ಇದು ಯಾಕೆ ಹಿಂಗೆ?
ನಮಸ್ಕಾರ,
ನನಗೆ ಒಂದು ವಿಷಯ ಯಾವಾಗಲೂ ಕಾಡ್ತಾ ಇರುತ್ತೆ.
ರೂಪ ಎಂಟರ್‍ಪ್ರೈಸಿಸ್---- (ಇದನ್ನ ಓದುವುದು ರೂಪಾ ಅಂತ)
ಇದನ್ನ ಇನ್ನೂ ಸ್ವಲ್ಪ ಬಿಡಿಸಿ ಹೇಳಬೇಕಂದರೆ...
ರೂಪ ಅಂದರೆ ಅಂದವನ್ನು ವರ್ಣಿಸುವ ಪದ ಹೌದು ತಾನೆ?
ರೂಪಾ ಅಂದರೆ ಒಂದು ಹೆಸರು
ಬೆಂಗಳೂರಿನ ಬಹುತೇಕ ನಾಮ ಫಲಕಗಳಲ್ಲಿ ಈ ರೀತಿ (ರೂಪ ಅಂತ)ದೋಷಗಳನ್ನು ಕಂಡಿದ್ದೇನೆ.
ಇದು ಯಾಕೆ ಹೀಗೆ....
ಹೀಗೆ ಕೆಲವು ಫಲಕಗಳು ಇವೆ...
ಪದ್ಮ ಹಣ್ಣಿನ ಅಂಗಡಿ (ಓದುವಾಗ ಅಥವಾ ಮಾತಿನಲ್ಲಿ ಪದ್ಮಾ ಅಂತ ಕರೀತಿವಿ)
ಕಮಲನಗರ (ಕಮಲಾ ನಗರ ಅಂತ ಕರೀತಿವಿ)
ರೇಷ್ಮ ಎಲೆಕ್ಟ್ರಾನಿಕ್ಸ್ (ಅದು ರೇಷ್ಮಾ ಅಂತ ಆಗಬೇಕಾಗಿತ್ತಲ್ಲವೆ?)
ಗಂಗ ಗ್ರಂಧಿಗೆ ಆಂಗಡಿ (ಅದು ಗಂಗಾ ಆಗಬೇಕಿತ್ತಲ್ಲವೆ?)
ಇದೇ ನನಗೆ ಕಾಡುತ್ತಾ ಇರೋದು....
ಅದೂ....ಬೆಂಗಳೂರಿನ್ಲಲ್ಲಿ ಯಾಕೆ ಹಿಂಗೆ ಅಂತ?????
ನಿಮಗೆ ತಿಳಿದಿದ್ರೆ ನನಗೂ ಹೇಳಿ,
ಗಿರೀಶ ರಾಜನಾಳ.

- Login or register to post comments
- 819 hits
- Email this forum





RSS:
ಉ: ಇದು ಯಾಕೆ ಹಿಂಗೆ?
ರೀ ಮಾರಾಯ್ರೆ..
ಅದು ಸರಿಯಾಗೇನೇನೇಯ ಇದೆ...
ಕನ್ನಡದಲ್ಲಿ ಯಾವ ಒರೆ/ಪದವೂ 'ಉದ್ದ ಸೊರ/ದೀರ್ಘಸ್ವರ'ದಿಂದ ಕೊನೆಯಾಗದು.
ಬೋಶ( ಬಹುಶಃ ) ಶಬ್ದಮಣಿದರ್ಪಣದಲ್ಲಿ ಇರಬೇಕು.. ಇದನ್ನು ಸರಿಯಾಗಿ ಬಿಡಿಸಿ ಬಿಡಿಸಿ ಹೇಳಿದ್ದಾರೆ.
ಸಕ್ಕದದ ಶಾಸ್ತ್ರೀ, ಕನ್ನಡದೊಳು ಶಾಸ್ತ್ರಿ.
ಹಾಗೆ
ಸೀತಾ = ಸೀತೆ/ಸೀತ ( ಸೀತಮ್ಮ ಅಂತ ಹೆಸರು ಇರ್ತದೆ, ಹೊರತು ಸೀತಾಮ್ಮ ಅಂತ ಇರೊಲ್ಲ. ಹಾಗೇ ರತ್ನಮ್ಮ, ರತ್ನಾಮ್ಮ ಅಲ್ಲ )
ಕಮಲಾ = ಕಮಲೇ/ಕಮಲ ( ಕಮಲಮ್ಮ ಹೊರತು, ಕಮಲಾಮ್ಮ ಅಲ್ಲ )
ರೇಷ್ಮಾ = ರೇಷ್ಮೆ/ರೇಷ್ಮ
ನೀವು ಸಕ್ಕದದ ವ್ಯಾಕರಣವನ್ನು ಇಲ್ಲಿ ಬಳಸ ಹತ್ತಿದ್ದೀರಿ, ಆದ್ರೆ ಕನ್ನಡದೊಳು ಸಕ್ಕದದಿಂದ( ಹಾಗೇ ಬೇರೆನುಡಿಗಳಿಂದ) ಬಂದ ಒರೆಗಳು ಹೇಗೆ ಮಾರ್ಪು/ಮಾಪಾರ್ಟುಗೊಳ್ಳುವುವು ಎಂದು ನಿಮಗೆ ತಿಳೀತಿಲ್ಲ. ತುಸು ಕನ್ನಡದ ವ್ಯಾಕರಣವನ್ನೂ ಓದಿ ಅಣ್ಣಾವ್ರೆ!!
ವ್ಯಾಕರಣ ದೋಷಗಳನ್ನು ಕಂಡುಹಿಡಿಯುವುದು, ಒಳ್ಳೇದೇ ಅದು ನಮ್ಮ ನುಡಿಯನ್ನು ಹೆಚ್ಚೆಚ್ಚು ಅರಿಯಲು ನೆರವಾಗುವುದು. ಆದ್ರೆ ವ್ಯಾಕರಣವನ್ನೂ ಅದರಲ್ಲೂ ಕನ್ನಡದ ವ್ಯಾಕರಣ ಹೊತ್ತಗೆಗಳನ್ನು ಓದಿಕೊಳ್ಳದೇ, ಬರೀ ಸಕ್ಕದದ ನಿಯಮಗಳ ಬಳಸಿ ದೋಷ ಎನ್ನುವುದು ತಕ್ಕುದಲ್ಲ...!!
ಸಕ್ಕದದ "ಸಿಂಹಾತ್ ಭಯಂ" ಕನ್ನಡದಲ್ಲಿ ಸಿಂಗದಿಂದ ಹೆದರಿಕೆ ಹೊರತು, ವ್ಯಾಕರಣ ಶುದ್ಧಿ ಎಂದು "ಸಿಂಗದ ದೆಸೆಯಿಂದ ಹೆದರಿಕೆ" ಅಲ್ಲ.
ಸಕ್ಕದದ "ಗೃಹಾತ್ ಬಹಿ", ಕನ್ನಡದೊಳು "ಮನೆಯಾಚೆ/ಮನೆಯ ಹೊರಗೆ" ಹೊರತು, ಸಕ್ಕದದಂತೆ "ಮನೆಯ ದೆಸೆಯಿಂದ ಹೊರಗೆ" ಅಲ್ಲ
ಸಕ್ಕದದ "ಗೃಹಂ ಗಚ್ಛತಿ", ಕನ್ನಡದೊಳು "ಮನೆಗೆ ಹೋಯ್ತದೆ" ಹೊರತು, "ಮನೆಯನ್ನು ಹೋಯ್ತದೆ" ಅಲ್ಲ.
ಸಕ್ಕದ/ಸಂಸ್ಕೃತದ ವ್ಯಾಕರಣಗಳನ್ನು ಹಾಗ್‌ಹಾಗೆ ಕನ್ನಡಕ್ಕೆ ಹೇರಲು ಬರಲ್ಲ.. ಕನ್ನಡ ಹೇರಿಸಿಕೊಳ್ಳಲ್ಲ.
ಅದಕ್ಕೆ ನಮ್ಮ ಶಂಕ್ರ ಬಟ್ಟರು "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ" ಅಂತ ಸಾರಿರೋದು!
ಉ: ಇದು ಯಾಕೆ ಹಿಂಗೆ?
ಮಾಪಾರ್ಟುಗೊಳ್ಳುವುವು
ಅಲ್ಲ
ಮಾರ್ಪಾಟುಗೊಳ್ಳುವುವು
ಉ: ಇದು ಯಾಕೆ ಹಿಂಗೆ?
ಗಿರೀಶ ರಾಜನಾಳ, ಇದಕ್ಕೆ ಈಗಾಗಲೇ ಮಹೇಶ ಉತ್ತರಿಸಿಬಿಟ್ಟಿದ್ದಾನೆ. ನನ್ನದೂ ಒಂದೆರೆಡು ಕೊರಲು ಸೇರಿಸುವೆ. ನೀವು ಉದಾಹರಿಸಿದ ಬಳಕೆಗಳು ಬೆಂಗಳೂರಿಗೆ ಸೀಮಿತವಲ್ಲ. ಅಂದರೆ, ಬೆಂಗಳೂರಿನ ಕನ್ನಡದಲ್ಲಿ ಏನೋ ಲೋಪದೋಷವಿದೆ ಎಂದು ಈ ಮೂಲಕ ಎಣಿಸುವುದು ತಪ್ಪಾಗುತ್ತದೆ. ನಿಮ್ಮನ್ನು ಕಾಡುತ್ತಿದ್ದ ವಿಷಯವನ್ನು ತಿಳಿಗೊಳಿಸಿಕೊಳ್ಳುವಲ್ಲಿ, ರೆ.ಕಿಟ್ಟೆಲ್ ಅವರು ಸಂಪಾದಿಸಿದ A GRAMMAR OF KANNADA LANGUAGE BY REV KITTEL ಪುಸ್ತಕದ ಪುಣ ೩೧ ಓದಿ.
ಪುಟ ೩೧ರ ಪಾಯಿಂಟ್ ೭೧ ರಿಂದ ೮೧ ಓದುವಷ್ಟರಲ್ಲಿ ನಿಮ್ಮನ್ನು ಯಾವಾಗಲೂ ಕಾಡುತ್ತಿದ್ದ ವಿಷಯ ತಿಳಿಯಾಗಿರುತ್ತದೆ
ಉ: ಇದು ಯಾಕೆ ಹಿಂಗೆ?
ಸಕ್ಕತ್....
ಪುಣ ಅಲ್ಲ ಪುಟ ೩೧!
ಕಿಟ್ಟಲ್ ದೊಡ್ಡಯ್ಯರ ಮುನ್ನುಡಿ ಓದಿ, ಚಂದಾಗಿದೆ.!
ಉ: ಇದು ಯಾಕೆ ಹಿಂಗೆ?
ಮಹೇಶ,
ದುಡುಕಿ ಬರೆದದ್ದಕ್ಕೆ ಕ್ಷಮೆಯಿರಲಿ..
ಸರಿ ಹೀಗಾದರೂ ನನ್ನ ಸಂದೇಹ ಪರಿಹಾರ ಆಯಿತಲ್ಲ.
ನಿಮ್ಮ ಸಲಹೆಗಳಿಗೆ ಧನ್ಯವಾದಗಳು.
ನಿಮ್ಮವ,
ಗಿರೀಶ ರಾಜನಾಳ
ಉ: ಇದು ಯಾಕೆ ಹಿಂಗೆ?
ಗಿರೀಶ..
ನೀವು "ರೂಪ" ಅಂತ ಬರೆದವೆಲ್ಲ "ದೋಷ"ಗಳು ಎಂದಿರಿ. ಅಲ್ವಾ?
ಅದಕ್ಕೆ ನಾನು ಹೇಳಿದ್ದು..
ನೀವು ಮನ್ನಿಪು/ಕ್ಷಮೆ ಕೇಳಿಬೇಕಾದ್ದಿಲ್ಲ. ಆದ್ರೆ, ದಯವಿಟ್ಟು ಸುನಿಲ ಕೊಟ್ಟ ಕೊಂಡಿಯಿಂದ ಕಿಟ್ಟಲ್ ಬರೆದ ವ್ಯಾಕರಣವನ್ನು, ಹಾಗೇ ಶಂಕರ ಬಟ್ಟರ ಹೊತ್ತಗೆಗಳನ್ನು ಒಮ್ಮೆ ಓದಿಕೊಳ್ರಿ.
ನಿಮಗೆ ದಿಟವಾಗಲು ನಮ್ಮ ಕನ್ನಡ ಎನಿತ್ತು ಗಟ್ಟಿಮುಟ್ಟಾದ ನುಡಿ, ಅದರಲ್ಲಿ ಏನೇನೆಲ್ಲ ಸಲೀಸಾಗಿ ಹೇಳಬೋದು ಅಂತ ಗೊತ್ತಾಯ್ತದೆ.
ಒಮ್ಮೆ ಇದನ್ನೂ ಓದಿ..
http://ccat.sas.upenn.edu/~haroldfs/sars238/shortencybrit.html
ಗಮನಿಸಿ
"A tendency toward structural and systemic balance and stability is characteristic of the Dravidian group. "
ಇದು ಕನ್ನಡದ ದೊಡ್ಡ ಗುಣ.. ಇದು ಸಂಸ್ಕೃತ, ಇಂಗ್ಲೀಸು, ಹಿಂದಿಗಳಿಗೆ ಜಾಸ್ತಿ ಇಲ್ಲ.
ದ್ರಾವಿಡ ನುಡಿಗಳು structurally ಗಟ್ಟಿಮುಟ್ಟು, ಅವು ಬೇರೆನುಡಿಯಿಂದ ಬರೀ ಪದಗಳನ್ನು ಎರವಲು ಪಡೆಯಬೋದು.
ಉ: ಇದು ಯಾಕೆ ಹಿಂಗೆ?
ನಿಜ, ಕನ್ನಡದಲ್ಲಿ ಸ್ತ್ರೀಲಿ೦ಗವು ದೀರ್ಘದೊ೦ದಿಗೆ ಕೊನೆಗೊಳ್ಳಲ್ಲ. ಆದರೆ ಸುನಿಲ ಕೊಟ್ಟ ಕೊ೦ಡಿಯಿ೦ದಲೇ ಆದರೂ ಸ್ತ್ರೀಲಿ೦ಗವು ಎಕಾರದೊ೦ದಿಗೆ ಕೊನೆಗೊಳ್ಳಬೇಕೆ೦ಬುದು ಗೊತ್ತಾಗುತ್ತದೆ(74ನೇ ಪಾಯಿ೦ಟು).ಹಾಗಾದ್ರೆ ರೇಷ್ಮ, ಕಮಲ, ಮು೦ತಾದವುಗಳು ಹೇಗೆ ಸರಿ? ರೇಷ್ಮೆ, ಕಮಲೆ, ಮು೦ತಾಗಿ ಇರಬೇಕಿತ್ತಲ್ಲವೇ...ಅಲ್ಲದೆ ಹಳೆಯ ಪ್ರಯೋಗಗಳು ಇದ್ದುದೂ ಹೀಗೆಯೇ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು
ಉ: ಇದು ಯಾಕೆ ಹಿಂಗೆ?
ಕಮಲ ಸರಿ, ಏಕೆಂದ್ರೆ ಸಕ್ಕದದಲ್ಲೂ ಅದು ಕಮಲ(ಕಮಲಂ)!
ಇನ್ನು ರೇಷ್ಮದ ಸಂಗತಿ, ಈ 'ರೇಷ್ಮ' ನಾವು ಕನ್ನಡಿಗರ 'ರೇಷ್ಮೆ' ಅಲ್ಲ ಅನ್ನಿಸ್ತದೆ. ಇದು ಹಿಂದಿಯವ ಬಳಕೆಯಿಂದ ಬಂದಿದೆ ಅನ್ನಿಸ್ತದೆ.
ಉ: ಇದು ಯಾಕೆ ಹಿಂಗೆ?
ಗೆಳೆಯರೆ, ಹೆಂಗಳೆಯರಿಗೆ ದೀರ್ಘವಾಗಿ ಹೆಸರಿಡುವ ಪದ್ಧತಿ ಎಂದಿನಿಂದ ಚಾಲ್ತಿಗೆ ಬಂತೋ ನನಗೆ ತಿಳಿಯದು. ಆದರೆ ಸಾಂಕೇತಿಕವಾಗಿ ಈಗಾಗಲೇ ಸುಟ್ಟಿಹಾಕಲ್ಪಟ್ಟಿರುವ ಮನುಧರ್ಮಶಾಸ್ತ್ರದಲ್ಲಿ ಹೆಂಗಸರ ಹೆಸರಿನ ಬಗ್ಗೆ ಪ್ರಸ್ತಾಪವಿದೆ. ಮನುಧರ್ಮಶಾಸ್ತ್ರದಲ್ಲಿ ಒಂದು ಕಡೆ, "ಸ್ತ್ರೀಯರ ಹೆಸರು ದೀರ್ಘವಾಗಿರಬೇಕು" ಎಂಬ ಸಾಲು ಬರುತ್ತದೆ. ಆಸಕ್ತರು ಡಿ.ಎಲ್.ಐನಿಂದ ಓದಬಹುದು.
ಉ: ಇದು ಯಾಕೆ ಹಿಂಗೆ?
ಆದ್ರೆ ಚನ್ನೀಲ...
ನಮ್ಮ ಕನ್ನಡದ ಹೆಂಬೆಸರು( ಹೆಣ್ + ಪೆಸರು )ಗಳು ಹೀಗೆ ಉದ್ದಕ್ಕೆ ಮುಗಿಯುವುದಿಲ್ಲ....
ಶಾಂತಲೆ, ಅಬ್ಬಕ್ಕ, ಚನ್ನಮ್ಮ, ನಂಜಮ್ಮಣ್ಣಿ...
ಉ: ಇದು ಯಾಕೆ ಹಿಂಗೆ?
ಹೆಸರುಗಳನ್ನು ಎಳೆದು ಕೊನೆಗೊಳಿಸುವದು ಸಕ್ಕದದ ನೆರಳಿಂದಾಗಿಯೇ ಇರಬೇಕು. ನಮ್ಮ ಕಡೆ ಹೆಸರುಗಳನ್ನು ಎಳೆದು ಕೊನೆಗೊಳಿಸುವದಿಲ್ಲ. 'ಸಂಗನಗೌಡ್','ಮಲ್ಲಪ್ಪ್' ಕಲ್ಲಪ್ಪ್' ಈ ಬಗೆಯಲ್ಲಿ ಕರಿತೀವಿ.
ಪೆಂಗಳ ಹೆಸರುಗಳಲ್ಲಿ 'ಇ'ಯಿಂದ ಕೊನೆಯಾಗುವಂತವು ಕನ್ನಡದ ಜಾಡಿನವು. 'ಮಲ್ಲಿ','ಸುಬ್ಬಿ' ಮುಂತಾದವು.
'ಅ' ಅನ್ನು ತುಸು ಎಳೆದು ಅನ್ನುವದು ಬೆಂಗಳೂರು ಕನ್ನಡದ ಎಡರು ಅನಿಸುತ್ತೆ.
-------------------------------------------------------------
ನಡೆವವ ಬಿದ್ದಾನಲ್ಲದೇ, ನಿಂತವ ಬೀಳಲಾರ.
ಉ: ಇದು ಯಾಕೆ ಹಿಂಗೆ?
ಸಂಗನ,
ನಮ್ಮ ಕಡೆಯ ಹೆಂಗಸರ ಹೆಸರಲ್ಲೂ ಹೀಗೆ ಉದ್ದಸೊರ ಇಲ್ಲ...
ರತ್ಮಮ್ಮ, ಪಾರ್ವತಮ್ಮ, ಸುಬ್ಬಲಕ್ಷಮ್ಮ, ಮಲ್ಲಿ, ಬೆಳ್ಳಿ, ಚಿಕ್ಕತಾಯಿ, ದೊಡಮ್ಮ, ನಂಜಮ್ಮಣ್ಣಿ, ಪುಟ್ಟಮ್ಮಣ್ಣಿ, ರಾಚಮ್ಮ
ಸುನಿಲ ತೋರಿಸಿರೋದು 'ಮನುಸ್ಮೃತಿ' ಅದು ಸಕ್ಕದದ್ದೇ!
ಉ: ಇದು ಯಾಕೆ ಹಿಂಗೆ?
ಹಾಗಾದರೆ.. ಗಂಗಾ ನದಿಗೆ ಗಂಗ ಅಂತ,ತುಂಗಾ ನದಿಗೆ ತುಂಗ ಅಂತ, ಭದ್ರಾ ನದಿಗೆ ಭದ್ರ ಅಂತ, ಕೃಷ್ಣಾ ನದಿಗೆ ಕೃಷ್ಣ ಅಂತ, ಮಲಪ್ರಭಾ ನದಿಗೆ ಮಲಪ್ರಭ ಅಂತ, ಘಟಪ್ರಭಾ ನದಿಗೆ ಘಟಪ್ರಭ ಅಂತ ಕರೀರಿ.. ಪರವಾಗಿಲ್ಲ.
ಗಿರೀಶ ರಾಜನಾಳ
Be Indian, Buy Indian.