ದೋಷ ನಿಯಂತ್ರಣ ಸಾಂಕೇತತ್ವ ( Error control coding) - Short essay in Kannada
-------------------------
ಮಾನವನ ಆವಿಷ್ಕಾರಗಳಲ್ಲಿ ಮಾಹಿತಿಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಿಶ್ವಸನೀಯವಾಗಿ ರವಾನಿಸುವುದು ಕ್ರಾಂತಿಕಾರಕ ಮತ್ತು ಅತ್ಯಂತ ಮಹತ್ವಪೂರ್ಣವಾದುದು. ಏಕೆಂದರೆ ಇದು ಇಂದು ಬೃಹದಾಅಕಾರವಾಗಿ ಬೆಳೆದು ನಿಂತಿರುವ ಮಾಹಿತಿ ತಂತ್ರಜ್ನಾನದ ತಳಹದಿ. ಮಾಹಿತಿಯನ್ನು ದೋಷಮುಕ್ತವಾಗಿ ರವಾನಿಸುವುದಕ್ಕೆ ಬಹು ಮಟ್ಟಿಗೆ ಕಾರಣವಾದುದು ದೋಷ ನಿಯಂತ್ರಣ ತತ್ವಗಳು. ಆಧುನಿಕ ದೋಷ ನಿಯಂತ್ರಣ ತತ್ವಗಳನ್ನು ಶತಮಾನಗಳಿಗಿಂತಲು ಹಳೆಯದಾದ ಗಣಿತದ ಸಿದ್ಧಾಂತಗಳ ತಳಹದಿಯ ಮೇಲೆ ಬೆಳೆಸಲಾಗಿದೆ. ಈ ತತ್ವಗಳ ಕೆಲಸ ನಲವತ್ತರ ದಶಕದಲ್ಲಿ ಪ್ರಾರಂಭವಾಯಿರಾದರೂ ೫೦ ರಿಂದ ೭೦ರ ದಶಕಗಳಲ್ಲಿ ಮಹತ್ವಪೂರ್ಣ ಬದಲಾವಣೆಗಳಾಯಿತು.
ಇತಿಹಾಸ
--------
೧೯೪೮ರಲ್ಲಿ ಕ್ಲಾಡ್ ಶಾನನ್ ಮಾಹಿತಿ ಸಾಮರ್ಥ್ಯ ಸಿದ್ಧಾಂತವನ್ನು ಮಂಡಿಸಿದ.
"ಮಾಹಿತಿಯ ಪ್ರಮಾಣ ಅದರ ವಾಹಿನಿಯ ಸಾಮರ್ಥ್ಯಕ್ಕಿಂತ ಕಡಿಮೆ ಇದ್ದಲ್ಲಿ, ಉಳಿದ (ಮಾಹಿತಿಯ) ಸಾಮರ್ಥ್ಯವನ್ನು ಉಪಯೋಗಿಸಿ ದೋಷ ನಿಯಂತ್ರಣ ಸಂಕೇತಗಳನ್ನು ಕಳುಹಿಸುವ ಮೂಲಕ ಸಂದೇಶದ ಸಮಗ್ರತೆಯನ್ನು ಉತ್ತಮಪಡಿಸಬಹುದು",
ಆದರೆ ಶಾನನ್, ಸಂಕೇತಗಳನ್ನು ಹೇಗೆ ಕಳುಹಿಸುವುದು ಮತ್ತು ಅದರ ಉಪಯೋಗವನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ಎನೂ ಹೇಳಲಿಲ್ಲ. ೫೦ ರ ದಶಕದ ಪೂರ್ವಾರ್ಧದಲ್ಲಿ ಮೊದಲ ಬಾರಿಗೆ ಒಂದು ಬಿಟ್( ಮಾಹಿತಿಯ ಮೂಲಮಾನ) ದೋಷ ಸರಿಪಡಿಸಬಹುದಾದ ಹ್ಯಾಮಿಂಗ್ ಸಾಂಕೇತಗಳನ್ನು ಕಂಡು ಹಿಡಿಯಲಾಯಿತು. ನಂತರ ಉತ್ತರಾರ್ಧದಲ್ಲಿ ರೀಡ್-ಸಾಲೋಮನ್ ಸಾಂಕೇತಗಳು ಜನ್ಮ ತಾಳಿದವು. ಈ ಸಂಕೇತಗಳು ಪ್ರತಿ ಬಿಟ್ ಗಳ ಮೇಲೆ ಅವಲಂಬಿಸದೆ ಇಂತಹ ಹಲವು ಬಿಟ್ ಗಳಿಂದಾದ ಚಿಹ್ನೆಗಳ ಮೇಲೆ ಅವಲಂಬಿತವಾಗಿರುತ್ತವೆ. ಹೀಗೆ ದೋಷ ನಿಯಂತ್ರಣ ತತ್ವಗಳು ಎರಡು ಕವಲಾದವು. ಒಂದು ಬಿಟ್ ಆಧಾರಿತ ಮತ್ತೊಂದು ಚಿಹ್ನೆ ಆಧಾರಿತ. ಮುಂದಿನ ದಿನಗಳಲ್ಲಿ ಈ ಸಾಂಕೇತಗಳನ್ನು ಕಾರ್ಯ ರೂಪಕ್ಕೆ ತರುವ ವಿಧಾನಗಳ ಮೇಲೆ ಸಂಶೋಧನೆಗಳು ನಡೆದವು. ಮತ್ತೊಂದು ಕಡೆ ಇದಕ್ಕೆ ಸಮನಾಂತರವಾಗಿ ೫೦ ರ ದಶಕದಲ್ಲಿ ಕನ್ವೊಲ್ಯುಶನ್ ಸಾಂಕೇತಗಳು ಮುಖ್ಯಧಾರೆಗೆ ಬಂದವು.ಇದರ ವಿಶೇಷತೆಯೇನೆಂದರೆ ಸಾಂಕೇತೀಕರಣ/ನಿಸ್ಸಾಂಕೇತೀಕರಣಗೊಳಿಸುವ ಮೊದಲು ಮಾಹಿತಿಯನ್ನು ನಿರ್ದಿಷ್ಟ ಪ್ರಮಾಣಕ್ಕೆ ರೂಪಂತಿರಿಸುವ ಅವಶ್ಯಕತೆಯಿರಲಿಲ್ಲ. ೧೯೬೨ರಲ್ಲಿ ವಿಟರ್ಬಿ ರೂಪಿಸಿದ 'ಗರಿಷ್ಥ ಸಂಭಾವ್ಯತೆ" ಎನ್ನುವ ವಿಧಾನ ಪ್ರಖ್ಯಾತಿಯನ್ನು ಪಡೆಯಿತು. ೮೦ ರ ದಶಕದಲ್ಲಿ ಮಾಹಿತಿ ಮಾರ್ಪಡಿಸುವ ಕ್ರಿಯೆಯಲ್ಲಿ ಕನ್ವೊಲ್ಯೂಶನ್ ಸಾಂಕೇತಗಳು ಉಪಯೋಗಕ್ಕೆ ಬಂದವು. ನಂತರ ಮಾಹಿತಿ ಮಾರ್ಪಡಿಸುವ ಕ್ರಿಯೆ ಮತ್ತು ದೋಷ ನಿಯಂತ್ರಣ ಸಾಂಕೇತೀಕರಣ ಕ್ರಿಯೆಗಳು ಸಂಯೋಜನೆಗೊಂಡು ಅವುಗಳಿಗಿದ್ದ ಅಂತರವು ಕನಿಷ್ಥಗೊಂಡಿತು. ಅಂದರೆ ಒಂದೆ ಬಾಣದಲ್ಲಿ ಎರಡು ಹಕ್ಕಿಗಳನ್ನು ಕೊಲ್ಲುವ ಹಾಗೆ.
ಉಪಸಂಹಾರ
--------
ಈ ದಿನಗಳಲ್ಲಿ 'ಟರ್ಬೊ' ಸಾಂಕೇತಗಳ ಮೇಲೆ ತಂತ್ರಜ್ನರು ಗಮನವನ್ನು ಕೇಂದ್ರೀಕರಿಸಿದ್ದಾರೆ ಏಕೆಂದರೆ ಟರ್ಬೊ ಸಂಕೇತಗಳು, ದೋಷ ನಿಯಂತ್ರಣ ತತ್ವಗಳಿಂದ ನಾವು ಏನನ್ನು ಸಾಧಿಸಬಹುದು ಅದರ ಸೈದ್ಧಾಂತಿಕ ಮಿತಿಗೆ ಕೊಂಡೊಯ್ಯುತ್ತವೆ ಎಂಬುದು ಅವರ ಅಂಬೋಣ

- Login or register to post comments
- 653 hits
- Email this forum





RSS:
Re: ದೋಷ ನಿಯಂತ್ರಣ ಸಾಂಕೇತತ್ವ -ಅದ್ಭುತ ಬರವಣಿಗೆ
ಅದ್ಭುತ ಬರವಣಿಗೆ
ತಾಂತ್ರಿಕವಿಷಯ ಕುರಿತು ಬರೆಯುವುದು ಕಷ್ಟ ಆದರೂ ಬರೆದಿದ್ದೀರಿ.
ನನ್ನನ್ನೂ ಸೇರಿಸಿ ಇನ್ನಿತರರೂ ನಿಮನ್ನು ಅನುಕರಿಸಲು ಪ್ರೇರಣೆ ಆಗಿದ್ದೀರಿ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
Re: ದೋಷ ನಿಯಂತ್ರಣ ಸಾಂಕೇತತ್ವ ( Error control coding) - Short essay in Kannada
ಇದು ಶ್ಲಾಘನೀಯವಾದ ಪ್ರಯತ್ನ. ಅಲ್ಲದೆ ನನಗೆ ಆತ್ಮೀಯವಾದದ್ದೂ ಸಹ. ನೀವು ಡಿಜಿಟಲ್ ಸಿಗ್ನಲ್ ಪ್ರಾಸಸರ್ಸ್ ಕುರಿತು ಒಂದು ಪ್ರಬಂಧವನ್ನು ಬರೆದಿದ್ದೀರಿ ಅಲ್ಲವೇ? ಈ ಎರರ್ ಡಿಟೆಕ್ಟಿಂಗ್ ಮತ್ತು ಕರೆಕ್ಟಿಂಗ್ ಕೋಡುಗಳ ಬಗ್ಗೆ ಇನ್ನೂ ದೀರ್ಘವಾಗಿ ನಿಮಗೆ ಬರೆಯಲು ಸಾಧ್ಯವಾಗಲಿ ಎಂದು ಹಾರೈಸುತ್ತೇನೆ. ಒಂದು ಸಂದೇಹ. "ವಾಹಿನಿಯ ಸಾಮರ್ಥ್ಯ" ಇದು ಸಿಗ್ನಲ್ ಸ್ಟ್ರೆಂತ್ ನ ಸಮಾನಾರ್ಥಕ ಪದವೇ? ಬ್ಯಾಂಡ್ ವಿಡ್ತ್, ಸಿಗ್ನಲ್ ಟು ನಾಯ್ಸ್ ರೇಶಿಯೊ ಇತ್ಯಾದಿ ಪದಗಳಿಗೆ ಸೂಕ್ತವಾದ ಸಮಾನಾರ್ಥಕ ಪದಗಳ ಆವಶ್ಯಕತೆ ಇದೆ ಎನಿಸುತ್ತದೆ.
ಪ್ರಭು ಮೂರ್ತಿ
Re: ದೋಷ ನಿಯಂತ್ರಣ ಸಾಂಕೇತತ್ವ ( Error control coding) - Short essay in Kannada
ಧನ್ಯವಾದಗಳು,
ಇಲ್ಲ, ನಾನು ಡಿಜಿಟಲ್ ಸಿಗ್ನಲ್ ಪ್ರಾಸಸರ್ಸ್ ಕುರಿತು ಒಂದು ಪ್ರಬಂಧವನ್ನು ಬರೆದಿಲ್ಲ. ಅದನ್ನು ಬರೆದಿರುವವರು ಕಿರಣ್ ಬಿ, ಆರ್ ಇರಬಹುದು.
ಅಲ್ಲದೆ ಇಲ್ಲಿರುವ ವೈಙ್ನಾನಿಕ ಪದಗಳಿಗೆ ಇಂಗ್ಲಿಷ್ ನ ಸಮನಾಂತರ ಪದಗಳನ್ನು ತಿಳಿಸಬೇಕಿತ್ತು.
ವಾಹಿನಿ ಸಾಮರ್ಥ್ಯ - channel capacity
ಸಂಕೇತ - code
ಮೂಲಮಾನ - unit
ಗರಿಷ್ಠ ಸಂಭಾವ್ಯತೆ - maximum likelihood
ಸಾಂಕೇತಿಕರಣ - encoding
ನಿಸ್ಸಾಂಕೇತಿಕರಣ - decoding
ಮಾರ್ಪಡಿಸು - modulate
ಚಿಹ್ನೆ - symbol
- ಜೈ ಕರ್ನಾಟಕ
Re: ದೋಷ ನಿಯಂತ್ರಣ ಸಾಂಕೇತತ್ವ ( Error control coding) - Short essay in Kannada
......೧೯೪೮ರಲ್ಲಿ ಕ್ಲಾಡ್ ಶಾನನ್ ಮಾಹಿತಿ ಸಾಮರ್ಥ್ಯ ಸಿದ್ಧಾಂತವನ್ನು ಮಂಡಿಸಿದ .....
ಈ ಮೇಲಿನ ವಾಕ್ಯದಲ್ಲಿ 'ಮಾಹಿತಿ ಸಾಮರ್ಥ್ಯ' ಬದಲು 'ವಾಹಿನಿ ಸಾಮರ್ಥ್ಯ' ಎಂದು ಓದಿಕೊಳ್ಳಬೇಕಾಗಿ ವಿನಂತಿ,
......ಉಳಿದ (ಮಾಹಿತಿಯ) ಸಾಮರ್ಥ್ಯವನ್ನು ಉಪಯೋಗಿಸಿ ......
ಈ ಮೇಲಿನ ವಾಕ್ಯದಲ್ಲಿ 'ಮಾಹಿತಿಯ' ಬದಲು 'ವಾಹಿನಿಯ' ಎಂದು ಓದಿಕೊಳ್ಳಬೇಕಾಗಿ ವಿನಂತಿ,
ಈ ತಪ್ಪಿಗೆ ಕ್ಷಮೆಯಿರಲಿ