ನಮಗೆ ರಿಮೇಕ್ ಪತ್ರಿಕೆ ಬೇಕೇ?
ಇಂಗ್ಲಿಷ್ ಪತ್ರಿಕೆಯ ಸುದ್ದಿ-ಲೇಖನಗಳನ್ನು ಕನ್ನಡದಲ್ಲಿ ಅನುವಾದ ಮಾಡಿ ಕೊಡುವ ಪತ್ರಿಕೆಯೊಂದು ಆರಂಭವಾಗಲಿದೆಯಂತೆ. ಹಾಗೆ ನೋಡಿದರೆ ಇತರ ಕನ್ನಡ ಪತ್ರಿಕೆಗಳೂ ಕೂಡಾ ಇಂಗ್ಲಿಷಿನಿಂದ ಸುದ್ದಿ ಮತ್ತು ಲೇಖನಗಳನ್ನು ಅನುವಾದ ಮಾಡಿ ಕೊಡುವುದು ಸಾಮಾನ್ಯ. ಆದರೆ ಇದು The Times Of Indiaವನ್ನು ಯಥಾ ರೀತಿ ಕನ್ನಡಕ್ಕೆ ಭಟ್ಟಿ ಇಳಿಸಿ ಕೊಡುವ ಉದ್ದೇಶ ಹೊಂದಿದೆ.ನಿಮ್ಮ ಪ್ರತಿಕ್ರಿಯೆ ಏನು? India Today ಅಂತಹ ಪತ್ರಿಕೆಗಳ ಗುಜರಾಥಿ,ಮಲೆಯಾಳ ಆವೃತಿ ಬಹಳ ಹಿಂದಿನಿಂದ ಲಭ್ಯವಿವೆ ಎನ್ನುವುದನ್ನು ಗಮನದಲ್ಲಿಡಿ.

- Login or register to post comments
- 1214 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಎಂಜಲು ದಿನಪತ್ರಿಕೆ ??
ಈ ವಿಷಯವಾಗಿ, ಅನಂತಮೂರ್ತಿಯವರು ಈ ದಿನದ ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಅವುಗಳನ್ನು ಎಂಜಲು ಪತ್ರಿಕೆಗಳೆಂದು ಲೇವಡಿ ಮಾಡಿದ್ದಾರೆ.
ಈ ಅನುವಾದಿತ ಪತ್ರಿಕೆಗಳ ಮೇಲೆ ನನ್ನಲ್ಲೇನು ವಿಶೇಷವಾದ ಕಾಳಜಿ ಇಲ್ಲ. ಆದರೆ ಒಂದೇ ಒಂದು ಪ್ರಶ್ನೆ, ಇಷ್ಟು ವರ್ಷ ಯಾವುದೇ ತಕರಾರಿಲ್ಲದೆ ನಡೆದುಕೊಂಡು ಬಂದ,
೧. ಅನುವಾದಿತ ಸಾಹಿತ್ಯವನ್ನು ಎಂಜಲು ಸಾಹಿತ್ಯ ಎನ್ನಬಹುದೇ ?
೨. ಅನುವಾದ ಅಕಾಡೆಮಿಯನ್ನು ಎಂಜಲು ಅಕಾಡೆಮಿ ಎನ್ನಲಾಗುತ್ತದೆಯೇ ?
ಈ ಎಂಜಲು ಸಾಹಿತ್ಯ, ಅಕಾಡೆಮಿಗಳನ್ನು ಕುರಿತು, ಸಾಮಾನ್ಯ ಓದುಗರಿಗೆ, ಯಾವ ರೀತಿಯ ಸಮರ್ಥನೆ ಸಿಗಬಲ್ಲದು.
Re: ಎಂಜಲು ದಿನಪತ್ರಿಕೆ ??
ಈ ಬಗ್ಗೆ ನಾನು ಸಪ್ಟೆಂಬರ್ ೨೦೦೬ರಲ್ಲೇ ಬರೆದಿದ್ದೆ. ಆದರೆ ನಾನು ಅನಂತಮೂರ್ತಿ ಅಲ್ಲದ ಕಾರಣ ನನ್ನ ಬರೆಹ ಯಾರಿಗೂ ಸುದ್ದಿಯೇ ಆಗಲಿಲ್ಲ
. ಆ ಬರೆಹ ಇಲ್ಲಿದೆ.
ಸಿಗೋಣ,
ಪವನಜ
-----------
Vishva Kannada
Think globally, Act locally
Re: ಎಂಜಲು ದಿನಪತ್ರಿಕೆ ??
ನಿಮ್ಮ ಲೇಖನ "ಉಷಾಕಿರಣದ ದಿವ್ಯಮರಣ" ನಾನೀಗ ತಾನೇ ಗಮನಿಸಿದೆ.ಅನಂತಮೂರ್ತಿಯವರ ಮಾತಿಗೆ ಹೆಚ್ಚು ಬೆಲೆ-ನೀವು ಬರೆದುದಕ್ಕೆ ಬೆಲೆಯಿಲ್ಲ ಎಂದು ತಿಳಿಯಬೇಡಿ.
Re: ಎಂಜಲು ದಿನಪತ್ರಿಕೆ ??
ನಿಜವಾಗಲು ಇದು ಖಂಡನೀಯವಾದುದು.
ನಮ್ಮ ಪತ್ರಕರ್ತರು ಡೈಲಿ ಅನುವಾದಕರಾಗಬೇಕೆ ? ಇದಕ್ಕಿಂತ ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆ ಬೇರೆ ಉದಾಹರಣೆ ಬೇಕೆ? ಸಂಕೇಶ್ವರರು ವಿಜಯ ಕರ್ನಾಟಕ ಟೈಂಸ್ ನವರಿಗೆ ಮಾರಿದಾಗಲೆ ಬಹಳ ನಿರಾಸೆಯಾಯಿತು.
ಅನುವಾದ ಸಾಹಿತ್ಯದ ಬಗ್ಗೆ, ಇದು ಬೇಕೆ ಬೇಡವೆ ಎಂಬ ಪ್ರಶ್ನೆ ಇದ್ದರೆ ಅದು ಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಏಕೆಂದರೆ
* ಅದು ಆ ಅನುವಾದಕನು ಆಸಕ್ತಿಯಿಂದ ಮಾಡುವುದು ಹಾಗು ಅದು ಬೇರೆ ಭಾಷೆಯಲ್ಲಿರುವ ಉತ್ತಮ ಕೃತಿಯಾಗಿರಬಹುದು ಆದರೆ ಪತ್ರಿಕೆಯಲ್ಲಿ ಹಾಗಲ್ಲ ಅದು ದಿನವೂ ನಡೆಯುವ ಕೆಲಸ ಹಾಗು ಆ ಅನುವಾದಕನು ಇಷ್ಟವಿಲ್ಲದೆಯೊ/ಇಷ್ಟವಿದೆಯೊ ಅದನ್ನು ಮಾಡಲೆಬೇಕಾಗುತ್ತದೆ. ಇಲ್ಲಿ ಅನುವಾದಕನ ಇಷ್ಟ/ಕಷ್ಟ ಗಳಿಗೆ ಬೆಲೆಯಿಲ್ಲ.
* ಆದರೆ ನಾವು ಚರ್ಚಿಸಬೇಕಾದುದು ಅನುವಾದ ಸಾಹಿತ್ಯದ 'ಪ್ರಮಾಣ' ಎಷ್ತಿರಬೇಕು ಎಂಬುದು. ಇದು ಅನುವಾದ ಸಾಹಿತ್ಯದಲ್ಲಿ ಪಳಗಿರುವವರಿಗೆ ನಾವು ಬಿಡಬೇಕು. ಅವರು ಚಿಂತಿಸಬೇಕಾದುದು ನಾವು ಒಳ್ಲೆಯ ಕೃತಿಗಳನ್ನ ಅನುವಾದ ಮಾಡಿತ್ತಿದ್ದೀವೆಯೊ ಅಥವಾ ಕೇವಲ ಸಾಮಾನ್ಯ ( ಅಥವಾ ಅದಕ್ಕಿಂತ ಕೆಳಮಟ್ಟದ್ದು) ಕೃತಿಗಳನ್ನ ಮಾಡುತ್ತಿದ್ದೀವೆಯೊ? ಇದು ಅನುವಾದಿತ ಕೃತಿಗಳ ಬಗ್ಗೆ ವಿಮರ್ಶೆ ಮಾಡಿದರೆ ತಿಳಿಯುತ್ತದೆ.
-ಜೈ ಕರ್ನಾಟಕ
Re: ಎಂಜಲು ದಿನಪತ್ರಿಕೆ ??
ಸಿಗೋಣ,
ಪವನಜ
-----------
ಹೌದು ಡಾ|ಪವನಜ,
ಯು ಆರ್ (ನಾಟ್)ಅನಂತಮೂರ್ತಿ; ಯು ಬಿ ಪವನಜ!
ಅಂದಹಾಗೆ ಪ್ರಸ್ತಾಪಿತ 'ಎಂಜಲು'ಪತ್ರಿಕೆಯಲ್ಲಿ ಈ ತರಹದ ಸುದ್ದಿಶೀರ್ಷಿಕೆ ತರ್ಜುಮೆಗೊಂಡು
"ಕುವೈಟ್ ಪವನಜ ಮಗುವಿಗೆ ೧೮ ವರ್ಷ ಉಚಿತ ವಿಮಾನಯಾನ" ಎಂದು ಬರಬಹುದೇ?
Re: ಎಂಜಲು ದಿನಪತ್ರಿಕೆ ??
ಅಂದಹಾಗೆ ಪ್ರಸ್ತಾಪಿತ 'ಎಂಜಲು'ಪತ್ರಿಕೆಯಲ್ಲಿ ಈ ತರಹದ ಸುದ್ದಿಶೀರ್ಷಿಕೆ ತರ್ಜುಮೆಗೊಂಡು
"ಕುವೈಟ್ ಪವನಜ ಮಗುವಿಗೆ ೧೮ ವರ್ಷ ಉಚಿತ ವಿಮಾನಯಾನ" ಎಂದು ಬರಬಹುದೇ?
ಹ್ಹ ಹ್ಹ! ಚೆನ್ನಾಗಿದೆ.
ತರಲೆ ಅನುವಾದಗಳ ಉದಾಹರಣೆಗೆ ಇಲ್ಲಿ ಕ್ಲಿಕ್ ಮಾಡಿ.
ಸಿಗೋಣ,
ಪವನಜ
-----------
Vishva Kannada Think globally, Act locally
Re: ಎಂಜಲು ದಿನಪತ್ರಿಕೆ ??
(punಡಿತೋತ್ತಮರ ಕ್ಷಮೆ ಕೋರಿ)
ಖಂಡಿತವಾಗಿಯೂ you are not Ananthamurthy, you be Pavanaja.
ಇಸ್ಮಾಯಿಲ್
ನನ್ನ ಬ್ಲಾಗ್: http://ismail.sampada.net
Re: ಎಂಜಲು ದಿನಪತ್ರಿಕೆ ??
ಇಸ್ಮಾಯಿಲ್ ಅವರಿಗೆ, ನಮಸ್ಕಾರ.
ಎಲ್ಲರಿಗೂ ಅರ್ಥವಾಗುವಂತೆ 'ಪನ್'ಅನ್ನು ಬಿಡಿಸಿ ಬರೆದದ್ದಕ್ಕೆ ತುಂಬಾ ಧನ್ಯವಾದಗಳು!
Re: ಎಂಜಲು ದಿನಪತ್ರಿಕೆ ??
ಪವನಜರೆ, ಬೇಸರಿಸದಿರಿ.
ನನ್ನದೂ ಇದೇ ಮಾತು. ನೀವು ಬರೆದುದಕ್ಕೆ ಬೆಲೆಯಿಲ್ಲ ಎಂದು ದಯವಿಟ್ಟು ತಿಳಿಯಬೇಡಿ.
ಮೇಲಿನ ಪ್ರತಿಕ್ರಿಯೆಯಲ್ಲಿ ನನ್ನ ಮುಖ್ಯ ಉದ್ಧೇಶ ಇದ್ದುದ್ದು, ಅನುವಾದಿತ ಪತ್ರಿಕೆಯನ್ನು ಎಂಜಲು ಪತ್ರಿಕೆಯೆನ್ನಬಹುದಾದರೆ, ಅನುವಾದಿತ ಸಾಹಿತ್ಯ ಮತ್ತು ಅದಕ್ಕೆಂದೇ ಇರುವ ಅನುವಾದ ಅಕಾಡೆಮಿಗಳನ್ನೂ ಕೂಡ ಎಂಜಲು ಪ್ರಾಡಕ್ಟುಗಳು ಎನ್ನಬಹುದೇ ಎಂಬುದಾಗಿ ಅಷ್ಟೇ.
Re: ಎಂಜಲು ದಿನಪತ್ರಿಕೆ ??
ಅನುವಾದ ಬೇಕು. ಆದರೆ ಅದಕ್ಕೆಂದೇ ಒಂದು ಅಕಾಡೆಮಿ ಬೇಕೋ ಎಂಬುದು ಗೊತ್ತಿಲ್ಲ. ನಾನು ಪ್ರಪಂಚದ ಕೆಲವು ಖ್ಯಾತ ಪುಸ್ತಕಗಳನ್ನು (ಉದಾ -ಮೆಟಾಮಾರ್ಫಾಸಿಸ್, ಹೆಂಚ್‌ಬ್ಯಾಕ್ ಆಫ್ ನೋಟ್ರಡಾಮ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಇತರೆ ಭಾಷೆಯ ಪುಸ್ತಗಳು, ...) ಅವುಗಳ ಕನ್ನಡಾನುವಾದದಲ್ಲೇ ಓದಿರುವುದು. ಅದೇ ರೀತಿ ಕನ್ನಡ ಬರದವರಿಗೆ ಕನ್ನಡದ ಉತ್ತಮ ಪುಸ್ತಗಳನ್ನು ಅನುವಾದಿಸಿ ಕೊಡಲೂ ಬೇಕು. ಕನ್ನಡ ವಿಜ್ಞಾನ ಸಾಹಿತ್ಯವನ್ನಂತೂ ಕೆಲವರು ಅನುವಾದ ಸಾಹಿತ್ಯ ಎಂದೇ ಕರೆಯುತ್ತಾರೆ (ಇದನ್ನು ನಾನು ಒಪ್ಪುವುದಿಲ್ಲ).
ಆದರೆ ಅನುವಾದ ಪತ್ರಿಕೆ? ಕನ್ನಡ ನಾಡಿನ ಸುದ್ದಿಗಳನ್ನು ಮೂಲ ಕನ್ನಡ ಭಾಷೆಯಲ್ಲೇ ತಯಾರಿಸಿದರೆ ಅದಕ್ಕೆ ರುಚಿ ಜಾಸ್ತಿ. ಟೈಂಸ್‌ನವರಿಗಂತೂ ಕನ್ನಡ ನಾಡಿನ ಆಗುಹೋಗುಗಳು ಸುದ್ದಿಯೇ ಅಲ್ಲ. ಜಿ.ವಿ. ಅಯ್ಯರ್ ಸತ್ತಾಗ ಟೈಂಸ್‌ನವರಿಗೆ ಮುಖ ಪುಟದ ಸುದ್ದಿ ಏನಿತ್ತು ಗೊತ್ತೆ? ಮುನಿಸಿಪಾಲಿಟಿಯವರು ಸೆರೆಹಿಡಿದ ನಾಯಿಗಳಿಗೆ ಸಸ್ಯಾಹಾರ ನೀಡುತ್ತಿದ್ದಾರೆ, ಇದು ಸರಿಯಲ್ಲ ಎಂಬ ಸುದ್ದಿ ಮುಖಪುಟದಲ್ಲಿ ಕೆಳಗಡೆ ಆರು ಕಾಲಂಗಳಲ್ಲಿತ್ತು! ಜಿ.ವಿ. ಅಯ್ಯರ್ ಬಗ್ಗೆ ಸುದ್ದಿ ಎಲ್ಲೋ ಒಳಪುಟದಲ್ಲಿತ್ತು. ಟೈಂಸ್‌ನವರಿಗೆ ಬ್ರಿಟ್ನಿ ಸ್ಪಿಯರ್, ಮಲ್ಲಿಕಾ ಶೆರಾವತ್ ಸುದ್ದಿಯಾಗುತ್ತಾರೆ. ಕನ್ನಡ ಸುದ್ದಿಯಾಗುವುದಿಲ್ಲ. ಅವರು ಕನ್ನಡದ ಜಾಯಮಾನಕ್ಕೆ ಒಗ್ಗದ ಸುದ್ದಿಗಳನ್ನು (?) ಹಾಗೆಯೇ ಕನ್ನಡಾನುವಾದ ಮಾಡಿ ಪತ್ರಿಕೆಯಲ್ಲಿ ಹಾಕುತ್ತಾರೊ ಎಂಬುದನ್ನು ಕಾದು ನೋಡಬೇಕಾಗಿದೆ.
ಸಿಗೋಣ,
ಪವನಜ
-----------
Vishva Kannada Think globally, Act locally
Re: ಪತ್ರಿಕೆಗೆ ಯಾವುದು ಸುದ್ದಿ?
೧೬.೧.೨೦೦೭ರ "Vijay Times" ವರದಿ ಹೀಗಿದೆ:
Rabid dog bites 3 kids Bannur: Three children were bitten by a rabid dog in Bannur town in Mysore district on Monday. Later, the enraged public chased the..
" ನಾಯಿ ಮನುಷ್ಯನನ್ನು ಕಡಿದರೆ ಸುದ್ದಿ ಅಲ್ಲ..ಮನುಷ್ಯ ನಾಯಿಯನ್ನು ಕಡಿದರೆ ಸುದ್ದಿ" ಎಂಬ ನಾಣ್ನುಡಿ ಈಗ ಸೂಕ್ತವಲ್ಲವೇ?
ಎಂಜಲು ಪತ್ರಿಕೆಯ ಕುರಿತು
ಪ್ರಿಯ ಸುನೀಲ್ ನೀವು ಪ್ರಸ್ತಾಪಿಸಿದ ಎಂಜಲು ಪತ್ರಿಕೆ, ಎಂಜಲು ಸಾಹಿತ್ಯಗಳ ಕುರಿತು ಅನಂತಮೂರ್ತಿಯವರೇ ಬರೆದ ಲೇಖನ 'ಭಾಷಾಂತರದ ಗಂಡಾಂತರ' ಇಲ್ಲಿದೆ. ಭಾಷಾಂತರದ ಒಳಿತುಗಳಂತೆಯೇ ಅಪಾಯಗಳನ್ನೂ ಅವರು ಈ ಲೇಖನದಲ್ಲಿ ಗುರುತಿಸಿದ್ದಾರೆ.
ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net
Re: ನಮಗೆ ರಿಮೇಕ್ ಪತ್ರಿಕೆ ಬೇಕೇ? : ಇದನ್ನು ಹೀಗೂ ನೋಡಬಹುದೇ? HSR
ಕನ್ನಡದ ಓದುಗರು ಇಂಗ್ಲಿಷ್ ನಿಂದ ಅನುವಾದಿತವಾದ ದಿನಪತ್ರಿಕೆಯನ್ನು ಓದಬೇಕೆಂದಾಗ ಬೇಸರವಾಗುವುದು ಸಹಜ. ಆದರೆ ಈ ಕೆಲವು ವಿಷಯಗಳನ್ನು ಕುರಿತು ಆಲೋಚಿಸೋಣ.
೧. ದೇಶ-ವಿದೇಶಗಳ ವಾರ್ತೆಯನ್ನು ಸಂಗ್ರಹಿಸಲು ಮತ್ತು ಅವುಗಳ ವಿಶ್ಲೇಷಣೆ ಮಾಡಿಸಿ ಲೇಖನ ಬರೆಸಲು ಅಗತ್ಯವಾದ ಸಂಪನ್ಮೂಲಗಳು ಕನ್ನಡ ಪತ್ರಿಕೆಗಳಿಗೆ ಇದ್ದಂತೆ ತೋರುವುದಿಲ್ಲ.
೨. ಕಾರಣ ಏನೇ ಇರಲಿ, ಕನ್ನಡ ಪತ್ರಿಕೆಗಳಲ್ಲಿ ಇಂಥ ಗಂಭೀರ ಬರೆಹಗಳು ಕಡಿಮೆಯಾಗುತ್ತಿವೆ. ಐ.ಏ.ಎಸ್., ಕೆ.ಏ.ಎಸ್. ಮುಂತಾದ ಪರೀಕ್ಷೆಗಳನ್ನು ತೆಗೆದುಕೊಳ್ಳುವ ನನ್ನ ವಿದ್ಯಾರ್ಥಿಗಳು ಪಡುವ ಪಾಡನ್ನು ನಾನೇ ನೋಡಿದ್ದೇನೆ. ಅಲ್ಲಿ ಅಪರಾಧ, ಹುಸಿ ಮನರಂಜನೆ ಮತ್ತು ಪ್ರಚಾರ ರೂಪದ ಬರಹಗಳನ್ನು ಓದಿ ನಿಟ್ಟುಸಿರು ಬಿಟ್ಟಿದ್ದೇನೆ.
೩. ಈಗ ಕನ್ನಡದಲ್ಲಿ ಬರುತ್ತಿರುವ ಅನ್ಯದೇಶೀಯವಾದ ಮಾಹಿತಿಗಳು ಕೂಡ, ಇಂಗ್ಲಿಷ್ ಪತ್ರಿಕೆಗಳು ಮತ್ತು ಇಂಟರ್ ನೆಟ್ ನಲ್ಲಿ ದೊರೆಯುವ ಮಾಹಿತಿಗಳ ಸಂಗ್ರಹಿತವಾದ ಅನುವಾದವೇ ಆಗಿರುತ್ತದೆ.
೪. `ಟೈಮ್ಸ್ ಆಫ್ ಇಂಡಿಯಾ' ಮತ್ತು `ದಿ ಹಿಂದೂ'ಗಳು ಸೇರಿದಂತೆ ಎಲ್ಲ ಪತ್ರಿಕೆಗಳೂ ಬೆಂಗಳೂರು ಆವೃತ್ತಿಯನ್ನು ಪ್ರಕಟಿಸುತ್ತಿವೆ .
೫. ಇತರ ಇಂಗ್ಲಿಷ್ ಪತ್ರಿಕೆಗಳ ಬಗ್ಗೆ ನಾನು ಏನೂ ಹೇಳಲಾರೆ. ಆದರೆ, ಹಿಂದೂ ಪತ್ರಿಕೆಯಲ್ಲಿ ಬರುವ ಎಲ್ಲ ಸುದ್ದಿ ಮತ್ತು ವಿಶ್ಲೇಷಣೆಗಳು ಕೇವಲ ಕನ್ನಡ ಬರುವ ಓದುಗರಿಗೆ ದೊರೆತರೆ, ಬಹಳ ಅನುಕೂಲವಾಗುವುದೆಂದು ನನ್ನ ಗ್ರಹಿಕೆ.
೬. ನಾವು ಸಂಬಂಧಪಟ್ಟವರ ಮೇಲೆ ಒತ್ತಡ ತಂದು ಅನುವಾದಿತ ಪತ್ರಿಕೆಯಲ್ಲಿ ಕನ್ನಡ ಸಂಸ್ಕೃತಿಗೆ ಮೀಸಲಾದ, ಅನುವಾದವಲ್ಲದ ಕೆಲವು ಪುಟಗಳು ಇರಬೇಕೆಂದು ಒಪ್ಪಿಸಬಹುದು.
೭. ಇಂಥ ಪೈಪೋಟಿಯಿಂದ ಕನ್ನಡ ಪತ್ರಿಕೆಗಳ ಮಟ್ಟವೂ ಹೆಚ್ಚಬಹುದು. ಆದರೆ ಅವುಗಳಿಗೆ ಧಕ್ಕೆ ಬರದಂತೆ ನೋಡಕೊಳ್ಳುವ ಹೊಣೆಯು ನಮ್ಮದೂ ಹೌದು.
೮. ಈ ವಿಷಯದ ಬಗ್ಗೆ ಇರಬಹುದಾದ ಸೂಕ್ಷ್ಮಗಳನ್ನು ಸಂಪದದಲ್ಲಿಯೇ ಪತ್ರಿಕೋದ್ಯಮದ ಮಿತ್ರರು ಮತ್ತು ಮಾಧ್ಯಮಗಳ ವಿದ್ಯಾರ್ಥಿಗಳು ನೀಡಿದರೆ ಚೆನ್ನಾಗಿರುತ್ತದೆ.
S.Raghavendra Rao
Re: ನಮಗೆ ರಿಮೇಕ್ ಪತ್ರಿಕೆ ಬೇಕೇ? : ಇದನ್ನು ಹೀಗೂ ನೋಡಬಹುದೇ? HSR
HINDU ಅಂತಹ ಪತ್ರಿಕೆ ಕನ್ನಡದಲ್ಲಿ ಲಭ್ಯವಾದರೆ ಪ್ರಯೋಜನವಾಗಬಹುದು ಎನ್ನುವುದನ್ನು ಒಪ್ಪಬಹುದು.ಆದರೆ ಈಗ ಲಭ್ಯವಾಗಲಿರುವುದು TOI.
ಇಂತಹ ಪತ್ರಿಕೆಯನ್ನು ನಮ್ಮಲ್ಲೆಷ್ಟು ಜನ ತರಿಸಬಹುದು? ತರಲೆ ಅನುವಾದಗಳನ್ನು ಓದಿ ಖುಷಿ ಪಡಲು ಉಪಯೋಗಿಸಬಹುದು!
Re: ನಮಗೆ ರಿಮೇಕ್ ಪತ್ರಿಕೆ ಬೇಕೇ?
ರಿಮೇಕ್ ಪತ್ರಿಕೆ ನಮೆಗೆಲ್ಲರಿಗೂ ಬೇಡದಿರಬಹುದು, ಆದರೆ ಬೆನೆಟ್ ಎಂಡ್ ಕೋಲ್-ಮನ್ ಸಂಸ್ಥೆಗೆ ಬೇಕೆನ್ನಿಸುತ್ತಿದೆ - ಕರ್ನಾಟಕದ ಇನ್ನಷ್ಟು ಕನ್ನಡ ದಿನಪತ್ರಿಕೆ ಓದುಗರನ್ನು ತನ್ನತ್ತ ಸೆಳೆಯಲು. ನೆನಪಿರಲಿ, ಕೆಲವೇ ವರ್ಷಗಳ ಹಿಂದೆ ಡೆಕ್ಕನ್ ಹೆರಾಲ್ಡ್ ಕರ್ನಾಟಕದ ಕಿಂಗ್ ಆಗಿತ್ತು. ಈಗ ಅದು ಸಾಯುತ್ತಿದೆ. ಟೈಮ್ಸ್ ಆಫ್ ಇಂಡಿಯಾದ ಬೆಂಗಳೂರು ಆವೃತ್ತಿ ಎಲ್ಲಾ ತರಹದ ಆ(ಕಪ)ಟಗಳನ್ನು ಆಡಿ ಈಗ ಕರ್ನಾಟಕದ ನಂಬರ್ ಒನ್ ಆಂಗ್ಲ ದೈನಿಕ. ಈಗ ಬೆನೆಟ್ ಎಂಡ್ ಕೋಲ್-ಮನ್ ಕರ್ನಾಟಕದ ಉಳಿದ ಕನ್ನಡ ದಿನಪತ್ರಿಕೆಗಳನ್ನು ಮಲಗಿಸಲು ಹೊರಟಿದೆ.
ತನ್ನ ಸುಪರ್ದಿಯಲ್ಲಿರುವ ಉಶಾ ಕಿರಣದೊಂದಿಗೆ ಹೇಗೆ ಬೇಕಾದರೂ ಪ್ರಯೋಗ ಮಾಡುವ ಅಧಿಕಾರ ಬೆನೆಟ್ ಎಂಡ್ ಕೋಲ್-ಮನ್ ಗೆ ಇದೆ. ಆಂಗ್ಲ ಪತ್ರಿಕೆ ಓದುಗರು ಟೈಮ್ಸ್ ಆಫ್ ಇಂಡಿಯಾವನ್ನು ಸ್ವೀಕರಿಸಿದರು ಎಂಬ ಮಾತ್ರಕ್ಕೆ, ಕನ್ನಡ ದಿನಪತ್ರಿಕೆ ಓದುಗರು ಅದರ ನಕಲನ್ನು ಸ್ವೀಕರಿಸಬೇಕೆಂದಿಲ್ಲವಲ್ಲ. ಈಗಲೂ ಅಂಗ್ಲ ದಿನಪತ್ರಿಕೆಗಳು ಸುದ್ದಿಯನ್ನು ವಿವರ ಮಾಡುವ ಶೈಲಿಗೆ ಮತ್ತು ಕನ್ನಡ ದಿನಪತ್ರಿಕೆಗಳು ಸುದ್ದಿ ವಿವರಿಸುವ ಶೈಲಿಗೆ ಅಜಗಜಾಂತರ ವ್ಯತ್ಯಾಸವಿದೆ.
Re: ನಮಗೆ ರಿಮೇಕ್ ಪತ್ರಿಕೆ ಬೇಕೇ?
TOI ಓದುಗರು ಅಲ್ಲ. ನೋಡುಗರು ಎಂದಾಗಬೇಕು
ಸಿಗೋಣ,
ಪವನಜ
-----------
Vishva Kannada Think globally, Act locally
Re: ನಮಗೆ ರಿಮೇಕ್ ಪತ್ರಿಕೆ ಬೇಕೇ?
ಹ್ಹ ಹ್ಹ ... ಸರಿಯಾದ ಮಾತು.
ಪ್ರಥಮ ಸಂಚಿಕೆ ಹೇಗೆ ಬಂದಿದೆ? ಅಭಿಪ್ರಾಯ ತಿಳಿಸಿ.
ಇಂದು TOI ಕನ್ನಡ ಅವತರಣಿಕೆ(ಅವತಾರ) ಬಿಡುಗಡೆಯಾಗಿದೆ. ನೋಡಿದಿರಾ? ಹೇಗಿದೆ? ಕನ್ನಡದ ಛಾಪು ಇದೆಯೇ?