ಬೇಂದ್ರೆ ಅಲ್ಲಮ ಪ್ರಭು ಬಗ್ಗೆ...
ಬೇಂದ್ರೆಯವರ 'ಉಯ್ಯಾಲೆ' ಯಿಂದ ಈ ಪದ್ಯ
ಅಲ್ಲಮ ಪ್ರಭು
ಮನದ ಬಯಲಲಿ ಬವಣೆಗೊಂಡೆ, ಬಿಸಿಲಿನ ಝಳದೆ
ಹುಲ್ಲೆ ಹಂಗಿಸುವ ಹುಸಿನೀರ ಕಾಂಬೊಲು ಕಂಡೆ
ನೀರ, ನೇಹಿಗ, ನಂಟ, ಬಂಟ, ಸಂವಾದಿ, ಗುರು,
ಶಿಷ್ಯ, ಪ್ರೀತಿಯ ಜಾತಿಗಾರ! ಎಲ್ಲಿರುವೆ ರಸ-
ಸಿದ್ಧ ಗೋರಕ್ಷನುಕ್ಕಿಲೆ ಹೊಯ್ದರೂ ಮುಕ್ಕು
ತುಕ್ಕರಿಯದಿದ್ದ ಮೈಕವಚ ಕಳೆದಿಡುವಂತೆ
ಕೆಳಗಿರಿಸಿ, ಕದಳಿಯಲ್ಲಡಗಿ ಕಾಣದೆ ಹೋದ,
ಲಿಂಗ ಲೀಲಾವಿಲಾಸದಲಿ ನಟಿಸಿದ ಮೂರ್ತಿ?
ವಚನ ವಿದ್ಯಾನಟಿಯು ಕುಣಿಕುಣಿದಳಂದು, ಮ-
ದ್ದಳೆಯ ಸೊಲ್ಲಿಗೆ ವಿವಿಧ ಭಂಗಿಯಲಿ; ಶೂನ್ಯದಲಿ
ಹುಟ್ಟುಗಟ್ತಿತು ಹದುಳದೊಂದು ಹುಣ್ಣಿಮೆ; ಬೆಡಗು
ಬಿನ್ನಾಣ ಬಿಡಿಸಿ, ಬೆಳುದಿಂಗಳವ ಕುಡಿದ ಮಧು-
ಮತ್ತ ಚಿತ್ತ-ಚಕೋರ ಕೇಳುತಿದೆ, ಹೇಳುತಿದೆ -
'ಬೇರೆ ದರುಶನವೇಕೆ? ಮಾತೆ ಜ್ಯೋತಿರ್ಲಿಂಗ?"
ಅರ್ಥಗಳು :-
ನೀರ(ನೀಱ) = ಚೆಲುವ,
ನೇಹಿಗ = ಸ್ನೇಹಿತ = ಗೆಳೆಯ
ದರುಶನ = ಆಧ್ಯಾತ್ಮ
ಮಾತೆ = ಮಾತೆಂಬುದೆ = ನುಡಿಯಂಬುದೆ
ಪ್ರೀತಿಯ ಜಾತಿಗಾರ ಪದ ಬಳಕೆ ಗವನಿಸಿ.

- Login or register to post comments
- 564 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
Re: ಬೇಂದ್ರೆ ಅಲ್ಲಮ ಪ್ರಭು ಬಗ್ಗೆ...
ಹುಟ್ಟುಗಟ್ತಿತು ಅಲ್ಲ ..ಹುಟ್ಟುಗಟ್ಟಿತು..
ಹೊಳೆಯದ ಒರೆಗಳು
ವೈಬವ...
ಕೆಲವು ಒರೆಗಳು ತಿಳಿಯಲಿಲ್ಲ.
ಚಿಗರೆಯನ್ನು ಅಣಕಿಸುವ 'ಕಾಂಬೊಲು' ಅಂದರೇನು?
ಇದನ್ನು ತುಸು ಬಿಡಿಸಿ ಅಱುಪಿರಿ/ಅರುಹಿರಿ!
======================================
Re: ಹೊಳೆಯದ ಒರೆಗಳು
ಕಾಣುವ ಒಲು -> ಕಾಣುವೊಲು -> ಕಾಂಬೊಲು = ಕಾಣುವಂತೆ
ಮರೀಚಿಕೆಯಂತೆ ಅನ್ನುವ್ ಭಾವ.
ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ ನಷ್ಟ ಜೀವನದಾಸೆ ಪುರಂದರ ವಿಠಲ - ಎಂಬ ಪುರಂದರದಾಸರ ಪದವನ್ನು ನೆನಪಿಸಿಕೊಳ್ಳಿ (ಬಿನ್ನಹಕೆ ಬಾಯಿಲ್ಲವಯ್ಯ)
-ಹಂಸಾನಂದಿ
ಕಾಂಬೊಲು
ನನ್ನಿ ಹಂಸಾನಂದಿ.
ನನಗೆ ತಿಳಿದಿಲ್ಲ ಆ ಪುರಂದರ ದಾಸರ ಪದ!
======================================
Re: ಕಾಂಬೊಲು- ಎಂದು ಕಾಂಬೆನು- ಬಾಹೋರಿಲ್ಲ
’ಎಂದು ಕಾಂಬೆನು ಎನ್ನ ಸಲಹುವ’ ಎಂಬ ಒಮ್ದು ಪುರಂದರದಾಸರ ರಚನೆಯೂ ಇದೆ.
ಕಾಣು -
ಕಾಂಬ-ಕಾಣುವ
ಕಾಂಬೆನು- ಕಾಣುವೆನು .
ಕಾಂಬೊಲು - ಕಾಣುವೊಲು ಇತ್ಯಾದಿ
ದಾಸಸಾಹಿತ್ಯವನ್ನೂ , ವಚನಸಾಹಿತ್ಯವನ್ನೂ , ಸಾಮಾನ್ಯ ಜನದ ಮಾತನ್ನೂ ಗಮನಿಸಿದರೆ ನಿಮಗೆ ಹೆಚ್ಚು ’ಒರೆ’ಗಳು ಸಿಗುತ್ತವೆ .
ಸಹಜವಾಗಿ ಅವು ಕನ್ನಡ ಜಾಯಮಾನಕ್ಕೆ ಹೊಂದಿರುತ್ತವೆ.
ನಿಮಗೆ ’ಬಾಹೋರಿಲ್ಲ’ ಗೊತ್ತೇ ? ಹೇಳಿ ನೋಡುವ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
Re: ಕಾಂಬೊಲು- ಎಂದು ಕಾಂಬೆನು- ಬಾಹೋರಿಲ್ಲ
"ಬಾಹೋರಿಲ್ಲ"!! ಅಂದ್ರೆ?
======================================