ನಡುಗಿಸಲಿರುವ "ಮಾಮು ಫೈನು"
ಟ್ರಾಫಿಕ್ ನಿಯಮಗಳನ್ನು ಮೀರಿದವರಿಗೆ ("ಟ್ರಾಫಿಕ್ ಪೋಲಿಸ್ ಹಿಡಿದರೆ ನಿಮಗೆ" ಎಂದು ಓದಿಕೊಳ್ಳಿ) ಹಾಕಲಾಗುತ್ತಿರುವ ಫೈನುಗಳನ್ನು ಆರು ಪಟ್ಟು ಹೆಚ್ಚಿಸುವ ಕಾಯ್ದೆಯೊಂದು ಈ ಸಲದ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುವುದಂತೆ.
ವೇಗ ಮಿತಿಯನ್ನು ಮೀರಿದವರಿಗೆ ಈ ಹಿಂದಿನಂತೆ ಇದ್ದ ೫೦೦ ರೂ ಜುಲ್ಮಾನೆ ೩,೦೦೦ ರೂ ಗಳಿಗೆ ಏರಿಸಲಾಗುವುದಂತೆ. ಅಂದರೆ ನೀವು ವೇಗಮಿತಿಯನ್ನು ಮೀರಿದಿರಿ ಎಂದು ಟ್ರಾಫಿಕ್ ಮಾಮು (ಪೋಲಿಸರು) ಹಿಡಿದು ನಿಲ್ಲಿಸಿದರೆ ನೀವು ಇನ್ನು ಮೇಲೆ ಮೂರು ಸಾವಿರ ರೂಪಾಯಿ ತೆತ್ತಬೇಕು!
ತದನಂತರ ೫,೦೦೦ ರೂ ನಂತೆ ಪ್ರತಿ ಬಾರಿ ಹೀಗೆ ಹಿಡಿಯಲ್ಪಟ್ಟಾಗ ಕಟ್ಟಬೇಕು.
ನೋಂದಣಿಯಾಗದ ಗಾಡಿಗಳಿಗೆ ಜುಲ್ಮಾನೆ ಮೊದಲನೆಯ ಜುಲ್ಮಾನೆಗೆ ೧೦,೦೦೦ ರೂಗಳಿಗೆ ಏರಿಸಲ್ಪಟ್ಟಿದ್ದರೆ ತದನಂತರ ಜುಲ್ಮಾನೆಗಳಿಗೆ ೨೦,೦೦೦ ರೂ ಗಳಂತೆ ಎರಡು ಪಟ್ಟು ಕಟ್ಟಬೇಕಾಗುವುದಂತೆ! ಪರ್ಮಿಟ್ ಇಲ್ಲದ ಚಾಲಕರಿಗೂ ಇದೇ ರೀತಿಯ ಜುಲ್ಮಾನೆ.
ಇಷ್ಟೇ ಅಲ್ಲ, ಟ್ರಾಫಿಕ್ ಮಾಮುವಿಗೆ ಯಾರಾದರೂ ಯಾವ ಸಮಯದಲ್ಲಾದರೂ "ಅಪಾಯಕಾರಿಯಾಗಿ ಓಡಿಸುತ್ತಿದ್ದಾರೆ" ಎಂದನಿಸಿದರೆ ಮಾಮು ಎರಡು ಸಾವಿರ ರೂಪಾಯಿಗಳಷ್ಟು ಜುಲ್ಮಾನೆ ವಿಧಿಸಬಹುದಂತೆ.
ಇದು ಎಕನಾಮಿಕ್ ಟೈಮ್ಸ್ ಇಂದು ವರದಿ ಮಾಡಿರುವ ಸುದ್ದಿಯ ಸಾರಾಂಶ.
ಹೀಗೆ ಹೊರತಂದ ಕಾಯ್ದೆಯಿಂದ ಮುಂದೆ ಏನಾಗಬಹುದು? ಸ್ವಲ್ಪ ಅಲೋಚಿಸಿ ನೋಡುವುದು ಒಳಿತು.
ಮಾಮುಗಳಿಗೆ ಈಗಾಗಲೇ ಹೆಲ್ಮೆಟ್ಟು ಕೊಟ್ಟು ಹೊಟ್ಟೆ ತುಂಬಿಸಿಕೊಳ್ಳುವ ವಿಧಾನ ಹುಡುಕಿಕೊಟ್ಟಿರುವ ದಿನಗಳಲ್ಲಿ ಲಂಚ ಪ್ರವೃತ್ತಿ ಇನ್ನಷ್ಟು ಹೆಚ್ಚಾಗುವುದು. ಈಗಾಗಲೇ ಸಮೃದ್ಧವಾಗಿ ಆಚರಿಸಲ್ಪಡುವ ಮಾಮುಗಳನ್ನು "ಕೈತುಂಬಿಸಿ" ಚೀಟಿ ಹರಿಯದಂತೆ ಮಾಡುವ ಸನ್ನಿವೇಶಗಳು ಹೆಚ್ಚಾಗುವುದು. ಟ್ರಾಫಿಕ್ ಪೋಲಿಸರನ್ನು ಕಂಡರೆ ಹೆದರುವ ಜನ ಇನ್ನಷ್ಟು ಹೆದರಿ ನಡುಗುವಂತಾಗಬಹುದು. ಮಾಮುಗಳಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗುವುದು.
ಜುಲ್ಮಾನೆ ವಿಫಲವಾಗಿ ಲಂಚ ಪ್ರವೃತ್ತಿ ಹೆಚ್ಚಾಗುವಂತಹ ಕಾಯ್ದೆ ಎಂತಹ ಕಾಯ್ದೆಯಾಗುವುದು?
ರಸ್ತೆಯ, ಟ್ರಾಫಿಕ್ ನ ನರಕಯಾತನೆಗಳೊಂದಿಗೆ ಈಗಾಗಲೆ ರಸ್ತೆಯಲ್ಲಿ ಚಿಕ್ಕಪುಟ್ಟ ತಾಪತ್ರಯಗಳಿಗೆ ಸಿಕ್ಕರೂ ಮಾಮುಗಳಿಂದ ನರಕಯಾತನೆಗೆ ಒಳಪಡುವ ವೆಹಿಕಲ್ ಬಳಸುವವರಿಗೆ ಇನ್ನಷ್ಟು ತೊಂದರೆಯಾಗುವುದು. ಇಂತಹ ಜುಲ್ಮಾನೆಗಳು ಬಡವರಿಗೆ ಹಾಗೂ ಮಧ್ಯಮವರ್ಗದವರಿಗೆ (ಅದರಲ್ಲೂ ವಿದ್ಯಾರ್ಥಿಗಳಿಗೆ) ಸಿಂಹಸ್ವಪ್ನವಾಗಿ ನಡುಗಿಸುವುದಂತೂ ಖರೆ!

- Login or register to post comments
- 657 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರಜಾಪ್ರಭುತ್ವಕ್ಕೆ ಜೈ: ನಡುಗಿಸಲಿರುವ "ಮಾಮು ಫೈನು"
ಜೈ ಪ್ರಜಾಪ್ರಭುತ್ವ! ನಿಜಕ್ಕೂ ಬ್ರಿಟಿಷರು ನಮ್ಮನ್ನು ಸುಲಿಗೆ ಮಾಡಿದರೋ, ಅಥವಾ ಅವರಿಗಿಂತ ಈ ಐವತ್ತು ವರ್ಷಗಳಲ್ಲಿ ನಮ್ಮವರೇ ನಮ್ಮನ್ನು ಸುಲಿದರೋ ಎಂದು ಅನುಮಾನ ಬರುತ್ತಿದೆ. ಒಟ್ಟಿನಲ್ಲಿ, ಘನ ಸರ್ಕಾರದ ಸಂದೇಶ ಇಷ್ಟೇ: ನ್ಯಾಯವಾಗಿ ದುಡಿಮೆ ಮಾಡೋದು ತಪ್ಪು. ಲಂಚದಲ್ಲಿ ಕೋಟ್ಯಾಂತರ ರೂಪಾಯಿ ಹಣ ಹೊಡೆಯಿರಿ. ನಿಮಗೆ ಎಲ್ಲ ರೀತಿಯ ಸೆಕ್ಯೂರಿಟಿ ಕೊಡುತ್ತೀವಿ. ನೀವೇ ನೋಡಿ; ನೂರು ರೂಪಾಯಿ ಕದ್ದವನಿಗೆ ಜೈಲಿನಲ್ಲಿ ಯಾವುದೇ ವಿಚಾರಣೆಯ ಹಂಗೂ ಇಲ್ಲದೇ ಒಂದು ರಾತ್ರಿ ಕೊಳೆಹಾಕುತ್ತಾರೆ. ಅದೇ ನೂರು ಕೋಟಿ "ಸ್ಕ್ಯಾಮ್"ನಲ್ಲಿ ಭಾಗಿಯಾದರೆ, ವಿಚಾರಣೆ, ಜಾಮೀನು, ಪೋಲೀಸ್ ಭದ್ರತೆ ಇತ್ಯಾದಿ ಇತ್ಯಾದಿ ನಾಟಕಗಳು. ಆ ಕೇಸು ಏನಿಲ್ಲವೆಂದರೂ ಒಂದು ವರ್ಷ ಎಳೆಯುತ್ತದೆ. ಎಂತಹ "ಸಾಮಾಜಿಕ ನ್ಯಾಯ" ಅಲ್ಲವೇ?
ಈ "ಫೈನ್ ಮಸೂದೆ" (ಫೈನ್ ಅಂದರೆ ಚೆನ್ನ ಅಂತಲ್ಲ ಮತ್ತೆ!) ಅಂಗೀಕೃತವಾದಲ್ಲಿ, RTO ಅಧಿಕಾರಿಗಳು "ಇಲ್ಲಿ ರಿಯಾಯತಿ ದರದಲ್ಲಿ ಫೈನ್ ಪಾಸುಗಳು ದೊರೆಯುತ್ತವೆ" ಅಂತ ತಮ್ಮ ಮನೆಯಲ್ಲೇ ಹೊಸ ದಂಧೆ ಶುರು ಮಾಡಬಹುದೇನೋ? ಆಗ ರಸ್ತೆಗಿಳಿಯುವ ಅವಶ್ಯಕತೆಯೂ ಇರುವುದಿಲ್ಲ ನೋಡಿ! ಅಥವಾ ಮಹಾಭಾರತದ ಬಕಾಸುರನ ತರಹ, ಆಯಾ ಏರಿಯಾದವರೆಲ್ಲ, ತಿಂಗಳಿಗೊಮ್ಮೆ ಇಷ್ಟು ಅಂತ ಹಣವನ್ನು ಒಗ್ಗೂಡಿಸಿ ಆ ಬಡಾವಣೆಯ ಅಧಿಕಾರಿಗೆ ಕೊಟ್ಟರೆ ಆಯಿತು. ಆ ಬಡಾವಣೆಯ ಯಾವ ಗಾಡಿಯನ್ನೂ ಆ ತಿಂಗಳಿನಲ್ಲಿ ಹಿಡಿಯುವುದಿಲ್ಲ ಅಂತ ವಚನ ಕೊಡಬಹುದೇನೋ?
ಯಾವುದೇ ಆಗಲಿ, ವಿಪರೀತಕ್ಕೆ ತಲುಪಿದಾಗ ಮಾತ್ರ ಸಾಮಾಜಿಕ ಆಂದೋಳನವೊಂದು ಉಂಟಾಗಲು ಸಾಧ್ಯವೆಂದು ಇತಿಹಾಸ ಪದೇ ಪದೇ ತೋರಿಸಿಕೊಟ್ಟಿದೆ. ಈ ರೀತಿಯ ಹುಚ್ಚು ಏರಿಕೆಗಳು ಅಂತಹದೊಂದು ಸಂಧಿಕಾಲಕ್ಕೆ ನಮ್ಮನ್ನು ತಯಾರುಮಾಡಲು ಬಂದೊದಗಿರುವ ವರಗಳೇ ಏನೋ! ಮತ್ತೊಮ್ಮೆ ಜೈ ಪ್ರಜಾಪ್ರಭುತ್ವ.
ಕೊನೆಹನಿ: ಈ ಯೋಜನೆಯನ್ನು ಮಂಡಿಸಿದವರಿಗೆ ಯಾವುದಾದರೂ "ಬೀದಿ ನಾಯಿ" ಕಚ್ಚಿದ್ದರಿಂದ ಇಂತಹ ಅಮೋಘವಾದ ಆಲೋಚನೆ ಹೊಳೆದಿರಬಹುದೇ?
- ಶ್ಯಾಮ್ ಕಿಶೋರ್
Re: ನಡುಗಿಸಲಿರುವ "ಮಾಮು ಫೈನು"
ಲಂಚದ ಮಹಾತ್ಮೆಯನ್ನು ಬದಿಗಿಟ್ಟರೆ, ಇದೊಂದು ಉತ್ತಮ ನಡೆ ಎಂದು ನನ್ನ ಅಂಬೋಣ.
ನಾನು ವಾಸಿಸುತ್ತಿರುವ ಈ ಊರಿನ (ಸಿಂಗಪುರ) ಸುದ್ದಿಯನ್ನು ಕೇಳಿದರೆ ನೀವೆನ್ನುತ್ತೀರೋ? ಕೆಂಪು ದೀಪವಿದ್ದರೂ ನೀವು ನಿಮ್ಮ ಗಾಡಿಯನ್ನು (ವಾಹನವನ್ನು) ಚಲಾಯಿಸಿದಿರಿ ಅನ್ನಿ ! ವೇಗವಾಗಿ ಹೋಗುವ ಇತರ ವಾಹನಗಳಿಂದ ಒಂದು ವೇಳೆ ಬದುಕುಳಿದರೆ, ಕಾದಿದೆ ಮುಂದೆ ನಿಮಗೆ. ನಿಮ್ಮ ಮನೆ ಬಾಗಿಲಿಗೆ ಛಾಯಾಚಿತ್ರ ಸಮೇತ (ಎಲ್ಲಿ, ಎಷ್ಟು ಹೊತ್ತಿಗೆ ಇತ್ಯಾದಿ ನಮೂದಿಸಿ ನೀವು ಕೆಂಪು ದೀಪ ಹಾರುತ್ತಿರುವ ಚಿತ್ರ) ’ಮಾಮು’ ರಶೀದಿ ಕಳುಹಿಸುತ್ತಾನೆ. ಇದಕ್ಕೆ ೧೨೦ ಡಾಲರ್ ದಂಡ ತೆರುವುದರ ಜೊತೆ, ನಿಮ್ಮ ವಾಹನ ಚಲಾವಣೆಗೆ ಒಂದು ವರ್ಷ ರಜೆ ! ಸಾಕೇ..?
ಆದ ಕಾರಣ ವಾಹನ ಚಲಾವಣೆಯ ಪರವಾನಗಿ ಗಳಿಸುವುದೆಂದರೆ ಇಲ್ಲಿ ಗಜ ಪ್ರಸವವೇ ಸರಿ. ಓರ್ವ ಸಾಮಾನ್ಯನಿಗೆ ಪರವಾನಗಿ ಸಿಗಲು ಕಡಿಮೆ ಸಮಯವೆಂದರೆ ಒಂದೂವರೆ ವರ್ಷ ಅಷ್ಟೇ! ಏನಂತೀರಿ..?