ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಕಿಟ್ಟೆಲ್ ನಿಘಂಟು ಮತ್ತು ಭಾಷೆಯ ಹೊಸತನದ ಬಗ್ಗೆ ಒಂದಷ್ಟು

January 12, 2007 - 6:32pm — Shyam Kishore

ವೆಂಕಟೇಶ್ ಅವರ ಲೇಖನ "ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು" ಓದಿದ ನಂತರ ಈ ಪ್ರತಿಕ್ರಿಯೆ ಬರೆಯಲು ಶುರು ಮಾಡಿದೆ. ಅಷ್ಟರಲ್ಲಿ ಸುನಿಲ್‌ರವರ ಲೇಖನ "ಕಿಟ್ಟೆಲ್ ಸಂಪತ್ತಿನ ಪ್ರಸ್ತುತತೆ..." ಬಂತು. ಅದನ್ನು ಓದಿ ಮನಸ್ಸಿನಲ್ಲಿ ಇನ್ನೂ ಹಲವಾರು ವಿಚಾರಗಳು ಕಾಡತೊಡಗಿದವು. ಸರಿ ಬರಹ ರೂಪಕ್ಕೆ ಇಳಿಸಿಯೇ ಬಿಡೋಣ ಅಂತ ಕೂತಿದ್ದೀನಿ. ನನ್ನ ಅನಿಸಿಕೆಗಳೂ ಬಹಳಷ್ಟು ಇರುವುದರಿಂದ ಬೇರೆ ಲೇಖನದ ರೂಪದಲ್ಲಿ ಹೇಳೋದು ವಾಸಿ ಅಂತನ್ನಿಸಿ ಪ್ರತ್ಯೇಕವಾದ ಲೇಖನದ ರೂಪದಲ್ಲಿ ಬರೆಯುತ್ತಿದ್ದೇನೆ. ಇದು ನನ್ನ ವೈಯಕ್ತಿಕ ಅನಿಸಿಕೆ ಮತ್ತು ಲೇಖನಗಳಲ್ಲಿದ್ದ ವಿಚಾರಗಳ ಬಗ್ಗೆ ನನ್ನ ಅಭಿಪ್ರಾಯಗಳನ್ನು ವಸ್ತುನಿಷ್ಠವಾಗಿ ಹೇಳುವ ಪ್ರಯತ್ನ ಅಷ್ಟೇ ಹೊರತು "ಯಾರನ್ನೂ ಕುರಿತು" ಆರೋಪವಲ್ಲ/ಉದ್ದೇಶಪೂರ್ವಕ ಟೀಕೆಯಲ್ಲ. ಹಾಗೇನಾದರೂ ಯಾರಿಗಾದರೂ ಅನಿಸಿದಲ್ಲಿ, ನೋವುಂಟುಮಾಡಿದಲ್ಲಿ ದಯವಿಟ್ಟು ಕ್ಷಮಿಸಿ. ನನಗೊಂದು ಪ್ರತಿಕ್ರಿಯೆ ನೀಡಿ, ತಿದ್ದಿಕೊಳ್ಳಲು ಸಿದ್ಧ. ಇನ್ನೊಂದು ವಿಚಾರ, ಎಲ್ಲವನ್ನೂ ಪುಲ್ಲಿಂಗದಲ್ಲೇ ಬರೆದಿದ್ದೇನೆ. ಮಹಿಳೆಯರು ಕೊಂಚ ಸಹಿಸಬೇಕು! ೧. ಶತಮಾನವೇ ಕಳೆದರೂ ಇನ್ನೂ ಕಿಟ್ಟೆಲ್ ನಿಘಂಟು ಕನ್ನಡದ ಅತ್ಯುತ್ತಮ ನಿಘಂಟಾಗಿದೆ ಅನ್ನುವುದು ಕಿಟ್ಟೆಲ್ ಅವರ ಪ್ರತಿಭೆಗೆ ಸಂದ ಗೌರವ ಅಂತ ಮನಸ್ಸು ತಲೆಬಾಗಿದರೂ, ಹೃದಯ "ಅಯ್ಯೋ" ಅಂತನ್ನುತ್ತಿದೆ (ಅಳುತ್ತಿದೆ) Cry. ಇಂಗ್ಲೀಷಲ್ಲಿ ಸರಾಸರಿ ಎರಡು ವರ್ಷಕ್ಕೊಮ್ಮೆ Oxford ನಂತಹ ನಿಘಂಟುಗಳೂ "ಅಪ್‌ಡೇಟ್" ಆಗುತ್ತವೆ. ಹತ್ತಾರು "ಹೊಸ ಪದಗಳು" (ಹೊಸದು ಅಂದರೆ ಸಮಕಾಲೀನವಾದವು, ಈಗಿನ ಕಾಲಕ್ಕೆ ತಕ್ಕಂತೆ ಬಳಸುವಂತಹದ್ದು) ಮುಖ್ಯವಾಹಿನಿಗೆ ಸೇರಿಕೊಳ್ಳುತ್ತವೆ. ನಮ್ಮ ಕನ್ನಡದಲ್ಲಿ?!!! ಈ ಬಗ್ಗೆ ಯಾರಾದರೂ ಚಿಂತಿಸಿದ್ದೀರಾ? ಇದಕ್ಕಿಂತ ದೊಡ್ಡ ಸಾಕ್ಷ್ಯ ಬೇಕೆ, ಕನ್ನಡ ನಿಂತ ನೀರಾಗುತ್ತಿದೆ ಅನ್ನೋದಕ್ಕೆ. ಕಿಟ್ಟೆಲ್ ಅವರ ಬಗ್ಗೆ ತುಂಬು ಗೌರವ ಇದೆ. ಆದರೆ ಅವರ ನಿಘಂಟನ್ನು "ಅಪ್‌ಡೇಟ್ ಮಾಡಲೇಬಾರದು" ಅಂತ ಅವರೇನಾದರೂ ಉಯಿಲು ಬರೆದು ಇಟ್ಟಿದ್ದರೇ? ಇದು ಸಾಧ್ಯ ಆಗುತ್ತಿಲ್ಲ ಯಾಕೆ? ಇತ್ತೀಚಿನ ವರ್ಷಗಳಲ್ಲಿ ಕಿಟ್ಟೆಲ್ ನಿಘಂಟು "ಅಪ್‌ಡೇಟ್" ಆದದ್ದು ನನಗೆ ತಿಳಿದಂತೆ ಇಲ್ಲ.

೨. ಕನ್ನಡ ಸಾಹಿತ್ಯದ ಆರಂಭದಿಂದಲೂ ಪ್ರತಿ ಸಾಹಿತಿಯೂ ತನಗೆ ಬೇಕಾದಾಗ, ಸನ್ನಿವೇಶಕ್ಕೆ, ಅಗತ್ಯಕ್ಕೆ ತಕ್ಕಂತೆ ಪದಗಳನ್ನು ಬಳಸುತ್ತಲೇ ಬಂದಿದ್ದಾನೆ. ಇದು ಆಯಾ ಕೃತಿಕಾರರಿಗೆ ಮತ್ತು ರಸಾಸ್ವಾದನೆಗೆ ಸಂಬಂಧಿಸಿದ ವಿಷಯ. ಹಾಗಂತ ಕನ್ನಡ ಪದಗಳನ್ನು ಹುಡುಕಲಿಲ್ಲ ಅಂತಲ್ಲ. ನಿಘಂಟನ್ನು ಓದುವ ಹವ್ಯಾಸ ನನಗೂ ಸ್ವಲ್ಪ ಮಟ್ಟಿಗಿದೆ. ಆದರೆ "ಕೆಲವೊಮ್ಮೆ" ನಿಘಂಟಿನಿಂದ ಪದಗಳನ್ನು ಬಳಸಲೇಬೇಕೆಂದು ಬಳಸಿದಲ್ಲಿ ರಸಾಸ್ವಾದನೆಗೆ ಭಂಗವಾದೀತೆಂದು ನನ್ನ ಅನಿಸಿಕೆ. ಒಳ್ಳೆಯದು ಎಲ್ಲಿಂದ ಬಂದರೂ ಸ್ವೀಕರಿಸೋಣ. ಅದರಲ್ಲಿ ಹಿಂಜರಿಕೆ, ತಪ್ಪಿತಸ್ಥ ಮನೋಭಾವ ಯಾಕೆ? ಈ ರೀತಿಯ ಪ್ರಯತ್ನಗಳು (ಶುದ್ಧ ಕನ್ನಡ ಪರ್ಯಾಯ ಪದಗಳ ಬಳಕೆ) ನಿಧಾನವಾಗಿ ಪ್ರಾರಂಭವಾಗಿ, ಕ್ರಮೇಣ ರೂಢಿಗೆ ಬರಬೇಕೆ ಹೊರತು ಒಮ್ಮೆಗೇ ಹಿಂದಿನ ಎಲ್ಲವನ್ನೂ ತಿರಸ್ಕರಿಸಬೇಕು ಎಂದಲ್ಲ. ಎಲ್ಲಕ್ಕಿಂತ ರಸಾಸ್ವಾದನೆ ಮತ್ತು ಸಂವಹನ ಮುಖ್ಯ ಅಂತ ನನ್ನ ಭಾವನೆ. ಹಾಗಂತ ಕನ್ನಡ ತನ್ನ ಸ್ವಾಭಿಮಾನ ಕಳೆದುಕೊಳ್ಳಬೇಕು ಅಂತ ನಾನು ಖಂಡಿತ ಹೇಳುತ್ತಿಲ್ಲ. ನಾನೂ ಒಬ್ಬ "ಹದಿನಾರಾಣೆ ಕನ್ನಡಿಗ". ಉದಾಹರಣೆಗೆ ಆಂಡಯ್ಯನವರ "ಕಬ್ಬಿಗರ ಕಬ್ಬ" ಸಂಪೂರ್ಣ ಕನ್ನಡದ ಕೃತಿ ಅಂತ ಹೇಳುತ್ತಾರೆ. ಆದರೆ ಯಾಕೆ ಅವರ ನಂತರ ಯಾರೂ ಆ ಪ್ರಯತ್ನವನ್ನು ಪದೇ ಪದೇ (ಇನ್ನಷ್ಟು ದೊಡ್ಡ ಮಟ್ಟದಲ್ಲಿ) ಮಾಡಲಿಲ್ಲ? ಅಥವಾ ಆ ಒಂದು ಕೃತಿ ಕೂಡ ಯಾಕೆ ನಮ್ಮನ್ನು "ಗದುಗಿನ ಭಾರತ", ವಚನಗಳು, ದಾಸಸಾಹಿತ್ಯಗಳಷ್ಟು ಆವರಿಸಲಿಲ್ಲ? (ನಾನು ಕೇವಲ ಜನಪ್ರಿಯತೆಯ ಮಾನದಂಡವನ್ನಿಟ್ಟುಕೊಂಡು ಹೇಳುತ್ತಿಲ್ಲ) ನೀವೇ ಹೇಳಿ? ದಯವಿಟ್ಟು ತಪ್ಪು ತಿಳಿಯದಿರಿ, ನಾನು ಆಂಡಯ್ಯನವರ ಕಾವ್ಯದ ಬಗ್ಗೆ ಟೀಕಿಸುತ್ತಿಲ್ಲ. ಆ ಮಟ್ಟಿಗಿನ ಪಾಂಡಿತ್ಯ/ಅರ್ಹತೆ ನನಗಿಲ್ಲವೇ ಇಲ್ಲ. ಇರುವ ವಿಚಾರ ಹೇಳುತ್ತಿದ್ದೀನಿ ಅಷ್ಟೇ.

೩. ಯಾವಾಗ ನಾನು ಒಬ್ಬ ಭಾಷಾಶಾಸ್ತ್ರಜ್ಞನಾಗಿ ಬರೆಯಲು ಕುಳಿತುಕೊಳ್ಳುತ್ತೇನೋ ಆಗ ನನ್ನೊಳಗಿನ ಸಾಹಿತಿ, ರಸಕಾರ, ಅರ್ಧ ಡಲ್ ಆಗುತ್ತಾನೆ. ಭಾಷೆಯ ಮಿತಿ, ದೌರ್ಬಲ್ಯ ಇದು ಅಂತ ನನ್ನ ಭಾವನೆ. ಕುಮಾರವ್ಯಾಸ, ವಚನಕಾರರು, ದಾಸರು ಎಲ್ಲರೂ ಕನ್ನಡವನ್ನು ಹೆಚ್ಚು ಹೆಚ್ಚು ಬಳಸಿದರು ನಿಜ ಆದರೆ ಪ್ರಜ್ಞಾಪೂರ್ವಕವಾಗಿ ಹಟಕ್ಕೆ ಬಿದ್ದು ಬಳಸಲಿಲ್ಲ. ಥಟ್ಟಂತ ನೆನಪಿಗೆ ಬರುತ್ತಿರೋದು: ಕನಕದಾಸರು "ರಕ್ಷಿಸು" ಅಂತಲೂ ಬಳಸಿದರು (ಸಂಸ್ಕೃತ ಮೂಲ) ಹಾಗೇ ಲೀಲಾಜಾಲವಾಗಿ "ಪೊರೆ" ಅಂತಲೂ ಬಳಸಿದರು. ಅದರಲ್ಲಿ ಕಾಲದ ಹೊಡೆತದಲ್ಲಿ "ರಕ್ಷಿಸು" ಬಳಕೆ ಉಳಿದಿದೆ "ಪೊರೆ" ಹೆಚ್ಚಾಗಿ ಬಳಕೆಯಲ್ಲಿಲ್ಲ. ಸೋಮೇಶ್ವರನ ಶತಕವನ್ನೇ ನೋಡಿ, "ರವಿಯಾಕಾಶಕೆ ಭೂಷಣಂ" ಅಂತ ಬರೀತಾನೆ. ಇದು "ಸಂಸ್ಕೃತ ಭೂಯಿಷ್ಠ" ಅಂತಂದ ಮಾತ್ರಕ್ಕೆ ಆತ ಕನ್ನಡ ಪದಗಳನ್ನು ಹುಡುಕಿಯೇ ಇರಲಿಲ್ಲ ಅಂತಲೇ? ಅಲ್ಲ, ಸನ್ನಿವೇಶಕ್ಕೆ ತಕ್ಕಂತೆ, ರಸಕ್ಕೆ ತಕ್ಕಂತೆ ಕವಿ ಪದಗಳನ್ನು ಬಳಸಿದ್ದಾನೆ. ಇದು ಬರೀ ಎರಡು ಉದಾಹರಣೆಗಳು ಅಷ್ಟೆ. ೪. ಕೃತಿಯೊಂದನ್ನು ಅಭ್ಯಾಸ ಮಾಡುವಾಗ, ಕಠಿಣ ಪದ ಎದುರಾದರೆ ನಿಘಂಟು ಬೇಕಾಗುತ್ತದೆ ನಿಜ. ಆ ಕೃತಿ ರಚನೆಯಾದ ಕಾಲದಲ್ಲಿ ಆ ಪದ ಬಳಕೆಯಲ್ಲಿತ್ತು ಅಂದ ಮಾತ್ರಕ್ಕೆ ಈಗಿನ ಕಾಲಕ್ಕೂ ಎಲ್ಲವೂ ಸಲ್ಲಬೇಕೆಂದೇನೂ ಇಲ್ಲ. ಮಂಕುತಿಮ್ಮನ ಕಗ್ಗ ಓದುತ್ತಿದ್ದೀವಿ ಅಂತ ಇಟ್ಟುಕೊಳ್ಳೋಣ. "..ದಂದುಗವನ್ ಅರೆಗಯ್ದು" ಅಂತ ಓದುತ್ತೀವಿ. "ದಂದುಗ" ಅರ್ಥ ಗೊತ್ತಾಗಲಿಲ್ಲ. ನಿಘಂಟು ತೆಗೆದು ನೋಡಿದ್ವಿ. "ದುಃಖ" ಅಂತ ಅರ್ಥ ಗೊತ್ತಾಯಿತು. ಸರಿ, "ದುಃಖ"ಕ್ಕಿಂತ "ದಂದುಗ" ಕನ್ನಡ ಮೂಲದ್ದು ಅಂತ ನಾಳೆಯಿಂದ ನಾನು ಅದನ್ನು ಬಳಸಲು ಸಾಧ್ಯವೇ (ಇವತ್ತಿನ ಸನ್ನಿವೇಶದಲ್ಲಿ)? ನೀವೇ ಹೇಳಿ? ಆಕಸ್ಮಾತ್ ಬಳಸಲಿಲ್ಲ ಅಂದಲ್ಲಿ ನಾನು ಕನ್ನಡಕ್ಕೆ ನಿಷ್ಠನಾಗಿಲ್ಲ ಅಂತ ಅರ್ಥವೇ?

೫. ಹೊಸ ಪದಗಳಿಗೆ ನನ್ನ ಮನದುಂಬಿದ ಸ್ವಾಗತವಿದೆ. ಬಳಸೋಣ. ಆದರೆ ಇರುವುದನ್ನು "ತ್ಯಾಜ್ಯ" ಅನ್ನುವ ಭಾವನೆಯಿಂದ ಕೋಪದಿಂದ ಬಿಸುಟು ಹೊಸದನ್ನು ಬಳಸುವುದು ಬೇಡ. ಯಾವುದೇ ಭಾಷೆ, ಇನ್ನೊಂದರ ಪದಗಳನ್ನು ಹಿತ-ಮಿತವರಿತು ಬಳಸಿದಲ್ಲಿ, ಅದು ಕೀಳರಿಮೆಯನ್ನು ತೋರಿಸುವುದಿಲ್ಲ ಅಂತ ನನ್ನ ಬಲವಾದ ನಂಬಿಕೆ. ಕನ್ನಡ ಯಾವ ಭಾಷೆಗೂ ಅಡಿಯಾಳಾಗುವುದು ನನಗೆ ದೇವರಾಣೆಗೂ ಇಷ್ಟವಿಲ್ಲ (ಸಂಸ್ಕೃತವನ್ನೂ ಸೇರಿಸಿ). ಆದರೆ ಎಲ್ಲವನ್ನೂ ಕನ್ನಡೀಕರಿಸುವಾಗ ಆಗುವ ಅಪಾಯಗಳ ಬಗ್ಗೆ ಕೂಡಾ ಸ್ವಲ್ಪ ಎಚ್ಚರ ಇರುವುದು ಒಳ್ಳೆಯದು ಅಲ್ಲವೇ? ನೀವು ಗಮನಿಸಿ ನೋಡಿ; ಒತ್ತಾಯದಿಂದ ಯಾವ ಇತರೆ ಭಾಷೆಯ ಪದವೂ ಕನ್ನಡದಲ್ಲಿ ನಿಂತಿಲ್ಲ. ಉದಾ: "ಧೂಮ್ರ ಶಕಟ" v/s "ಉಗಿಬಂಡಿ". ಯಾವ ಪದ ಬಳಕೆಯಲ್ಲಿದೆ ಹೇಳಿ? ಆದರೆ "ಧೂಮಪಾನ" ಪದಕ್ಕೆ ಬಂದಾಗ "ಹೊಗೆಬತ್ತಿ ಸೇದುವುದು" ಅನುವಾದ ಬಹಳ ಉದ್ದವಾಯಿತು. ಹಾಗಾಗಿ "ಧೂಮಪಾನ" ಉಳಿಯಿತು. ಇಂಗ್ಲಿಷ್ ಬಹಳ ಬಲವಾಗಿ ಬೆಳೆಯುತ್ತಿರಲು ಕಾರಣ ಅಲ್ಲಿ ಯಾವ ಭಾಷೆಯಲ್ಲಿ ಒಳ್ಳೆಯ ಪದ ಸಿಗುತ್ತೋ ಅದನ್ನು ತಕ್ಷಣ ತಮ್ಮದಾಗಿಸಿಕೊಂಡು ನಿಘಂಟಿನಲ್ಲಿ ಕೂಡಾ ಸೇರಿಸಿಬಿಡುತ್ತಾರೆ. ಉದಾ: "Gyan" ಮತ್ತು "Guru" ಪದಗಳು. ನಿಮಗೆ ಇವು ಇಂಗ್ಲಿಷ್ ನಿಘಂಟಿನಲ್ಲಿ ಕೂಡ ನೋಡಲು ಸಿಗುತ್ತವೆ! ಅವರು ಸಂದರ್ಭಕ್ಕೆ ತಕ್ಕಂತೆ ಬಳಸುತ್ತಾರೆ. "Guru" ಅಂದರೆ ಶಿಕ್ಷಕ ಅಂತ ಅನ್ನೋಲ್ಲ್ಲ. Expert ಅಂತ ಅರ್ಥ ಕೊಡುತ್ತಾರೆ. ಇಂಗ್ಲಿಷ್ ತನ್ನ ಬತ್ತಳಿಕೆಗೆ ಇನ್ನೆರಡು ಅಸ್ತ್ರ ಸೇರಿಸಿಕೊಳ್ಳುತ್ತದೆ, ಬೆಳೆಯುತ್ತದೆ. ಆದರೆ ನಾವು "ಗುರು" ಬೇರೆ ಭಾಷೆಯ ಪದ ಆಯಿತು ಅಂತ ದೂರ ತಳ್ಳುತ್ತೇವೆ. ಬೇರೆ ಪದ ಹುಡುಕುತ್ತೇವೆ. ಯಾಕೆ? ಯಾಕೆ?

೬. ಅಚ್ಚ ಕನ್ನಡದ ಪರ್ಯಾಯ ಪದಗಳನ್ನು ಅನುಕೂಲಕ್ಕೆ ತಕ್ಕಂತೆ ಬಳಸೋಣ. ಬಳಸೋದಕ್ಕೆ ನಮಗೆ ಯಾರಿಂದಲೂ "official" ಅನುಮತಿಯೇನೂ ಬೇಕಾಗಿಲ್ಲವಲ್ಲ. ಆ ಹೊಸ ಪದದಲ್ಲಿ ಆಕರ್ಷಣೆಯಿದ್ದಲ್ಲಿ, ಎಲ್ಲರಿಗೂ "ಅಪೀಲ್" ಆದಲ್ಲಿ ಅದು ಬಳಕೆಗೆ ಬರುತ್ತೆ. ಬೇಡಾ ಅಂತ ಯಾರೇ ಕೂಗಾಡಿದರೂ ಆಗ ಅದನ್ನು ತಡೆಯಲು ಆಗೋಲ್ಲ. ಉದಾ: "ಮಚ್ಚಾ" ಪದ. ಕನ್ನಡದಲ್ಲಿ "ಮಗಾ" ಅಂತಾನಾದ್ರೂ ಬಳಸಬಹುದು, ಈ "ಮಚ್ಚಾ" ಯಾಕೆ? ಏನು ಮಾಡೋದು, ಒಮ್ಮೆ ಈ ಮಾಸ್ ಅಪೀಲ್ ಆಗಿ ಬಿಟ್ತರೆ ಬಹಳ ಕಷ್ಟ. ಇದೇ ಮಾಸ್ ಅಪೀಲ್ ಒಳ್ಳೆಯ ಹೊಸ ಪದಗಳ ಬಗ್ಗೆ ಬರುವಂತೆ ನಾವೇ ಸೃಷ್ಟಿಸೋಣ. ಎಲ್ಲರೂ ಕೈ-ಕೈ ಜೋಡಿಸೋಣ. ಏನಂತೀರಾ? ಇಂಗ್ಲಿಷ್ ಪದಗಳನ್ನು ಬರಮಾಡಿಕೊಳ್ಳುವುದು ಖಂಡಿತಾ ತಪ್ಪು ಅಂದ್ರೆ ಕೈಲಾಸಂರನ್ನು ನಾವು ನಾಳೆಯಿಂದ ಪಕ್ಕಕ್ಕಿಡಬೇಕಾಗುತ್ತೆ! ನನ್ನ ಅನಿಸಿಕೆ ಏನಪ್ಪ ಅಂದ್ರೆ ಆ ರೀತಿಯ ಹಟ ಬೇಡ. ಹಾಗಂತ ನಾಳೆಯಿಂದ ಇಂಗ್ಲಿಷನ್ನು ಕನ್ನಡದಲ್ಲಿ ಬರೆದು "ಇದೂ ಕನ್ನಡವೇ" ಅಂತ ಹೇಳಬಹುದು ಅಂತಲ್ಲ. ಸಾಹಿತ್ಯ ಸೃಷ್ಟಿಗೆ ತಕ್ಕಷ್ಟು, ರಸಾಸ್ವಾದನೆಗೆ ಬೇಕಿದ್ದಷ್ಟು, ಬೇರೆ ಪದಗಳ ಬಳಕೆಯೂ ಇರಲಿ. ೭. ಯಾವುದೋ ಒಂದು ಭಾಷೆಯ ಒತ್ತಡದಿಂದ ಇನ್ನೊಂದು ಭಾಷೆ ನಿಂತ ನೀರಾಗುತ್ತದೆ/"ಮಡಿವಂತಿಕೆ" ಮೈಗೂಡಿಸಿಕೊಳ್ಳುತ್ತದೆ ಅನ್ನುವುದು ಕೇವಲ ಒಂದು ನಂಬಿಕೆ. Lingusitic ಆಗಿ ಅದಕ್ಕೆ ಸಾಕಷ್ಟು ಪುರಾವೆಗಳಿಲ್ಲ ಅಂತ ನನ್ನ ಭಾವನೆ. ೮. ಕಳೆದ ವರ್ಷ ನಮ್ಮ ಸಂಸ್ಥೆಯಲ್ಲಿ ಕನ್ನಡಿಗ ಸಹೋದ್ಯೋಗಿಗಳ ಜತೆ ಒಂದು ಸಮೀಕ್ಷೆ/ರಸಪ್ರಶ್ನೆ ನಡೆಸಿದ್ದೆ. ನೀವು ದಿನಾಲೂ ಬಳಸುವ ಆಂಗ್ಲ ಪದಗಳಿಗೆ ಕನ್ನಡ ಪದಗಳನ್ನು ಹೇಳಿ ಅಂತ. Electricity - ಗೊತ್ತಿಲ್ಲ (ಅದೇನೋ ವಿದ್ಯುತ್ ಅಂತ ಶುರು ಆಗುತ್ತಪ್ಪಾ, ಗೊತ್ತಿಲ್ಲ!), Shopping Complex - ಗೊತ್ತಿಲ್ಲ; ಕೊನೆಗೆ ತಲೆಕೆಟ್ಟು ಸುಮ್ಮನಾದೆ. ಯಾಕೆ ಹೀಗೆ ಅಂತ ಕೇಳಿದೆ. ಒಬ್ಬರು ಹಿರಿಯರು ಬಹಳ ಚೆನ್ನಾಗಿ ಹೇಳಿದರು. "ಶ್ಯಾಮ್, ನನ್ನ ಮಗಳು ಸ್ಕೂಲಿಗೆ ಹೋಗುತ್ತಾಳೆ. ಆಕೆಯ ಪುಸ್ತಕದಲ್ಲಿರುವ ಕನ್ನಡ ಪದಗಳ ಪೈಕಿ ಸುಮಾರು ನಲವತ್ತು % ನಾವು ಇವತ್ತಿನ ದಿನ ಬಳಸುವುದೇ ಇಲ್ಲ. ಎಲ್ಲದಕ್ಕೂ ನಿಘಂಟು ತೆಗೆದು ನೋಡಬೇಕು. ಯಾಕೆ ಹೀಗೆ? ಕನ್ನಡದಲ್ಲಿ ಸಮಕಾಲೀನ ಪದಗಳು, ಬಳಸಲು ಸುಲಭವಾಗಿರುವಂಥದ್ದು ಇಲ್ವೇ ಇಲ್ವಾ" ಅಂತ. ಎಷ್ಟು ವಿಚಿತ್ರ ಅಲ್ವಾ? ಈ ಬಗ್ಗೆ ನಾನು ಬರೆದು ನಿಮ್ಮ ಆಲೋಚನೆಗೆ ಅಡ್ಡಿ ಬರೋಲ್ಲ. ನೀವೇ ಯೋಚಿಸಿ ನೋಡಿ. ಇರುವ ಪದಗಳಾದ "ವಿದ್ಯುತ್, ಆಹ್ವಾನ ಪತ್ರಿಕೆ, ಆರೋಗ್ಯ" ಮುಂತಾದುವುಗಳನ್ನು ನಮ್ಮ ಎಳೆಯರಲ್ಲಿ ಬಳಕೆಯಲ್ಲಿರುವಂತೆ ಉಳಿಸಿಕೊಳ್ಳೋಣ. ಆಮೇಲೆ, ಬೌದ್ಧಿಕವಾಗಿ ಒಂದು ಹಂತ ದಾಟಿದ ಮೇಲೆ ಯಾರೇ ಆದರೂ ಕನ್ನಡ ನಿಘಂಟು ಇವುಗಳನ್ನು ತೆಗೆದು ನೋಡಲು ಪ್ರಯತ್ನ ಪಡುತ್ತಾರೆ. ಇಲ್ಲಾಂದ್ರೆ, "ಹೋಗೋ ಮಾರಾಯ, ನಿಮ್ಮ ಕನ್ನಡದಲ್ಲಿ ಒಂದೊಂದಕ್ಕೂ ನೀವು ಕಿತ್ತಾಡುತ್ತಿರಿ, ನಾವು ಆರಾಮಾಗಿ ಇಂಗ್ಲೀಷಿನ Electicity, Shopping Complex etc etc ಬಳಸುತ್ತಾ ಆರಾಮಾಗಿರುತ್ತೀವಿ" ಅಂತನ್ನುವ ಸ್ಥಿತಿ ಇವತ್ತಲ್ಲಾ ನಾಳೆ ಖಂಡಿತ ಬರುತ್ತೆ. ಮೊದಲು ಇರುವುದನ್ನು ಉಳಿಸೋಣ, ಜತೆಯಲ್ಲಿ ಬೆಳೆಸೋಣ. ದಯವಿಟ್ಟು ಇರುವುದನ್ನು ಕೆಡವಿ ಹೊಸತನ್ನು ಕಟ್ಟೋಣ ಅನ್ನುವ ಸಾಹಸ ಬೇಡ ಅಂತ ನನ್ನ ಅನಿಸಿಕೆ. ಆಮೇಲೆ ಇರುವುದೂ ಕಳೆದು ಹೋದರೆ?

ಇನ್ನೂ ಏನೇನೋ ಇದೆ ತಲೆಯಲ್ಲಿ. ಇಲ್ಲ, ಬೆಸೆಯುವ ಕೊಂಡಿ ಇಲ್ಲದಂತಾಗಿ ಅಲ್ಲಲ್ಲಿ ವಿಚಾರ ಮಸುಕಾದಂತೆ ಅನ್ನಿಸುತ್ತಿದೆ. ಮುಂದೊಮ್ಮೆ ನನ್ನ ವಿಚಾರಗಳನ್ನು ನಿಮ್ಮ ಮುಂದಿಡುತ್ತೀನಿ (ಈಗ ಯಾರೂ ಈ ನನ್ನ ಲೇಖನಕ್ಕೆ ಬಯ್ಯಲಿಲ್ಲ ಅಂದಲ್ಲಿ). ಸದ್ಯಕ್ಕಿಷ್ಟು ಸಾಕು.

"ಸಿರಿಗನ್ನಡಂ ಗೆಲ್ಗೆ"- ಶ್ಯಾಮ್ ಕಿಶೋರ್

‹ ಎಣ್ಮಯ ಎಂದರೆ ಯಾರು "ಆವರಣ ಕೆಟ್ಟ ಕಾದಂಬರಿ" - ಡಾ: ಬರಗೂರು ರಾಮಚಂದ್ರಪ್ಪ ›
  • ಸಾಹಿತ್ಯ, ಭಾಷೆ
~.~
  • Login or register to post comments
  • 645 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 14, 2007 - 7:50am — venkatesh

Re: ಕಿಟ್ಟೆಲ್ ನಿಘಂಟು ಮತ್ತು ಭಾಷೆಯ ಹೊಸತನದ ಬಗ್ಗೆ ಒಂದಷ್ಟು

venkatesh's picture

ನೀವು ಹೇಳೋದ್ ಅಕ್ಷರ ಸಹಿತ ನಿಜ- ಹಿಂದಿಯಲ್ಲಿ ಒಂದು ವಾಕ್ಯವನ್ನು ತೆಗೆದುಕೊಂಡು ಹೇಳುವುದಾದರೆ 'ಆಪ್ ನೆ ಮೆರಿ ಮುಹ್ ಕಿ ಬಾತ್ ಛೀನ್ ಲಿ' (ರೋಟಿ ನಹಿ !)ಇದು ನಮ್ಮೆಲ್ಲರ ಆಶೋತ್ತರಗಳ ಸಂಕೇತ. 'ನಾವ್ ಹೇಳೋದನ್ನ ನೀವ್ ಹೇಳಿದೀರ್ ಅಷ್ಟೆ'. ಸಮಾಧಾನ ಆಯ್ತ ಸ್ವಾಮಿ ?
ಸಿಗೋಣ,
ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 14, 2007 - 10:18am — Shyam Kishore

ಉತ್ತರ: ಕಿಟ್ಟೆಲ್ ನಿಘಂಟು ಮತ್ತು ಭಾಷೆಯ ಹೊಸತನದ ಬಗ್ಗೆ ಒಂದಷ್ಟು

Shyam Kishore's picture

ವೆಂಕಟೇಶ್‌ರವರೇ,

ನಿಮ್ಮ ಅನಿಸಿಕೆಗೆ ಧನ್ಯವಾದಗಳು. ನಿಮ್ಮಂತಹ ಹಿರಿಯರ ಬಳಿ "ರೋಟಿ" ನಾನ್ಯಾಕೆ ಕಸಿಯಲಿ ಹೇಳಿ Wink

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 14, 2007 - 10:24am — Shyam Kishore

ದಯವಿಟ್ಟು ಗಮನಿಸಿ: ಲೇಖನದಲ್ಲಿ formatting ತೊಂದರೆಗಳು

Shyam Kishore's picture

ನಾಡಿಗರೇ,

ನಮಸ್ಕಾರ. ನನ್ನೀ ಮೇಲಿನ ಲೇಖನದಲ್ಲಿ ಬಣ್ಣಗಳನ್ನು ತೆಗೆಯುವಾಗ ಅನ್ನಿಸುತ್ತೆ (ಬಹುಶಃ), ಕೆಲವು ಸಾಲುಗಳು line break ಇಲ್ಲದೇ ಇತರ ಸಾಲುಗಳ ಜತೆ ಕಲಸಿಕೊಂಡು ಹೋಗಿವೆ. ಗಮನಿಸಿ ನೋಡಿ: ಅಂಶ ೧, ೭ ಮತ್ತು ೮ ಗಳನ್ನು. ನಾನು ಇದನ್ನು ತಿದ್ದಲು ಸಾಧ್ಯವಿಲ್ಲ. ನೀವಿದನ್ನು ಸ್ವಲ್ಪ ಸರಿಪಡಿಸಿದಲ್ಲಿ ಓದುವಾಗ ತೊಂದರೆಯಾಗುವುದು ತಪ್ಪೀತು.

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • MNC ಅಲ್ಲಿ "ಕನ್ನಡ ಕಲಿ" ಕಾರ್ಯಕ್ರಮ .....
  • ನೀಳ್ಗತೆ
  • ಮುಕ್ತಾಯ
  • ಇವರೀಗ ಯಾವ ಕಾಲದಲ್ಲಿದ್ದಾರೆ!
  • "ಓದುವ ಸುಖ, ಬರೆಯುವ ಸುಖ....." - ಒಂದು ಚಿಂತನೆಗೆ ಹಚ್ಚುವ ಲೇಖನ
Syndicate content

ಲೇಖಕರು

Shyam Kishore's picture

ಪರಿಚಯ

ವೃತ್ತಿಯಿಂದ ನಾನೊಬ್ಬ ಸಾಫ್ಟ್‌ವೇರ್ ಇಂಜಿನಿಯರ್. ಪ್ರವೃತ್ತಿಯಿಂದ ಸಾಹಿತ್ಯ ಮತ್ತು ಕಲಾಭ್ಯಾಸಿ. ಓದುವುದು, ಚಿತ್ರ ಬಿಡಿಸುವುದು, ಆಗಾಗ ಕವನ-ಚುಟುಕ-ಲೇಖನ ಬರೆಯುವುದು, ಹರಟೆ ಕೊಚ್ಚೋದು, ಕನ್ನಡ ಸಿನಿಮಾ ನೋಡುವುದು ಇತ್ಯಾದಿ ಹವ್ಯಾಸಗಳು.
ಮತ್ತಷ್ಟು ವಿವರಗಳಿಗೆ ನನ್ನ ಬ್ಲಾಗ್ ಪುಟ ಮನದ ಮಾತು ನೋಡಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕನ್ನಡ ರಸಪ್ರಶ್ನೆ:೯
  • ಅಳುವ ಗಂಡಸ ನಂಬಬೇಡ?
  • ಮಾಹಿತಿ ಬೇಕಿದೆ
  • ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
  • ಮೆಱವಣಿ, ಮೆಱವಣಿಗೆ
  • ಪೞೆಯುೞಿಕೆಗಳು
  • ಹೆಂಡತಿ-ಎಂದರೆ ಜೋಕು ಯಾಕೆ ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
  • shashikannada
    ಉ: Abroad ಅನ್ನೋ ಮಾಯೆ...
    July 9, 2008 - 11:51am
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 11:47am
ಇನ್ನಷ್ಟು


ನನಗೆ ಯಾರೂ ಶತ್ರುಗಳಿಲ್ಲ. ಅವರೆಲ್ಲರೂ ಈಗಾಗಲೇ ಸತ್ತಿದ್ದಾರೆ

— ವಿನ್ ಸ್ಟನ್ ಚರ್ಚಿಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator