Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತತ್ವಜ್ಞಾನ

ಸಂನ್ಯಾಸಿಯೊಂದಿಗೆ ಸಂವಾದ

February 26, 2008 - 10:27pm — cmariejoseph

ಸಂನ್ಯಾಸಿ: ಜಗತ್ತಿನ ಧರ್ಮಗಳು ಮಾನವತೆಗೆ ದೇವರು ನೀಡಿದ ಕೊಡುಗೆ. ಮನುಕುಲದ ರಕ್ಷಣೆಗಾಗಿ ದೇವರು ಹಾಕಿಕೊಟ್ಟ ದಾರಿಗಳನ್ನೇ ಅವು ಪ್ರತಿನಿಧಿಸುತ್ತವೆ. ಅವನ್ನು ಅನುಸರಿಸುವವರಿಗೆ ಅವು ಮುಕ್ತಿತೋರುವ ಮಾರ್ಗಗಳಾಗಿವೆ.
ನಾನು: ಧರ್ಮವನ್ನು ಅನುಸರಿಸುವವರಿಗೆ ಅದು ಮುಕ್ತಿ ತೋರುವ ಸಾಧನವಾಗಬಲ್ಲದೇನೋ ಸರಿಯೇ, ಆದರೆ ಧರ್ಮಗಳೆನ್ನುವುದು ಸಾಂಘಿಕ ಅಥವಾ ಸಾಮುದಾಯಿಕ ಜೀವನಶೈಲಿಯ ಗುಣವುಳ್ಳ ಮಾನವನು ತಾನೇ ಸ್ವಯಂ ರೂಪಿಸಿಕೊಂಡದ್ದಲ್ಲವೇ?

ಸಂ: ಜಗತ್ತಿನ ಧರ್ಮಗಳು ಒಂದೇ ಸಮುದ್ರ ಸೇರುವ ಹಲವು ನದಿಗಳಿದ್ದಂತೆ. ಬೇರೆಬೇರೆ ಧರ್ಮಗಳು ಜನರನ್ನು ಒಬ್ಬನೇ ದೇವರೆಡೆಗೆ ಕರೆದೊಯ್ಯುತ್ತವೆ. ಹಲವು ದಾರಿಗಳಿದ್ದರೂ ಸೇರುವ ಸ್ಥಳ ಒಂದೇ.
ನಾ: ಇದೊಂದು ಹೇಳೀ ಹೇಳೀ ಸವಕಲಾದ ಮಾತು. ಧರ್ಮಗಳು ಮನುಷ್ಯನನ್ನು ದೇವರೆಡೆಗೆ ಒಯ್ಯುತ್ತವೆ ಎನ್ನುವುದಕ್ಕಿಂತ ಧರ್ಮಪಾಲನೆಯಿಂದ ಮನುಷ್ಯ ಮನುಷ್ಯನಾಗುತ್ತಾನೆ ಎನ್ನುವುದೇ ಸೂಕ್ತವಲ್ಲವೇ?

ಸಂ: “ಮತಗಳು ಪರಮಾತ್ಮನೆಡೆಗೆ ಸಾಗಿಸುವ ತುಮುಲದ ಸಾಧನಗಳು” ಎಂಬುದಾಗಿ ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಒಳಿತು ಕೆಡಕುಗಳ ಹೊಯ್ದಾಟದಲ್ಲಿ ಎಲ್ಲ ಮತಗಳೂ ಒಳಿತಿನ ಪರ ವಹಿಸಿ ಮನುಕುಲವನ್ನು ಉನ್ನತಿಗೇರಿಸುವ ಸಾಧನಗಳಾಗಬೇಕು.
ನಾ: ಮತ್ತದೇ ಮಾತು. ಅದರ ತೂಕ ಹೆಚ್ಚಿಸಲು ಸಾಧುವೊಬ್ಬರ ಬೆಂಬಲ ಬೇರೆ. ಎಲ್ಲ ಮತಗಳೂ ಒಳಿತಿನ ಪರ ವಹಿಸಬೇಕು ಎನ್ನುವುದಕ್ಕಿಂತ ಎಲ್ಲ ಮಾನವರೂ ಒಳಿತಿನ ಪರವಾದರೆ ಅದೇ ಅಲ್ಲವೇ ಸ್ವರ್ಗ?

ಸಂ: “ಎಲ್ಲ ಧರ್ಮಮೀಮಾಂಸೆಯ ಗುರಿಯೂ ಒಂದೇ. ಧರ್ಮಸಂಚಲನವು ಅಸತ್ಯದಿಂದ ಸತ್ಯದೆಡೆಗೆ ಮಿಗಿಲಾಗಿ ಅಪ್ರಬುದ್ಧತೆಯಿಂದ ಪ್ರಬುದ್ಧತೆಯೆಡೆಗೆ ಒಯ್ಯುತ್ತದೆ. ಅವು ಅನಂತತೆಯನ್ನು ಗ್ರಹಿಸುವ ಸಾಧನಗಳು.” (ಸ್ವಾಮಿ ವಿವೇಕಾನಂದ)
ನಾ: ಹೇಳಿದ್ನಲ್ಲ ಸ್ವಾಮೀ, ನನಗೆ ಧರ್ಮಮೀಮಾಂಸೆ ಬೇಡ, ಧರ್ಮಸಂಚಲನವೂ ಬೇಡ, ಆತ್ಮಸಾಕ್ಷಾತ್ಕಾರದಿಂದಲೇ ಅನಂತತೆ ಮುಟ್ಟಲು ಸಾಧ್ಯ ಅಲ್ಲವೇ?

ಸಂ: ಮಹಾತ್ಮ ಗಾಂಧಿಯವರು ಸ್ವಮತಪಾಲನೆ ಮತ್ತು ಮತಸೌಹಾರ್ದತೆಯನ್ನು ಪ್ರತಿಪಾದಿಸಿದರು. ಆದರೆ ಸರ್ವಮತಗಳ ಸಮಾಗಮ ಹಾಗೂ ಮತ ಆಚರಣೆಯ ಏಕತೆಯನ್ನಲ್ಲ. ಒಬ್ಬನು ತನ್ನ ಧರ್ಮದ ಆಂತರ್ಯವನ್ನು ಹೊಕ್ಕರೆ ಆತ ಮತ್ತೊಬ್ಬನ ಹೃದಯವನ್ನು ಹೊಕ್ಕಂತೆಯೇ ಏಕೆಂದರೆ ದೇವರು ಒಬ್ಬನೇ ಆದರೂ ದಾರಿಗಳು ಹಲವು.
ನಾ: ತಕ್ಕಳಪ್ಪ, ಮಹಾತ್ಮಗಾಂಧಿಯವರ ಹೆಸರು ಹೇಳಿದರೆ ನಾನು ಮೆತ್ತಗಾಗುತ್ತೀನಿ ಅಂತ ಸರಿಯಾಗೇ ಚುಚ್ಚಿದಿರಲ್ಲ. ಸರ್ವಮತಗಳ ಸಮಾಗಮ ಕಟ್ಕೊಂಡು ನನಗೂ ಏನೂ ಆಗಬೇಕಿಲ್ಲ. ಆದರೆ ತನ್ನ ಧರ್ಮದ ಆಂತರ್ಯವನ್ನು ಹೊಗುವುದಕ್ಕಿಂತ ತನ್ನದೇ ಹೃದಯದ ಆಂತರ್ಯವನ್ನು ಹೊಗಬೇಕು. ಸುತ್ತಿ ಬಳಸಿ ದೇವರು ಒಬ್ಬನೇ ದಾರಿಗಳು ಹಲವೆನ್ನುವ ಮಾತು ಬೇಡ.

ಸಂ: “ವಿವಿಧ ಧರ್ಮಗಳ ಸತ್ಪ್ರೇರಣೆ ಸರ್ವರಿಗೂ ಮೀಸಲು. ಉದಾಹರಣೆಗೆ ಹಿಂದೂ, ಮುಸಲ್ಮಾನ ಅಥವಾ ಕ್ರೈಸ್ತರಿಗೆ ಅರುಹಲಾದ ಸತ್ಯವು ಸರ್ವರಿಗೂ ಅಮೂಲ್ಯವಾದುದು. ಪರಮತವನ್ನು ಅರಿತು ತಮ್ಮ ಅಧ್ಯಾತ್ಮವನ್ನು ವೃದ್ಧಿಸಿಕೊಳ್ಳಲು ಆಸಕ್ತರಾದವರನ್ನು ಯಾರೂ ತಡೆಯಬಾರದು” (ಮಹಾತ್ಮ ಗಾಂಧಿ).
ನಾ: ಇದಕ್ಕೆ ಅಡ್ಡಿಯಾಗಿರುವುದು ಸ್ವತಃ ಧರ್ಮಗಳೇ. ಇರುವಾಸೆಯ ಬಿಡು ಅರಿವಾಸೆಯ ತೊಡು ಎಂದಿದ್ದಾರೆ ನನ್ನ ಗುರು.

ಸಂ: ಯಾವುದೇ ಮತದ ಸಾಧನೆ ಯಶಸ್ಸು ಎಲ್ಲ ಮತಗಳಿಗೂ ಮೀಸಲು. ಆದ್ದರಿಂದ ಸಮಾಜದ ಸಮಸ್ಯೆ ಗೊಂದಲಗಳನ್ನು ಬಗೆಹರಿಸಲು ಸರ್ವ ಮತಗಳ ಸಹಕಾರ ಅತ್ಯಗತ್ಯ.
ನಾ: ಮತದ ಯಶಸ್ಸು ಎನ್ನುವುದಕ್ಕಿಂತ ಮನುಜನ ಯಶಸ್ಸು ಎನ್ನಿ. ಆ ಮೇರು ಮನುಷ್ಯನ ಹೃದಯದೊಂದಿಗೆ ಸಮಾನತ ಹೊಂದುವ ತುಮುಲವಿದ್ದಲ್ಲಿ ಸಹೃದಯತೆ ಸಿದ್ಧಿಸುವುದು.

ಸಂ: ಎಲ್ಲ ಮತಗಳ ವಿಶಾಲ ಭಾವನೆಯ ತತ್ವಗಳು ಸಂಕುಚಿತ ಚೌಕಟ್ಟಿನಿಂದ ಹೊರಬರುವುದಾದರೆ ಮತಗಳ ಉನ್ನತಿ ಹಾಗೂ ಸಮಾಜದ ಐಕ್ಯತೆಯನ್ನು ಸಾಧಿಸುವ ಸಾಧನಗಳಾಗುವುವು.
ನಾ: ಸಂಕುಚಿತ ಚೌಕಟ್ಟು ಇದ್ದರೆ ಅವು ಹೊರಬರುವುದೇ ಬೇಡ, ಅಂಥ ಮತಗಳು ಅಲ್ಲೇ ನಶಿಸಲಿ.

ಸಂ: ಪ್ರತಿ ಧರ್ಮದ ಗುರಿ ’ಅದ್ವೈತ’ ಎಂಬುದೇ ಅಂತಿಮ ಸತ್ಯ. ಅದು ಇಡೀ ವಿಶ್ವ ಮತ್ತು ಎಲ್ಲ ಜೀವರಾಶಿಯನ್ನು ಒಗ್ಗೂಡಿಸುವ ಒಳವಾಹಿನಿಯಾಗಿದೆ. ಆ ಸತ್ಯವು ಹಿಂದೂಗಳಿಗೆ ಮಾತ್ರವಲ್ಲದೆ ಸರ್ವಜನರಿಗೂ ಲಭ್ಯವಿದೆ. ಸಹಜವಾದ ಮನೋವಿಕಾಸದಿಂದ ನಾವು ಅದನ್ನು ಸಾಧಿಸಬಹುದಾಗಿದೆ. ಆದ್ದರಿಂದ ಒಬ್ಬರ ದೃಷ್ಟಿಕೋನವನ್ನು ಮತ್ತೊಬ್ಬರ ಮೇಲೆ ಹೇರುವ ಅಗತ್ಯವಿಲ್ಲ ಮತ್ತು ಅದು ಸಾಧ್ಯವೂ ಇಲ್ಲ (ಸ್ವಾಮಿ ವಿವೇಕಾನಂದ).
ನಾ: ಕ್ರೈಸ್ತ ಬೌದ್ಧ ಮುಸಲ್ಮಾನರೆಲ್ಲರೂ ದ್ವೈತವನ್ನೊಪ್ಪುತ್ತಾರೆ. ಏಕೆಂದರೆ ಅಗೋಚರ ಸರ್ವಶಕ್ತನು ಬೇರೆ ನಾವು ಬೇರೆ ಎನ್ನುತ್ತಾರಲ್ಲ? ದ್ವೈತವಾಗಲೀ ಅದ್ವೈತವಾಗಲೀ ಅದು ನಾವು ಅಳಿದ ಮೇಲೆ, ಅದರಿಂದ ಮನುಷ್ಯಜೀವನಕ್ಕೆ ಬಂದ ಭಾಗ್ಯವೇನು?

ಸಂ: ಪ್ರತಿ ಧರ್ಮದ ಅನನ್ಯತೆಯನ್ನು ಸ್ವಾಮಿ ವಿವೇಕಾನಂದರು ಮೆಚ್ಚಿದ್ದಾರಲ್ಲದೆ ಎಲ್ಲ ಧರ್ಮಗಳ ಸಾರವನ್ನು ಗ್ರಹಿಸಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ಮುಕ್ತ ಮನೋಭಾವದಿಂದ ಅನನ್ಯತೆ ಸಫಲವಾಗುವುದು ಎಂದು ಅವರು ನಂಬಿದ್ದರು. ಎಲ್ಲ ಮತಗಳು ಪರಸ್ಪರರಿಂದ ಅರಿಯಲು ಹಾಗೂ ವಿನಿಮಯಿಸಿಕೊಳ್ಳಲು ಸಾಕಷ್ಟಿದೆ ಎಂಬುದು ಅವರ ಆಳ ಅನಿಸಿಕೆಯಾಗಿದ್ದಿತು.
ನಾ: ಪರಸ್ಪರರಿಂದ ಅರಿಯಲು ಆಗದಂತೆ ಧರ್ಮಗಳು ತಮಗೆ ತಾವೇ ಬೇಲಿ ಹಾಕಿಕೊಂಡಿವೆ.

ಸಂ: ಸ್ವಾಮಿ ವಿವೇಕಾನಂದರ ವಿಶ್ವಧರ್ಮದ ಪರಿಕಲ್ಪನೆಯಲ್ಲಿ, ಎಲ್ಲಾ ಮತಗಳು ತಮ್ಮ ವಿಭಿನ್ನತೆಯನ್ನು ಹಾಗೂ ಒಂದೇ ಸತ್ಯದ ವಿವಿಧ ದೃಷ್ಟಿಕೋನಗಳನ್ನು ವ್ಯಕ್ತಪಡಿಸುವ ಸಾಧನಗಳು. ಆದ್ದರಿಂದ ಅಲ್ಲಿ ಪರಸ್ಪರ ಒತ್ತಾಸೆಯಿದೆ ಹೊರತು ಸಂಘರ್ಷವಿಲ್ಲ.
ನಾ: ಬಡ್ಕೊಬೇಕು. ಬೇಲಿ ಇದೆ ಅರ್ಥಾತ್ ಅತಿ ಎತ್ತರದ ಕಾಂಪೌಂಡ್ ಗೋಡೆ ಇದೆ.

ಸಂ: ಆತ್ಮೋದ್ಧಾರದ ಮಾರ್ಗದಲ್ಲಿ ಇತರ ಆಧ್ಯಾತ್ಮಿಕ ನೋಟಗಳನ್ನು ಪರಿಗಣಿಸದೆ ಸಂಕುಚಿತವಾಗಿ ನಡೆಯುವುದರಿಂದ ಧಾರ್ಮಿಕ ಅಶಾಂತಿ ಅನೈಕ್ಯತೆಗೆ ಕಾರಣವಾಗುತ್ತದೆ. (ಸ್ವಾಮಿ ವಿವೇಕಾನಂದ)
ನಾ: ನನಗೇನೂ ಹಾಗೆನಿಸುವುದಿಲ್ಲ. ಆತ್ಮೋದ್ಧಾರಕ್ಕೆ ಹಂಬಲಿಸುವವನು ಅಶಾಂತಿ ಹುಟ್ಟುಹಾಕುವುದಿಲ್ಲ. ಉದ್ಧರಿಸುವೆನು ಜಗವನೆನ್ನುತಿಹ ಸಖನೆ ನಿನ್ನುದ್ಧಾರವೆಷ್ಟಾಯ್ತೊ ಮಂಕುತಿಮ್ಮ.

ಸಂ: ವಿಶಾಲ ಮನೋದೃಷ್ಟಿ ಇಲ್ಲದೆ ಸಂಕುಚಿತ ಮನೋಭಾವನೆಯನ್ನೇ ಪ್ರತಿಪಾದಿಸುವ ಮತ ಅಪಾಯಕಾರಿ. ಪರಧರ್ಮ ಸಹಿಷ್ಣುತೆಯಿಂದ ಪರಮತಗಳನ್ನು ಮುಕ್ತಭಾವದಿಂದ ಅರಿಯುವುದು ವೈಯಕ್ತಿಕ ಹಾಗೂ ಸಾಮೂಹಿಕ ಆತ್ಮೋದ್ಧಾರಕ್ಕೆ ಇಂಬುಕೊಡುತ್ತದೆ.
ನಾ: ಅಂಥ ಮತ ಮತವೇ ಅಲ್ಲ ಬಿಡಿ. ಇನ್ನು ಆತ್ಮೋದ್ಧಾರಕ್ಕೆ ಹಲವು ದಾರಿಗಳುಂಟು.

ಸಂ: ವಿವಿಧ ಮತಗಳು ಮಾನವಕೋಟಿಯ ಉನ್ನತಿಗಾಗಿ ಶ್ರಮಿಸುವ ದೈವೀ ಸಾಧನಗಳು. ಅಂತರ ಮತಗಳ ಸಂವಾದ ಮಾತುಕತೆಯಿಂದ ಆಯಾ ಮತಗಳ ನಿರ್ಲಕ್ಷಿತ ದೃಷ್ಟಿ ಅಥವಾ ಆಯಾಮವನ್ನು ಸರಿದೂಗಿಸಬಹುದು.
ನಾ: ಬೇಕಾಗಿಲ್ಲ. ಏಕೆಂದರೆ ಕೊನೆಗೆ ಮತಗಳು ಉಳಿಯುವುದಿಲ್ಲ. ಮನುಷ್ಯತ್ವವೇ ಉಳಿಯುವುದು. ನೀವು ಎಂದಾದರೂ ಗಾಯಾಳುವಾಗಿ ಆಸ್ಪತ್ರೆಯಲ್ಲಿ ಮಲಗಿದ್ದೀರಾ?

ಸಂ: “ಸತ್ಯವು ಒಂದೇ, ಋಷಿಗಳು ಅದನ್ನು ಬೇರೆಬೇರೆ ಹೆಸರುಗಳಿಂದ ಕರೆದಿದ್ದಾರೆ.”(ಋಗ್ವೇದ). ಸತ್ಯದ ಕುರಿತು ಅಪಾರ ಆಸ್ತೆ ಹೊಂದಿದ್ದ ಮಹಾತ್ಮ ಗಾಂಧಿಯವರು ವಿವಿಧ ಧರ್ಮಗಳಿಂದ ಬರುವ ಸತ್ಯದ ಪ್ರವಾಹವನ್ನು ಸ್ವೀಕರಿಸಬಲ್ಲವರಾಗಿದ್ದರು. ಆದ್ದರಿಂದಲೇ ಅವರು “ಯಾವುದೇ ಧರ್ಮವನ್ನು ನಿರ್ಲಕ್ಷಿಸುವುದೆಂದರೆ ದೇವರ ಅಪಾರ ಕೊಡುಗೆಗಳನ್ನು ನಿರ್ಲಕ್ಷಿಸಿದಂತೆ ಮಾತ್ರವಲ್ಲ ಮಾನವಕುಲದ ಆಧ್ಯಾತ್ಮಿಕತೆಯನ್ನು ದುರ್ಬಲಗೊಳಿಸಿದಂತೆಯೇ ಸರಿ” ಎಂದಿದ್ದಾರೆ.
ನಾ: ಮತ್ತೆ ಗಾಂಧಿ ಬಂದರು. ನಾಡೊಳೆನಿತೋ ರಾಮಾಯಣಂಗಳೊಳವು. ಅವನ್ನೆಲ್ಲ ನೆಕ್ಕಬೇಕೇನು?
ಸಂ: “ದೇವರನ್ನು ಪ್ರೀತಿಸುವುದು ಮತ್ತು ಪರರನ್ನು ಪ್ರೀತಿಸುವುದು ಎರಡೂ ಒಂದೇ ನಾಣ್ಯದ ಎರಡು ಬದಿಗಳಿದ್ದಂತೆ. ತನ್ನಂತೆಯೇ ಪರರ ಬಗೆಯದೆ ದೇವರನ್ನು ಅರಿತೆನೆಂದವನು ಸುಳ್ಳುಗಾರನಾಗುತ್ತಾನೆ” (ಪವಿತ್ರಬೈಬಲ್)
ನಾ: ಇದಂತೂ ಸತ್ಯವಾದ ಮಾತು.

ಸಂ: “ದೇವರೇ ಸತ್ಯ ಹಾಗೂ ಸತ್ಯವೇ ದೇವರು. ಎಲ್ಲ ಜನರೂ ಈ ಸಮಗ್ರ ಸತ್ಯವನ್ನು ಅರಿಯಬೇಕು. ಅಹಿಂಸೆಯೊಂದರಿಂದಲೇ ಸತ್ಯವನ್ನು ಅರಿಯಲು ಸಾಧ್ಯ, ಅರ್ಥಾತ್ ವಿಶ್ವದ ಕನಿಷ್ಠ ಜೀವಿಯನ್ನು ತನ್ನಂತೆಯೇ ಪರಿಭಾವಿಸುವ ಮೂಲಕ.” (ಮಹಾತ್ಮ ಗಾಂಧಿ)
ನಾ: ಅಲ್ಲವೇ ಮತ್ತೆ.

ಸಂ: ಐಹಿಕ ವಸ್ತುಗಳ ಸಂಬಂಧಕ್ಕಿಂತ ಮನುಷ್ಯ ಮನುಷ್ಯ ಸಂಬಂಧ ಶ್ರೇಷ್ಠವಾದುದು. ಆದ್ದರಿಂದ ಸಮಾಜದ ದೀನರು, ರೋಗಿ, ಅಸಹಾಯಕ ಮತ್ತು ಶೋಷಿತರ ಸೇವೆಯೇ ದೇವರ ಸೇವೆ. “ಕನಿಷ್ಠನಾದ ನಿನ್ನ ಸಹೋದರ ಸಹೋದರಿಗೆ ನೀನು ಏನು ಮಾಡುವಿಯೋ ಅದನ್ನು ನನಗೇ ಮಾಡಿದಂತೆ” (ಯೇಸುಕ್ರಿಸ್ತ). ಯೇಸುಕ್ರಿಸ್ತ ಕೊಟ್ಟಕೊನೆಯ, ಲೆಕ್ಕಕ್ಕೆ ಸಿಗದ ಹಾಗೂ ಕಳೆದುಹೋದ ಮಾನವ ಸಂಕುಲದೊಂದಿಗೆ ತನ್ನನ್ನು ಗುರುತಿಸಿಕೊಂಡನು ಮಾತ್ರವಲ್ಲ ಮಾನವನ ಮೌಲ್ಯ, ಮತ್ತು ಘನತೆಗೌರವಗಳನ್ನು ಎತ್ತಿಹಿಡಿದನು.
ನಾ: ಯೇಸುಕ್ರಿಸ್ತನ ಬಗ್ಗೆ ಎರಡು ಮಾತಿಲ್ಲ ಬಿಡಿ. ಮಾರ್ಟಿನ್ ಲೂಥರ್ ಕಿಂಗ್, ಅಬ್ರಹಾಂ ಲಿಂಕನ್, ಮಹಾತ್ಮಗಾಂಧಿ . . ಇ. ಈ ಪಟ್ಟಿ ಇನ್ನೂ ಬೆಳೆಯುತ್ತಾ ಹೋಗುತ್ತೆ.

ಸಂ: ಅನ್ಯ ಧರ್ಮವನ್ನು ತೆಗಳುವುದು, ತಪ್ಪುಮಾಹಿತಿ ನೀಡುವುದು, ಮುಗ್ದರನ್ನು ಹಿಂಸಿಸುವುದು, ದೇವಮಂದಿರವನ್ನು ಅಪವಿತ್ರಗೊಳಿಸುವುದು ಇವೆಲ್ಲ ನಿಜಧರ್ಮ ಪಾಲನೆಯಲ್ಲ. ಶಾಂತಿ ಪ್ರೀತಿ ಕ್ಷಮೆಯ ಸಾಕ್ಷಾತ್ಕಾರವಾಗಿರುವ ದೇವರನ್ನೇ ತ್ಯಜಿಸಿದಂತೆ. ಸ್ವಧರ್ಮ ಹಾಗೂ ಪರಧರ್ಮಗಳ ಕುರಿತ ಅಜ್ಞಾನವೇ ಎಲ್ಲ ಅನಾಹುತಗಳಿಗೆ ಕಾರಣ. (ಮಹಾತ್ಮಗಾಂಧಿ)
ನಾ: ಸ್ವಧರ್ಮ ಪರಧರ್ಮವೆಂಬುದಿಲ್ಲ. ಇರುವುದೊಂದೇ, ಅದು ಮಾನವಧರ್ಮ.

ಸಂ: “ಜೀವಾತ್ಮನೊಬ್ಬನೇ, ಋಷಿಗಳು ಬೇರೆಬೇರೆ ಹೆಸರಿನಿಂದ ಕರೆದಿದ್ದಾರೆ” (ಋಗ್ವೇದ ೧, ೧೬೪,೪೬) ಜೀವಾತ್ಮನು ಸದಾ ದೇವರ ಹಾಗೂ ಪಾರಮಾರ್ಥಿಕತೆಯ ಪರವಾಗಿರುತ್ತಾನೆ. ಇತಿಹಾಸದಲ್ಲಿ ಎಲ್ಲ ಮತಗಳೂ ಜೀವಾತ್ಮನ ಪ್ರಸನ್ನತೆ ಹಾಗೂ ರಕ್ಷಣೆಯ ಸಾಧನಗಳು. ಯಾವೊಂದು ಮತವು ದೇವರನ್ನು ಪರಿಪೂರ್ಣವಾಗಿ ಅರಿತಿಲ್ಲ ಹಾಗೂ ಅರಿಯಲು ಸಾಧ್ಯವಿಲ್ಲ. ಆದರೂ ನಮ್ಮ ಜೀವನದ ಅಂತಿಮ ಗುರಿ ದೇವರು. ಆದ್ದರಿಂದ ನಾವು ಎಲ್ಲ ಮತಗಳನ್ನು ಸಮಾನ ದೃಷ್ಟಿಯಿಂದ ಕಾಣಬೇಕು.
ನಾ: ನಾನೇ ಜೀವಾತ್ಮ. ಜೀವಂತಿಕೆಯತ್ತಲೇ ನನ್ನ ಮನ ತುಡಿಯುವುದು. ಜೀವನದ ಗುರಿಯೆಂದರೆ ಮನುಷ್ಯ ಮನುಷ್ಯನಾಗಿ ಬಾಳುವುದು ಹಾಗೂ ಇನ್ನೊಬ್ಬ ಮನುಷ್ಯನನ್ನು ಮನುಷ್ಯನಂತೆಯೇ ಕಾಣುವುದು.

‹ ಮಕರ ಸಂಕ್ರಾಂತಿಯನ್ನು ಜನವರಿ ೧೪ ರಂದು ಆಚರಿಸುವುದು ತಪ್ಪಲ್ಲವೆ? ಈ ವಚನದ ಅರ್ಥ ಹೇಳಿ ನೋಡೋಣ ›
  • ತತ್ವಜ್ಞಾನ
Ornamental seperator
  • Login or register to post comments
  • 301 hits
  • Email this forum
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 27, 2008 - 5:24pm — yajamanfrancis

ಉ: ಸಂನ್ಯಾಸಿಯೊಂದಿಗೆ ಸಂವಾದ

yajamanfrancis's picture

ಒಂದೆರಡು ಹೊಳಹುಗಳು -

೨ನೆಯ ಕ್ರಮಸಂಖ್ಯೆಗೆ -
“ವಿಪರ್ಯಾಸವೆಂದರೆ ಎಲ್ಲ ಧರ್ಮಗಳೂ ತಮ್ಮನ್ನು ಶ್ರೇಷ್ಠಾತಿಶ್ರೇಷ್ಠ ಎಂದು ಭಾವಿಸಿವೆ ಮತ್ತು ಅದನ್ನೆ ಬೋಧಿಸುತ್ತಿವೆ ಕೂಡ.”

೩ನೆಯ -
“ಇಲ್ಲಿ ಒಳಿತು ಮತ್ತು ಕೆಡುಕು ಯಾವುದೆನ್ನುವುದರ ವಿವೇಚನೆ ಅಗತ್ಯ. ಒಂದು ಧರ್ಮದ ಒಳಿತು ಮತ್ತೊಂದು ಧರ್ಮಕ್ಕೆ ಕೆಡುಕಾಗಿ ಕಾಣುವ ಪ್ರಮೇಯಗಳು ಈಗ ಇಲ್ಲದಿಲ್ಲ. ನಿಜವಾದ ಧರ್ಮಯುದ್ಧ ಎಂದರೆ ಏನು?”

೫ನೆಯ -
“ಪ್ರಶ್ನೆ ಎರಡಕ್ಕೂ ಇದಕ್ಕೂ ಹೆಚ್ಚಿನ ವ್ಯತ್ಯಾಸ ಕಾಣುತ್ತಿಲ್ಲ.”

೬ನೆಯ -
“ಈ ಸ್ವಪ್ರೇರಣೆಯೇ ಈಗ ಕಣ್ಣುಗಳಿಗೆ ಮತಾಂತರವಾಗಿ ಕಾಣಿಸುತ್ತಿರುವುದು.
ಒಬ್ಬ ವ್ಯಕ್ತಿಗೆ ಒಂದು ಧರ್ಮದ ಕೆಲ ಅಂಶ, ಮತ್ತೊಂದು ಧರ್ಮದ ಸಣ್ಣ ವಿಚಾರ ಇಷ್ಟವಾಗಿದೆ ಎಂದಿಟ್ಟುಕೊಳ್ಳೋಣ. ಹಾಗಾದಾಗ, ಆತ ಅವುಗಳನ್ನು ಆಂತರಿಕವಾಗಿ ಅನುಸರಣೆಗೆ ತೊಡಗುತ್ತಾನೆಯೇ ವಿನಃ, ಆದನ್ನು ಹೊರಗೆಲ್ಲೂ ಪ್ರಕಟಪಡಿಸಲಾರ. ಕಾರಣ ಈಗಾಗಲೇ ಅವನು ಅನುಸರಿಸುತ್ತಿರುವ ಧರ್ಮ, ಅಡ್ಡಿ ಮಾಡೀತೆಂಬ ಆತಂಕ. ಈ ದೃಷ್ಟಿಯಲ್ಲಿ ಒಂದು ಧರ್ಮವೇ ಇನ್ನೊಂದು ಧರ್ಮವನ್ನು ಹಿಚುಕುತ್ತಿರುವುದು ಸ್ಪಷ್ಟ.”

೮ನೆಯ -
“ಮತಗಳ ವಿಶಾಲ ಭಾವನೆಯ ತತ್ವಗಳು ಎಂದಾಗಲೇ ಅಲ್ಲಿ ಸಂಕುಚಿತ ಚೌಕಟ್ಟು ಇಲ್ಲ ಎಂಬ ಅರ್ಥ ಹೊರಡುತ್ತದೆಯಲ್ಲವೆ? ಪ್ರಶ್ನೆಯನ್ನು ಕೊಂಚ ರಿಪೇರಿ ಮಾಡಲು ಸಾಧ್ಯವೇ ನೋಡಿ. (ಪ್ರೀತಿಯ ಸಲಹೆಯಷ್ಟೆ)”

೧೦ನೆಯ -
“ಪ್ರತಿ ಧರ್ಮದಲ್ಲೂ ಸಮಾನ ಅಂಶಗಳೂ ಸಾಕಷ್ಟು ಕಂಡುಬರುತ್ತವೆ. ಆದರೆ ಯಾವುದು ಉನ್ನತ ಧರ್ಮ ಎಂದು ನಾವೆಲ್ಲಾ ತಲೆಕೆಡಿಸಿಕೊಳ್ಳುತ್ತಿರುವುದರಿಂದ ಅವು ನಮಗೆ ಕಾಣುತ್ತಿಲ್ಲ ಅಷ್ಟೇ.”

೧೪ನೆಯ -
“ಪರಸ್ಪರ ಸಂವಹನ, ಸಂವಾದ, ಧಾರ್ಮಿಕ ಕಾರ್ಯಕ್ರಮಗಳಿಗೆ ಆಹ್ವಾನ, ಧಾರ್ಮಿಕ ಸಾಮ್ಯತೆಗಳ ಮನದಟ್ಟಿಗೆ ಪೂರಕ ಪ್ರಯತ್ನ. “

೧೬ನೆಯ -
“ಸರ್ವ ಧರ್ಮ ಸಹಿಷ್ಣುತೆಯ ಅರ್ಥ ಇಲ್ಲಿ ಸ್ಪಷ್ಟ. ಇಲ್ಲಿ ಪರರನ್ನು ಎಂದಾಗ ತನ್ನದೇ ಧರ್ಮದವನೆಂದು ಪರಿಭಾವಿಸುವುದು ಸಲ್ಲ, “

೧೭ನೆಯ -
“ಯೇಸು ಪ್ರತಿಪಾದಿಸಿದ್ದು ಪ್ರೀತಿ. ಗಾಂಧಿಯದು ಅಹಿಂಸೆ. ಎರಡು ಒಂದರೊಳಗೊಂದು ಹೇಗೆ ಮಿಳಿತವಾಗಿವೆ ನೋಡಿ”

೧೮ನೆಯ -
“ಇನ್ಯಾರೋ ಮಾಡಲಿ ಎಂದು ಕೈಕಟ್ಟಿ ಕುಳಿತುಕೊಳ್ಳುವ ಬದಲು, ನಮ್ಮ ಅಳಿಲುಸೇವೆಗಳಿಂದ ಮುಂದಾದರೆ ಮನುಷ್ಯ ಮತ್ತು ಧರ್ಮ ಎರಡೂ ಗಟ್ಟಿಗೊಳ್ಳಲು ಸಾಧ್ಯ.”

೧೯ನೆಯ -
“ತಲೆಬುಡವಿಲ್ಲದ ಮುದಿ ಬರೆಹಗಳು, ಸಂಶೋಧನೆ ಎಂಬ ಹೆಸರಲ್ಲಿ ರಾತೋರಾತ್ರಿ ಜೀವ ಪಡೆವ ಕಲ್ಲುಬಂಡೆಗಳು, ಪ್ರಾರ್ಥನೆಯನ್ನೆ ಮತಾಂತರ ಎನ್ನುವ ಹೇಳಿಕೆಗಳು, ಹಿಂಸೆಗೆ ಪ್ರಚೋದನೆ, ಮುಂತಾದ ಮೌಢ್ಯಗಳಿಂದ ಒಂದು ಧರ್ಮ ಉಳಿಯುತ್ತದೆಯೇ?. ಉಳಿದರೂ ಅದು ಧರ್ಮ ಎಂದು ಕರೆಸಿಕೊಳ್ಳಲು ಯೋಗ್ಯವೆ?“

ಒಲುಮೆಯಿಂದ,

ಯಜಮಾನ್ ಫ್ರಾನ್ಸಿಸ್

  • Login or register to post comments
  • link
  • Email this ಪ್ರತಿಕ್ರಿಯೆ
February 27, 2008 - 10:31pm — cmariejoseph

ಉ: ಸಂನ್ಯಾಸಿಯೊಂದಿಗೆ ಸಂವಾದ

cmariejoseph's picture

ಫ್ರಾನ್ಸಿಸರೇ, "ಮತಗಳ ವಿಶಾಲ ಭಾವನೆಯ ತತ್ವಗಳು ಎಂದಾಗಲೇ ಅಲ್ಲಿ ಸಂಕುಚಿತ ಚೌಕಟ್ಟು ಇಲ್ಲ ಎಂಬ ಅರ್ಥ ಹೊರಡುತ್ತದೆಯಲ್ಲವೆ? ಪ್ರಶ್ನೆಯನ್ನು ಕೊಂಚ ರಿಪೇರಿ ಮಾಡಲು ಸಾಧ್ಯವೇ ನೋಡಿ. (ಪ್ರೀತಿಯ ಸಲಹೆಯಷ್ಟೆ)”

ಇದನ್ನು ಆ ಸಂನ್ಯಾಸಿಗೆ ಹೇಳಬೇಕು.

  • Login or register to post comments
  • link
  • Email this ಪ್ರತಿಕ್ರಿಯೆ
February 27, 2008 - 11:52pm — ಗಣೇಶ

ಉ: ಸಂನ್ಯಾಸಿಯೊಂದಿಗೆ ಸಂವಾದ

ಗಣೇಶ's picture

'ನಾ ಹೋದರೆ ಹೋಗಬಹುದು.'

"ತಿರುಪತಿ ತಿಮ್ಮಪ್ಪಾ..
ಇಲ್ಗೂ ಬಂದ್ರಪ್ಪಾ."

ಸ್ವಾಮಿ,
ತಮ್ಮ ಸಂವಾದದಿಂದ ಪ್ರಭಾವಿತನಾಗಿದ್ದೇನೆ.
ರಾಮಾಯಣ,ವಿವೇಕಾನಂದ,ಗಾಂಧಿ..ನಿಮ್ಮ ಮುಂದೆ ಏನೂ ಅಲ್ಲ.
ಕ್ರೈಸ್ತ ಧರ್ಮಕ್ಕೆ ಸೇರುವ ವಿಧಿವಿಧಾನಗಳನ್ನು ತಿಳಿಸುವಿರಾ.
ಗಣೇಶ.

  • Login or register to post comments
  • link
  • Email this ಪ್ರತಿಕ್ರಿಯೆ
February 28, 2008 - 10:12am — cmariejoseph

ಉ: ಸಂನ್ಯಾಸಿಯೊಂದಿಗೆ ಸಂವಾದ

cmariejoseph's picture

ಗಣೇಶರೇ, ನಿಮ್ಮ ಅನಿಸಿಕೆ ತಪ್ಪು ಎಂದು ವಿಷಾದದಿಂದ ಹೇಳಬೇಕಿದೆ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಿಂತಕರ selective criticism
  • ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?
  • ಕ್ರೈಸ್ತ ಧರ್ಮ
  • ಶ್ರೀರಾಮಕ್ರಿಷ್ಣ ಪರಮಹಂಸರು
  • ವಚನ ಚಿಂತನ:೧೨: ನಾ ದೇವನಲ್ಲದೆ ನೀ ದೇವನೇ?
Syndicate content

ಲೇಖಕರು

cmariejoseph's picture

ಪೂರ್ಣ ಹೆಸರು
ಮರಿಜೋಸೆಫ್

ಪರಿಚಯ

ಕನ್ನಡ ಕ್ರೈಸ್ತರ ಭಾಷಾ ಚಳವಳಿಯ ಮುಂಚೂಣಿಯಲ್ಲೊಬ್ಬ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಮೊಝಿಲ್ಲಾ ಫೈರ್ ಫಾಕ್ಸ್ ಮತ್ತು ಪ್ರಜಾವಾಣಿ ಈ ಪೇಪರ್.....
  • ಸಹಾಯ ಮಾಡಿ : ಕನ್ನಡದ ವೆಬ್ ಪೇಜ್ ಮಾಡಬೇಕಾಗಿದೆ.
  • ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
  • ನಾಡೋಜ ಎಂದರೆ.....
  • ಸವಾಲೊಂದು ನಿನ್ನ ಮ್ಯಾಲ...
  • ಇಂಗ್ಲಿ’ ಷ್ ’ ನಲ್ಲಿ ’ ಷ ’ ಕಾರ ಯಾಕೆ? ’ ಶ’ ಸಾಲದೇ?
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 10000 ನೇ ಪ್ರಯತ್ನದಲ್ಲಿ ಸಫಲವಾದಾಗ)

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator