ಮಕ ಕೇಂದ್ರಗಳು ಎಂದು ಹೇಳಲು ಬರುವುದಿಲ್ಲ. ನಾವು ತಿಳಿದಷ್ಟು ಸಾಮಾಜಿಕವಲ್ಲ ಮಠಗಳು, ಅವು socio-economical. ಮತ್ತು ಅವುಗಳು ಹಾಗೆಯೇ ಇರಬೇಕು. ಕೇವಲ ಆಧ್ಯಾತ್ಮ ಸಮಾಜದ ಎಲ್ಲ (ಎಲ್ಲರ ಅಲ್ಲ) ಹಸಿವನ್ನು ನೀಗಿಸುವಲ್ಲಿ ಸಹಾಯ ಮಾಡುವುದಿಲ್ಲ.
ಹಾಗೆಯೇ ಮಠ ಮತ್ತು ರಾಜಕೀಯ ಎಷ್ಟು ಹತ್ತಿರದಲ್ಲಿರುತ್ತವೆ ಎಂಬುದನ್ನು ಬರೇ ಹಿಂದು ಮಠಗಳಲ್ಲದೆ, ಕ್ರಿಶ್ಟಿಯನ್ ಚರ್ಚುಗಳನ್ನು ನೋಡಿಯೂ ನಿರ್ಣಯಕ್ಕೆ ಬರಬೇಕು. ಮಠಗಳಿದ್ದ ಮಾತ್ರಕ್ಕೆ ರಾಜಕೀಯ ಪ್ರಜ್ಞೆಯಿರುವುದಿಲ್ಲ ಎಂಬುದು ಶ್ಯಾಮ್ ಅವರು ಹೇಳಿದ ಹಾಗೆ, ನಾಣ್ಯದ ಒಂದು ಮುಖ ಮಾತ್ರ.
೨.೨ ಯಾವುದೇ ಚುನಾವಣೆಯಾಗಲಿ, ಮತ ಚಲಾಯಿಸಬೇಕೆನ್ನುವ ಹುಮ್ಮಸ್ಸು ನಗರಗಳಲ್ಲಿ ಹೆಚ್ಚಿರುತ್ತದೆಯೋ ಬೇರೆಡೆ ಹೆಚ್ಚಿರುತ್ತದೆಯೋ ಗಮನಿಸಿ. ಓದು ಬರಹ ಕಲಿತ ಎಷ್ಟು "ವಿದ್ಯಾವಂತರು" ಚುನಾವಣೆಯಲ್ಲಿ ಭಾಗವಹಿಸುತ್ತಾರೆ.
Re: ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು
ಯಾಮಿನಿಯವರ ಬ್ಲಾಗು ಮತ್ತು ಅದಕ್ಕೆ ಶ್ಯಾಮ್ ಅವರ ಪ್ರತಿಕ್ರಿಯೆಗಳು ಪ್ರಬುದ್ಧವಾಗಿವೆ. ಶ್ಯಾಮ್ ಅವರ ಮೊದಲನೆಯ ಮತ್ತು ನಾಲ್ಕನೆ ಪಾಯಿಂಟುಗಳಲ್ಲಿ ಅನೇಕ ವಿಶಯಗಳನ್ನು ಒಪ್ಪುತ್ತೇನೆ. ಉಳಿದವುಗಳ ಬಗ್ಗೆ ನನಗೆ ಗೊತ್ತಿಲ್ಲ.
ವಿದ್ಯಾಪ್ರಸರಣಕ್ಕೆ ಗುರುಕುಲಗಳ ವ್ಯೆವಸ್ಥೆಯಿದ್ದ ನಮ್ಮ ದೇಶಕ್ಕೆ ಈಗಿರುವ ಶಾಲಾವ್ಯೆವಸ್ಥೆ ಬಂದಿದ್ದು ಮಿಶಿನರಿಗಳಿಂದ ಅರ್ಥಾತ್ ಕ್ರಿಶ್ಚಿಯನ್ ಮಠಗಳಿಂದ. ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯಗಳ ಸಾಮಾಜಿಕ ಆಯಾಮವನ್ನು ಅವರು ಧರ್ಮಪ್ರಸರಣಕ್ಕೆ ಮುಲಾಜಿಲ್ಲದೆ ಬಳಸಿದ್ದಾರೆ.
ಮೀಸಲಾತಿ ವ್ಯವಸ್ಥಯಿಂದ ಹೊರತಾದ ಆದರೆ ಕೇವಲ ಮೆರಿಟ್ಟಿಗೆ ಬಾರದ ಅನೇಕ ಮಕ್ಕಳಿಗೆ ಅಕ್ಷರ ದಾಸೋಹವನ್ನು ಮಾಡುವ ವ್ಯವಸ್ಥೆಯನ್ನು ಮಠಗಳು ಕೈಗೊಂಡಿರುವುದನ್ನು ಕೇವಲ ರಾಜಕೀಯ ಪ್ರಜ್ಞೆಯ ಕೋನದಿಂದ ಪ್ರಾಮಾಣಿಕವಾಗಿ ಮೌಲ್ಯಮಾಪನ ಮಾಡುವುದು ಹೇಗೆ?
ಇಪ್ಪತ್ತೊಂದನೆ ಶತಮಾನದ ಈ ವೇಳೆಗೆ ಸರ್ಕಾರ-ಆಡಳಿತ ವ್ಯವಸ್ಥೆಗಳ ಇತಿಮಿತಿ ಮತ್ತು ಖಾಸಗಿವಲಯಗಳ ಆಳ ಮತ್ತು ವ್ಯಾಪ್ತಿಗಳನ್ನು ಲೋಕತಂತ್ರದ ರಮ್ಯ ಕನಸುಗಳಿಂದ ಎದ್ದ ಬಹುತೇಕ ಪ್ರೌಢ ಪ್ರಜಾಪ್ರಭುತ್ವಗಳು ಮನಗಂಡಿವೆ. ಅದಕ್ಕೆ ತಕ್ಕುದಾದ ಮಾರ್ಪಾಟುಗಳನ್ನೂ ಮಾಡಿಕೊಂಡಿವೆ. ಇಲ್ಲಿ ರಾಮರಾಜ್ಯದ ಕನವರಿಕೆಗಳ್ಯಾವುವೂ ಇಲ್ಲ. ಸಂಧರ್ಬೋಚಿತವಾದ ಹೊಂದಾಣಿಕೆಗಳಷ್ಟೆ.
ಖಾಸಗಿವಲಯ ಅಂದರೆ ಉದ್ದಿಮೆಗಳು, ಸಮೂಹಮಾಧ್ಯಮಗಳು, ಬುದ್ಧಿಜೀವಿಗಳು(ಕರ್ನಾಟಕದ ಮಟ್ಟಿಗೆ ಸಾಹಿತಿಗಳು), ಇತ್ಯಾದಿ. ಇವುಗಳ ಜೊತೆಗೆ ಮಠಗಳೂ ಸೇರುತ್ತವೆ. ಇವೆಲ್ಲವೂ ಲೋಕತಾಂತ್ರಿಕ ಪ್ರಕ್ರಿಯೆಗಳ ಹೊರಗಿಂದ ಸರ್ಕಾರ-ಆಡಳಿತ ವ್ಯವಸ್ಥೆಗಳ ಮೇಲೆ ಬೀರುವ ಪ್ರಭಾವವನ್ನು ಮಠಗಳದರಷ್ಟೇ ವಸ್ತುನಿಷ್ಠವಾಗಿ ರಾಜಕೀಯ ಪ್ರಜ್ಞೆಯ ಕೋನದಿಂದ ಮೌಲ್ಯಮಾಪನ ಮಾಡಬಹುದೆ?
ಪ್ರಭು ಮೂರ್ತಿ
ಧನ್ಯವಾದಗಳು
ನಾನು ಬರೆದ ವಿಷಯವೊಂದಕ್ಕೆ ಇಷ್ಟೊಂದು ಗಹನವಾದ ಪ್ರತಿಕ್ರಿಯೆಗಳು ಬರುತ್ತವೆಯೆಂದು ಭಾವಿಸಿರಲಿಲ್ಲ. ರಾಜಕೀಯ ಪ್ರಜ್ಞೆಯ ವಿಕಾಸಕ್ಕೆ ಧರ್ಮ ಅಡ್ಡಿಯಾಗುವುದು ನಿಜ. ಧರ್ಮವನ್ನು ನಮ್ಮ ರಾಜಕಾರಣಿಗಳು ಬಳಸಿಕೊಳ್ಳುವ ವಿಧಾನವೇ ಇದಕ್ಕೆ ಉದಾಹರಣೆ. ನೀವು ಹೇಳುವಂತೆ ಮಠ ಮಾನ್ಯಗಳು ಅಕ್ಷರ ದಾಸೋಹದ ಮೂಲಕ ವೈಚಾರಿಕ ಜಾಗೃತಿಗೆ ಕಾರಣವಾಗುತ್ತಿದ್ದರೆ ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳ ಸ್ಥಾನವೇನು ಎಂದು ಪ್ರಶ್ನಿಸುವ ಅಗತ್ಯವೇ ಇರಲಿಲ್ಲ.
ಅವುಗಳು ಪ್ರತಿನಿಧಿಸುತ್ತವೆ ಎಂದು ಹೇಳಲಾಗುವ ಧಾರ್ಮಿಕ ಮೌಲ್ಯಗಳಿಗೂ ಅವುಗಳ ನಡವಳಿಕೆಗೂ ನಡುವೆ ಹೊಂದಾಣಿಕೆ ಇಲ್ಲದಿರುವುದರಿಂದ ಸಮಸ್ಯೆ ಉದ್ಭವವಾಗಿದೆ. ಪ್ರತಿ ಮಠವೂ ಒಂದಲ್ಲಾ ಒಂದು ಸಮುದಾಯವನ್ನು ಪ್ರತಿನಿಧಿಸುತ್ತಾ ಇರುತ್ತದೆ. ಅದು ತಾನು ಪ್ರತಿನಿಧಿಸುವ ಸಮುದಾಯದ ಓಟುಗಳನ್ನು ತಾನು ವಾಣಿಜ್ಯ ಉದ್ದೇಶದಿಂದ ಸ್ಥಾಪಿಸಿರುವ ಕ್ಯಾಪಿಟೇಶನ್ ಸಂಸ್ಥೆಗಳನ್ನು ಕಾಪಾಡಲು ಬಳಸಿಕೊಳ್ಳುವುದು ಇಲ್ಲಿರುವ ಸಮಸ್ಯೆ. ಅಷ್ಟು ಮಾತ್ರ ಅಲ್ಲ ಹಲವು ಧಾರ್ಮಿಕ ಸಂಸ್ಥೆಗಳ ಭೂ ದಾಹ ಎಷ್ಟಿದೆ ಎಂಬುದು ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲೂ ಪ್ರಕಟವಾಗುತ್ತಿದೆ.
ಎಲ್ಲಾ ಧರ್ಮಗಳಿಗೆ ಸೇರಿದ 'ಮಠ'ಗಳೂ ಹೀಗೆಯೇ ಇವೆ. ಇದಕ್ಕೆ ವ್ಯತಿರಿಕ್ತವಾದುವುಗಳಿದ್ದರೆ ಅವು ಅಪವಾದ ಮಾತ್ರ. ಎಚ್ ಎಸ್ ಆರ್ ಅವರು ಹೇಳಿದಂತೆ 30-40 ವರ್ಷಗಳ ಹಿಂದೆ ಅವುಗಳ ಮಾಡಿದ ಕೆಲಸ ಒಳ್ಳೆಯದು. ಇದನ್ನು ಕೇವಲ ಮಠಗಳಷ್ಟೇ ಮಾಡಿದ್ದಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಕ್ತಿಗಳೂ ಕೂಡಾ ಇಂಥ ಕೆಲಸ ಮಾಡಿದರು. ಈಗ ಮಠಗಳು ಆ ಕೆಲಸ ಮಾಡುತ್ತಿಲ್ಲ. ಈಗ ಅವು ಇಂಟರ್ ನ್ಯಾಶನಲ್ ಸ್ಕೂಲ್ ಸ್ಥಾಪಿಸುತ್ತಿವೆ. ಅಲ್ಲಿ ಪ್ರವೇಶವಿರುವುದು ಯಾರಿಗೆ ಎಂದು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.
ಈಗಿನ ಮಠಗಳು ನಿಜಕ್ಕೂ ವೈಚಾರಿಕವಾಗಿ ಬಲವಾಗಿದ್ದರೆ ತಾನು ಪ್ರತಿನಿಧಿಸುವ ಸಮುದಾಯವನ್ನು ಅದರ ಹಕ್ಕಿಗಾಗಿ ಹೋರಾಡಲು ಪ್ರೇರೇಪಿಸುತ್ತಿತ್ತು. ವಿದ್ಯಾರಣ್ಯರು ಮಾಡಿದ್ದು ಅದನ್ನೇ. ಈಗ ಕರ್ನಾಟಕದ ಸರ್ವ ಜಾತಿ-ಜನಾಂಗಗಳ ಮಠಗಳೂ ಮಾಡುತ್ತಿರುವಂತೆ ಕ್ಯಾಪಿಟೇಶನ್ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಲು ಬೇಕಾದ 'ರಾಜಕೀಯ ಪ್ರಜ್ಞೆ'ಯನ್ನಾಗಲೀ, ಹೆಲಿಕಾಪ್ಟರ್ ಕೊಳ್ಳಲು ಇಲ್ಲವೇ ತಮ್ಮ ಊಳಿಗಮಾನ್ಯ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಬೇಕಾದ ರಾಜಕೀಯ ಪ್ರಜ್ಞೆಯನ್ನು ವಿದ್ಯಾರಣ್ಯರು ಪ್ರತಿಪಾದಿಸಲಿಲ್ಲ.
ಇನ್ನು ಮಠಗಳಿಗೆ ಮಾತ್ರ ಸಾಮಾಜಿಕ ಕಾಳಜಿ ಇದೆ ಎಂದಾದರೆ ಎಲ್ಲಾ ಮಠಗಳ ಒಂದು ಪರಿಷತ್ತು ಮಾಡಿ ಅದಕ್ಕೇ ರಾಜಕೀಯ ಅಧಿಕಾರವನ್ನೂ ಕೊಟ್ಟು ಬಿಡಬಹುದಲ್ಲಾ?
--ಯಾಮಿ.
Re: ಧನ್ಯವಾದಗಳು
ನನ್ನ ಅನಿಸಿಕೆಗಳನ್ನು ಕ್ರೂಢೀಕರಿಸಿಕೊಳ್ಳುವುದಕ್ಕೆ ಒಂದು ದಿನ ಕಾದೆ. ಅಷ್ಟರಲ್ಲಿ ವಿವಿಧ ಅಭಿಪ್ರಾಯಗಳು ಪ್ರಕಟವಾಗಿವೆ, ಸಂತೋಷ. ನನ್ನದು ೨ ಪಾಯಿಂಟು
೧. ಯಾಮಿನಿಯವರು ಬರೆದಿರುವ ಲೇಖನ ನೇರವಾಗಿ ಮಠಗಳಿಗೆ ಸಂಬಂಧಪಟ್ಟಿದ್ದರೂ ಇದನ್ನು ನಮ್ಮ ಸಮಾಜಕ್ಕೆ ಒಂದು ಹಂತದಲ್ಲಿ ಹೋಲಿಸಬಹುದು.
ಇಂದು ಸಮುದಾಯವು ತನ್ನದೇ ಅಭಿವೃದ್ಧಿಗಾಗಿ ಸಕ್ರಿಯವಾಗಿ ಆಶಿಸದೇ ಸರ್ಕಾರದ ಮೇಲೋ ಮಠದಂತಹ ಇತರ ಸಂಸ್ತೆಗಳ ಮೇಲೋ ಅವಲಂಬಿತವಾಗಿದೆ. ಸಮುದಾಯವು ತಾನಾಗೆಯೇ ಆಗ್ರಹಪಡಿಸಿ ಮಾಡಿಸಿಕೊಂಡ ಕೆಲಸಗಳು ಅಪರೂಪ,ಚುನಾವಣೆಗಳಲ್ಲಿ ಅಭಿವೃದ್ಧಿಪರ ಪಕ್ಷಗಳನ್ನೂ ನಾಯಕರನ್ನೂ ಗೆಲ್ಲಿಸಿದೆ ಎಂಬುದಕ್ಕೆ ಯಾವುದೇ ಕ್ಷೇತ್ರದಲ್ಲೂ ಯಾವುದೇ ಕಾಲದಲ್ಲು ಸೂಕ್ತವಾದ ಪುರಾವೆಗಳಿಲ್ಲ.
ಹಾಗಾಗಿ, ಇಂದಿನ ಪರಿಸ್ಥಿತಿಯಲ್ಲಿ ಸರ್ಕಾರವೇ ಒಂದು ದೊಡ್ಡ ಮಠವಿದ್ದಂತೆ ಅಂತ ಹೇಳಿದರೂ ತಪ್ಪಾಗಲಾರದು.
೨. ನಮ್ಮ ಅಭಿಪ್ರಾಯಗಳು ನಮ್ಮ ಅನುಭವಗಳಿಂದ ಹೊರಹೊಮ್ಮುವವು ಅಂತ ನನ್ನ ನಂಬಿಕೆ.ಇಲ್ಲಿ ಮಠಗಳ ವಿಚಾರದಲ್ಲಿ ಎರಡು ರೀತಿಯ ಅಭಿಪ್ರಾಯಗಳು ಪ್ರಕಟವಾಗಿದೆ. ಎರಡೂ ನಿಜವೂ ಕೂಡ. ನನಗೆ ಎರಡು ಬಗೆಯ ಅನುಭವವೂ ಆಗಿವೆ.
ಮೌಲಿಕವಾಗಿ ನಾನು ಯಾಮಿನಿಯವರ ವಾದದ ಪರವಾಗಿದ್ದರೂ ಇಂದಿನ ಪರಿಸ್ಥಿತಿಯಲ್ಲಿ ಸಮುದಾಯ ಎಚ್ಚೆತ್ತುಕೊಂಡು ಪ್ರಜಾಸತ್ತೆಯಲ್ಲಿ ಧರ್ಮಸಂಸ್ಥೆಗಳಿಂದ ಮುಕ್ತವಾಗಿ ತಮ್ಮ ಅಭಿವೃದ್ಧಿಯ ಕೆಲಸವನ್ನು ತಾವೇ ಮಾಡಿಕೊಳ್ಳಬಹುದೆಂಬ ನಂಬಿಕೆ ನನಗಿಲ್ಲ. ಆದ್ದರಿಂದ ಹೆಂಗಾದರೂ ಸರಿ, ನಾವು ಪ್ರಗತಿಪಥದಲ್ಲಿದ್ದರೆ ಸಾಕು ಅನ್ನುವ ಮಟ್ಟಿಗೆ ಬಂದು ನಿಂತಿರುವೆ.
ಆದರೆ ಮಠ-ಸಮುದಾಯ-ಸರ್ಕಾರ ಇವುಗಳ ನಡುವೆ ಮತ್ತೊಂದು ವಿಶೇಷ ಕನೆಕ್ಶನ್ (ಕಡಿಮೆ ಪ್ರಮಾಣದಲ್ಲಿ) ಕಂಡುಬರುತ್ತದೆ: ಧರ್ಮಸಂಸ್ಥೆಗಳು ಸರ್ಕಾರದೊಡಗೂಡಿ ಸಮುದಾಯಕ್ಕೆ ಸೇವೆ ಸಲ್ಲಿಸುವುದು: ಉದಾಹರಣೆಗೆ ಧರ್ಮಸಂಸ್ಥೆಯೊಂದು ಶುರುಮಾಡಿದ RUDSET ಸಂಸ್ಥೆಗಳು. ಇಲ್ಲಿ ಸರ್ಕಾರ, ಬ್ಯಾಂಕ್ ಮತ್ತು ಸಮುದಾಯಗಳ ಜೊತೆ ಕೈಜೋಡಿಸಿ ಅಭಿವೃದ್ದಿಕಾರ್ಯಗಳನ್ನು ನೆಡೆಸಲಾಗುತ್ತದೆ. ಮೈಸೂರಿನ ಯಳಂದೂರು ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳ ಬಿಸಿಯೂಟ ಕಾರ್ಯಕ್ರಮಕ್ಕೆ ಧರ್ಮಸಂಸ್ತೆಯೊಂದು ಸಹಾಯ ಮಾಡುತ್ತಿದೆ. ಇವುಗಳಿಂದ ಸರ್ಕಾರಕ್ಕೂ ಕ್ರೆಡಿಬಿಲಿಟಿ ಬಂದಿದೆ, ಧರ್ಮಸಂಸ್ಥೆಗಳಿಗೆ ಒಳ್ಳೆಯ ಕೆಲಸ ಮಾಡುವ ಅವಕಾಶವೂ ಸಿಕ್ಕಿವೆ.
ಆದ್ದರಿಂದ ಮಠಗಳಿಗೆ ಖಂಡಿತ ಸಮುದಾಯದ ರಾಜಕೀಯ ಪ್ರಜ್ಞೆಯ ಸ್ವಾಭಾವಿಕ ವಿಕಸನಕ್ಕೆ ಧಕ್ಕೆ ತರದಂತೆ ಸೇವೆ ಮಾಡುವ ಅವಕಾಶಗಳು ಬೇಕಾದಷ್ಟಿವೆ. ಕೆಲವೊಮ್ಮೆ ಇದು ಸಾಧ್ಯವೂ ಆಗಿದೆ.
ಕೆಲವು ಪ್ರಶ್ನೆಗಳು: ಮಠ, ಮಠಾಧಿಪತಿ ಮತ್ತು ನೇತಾರರ ಬಗ್ಗೆ
ನೀವು ಹೇಳಿದಿರಿ "ಪ್ರತಿ ಮಠವೂ ಒಂದಲ್ಲಾ ಒಂದು ಸಮುದಾಯವನ್ನು ಪ್ರತಿನಿಧಿಸುತ್ತಾ ಇರುತ್ತದೆ. ಅದು ತಾನು ಪ್ರತಿನಿಧಿಸುವ ಸಮುದಾಯದ ಓಟುಗಳನ್ನು ತಾನು ವಾಣಿಜ್ಯ ಉದ್ದೇಶದಿಂದ ಸ್ಥಾಪಿಸಿರುವ ಕ್ಯಾಪಿಟೇಶನ್ ಸಂಸ್ಥೆಗಳನ್ನು ಕಾಪಾಡಲು ಬಳಸಿಕೊಳ್ಳುವುದು ಇಲ್ಲಿರುವ ಸಮಸ್ಯೆ. ಅಷ್ಟು ಮಾತ್ರ ಅಲ್ಲ ಹಲವು ಧಾರ್ಮಿಕ ಸಂಸ್ಥೆಗಳ ಭೂ ದಾಹ ಎಷ್ಟಿದೆ ಎಂಬುದು ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲೂ ಪ್ರಕಟವಾಗುತ್ತಿದೆ." ಅಂತ. ಹಾಗಿದ್ದಲ್ಲಿ ನಮ್ಮ ರಾಜಕಾರಣಿಗಳೂ ತಮ್ಮ ತಮ್ಮ ಸಮುದಾಯವನ್ನು ಪ್ರತಿನಿಧಿಸುತ್ತಾರೆ ತಾನೇ? ಅವರಿಗೇಕೆ ಈ "ಸ್ವಹಿತಾಸಕ್ತಿ"ಯುಳ್ಳ ಸಾಮಾಜಿಕ ಕಾಳಜಿಯಿಲ್ಲ? ಓಟಿನ ಅಗತ್ಯ ಅವರಿಗಿಂತ ಹೆಚ್ಚಾಗಿ ಯಾರಿಗಿದೆ ಹೇಳಿ? ಅವರೇ ಶಾಲೆ-ಕಾಲೇಜುಗಳನ್ನು ತೆರೆದು ಓಟು ಗಿಟ್ಟಸಬಹುದಲ್ಲ? ಅದನ್ನೇಕೆ ಮಾಡುವುದಿಲ್ಲ? ಇಷ್ಟು ಮಾತ್ರದ ಸರಳ ಮಾರ್ಗ ಅವರಿಗೆ ಗೋಚರಿಸಲಿಲ್ಲವೇ? ಹಾಗಿರುವಾಗ ಮಠವೊಂದು ಆ ಕೆಲಸವನ್ನು ಮಾಡಿದಲ್ಲಿ ಅದರ ಹಿಂದೆ "ಹೆಸರು" ಮಾಡುವ ಉದ್ದೇಶವಿದ್ದರೂ ನಾನು ತಪ್ಪು ಅನ್ನೋದಿಲ್ಲ. ನಮ್ಮದೇ ಓಟಿನಿಂದ ಆರಿಸಿಬಂದು, ಯಾವ ಕೆಲಸವನ್ನೂ ಮಾಡದೇ, ಕೇವಲ ನಮ್ಮ ತೆರಿಗೆಯ/ಬೊಕ್ಕಸದ ಹಣ ದೋಚುವ ಈ ನೇತಾರರಿಗಿಂತ ಒಬ್ಬ ಮಠಾಧಿಪತಿ ನನಗೆ ಬಹಳ ಮೇಲು ಅನ್ನಿಸುತ್ತಾನೆ.
ಇನ್ನು "ಭೂದಾಹದ" ವಿಚಾರ. ನಮ್ಮಲ್ಲಿ (ಕು)ಪ್ರಸಿದ್ಧ) ರಾಜಕಾರಣಿಯೊಬ್ಬರಿಗೆ (ಹೆಸರು ಬೇಡ) ಸುಮಾರು ೪೦೦ ಎಕರೆ ಜಮೀನಿರುವ ವಿಚಾರ ಜಗತ್ತಿಗೇ ಗೊತ್ತಿರುವ ವಿಚಾರ. ಹಾಗೆಯೇ ನಮ್ಮ ರಾಷ್ಟ್ರೀಯ ಮಟ್ತದ ನೇತಾರರಲ್ಲಿ ಮುವ್ವತ್ತು ಪ್ರತಿಶತ ಜನರು "ಸ್ವಿಸ್ ಬ್ಯಾಂಕ್"ನಲ್ಲಿ ಖಾತೆ ಹೊಂದಿದ್ದಾರೆ ಅನ್ನುವುದೂ ಗೊತ್ತಿರುವ ವಿಚಾರ. ಆದರೆ ಇವುಗಳ ಬಗ್ಗೆ ಚರ್ಚೆ ನಡೆಯುವುದೇ ಇಲ್ಲ! ಯಾಕೆಂದರೆ ಅದು ಸಾಧ್ಯವೂ ಇಲ್ಲ. ಒಬ್ಬ ಧುರೀಣ ತನ್ನ ಹುಟ್ಟುಹಬ್ಬದಂಥ ಅತಿ ಸಾಮಾನ್ಯ ವಿಷಯವನ್ನು, ಬೀದಿ ಬೀದಿಗಳಲ್ಲಿ vinyl posters "ಹಾಕಿಸಿ", ಯಾವುದೋ ಮೈದಾನವೊಂದರಲ್ಲಿ ಹತ್ತು ಸಾವಿರ ಜನರನ್ನು "ಸೇರಿಸಿ" ಆಚರಿಸಿಕೊಳ್ಳುವುದು ದೊಡ್ಡ ಮಟ್ಟದ ಚರ್ಚೆಗೇಕೆ ಕಾರಣವಾಗುವುದಿಲ್ಲ? ಇವತ್ತು ಆಲ್‌ಮೋಸ್ಟ್ ಪ್ರತಿ "ಹಿರಿಯ" ರಾಜಕಾರಣಿ ಕನಿಷ್ಠ ಐದಾರು ನಿವೇಶನಗಳನ್ನು, ವಾಣಿಜ್ಯ ಮಳಿಗೆಗಳನ್ನು ಹೊಂದಿದ್ದಾರಂತೆ. ಇದು ಭೂದಾಹ ಆಗಲಿಲ್ಲವೇ? ನನಗೆ ಎಲ್ಲದಕ್ಕಿಂತ ಹೆಚ್ಚು ಕೋಪ ಬರುವುದು, ಇದೆಲ್ಲ ನಮ್ಮ ತೆರಿಗೆ ಹಣ ಅಥವಾ ಬೊಕ್ಕಸದ ಹಣದಿಂದ ಆಗುತ್ತಿರುವುದಕ್ಕೆ. ಮಠವೊಂದಕ್ಕೆ ಕೊಡುವ ಹಣ "ತೆರಿಗೆ" ಅಲ್ಲ ತಾನೇ? ಅದು ನಾನು ನನ್ನ ಸ್ವ-ಇಚ್ಛೆಯಿಂದ ಕೊಡುವ ಹಣ. ಅದರಲ್ಲಿಯೇ ಇಷ್ಟಾದರೂ ಒಳ್ಳೆಯ ಕೆಲಸ ನಡೆಯುತ್ತಿರುವಾಗ ನಮ್ಮ ತೆರಿಗೆಯ ಹಣದಿಂದ ಏಕೆ ಒಳ್ಳೆಯ ಪ್ರಗತಿಪರ ಕೆಲಸ ನಡೆಯಬಾರದು?
ಇನ್ನೊಂದು ಉದಾ: ಮಠಾಧಿಪತಿಯೊಬ್ಬ ಯಾರಿಗೋ "ಹೊಡೆಸಿದ" ಅನ್ನುವ ಬಗ್ಗೆ ಎಲ್ಲ ಬುದ್ಧಿಜೀವಿಗಳೂ ಸೇರಿ ಚರ್ಚಿಸುವಾಗ, ಅವರ "ಸಾಮಾಜಿಕ ಕಾಳಜಿ"ಗೆ ಒಂದು ಸಲಾಮು ಹಾಕುವಂತಾದರೂ ಅದಕ್ಕೆ ಮುನ್ನ ನನ್ನ ಮನಸ್ಸಿನಲ್ಲಿ ಪ್ರಶ್ನೆಯೊಂದು ಭೂತದಂತೆ ಏಳುತ್ತದೆ. ತೈಲ ವಿತರಣೆಯಲ್ಲಿ ಆಗುತ್ತಿದ್ದ ಹಗಲುದರೋಡೆಯನ್ನು ತಡೆಯಲು, ಅದರ ವಿರುದ್ಧ whistleblower ಕೆಲಸ ಮಾಡಿದ ಪ್ರತಿಭಾವಂತ ಮಂಜುನಾಥನ ಹತ್ಯೆಯ ಬಗ್ಗೆ ಇದೇ "ಬುದ್ಧಿಜೀವಿಗಳು" ಇಷ್ಟು ವ್ಯಾಪಕ ಮಟ್ಟದ ಚರ್ಚೆ ಯಾಕೆ ನಡೆಸಲಿಲ್ಲ? ಮಠಾಧಿಪತಿ "ಹೊಡೆಸಿದ್ದರ" ಬಗ್ಗೆ ಚರ್ಚೆ ಆಗಬೇಕಾದ್ದೇ; ಎರಡನೇ ಮಾತೇ ಇಲ್ಲ, ಒಪ್ಪೋಣ. ಅದರೆ ಮಂಜುನಾಥ್ ಸಾವೂ ಕೂಡ ಅಷ್ಟೇ ಗಂಭೀರ ವಿಚಾರ ತಾನೇ? ಇತ್ತೀಚಿನ ತೈಲ ಹಗರಣದ ಬಗ್ಗೆ ಯಾಕೆ ಯಾವ ಪತ್ರಿಕೆಯೂ ದೊಡ್ಡ ಮಟ್ಟದ ಚರ್ಚೆ ನಡೆಸಲಿಲ್ಲ? ವರದಿ ಮಾಡಿದರು, ಬಿಡಿ; ಆದರೆ ಚರ್ಚೆಯೇಕೆ ಆಗಲಿಲ್ಲ? ನಮ್ಮ ನೇತಾರರು "ಲೋಕಸಭೆಯಲ್ಲಿ ಅಕ್ಷರಷಃ ಕೈ-ಕೈ ಮಿಲಾಯಿಸಿ ಕಿತ್ತಾಡಿದ್ದನ್ನು" ಟಿ.ವಿ.ಯಲ್ಲಿ ನೇರಪ್ರಸಾರ ಮಾಡಿದಾಗ ಎಲ್ಲಿತ್ತು ನಮ್ಮೆಲ್ಲರ so called ರಾಜಕೀಯ, ಸಾಮಾಜಿಕ, ಎಲ್ಲಕ್ಕಿಂತ ಹೆಚ್ಚಾಗಿ ನೈತಿಕ ಪ್ರಜ್ಞೆ? ನಾವು, ನಮ್ಮ ವ್ಯವಸ್ಥೆ ಮುಟ್ಟಿರುವ "ಪಾತಾಳ"ವನ್ನು ತೋರಿಸಲು ಇದಕ್ಕಿಂತ ಹೆಚ್ಚಿನ ಇನ್ನೊಂದು ಉದಾಹರಣೆ ಬೇಕೆ? ಇದರ ಬಗ್ಗೆ ಯಾವುದಾದರೂ forumನಲ್ಲಿ ವ್ಯಾಪಕ ಚರ್ಚೆ ನಡೆದದ್ದು ನೋಡಿದ್ದಲ್ಲಿ, ಭಾಗವಹಿಸದ ನೆನಪಿದ್ದಲ್ಲಿ ಯಾರಾದರೂ ದಯವಿಟ್ಟು ತಿಳಿಸಿ! ಇವುಗಳ ಬಗ್ಗೆ ಎರಡು ದಿನ ವರದಿಗಳು ಬಂತೇ ವಿನಃ ಚರ್ಚೆ, ಖಂಡನೆ ನಡೆಯಲಿಲ್ಲ. ಯಾಕೆ? ನನಗನ್ನಿಸೋದು ಧರ್ಮ ನಮಗೆ ಒಂದು taboo ತರಹ ಆಗಿದೆ. ಆಗಿದೆ ಅಲ್ಲ, ಹಾಗೆ ಆಗುವಂತೆ ಮಾಡಿದ್ದಾರೆ. ಮಾಧ್ಯಮಗಳೂ ಇದನ್ಣೇ ಇನ್ನಷ್ಟು ಬಣ್ಣ ಕಟ್ಟಿ ಬೆಳಸುತ್ತವೆ.
ನಿಮ್ಮ ಕೊನೆಯ ಪಾಯಿಂಟ್ ನಾನು ಒಪ್ಪುತ್ತೇನೆ. ಆಕಸ್ಮಾತ್ ಮಠಗಳ ಪರಿಷತ್ತು ರೂಪಿತವಾಗಿ, ನಮ್ಮ ಇಂದಿನ ರಾಜಕಾರಣಿಗಳಿಗಿಂತ ಒಳ್ಳೆಯ ಕೆಲಸ ಮಾಡುವುದಾದಲ್ಲಿ ಅವರೇ ಅಧಿಕಾರಕ್ಕೆ ಬರಲಿ. ಕೆಲಸ ಮಾಡುತ್ತಿರುವ ವ್ಯಕ್ತಿಗೆ ನನ್ನ ತೆರಿಗೆಯ/ದುಡಿಮೆಯ ಹಣ ಹೋಗುತ್ತಿದೆ ಅಂತ ನನಗೆ ತೃಪ್ತಿಯಾದರೂ ಇರುತ್ತದೆ. ಭಾರತದ ಏಳಿಗೆಗೆ, ಪ್ರಗಿತಿಪರ ಕೆಲಸಕ್ಕೆ ಮಠಾಧಿಪತಿಯೊಬ್ಬ ಮುಂದಾದರೆ ನಾನು ಖಂಡಿತ ಬೆಂಬಲಿಸುತ್ತೇನೆ. ನನಗೆ ನನ್ನ ದೇವರನ್ನು ಕಾಣಲು, ಆಧ್ಯಾತ್ಮಿಕವಾಗಿ ಪ್ರಗತಿ ಹೊಂದಲು ಮಠಗಳ ಅಗತ್ಯವೇ ಇಲ್ಲ. ಕೆಲವು ಮಠಗಳು ಆಧ್ಯಾತ್ಮಿಕತೆಯ ಹಂಗಿನಿಂದ ಹೊರಬಂದು ಸಾಮಾಜಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಲ್ಲಿ ಏಕೆ ಬೆಂಬಲ ನೀಡಬಾರದು? ಲಂಚಕೋರರ, ಕೆಟ್ಟು ದುರ್ನಾತ ಬೀರುತ್ತಿರುವ ವ್ಯವಸ್ಥೆಯ ವಿರುದ್ಧ ಇಲ್ಲದ ನನ್ನ ಸಾಮಾಜಿಕ, ರಾಜಕೀಯ ಪ್ರಜ್ಞೆ ಇಲ್ಲಿ ಮಾತ್ರ ಏಕೆ ಜಾಗೃತವಾಗಬೇಕು?
ನಾನು ಮಠಾಧಿಪತಿಗಳ "ಹೆಸರಿನ ಹಂಬಲ, ಜಾತಿ ರಾಜಕಾರಣ, ಅಧಿಕಾರದ ಹಂಬಲ" ಇದ್ಯಾವುದನ್ನೂ ಬೆಂಬಲಿಸುತ್ತಿಲ್ಲ. ಇವೆಲ್ಲವೂ ಖಂಡಿತ ತಪ್ಪು. ಆದರೆ ಅದಕ್ಕಿಂತ ಮೊದಲು ನಾವೇ ಆರಿಸಿ ಕಳಿಸಿದ ನಾಯಕರ, ನಮ್ಮ ಇಂದಿನ ವ್ಯವಸ್ಥೆಯ ಬಗ್ಗೆ ನಮ್ಮ ಪ್ರಜ್ಞೆಯನ್ನು ಹರಿತಗೊಳಿಸಿಕೊಂಡು ಆಗುತ್ತಿರುವ ಅನ್ಯಾಯಗಳನ್ನು ತಡೆಯೋಣ. ಕೇವಲ ಚರ್ಚೆಗಳ ಮೂಲಕ ಅಲ್ಲ, ನಮ್ಮ ಕೃತಿಗಳ ಮೊಲಕ ಕೂಡ. ಆಗ ನಮ್ಮ ಪ್ರಜ್ಞೆ ತಾನಾಗಿಯೇ ಮಠಾಧಿಪತಿಗಳನ್ನೂ, ಅವರಿಂದ ಆಗುತ್ತಿರುವ ಅನ್ಯಾಯಗಳನ್ನೂ "ಅಟ್ಯಾಕ್" ಮಾಡಿಯೇ ಮಾಡುತ್ತದೆ. ಏನಂತೀರಾ?
- ಶ್ಯಾಮ್ ಕಿಶೋರ್