22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಈ ತರದ ಪದ/ಒರೆಗಳಿಗೆ ಏನನ್ನುತ್ತಾರೆ?

July 1, 2007 - 11:43pm
ವೈಭವ

ನೆರೆ-ಹೊರೆ ಅಂದ್ರೆ 'ಅಕ್ಕ-ಪಕ್ಕ' ಅನ್ನುವ ಅರ್ತ ಇದೆ.

 ಇಲ್ಲಿ ನೆರೆ ಅಂದ್ರೆ ಪ್ರವಾಹ(flood), ಗುಂಪಾಗುವುದು ( ಮಾದರಿ: ನೆರೆ ಬಂದಿತಣ್ಣ, ಬೀದಿಯಲ್ಲಿ ಮಂದಿ ನೆರೆದಿದ್ದರು ) 

 ಹೊರೆ ಅಂದ್ರೆ ಹೊರುವುದು, ಭಾರ, ತೂಕ ( ಮಾದರಿ: ಹೊರಲಾದರೆ ಹೊರೆ ಹೊತ್ತಕಂಡ ಬಂದೆ )

ಈ ತರ ಬೇರೆ ಬೇರೆ ಅರ್ತಗಳನ್ನು ಹೊಂದಿರುವ ಒರೆಗಳು ಕೂಡಿದಾಗ ಇನ್ನಾವುದೋ ಹೊಸ ಅರ್ತವನ್ನು ಕೊಡುತ್ತದೆ. ಈ ತರದ ಬೇರೆ ಮಾದರಿಗಳು ಇವೆಯೆ? ಇದು ಕನ್ನಡದ ಸೊಗಡಿಗೇ ಒದಗಿ ಬರುವ ಕಟ್ಟಳೆಯೆ? ಈ ರೀತಿ ಆಗಿರ್ವುದಕ್ಕೆ ಓಸುಗರಗಳೇನು?                                                                                                            

                  ಬಲ್ಲವರು ತಿಳಿಸಿ 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Submitted by mahesha on
ವೈಬವರೇ, ದ್ರಾವಿಡ ಒರೆಗಂಟು ನೋಡಿ, ನೆರವಾಗುವುದು.!! http://dsal.uchicago... ನೆರೆ-ಹೊರೆ ನೆರೆ ಅಂದರೆ ಹತ್ತಿರದ, ಪಕ್ಕದ, neighbour. ಒಂದು ತಿಳಿವಿದೆ. ಹೊರೆ, ಅದ್ರೆ ಹೀಗಿರ ಬೋದು. ಈಗ ನಾವು ನಮ್ಮ ಮನೆಯಿಂದ ಒಂದು 'ಹೊರೆ'ಯನ್ನು, ಮಂಕರಿಯನ್ನು ಹೊತ್ತೊಯ್ಯಬೇಕೆಂದು ಇಟ್ಟುಕೊಳ್ಳಿರಿ. ಆಗ ನಾವು ನಮ್ಮ ತಲೆಯ ಮೇಲೆ 'ಸಿಂಬಿ' ಇಟ್ಟುಕೊಂಡು, ಬೇರೊಬ್ಬರನ್ನು ಮಂಕರಿಯನ್ನು ತಲೆಗೆ ಏರಿಸಲು ಕೇಳುತ್ತೇವೆ( ಮೊಸರು/ಮಜ್ಜಿಗೆ ಮಾರುವ ಅಜ್ಜಿಯ ನೆನೆಪು). ಇದರಲ್ಲಿ ಪಕ್ಕದ, ನೆರೆಯವರ ನೆರವು ಬೇಕು.

Submitted by srivathsajoshi on
ಜೋಡಿಪದಗಳನ್ನು ಪ್ರತ್ಯೇಕಿಸಿದಾಗ ಒಂದೊಂದಕ್ಕೂ ಬೇರೆಯೇ ಅರ್ಥವಿರಬಹುದು, ಇರಲೇಬೇಕೆಂದೇನೂ ಇಲ್ಲ. ಮೂರು ಉದಾಹರಣೆಗಳು: ೧. ಹಣ್ಣು-ಹಂಪಲು (ಹಂಪಲು ಪದಕ್ಕೆ ಅರ್ಥವಿಲ್ಲ) ೨. ಪಾತ್ರೆ-ಪಡಗ (ಪಡಗಕ್ಕೂ ಪಾತ್ರೆ ಎಂದೇ ಅರ್ಥವಿದೆ) ೩. ಮಣ್ಣು-ಮಸಿ (ಮಣ್ಣು, ಮಸಿ ಇವೆರಡಕ್ಕೂ ಪ್ರತ್ಯೇಕ ಅರ್ಥಗಳಿವೆ. ಮಣ್ಣುಮಸಿ ಎಂಬ ಜೋಡಿಪದಕ್ಕೆ miscellaneous/ಅದೂಇದೂ ಎಂಬುದಕ್ಕೆ ಹತ್ತಿರವಾದ ಅರ್ಥ)

Submitted by mahesha on
ಜೋಶಿಗಳೇ... ಹಂಪಲು(ಪಂಪಲ್) ಅಂದರೆ "ಊದಿಕೊಂಡ", "ದೊಡ್ಡದಾದ" ಅಂತ ತಿಳಿವಿದೆ. ಕುಂಬಳಕಾಯಿಯಂತದ್ದು ಹಂಪಲು! ಈ ತಿಳಿವನ್ನು ನಮ್ಮ ಶಾಲೆಯಲ್ಲಿ ಹೇಳಿಕೊಟ್ಟಿದ್ದರು. ತಮಿಳಲ್ಲೂ 'ಪಂಪಲ್' ಇದೆ. ಪಂಪ(ಹಂಪ), ಪಂಪೆ(ಹಂಪೆ), ಈ ಒರೆಗಳ ತಿಳವು ಹುಡುಕಬೇಕು! ಹಣ್ಣು - ಹಂಪಲು ಎರಡಕ್ಕೂ ತಿಳಿವಿವೆ.

Submitted by hamsanandi on
ಜೋಶಿ/ಮಹೇಶ ಅವರೆ, ನನಗೆ ತಿಳಿದ ಮಟ್ಟಿಗೆ, ಹಂಪಲು ಅನ್ನುವುದು ದ್ವಿರುಕ್ತಿ; ಹಂಪಲು ಅನ್ನುವುದಕ್ಕೆ ಅರ್ಥವಿಲ್ಲದೇ ಇಲ್ಲ. ಹಣ್ಣು + ಫಲ -> ಹಂಪಲ ಆಗಿದೆ ; ಆಮೇಲೆ, ಹಣ್ಣು ಎನ್ನುವುದಕ್ಕೆ ಪ್ರಾಸವಾಗುವಂತೆ, ಉಕಾರಾಂತವಾಗಿದೆ. ಇದು ತಂಗಳನ್ನ ಎನ್ನುವುದರ ತರಹವೇ. ತಣಿದ ಕೂಳು -> ತಂಗಳು (ಆರಿದ ಅನ್ನ) ಆದರೆ ತಂಗಳನ್ನ ಅನ್ನುವುದು, ಹಣ್ಣು ಹಂಪಲು ಅನ್ನುವುದೂ ರೂಡಿಯಲ್ಲಿ ನಿಂತುಬಿಟ್ಟಿವೆ. -ಹಂಸಾನಂದಿ

Submitted by hene on
ಮಹೇಶರು ಹೇಳುವಂತೆ 'ಹೊರೆ'ಗೆ ಇಲ್ಲಿ ಹೊರುವ ಹೊರೆ/ಭಾರದ ಅರ್ಥ ತುರುಕಿಸುವುದು ತುಂಬ far-fetched ಅನಿಸುತ್ತದೆ. ಇಂತಹ ಪ್ರಯೋಗಗಳಲ್ಲಿ ಪ್ರಾಸಕ್ಕಾಗಿ ಕೂಡ ನೆರೆಗೆ ಹೊರೆ ಇರಬಹುದು. (ನೆರೆಕೆರೆಯೂ ಇದೆ) 'ಹೊರಗೆ' ಎಂಬ ಅರ್ಥದ ನೆರಳು ಹೊರೆಯಲ್ಲಿ ಇದ್ದರೂ ಇರಬಹುದಲ್ಲವೆ? ನಮ್ಮ ಹೊರಗಿನದು, ಸುತ್ತಮುತ್ತಲಿನದು ಎಂಬ ಅರ್ಥದಲ್ಲಿ... ನೆರೆಯ ಬೇರೆಬೇರೆ ಅರ್ಥಗಳನ್ನು ನೀವು ಪಟ್ಟಿ ಮಾಡಿರುವುದರಿಂದ ಇನ್ನೊಂದು ಪ್ರಯೋಗ ಸೇರಿಸುತ್ತಿದ್ದೇನೆ. ನೆರೆಗೆ ಹೆಚ್ಚಾಗುವುದು, ಬೆಳೆಯುವುದು ಎಂಬ ಅರ್ಥವೂ ಇದೆ - ಮೈನೆರೆ, ಹಪ್ಪಳ ನೆರೆಯುವುದೇ ಇಲ್ಲ (ಹಪ್ಪಳ ಲಟ್ಟಿಸುವಾಗ ಹೇಳುವ ಮಾತು). ಒಂದೇ ಪದ ತೀರ ಬೇರೆಯಾದ ಹಲವಾರು ಅರ್ಥಗಳನ್ನು ಸೂಚಿಸುವುದು ಏಕೆ, ಹೇಗೆ? ಇದು ನುಡಿಯ economyಯೇ?

Submitted by ವೈಭವ on
'ಹೆಣೆ' ( ?) ಯವರೆ, ಒಂದೇ ಪದದ ಬೇರೆ ಬೇರೆ ಅರ್ತಗಳು ಬರುವುದು ಆ ನೆಲದ ನಡೆವಳಿಕೆ/ಸಂಸ್ಕ್ರುತಿ, ಕಸುಬು/ಉದ್ಯೋಗ ಮತ್ತು ಪರಿಸರದಲ್ಲಿರುವ ಬೇರೆತನಗಳು. ಮುಂದೆ ಆ ಎರಡು ನೆಲದವರು ಒಗ್ಗೂಡಿದಾಗ ಈ ರೀತಿ ಒಂದು ಪದಕ್ಕೆ ಹೆಚ್ಚು ತಿಳಿವುಗಳು overload(ಹೊರೆ) ಆಗುತ್ತವೆ.

Submitted by hene on
ವೈಭವರೆ, ನಿಮ್ಮ ಮಾತು ಸುಳ್ಳಲ್ಲ. ಆದರೆ ಒಂದೇ ಸಮುದಾಯದಲ್ಲಿ, ಒಂದೇ ನುಡಿ ಆಡುವ ಜನರಲ್ಲಿ, ಅವರ ಪರಿಸರಕ್ಕೇ ವಿಶಿಷ್ಟವಾದ ವಸ್ರು/ಕ್ರಿಯೆ/ಅನುಭವ ಹೇಳುವ ಪದಗಳು ಸಹ ಕೆಲವೊಮ್ಮೆ ಹೀಗಿರುತ್ತವೆ. 'ತಳಿ' ಎಂಬ ಪದ ಇಲ್ಲಿ ನೆನಪಾಗುತ್ತಿದೆ. (ಇಂತಹವು ಹಲವಾರಿವೆ ಎಂದಿಟ್ಟುಕೊಳ್ಳಿ) ನಾಮಪದವಾಗಿ ತಳಿ ಅಂದರೆ ಅನ್ನ ಬೆಂದಾದಮೇಲೆ ಬಸಿಯಬಹುದಾದ ದಪ್ಪ ನೀರು (ಗಂಜಿಯಲ್ಲ, ತಳಿ ಅನ್ನದೊಟ್ಟಿಗೇ ಇದ್ದರೆ ಅದು ಗಂಜಿ). ತೆಂಗಿನ ಗರಿ ಹೆಣೆದು ಮಾಡಿದ ಮಡ್ಲ್-ಇನ ಮುಚ್ಚಿಕೆಯೂ ತಳಿಯೇ. ಮಳೆಗಾಲದಲ್ಲಿ ಊರುಮನೆಯ ಜಗಲಿಗೆ ಮುಚ್ಚಿಕೆಯಾಗಿ ಇದನ್ನು ಹಾಕುತ್ತಾರೆ. ಕ್ರಿಯಾಪದವಾಗಿ, ಒಪ್ಪವಾಗಿರುವುದನ್ನು ಕೆಡಿಸುವುದೂ ತಳಿಯೇ- ಮಡಿಸಿಟ್ಟ ವಸ್ತ್ರ ತಳಿಯಬೇಡ; ಚಿಮುಕಿಸು - ಹಿಟ್ಟು ಗಟ್ಟಿಯಾಗಿದ್ದರೆ ಒಂದು ಚೂರು ನೀರು ತಳಿ; ಚದುರಿಸು - ನಾಲ್ಕು ಕಾಳು ಉಪ್ಪು ತಳಿ... ಸದ್ಯಕ್ಕೆ ಹಂಬಲಾಗುತ್ತಿರುವುದು ಇಷ್ಟು. ಇವೆಲ್ಲವೂ ಒಂದು ಹತ್ತಿಪ್ಪತ್ತು ಚದರ ಕಿಲೋಮೀಟರು ದೊಡ್ಡದಿರುವ ಊರಿನ ಜನರ ನುಡಿಗಳು. ನೂರಾರು ಕಿಲೋಮೀಟರ್ ದೂರವಿರುವ ಬೇರೆ ಊರಲ್ಲಿ ತಳಿಗೆ ಜಾತಿ, species ಎಂಬ ಅರ್ಥವೂ ಇದೆ. ನನಗೆ ತಿಳಿಯದ ಇನ್ನೂ ಏನೇನೋ ಅರ್ಥಗಳಿದ್ದರೂ ಇರಬಹುದು. ನೀವು ಪದದ ಮೇಲೆ ಅರ್ಥಗಳ ಹೊರೆ ಎಂದಿರಿ. ನನ್ನನ್ನ ಕೇಳಿದರೆ, ಪದಗಳು ಹೆಚ್ಚೆಚ್ಚು ಹೊರೆ ಹೊತ್ತಷ್ಟೂ ನುಡಿಯ ಮೇಲಿನ ಪದಗಳ ಹೊರೆ ಕಡಿಮೆಯಾಗುತ್ತದೆ. ಇದನ್ನೇ ನಾನು ನುಡಿಯ economy ಎಂದಿದ್ದು. ಇದಕ್ಕೆ ತೀರ ವಿರುದ್ಧವಾದ ಒಂದು ವಿದ್ಯಮಾನವೂ ಇದೆ. ಅದರ ಬಗ್ಗೆ ಬೇರೊಮ್ಮೆ ಮಾತಾಡೋಣ. 'ಹೆಣೆ'ಯೇ!

Submitted by mahesha on
ನೀವು ಪದದ ಮೇಲೆ ಅರ್ಥಗಳ ಹೊರೆ ಎಂದಿರಿ. ನನ್ನನ್ನ ಕೇಳಿದರೆ, ಪದಗಳು ಹೆಚ್ಚೆಚ್ಚು ಹೊರೆ ಹೊತ್ತಷ್ಟೂ ನುಡಿಯ ಮೇಲಿನ ಪದಗಳ ಹೊರೆ ಕಡಿಮೆಯಾಗುತ್ತದೆ. ಇದನ್ನೇ ನಾನು ನುಡಿಯ economy ಎಂದಿದ್ದು. ಇದಕ್ಕೆ ತೀರ ವಿರುದ್ಧವಾದ ಒಂದು ವಿದ್ಯಮಾನವೂ ಇದೆ. ಅದರ ಬಗ್ಗೆ ಬೇರೊಮ್ಮೆ ಮಾತಾಡೋಣ.
ಹೆಣೆಯವರೆ, ಚನ್ನಾಗಿದೆ ನಿಮ್ಮ ಮಾತು!!! ನಿಮ್ಮ ಮಾತಿನಲ್ಲಿರುವ 'ಹೆಚ್ಚೆಚ್ಚು = ಹೆಚ್ಚು + ಹೆಚ್ಚು" ಚನ್ನಾಗಿದೆ. ನುಡಿಯ economy ಬಗ್ಗೆ ಬಿಡಿಸಿ ಬರೆಯಿರಿ!

Submitted by hene on
ಮಹೇಶರೆ, ಇಂಟರ್ನೆಟ್ಟಿನ ಜನ್ಮ 'ಜಾಲಾಡಿಸು'ತ್ತಿದ್ದಾಗ ಆಗೀಗ ಸಂಪದದ ಕಟ್ಟೆಯ ಮುಂದೆ ಓಡಾಡಿದ್ದರೂ, ನಾನು ಕಟ್ಟೆಯ ಮೇಲೆ ಕೂರಲು ಬಂದದ್ದು ಈಗಷ್ಟೇ. ಕನ್ನಡದ ಒರೆಗಳ (ಸಂಪದದ ಕಟ್ಟೆಯ ಮೇಲೆ ನಾನು ಕಲಿತ ಒರೆ ಇದು!) ಮೇಲೆ ಸಂಸ್ಕೃತ ಒರಗಿಕೊಂಡಿರುವುದರ ಬಗ್ಗೆ ನೀವೆಲ್ಲಾ ಒರೆದೂ ಒರೆದೂ ಇಟ್ಟಿದ್ದೀರಿ! ಈಗಾಗಲೇ ನುಡಿಯೊಳಗೆ ನೆಟ್ಟು ಕೂತ ಪರನುಡಿಗಳನ್ನು ಬುಡ ಅಡ್ಚಿ ಕೀಳುವ ಪ್ರಯತ್ನ, ಅಥವಾ ಮೇಲೆ ಬಿದ್ದ ನುಡಿಗಳನ್ನು ದೆರಳೆಯಂತೆ ಗುಡಿಸುವ ಪ್ರಯತ್ನದ ಬಗ್ಗೆಯೆಲ್ಲಾ ಓದುತ್ತಿದ್ದೇನೆ. ಒಂದು ಕಾಲದಲ್ಲಿ ಹೊರಗಿನಿಂದ ಬಂದ ನುಡಿಗಳಿಗೂ, ಈಗಲೂ ಬರುತ್ತಿರುವ ನುಡಿಗಳಿಗೂ ನಮ್ಮ ಹಿತ್ತಿಲಲ್ಲೇ ಬೀಜ ಹುಡುಕಿ ತೆಗೆಯುವ ಪ್ರಯತ್ನಗಳೆಲ್ಲಾ ನಡೆಯುತ್ತಿರುವ ಪ್ರಸಂಗದಲ್ಲಿ, ಅಂದರೆ ಹೊಸ (relative) ವಸ್ತು/ಕ್ರಿಯೆ/ಅನುಭವಗಳಿಗೆ ನಮ್ಮ ಮನೆಯೊಳಗಿನ ಅಟ್ಟದ ಮೂಲೆಯಲ್ಲೆಲ್ಲೋ ಧೂಳು ತಿನ್ನುತ್ತಿರಬಹುದಾದ, ವರ್ಲೆ ಹಿಡಿದು ಮಣ್ಣಾಗಿಹೋದ ಒರೆಗಳನ್ನೇ ಹುಡುಕಿ ತೆಗೆದು ತೊಳೆದು ಬಳಸುವ ಪ್ರಸಂಗದಲ್ಲಿ, ಒಂದೇ ಪದಕ್ಕೆ ಒಂದು ಸಣ್ಣ ಸಮುದಾಯದೊಳಗೇ ತುಂಬ ಬೇರೆಬೇರೆಯಾದ ಬಳಕೆಗಳಿರುವುದು ಸ್ವಲ್ಪ ಕಾಡುತ್ತದೆ. Economy ಯ ಬಗ್ಗೆ ಮತ್ತೊಮ್ಮೆ ಬರೆಯುವೆ ಹೆಣೆ

Submitted by mahesha on
ಹೆಣೆ, ನಿಮ್ಮ ಬರಹ ಚನ್ನಾಗಿದೆ ಆದರೆ ಕೆಲವು ಒರೆಗಳು ನಂಗೆ ತಿಳಿಯಲಿಲ್ಲ, ಒರೆಗಂಟು ನೋಡಿದರೂ ಕೂಡ ದೊರೆಯಲಿಲ್ಲ. ಅಡ್ಚು = to rap, cuff ದರಳೆ, ವರ್ಲೆ ಇವು ದೊರೆಯಲಿಲ್ಲ.!! ನೀವು ಯಾವ ಬುಡಕಟ್ಟಿನವರೋ(ಬುಡಕಟ್ಟು = nativity)! ಈ ಒರೆಗಳ ತಾವು(place) ತಿಳಿಸಬಹುದಾ?

Submitted by hene on
ಮಹೇಶರೆ, ಬರಹ ಹಿಡಿಸಿದ್ದಕ್ಕೆ ಖುಷಿ. ಅಡ್ಚು adverb ನ ಹಾಗೆ ಬರುತ್ತೆ. 'ಅಡ್ಚಿ ತೆಗೆ,' 'ಅಡ್ಚಿ ಕೀಳು' - ಅಂದರೆ ಗಟ್ಟಿಯಾಗಿ ಊರಿಕೊಂಡ/ಅಂಟಿಕೊಂಡ ಯಾವುದನ್ನೋ ಅದರ ಸುದ್ದಿಯೇ ಇನ್ನಿರದಹಾಗೆ ಕೈಕಸುವಷ್ಟೂ ಹಾಕಿ ತೆಗೆಯುವುದು ಅಂತ. ಬಿಟ್ಟರೆ ಮತ್ತೆ ಚಿಗಿತುಕೊಳ್ಳಬಾರದು ಹಾಗೆ. ದೆರಳೆ = ಉದುರಿದ ತರಗೆಲೆ; 'ಮರನ್ನ್ ಕೆಳ್ಗೆ ದೆರ್ಲಿ(ದೆರಳೆ/ದೆರ್ಲೆ) ಗುಡಿಸಿಯ್ಹಾಂಗೆ' ಅಂದರೆ ಕೆಲಸಕ್ಕೆ ಬಾರದ ಕೆಲಸ ಅಂತ. ದೆರಳೆ ಗುಡಿಸಿದಷ್ಟೂ ಮತ್ತೆ ಉದುರುತ್ತಲ್ಲ ಅದಕ್ಕೆ. ವರ್ಲೆ = ಗೆದ್ದಲು 'ಬುಡಕಟ್ಟಿ'ನ ಕುರುಹುಗಳನ್ನ ಬರಹದ ತುಂಬ ಬಿಸಾಡಿದ್ದೇನೆ. ನೀವು ಬಲುಜಾಣರು, ಹೆಕ್ಕಿಕೊಳ್ಳಿ! ಈ ಎಳೆಗೆ ಇನ್ನೊಂದು ಮಾತನ್ನು ಸುರಿಯಲೆ? ತಪ್ಪೆನಿಸಿದರೆ ಉಲುಬಿ ಬಿಸಾಡಿ. 'ಮರನ್ನ್ ಕೆಳ್ಗೆ...' ಟೈಪ್ ಮಾಡಿದಾಗ ಕಿವಿಗೆ ಕೇಳುವ ಉಲಿ ಕಣ್ಣಿಗೆ ಕಾಣುತ್ತಿಲ್ಲವಲ್ಲ ಅಂತ ಸಂಕಟವಾಯಿತು. ಕನ್ನಡದ ಅಕ್ಷರ ಮಾಲೆಗೆ ಹೊರೆಯಾದ ಅಕ್ಷರಗಳನ್ನು ತೆಗೆದು ಹಾಕುವ ಮಾತು ಸಂಪದದ ಕಟ್ಟೆಯ ಮೇಲೆ ಕೇಳಿದೆ. ಈ ದಿಕ್ಕಿನಲ್ಲೇ ಹೆಜ್ಜೆ ಹಾಕುತ್ತ, ಕನ್ನಡ ಅಕ್ಷರಮಾಲೆಯಲ್ಲಿ ಈಗಿರದ ಸಂಯುಕ್ತ ಸ್ವರಗಳನ್ನು ಅದಕ್ಕೆ ಸೇರಿಸಬೇಕಾದ್ದೂ ಅಗತ್ಯ ಅಲ್ಲವೆ? Economy ಬಗ್ಗೆ - ಒಂದು ಪದಕ್ಕೆ ಹತ್ತು ಅರ್ಥ ಸೂಸುವ ಕಸುವಿರುವಾಗ, ಹತ್ತು ಪದಗಳ ಕೆಲಸ ಅದೊಂದೇ ಮಾಡುವಾಗ, ಆ ಹತ್ತು ಅರ್ಥಗಳು ಒಳಗೊಳಗೇ ಜಗಳವಾಡದೆ ಹಾಯಾಗಿರುವಾಗ, ಇದು ಒಂಥರಾ ecomonyಯೇ ಅಲ್ಲವೇ? ಬಲ್ಲವರು ಬೆಳಗುಮಾಡಿ... ಹೆಣೆ

Submitted by mahesha on
ಕನ್ನಡ ಅಕ್ಷರಮಾಲೆಯಲ್ಲಿ ಈಗಿರದ ಸಂಯುಕ್ತ ಸ್ವರಗಳನ್ನು ಅದಕ್ಕೆ ಸೇರಿಸಬೇಕಾದ್ದೂ ಅಗತ್ಯ ಅಲ್ಲವೆ?
ಕನ್ನಡದ ನಾಲಗೆ ಉಲಿಯವುದಾದರೇ ಸೇರಿಸಲೇ ಬೇಕು.. ಸೇರಿಸಲು ನನ್ನ ಬಳಿಯೂ ಒಂದಿದೆ. Aನೋ? Aರೋ, ಈ A ಕನ್ನಡದಲ್ಲಿ ಹಲವು ಉಲೀವರು. :) ಹಾಗೆ ಮೂಗು ರ, ಮೂಗು ಯ, ಮೂಗು ಲ ಗಳು, ಱ, ೞಗಳು ಬಳಕೆ ಉಲಿಯಲ್ಲಿ ಇನ್ನೂ ಇದೆ. ರೆಕ್ಕೆ = ಱೆಕ್ಕೆ( ಉಲಿದು ನೋಡಿರಿ ), ರೋಡು = ಱೋಡು ಕುಳಿತು = ಕುೞಿತು, ಹಳತು = ಹೞತು ಇಲ್ಲಿ ಒಂದು ಗುಟ್ಟು ರಟ್ಟಾಯಿತು "ಸಂಯುಕ್ತ ಸ್ವರ"( ~ಸೈಯುಕ್ತ ) ಇದು ಹೇಳಿದವರು ಐ, ಔ ಗಳ ಗುಟ್ಟು ತಿಳಿದವರೆಂದು ಅರಿವಾಗಿದೆ. ಐ ಔ ಗಳು ಎಲ್ಲಿಂದ ಬಂದವು? :) ವೃದ್ಧಿ ಸೊರಗಳು!! ನಿಮ್ಮ ಬುಡಕಟ್ಟು ಬಗ್ಗೆ ನೀವು 'ಬಿಟ್ಟ' ಕುರುಹುಗಳನ್ನು, ಒಂದು ಕಡೆ ಕಲೆ ಹಾಕಿ ಉಂಕಿಸಬೇಕು. ಆದರೆ ನೀವು ಗುಟ್ಟು ಅಡಗಿಸುವಲ್ಲಿ ನನಗಿಂತ ಜಾಣರು. ನನ್ನ ಬಲು ಜಾಣತನವೂ ಇಲ್ಲ ಸೋಲುತ್ತಿದೆ :). ಇರಲಿ, ನಿಮ್ಮ ಸಂಗತಿಯನ್ನು ಹೇಳಲು ಇಂಗಿತವಾದಾಗ ಹೇಳಿರಿ. ಇಲ್ಲ ಅಡಗಿಸಿಡುವ ಬಯಕೆಯಿದ್ದರೆ ಹಾಗೆ ನಡೆಯಲಿ. ನನಗೆ ನಿಮ್ಮಿಂದ ಹೇರಳವಾದ ಅರಿಕೆಗಳು ದೊರೆಯುತ್ತಿವೆ. ಅದಕ್ಕೆ ನನ್ನಿ!!

Submitted by ವೈಭವ on
ಅಂದ್ರೆ ಇವರು ಡಿ.ಎನ್.ಶಂಕರಬಟ್ಟರ ಹೊತ್ತಿಗೆಗಳನ್ನ ಓದಿದ್ದಾರೆ ಅಂತ ಗೊತ್ತಾಯ್ತು ಹೆಣೆ, ನಿಮ್ಮಿಂದ ನನಗೂ ಕೆಲವು ತಿಳಿವುಗಳು ತಿಳಿದವು. ನನ್ನಿ ಹೆಣೆಯವರೆ, ಒಗಟಾಗೇ ಉಳಿಯುವ ಆಸೆಯೆ? :)

Submitted by mahesha on
ಅವರ ಹೊಸ ಹೊತ್ತಿಗೆಗಳಿಲ್ಲ. ಆದರೆ ಹಳೆಯವಿವೆ. ಮಿಶ್ರಿಕೋಟಿಗಳು ನೆರವಾಗಬಹುದು. ಅವರು ನನಗೆ ಒಮ್ಮೆ ಅಲ್ಲಿ ಬಟ್ರ ಹೊತ್ತಗೆ ತೋರಿದ್ದರು. ನಾವು "ಗೆದ್ದಲು" ಅನ್ನಲ್ಲ, ನಮ್ಮ ಬಾಯಲ್ಲಿ "ಗೆದ್ಲು" ಇಲ್ಲ "ಕುಟ್ಟೇ ಹಡಿದಿದೆ"

Submitted by hene on
[quote=ವೈಭವ] ಅಂದ್ರೆ ಇವರು ಡಿ.ಎನ್.ಶಂಕರಬಟ್ಟರ ಹೊತ್ತಿಗೆಗಳನ್ನ ಓದಿದ್ದಾರೆ ಅಂತ ಗೊತ್ತಾಯ್ತು [/quote] ಇದು ನೀವು ಯಾರಿಗೆ ಹೇಳಿದ್ದು? ನನಗೋ, ಮಹೇಶರಿಗೋ? ನಾವು ಹಗಲು ರಾತ್ರಿ ಆಡುವ ಪದಗಳು (ಕನ್ನಡವನ್ನೇ ಆಡುವ) ಮತ್ತೊಬ್ಬರಿಗೆ 'ತಿಳುವು' 'ಅರಿಕೆ' ಗಳಾಗುವುದಾದರೆ ಖುಷಿಯೇ. ಸಂಯುಕ್ತ ಸ್ವರಗಳ ಬಗ್ಗೆ ಮಹೇಶರ ಮಾತು ತಲೆಗೆ ಹೋಗಲಿಲ್ಲ. ವಿವರಿಸಿ. ನಾನು ಹೇಳಬೇಕೆಂದಿದ್ದು - ಅ (ಅಥವಾ ಅರೆ ಅ) ಮತ್ತು ಉ ಗಳ ಮಧ್ಯದ ಒಂದು ಸ್ವರ, ಅ ಮತ್ತು ಆ ಗಳ ಮಧ್ಯದ ಒಂದು ಸ್ವರ, ಮತ್ತೊಂದು æ ಗೆ ಹತ್ತಿರವಾದ್ದು... *** ಒಗಟಾಗಿರುವ ಇಂಗಿತವಿಲ್ಲ. ಬರಹವೇ ಗುರುತಾಗಲಿ ಎಂಬ ಆಸೆಯಷ್ಟೆ. (ನನ್ನ 'ಬುಡಕಟ್ಟಿ'ನ ಕುರುಹುಗಳು ತೀರ obvious ಆದವು, ನನ್ನ ಗುಟ್ಟು ರಟ್ಟಾಗುವುದರಲ್ಲಿ ಹೆಚ್ಚು ಹೊತ್ತಿಲ್ಲ ಅಂತ ತಿಳಿದಿದ್ದೆ ;) ) ಹೆಣೆ (ಇದೂ ಒಂದು ಕುರುಹೇ! ;) )

Submitted by mahesha on
ಸೊರಗಳ ಬಗ್ಗೆ ನಿಮ್ಮ ಮಾತನ್ನು, ಇನ್ನೂ ಬಿಡಿಸಿ ಹೇಳಿರಿ. "ಸಂಯುಕ್ತ ಸ್ವರ" ಅಂದ್ರೆ ಎರಡು ಸೊರಗಳು ಸೇರಿ ಆದ ಸೊರ, ಅಂತ ನನ್ನ ತಿಳಿವು. ಐ, ಔ ಗಳು ಬರಿ ಸೊರವಲ್ಲ, ಇವನ್ನು a diphthong (also gliding vowel) (Greek δίφθογγος, "diphthongos", literally "with two sounds," or "with two tones") i ಐ = ಅಯ್, ಔ=ಅವ್. ಅ+ ಏ = ಐ, ಅ + ಓ = ಔ ( ವೃದ್ಧಿ ಸಂಧಿ ) ನೀವು ಹೇಳುತ್ತಿರುವ ಸೊರಗಳು ಇಂಗ್ಲೀಸಲ್ಲಿವೆ. ಅಲ್ವಾ? ಇಲ್ಲಿ ಗೊಂದಲವಾದುದು ನಿಮ್ಮ "ಸಂಯುಕ್ತ ಸೊರ" ಎಂಬ ಒರೆ ಬಳಕೆಯಿಂದ! ಅ, ಆ ನುಡುವೆನ ಸೊರವೇ?? ಒಂದು ಕೆಲಸ ಮಾಡಿರಿ, ಇವಕ್ಕೆ ಇಂಗ್ಲೀಸಲ್ಲಿರುವ ಮಾದರಿಗಳನ್ನು ನೀಡಿರಿ. ಈ ಮಾತುಕತೆಯನ್ನು ಬೇರೆ ಎಳೆಗೊಯ್ದರೆ ಚೆನ್ನು!

Submitted by ಸಂಗನಗೌಡ on
ಹೆಣೆ, ನೀವು ಕನ್ನಡ ಒರೆಗಳನ್ನು ಹೆಣೆಯುವ ಬಗೆ ಬಲು ಚೆಲುವು. ಎಲೆ ಮರೆ ಕಾಯೊಂದು ಬೆಳಕ ಹಂಬಲಿಸುವ ಕುರುಹುಗಳಿವೆ. ನೆರೆ-ಹೊರೆ ಬಗ್ಗೆ ನನಗನಿಸುವದು, ನೆರೆ ಅಂದರೆ ಮಗ್ಗುಲಿನ ಎಂಬ ತಿಳಿವಿರುವದು, ಎಲ್ಲರಿಗೂ ತಿಳಿದಿದೆ. ನೆರೆಯವರು ಒಂದು ಹೊರೆನೇ ಅಂತ ಹೇಳಿದರಾದೀತು. ;) ಅವರಿಗೆ ಆಗಾಗ ನೆರವಾಗುತ್ತಿರಬೇಕಾಗುತ್ತಲ್ಲಾ. ಅದರಂತೆ ಅವರಿಗೆ ನಾವು ಹೊರೆ ;) ಒಂದು ಒರೆಗೆ ಹಲವು ತಿಳಿವುಗಳನ್ನು ಹೊರೆಸುವದು ಒಳ್ಳೇಯದೇ ಅನಿಸುತ್ತೆ. [quote] 'ಮರನ್ನ್ ಕೆಳ್ಗೆ...' ಟೈಪ್ ಮಾಡಿದಾಗ ಕಿವಿಗೆ ಕೇಳುವ ಉಲಿ ಕಣ್ಣಿಗೆ ಕಾಣುತ್ತಿಲ್ಲವಲ್ಲ ಅಂತ ಸಂಕಟವಾಯಿತು.[/quote] ಈಗಿನ ಕನ್ನಡ ಬರೆಹ ಸಕ್ಕದಕ್ಕಾಗಿ ಮಾಡಿದ್ದು ಅಂತಾ ಕೇಳಿದ್ದೇನೆ. ಅದನ್ನು ಕನ್ನಡಕ್ಕೆ ಬಳಸಿಕೊಳ್ಳುವಾಗ ಬೇಕಾದ ಮಾರ್ಪಾಟ್ ಬೇಕು ಅನಸತೈತಿ.

Submitted by mahesha on
ಈಗಿನ ಕನ್ನಡ ಬರೆಹ ಸಕ್ಕದಕ್ಕಾಗಿ ಮಾಡಿದ್ದು ಅಂತಾ ಕೇಳಿದ್ದೇನೆ. ಅದನ್ನು ಕನ್ನಡಕ್ಕೆ ಬಳಸಿಕೊಳ್ಳುವಾಗ ಬೇಕಾದ ಮಾರ್ಪಾಟ್ ಬೇಕು ಅನಸತೈತಿ.
ಅವುದಪ್ಪ, ಅವುದು. ಕನ್ನಡದ ಸದ್ದುಗೆ ಸಕ್ಕದ ಬರೆಯಲೆಂದೇ ಮಾಡಿದಂತಿದೆ. ಅದಕ್ಕೆ ಕನ್ನಡಕ್ಕೆ ಬೇಕಾದ ಹಲವು ಸೊರಗಳು, ಬೆಂಜನಗಳು, ಇದರಲ್ಲಿಲ್ಲ. ಹಾಗೆ ಕನ್ನಡ ಬೇಡವಾದ ಬರೀ ಸಕ್ಕದಕ್ಕೆ ಬೇಕಾದ ಅಕ್ಕರಗಳು ತುಂಬಿಕೊಂಡಿವೆ. ಮಾರ್ಪಾಟು ಬೇಕು ಅಂತ ಶಬ್ದಮಣಿದರ್ಪಣದ ಹೊತ್ತಿನಿಂದಲೂ ಮಾತಿದೆ. ಶಬ್ದಮಣಿದರ್ಪಣದಂತೆ ಕನ್ನಡದಲ್ಲಿ 'ಋ' ಇಲ್ಲ, ಅಲ್ವಾ??? ಅದರಂತೆ ಕನ್ನಡಕ್ಕೆ ಬರಿ ನಲವತ್ತೇಳು(47) ಸಾಕು!!?( ನನ್ನ ನೆನೆಪು ಮಾಸಿದೆ :( ). ಜೊತೆಗೆ ಅಲ್ಲಿ ಮಹಾಪ್ರಾಣಗಳು ಕನ್ನಡ ಏಕೆ ಬೇಕೆಂದು ನೀಡಿರುವ ಓಸುಗರಗಳು ಬಲು ಪೊಳ್ಳೆಂದು ಕಲಿತವರು ಹೇಳಿದ್ದಾರೆ!

Submitted by hene on
ಮಹೇಶರ ಹೊಸ ಎಳೆ ನೋಡಿದೆ. ಆದರೂ ಕೆಲವು ಹಳೆ ಲೆಕ್ಕ ಇಲ್ಲೇ ಚುಕ್ತ ಮಾಡಿ ಹೋಗೋಣ ಅಂತ. ಶಂಕರಭಟ್ಟರ ಹೊತ್ತಗೆ ನಾನು ಓದಿಲ್ಲ ವೈಭವರೆ. ಹಿಂದಿ ವ್ಯಾಕರಣದ ಸಂದರ್ಭದಲ್ಲಿ 'ಸಂಯುಕ್ತ ಸ್ವರ' ಪ್ರಯೋಗ ನೋಡಿದ್ದೆ. ಒಂದು ಕಾಲದಲ್ಲಿ ಇಂಗ್ಲಿಷ್ ಭಾಷೆ/ಸಾಹಿತ್ಯ ವಿದ್ಯಾರ್ಥಿಯಾಗಿದ್ದರಿಂದ diphthong ಗೊತ್ತಿದ್ದರೂ ಚೊಕ್ಕವಾಗಿ 'ಸಂಯುಕ್ತ ಸ್ವರ' ಇರುವಾಗ ;) ಯಾಕೆ ಬರೆಯಬಾರದು ಅನಿಸಿ ಬರೆದೆ. diphthong ಅಂದುಬಿಟ್ಟ ಮೇಲೆ ಮಹೇಶರಿಗೆ ಪೇಜುಗಟ್ಟಲೆ ವಿವರಣೆಯನ್ನೂ ಬರೆಯಬೇಕಾಯ್ತಲ್ಲ :) ಸಂಗನಗೌಡ್ರೆ, ನೀವೂ ಭಾಳ ಛಲೋ ಹೊಗಳಿಕೆ ಹೊಸೀತೀರಿ ಬಿಡಿ! [quote] ನೀವು ಕನ್ನಡ ಒರೆಗಳನ್ನು ಹೆಣೆಯುವ ಬಗೆ ಬಲು ಚೆಲುವು. [/quote] ನನ್ನ user nameನ ಸಾರ್ಥಕ ಮಾಡಿಬಿಟ್ರಿ! ಹೆಣೆ

Submitted by kannadakanda on
ನೆರೆ=ಗುಂಪಾಗು, ಒಟ್ಟಾಗು ನೆರವು = ಸಹಾಯಕ್ಕಾಗಿ ಒಟ್ಟಾಗುವುದು. ನೆರೆಮನೆಯವನು ಕಷ್ಟಸುಖಕ್ಕೆ ಸೇರುವುದಱಿಂದ ನೆರೆಯವ. ಅವನಿಗೆ ನಮ್ಮ ಸಹಾಯದ ಜವಾಬ್ದಾರಿ(liability) ಇದ್ದಾಗ ಅವನು ನಮಗೆ ಹೊಱೆ. ಹಾಗಾಗಿ ನೆರೆಹೊಱೆ. ಸಹಾಯ ಸಿಗುವಾಗ ನೆರೆ. ಸಹಾಯ ಮಾಡುವಾಗ ನಮ್ಮ ಜವಾಬ್ದಾರಿ=ಹೊಱೆ. ಇದೂ ಪರಸ್ಪರರಿಗೆ. ಯಾಕೆಂದರೆ ಅವನು ನಮ್ಮ ನೆರೆಹೊಱೆ. ನಾವವನಿಗೆ ನೆರೆಹೊಱೆ. ನೆಱೆ ಎಂದು ಇನ್ನೊಂದು ಶಬ್ದ ಇದೆ ಅದಱರ್ಥ ತುಂಬು ಅಂದರೆ ಪ್ರವಾಹ. ನೀವು ದಾಸರ ಪದ ಕೇಳಿರಬಹುದು. ನೆಱೆ ನಂಬಿದೆ ನಿನ್ನ. ಅಂದರೆ ನಿನ್ನನ್ನು(ದೇವರನ್ನು) ತುಂಬಾ ನಂಬಿದೆ.