ಕನ್ನಡ ಪದಗಳ ಬಳಕೆಯಲ್ಲಿನ ಮುಜುಗರವನ್ನು ಮೀರೋದು ಹೇಗೆ ?
ಇತ್ತೀಚೆಗೆ ಶಂಕರ ಭಟ್ಟರ ಪುಸ್ತಕಗಳನ್ನು ಓದುವವರು ಹೆಚ್ಚಾಗಿ, ಅದರ ಪರ-ವಿರೋಧ ದನಿಗಳು ಕೇಳಿ ಬರುತ್ತಿವೆ. ಚರ್ಚೆಗಳು ಹೆಚ್ಚಿವೆ. ಆದರೆ ಈ "ಪರ ಹಾಗು ವಿರೋಧ" ಎರಡೂ ಗುಂಪಿನವರ ನಡುವೆ ಒಮ್ಮತ ಮೂಡಿರುವುದು, "ಹುಸಿ ಪ್ರಬುದ್ಧತೆಗಾಗಿ ಬೇರೆನುಡಿಯ ಪದಗಳನ್ನು ಬಳಸದೆ, ಹೆಚ್ಚು ಹೆಚ್ಚು ಕನ್ನಡ ಪದಗಳನ್ನು ಬಳಸಬೇಕು" ಎಂಬುದರ ಕುರಿತಾಗಿ. ಹಾಗಾಗಿ ಈ ಕನ್ನಡ ಪದಗಳ ಬಳಕೆ ಹೇಗಿರಬೇಕು ಎಂಬುದರ ಕುರಿತು ಯೋಚಿಸಿದಾಗ, ಇವೆರಡನ್ನು ಹೇಳಬೇಕೆನಿಸಿತು.
೧. "ಹೆಚ್ಚು ಕನ್ನಡ ಪದ ಬಳಸೋಣ" ಎಂದರೆ, "ಆಡು ಮಾತಿನ ಕನ್ನಡದ ಪ್ರತ್ಯಯಗಳನ್ನು" ಬರಹದಲ್ಲಿ ಬಳಸಬೇಕು ಎಂಬ ಅರ್ಥ *ಇಲ್ಲ*. ಅಂದರೆ, ಮಂಡ್ಯದವರು "ಬತ್ತೌನೆ, ಓಯ್ತೌನೆ" ಎಂಬುದಾಗಿ ಹೇಳುವುದನ್ನು ಬರಹಕ್ಕೆ ಇಳಿಸಬಾರದು. ಈ ರೀತಿ ಮಾಡಿದರೆ, ಮಂಡ್ಯದವರು "ಬಂದಯ್ತೆ" ಅಂತಲೂ, ಹವ್ಯಕರು "ಬಂಜಡ" ಅಂತಲೂ ಧಾರವಾಡದವರು "ಬಂದ್ಯದ" ಅಂತಲೂ ಬರೆಯೋಕ್ಕೆ ಶುರುಮಾಡ್ತಾರೆ. ಈ ರೀತಿಯ ಬಳಕೆಗಳನ್ನು ಬೇರೆಯವರು ಓದುವಾಗ ಮುಜುಗರ ಉಂಟಾಗುತ್ತದೆ. ಹಾಗಾಗಿ, ಬರಹದಲ್ಲಿ ಇಳಿಸುವಾಗ, "ಶಿಷ್ಟ" ಪ್ರತ್ಯಯಗಳನ್ನು ಸೇರಿಸಿ ಬಳಸಬೇಕು.
ಉದಾ: ಬಂದಯ್ತೆ, ಬಂಜಡ, ಬಂದ್ಯದ = ಬಂದಿದೆ.
೨. ನಮ್ಮ ನಮ್ಮ ಮನೆಗಳಲ್ಲಿ ಉಳಿದುಕೊಂಡಿರುವ ಕನ್ನಡದ ಧಾತುಗಳು ಆಚೆ ತೆಗೆಯಬೇಕು. ಉದಾಹರಣೆಗೆ - ಜಗಲಿ ಭಾಗವತರು ತಮ್ಮ ಪಟ್ಟಾಂಗ ಬ್ಲಾಗಿನಲ್ಲಿ ಕುಂದಾಪುರ ಕನ್ನಡದಲ್ಲಿನ ಅನೇಕ ಧಾತುರೂಪದ ಕನ್ನಡ ಪದಗಳ ಪರಿಚಯ ಮಾಡಿಸಿದ್ದಾರೆ. ಉದಾ: ಚಣಿಲು, ಚಾಂದ್ರಾಣ. ಇಂತಹ ಪ್ರಯತ್ನಗಳು ಹೆಚ್ಚಾಗಬೇಕು.
"ಕನ್ನಡ ಪದಗಳ ಬಳಕೆಯಲ್ಲಿ ಇರಬಹುದಾದ ಬೇರೆಬೇರೆ ರೀತಿಯ ಮುಜುಗರವನ್ನು ಹೇಗೆ ಮೀರಿ ನಿಲ್ಲುವುದು ?" ಎಂಬುದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ.
ಇಷ್ಟಾಗಿಯೂ, ಬರೆಯುವಾಗ ನಿಮ್ಮಿಷ್ಟದಂತೆ ನೀವು ಬರೆಯುವ ಸ್ವಾತಂತ್ರ್ಯ ನಿಮಗೆ ಇದ್ದೇ ಇದೆ.

- Login or register to post comments
- 252 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಕನ್ನಡ ಪದಗಳ ಬಳಕೆಯಲ್ಲಿನ ಮುಜುಗರವನ್ನು ಮೀರೋದು ಹೇಗೆ ?
ಈ ಬರಹದಲ್ಲಿ ಏನು ಮಾತುಕತೆ ಎಂದು ತಿಳಿಯಾಗಿಸಿರಿ...
೧) ಇದು ಕನ್ನಡದ ಒರೆಗಳ ಬಳಕೆಯಲ್ಲಿ ಮಂದಿಗೆ ಇರುವ ಇರುಸುಮುರುಸಿನ ಕುರಿತೋ?
ಮಾದರಿ: ಹೇಲು ಅನ್ನೋದಕ್ಕೆ ಹಿಂಜರಿಕೆ. ಮಲ ಅಂದ ಸಲೀಸಾಗಿ ಹೇಳ್ತಾರೆ.
ಇಲ್ಲವೇ
೨)ಆ ಆ ಜಾಗದ ಕನ್ನಡ ಬಗೆಗಳಿಂದ ಮಾರ್ಪಟ್ಟ/ಬದಲಾದ ಬರೆಬಗೆ/ಪದರೂಪಗಳನ್ನು ಬಳಸುವದರ ಬಗ್ಗೆಯೋ?
ಹೇಳು = ಏಳು = ಯೋಳು = ಹ್ಯಾಳು ಮುಂತಾದವು....!!
ಈ ಯೆರಡು ಸಂಗತಿಗಳೂ ಬೇರೆ ಬೇರೆಯಾಗಿವೆ.
=====================================
ಮಾಯ್ಸ!
ಉ: ಕನ್ನಡ ಪದಗಳ ಬಳಕೆಯಲ್ಲಿನ ಮುಜುಗರವನ್ನು ಮೀರೋದು ಹೇಗೆ ?
ಕನ್ನಡ ಪದಬಳಕೆಗಳಲ್ಲಿನ ಯಾವ ಯಾವ ಮುಜುಗರಗಳ ಬಗ್ಗೆ ಹೇಳಬೇಕು ಎನಿಸುವುದೋ ಅದೆಲ್ಲದರ ಬಗ್ಗೆಯೂ ಬರೆಯಿರಿ.
ಉ: ಕನ್ನಡ ಪದಗಳ ಬಳಕೆಯಲ್ಲಿನ ಮುಜುಗರವನ್ನು ಮೀರೋದು ಹೇಗೆ ?
ಈ ಮಾತುಕತೆಗೆ ನಂಟಾದ, ಬೇರೊಂದು ಎಳೆಯನ್ನು ನೋಡಿರಿ. ಸೂಳೆ ಎಂಬ ಪದದ ಬಳಕೆ ಎಷ್ಟು ಸೂಕ್ತ?