Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವಿಜ್ಞಾನ ಸಾಹಿತ್ಯ

ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ

January 31, 2007 - 9:58pm — Sunil Jayaprakash

"ಕನ್ನಡದಲ್ಲಿ ಪದಗಳು ಇಲ್ಲ ಅಂತ" ಹೇಳುವ ಅಭಾವದ ಅರಿವಿದೆಯಲ್ಲ, ಅದು ಬಹಳ ತಪ್ಪು, ನಮ್ಮಲ್ಲಿರುವ ಒಳ್ಳೆಯದನ್ನ assess ಮಾಡಬೇಕು. ಕನ್ನಡದಲ್ಲಿ ಬೇಕಾದಷ್ಟು ಪದಗಳು ವಿಜ್ಞಾನಕ್ಕೆ ಸಂಬಂಧಸಿದ ಪದಗಳಿವೆ ಪ್ರಾಚೀನ ಕನ್ನಡದಲ್ಲಿ, ಕನ್ನಡದ ಕಾವ್ಯಗಳಲ್ಲಿ. ಅದನ್ನು ಆರಿಸಿ ಬಳಸಿಕೊಳ್ಳೋದಿದೆಯಲ್ಲಾ (ಉದಾ - ಕಿಣ್ವ = enzyme, ಕಿಣ್ವನ = fermentation)……., ಅವುಗಳನ್ನ ಹೆಕ್ಕಿ ತೆಗೆಯಬೇಕು..............ಅದಕ್ಕೆ ಬಹಳ ದೊಡ್ಡ ಪದಶಕ್ತಿ ಬೇಕಾಗುತ್ತ, ಭಾಷೆ ಕೂಡ ಸಮರ್ಥವಾಗಬೇಕಾಗುತ್ತೆ. ಆ ದಿಕ್ಕಿನಲ್ಲಿ ಕೆಲಸ ಮಾಡುವ ಸಮರ್ಥರು ಬಹಳ ಜನ ಇದ್ದಾರೆ. ಅದರಲ್ಲೂ, ಯುವಪೀಳಿಗೆ ತುಂಬಾ ಬುದ್ಧಿವಂತ ಪೀಳಿಗೆ, ನಮ್ಮೆಲರಿಗಿಂತ ತುಂಬಾ ಬುದ್ಧಿವಂತ ಪೀಳಿಗೆ. ಮುಂದೆ ಬಂದು ಮಾಡೇ ಮಾಡ್ತಾರೆ, ಯಾವುದೇ ಭಾಷೆ ತನ್ನ ಸತ್ವ ಕಳೆದುಕೊಂಡು ಸಾಯಲ್ರಿ, ನಮ್ಮ ನಿರಭಿಮಾನ ಮಾತ್ರವೇ ಭಾಷೆಯನ್ನು ಕೊಲ್ಲಬೇಕೇ ಹೊರತು.....

- ಇದು ನನಗೆ ಅತ್ಯಂತ ಸಂತೋಷವನ್ನುಂಟು ಮಾಡಿದ, ಪದೇ ಪದೇ ಕೇಳಿಸಿಕೊಳ್ಳಬೇಕೆನಿಸುವ ನಿಸಾರ ಅಹ್ಮದರ ಪಾಡ್ಕಾಸ್ಟಿನಲ್ಲಿರುವ ನುಡಿಮುತ್ತುಗಳು.

ನಾನೂ ಕೂಡ ಒಬ್ಬ ಬುದ್ಧಿವಂತ ( Eye-wink ಕಣ್ಣುಹೊಡೆಯುತ್ತಾ ) ಯುವಕ ಎಂಬ ಮಾತನ್ನು ನನಗೆ ನಾನೇ ಹೇಳಿಕೊಳ್ಳುತ್ತಾ (ಏಕೆಂದರೆ, ಆತ್ಮವಿಶ್ವಾಸವಿದ್ದರಲ್ಲವೇ ಮುನ್ನಡೆಯುವುದಕ್ಕಾಗೋದು) , ಕನ್ನಡದ ಬಗೆಗಿನ ನನ್ನ ಓದು, ಆಲೋಚನೆಗಳ ಲಹರಿಯನ್ನು ಇತರರಿಗೆ ಹಂಚಿಕೊಳ್ಳುವುದನ್ನು ನಿಲ್ಲಿಸುವುದು ಬೇಡ ಎಂದುಕೊಳ್ಳುತ್ತಾ ಈ ಬ್ಲಾಗು.

ಕನ್ನಡದಲ್ಲಿ ಈವರೆಗಿನ ಅತಿ ಹಳೆಯ ಉಪಲಬ್ಧ ಕಾವ್ಯ, ಕವಿರಾಜಮಾರ್ಗ. ಕನ್ನಡದ ಬಗ್ಗೆ ಆತನಾಡಿರುವ ಮಾತುಗಳು ನಿಜಕ್ಕೂ ತುಂಬಾ ಸ್ಫೂರ್ತಿಯನ್ನೊದಗಿಸುತ್ತವೆ. ಅಂದ ಹಾಗೆ, ಅದರಲ್ಲಿ ಬರುವ ವ್ಯಾಕರಣ ಇತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳುವುದರಿಂದ ನನಗೆ ಸದ್ಯಕ್ಕೆ ಅನ್ನವಂತೂ ಸಿಗುವುದಿಲ್ಲ. ಆದರೆ ಅವುಗಳಿಂದ ಕೆಲವು ಅತ್ಯುನ್ನತ ವಿಚಾರಗಳು ತಿಳಿಯುತ್ತವೆ.

ಅದರಲ್ಲಿ ಪ್ರಸ್ತಾಪವಾಗಿರುವ ಧ್ವನ್ಯಾಲಂಕಾರ - ಸಂಸ್ಕೃತದಲ್ಲಿಯೇ ಇರದಿದ್ದ ಒಂದು ಕಾವ್ಯಾಲಂಕಾರದ ಪ್ರಭೇದ ಕನ್ನಡದಲ್ಲಿ ಇತ್ತು ಎಂಬ ಅಂಶ ತಿಳಿದಾಗ ಎಷ್ಟು ಸಂತೋಷವಾಯಿತು ಗೊತ್ತೇ. ಆಡಳಿತಾತ್ಮಕವಾಗಿ ಕನ್ನಡವಿತ್ತೋ ಇಲ್ಲವೋ, ಆದರೆ ಸಾಹಿತ್ಯಿಕವಾಗಿ ಕನ್ನಡವು ಸಂಸ್ಕೃತಕ್ಕೆ ಸಮಕಾಲೀನವಾಗಿಯೇ ಬೆಳೆದು ಬಂದಿದೆ ಎಂದು ಹೆಮ್ಮೆ ಪಡಬಹುದು. ಸಾಮವೇದದಲ್ಲಿ ಸಂಗೀತ ಬರುತ್ತದೆಯಾದರೂ, ಆ ಸಂಗೀತಕ್ಕೆ ಕಾವ್ಯದ (ಅಥವಾ ಕಾವ್ಯಕ್ಕೆ ಸಂಗೀತದ) ಸ್ಪರ್ಶವನ್ನು ಕನ್ನಡಿಗರು ನೀಡಿದ್ದಾರೆ ಎಂದು ತಿಳಿದು ಹೆಮ್ಮೆ ಪಡಬಹುದಲ್ಲವೇ ? ಈ ಸಂತೋಷವನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ.

ಪ್ರತಿಯೊಬ್ಬರಿಗೂ ಸಾಹಿತ್ಯ, ಕಾವ್ಯಗಳಲ್ಲಿ ಆಸಕ್ತಿಯಿರಲೇಬೇಕು, ಅವುಗಳನ್ನು ಓದಲೇಬೇಕು ಎಂಬುದು ದುರಹಂಕಾರದ ಮಾತಾಗುತ್ತದೆ (ಅಂದ ಹಾಗೆ ನಾನು ವೇದಗಳನ್ನೇ ಆಗಲೀ, ಸಾಹಿತ್ಯವನ್ನೇ ಆಗಲೀ ಯಾವುದನ್ನೂ ಅಭ್ಯಸಿಸಿಲ್ಲ, ಮತ್ತೆ Laughing out loud). ಅವರವರ ಅಭಿರುಚಿ ಬೇರೆ ಬೇರೆಯಿರುತ್ತದೆಯೆಂಬುದನ್ನು ಗೌರವಿಸಬೇಕಷ್ಟೇ.

ಆದರೆ ಕನ್ನಡಿಗರು ಸ್ವಂತಿಕೆಯುಳ್ಳವರು ಎಂಬ ಒಂದು ವಾಕ್ಯವನ್ನು ತಿಳಿದುಕೊಂಡಿರುವುದರಲ್ಲಿ ಯಾವ ತಪ್ಪೂ ಇಲ್ಲವೇ ?

ನೀನು ಯಾರು ? ನಾನು ಸ್ವಂತಿಕೆಯನ್ನು ರೂಢಿಸಿಕೊಂಡಿರುವ ಒಬ್ಬ ಕನ್ನಡಿಗ.
ಅದು ಹೇಗೆ ? ಎಂಬ ಪ್ರಶ್ನೆ ಬಂದಾಗ, ನಮಗಿಂತ ಹೆಚ್ಚು ತಿಳಿದ ಹಿರಿಯರು ಉತ್ತರ ನೀಡುತ್ತಾರೆ ಬಿಡಿ.

ಸರಿ ಗುರು, ಎಲ್ಲಾ ಓಕೆ, ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಅಂತಲೇ ನಿಮ್ಮ ಪ್ರಶ್ನೆ ? Eye-wink

ನೋಡಿ ಗೆಳೆಯರೇ, ನಾನು ಇತ್ತೀಚೆಗೆ ಕವಿರಾಜಮಾರ್ಗವನ್ನು ಓದುತ್ತಿದ್ದೇನೆ. ತುಂಬಾ ಒಳ್ಳೆಯ ಆಲೋಚನೆಗಳು ಸಿಕ್ಕುತ್ತಾ ಸಾಗಿವೆ. ಈಗ್ಗೆ ಕೆಲವು ದಿನಗಳ ಹಿಂದೆ, ನಮ್ಮ ದನಿ ಎಂಬ ಪ್ರತಿಕ್ರಿಯೆಯಲ್ಲಿ, ನನಗೆ ನಗು ತರಿಸಿದ ಒಂದು ವಿಚಾರ ಇದೆ ಎಂದು ಹೇಳಿದ್ದೆ. ಮುಂಗಾರು ಮಳೆ ಚಿತ್ರದಲ್ಲಿ, ಆ ಪ್ರೀತಮ್ "ಈ ಮುಂಗಾರು ಮಳೆ, ಈ ನಿಮ್ಮ ಮುಖ, ಆ ವಾಚು, ಆ ದೇವ್‌ದಾಸು, ಜೊತೆಗೆ ಈ local made ನೀರಾ ಎಲ್ಲಾ ಒಟ್ಟಿಗೆ ನನ್ನ ತಲೇಲಿ ಸೇರ್ಕೋಂಡು ........." ಅಂತ ಹೇಳ್ತಾನಲ್ಲ ಹಾಗೆಯೇ ಆಗಿದೆ ನನ್ನ ಪರಿಸ್ಥಿತಿ. ಆದರೆ ಒಂದೇ ವ್ಯತ್ಯಾಸವೆಂದರೆ, ಅಲ್ಲಿ ಅವನು ದುಃಖದಲ್ಲಿದ್ದರೂ ಸಂತೋಷದಿಂದಿರುವ ಪ್ರಯತ್ನ ಮಾಡುತ್ತಾನೆ, ಆದರೆ ನಾನು ಸದಾ ಆನಂದವೇ ಬ್ರಹ್ಮ ಎಂಬುದನ್ನು ನಂಬುತ್ತೇನೆ. "ನಿಸಾರ್ ಅಹ್ಮದರ ಪಾಡ್‌ಕ್ಯಾಸ್ಟ್, ಸಂಪದದಲ್ಲಿ ನಡೆಯುತ್ತಿರುವ ಚರ್ಚೆಗಳು, ಸಿಗುವ ಸ್ವಲ್ಪವೇ ಸಮಯದಲ್ಲಿನ ನನ್ನ ಓದು, ನನ್ನ ಹುಡುಕಾಟ, ನನ್ನ ಆಲೋಚನೆಗಳು" ಎಲ್ಲವೂ ನನ್ನನ್ನು ಯಾವಾಗಲೂ ಆನಂದದ ಸ್ಧಿತಿಯಲ್ಲಿಟ್ಟಿದೆ.

ನೋಡಿ, ಕವಿರಾಜಮಾರ್ಗದಲ್ಲಿ ನನಗೆ ಆನಂದವನ್ನುಂಟು ಮಾಡಿದ ಅನೇಕ ಪದ್ಯಗಳಲ್ಲಿ ಇದೂ ಒಂದು.
೧ ಪರಿಚ್ಛೇದ, ೬೩ನೇ ಪದ್ಯ. ಪದ್ಯದ ಅನ್ವಯಾರ್ಥವನ್ನು ಹಾಕಿದ್ದೇನೆ, ಪದ್ಯವನ್ನು ಹಾಕಿಲ್ಲ.

ನಿಲ್, ತೋಳಂ ಬರ್ಪುದು, ಸಯ್ತಲ್ತು, ಊರುಂ ದೂರಂ
ಎನ್, ಎಡೆತುಡಗರ್‌ಪೂರಂ, ಕಲ್ತು ಉಲ್ಲಿಂದೆ ಓಡುವಂ,
ಎಂಬ ಅಲ್ತು, ತಂದ ಕೂಳಂ ಊ ಸಂಗಮದೊಳ್ ಉಣ್ಣಿಂ.

(ನಿಲ್ಲು, ತೋಳ ಬರುತ್ತಿದೆ, ನಮ್ಮ ಪಾಡು ನೆಟ್ಟಗಿಲ್ಲ, ಊರು ಕೂಡ ದೂರ, ದಾರಿಯಲ್ಲಿ ಕಳ್ಳರು ಹೆಚ್ಚಾಗಿದ್ದಾರೆ; ಎಲ್ಲಿಗಾದರು(ಉಲ್ಲಿ ಪದ ಪ್ರಯೋಗ ಗಮನಿಸಿ) ಓಡಿಹೋಗೋಣ ಎಂದರೆ ಕಷ್ಟವು; ತಂದಿರುವ ಊಟವನ್ನು(ಕೂಳಂ) ಯಾವುದಾದರು(ಊ ಪದ ಪ್ರಯೋಗ ಗಮನಿಸಿ, ಆ ನದಿ, ಈ ನದಿ ಎನ್ನುವ ಹಾಗೆ ಊ ನದಿ) ನದಿಯ ಸಂಗಮದಲ್ಲಿ ಉಣ್ಣಿರಿ.)

ದಯವಿಟ್ಟು, ಈ ಪದ್ಯದ ವ್ಯಾಕರಣ, ಅಲಂಕಾರಗಳನ್ನು ಕೇಳಬೇಡಿ, ನನಗೆ ಗೊತ್ತಿಲ್ಲ, ಗೊತ್ತಿದ್ದರೂ, ನನ್ನ ಆನಂದಕ್ಕೆ ವ್ಯಾಕರಣ ಕಾರಣವಲ್ಲ. ನಿಮಗೆ ಯಾರಿಗಾದರು ಇದರ ವ್ಯಾಕರಣ ಆನಂದವನ್ನುಂಟು ಮಾಡಿದ್ದರೆ, ಖಂಡಿತವಾಗಿಯೂ ಬರೆಯಿರಿ. ಅದು ತಪ್ಪಲ್ಲ. ಆದರೆ ನನಗೆ ಸಂತೋಷವನ್ನುಂಟು ಮಾಡಿದ್ದು, ಇಲ್ಲಿ ಪ್ರಯೋಗವಾಗಿರುವ ಉಲ್ಲಿ ಎಂಬ ಪದ. ಉಲ್ಲಿ ಅಂದರೆ ಏನು ಗೊತ್ತೇ ?

ಅಲ್ಲಿಯೂ ಅಲ್ಲದ್ದು, ಇಲ್ಲಿಯೂ ಇಲ್ಲದ್ದು. ಅಂದರೆ ಇದೆ ಎಂದು ಖಚಿತವಾಗಿ ಬೊಟ್ಟು ಮಾಡಿ ತೋರಲು ಸಾಧ್ಯವಿಲ್ಲದಂಥದ್ದು

ನೋಡಿ, ಎಷ್ಟೋ ದಿನಗಳಿಂದ, ನಾನು Random ಎನ್ನುವುದಕ್ಕೆ ಕನ್ನಡದಲ್ಲಿ ಏನು ಹೇಳಬಹುದು ಅಂತಲೇ ಯೋಚಿಸುತ್ತಿದ್ದೆ. "ಯಾದೃಚ್ಛಿಕ" ಎಂಬ ಕಷ್ಟವಾದ ಸಂಸ್ಕೃತ ಪದವೇನೋ kn.wikipedia.orgನಲ್ಲಿ ಬಳಕೆಯಾಗಿದೆ. ಆದರೆ ಕೃತಕವಲ್ಲದ್ದೂ ಸರಳದ್ದೂ ಆದ ಕನ್ನಡ ಪದವೇ ಇದ್ದರೆ ಚೆನ್ನ ಎಂದು ಅನಿಸದೇ ಇರುವುದಿಲ್ಲ. ಹಾಂ, ಸರಳ ಎನ್ನುವಾಗ ನಾವು ತುಂಬಾ ಜಾಗರೂಕರಾಗಿರಬೇಕು. ಅಪರಿಚಿತವಾದ ಮಾತ್ರಕ್ಕೆ ಕಷ್ಟ ಎಂಬ ಯಾವ ಅರ್ಥ ಯಾವುದೂ ಇಲ್ಲ. ಇಂಗ್ಲೀಷಿನಲ್ಲಿ ಮೊನ್ನೆ ಮೊನ್ನೆಯವರೆಗೆ (ಮೊನ್ನೆ ಅಂದರೆ ಮೊನ್ನೆಯಲ್ಲ, ಬಹಿರ್ಮುಖ ಚಹರೆಯ ಕಾಲ Eye-wink ಸುಮಾರು ೫-೬ ವರ್ಷವಾದರೂ ಅದನ್ನು ಮೊನ್ನೆ ಮೊನ್ನೆ ಅಂತ ಹೇಳಬಹುದು) ತಿಳಿಯದೇ ಇದ್ದ ajax ಎನ್ನುವ ಪದವನ್ನು ತಂತ್ರಜ್ಞರು ಬರಮಾಡಿಕೊಳ್ಳಲಿಲ್ಲವೇ. Ajaxನಿಂದ ajaxify, ajaxified ತಂತಾನೇ ಬರುತ್ತದೆ. ಮೊದಲ ದಿನ ಅಪರಿಚಿತ, ಎರಡನೆಯ ದಿನ ಸರಳ ಇಷ್ಟೇ. ಇದನ್ನು ಶಿಷ್ಟಜನಸಾಮಾನ್ಯರಾದ ನಾವು ಅರ್ಥಮಾಡಿಕೊಳ್ಳಬೇಕು.

ಈಗ ಉಲ್ಲಿಯ ವಿಷಯಕ್ಕೆ ಬರೋಣ. ಉಲ್ಲಿ ಎಂದರೆ ಇದೇ ಎಂದು ಬೊಟ್ಟು ಮಾಡಿ ತೋರಿಸಲಾಗದ ಜಾಗ. ಇದಕ್ಕೆ ತ ಸೇರಿಸಿದರೆ ಉಲ್ಲಿತ. ಹಾಗೆಯೇ ಗಮನಿಸಿದರೆ, ಮಾಡುವುದು, ಹೇಳುವುದು, ಕೇಳುವುದು ಪದಗಳಲ್ಲಿರುವ ಉದು ಎಂಬ ಪದದಿಂದ ಉದಿತ ಎಂಬ ಪದ ಹುಟ್ಟುತ್ತದೆ.

ಉದಿತ, ಉಲ್ಲಿತ ಪದಗಳು ಕುಣಿತ, ನಡೆತ, ಮರೆತ, ವಿಕಸಿತ, ವಿಸ್ಮಿತ ಮುಂತಾದ ಕನ್ನಡ ಪದಗಳಿಗೆ ಎಷ್ಟು ಹತ್ತಿರವಾಗಿದೆ ಎನಿಸುವುದಿಲ್ಲವೇ ?

Random ಆಗಿ ಬಂದದ್ದು = ಯಾದೃಚ್ಛಿಕವಾದದ್ದು = ಉಲ್ಲಿತವಾದದ್ದು ಅಥವಾ ಉದಿತವಾದದ್ದು random, ಯಾದೃಚ್ಛಿಕ, ಉಲ್ಲಿತ ಉದಿತಇವುಗಳಲ್ಲಿ ಯಾವುದು ಕಷ್ಟ ಎಂಬ ತೀರ್ಮಾನವನ್ನು ನಿಮಗೇ ಬಿಟ್ಟು ಬಿಡುತ್ತೇನೆ. ಕನ್ನಡಿಗರಿಗೆ ಎಲ್ಲವೂ ಅಪರಿಚಿತವೇ. ಆದರೆ ಯಾವುದು ಸರಳ, ಕನ್ನಡದ್ದು, ಕನ್ನಡದ ಸೊಗಡಿರುವಂಥದ್ದು ಎಂಬುದನ್ನು ನೀವುಗಳೇ ಹೇಳಿರಿ ?

‹ ಇದು ವಿಜ್ಞಾನ ಸ್ವಾಮಿ ! ವಿಗ್ನಾನವಲ್ಲ!
  • ವಿಜ್ಞಾನ ಸಾಹಿತ್ಯ
Ornamental seperator
  • Login or register to post comments
  • 1395 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 31, 2007 - 10:12pm — Sunil Jayaprakash

ಕನ್ನಡದ ಆಂತರಿಕ ಅವಶ್ಯಕತೆ

Sunil Jayaprakash's picture

Most Importantly (ಬಹುಮುಖ್ಯವಾಗಿ), ಈ ಉಲ್ಲಿತ, ಉದಿತ ಎಂಬ ಪದಗಳು ನನ್ನ ಸಂಶೋಧನೆಯಲ್ಲ, ಕನ್ನಡ ಕಾವ್ಯದಿಂದ ಹಾಗು ದಿನನಿತ್ಯ(ಉದು ಎಂಬ ಪದವನ್ನು ಏನಿಲ್ಲ ಎಂದೆರೂ ಮಾತನಾಡುವಾಗೆಲ್ಲ ಬಳಸುತ್ತೇವೆ. ಮಾಡುವುದು, ಹೇಳುವುದು, ಕೇಳುವುದು, ಆಡುವುದು, ಸೆಳೆಯುವುದು, ಹಾಡುವುದು, ಬೊಗಳುವುದು) ಬಳಕೆಯಿಂದ ಹೊರಬಂದದ್ದು, ಅದೂ ಕವಿರಾಜಮಾರ್ಗದಿಂದ. ಇದನ್ನು ಬಹುಶಃ ಕನ್ನಡವೇ ಸೃಷ್ಟಿಸಿಕೊಂಡಿರುವ ಆಂತರಿಕ ಅವಶ್ಯಕತೆಯೆಂದು ತಿಳಿಯಿರಿ. ಭಾಷೆಯನ್ನು ಬೆಳೆಸದೆ ಭಾಷೆಯನ್ನು ಉಳಿಸಲು ಸಾಧ್ಯವೇ ಇಲ್ಲ. ಸಂಪದದಲ್ಲಿ ಇರುವ ಕನ್ನಡದ ಮೇಷ್ಟ್ರಗಳು ಮುಂದಿನ ದಿನಗಳಲ್ಲಿ ಇದರ ಬಗ್ಗೆ ಹೆಚ್ಚು ತಿಳಿಸಿಕೊಡಬಹುದು. ನಿರೀಕ್ಷಿಸೋಣ. ನಿಂತ ನೀರಾದ ಯಾವುದೇ ವಸ್ತುವಾದರೂ ಕೂಡ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಕೊಳೆಯುತ್ತದೆ. ನನಗಂತೂ ಕನ್ನಡವು ನಿಂತ ನೀರಾಗುವುದು
ಇಷ್ಟವಿಲ್ಲ. ಕನ್ನಡದ ಆಳ ಹೆಚ್ಚಾಗಬೇಕು, ತಂತ್ರಜ್ಞಾನ ಮತ್ತು ಸೃಜನಶೀಲತೆ ಒಟ್ಟಾಗಬೇಕು. ಹಾಗಂತ ನಾನು ಹೇಳಿದ್ದೆಲ್ಲ ಸರಿಯೆಂದು ಒಪ್ಪಿಕೊಳ್ಳಿ ಎಂದು ಎಲ್ಲಿಯೂ ನಾನು ಹೇಳುತ್ತಿಲ್ಲ.

ಏನೇ ಆಗಲಿ, ಕನ್ನಡವು ಅಗಾಧ ಸಂಪತ್ತುಳ್ಳ ಭಾಷೆ ಎಂಬ ನನ್ನ ನಂಬಿಕೆಗೆ ಮತ್ತಷ್ಟು ಬಲ ಬಂದಿದೆ. ಇಂತಹ ಸಂಪತ್ತನ್ನು ನಮಗೆ ಬಿಟ್ಟುಹೋದ "ಶ್ರೀವಿಜಯ", ನಿನಗೆ ಹ್ಯಾಟ್ಸ್ ಆಫ್, ತಲೆಬಾಗಿ ನಮಸ್ಕರಿಸುತ್ತೇನೆ ಕಣಯ್ಯಾ ನಿನಗೆ. ಏಕವಚನ ಸಂಬೋಧನೆ ಅಂತ ಬೇಸರಿಸಬೇಡ. ತುಂಬಾ ಹತ್ತಿರದವರೊಡನೆ ಹೀಗೆಯೇ ಮಾತನಾಡಬೇಕಂತೆ. ಅಥವಾ ನೀನು ನಮಸ್ಕಾರಗಳನ್ನು ಸ್ವೀಕರಿಸುವುದಿಲ್ಲವಾದರೆ, ಹೆಮ್ಮೆಯಿಂದ ಎದೆಗಪ್ಪಿಕೊಳ್ಳುತ್ತೇನೆ. ತುಂಬಾ ತುಂಬಾ ಸಂತೋಷವಾಯಿತು. ಸವಿಯೊದಗು, ನನ್ನಿ, ಧನ್ಯವಾದಂಗಳು.

  • Login or register to post comments
  • link
  • Email this ಪ್ರತಿಕ್ರಿಯೆ
January 31, 2007 - 10:18pm — Sunil Jayaprakash

ಆನಂದವೇ ಬ್ರಹ್ಮ

Sunil Jayaprakash's picture

ಅಂದ ಹಾಗೆ, ನಾನು ಪಂಡಿತನಲ್ಲ, ನಾನು ಕನ್ನಡ ಕಾವ್ಯಗಳನ್ನು ಓದಿಲ್ಲ. ಏನೋ ಒಂದೆರೆಡು ಪುಸ್ತಕಗಳ ಒಂದಿಷ್ಟು ಪುಟಗಳನ್ನು ಓದಿರಬಹುದು ಅಷ್ಟೇ. ಆದರೆ ನನ್ನ ಉದ್ದೇಶ ಇಷ್ಟೇ, ಪ್ರಾಚೀನ ಕನ್ನಡ ಕಾವ್ಯಗಳಲ್ಲಿರಬಹುದಾದ ಸಂಪತ್ತನ್ನು ಈಗಿನ ಕಾಲಕ್ಕೆ ಪ್ರಸ್ತುತವಾಗಿಸಬಹುದೇ ? ತಂತ್ರಜ್ಞಾನಕ್ಕೆ ಸೃಜನಶೀಲತೆಯ ಸೋಂಕು ತಗುಲಿಸಬಹುದೇ ? ಇವುಗಳಿಗೆ ಉತ್ತರ ಕಂಡುಕೊಳ್ಳುವ ಉತ್ಸಾಹ. ನನ್ನ ಮಟ್ಟಿಗೆ ಕನ್ನಡವು ಅಗಾಧ ಸಂಪತ್ತುಳ್ಳ ಭಾಷೆ. ಕನ್ನಡದಲ್ಲಿಯೇ ಆಲೋಚಿಸಿ, ನಾನು ಕಂಡುಕೊಂಡ ಈ ಸಂಪತ್ತು ಎಲ್ಲರಿಗೂ ಸಿಗಲಿ ಎಂಬ ಸದುದ್ದೇಶದಿಂದ ಹಂಚಿಕೊಳ್ಳುತ್ತಿದ್ದೇನೆ. ನನ್ನ ಆಲೋಚನೆಗಳು ಯಾರಿಗೂ ಹೊರೆಯಾಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ

ನನಗಂತೂ ಈ ಉಲ್ಲಿತ, ಉದಿತ ಪದಗಳನ್ನು ಊಹಿಸಿಕೊಂಡಂದಿನಿಂದ ತುಂಬಾ ಸಂತೋಷವಾಗಿದೆ. ನನ್ನ ಈ ಆನಂದದಲ್ಲಿ ನಿಮಗೂ ಭಾಗಿಯಾಗಬೇಕೆನಿಸಿದರೆ, ನೀವೂ ಭಾಗಿಯಾಗಿ, ಆನಂದ ಮತ್ತಷ್ಟು ಹೆಚ್ಚಾಗುತ್ತದೆ. ಏನಾದರೂ ಪ್ರತಿಕ್ರಿಯಿಸಬೇಕೆಂದುಕೊಂಡರೆ, ಯಾವುದೇ ಅಳುಕಿಲ್ಲದೆ ಪ್ರತಿಕ್ರಿಯಿಸಿ, ಮತ್ತೂ ಸಂತೋಷವಾಗುತ್ತದೆ. ಸಂಪದದಲ್ಲಿರಬಹುದಾದ ಪಂಡಿತರು, ಕನ್ನಡದ ಮೇಷ್ಟ್ರುಗಳು ಏನಾದರೂ ಪ್ರತಿಕ್ರಿಯಿಸಿದರೆ ಮತ್ತೂ ಹೆಚ್ಚು ಸಂತೋಷವಾಗುತ್ತದೆ. ತಂತ್ರಜ್ಞರು, ಸೃಜನಶೀಲರು ಎಲ್ಲರೂ ಒಟ್ಟಾಗಿ ಕನ್ನಡಕ್ಕಾಗಿ ದುಡಿಯೋಣ. ಜೈ ಕನ್ನಡ.

ಕನ್ನಡದಲಿ ಹರಿ ಬರೆಯುವನು, ಕನ್ನಡದಲಿ ಹರ ತಿರಿಯುವನು, ಕನ್ನಡದಲ್ಲಿಯೇ ಬಿನ್ನಹಗೈದೊಡೆ ಹರಿ ವರಗಳ ಮಳೆ ತಾ ಕರೆಯುವನು.

ಬಹುಶಃ ನಾನು ಶಾಲಾ ಕಾಲೇಜುಗಳಲ್ಲಿ ಕವಿರಾಜಮಾರ್ಗವನ್ನು ಓದಿದ್ದರೆ, ಅವುಗಳಲ್ಲಿ ಅಡಕವಾಗಿರಬಹುದಾದ ರಸಗಳನ್ನು ಹೀರಿಕೊಳ್ಳಲು ಸಾಧ್ಯವಾಗುತ್ತಿತ್ತೋ ಇಲ್ಲವೋ ತಿಳಿಯದು, ಆದರೆ ಈಗಂತೂ ಅದನ್ನು ಹಿಡಿದುಕೊಂಡು ಕುಳಿತರೆ, ಪ್ರಸ್ತುತ ಸಮಾಜದ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಾ ಹೋಗುತ್ತಿದೆ. ಸಮಯಹೋಗುವುದೇ ತಿಳಿಯುವುದಿಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
April 11, 2007 - 8:37pm — Khavi

Re: ಆನಂದವೇ ಬ್ರಹ್ಮ

Khavi's picture

ಶಹಬ್ಬಾಶ್ ಸುನೀಲ, ಬೊಂಬಾಟ್ ಕೆಲಸ ಮಾಡ್ತಾ ಇದೀರಾ!!!
ನಿಮ್ಮ ವಿಚಾರಧಾರೆಯನ್ನ ಮೆಚ್ಚಿದೆ. ಹೀಗೆಯೆ ಮುಂದುವರೆಸಿ.
ನಾನು ಈ ತರಹದ ಎಳೆಯನ್ನ ಓದುತ್ತಾ ಇರುತ್ತೇನೆ. ಆದರೆ.. ಮಾರುತ್ತರ ನೀಡಲು ಸಮಯದ ಅಭಾವ ಕಾಡ್ತಾ ಇದೆ...
ನಾನೂ ಕೂಡ ಮೊದಮೊದಲು "ಕಡತ" ಅನ್ನೋ ಶಬ್ದವನ್ನು ಬಳಸಲು ಸರಿಯನ್ನಿಸುತ್ತಿರಲಿಲ್ಲ ಆದರೆ.. ಈಗ ಆ ಶಬ್ದವೇ ನನಗೆ ಇಷ್ಟ ಆಗ್ತಾಇದೆ...
ಆದ್ದರಿಂದ.... ಸುಂದರವಾಗಿರುವ, ಸರಳವಾಗಿರುವ.. (ನಮಗೆ ಈಗ ಬಳಕೆಯಲ್ಲಿರದೇ ಇದ್ದರೂ ಪರವಾಗಿಲ್ಲ) ಕನ್ನಡವೇ ಆದ ಪದಗಳು ಬಳಕೆಗೆ ಬಂದರೆ ತಪ್ಪೇನಿಲ್ಲ..

- ವಿನಾಯಕ.

  • Login or register to post comments
  • link
  • Email this ಪ್ರತಿಕ್ರಿಯೆ
February 1, 2007 - 11:52am — ವೈಭವ

Re: ಕನ್ನಡದ ಆಂತರಿಕ ಅವಶ್ಯಕತೆ

ವೈಭವ's picture

ಸುನಿಲ್ ರವರೆ,

  ಸಕತ್ತಾಗಿದೆ... ನಿಮ್ಮ ವಿಚಾರ ಮತ್ತು ವಾದ. ಇಂಗ್ಲಿಷ್ ಹಾಗು ಇತರ ಭಾಷೆಗಳ ಎಷ್ಟೊ ಪದಗಳನ್ನು ನಾವು ಸ್ವೀಕರಿಸಿ ಬಳಸುತ್ತಿರುವಾಗ ಹಳೆಗನ್ನಡದಲ್ಲಿರುವ ಪದಗಳು ಸುಲಭವಾಗಿದ್ದರೆ ಏಕೆ ಬಳಸಬಾರದು ಎಂಬ ವಾದ ಇಷ್ಟವಾಯಿತು.

ಉದಾ: guy ಅನ್ನೊ ಇಂಗ್ಲಿಷ್ ಪದ ನನಗೆ ಗೊತ್ತಾಗಿದ್ದು ನಾನು ಕೆಲಸಕ್ಕೆ ಸೇರಿದ ಮೇಲೆ...ಅಂದಮೇಲೆ ನಾವು ಪದ ಯಾವುದೇ ಆಗಿರಲಿ ಅದು ಸುಲಭವಾಗಿದ್ದರೆ ಅದು ಯಾವ ಹಂತದಲ್ಲಿ ಕಲಿತರು ಅದನ್ನು ಬಳಸುತ್ತೇವೆ.

ನಾವು ಇನ್ನು ಬಳಕೆಯಲ್ಲಿರುವ, ಗ್ರಾಮ್ಯವಲ್ಲದ ಪದಗಳನ್ನು ಮಾತ್ರ ಬಳಸಬೇಕು ಎಂಬುದು ಅಷ್ಟು ಸಮಂಜಸವಲ್ಲ

-ಜೈ ಕರ್ನಾಟಕ

  • Login or register to post comments
  • link
  • Email this ಪ್ರತಿಕ್ರಿಯೆ
January 31, 2007 - 11:08pm — H.S.R.Raghavend...

Re: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ

H.S.R.Raghavendra Rao's picture

ಆತ್ಮೀಯರಾದ ಸುನೀಲ್ ಅವರೇ,

ಕನ್ನಡ ಭಾಷೆ, ವ್ಯಾಕರಣ ಮತ್ತು ಸಾಹಿತ್ಯಗಳ ಬಗ್ಗೆ ನಿಮ್ಮ ಆಸಕ್ತಿಯು, ಆ ಭಾಷೆಯನ್ನು ಕಲಿತಿದ್ದೇವೆ, ಕಲಿಸುತ್ತಿದ್ದೇವೆ ಎಂದು ಹೇಳುತ್ತಿರುವವರು ನಾಚಿಕೊಳ್ಳುವಂತಿದೆ. ನಿಮ್ಮ ಊಹೆಗಳು ಮತ್ತು ತಿಳಿವಳಿಕೆಯು ಗಂಭೀರವಾದ ಪ್ರತಿಕ್ರಿಯೆಗಳನ್ನು ಬಯಸುತ್ತವೆ.

ನಿಮಗೆ ಸಿಗುವುದಾದರೆ, ಶ್ರೀಯುತ ಕೆ.ವಿ.ಸುಬ್ಬಣ್ಣನವರ "ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು" ಎಂಬ ಪುಸ್ತಕವನ್ನು ಓದಿ. ಅದು ನಿಮಗೆ ಬಹಳ, ಬಹಳ ಇಷ್ಟವಾಗುತ್ತದೆ. ಪ್ರೀತಿಯೊಂದಿಗೆ,

ಎಚ್.ಎಸ್.ಆರ್.

 

H.S.Raghavendra Rao

  • Login or register to post comments
  • link
  • Email this ಪ್ರತಿಕ್ರಿಯೆ
February 1, 2007 - 3:00am — hpn

ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ

hpn's picture

ಸುನೀಲ,

ನಿನಗೂ, ಈ "ಯಾದೃಚ್ಛಿಕ" ಪದಕ್ಕೂ ಅದ್ಯಾವ ಜನ್ಮದ ದುಷ್ಮನಿ ತಿಳಿಯದು. Sticking out tongue

ವಿಕಿಪೀಡಿಯದಲ್ಲಿ ಆಗ ಇದ್ದ ಕೇವಲ ಇಬ್ಬರೋ ಮೂರ್ವರೋ ನಾವುಗಳು ಚರ್ಚಿಸಿ, random ಅನ್ನೋದನ್ನ ಕನ್ನಡದಲ್ಲಿ ಯೂನಿಕೋಡಿನಲ್ಲಿ ಟೈಪಿಸಲಾಗದೆ (ವಿಂಡೋಸ್ ನಲ್ಲಿ ರ್ಯಾಂಡಮ್ ಆಗಿಬಿಡತ್ತೆ) ಟೈಪಿಸಿದರೂ ಬೇರೆಯವರಿಗೆ ಓದಲಿಕ್ಕಾಗದೆಂಬ ಕಾರಣಕ್ಕಾಗಿ ಕನ್ನಡ ಕಸ್ತೂರಿ ಡಿಕ್ಷನರಿಯ ಮೊರೆ ಹೋದೆವು.

Randomಗೆ ಅಲ್ಲಿದ್ದ ಪದ "ಯಾದೃಚ್ಛಿಕ".

ಹೀಗೊಬ್ಬ ಸಂಸ್ಕೃತ ಪದ ಕಂಡರೆ ಬುಸುಗುಡುವ ಸ್ನೇಹಿತ ಕಾಣಿಸಿಕೊಳ್ತಾನೆ - ಅವ ಹೀಗೆಲ್ಲಾ ರಾದ್ದಾಂತ ಮಾಡ್ತಾನೆ ಅಂತ ಗೊತ್ತಿದ್ರೆ ನಿನಗೇ ಅದಕ್ಕೊಂದು ಪದ ಹುಡುಕಿಬಿಡುವ ಜವಾಬ್ದಾರಿ ಹೊತ್ತಿಸಿಬಿಡುತ್ತಿದ್ದೆವು Eye-wink
ಆದರೆ ನೀನು ಆಗ ಸುತ್ತ ಇರಲಿಲ್ವೇ.

ಈಗಿನಂತೆ ನನಗೆ 'ಯಾದೃಚ್ಛಿಕ', 'ಉದಿತ' ಪದಗಳ ಮಧ್ಯೆ ಯಾವುದೇ difference ಕಾಣುತ್ತಿಲ್ಲ. ಒಂದು ಸಂಸ್ಕೃತದ extreme ಆದರೆ ಇನ್ನೊಂದು ಹಳೆಗನ್ನಡದ extreme. ಇವೆರಡೂ "ಸಾಮಾನ್ಯ ಕನ್ನಡಿಗ"ನಿಗೆ ಅರ್ಥವಾಗೋದಿಲ್ಲ. ಈಗಲೂ ನನಗೆ random ಅನ್ನೋದನ್ನ ಕನ್ನಡದಲ್ಲಿ ಹಾಗೆಯೇ ಬರೆಯೋದು ಸರಿಯಾದ ಪರಿಹಾರ ಅನ್ಸತ್ತೆ - ಆದರೆ ರ್ಯಾಂಡಮ್ ಸಮಸ್ಯೆ ಇನ್ನೂ ಮೈಕ್ರೊಸಾಫ್ಟು ಸರಿಪಡಿಸಿಲ್ಲದರ ಕಾರಣ* ಈಗಲೂ ಬಳಸಲಾಗೋದಿಲ್ಲ.

ಸಾಮಾನ್ಯ ಕನ್ನಡಿಗನಿಗೆ ಓದಿದ ಕೂಡಲೆ "random" ಎಂದು ಅರ್ಥೈಸುವಂತಹ ಪದವಿದ್ದರೆ ತಿಳಿಸಿ, ಕೂಡಲೇ ಹೋಗಿ ವಿಕಿಪೀಡಿಯದಲ್ಲಿ ಬದಲಾಯಿಸುವೆ. Smiling

* - ವಿಸ್ಟಾದಲ್ಲಿ ಸರಿಪಡಿಸಲಾಗಿದೆಯಂತೆ. ಆದರೆ ಮತ್ತೆ ಹಳೇ problemಉ. ಎಲ್ಲರ ಬಳೀನೂ ವಿಸ್ಟ ಇಲ್ಲ,
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
February 1, 2007 - 12:01pm — Sunil Jayaprakash

ದಿನವೂ ಬಳಸುವ ಪದ ಹಳೆಗನ್ನಡ ಹೇಗಾಗುವುದು ?

Sunil Jayaprakash's picture

hpn wrote:
ವಿಕಿಪೀಡಿಯದಲ್ಲಿ ಆಗ ಇದ್ದ ಕೇವಲ ಇಬ್ಬರೋ ಮೂರ್ವರೋ ನಾವುಗಳು ಚರ್ಚಿಸಿ,

ಹರಿ, ಬಹಳ ಸಂತೋಷ. ನಿನ್ನ ಸಮಸ್ಯೆ ಅರ್ಥವಾಗುತ್ತದೆ ನನಗೆ. ನೀವುಗಳು ಚರ್ಚೆ ಮಾಡಿಯೇ ತಾನೇ ಹಾಕಿರುವುದು. ನನಗೆ ವಿಕಿಪೀಡಿಯಾದ ಬಗ್ಗೆಯಾಗಲೀ, ಯಾದೃಚ್ಛಿಕ ಪದದ ಮೇಲಾಗಲೀ ಯಾವುದೇ ದ್ವೇಷ, ದುಷ್ಮನಿಯಿಲ್ಲ. ಒಂದು ವೇಳೆ ವರ್ಷಗಳ ಹಿಂದೆ, ನನಗೇ ಆ ಕೆಲಸ ಕೊಟ್ಟಿದ್ದರೆ, ಆ ಹೊತ್ತಿನಲ್ಲಿ ನನಗೂ ಯಾವುದೇ ಪದ ಹೊಳೆಯುತ್ತಿತ್ತೋ ಇಲ್ಲವೋ ತಿಳಿಯದು. ಏಕೆಂದರೆ ಆಗ ನಾನು ಕವಿರಾಜಮಾರ್ಗವನ್ನು ಓದಿರಲಿಲ್ಲ.

hpn wrote:
ಹೀಗೊಬ್ಬ ಸಂಸ್ಕೃತ ಪದ ಕಂಡರೆ ಬುಸುಗುಡುವ ಸ್ನೇಹಿತ ಕಾಣಿಸಿಕೊಳ್ತಾನೆ - ಅವ ಹೀಗೆಲ್ಲಾ ರಾದ್ದಾಂತ ಮಾಡ್ತಾನೆ ಅಂತ ಗೊತ್ತಿದ್ರೆ ನಿನಗೇ ಅದಕ್ಕೊಂದು ಪದ ಹುಡುಕಿಬಿಡುವ ಜವಾಬ್ದಾರಿ ಹೊತ್ತಿಸಿಬಿಡುತ್ತಿದ್ದೆವು. ಆದರೆ ನೀನು ಆಗ ಸುತ್ತ ಇರಲಿಲ್ವೇ.

ಹರಿ, ಇದೇ ನಾನು ಬೇಡವೆನ್ನುವುದು. ನಾನು ಸಂಸ್ಕೃತ ದ್ವೇಷಿಯಲ್ಲ ಎಂದು ಈಗಾಗಲೇ ಅನೇಕ ಕಡೆ ಹೇಳಿರುವೆ. ಅಲ್ಲ, ಕನ್ನಡ ಪ್ರೇಮಿಯಾದ ಮಾತ್ರಕ್ಕೆ ಸಂಸ್ಕೃತದ ದ್ವೇಷಿ ಎಂಬ ನಿಯಮವೇನಾದರೂ ಇದೆಯೇ ? ಎಂತಹ ಸಂಸ್ಕೃತವನ್ನು ಕನ್ನಡಿಗರು ಬಳಸಬೇಕು, ಎಂಥದ್ದನ್ನು ಬಿಡಬೇಕು ಎಂಬುದರ ಬಗ್ಗೆ ಕವಿರಾಜಮಾರ್ಗದಲ್ಲಿ ವಿವರಣೆಯಿದೆ, ಓದಿ ನೋಡು. ಸುಮ್ಮನೆ ನನ್ನನ್ನು ಸಂಸ್ಕೃತ ದ್ವೇಷಿಯೆನ್ನಬೇಡ

ಗೆಳೆಯರೇ,
ಈ ಇಡೀ ಪುಟದ ತಿರುಳಿರುವುದು ನನ್ನ ಕನ್ನಡದ ಓದು, ಹೇಗೆ ನನ್ನ ಆಲೋಚನೆಗಳಿಗೆ ಸಹಾಯ ಮಾಡುತ್ತದೆ ಎಂಬುದಾಗಿ. ಅಲ್ಲ ನಿಸಾರ ಅಹ್ಮದ್, ಕನ್ನಡ ಕಾವ್ಯಗಳ ಪ್ರಸ್ತಾಪ ಮಾಡಿ, ಅದರಲ್ಲಿ ಅನೇಕ ಪದಗಳಿವೆ, ಹೆಕ್ಕಿ ತೆಗೆಯಬೇಕು ಎಂದು ಹೇಳುವುದನ್ನು ಉತ್ಸಾಹದಿಂದ ಟೈಪಿಸಿ, ಖುಷಿಯಿಂದ ಪ್ರಕಟಿಸಿ, ಆನಂದದಿಂದ ಕೇಳಿಸಿ, ಚಪ್ಪಾಳೆ ತಟ್ಟುವ ನಾವು, ಅದೇ ಕೆಲಸವನ್ನು ಯಾರಾದರೂ ಸ್ವಾರ್ಥವಿಲ್ಲದೆ ಮಾಡಿದರೆ ವ್ಯಂಗ್ಯವಾಗಿ ಕಟುಕುವುದೇಕೆ ?. ಹಾಗಾದರೆ, ನಿಸಾರ ಅಹ್ಮದರ ಪಾಡ್ಕಾಸ್ಟಿನಲ್ಲಿರುವುದು (ಉದು ಪದ ಇದೆ ಇದರಲ್ಲಿ) ಬೂಟಾಟಿಕೆಯೇ ? ಅಷ್ಟಕ್ಕೂ ನಾನು ವಿಕಿಪೀಡಿಯಾದಿಂದ ಯಾದೃಚ್ಛಿಕ ಎಂಬ ಪದವನ್ನು ಹೋಗಿಸಲೇಬೇಕು ಎಂದು ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕನ್ನಡ ಪದವನ್ನು ಹುಡುತ್ತಿರಲಿಲ್ಲ. ನಾನು ಅಕಸ್ಮಾತ್ ಕವಿರಾಜಮಾರ್ಗವನ್ನು ಓದುವಾಗ ಅದೃಷ್ಟವಶಾತ್ ಸಿಕ್ಕ ಒಂದು ಪದವನ್ನು ಯಾವ ರೀತಯಲ್ಲಿ ಬಳಸಲು ಸಾಧ್ಯ ಎಂಬುದರ ಕುರಿತು ಚರ್ಚಿಸಬಯಸಿದ್ದೇನೆ. ಎಲ್ಲರೂ ಅರ್ಥಮಾಡಿಕೊಳ್ಳಬೇಕಾದ್ದು, ನಾನು ಪ್ರಾರಂಭಿಸಿರುವುದು ಚರ್ಚೆಯನ್ನು. ಕುಕ್ಕುಟ ಉದ್ಯಮ, ಸಿದ್ಧ ಸ್ಮೃತಿ ಕೋಶ ಎನ್ನುವಂತಹ ದೊಡ್ಡ ದೊಡ್ಡ ಘೇಂಡಾಮೃಗದಂತಹ ಸಂಸ್ಕೃತ ಪದವನ್ನು ಯಾರ ಮೇಲೂ ಬಲವಂತವಾಗಿ ಯಾವುದನ್ನೂ ಹೇರುತ್ತಿಲ್ಲ

ಒಂದು ವೇಳೆ, ಕನ್ನಡ ಸಂಸ್ಕೃತ ಇಂಗ್ಲೀಷ್ ದ್ವೇಷ, ಪ್ರೀತಿ ಇವುಗಳನ್ನು ಕುರಿತು ವ್ಯಂಗ್ಯವಾಗಿ ಚರ್ಚೆ ಮಾಡಲು ಇಷ್ಟವಿದ್ದರೆ ಬೇರೆ ಎಳೆಯಲ್ಲಿ ಮಾಡೋಣ. ಈ ಎಳೆಯಲ್ಲಿ ಯಾದೃಚ್ಛಿಕ, random, ಉಲ್ಲಿ, ಉದುಗಳನ್ನು ಕುರಿತ ಚರ್ಚೆಗಳಾಗಲಿ, ವೈಯಕ್ತಿಕ ವ್ಯಂಗ್ಯಗಳು ಬೇಡ

hpn wrote:
ಸಂಸ್ಕೃತದ extreme ಆದರೆ ಇನ್ನೊಂದು ಹಳೆಗನ್ನಡದ extreme......ಈಗಲೂ ನನಗೆ random ಅನ್ನೋದನ್ನ ಕನ್ನಡದಲ್ಲಿ ಹಾಗೆಯೇ ಬರೆಯೋದು ಸರಿಯಾದ ಪರಿಹಾರ ಅನ್ಸತ್ತೆ

ಹರಿ, ಇದು ನಿನ್ನ ವೈಯಕ್ತಿಕ ಅನಿಸಿಕೆ. ಆದರೆ ಈ ಮಾತನ್ನು ನಾನು ಖಂಡಿತ ಒಪ್ಪುವುದಿಲ್ಲ. ನಿನಗೆ(ಅಥವಾ ಯಾರಿಗೇ ಆದರೂ) ತಿಳಿದಿರದಿದ್ದ ಮಾತ್ರಕ್ಕೆ ಅಥವಾ ಹೊಸತಾದ ಮಾತ್ರಕ್ಕೆ ಯಾವುದೂ extreme ಅಥವಾ ಕಷ್ಟವಾಗುವುದಿಲ್ಲ (ಇದರಲ್ಲೂ ಉದು ಇದೆ).

ಗೆಳೆಯರೇ,
೧. ಉದು ಪದ ಹಳೆಗನ್ನಡವಲ್ಲ. ನಾನು ಬರೆದ ಟಿಪ್ಪಣಿಯಲ್ಲಿ ನೀಡಿರುವ ಬಳಕೆಗಳನ್ನು ಓದಿ ನೋಡಿ. ಮಾಡುವುದು, ಕೇಳುವುದು, ಹಾಡುವುದು, ಬೊಗಳುವುದು, ಬರೆಯುವುದು, ನುಡಿಯುವುದು, ಕತ್ತರಿಸುವುದು, ಹೋಗುವುದು, ಬರುವುದು, ಓದುವುದು, ಕೀಳುವುದು, ಅಳುವುದು, ನಗುವುದು, ಬಯ್ಯುವುದು, ಅಣಕಿಸುವುದು, ಆಡುವುದು, ಮರೆಯುವುದು - ಇವು ನಾವು ದಿನನಿತ್ಯ ಬಳಸುವ ಪದಗಳು. ಮಾಡು + ಉದು, ಕೇಳು + ಉದು.......ಹೀಗೆ. ಇಲ್ಲಿ ಯಾವುದೇ extreme ಇಲ್ಲ. ವ್ಯಾಕರಣದ ಯಾವುದೇ ಬ್ರಹ್ಮಜ್ಞಾನವೂ ಬೇಕಿಲ್ಲ.
೨. ಸರಿ, ಒಂದು ವೇಳೆ extremeಗಳೇ ಎಂದು ತಿಳಿಯೋಣ. ಎರಡು extremeಗಳ ಮಧ್ಯೆ ಆಯ್ಕೆ ಮಾಡಬೇಕಾಗಿ ಬಂದಾಗ ಕನ್ನಡಿಗರಾದ ನಾವು ಕನ್ನಡದ extremeಅನ್ನು ಆಯ್ಕೆ ಮಾಡಬೇಕೋ ಅಥವಾ ಬೇರೆ ಭಾಷೆಯ extrem'ಅನ್ನೋ. ಯಾದೃಚ್ಛಿಕ ಸರಳವೋ, ರ್ಯಾಂಡಮ್ ಸರಳವೋ, ಉದಿತ ಸರಳವೋ. ನಾನು ಅಂದೇ ಹೇಳಿದ್ದೆ ವೇದ ಕಲಿಯಲು ಸಂಸ್ಕೃತ, GRE ಬರೆಯಲು ಇಂಗ್ಲೀಷ್ ಕಲಿಯುವ ನಾವು ನಮ್ಮ ಭಾಷೆಯನ್ನು ಕಲಿಯುವುದು(ಮತೊಂದು ಉದು ಬಂದಿದೆ ನೋಡಿ, ಕಲಿಯುವುದು) ಯಾವಾಗ

Sunil Jayaprakash wrote:
random, ಯಾದೃಚ್ಛಿಕ, ಉಲ್ಲಿತ ಉದಿತ ಇವುಗಳಲ್ಲಿ ಯಾವುದು ಕಷ್ಟ ಎಂಬ ತೀರ್ಮಾನವನ್ನು ನಿಮಗೇ ಬಿಟ್ಟು ಬಿಡುತ್ತೇನೆ. ಕನ್ನಡಿಗರಿಗೆ ಎಲ್ಲವೂ ಅಪರಿಚಿತವೇ. ಆದರೆ ಯಾವುದು ಸರಳ, ಕನ್ನಡದ್ದು, ಕನ್ನಡದ ಸೊಗಡಿರುವಂಥದ್ದು ಎಂಬುದನ್ನು ನೀವುಗಳೇ ಹೇಳಿರಿ ?

ಗೆಳೆಯರೇ, ಎಲ್ಲರೂ ಸೇರಿ ಚರ್ಚಿಸೋಣ ಎಂಬ ಉದ್ದೇಶದಿಂದ ನಾನು ಉದಿತ, ಉಲ್ಲಿತಗಳ ಪ್ರಸ್ತಾಪ ಮಾಡಿರುವುದು. ಯಾವುದೇ ಬಲವಂತವಿಲ್ಲ. ಅಂದ ಹಾಗೆ, ಬಹಳ ಮುಖ್ಯವಾದದ್ದು, random ಎನ್ನುವುದು ಯಾವುದೇ ತಾಂತ್ರಿಕ ಪದವಲ್ಲ. ತಾಂತ್ರಿಕತೆಯು ಕನ್ನಡದ ಸಂಸ್ಕೃತಿಗೆ ಹೊಂದುವುದಿಲ್ಲ ಎನ್ನುವ ಸೃಜನಶೀಲರೂ ಕೂಡ ಈ ಚರ್ಚೆಯಲ್ಲಿ ಭಾಗವಹಿಸಬಹುದು.

hpn wrote:
ಸಾಮಾನ್ಯ ಕನ್ನಡಿಗನಿಗೆ ಓದಿದ ಕೂಡಲೆ "random" ಎಂದು ಅರ್ಥೈಸುವಂತಹ ಪದವಿದ್ದರೆ ತಿಳಿಸಿ, ಕೂಡಲೇ ಹೋಗಿ ವಿಕಿಪೀಡಿಯದಲ್ಲಿ ಬದಲಾಯಿಸುವೆ

ಹರಿ, ಹಿಂದೆಯೇ ಹಾಕಿದ್ದೇನೆ, ಕನ್ನಡಿಗರಿಗೆ ಎಲ್ಲವೂ ಅಪರಿಚಿತವೇ.

ಗೆಳೆಯರೆ, ಒಬ್ಬ ಸಾಮಾನ್ಯ ಕನ್ನಡಿಗನಿಗೆ ರ್ಯಾಂಡಮ್, ಉದಿತ, ಯಾದೃಚ್ಛಿಕ ಯಾವುದೂ ಓದಿದ ಕೂಡಲೇ ತಿಳಿಯುವುದಿಲ್ಲ. ಯಾವುದೂ ತಿಳಿಯದಿದ್ದಾಗ ಕನ್ನಡವನ್ನೇ ಬಳಸಲು ಹಿಂಜರಿಕೆಯೇಕೆ ?

ಗೆಳೆಯರೇ, ಬಹಳ ಮುಖ್ಯವಾಗಿ, ವಿಕಿಪೀಡಿಯಾದ ನಿರ್ವಾಹಕರುಗಳು ಇದನ್ನು ಬದಲಾಯಿಸುತ್ತಾರೋ ಇಲ್ಲವೋ ಪ್ರಶ್ನೆ ಬೇಡ. ಕನ್ನಡದಲ್ಲಿ randomised ಎನ್ನುವುದಕ್ಕೆ ಉದಿತ(ಅದು ಅಲ್ಲದ ಇದು ಅಲ್ಲದ ಸ್ಥಿತಿ), ಉಲ್ಲಿತ ಎಂದು ಹೇಳಬಹುದೇ ? ಕನ್ನಡವು ಯಾರೋ ಒಬ್ಬಿಬ್ಬರ ಸ್ವತ್ತಲ್ಲ. ಅಥವಾ ಎಸ್.ಎಮ್.ಕೃಷ್ಣರು ಒಮ್ಮೆ ರೈತರ ವಿಚಾರವಾಗಿ ಹೇಳಿದ ಹಾಗೆ, ಯಾರೋ ಒಬ್ಬಿಬ್ಬರು ಕನ್ನಡವನ್ನು ತಮ್ಮ ಜೋಬಿನಲ್ಲಿರಿಸಿಕೊಂಡಿಲ್ಲ. ಉದಿತ ತಪ್ಪು ಎಂದಾದರೆ ತಪ್ಪು ಎನ್ನಿ, ಯಾವುದೇ ಅಳುಕು, ಹಿಂಜರಿಕೆ, ಅಣಕ ಬೇಡ. ತಪ್ಪುಗಳಿಗೆ ಜೈ ಎಂದು ಓ.ಎಲ್.ಎನ್.ಸ್ವಾಮಿಗಳೇ ಒಮ್ಮೆ ಹೇಳಿದ್ದರು. ತಾಂತ್ರಿಕತೆಯಲ್ಲಿ zeal ಇರಬೇಕು ಎಂದು ಬಯಸುವ ತಂತ್ರಜ್ಞರು ತಪ್ಪಲ್ಲವಾದರೆ ಭಾಷೆಯ ವಿಷಯದಲ್ಲಿ zeal, passion ಇರಬೇಕು ಎಂದು ನಂಬುವ ಸೃಜನಶೀಲರೂ ತಪ್ಪಲ್ಲ. ಈ ಚರ್ಚೆಯು ಉದಿತ, ಯಾದೃಚ್ಛಿಕ, randomಗಳಿಗೆ ಸೀಮಿತವಾಗಿರಲಿ. ಆವೇಶ ಭರಿತವಾದ ವೈಯಕ್ತಿಕ ವ್ಯಂಗ್ಯದ ಮಾತುಗಳು ಈ ಎಳೆಯಲ್ಲಿ ಬೇಡ. ಸರಿ ಅಂದರೆ ಸರಿ, ಇಲ್ಲ ಅಂದರೆ ಇಲ್ಲ, ಅಷ್ಟೇ.

ಕೊನೆಯಲ್ಲಿ ಮತ್ತೊಮ್ಮೆ ಈ ರ್ಯಾಂಡಮ್, ಯಾದೃಚ್ಛಿಕ, ಉದಿತ ಇವುಗಳಲ್ಲಿ ಯಾವುದು ಸರಳ ?

  • Login or register to post comments
  • link
  • Email this ಪ್ರತಿಕ್ರಿಯೆ
February 1, 2007 - 1:31pm — hpn

ಉ: ದಿನವೂ ಬಳಸುವ ಪದ ಹಳೆಗನ್ನಡ ಹೇಗಾಗುವುದು ?

hpn's picture

ಈ ವಾದ-ವಿವಾದಗಳ ಸರಣಿ ಎಂದಿಗೂ ಮುಗಿಯೋದಿಲ್ಲ.

ಆದರೆ "ಉದಿತ" ಖಂಡಿತವಾಗಿಯೂ 'ದಿನವೂ ಬಳಸುವ ಪದ' ಅಲ್ಲ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
February 1, 2007 - 2:09pm — ಸಂಗನಗೌಡ

Re: ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ

ಸಂಗನಗೌಡ's picture

ಡಿಯರ್ HPN,

ನಾನು ಯಾದೃಚ್ಛಿಕ ಮತ್ತು ಉದಿತ ಈ ಎರಡೂ ಪದಗಳನ್ನು ಕೇಳಿಲ್ಲ. ಆದರೆ ಉದಿತ ಅಂದರೆ 'ಆ ಚಣ ಹುಟ್ಟಿದ್ದು' ಎಂಬುದು ನನ್ನ ಕಡಿಮೆ ಕನ್ನಡ ತಿಳುವಳಿಕೆಗೆ ನಿಲುಕುವಂತದು. ಒಬ್ಬ ಸಾಮಾನ್ಯ ಕನ್ನಡಿಗನಾಗಿ 'ಉದಿತ' ಒರೆಯನ್ನು ನಾನು ಒಪ್ಪುತ್ತೇನೆ, ಅದಕ್ಕೆ ನನ್ನ ಮತ(ವೋಟ್) ಇದೆ.

ಇತೀ,

ಸಂಗನಗೌಡ.

  • Login or register to post comments
  • link
  • Email this ಪ್ರತಿಕ್ರಿಯೆ
February 1, 2007 - 4:49pm — anivaasi

ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ

anivaasi's picture

"random" ಪದದ ಬಗೆಗಿನ ಈ ಚರ್ಚೆ ತುಂಬಾ ಸ್ವಾರಸ್ಯವಾಗಿದೆ. ಜತೆಗೆ ಅನುವಾದದ ಕಷ್ಟಗಳೂ ಕಾಣುತ್ತಿದೆ. ನನಗನ್ನಿಸಿದ ಒಂದೆರಡು ವಿಷಯಗಳನ್ನು ಹೇಳಲು ಇಷ್ಟಪಡುತ್ತೇನೆ. ಇದು ಈಗಾಗಲೇ ಚರ್ಚೆಯಾಗಿದ್ದರೆ ದಯವಿಟ್ಟು ಕ್ಷಮೆಯಿರಲಿ.
1) ಪದಗಳನ್ನು ಹುಡುಕುವಾಗ ಗಂಭೀರವಾಗಿ ಹುಡುಕವುದಷ್ಟೇ ಅಲ್ಲದೆ "ಹುಡುಗಾಟ"ವೂ ಬೇಕನಿಸುತ್ತದೆ. ಕಂಪ್ಯೂಟರ್ ಬಗ್ಗೆ ಈ ಕೆಲಸ ನಡೆಯುವಾಗಂತೂ ಹುಡುಗಾಟ ಅಗತ್ಯವೇನೋ. ಯಾಕೆಂದರೆ ಕಂಪ್ಯೂಟರಿನಲ್ಲಿ ಈವತ್ತು ಉಪಯೋಗಿಸೋ ತುಂಬಾ ಪದಗಳು ತಮಾಷೆಯಾಗಿ ಹುಟ್ಟಿದ್ದು. ಇಲ್ಲದಿದ್ದರೆ ಮೌಸ್ ಪದ ಹೇಗೆ ಬರುತ್ತಿತ್ತೋ! ಯುನಿಕ್ಸ್ ಪದ್ಧತಿಯಲ್ಲಂತೂ ತುಂಬಾ ಉದಾಹರಣೆಗಳಿವೆ. (ಕ್ಯಾಟ್, ಬಿಫ್ ಇತ್ಯಾದಿ) ಉದಾಹರಣೆಗೆ ದಕ್ಷಿಣ ಆಫ್ರಿಕದಲ್ಲಿ ಮೂರೂವರೆ ಇಂಚಿನ ಫ್ಲಾಪಿಗಳು ಬಂದಾಗ, ಅವುಗಳು ಫ್ಲಾಪಿಗಳಲ್ಲ, ಸ್ಟಿಫ್ಫಿಗಳು ಎಂದು ಕರೆಯುತ್ತಿದ್ದರೆಂದು ಕೇಳಿದ್ದೇನೆ. ಹಾಗೆ wireless ನಿರ್ತಂತು ಆಗುವ ಬದಲು ನರಹೀನ ಆದರೆ?
2) ಪದಗಳನ್ನು ಹುಡುಕುವಾಗ ಕನ್ನಡದ ಹಳೆಯ ಪ್ರಯೋಗಗಳನ್ನು ಹುಡುಕಿ ಅವುಗಳನ್ನು ಪುನರಜ್ಜೀವಗೊಳಿಸುವುದು ಸರಿಯೆ. ಆದರೆ ಸಂಸ್ಕೃತ/ಇಂಗ್ಲೀಷ್ ಎಂಬ ಎರಡೇ ದಿಕ್ಕಲ್ಲಿ ನೋಡುವುದಕ್ಕಿಂತ ಭಾರತದ ಇನ್ನಿತರ ಜೀವಂತ ಭಾಷೆಗಳಲ್ಲಿ ಏನಾಗುತ್ತಿದೆ ಎಂದು ನೋಡುವುದೂ ಉಪಯುಕ್ತವಾಗಬಲ್ಲುದು. ಬಹುಶ: ಹಿಂದಿಯೋ,ತೆಲುಗೋ,ತಮಿಳೋ ನುಡಿಗಳ‌ಲ್ಲಿ ನಾವು ಪಡೆಯಬಹುದಾದಂಥ ವಿಶಿಷ್ಟ ಪದಗಳು ಇರಬಹುದು. ಆ ಭಾಷೆಗಳ ಬಗ್ಗೆ ನನ್ನ ತಿಳುವಳಿಕೆ ತುಂಬಾ ಕಡಿಮೆ. ಗೊತ್ತಿರುವವರು ಹೇಳಬೇಕು. ಅಥವಾ ಕೊಡು/ಕೊಳ್ಳುವಿಕೆ ಈಗಾಗಲೇ ಆಗುತ್ತಿರಬಹುದು. ಹಿಂದೆ ಕಛೇರಿ, ಕಾನೂನು ಪದಗಳನ್ನು ಅರಗಿಸಿಕೊಂಡಿರುವ ನಮಗೆ ಈಗಲೂ ಅದು ಕಷ್ಟವಾಗಲಾರದು.

ಇನ್ನು randomಗೆ ನನ್ನ ಸಲಹೆಗಳು:
1. ಕುರುಡಾಯ್ಕೆ (ಕಣ್ಣು ಮುಚ್ಚಿ ಆರಿಸಿದ್ದು)
2. ಅನೂಹ್ಯ (ಊಹಿಸಲಸಾಧ್ಯವಾದ್ದು)
3. ಅಬದ್ಧ (ಯಾವ ವಿನ್ಯಾಸಕ್ಕೂ ಬದ್ಧವಲ್ಲದ್ದು)
4. ನಿಸೂತ್ರ (ಯಾವ ಸೂತ್ರಕ್ಕೂ ಬದ್ಧವಲ್ಲದ್ದು)

  • Login or register to post comments
  • link
  • Email this ಪ್ರತಿಕ್ರಿಯೆ
February 1, 2007 - 4:58pm — ismail

Re: ಉ: ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ

ismail's picture

ಅನಿವಾಸಿಯವರ ಮಾತಿಗೆ ನನ್ನ ಒಪ್ಪಿಗೆಯೂ ಇದೆ. ಅವರು ನೀಡಿರುವ ಪದಗಳಲ್ಲಿ ಒಂದನ್ನು ಆರಿಸಿಕೊಳ್ಳುವುದು ಇಲ್ಲವೇ 'Random' ಎಂಬುದರ ಫಂಕ್ಷನಾಲಿಟಿಯನ್ನು ನೋಡಿಕೊಂಡು ಪದವೊಂದನ್ನು ಇತರ ಭಾರತೀಯ ಭಾಷೆಗಳಿಂದ ಆಯ್ದುಕೊಳ್ಳೋಣ. ಕನ್ನಡ ಬೇಕೇ, ಸಂಸ್ಕೃತ ಬೇಕೇ, ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂದು ಚರ್ಚಿಸುತ್ತಾ ಹೊರಟರೆ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ತಮ್ಮ ತಮ್ಮ ವಾದಗಳನ್ನು ಸಮರ್ಥಿಸುತ್ತಾ ಸಾಗಬಹುದು. ಅದು ಚರ್ಚೆಗೆ ಚೆನ್ನಾಗಿರುತ್ತದೆ. ಬಳಕೆಗಲ್ಲ ಎಂಬುದು ನನ್ನ ವಿನಮ್ರ ಅಭಿಪ್ರಾಯ.
ಇಸ್ಮಾಯಿಲ್

ನನ್ನ ಬ್ಲಾಗ್: http://ismail.sampada.net

  • Login or register to post comments
  • link
  • Email this ಪ್ರತಿಕ್ರಿಯೆ
February 1, 2007 - 8:51pm — Sunil Jayaprakash

ಸೌಜನ್ಯರಹಿತವಾದ ಮಾತು ??

Sunil Jayaprakash's picture

ismail wrote:
ಅನಿವಾಸಿಯವರ ಮಾತಿಗೆ ನನ್ನ ಒಪ್ಪಿಗೆಯೂ ಇದೆ. ಅವರು ನೀಡಿರುವ ಪದಗಳಲ್ಲಿ ಒಂದನ್ನು ಆರಿಸಿಕೊಳ್ಳುವುದು ಇಲ್ಲವೇ 'Random' ಎಂಬುದರ ಫಂಕ್ಷನಾಲಿಟಿಯನ್ನು ನೋಡಿಕೊಂಡು ಪದವೊಂದನ್ನು ಇತರ ಭಾರತೀಯ ಭಾಷೆಗಳಿಂದ ಆಯ್ದುಕೊಳ್ಳೋಣ.

ಇಸ್ಮಾಯಿಲ್‌ರವರೇ ವೈಯಕ್ತಿಕ ಟೀಕೆಯೆಂದು ಭಾವಿಸಬೇಡಿ ಎಂದು ವಿನಮ್ರವಾಗಿ ಕೇಳಿಕೊಳ್ಳುತ್ತೇನೆ. ನಿಮ್ಮ ವಾದ ಸರಣಿಯೇ ನನಗರ್ಥವಾಗುತ್ತಿಲ್ಲ. ಅಲ್ಲ ಅನಿವಾಸಿಗಳು ಕೆಲವು ಪದಗಳನ್ನು ಹೇಳಿದರು ನಿಜ, ಅದರ ಬಗ್ಗೆ ಚರ್ಚಿಸೋಣ. ಆದರೆ ನಿಮ್ಮ ಮಾತು ನಿಜಕ್ಕೂ ಸೌಜನ್ಯರಹಿತವಾಗಿದೆ. ನನಗೆ ಬಹಳ ಬೇಸರವಾಯಿತು. ನಾನೆಲ್ಲೂ ಅನುವಾದಕ್ಕಾಗಿ Randomಗೆ ಪದ ಹುಡುಕುತ್ತಿಲ್ಲ. ಒಂದು ಕನ್ನಡ ಕಾವ್ಯವನ್ನು ಓದುವಾಗ ಸಿಕ್ಕಪದವನ್ನು ಹಂಚಿಕೊಂಡಿದ್ದೇನೆ. ಕನಿಷ್ಠ ಪಕ್ಷ ನಾನು ಬರೆದಿರುವುದು ಸರಿಯೇ, ತಪ್ಪೇ ಎಂದು ನೀವುಗಳು ಚರ್ಚಿಸುತ್ತಿಲ್ಲ. ವೈಯಕ್ತಿಕವಾಗಿ ಮೂಗಿನ ನೇರಕ್ಕೆ ಎಲ್ಲರೂ ಮಾತನಾಡುತ್ತಿದ್ದೀರಾ. ಅನೂಹ್ಯ, ಅಬದ್ಧ, ನಿಸೂತ್ರ, ಕುರುಡಾಯ್ಕೆಗಳಿಂದ ಒಂದನ್ನು ಆರಿಸೋಣ ಎಂದಿರಲ್ಲ, ಕಡೇ ಪಕ್ಷ ಉದು(random object), ಉದಿತ(randomised, ಒಂದು ಕ್ರಿಯೆ) ಎಂಬುದು ಏಕೆ ತಪ್ಪು ಎಂಬುದನ್ನು ನೀವು ನಿರೂಪಿಸಿದಿರೇ ? ಕನ್ನಡವು ಏನು ಪಾಪ ಮಾಡಿತ್ತು. ನಿಮಗೆ ಸಂಸ್ಕೃತದ ಮೇಲೆ ತುಂಬಾ ಅಕ್ಕರೆಯಿದ್ದರೆ, ಮೊದಲು ಕನ್ನಡದ ಪದವನ್ನು ತಪ್ಪು ಎಂಬುದನ್ನು ನಿರೂಪಿಸಿ. ನನ್ನನ್ನು ಕೆಲವರು ಕಾರಣವಿಲ್ಲದ ಸಂಸ್ಕೃತ ದ್ವೇಷಿ ಎನ್ನುವ ಹಾಗೆ ನಾನು ನಿಮ್ಮನ್ನು ಕನ್ನಡದ ದ್ವೇಷಿ ಎನ್ನಲೇ ? ಹಾಗೆ ಹೇಳುವುದು ಸರಿಯಲ್ಲ.

ಅಲ್ಲ ಸಾರ್, ಇತರ ಭಾರತೀಯ ಭಾಷೆಯಿಂದ ಆಯ್ದುಕೊಳ್ಳೋಣ ಎಂದಿರಲ್ಲ, ಅದು ಕನ್ನಡಿಗರಿಗೆ ಹೊಸಪದ ಎನಿಸುವುದಿಲ್ಲವೇ. ಹೊಸಪದವೇ ಆಗುವುದಾದರೆ, ಸರಳವೂ ಆಗುವುದಾದರೆ ಕನ್ನಡದ್ದೇ ಪದ ಏಕೆ ಬೇಡ ನಿಮಗೆ ? ನಾನು Random ಪದದ functionalityಯನ್ನು ನೋಡದೆ ಉದು, ಉದಿತ ಪದ ಹೇಳಿದ್ದೇನೆ ಎಂದು ಅದ್ಹೇಗೆ ತೀರ್ಮಾನಕ್ಕೆ ಬಂದಿರಿ ?

ಉಲ್ಲಿ - ಅಲ್ಲಿಯೂ ಅಲ್ಲದ, ಇಲ್ಲಿಯೂ ಅಲ್ಲದ ಯಾವ ಜಾಗ ಎಂದು ನಿಖರವಾಗಿ ಹೇಳಲಾಗದ ಜಾಗ ಆದರೆ ಎಲ್ಲೋ ಒಂದು ಕಡೆ ಇದ್ದೇ ಇದೆ.
ಉದು - ಅದೂ ಅಲ್ಲದ್ದು, ಇದೂ ಅಲ್ಲದ್ದು, ಯಾವುದು ಎಂದು ನಿಖರವಾಗಿ ಬೊಟ್ಟು ಮಾಡಿ ತೋರಲಾಗದ್ದು, ಆದರೆ ಯಾವುದೋ ಒಂದು ವಸ್ತು ಇರುವುದು ಮಾತ್ರ ಗ್ಯಾರೆಂಟಿ.

ಉದಿತ - ಉದು(ಯಾವುದೋ ಒಂದು, ಆದರೆ ಆರಿಸುವುದಂತೂ ಖಾತ್ರಿ) ವಸ್ತುವಿನ ಆಯ್ಕೆಗೆ ಸಂಬಂಧಿಸಿದ್ದು.

ಉದು, ಉದಿತ ಪದಗಳನ್ನು ಬಳಸುತ್ತೇವೆಯೋ ಇಲ್ಲವೋ ಬೇರೆ ವಿಚಾರ(ನನಗೆ ಎಳ್ಳಷ್ಟೂ ಬೇಸರವಿರುವುದಿಲ್ಲ), ಆದರೆ ನಿಜಕ್ಕೂ ಒಂದು ಕನ್ನಡ ಪದದ ಬಗ್ಗೆ ಏನನ್ನೂ ಚರ್ಚಿಸದೆ, ಅನಿವಾಸಿಗಳು ಬರೆದದ್ದು ಇಲ್ಲವೇ ಬೇರೆ ಭಾರತೀಯ ಭಾಷೆಯಿಂದ ಆರಿಸುವುದು ಎಂಬ ನಿಮ್ಮ ಟಿಪ್ಪಣಿ ನನಗೆ ಬಹಳ ಬೇಸರವನ್ನುಂಟು ಮಾಡಿತು

ಒಟ್ಟಿನಲ್ಲಿ, ಎಲ್ಲಿಂದ ಬೇಕಾದರೂ ಹೊಸತು ಬರಲಿ, ಕನ್ನಡದಿಂದ ಮಾತ್ರ ಬೇಡ ಎನ್ನುವಂತಿದೆ ನಿಮ್ಮ ಟಿಪ್ಪಣಿ (ಅನಿವಾಸಿಗಳು ಬರೆದದ್ದು, ಇಲ್ಲವೇ ಇತರ ಭಾರತೀಯ ಭಾಷೆ). ವೈಯಕ್ತಿಕ ಟೀಕೆಯೆಂದು ದಯವಿಟ್ಟು ಭಾವಿಸಬೇಡಿ, ಆದರೆ ನೀವು ಬರೆದ ಟಿಪ್ಪಣಿ ಸರಿಯೇ ಎಂದು ಯೋಚಿಸಿ.

  • Login or register to post comments
  • link
  • Email this ಪ್ರತಿಕ್ರಿಯೆ
February 1, 2007 - 10:05pm — Sunil Jayaprakash

ಅನೂಹ್ಯ, ಅಬದ್ಧ, ನಿಸೂತ್ರ ಮತ್ತು ಕುರುಡಾಯ್ಕೆ

Sunil Jayaprakash's picture

ನಮಸ್ಕಾರ ಅನಿವಾಸಿಗಳೇ,

anivaasi wrote:
ಇದು ಈಗಾಗಲೇ ಚರ್ಚೆಯಾಗಿದ್ದರೆ ದಯವಿಟ್ಟು ಕ್ಷಮೆಯಿರಲಿ.

ನಿಮ್ಮ ೧ ಮತ್ತು ೨ನೆಯ ಪಾಯಿಂಟುಗಳು ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಯಾವುದು ಸುಲಭವೋ ಅದನ್ನು ಬಳಸುವುದು ಎಂಬುದೇ ಎಲ್ಲರ ಆಯ್ಕೆ. ಇದರ ಬಗ್ಗೆ ನಾನು ಹೆಚ್ಚು ಬರೆಯುವುದಿಲ್ಲ.

ಈ ಚರ್ಚೆಯಲ್ಲಿ ಭಾಗವಹಿಸಿದ್ದಕ್ಕೆ ನಿಮಗೆ ಧನ್ಯವಾದಗಳು. ನೀವು ನೀಡಿದ ಸಲಹೆಗಳು ಚೆನ್ನಾಗಿವೆ. ಅವುಗಳನ್ನು ಕುರಿತಾಗಿ ಯೋಚಿಸಿದಾಗ ಇವಿಷ್ಟು ಹೊಳೆಯಿತು. ನಿಮ್ಮೊಡನೆ ನನ್ನ ಆಲೋಚನೆಗಳನ್ನು ಹಂಚಿಕೊಳ್ಳುತ್ತಿದ್ದೇನೆ.

೧. ಕುರುಡಾಯ್ಕೆ (ಕಣ್ಣು ಮುಚ್ಚಿ ಆರಿಸಿದ್ದು) - ಇದು ಸರಿಯಲ್ಲ, Randomness ಕಣ್ಣು ಮುಚ್ಚಿಕೊಂಡು ಮಾಡುವಂಥದ್ದಲ್ಲ. Fractal Algorithm ನೋಡಿದರೆ ಬಹುಶಃ ನಿಮಗೆ ಮನದಟ್ಟಾಗುತ್ತದೆ.
೨. ಅನೂಹ್ಯ (ಊಹಿಸಲಸಾಧ್ಯವಾದ್ದು) - ಇದು ಸರಿಯಾಗಿದೆ, ಯಾದೃಚ್ಛಿಕಕ್ಕಿಂತ ಪರವಾಗಿಲ್ಲ. ಆದರೆ ಇದನ್ನು Exclamatory!! ವಿಷಯಗಳಲ್ಲಿ ಹೆಚ್ಚು ಬಳಸುತ್ತೇವೆ. ಮೊದಲೇ ಹೇಳಿದ ಹಾಗೆ ಇದು ಸಂಸ್ಕೃತ ಪದ (ನಾನು ಸಂಸ್ಕೃತ ದ್ವೇಷಿಯಲ್ಲ, again, ಆ ವಿಚಾರದ ಬಗ್ಗೆ ಚರ್ಚೆ ಬೇಡ). ಈ ಪದವನ್ನು ಎಲ್ಲ ಕನ್ನಡಿಗರೂ ಕೇಳಿರುತ್ತಾರೆ ಎಂಬ ನಂಬಿಕೆ ಬೇಡ. ಉದು ಅಥವಾ ಅನೂಹ್ಯಗಳಲ್ಲಿ ಯಾವುದು ಸರಳವಾಗಿದೆ. ಎರಡು ಪದವೂ ಕೇಳಿದ ತಕ್ಷಣ ಏನೆಂದು ಹೊಳೆಯುವುದಿಲ್ಲ. ಎರಡೂ ಒಂದು ರೀತಿ ಹೊಸತೇ. ಉದು(ಈಗಾಗಲೇ ಸಾಕಷ್ಟು ಬಳಕೆಗಳನ್ನು ನೀಡಿದ್ದೇನೆ) ಮತ್ತು ಊಹೆ ದಿನವೂ ಬಳಸುತ್ತೇವೆ. ಆದರೆ ಉದಿತ, ಅನೂಹ್ಯ ಬಹುಶಃ ಯಾರೂ ಬಳಸಿರುವುದಿಲ್ಲ. ಹೊಸತೇ ಆಗಬಹುದಾದರೆ, ಕನ್ನಡವೇಕೆ ಬೇಡ ? ಅಥವಾ ಉದಿತ, ಅನೂಹ್ಯ ಎರಡೂ ಕೃತಕವೆನ್ನುವುದಾದರೆ ಯಾವುದು ಹೆಚ್ಚು ಕೃತಕ.
It should get generated randomly = ಉದಿತವಾಗಿ ಮೂಡಬೇಕು, ಅನೂಹ್ಯವಾಗಿ ಮೂಡಬೇಕು. ಊಹಿಸಲಸಾಧ್ಯವಾಗಿ ಹುಟ್ಟಬೇಕು ಎಂದರೆ ಅರ್ಥವೇನು ? ಯಾವುದು ಸರಳ. ಈ ಉದಿತ, ಅನೂಹ್ಯಗಳನ್ನು ನಿಮ್ಮ ಹತ್ತಿರದ ಸಂಬಂಧಿಕರಿಗೆ ಹೇಳಿ ನೋಡಿ. ನಿಮ್ಮ ತಾಯಿ, ತಮ್ಮ, ಅಕ್ಕ...ಹೀಗೆ. ಅವರಿಗೆ ಅರ್ಥವಾದರೆ ಮುಂದೆ ನೋಡೋಣ. ಎರಡೂ ಹೊಸತೆಂದಾದರೆ, ಸರಳವಾದ ಪದವೇಕೆ ಬೇಡ.
Random = ಅನೂಹ್ಯ ಆದರೆ, Randomised = ಅನೂಹಿತವಾಗುತ್ತದೆ. ಕೊನೆಯಲ್ಲಿ ಯ ಕಾರ ಒತ್ತಾಗಿ ಬರುವ ಪದಗಳನ್ನು ಕನ್ನಡಿಗರು ಹೆಚ್ಚು ಬಳಸುವುದಿಲ್ಲ. ಊಹ್ಯ, ಭೋಜ್ಯ, ವರ್ಜ್ಯ, ವದ್ಯ, ವೇದ್ಯ. ಇದಕ್ಕೆ ಪೂರಕವಾಗಿ "ಸಂಸ್ಕೃತದ ಪದಗಳಿದ್ದರೂ ಸಂಸ್ಕೃತದ ಅವ್ಯಯಗಳಿಗೆ ಕನ್ನಡದ ವಿಭಕ್ತಿಗಳನ್ನು ಹತ್ತಿಸಕೂಡದು" ಎಂದು ಕವಿರಾಜಮಾರ್ಗದಲ್ಲಿ ಶ್ರೀವಿಜಯನು ಹೇಳಿದ್ದಾನೆ.(ಪರಿಚ್ಛೇದ ೧, ಪದ್ಯ ೫೨, ೫೩). ಕವಿರಾಜಮಾರ್ಗದ ಪ್ರಸ್ತಾಪ ಮಾಡಿದ ಮಾತ್ರಕ್ಕೆ ನಾನು ಕನ್ನಡ ಪಂಡಿತನೆಂದು ತಿಳಿಯಬೇಡಿ, ದಯವಿಟ್ಟು. ವ್ಯಾಕರಣದ ಹೊರತಾಗಿಯೂ, ವ್ಯಾಕರಣದ ಒಳಗಿನಿಂದಲೂ ಅನೂಹ್ಯ ಪದದ ವಿವರಣೆ ನೀಡಿದೆನಷ್ಟೇ.

೩. ಅಬದ್ಧ (ಯಾವ ವಿನ್ಯಾಸಕ್ಕೂ ಬದ್ಧವಲ್ಲದ್ದು) - ಇದು ಕನ್ನಡದ ಜಾಯಮಾನಕ್ಕಲ್ಲ. ಏಕೆಂದರೆ, ಕನ್ನಡ ಸಾಹಿತ್ಯದಲ್ಲಿ ಅಬದ್ಧ ಎನ್ನುವುದು ಕೆಟ್ಟದ್ದು, ಹೊಂದಿಕೊಂಡು ಹೋಗದ ರೀತಿಯಲ್ಲಿರುವುದು ಎಂಬುದಾಗಿ ಬಳಕೆಯಾಗುತ್ತದೆ.
ಅವನು ಅಬದ್ಧವಾಗಿ ಮಾತನಾಡುತ್ತಾನೆ ಎಂಬ ಪದಪ್ರಯೋಗವನ್ನು ನೀವು ಕೇಳಿರಬಹುದು.
೪. ನಿಸೂತ್ರ (ಯಾವ ಸೂತ್ರಕ್ಕೂ ಬದ್ಧವಲ್ಲದ್ದು) - ಇದು ಖಂಡಿತ ತಪ್ಪು, Randomness ಎನ್ನುವುದನ್ನು ಒಂದು Algorithm ಮೂಲಕ ಹುಟ್ಟಿಸಬಹುದು. Random Generation Algorithm ಎನ್ನುವುದನ್ನು ಹೇಗೆ ಹೇಳುತ್ತೀರಿ. ನಿಸೂತ್ರ ಜನಕ ಸೂತ್ರ!!, randomised - ನಿಸೂತ್ರಿತ !!!

ಅನೂಹ್ಯ ಎನ್ನುವುದು Exclamation ರೀತಿಯಲ್ಲಿ ಸರಿ ಎಂದು ಹೇಳಿದೆನಷ್ಟೇ. ಇದನ್ನು ಕನ್ನಡಿಗರು ತಿಳಿದಿರುತ್ತಾರೆ ಎಂಬ ನಂಬಿಕೆಯು ಬೇಡ ಎಂತಲೂ ಹೇಳಿದೆನಷ್ಟೇ. ಆದರೆ ಒಂದು ನನಗರ್ಥವಾಗದ್ದು, ಚರ್ಚೆ ಸ್ವಾರಸ್ಯವಾಗಿದೆ ಎಂದಿರಿ ಆದರೆ ಉದು, ಉದಿತ ಬಗ್ಗೆ ಒಂದು ಮಾತನ್ನೂ ಹೇಳಲಿಲ್ಲವಲ್ಲ. ಹಾಂ! ಹೇಳಲೇಬೇಕು ಅಂತ ನನ್ನ ಒತ್ತಾಯ ಖಂಡಿತವಾಗಿಯೂ ಇಲ್ಲ.

ನಾನೀಗಾಗಲೇ ನಿರೂಪಿಸಿರುವ ಹಾಗೆ ಉದು ಎನ್ನುವುದನ್ನು ದಿನವೂ ಬಳಸುತ್ತಿದ್ದೇವೆ. ಹೊಸಪದವಲ್ಲ ಅದು. ಅನೂಹ್ಯ, ಉದಿತ(ಉದು ವಸ್ತುವನ್ನು ಆರಿಸುವ ಕ್ರಿಯೆ) ಇವುಗಳಲ್ಲಿ ಯಾವುದು ಸರಳ ?

anivaasi wrote:
ಹಿಂದಿಯೋ,ತೆಲುಗೋ,ತಮಿಳೋ ನುಡಿಗಳ‌ಲ್ಲಿ ನಾವು ಪಡೆಯಬಹುದಾದಂಥ ವಿಶಿಷ್ಟ ಪದಗಳು ಇರಬಹುದು. ಆ ಭಾಷೆಗಳ ಬಗ್ಗೆ ನನ್ನ ತಿಳುವಳಿಕೆ ತುಂಬಾ ಕಡಿಮೆ. ಗೊತ್ತಿರುವವರು ಹೇಳಬೇಕು.

ನಿಮ್ಮ ಮಾತು ಒಪ್ಪಿದೆ. ಆದರೆ ಕನ್ನಡ ಕಾವ್ಯದಿಂದಲೇ ಬಂದ ಉದು, ಉದಿತ ಪದದ ಬಗ್ಗೆ ಏಕೆ ನೀವು ಒಂದು ಮಾತನ್ನೂ ಆಡಲಿಲ್ಲ. ತಮಿಳು, ತೆಲುಗಿನಿಂದ ಪದ ಸ್ವೀಕರಿಸೋಣ ಎಂದಿರಲ್ಲ, ಕನ್ನಡದಲ್ಲಿಯೇ ಆಲೋಚಿಸಿ, ಕನ್ನಡದಿಂದಲೇ ಸರಳವಾದ ಪದ ಬಂದರೆ ಏಕೆ ಬೇಡ ಎನ್ನುತ್ತೀರಾ ? ಕನ್ನಡದಲ್ಲಿ ಹೊಸತನವೇ ಇಲ್ಲವೇ ಹಾಗಾದರೆ. ನಾನು ಅಂದೇ ಹಾಕಿದ್ದೆ, ಬೇರೆ ಎಲ್ಲ ಭಾಷೆಗಳ ಮೂಲಕ ಬರುವ ಹೊಸತನ್ನು ಯಾವುದೇ ಅಳುಕಿಲ್ಲದೆ ಸ್ವೀಕರಿಸುವ ನಾವುಗಳು, ಕನ್ನಡದ ವಿಷಯ ಬಂದಾಗ ಅಳುಕುವುದೇಕೆ. ನಿಸಾರ್ ಅಹ್ಮದ್ ಅವರು ಹೇಳಿದ ವಾಕ್ಯಗಳನ್ನು, ಮೊದಲ ಟಿಪ್ಪಣಿಯಲ್ಲಿ ಹಾಕಿದ್ದೇನೆ ನೋಡಿ. ಸಂಸ್ಕೃತದಲ್ಲಿಯೇ ಇರದಿದ್ದ ಧ್ವನ್ಯಾಲಂಕಾರ ಕನ್ನಡದಲ್ಲಿ ಇತ್ತು ಎಂಬುದನ್ನೂ ಕೂಡ ಮೊದಲ ಟಿಪ್ಪಣಿಯಲ್ಲಿಯೇ ಹಾಕಿದ್ದೇನೆ. ಆಸಕ್ತಿಯುಳ್ಳವರು ಮತ್ತೆ ನೋಡಬಹುದು.

  • Login or register to post comments
  • link
  • Email this ಪ್ರತಿಕ್ರಿಯೆ
February 2, 2007 - 2:25am — Shyam Kishore

ಉ: ಕವಿರಾಜಮಾರ್ಗ - ಅನೈಚ್ಛಿಕ ಹೇಗೆ?

Shyam Kishore's picture

random  ಎನ್ನುವುದು ಆಯ್ಕೆಗೆ ಸಂಬಂಧಿಸಿದ ಪದ ಅಂತ ನನ್ನ ಅನಿಸಿಕೆ. ಬಳಸುವವರ ಆಯ್ಕೆಯಿಲ್ಲದೇ ತಾನಾಗಿಯೇ ಕೂಡಿಬರುವ ಒಂದು ಘಟನೆಗೆ random ಅಂತ ಅನ್ನುತ್ತೀವಿ ಅಲ್ಲವೇ? ಹಾಗಾಗಿ "ಅನೈಚ್ಛಿಕ" ಅನ್ನುವ ಪದ ಹೇಗೆ? ಇದನ್ನು ನಾವು ಹಲವಾರು ಕಡೆ ಓದಿ/ಕೇಳಿರುತ್ತೇವೆ.

- ಶ್ಯಾಮ್ ಕಿಶೋರ್

  • Login or register to post comments
  • link
  • Email this ಪ್ರತಿಕ್ರಿಯೆ
February 2, 2007 - 3:29am — bhatpp

ಉ: ಅನೈಚ್ಛಿಕ ಹೇಗೆ?

bhatpp's picture

ಅನೈಚ್ಛಿಕ = ಐಚ್ಛಿಕವಲ್ಲದ್ದು ಅಂದರೆ, without choice; therefore, mandatory! ಹಾಗಾಗಿ, random ಪದಕ್ಕೆ "ಅನೈಚ್ಛಿಕ" ಸಮಂಜಸವಲ್ಲ. ಮೇಲಾಗಿ, random ಪದವು ಕೇವಲ ಆಯ್ಕೆಗೆ ಸಂಬಂಧಿಸಿದ್ದಲ್ಲ; ಕ್ರಿಯೆ ಹಾಗೂ ಘಟನೆಗಳೂ ಕೂಡ random ಆಗಿರಬಹುದು ಮತ್ತು ಯಾವುದೇ random ಕ್ರಿಯೆ/ಘಟನೆಯು ನಮ್ಮ ಆಯ್ಕೆಯಾಗಬಹುದು, ಅಲ್ಲವೇ?

ಸಧ್ಯಕ್ಕೆ random ಪದದ ಅನುವಾದ (ಅಥವಾ ಅದಕ್ಕೆ ಸಮಾನವಾದ ಪದದ ಹುಡುಕಾಟವು) ಇನ್ನೂ ತೆರೆದಿರುವಂತಹ ವಿಚಾರ ಅರ್ಥಾತ್, it is an open question. ಪ್ರಾಯಶಃ ಇದಕ್ಕುತ್ತರ random ಆಗಿಯೇ ಬರಬೇಕೇನೋ Eye-wink

  • Login or register to post comments
  • link
  • Email this ಪ್ರತಿಕ್ರಿಯೆ
April 12, 2007 - 4:56pm — mahesha

ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು.

mahesha's picture

ಇಲ್ಲಿ ಏನೋ ದೊಡ್ಡ ಗೊಂದಲ-ಗಲಿಬಿಲಿಯಾಗಿದೆ.....

Quote:

ಉದಿತ, ಉಲ್ಲಿತ ಪದಗಳು ಕುಣಿತ, ನಡೆತ, ಮರೆತ, ವಿಕಸಿತ, ವಿಸ್ಮಿತ ಮುಂತಾದ ಕನ್ನಡ ಪದಗಳಿಗೆ ಎಷ್ಟು ಹತ್ತಿರವಾಗಿದೆ!!

ಹತ್ತಿರವಾಗಿಲ್ಲ. ಮಾದರಿಗಳು ತಪ್ಪು....

ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು.

ಆದರೆ...

ಕುಣಿ, ನಡೆ, ಮರೆ, ವಿಕಸ್, ವಿಸ್ಮ್ ಇವು ಕ್ರಿಯಾಧಾತು/verb-rootಗಳು....
ಗವನ:
"ಕುಣಿ + ಇತ " ಅಲ್ಲ. ಕನ್ನಡದಲ್ಲಿ "ಇತ" ಪ್ರತ್ಯಯ verb-rootಗೆ ಬರಲ್ಲ. ಕನ್ನಡದಲ್ಲಿರುವುದು 'ತ' ಪ್ರತ್ಯಯ.
ಕುಣಿ + ತ = ಕುಣಿತ
ಹೊಡೆ + ತ = ಹೊಡೆತ
ಮರೆ + ತ = ಮರೆತ
ಕೊರೆ + ತ = ಕೊರೆತ
ಇವು noun/pronoun root ಗಳಿಗೆ ಬರಲ್ಲ.
ಹುಳಿ + ತ = ಹುಳಿತ; ಇಲ್ಲ
ಬೇರೆ + ತ = ಬೇರೆತ; ಇಲ್ಲ

ಅದೂ ಬರಿ 'ಇ', 'ಎ' ಇಂದ ಕೊನೆಗೊಳ್ಳುವ verb-rootಗಳಿಗೆ..
'ಮಾಡು + ತ = ಮಾಡುತ' ಈ ಬಗೆಯಲ್ಲಿ ಇಲ್ಲ.

ಇನ್ನು ಸಕ್ಕದಲ್ಲಿ 'ಇತ/ಇತಾ' ಪ್ರತ್ಯಯವಿದೆ.
ವಿಕಸ್ + ಇತ = ವಿಕಸಿತ
ಭಾದ್ + ಇತ = ಭಾದಿತ
ಅಲ್ಲೂ ಸರ್ವನಾಮ, ನಾಮಪದಗಳಿಗೆ ಇದು ಹತ್ತುವುದಿಲ್ಲ.
ತತ್ + ಇತ = ತತಿತ; ಇಲ್ಲ
ಕುತ್ರ + ಇತ = ಕುತ್ರಿತ; ಇಲ್ಲ
ರಾಮ + ಇತ = ರಾಮಿತ; ಇಲ್ಲ.

ಅಂದರೆ ಬರಿ ಇವು ಕ್ರಿಯಾಧಾತು/verb-rootವಿಗೆ ಹತ್ತಿಸಬೇಕಾದುವು, pronoun, noun, ಮುಂತಾದವುಗಳಿಗೆ ಹತ್ತಿಸಲಾಗದು.
ಅದರಲ್ಲೂ ಸಕ್ಕದದ ಪ್ರತ್ಯವನನ್ನು ಕನ್ನಡದ ಧಾತುವಿಕೆ/ನಾಮಪ್ರಕೃತಿಗೆ ಹತ್ತಿಸುವುದು ಅನಿತ್ತು ತಕ್ಕುದಲ್ಲ....

ಇಲ್ಲಿ ..
ಉದು + ಇತ = ಉದಿತ
ಉಲ್ಲಿ + ಇತ = ಉಲ್ಲಿತ...
ಇಲ್ವೇ
ಉದು + ತ = ಉದುತ
ಉಲ್ಲಿ + ತ = ಉಲ್ಲಿತ

ಈ ಬಗೆಯ ಒರೆಹುಟ್ಟು ನನಗೆ ದೋಷಗಳೆಂದೇ ತೋರುವುದು. ಅದಿತ, ಇದಿತ, ಎದಿತ, ಅಲ್ಲಿತ, ಇಲ್ಲಿತ, ಎಲ್ಲಿತ ಹೀಗೆಲ್ಲ ಪದವಿನ್ಯಾಸ ಸರಿಯಲ್ಲ. ಕ್ರಿಯಾಧಾತುವಿಗೆ ಹಾಕಬೇಕಾದ ಪ್ರತ್ಯಯವನ್ನು, ನಾಮಪ್ರಕೃತಿಗೆ ಹತ್ತಿಸುವುದು ಗ್ರಾಮರ್‍ ಎರರ್ರು‍, ಅದರಲ್ಲೂ ಸಕ್ಕದ-ಪ್ರತ್ಯಯವನ್ನು ಕನ್ನಡದ ಒರೆಗೆ!!

ಇಲ್ಲಿರುವ ಸಮಸ್ಯೆ "ಯಾದೃಚ್ಛಿಕ"/randomಗೆ ಕನ್ನಡ ಒರೆ ಹುಡುಕುವುದು.
random = ಯಾವುದೋ ಒಂದು/ಉದು ಇದು ಸಾಕು

ಉದು = something.

ಊ ಹಾಳೆ = ಯಾವುದೋ ಒಂದು ಹಾಳೆ.
ಊ ಪುಟ = ಯಾವುದೋ ಒಂದು ಪುಟ.

ಆದರೆ ಈ 'ಊ' ಹೊಸಗನ್ನಡದಲ್ಲಿ ಬಳಕೆಯಲ್ಲಿಲ್ಲವಲ್ಲ!!!

"ರ್ಯಾಂಡಂ" ಬೇಡ, "ರ್‌ಯಾಂಡಂ" ಅಂತ ಹಾಕಬಹುದಲ್ಲ, HPN!! Laughing out loud.. ನನ್ನ ಓಟು "ರ್‌ಯಾಂಡಂ" ಗೆ
======================================

  • Login or register to post comments
  • link
  • Email this ಪ್ರತಿಕ್ರಿಯೆ
January 23, 2008 - 8:44pm — kpbolumbu

ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು.

kpbolumbu's picture

ಸುನಿಲ್,
ಯಾದೃಚ್ಛಿಕ ಎಂಬ ಪದವನ್ನು ಮಲೆಯಾಳದಲ್ಲಿ coincidence ಎನ್ನುವಾಗ ಬಳಸುತ್ತಾರೆ. ಇತರ ನುಡಿಗಳತ್ತ ಕಣ್ಣು ಹಾಯಿಸುವ ಮಾತು ಬಂದದ್ದರಿಂದ ಇದನ್ನು ಹೇಳಿದ್ದು. ನಾವು ಹೆಚ್ಚಾಗಿ ಅನುವಾದಿಸುವಾಗ ಮಾತುಗಳ ಭಾವಾರ್ಥವನ್ನು ಗಮನಿಸದೆ ಶಬ್ದಗಳನ್ನು ಅನುವಾದಿಸುತ್ತೇವೆ. ಇಲ್ಲೊಂದು ಉದಾಹರಣೆಯಿದೆ. ಮಲೆಯಾಳ ವಿಕಿಪೀಡಿಯಾ . ಇಲ್ಲಿ ರಾಂಡಂ ಪುಟಕ್ಕೆ ಓಟಪ್ರದಕ್ಷಿಣ ಎನ್ನಲಾಗಿದೆ.ಇಲ್ಲಿ ಓಟಪ್ರದಕ್ಷಿಣ ಎಂಬುದಕ್ಕೆ ನಾವು ತಿಳಿದಂತಹ ಅರ್ಥವೇ.ತಮಿಳಿನಲ್ಲಿ 'ಕುಱಿಪ್ಪಿಲ್ವೞಿಪಕ್ಕಮ್' ಎನ್ನಲಾಗಿದೆ. ತೆಲುಗಿನಲ್ಲಿ 'ಯಾದೃಚ್ಛಿಕ ಪೇಜ್' ಎನ್ನಲಾಗಿದೆ.

ಇಲ್ಲಿ 'ಯಾದೃಚ್ಛಿಕ' ಎಂಬುದು ಕನ್ನಡದ್ದಲ್ಲವೆಂಬ ಆರೋಪ ಬಿಟ್ಟರೆ ಅರ್ಥ ಸರಿಯಾಗಿದೆ. ಕೆಲವರಿಗೆ ಅದು ನಾಲಗೆಗೆ ತೊಡಕೆನ್ನಿಸುವುದಾದರೆ ಬೇರೆ ಪದಗಳನ್ನು ಬಳಸಬಹುದು. ಆದರೆ ಅದು ಉದಿತವಲ್ಲ, ಯಾಕೆಂದರೆ:
೧.ಅದು ಉದಯಿಸಿದ್ದು ಎನ್ದು ಸೂಚಿಸುತ್ತದೆ.
೨.ಹೇಳುವುದು, ಕೇಳುವುದು ಪದಗಳಲ್ಲಿರುವ ಉದು ಎಂಬ ಪದದಿಂದ ಉದಿತ ಎಂಬ ಪದ ಹುಟ್ಟಿದರೆ ಹೇಳುವೆನು, ಕೇಳುವೆನು ಪದಗಳಿಂದ ಎನಿತ ಹುಟ್ಟಬೇಕಲ್ಲವೇ? Eye-wink

ಇನ್ನು 'ಉಲ್ಲಿತ' ಮುಂತಾಗಿ ಪದಗಳು ಹುಟ್ಟಿದರೆ ಅಲ್ಲಿತ, ಇಲ್ಲಿತ, ಎಲ್ಲಿತ ಇತ್ಯಾದಿ ಪದಗಳೂ ಹುಟ್ಟಬೇಕು.

ಇಂತಹ ಪ್ರಯೋಗಗಳು ಕನ್ನಡದಲ್ಲಿ ಇದುವರೆಗೆ ನಡೆದಿಲ್ಲವೆಂದಲ್ಲ, ಆದರೆ ಹರಿತವಾದ ವರ್ಣಗಳ ಗೈರಿನಲ್ಲೂ ಇವುಗಳು ಕರ್ಕಶವಾಗಿ ಕೇಳಿಸುತ್ತವೆ. ಉದಾ:ನಿರಂತರ ಕಲಿಕಾ ಕೇಂದ್ರ.

ನಿಮ್ಮ ಆಸಕ್ತಿಗೆ ಜಯವಾಗಲಿ. ಹೀಗೆಯೇ ಮುಂದುವರಿಯಿರಿ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
January 23, 2008 - 10:35pm — Sunil Jayaprakash

ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು.

Sunil Jayaprakash's picture

ಉಫ್, ಬೊಳಂಬು, ನಾನು ಮೊದಲೇ ಹೇಳಿದಂತೆ, ಈ ಉದು, ಉಲ್ಲಿ ಇವುಗಳ ಬಗ್ಗೆ ಹೇಳಲು ನನ್ನ ಬಳಿ ತುಂಬಾ ವಿಷಯಗಳಿದ್ದವು/ವಿಷಯಗಳಿವೆ. ಆದರೆ ಆ ಎಳೆಯಲ್ಲಿ ಚರ್ಚೆ ವಿಷಯಗಳಿಗಿಂತ ಹೆಚ್ಚಾಗಿ ಬೇರೆ ಎಲ್ಲೆಲ್ಲಿಗೋ ಹೋಗಿ ರಾಡಿಯಾದ ಕಾರಣ, ನನಗೆ ತುಂಬಾ ಬೇಸರವಾಗಿ ಬಿಟ್ಟುಬಿಟ್ಟೆ.

ಇಲ್ಲಿ 'ಯಾದೃಚ್ಛಿಕ' ಎಂಬುದು ಕನ್ನಡದ್ದಲ್ಲವೆಂಬ ಆರೋಪ ಬಿಟ್ಟರೆ ಅರ್ಥ ಸರಿಯಾಗಿದೆ.

೧. ಬೊಳಂಬು, ದಯವಿಟ್ಟು ಆ ಎಳೆಯನ್ನು ಮೊದಲು ಸರಿಯಾಗಿ ಓದಿ. "ಯಾದೃಚ್ಛಿಕ" ಕನ್ನಡದ್ದಲ್ಲ ಎಂಬ ಒಂದೇ ಅಂಶವನ್ನು ಮುಂದಿಟ್ಟುಕೊಂಡು ನಾನು ವಾದ ಮಾಡಿಲ್ಲ.
೨. ತೆಲುಗಿನಲ್ಲಿ "ಯಾದೃಚ್ಛಿಕ" ಬಳಸಲಾಗಿದೆ ಎಂಬ ಅಂಶವನ್ನು ಬಿಟ್ಟು ಯಾದೃಚ್ಛಿಕಕ್ಕೆ ಸಂಸ್ಕೃತ ವ್ಯಾಕರಣದ ಅಡಿಯಲ್ಲಿ ವಿವರಣೆ ನೀಡಿರಿ. ಯಾರೋ ಬಳಸಿದ್ದಾರೆ ಎಂದ ಮಾತ್ರಕ್ಕೆ ಅದು ಸರಿಯಾಗಿ ಬಿಡುವುದಿಲ್ಲ.
೨. ಸಂಸ್ಕೃತದ ಮುಖ್ಯ ಗೆಲುವು ಇರೋದು ಎಲ್ಲ ಭಾರತೀಯ ಭಾಷೆಯಲ್ಲಿ ಒಂದೇ ಅರ್ಥವನ್ನು ಕಾಪಾಡಿಕೊಂಡಿರುವುದು, ಉದಾ:- ಸಂಗೀತ, ದೇವಸ್ಥಾನ, ಆಲಯ. ಅದು ಹೇಗೆ ಮಲಯಾಳದಲ್ಲಿ coincidence ಆದ ಯಾದೃಚ್ಛಿಕ ಕನ್ನಡದಲ್ಲಿ random ಆಯಿತು. ಭಾರತೀಯ ಭಾಷೆಗಳಿಗೆ common ಚೌಕಟ್ಟು ನೀಡಿದ ಎಂಬ ಸಂಸ್ಕೃತ ನಿಲುವು ನೆಗೆದುಬಿದ್ದಂತಾಯಿತಲ್ಲವೇ? ಇಂತಹ ಪ್ರಯೋಗಗಳು ಕನ್ನಡಕ್ಕಷ್ಟೇ ಅಲ್ಲ ಸಂಸ್ಕೃತಕ್ಕೆ ಕೆಟ್ಟ ಹೆಸರು ತರತ್ತೆ. ಏಕೆಂದರೆ "ಯಾದೃಚ್ಛಿಕ" ಮೂಲ ಪದ ಅಲ್ಲ, ಅದೊಂದು ವಿಗ್ರಹವಾಕ್ಯಗಳಿಂದ ಹುಟ್ಟಿದ ಪದ.

ಉದು ಎಂಬ ಪದದಿಂದ ಉದಿತ ಎಂಬ ಪದ ಹುಟ್ಟಿದರೆ ಹೇಳುವೆನು, ಕೇಳುವೆನು ಪದಗಳಿಂದ ಎನಿತ ಹುಟ್ಟಬೇಕಲ್ಲವೇ

ಬೊಳಂಬು, ನನಗೆ ಅರ್ಥ ಆಗ್ತಾ ಇಲ್ಲ, ಬಹುಶಃ ನೀವು ಗಮನಿಸಲಿಲ್ಲ ಅಂತ ಕಾಣತ್ತೆ. ನಾನು ಹೇಳಿದ "ಉದು, ಉಲ್ಲಿ, ಉವನು, ಉನಿತು" ಪ್ರನೌನುಗಳು ಆದರೆ ನೀವು ಹೇಳಿದ "ಎನು" ಕ್ರಿಯಾಧಾತು. ಸುಮ್ಮನೆ ವ್ಯಾಕರಣದ ಅಂಶಗಳಿಲ್ಲದೆ ಗಂಭೀರವಾದ ಚರ್ಚೆಯನ್ನು ಹಗುರ ಮಾತುಗಳಿಂದ ತೇಲಿಸುವುದು ಬೇಡ.

ಅಷ್ಟಕ್ಕೂ ಯಾರಪ್ಪನ ಅಪ್ಪಣೆಯೂ ಇಲ್ಲದೆ, "ಎನಿತು ರಮ್ಯ" ಎಂಬ ಬಳಕೆಗಳು ಈಗಾಗಲೇ ಇವೆಯಲ್ಲ. ಅಷ್ಟಕ್ಕೂ ಅವಶ್ಯಕತೆ ಬಿದ್ದಾಗ ನೀವೇನಾದರೂ ಹೊಸತನ್ನ ಕಂಡುಹಿಡಿದಾಗ ಅವುಗಳಿಗೆ ನೀವು ಎನಿತ(ಅನಿತ ಎಂಬ ಸಂಸ್ಕೃತ ಪದವಿಲ್ಲವೇ ಹಾಗೆ) ಎಂಬ ಪದವನ್ನು ಬಳಕೆಗೆ ತಂದು, ಕನ್ನಡವನ್ನು ಬೆಳೆಸಿ ನೀವೂ ಬೆಳೆದು ನಮ್ಮನ್ನೂ ಬೆಳೆಸಿ. ಕನ್ನಡದ ಅಥವಾ ಸಂಸ್ಕೃತದ ಗುತ್ತಿಗೆಯನ್ನ ನಾನಾಗಲೀ ನೀವಾಗಲೀ ಪಡೆದಿಲ್ಲವಲ್ಲ.

ಇನ್ನು 'ಉಲ್ಲಿತ' ಮುಂತಾಗಿ ಪದಗಳು ಹುಟ್ಟಿದರೆ ಅಲ್ಲಿತ, ಇಲ್ಲಿತ, ಎಲ್ಲಿತ ಇತ್ಯಾದಿ ಪದಗಳೂ ಹುಟ್ಟಬೇಕು.

ಅವುಗಳು ಹುಟ್ಟಲ್ಲ, ಈಗಾಗಲೇ ಹುಟ್ಟಿ ಆಗಿವೆ. ಕನ್ನಡವನ್ನೇ ಓದದ ನಮಗೆ ತಿಳಿದಿಲ್ಲ ಅಷ್ಟೇ. ನನಗೆ ಕವಿರಾಜಮಾರ್ಗ ಓದುವ ಮುನ್ನ ಉಲ್ಲಿ, ಉವನು, ಉದು ಎಂಬ ಬಳಕೆಗಳು ಇವೆ ಎಂಬುದೇ ತಿಳಿದಿರಲಿಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
January 24, 2008 - 9:54am — kpbolumbu

ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು.

kpbolumbu's picture



Quote:
ಹಾಗೆಯೇ ಗಮನಿಸಿದರೆ, ಮಾಡುವುದು, ಹೇಳುವುದು, ಕೇಳುವುದು ಪದಗಳಲ್ಲಿರುವ ಉದು ಎಂಬ ಪದದಿಂದ ಉದಿತ ಎಂಬ ಪದ ಹುಟ್ಟುತ್ತದೆ.

ಇವು ನಿಮ್ಮ ಮಾತುಗಳೇ ಅಲ್ಲವೇ ಸುನಿಲ್. ಹೇಳುವುದು, ಕೇಳುವುದು ಪದಗಳಲ್ಲಿರುವ ಉದುವಿಗೂ ಹೇಳುವೆನು, ಕೇಳುವೆನು ಪದಗಳಲ್ಲಿರುವ ಎನುವಿಗೂ ಯಾವ ಅಂತರವೂ ಇಲ್ಲ. ಇಲ್ಲಿ ಎನು ಕ್ರಿಯಾಧಾತುವಲ್ಲ. ಯಾವುದೋ ಒಂದು ಎಂಬ ಅರ್ಥದಲ್ಲಿ ಉದು ಬಳಸಿದರೂ ಅದಕ್ಕೆ 'ತ' ಸೇರಿಸಿ ಉದಿತವಾಗಿಸುವುದು ಸರಿಯಲ್ಲ ಅನ್ನಿಸುತ್ತದೆ.

ಸಕ್ಕದದ ಹಲವು ನುಡಿಗಳು ಕನ್ನಡದಲ್ಲಿ ಮತ್ತು ಮಲೆಯಾಳದಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಮತ್ತು ಅರ್ಥದಲ್ಲಿ ಬಳಕೆಯಾಗುವುದನ್ನು ಗಮನಿಸಿದ್ದೇನೆ. 'ಭಾರತೀಯ ಭಾಷೆಗಳಿಗೆ common ಚೌಕಟ್ಟು ನೀಡಿದ್ದು ಸಂಸ್ಕೃತ' ಎಂಬುದಕ್ಕೆ ಅಪವಾದವಾಗಿ ಹಲವು ಪದಗಳು ಬಳಕೆಯಾಗುತ್ತವೆ. ಉದಾಹರಣೆಗಳು ಬೇಕಾದರೆ ಕೊಡಬಲ್ಲೆ. ನೀವು ಗಮನಿಸಿರಬಹುದು-coincidenceಗೆ ಸರಿಯಾದ ಕನ್ನಡ ಪದವಿಲ್ಲ.

'ಯಾದೃಚ್ಛಿಕ' ಅಲ್ಲವಾದರೆ ಬೇರೆ ಪದಗಳನ್ನು ಬಳಸಬಹುದು ಎಂದೆನು. ಅಷ್ಟೇ ನಾನು ಹೇಳುವುದು. "ರಾಂಡಮ್" ಅಥವಾ 'ಯಾದೃಚ್ಛಿಕ'ವನ್ನೇ ಬಳಸಬೇಕು ಎನ್ದಿಲ್ಲ. ಹೊಸ ಪದಗಳನ್ನು ಬಳಸೋಣ, ಆದರೆ ಭಾವಾರ್ಥವನ್ನು ನೋಡಿಕೊಂಡರೂ ಸಾಕಲ್ಲವೇ?

Quote:
"ಎನಿತು ರಮ್ಯ" ಎಂಬ ಬಳಕೆಗಳು ಈಗಾಗಲೇ ಇವೆಯಲ್ಲ.

ಎನಿತ ನನಗೇಕೋ ಸರಿಯೆನ್ನಿಸುವುದಿಲ್ಲ. ಎನಿತು ಎಂದರೆ ಎಷ್ಟು ಅಂತ ನಿಮಗೂ ಗೊತ್ತು.

Quote:
ಹುಟ್ಟಲ್ಲ, ಈಗಾಗಲೇ ಹುಟ್ಟಿ ಆಗಿದೆ

ಇರಬಹುದು, ಅಲ್ಲಿತ, ಇಲ್ಲಿತ, ಎಲ್ಲಿತ ಇತ್ಯಾದಿ ಪದಗಳು ಈಗಾಗಲೇ ಹುಟ್ಟಿಕೊಂಡಿರುವ ಬಗ್ಗೆ ಆರಯ್ಯುತ್ತೇನೆ. ನಿಮಗೆ ಗೊತ್ತಿದ್ದರೆ ತಿಳಿಸಿ-ಎಲ್ಲಿ ಬಳಕೆಯಾಗಿದೆ ಅಂತ. _______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
January 24, 2008 - 10:25am — Sunil Jayaprakash

ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು.

Sunil Jayaprakash's picture

ಹೇಳುವುದು, ಕೇಳುವುದು ಪದಗಳಲ್ಲಿರುವ ಉದುವಿಗೂ ಹೇಳುವೆನು, ಕೇಳುವೆನು ಪದಗಳಲ್ಲಿರುವ ಎನುವಿಗೂ ಯಾವ ಅಂತರವೂ ಇಲ್ಲ. ಇಲ್ಲಿ "ಎನು" ಕ್ರಿಯಾಧಾತುವಲ್ಲ

ಬೊಳಂಬು, ೧೮೦ ಡಿಗ್ರಿಯಷ್ಟು ಅಂತರ ಇದೆ. "ಉದು" ಸರ್ವನಾಮ ಆದರೆ "ಎನು" ಕ್ರಿಯಾಧಾತುವಲ್ಲ ಒಪ್ಪಿದೆ ಆದರೆ ಅದು ಕ್ರಿಯಾ ಪ್ರತ್ಯಯ. ಕೆಳಗಿನ ಬಳಕೆಗಳನ್ನು ಬೇಕಿದ್ದರೆ ನೀವೇ ಪರಿಶೀಲಿಸಿ.

೧. ಅವನು ಹೇಳುವುದನ್ನು ಕೇಳು = ಅವನು ಹೇಳುವ+"ಉದು"+ಅನ್ನು ಕೇಳು. ಅಂದರೆ "ಎ" ಏನನ್ನೋ ಹೇಳುತ್ತಾನೆ, ಅದನ್ನು "ಬಿ" ಕೇಳಬೇಕು ಎಂದು "ಸಿ" ಹೇಳುತ್ತಾನೆ. ಇಲ್ಲಿ "ಉದು" ಕ್ರಿಯಾಧಾತುವಾಗಲೀ, ಪ್ರತ್ಯವಾಗಲೀ ಅಲ್ಲ, "ಹೇಳುವ" ಎಂಬ ಕ್ರಿಯಾಪದಕ್ಕೆ ಸೇರಿಸಲಾಗಿರುವ ಒಂದು ಪ್ರನೌನ್-ಸರ್ವನಾಮ.
೨. ನಾನು ಚೆನ್ನಾಗಿ ಹಾಡುವೆನು = ಇಲ್ಲಿ "ಎನು" ಎಂಬುದು ಕ್ರಿಯಾಪದದ ಪ್ರತ್ಯಯ.

ನಾನು ಹೇಳುವುದು(ಇಲ್ಲಿಯೂ ಉದು ಇದೆ ಗಮನಿಸಿ), ಇಷ್ಟು
೧. ಉದು - random object, ಸರ್ವನಾಮ,
೨. ಉದಿ - being in the act of randomization. "ಕುದಿಸು" ಎನ್ನುವಂತೆ "ಉದಿಸು" ಎನ್ನಬಹುದು. "Randomize this" ಎನ್ನುವುದಕ್ಕೆ "ಉದಿಸು"
೩. ಉದಿತ - randomization. ಹಾಗೆ ನೋಡಿದರೆ, ನಾನು "ಉದಿತ" ಎಂಬ ಪದ ಸೂಚಿಸಿದಾಗ ನನ್ನಲ್ಲಿ ಸಂಸ್ಕೃತದ influence ಕೂಡ ಇತ್ತು. "ಉದಿಸುವ" ಕ್ರಿಯೆಗೆ ಉದಿತ ಎನ್ನಬಹುದು.

ಬಡಿ(ಧಾತು) - ಬಡಿಸು(ಕ್ರಿಯಾವಾಚಕ), ಬಡಿತ(ನಾಮವಾಚಕ)
ಕೊರೆ(ಧಾತು) - ಕೊರೆಸು(ಕ್ರಿಯಾವಾಚಕ), ಕೊರೆತ(ನಾಮವಾಚಕ)
ಉದಿ(ಧಾತು) - ಉದಿಸು(ಕ್ರಿಯಾವಾಚಕ), ಉದಿತ(ನಾಮವಾಚಕ)

ಇನ್ನೊಂದು ಮಾತು, ಬೊಳಂಬು ಉದಿತ ಪಕ್ಕಕ್ಕಿಡಿ, ಆದರೆ "ಊ" ಪದಗಳು randomness ಸೂಚಿಸುತ್ತವೆ ಎಂಬುದನ್ನು ಒಪ್ಪುತ್ತೀರಾ. ಹಾಗೆಯೇ ೯ ತಿಂಗಳ ಹಿಂದೆ ಬರೆದಿದ್ದರೂ ನಾನು ನೆನ್ನೆ ರಾತ್ರಿ ಹಾಕಿದ ಉದ್ದದ ಕಾಮೆಂಟ್ ಓದಿದಿರಾ.

  • Login or register to post comments
  • link
  • Email this ಪ್ರತಿಕ್ರಿಯೆ
January 24, 2008 - 10:26am — ವೈಭವ

ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು.

ವೈಭವ's picture

".. 'ಭಾರತೀಯ ಭಾಷೆಗಳಿಗೆ common ಚೌಕಟ್ಟು ನೀಡಿದ್ದು ಸಂಸ್ಕೃತ' ಎಂಬುದಕ್ಕೆ ಅಪವಾದವಾಗಿ ಹಲವು ಪದಗಳು ಬಳಕೆಯಾಗುತ್ತವೆ..."
ಹೌದು. ಮಾದರಿ: ಕನ್ನಡದಲ್ಲಿ 'ಭಯೋತ್ಪಾದಕ', ಹಿಂದಿಯಲ್ಲಿ 'ಆತಂಕವಾದಿ'.....ಎರಡು ಸಕ್ಕದದ್ದೇ ಆದರೆ ಅರಿತ ಒಂದೇ.

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
January 23, 2008 - 10:57pm — Sunil Jayaprakash

ಉ: ಉದು, ಉಲ್ಲಿ ಇವು ಕ್ರಿಯಾಧಾತುಗಳಲ್ಲ. ಇವು pronounಗಳು.

Sunil Jayaprakash's picture

ಗೆಳೆಯರೇ, ಈ ಕೆಳಗಿನ ಕಾಮೆಂಟ್, ನಾನು ಮೇ ೧, ೨೦೦೭ರಲ್ಲಿ ಬರೆದದ್ದು, ಆದರೆ ನಾನು ಆ ದಿನ ಎಷ್ಟು ಮನನೊಂದಿದ್ದೆ ಎಂದರೆ, ಮೇಲಿನ ಮಹೇಶನ ಪ್ರಶ್ನೆಗೆ ಉತ್ತರ ಬರೆದಿಟ್ಟುಕೊಂಡಿದ್ದರೂ ಇಲ್ಲಿಯವರೆಗೆ ಅದನ್ನು ಹಾಕಿರಲಿಲ್ಲ. ಈ ದಿನ, ಶ್ರೀಕಾಂತ ಮಿಶ್ರಿಕೋಟಿಯವರು ಉ, ಊಗಳ ಬಗ್ಗೆ ಚರ್ಚೆಯನ್ನು ಮುಂದುವರಿಸಿದ್ದರಿಂದ, ೯ ತಿಂಗಳ ಹಿಂದೆ ಬರೆದ ಕಾಮೆಂಟನ್ನು ಹಾಗೆಯೇ ಪೋಸ್ಟಿಸುತ್ತಿದ್ದೇನೆ. ಈ ಕಾಮೆಂಟಿನಲ್ಲಿ ನಾನು ಹುಡುಕಿಟ್ಟಿದ್ದ, ಕೊಂಡಿಗಳು ಈಗ ಕೆಲಸ ಮಾಡುತ್ತಿಲ್ಲ ಅದಕ್ಕೆ ಕ್ಷಮೆಯಿರಲಿ. ಸ್ವಲ್ಪ ಉದ್ದದ ಕಾಮೆಂಟ್ ಇದು.

--------------------------------------May 1, 2007ರ ಕಾಮೆಂಟ್---------------------------------------------------
@ಮಹೇಶ,
೧. ಮನ್ನಿಸಪ್ಪಾ, ನಿನ್ನ ಮಾತುಗಳಿಗೆ ಮತ್ತು ಗೊಂದಲಗಳಿಗೆ ನಾನು ಉತ್ತರವನ್ನೀಯುವುದು ತುಂಬಾ ತಡವಾಯಿತು. ಕಾರಣವೇನೆಂದರೆ, ನಾನು ಈ ಚರ್ಚೆ ಮೊದಲು ಮಾಡಿ ತುಂಬಾ ಮನನೊಂದಿದ್ದೆ. ಕನ್ನಡದ ಪತ್ರಕರ್ತರೇ, ಕನ್ನಡದ ಹೊಸತನದ ಬಗ್ಗೆ ಈ ರೀತಿ ಹೇಳುತ್ತಾರೆ ಎಂಬುದನ್ನು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ಆ ಬೇಸರದಿಂದ ಹೊರಬರಲು ತುಂಬಾ ಸಮಯ ಹಿಡಿಯಿತು.
೨. ನಾನು "ಉದಿತ" ಎಂಬ ಪದ ಬಳಸೋಣ ಎಂಬ ಮಾತು ಮುಂದಿಟ್ಟಾಗ ನಾನು ಯೋಚಿಸಿದ್ದ ಅಂಶವೆಂದರೆ "ಉದಿತ" ಎಂಬುದು ಹೊಸ ಪದವಲ್ಲ. "ಉದಿತ" ಎನ್ನುವುದು ಸಂಸ್ಕೃತದಲ್ಲಿಯೂ ಇರುವ ಪದ. ಹಾಗಾಗಿ ಇದು ಹೊಸತಲ್ಲದ ಪದ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡಿದ್ದೆ. "ಯಾದೃಚ್ಛಿಕದಂತಹ" ಕಷ್ಟವಾದ ಸಂಸ್ಕೃತ ಪದವೇ ಜನರಿಗೆ ತಿಳಿದಿರುತ್ತದೆ ಎಂದು ನಿರೀಕ್ಷಿಸುವಾಗ, "ಉದಿತ" ಎಂಬ ಹೈಸ್ಕೂಲಲ್ಲಿ ಓದಿದ ಪದದ ಅರ್ಥ ತಿಳಿದೇ ಇರುತ್ತದೆ ಎಂದು ನಾನು ನಿರೀಕ್ಷಿಸುವುದು ತಪ್ಪೆನಿಸಲಿಲ್ಲ.
೩. ಉದು ಎನ್ನುವುದು ನಾಮವಾಚಕ ಎಂದು ನೀನು ಹೇಳಿದ್ದು ಸರಿ, ಆದರೆ ನೋಡು ಹೊಸಗನ್ನಡದಲ್ಲಿ ಒಂದೇ ಪದ ನಾಮವಾಚಕ ಮತ್ತು ಕ್ರಿಯಾವಾಚಕ ಎರಡೂ ಆಗಿ ಬಳಕೆಯಲ್ಲಿದೆ. ಹಾಡು, ಕಾಡು.
೪. ೩ ಪಾಯಿಂಟ್ ಹೊರತಾಗಿಯೂ "ಉದು" ಪದಕ್ಕೆ ತ ಸೇರುವುದು ಅಷ್ಟು ತರವಲ್ಲ ಎಂದು ನೀನು ಹೇಳಿರುವುದು ಸರಿ. ಆದರೆ ಚರ್ಚೆ ಸಾಗುತ್ತ ನನಗೆ ಅನಿಸಿದ ಒಂದು ಮಾತೆಂದರೆ, "ತ" ಪ್ರತ್ಯಯದ ಸರಳತೆಯಿಂದಾಗಿ ಉದಿ (ಕುದಿ, ಒದಿ, ಕದಿ ರೀತಿಯಲ್ಲಿ) ಎಂಬ ಹೊಸಪದವನ್ನು ಕ್ರಿಯಾವಾಚಕವಾಗಿ ಸ್ವೀಕರಿಸಬಹುದು. ನನ್ನ ಬಲವಂತವೇನೂ ಇಲ್ಲ. ನಾವುಗಳು ಹೇಗೆ ಬಳಸುತ್ತಾ ಸಾಗುತ್ತೇವೆ ಎಂಬುದನ್ನು ಅವಲಂಬಿಸಿರುತ್ತದೆ. ಆದರೆ "ಉಲ್ಲಿ" ಪದಕ್ಕೆ ತ ಸೇರುವುದಕ್ಕೆ ಏನಾದರೂ ಆಕ್ಷೇಪಣೆ ಇದೆಯೇ ?. ಪೂರಕ ಓದಿನಲ್ಲಿ "ತ" ಪ್ರತ್ಯಯದ ಉಪಯುಕ್ತತೆ ಮತ್ತು ಸರಳತೆಯ ಬಗ್ಗೆ ಎರಡು ಕೊಂಡಿ ನೀಡಿದ್ದೇನೆ.
೫. ಉದು, ಉಲ್ಲಿ ಇವುಗಳು ಸರ್ವನಾಮವೆಂದು ನಾನು ಹೇಳಿಲ್ಲ, ನಾನು ಹೇಳಿದ್ದು ಊ ಎಂಬುದು ಉದು, ಉಲ್ಲಿ ಪದಗಳ ಸರ್ವನಾಮ. ಹೇಗೆ ಆ ಎಂಬುದು ಅದು, ಅಲ್ಲಿ, ಅತ್ತ ಎಂಬುದರ ಸರ್ವನಾಮವೋ ಹಾಗೆ.

ಗೆಳೆಯರೆ,
ಚರ್ಚೆಯಲ್ಲಿ (??) Randomness ಫಂಕ್ಷನಾಲಿಟಿಯನ್ನು ನೋಡಿ, ನಾನು ಆರು ಆಪ್ಷನ್ ಗಳನ್ನು ನಿಮ್ಮ ಮುಂದಿಡುತ್ತೇನೆ. ಪ್ರತಿಯೊಂದು ಪದದ ಬಗ್ಗೆ ನನ್ನ ಅಭಿಪ್ರಾಯವನ್ನೂ ಹಾಕಿದ್ದೇನೆ.

ಕ್ರಮ ಸಂಖ್ಯೆ ಪದ ವಿವರಣೆ
೧. ರಾಂಡಮ್ ಇಂಗ್ಲೀಷ