ಕನ್ನಡಕ್ಕೆ ಕೆಲವು ಅಕ್ಷರಗಳು ಬೇಡವೇ?
ಕೆಲವರು ಕನ್ನಡಕ್ಕೆ ಷ, ಱ, ೞ ಮಹಾಪ್ರಾಣಗಳು ಬೇಡವೆನ್ನುತ್ತಾರೆ. ಆದರೆ ಅಚ್ಚ ಸಕ್ಕದ ಪದಗಳನ್ನು ಬೞಸುತ್ತಿದ್ದೇವೆ. ಹಾಗಾಗಿ ’ವಿಷಯ’ ಪದವನ್ನೇ ತೆಗೆದುಕೊಳ್ಳಿ. ಅದನ್ನು ವಿಶಯ ಎಂದು ಬರೆಯುವುದನ್ನು ನಾನೊಪ್ಪುವುದಿಲ್ಲ. ಬೇಕಾದರೆ ಬೆಸಯ ಅಥವಾ ಇಸ್ಯ ಎಂದು ಕನ್ನಡೀಕರಿಸಿ ಹೇೞಿ. ವ್ಯಾಯಾಮಕ್ಕೆ ಯಾಯಾಮ ಎನ್ನಲು ಪರವಾಗಿಲ್ಲ. ವಾಡಿಕೆಗೆ ಆಡಿಕೆ ಎನ್ನಲಾಗದು. ಱ ಮತ್ತು ೞ ತೆನ್ನುಡಿಗಳಿಗೆ ವಿಶೇಷವಾದ ಧ್ವನಿಗಳು. ಇವನ್ನು ಬಿಟ್ಟಾಗ ’ಬಾಳ್’ , ’ಬಾೞ್’ , ಬಾೞೆ, ಬಾಳೆ, ನೆಱೆ, ನೆರೆ, ಬೇಱ್ ಮತ್ತು ಬೇರ್ ಇವುಗಳ ವ್ಯತ್ಯಾಸ ಗೊತ್ತಾಗದೇ ಹೋಗಬಹುದು. ನೀವೊಂದು ಮಾತು ಕೇಳಿರಬಹುದು. ಕನ್ನಡ ಕಸ್ತೂರಿ, ತೆಲುಗು ತೇಟ, ಅರವಮಧ್ವಾನಂ. ಇಲ್ಲಿ ಅರವ ಎಂದರೆ ತಮಿೞ್. ತಮಿೞಿನಲ್ಲಿ ಕಡಿಮೆ ಅಕ್ಷರಗಳಿದ್ದು, ಕೆಲವು ಅಕ್ಷರಗಳಿಗೆ ಬೇಱೆ ಕೆಲವು ಅಕ್ಷರಗಳನ್ನು ಬಳಸಿದಾಗ ಆಗಬಹುದಾದ ಅಚಾತುರ್ಯಗಳಿಗೆ ಜನ ಹೇೞುವ ಗಾದೆ ಮಾತಿದು. ಕನ್ನಡತನ್ನಕ್ಕೆ ಒಗ್ಗಿಸಿಕೊಳ್ಳದೆ ಸಂಸ್ಕೃತ ಮತ್ತು ಇತರ ಭಾಷೆಯ ಶಬ್ದಗಳನ್ನು ಬಳಸುವಾಗ ಯಥಾವತ್ತಾಗೇ ಬಳಸುವುದು ಉತ್ತಮ. ಇಲ್ಲದಿದ್ದರೆ ’ಚಿಂತೆ ಯಾತಕೋ ಮನುಜ ಭ್ರಾಂತಿಯಾತಕೋ’ ಎಂಬ ಮಾತು ’ಚಿಂತೆ ಯಾತಕೋ ಮನುಜ ಭ್ರಾಂದಿಯ ತಗೋ’ ಎಂದು ಅರವೀಕರಿಸಿ ಕಿಲಾಡಿಯೊಬ್ಬ ಹೇೞಿದಂತಾಗಬಹುದು. ಆದ್ದರಿಂದ ಕನ್ನಡೀಕರಿಸದ ಶಬ್ದಗಳನ್ನು ಹಾಗೆಯೇ ಬಳಸುವುದು ಸೂಕ್ತ. ಹೇಗೆ ಈಗಿನ ಯಾವ ವಿದ್ಯಾವಂತರು 'zone' ಎಂಬುದನ್ನು ’ಜ಼ೋನ್’ ಮತ್ತು ’flower' ಎಂಬುದನ್ನು ಫ಼್ಲವರ್ ಎಂದೇ ಹೇೞುವಂತೆ.

- Login or register to post comments
- 283 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಉ: ಕನ್ನಡಕ್ಕೆ ಕೆಲವು ಅಕ್ಷರಗಳು ಬೇಡವೇ?
ಅಕ್ಷರ ಕೀಳೋದರ ಬಗ್ಗೆ ನನ್ನ ಅನಿಸಿಕೆ ಇದು
ಸಾವಿರಾರು ವರ್ಷದಿಂದ ಅನೇಕ ಪ್ರಯೋಗಗಳನ್ನು ಮಾಡಿಕೊಂಡ ಒಂದು ನುಡಿಯ ಲಿಪಿಯಿಂದ ಅಕ್ಷರಗಳನ್ನು ಕೀಳೋದು ನನಗೆ ಸರಿಯೆನಿಸುವುದಿಲ್ಲ. ಹಾಗೂ ಅದೂ ಸಾಧ್ಯವೂ ಇಲ್ಲ. ಹಾಂ!!!! ಬಲಪ್ರಯೋಗದಿಂದ ಆಗಬೇಕಷ್ಟೇ (ಱ,ೞ ವನ್ನು ಕಿತ್ತುಹಾಕಿಸಿದ ಹಾಗೆ). ಈ ಱ,ೞ ವಿಶಯದಲ್ಲಂತೂ ಎದ್ದು ಕಾಣುತ್ತದೆ ಕನ್ನಡದ ಮೇಲೆ ಸಂಸ್ಕೃತ ಪಂಡಿತರು ಮಾಡಿರುವ ಅಪಚಾರ. ಅವರು ಅನುಸರಿಸುವ ಇಬ್ಬಗೆ ನೀತಿ. "ಱ,ೞ" ಕಶ್ಟವಂತೆ, "ಋ, ಷ" ಕಶ್ಟವಲ್ಲವಂತೆ !!!!!
ಹಾಗಾದರೆ, "ವಿಷಯದ" ಬಗ್ಗೆ ನನ್ನ ಅನಿಸಿಕೆ ಏನು ?
೧. ವಿಷಯವನ್ನು "ವಿಶಯ, ವಿಸ್ಯ, ವಿಶ್ಯ" ಅಂತ ಬರೆದವನನ್ನು ಹಳ್ಳಿಗುಗ್ಗು, ಕೀಳು, ಅಸಂಸ್ಕೃತ ಎನ್ನಬೇಡಿ ಅಶ್ಟೇ.
೨. ವಿಷಯವನ್ನು ಕನ್ನಡದಲ್ಲಿ ಬರೆಯಬೇಕಾದಾಗ "ವಿಷಯ" ಎಂತಲೇ ಬರೆಯಬೇಕು ಅಂತ ನಿಯಮ ಹಾಕಬೇಡಿ. ಬೇಕಿದ್ದರೆ, ಸಂಸ್ಕೃತದಲ್ಲಿಯೇ (ಅತವಾ ಸರಿಯಾಗ ಹೇಳಬೇಕಿದ್ದರೆ ದೇವನಾಗರಿಯಲ್ಲಿ) ಬರೆಯಬೇಕಾಗಿ ಬಂದಾಗ, विषय ಅಂತ ಬರೆಯಿರಿ. ಅದು ನಿಮ್ಮ ಇಷ್ಟ. ನನಗೆ "ವಿಷಯ" ಎನ್ನುವಂತಹ ಕಾನ್ಸೆಪ್ಟ್ ಬೇಕು, ಆದರೆ ನನಗೆ ಆ ಕಾನ್ಸೆಪ್ಟ್ ಬೇಕಿದ್ದರೆ ನೀವು ಹೇಳುವ ಹಾಗೆಯೇ ನಾನು ಬರೆಯಬೇಕು ಎಂಬ ನಿಯಮ ಹಾಕಬೇಡಿ. ಅದು ಒಂದು ರೀತಿಯ ದಬ್ಬಾಳಿಕೆ!!!. :ಸೀರಿಯಸ್: ನೀವು ಹೇಳೋದು ಹೇಗೆಂದರೆ, ಕಂಪ್ಯೂಟರ್ ಬಳಸಬೇಕಾದರೆ, ಪಾಶ್ಚಿಮಾತ್ಯರು ಹೇಗೆ ಬಳಸುತ್ತಾರೋ ಹಾಗೆ ನಾನು ಬಳಸಬೇಕು ಎಂದಂತೆ ಆಗುತ್ತದೆ.
ನನಗೆ ಗೊತ್ತು, ಕೆಲವರಿಗೆ ಕಸಿವಿಸಿಯಾಗಬಹುದು, ಕೆಲವರು ಒಪ್ಪದಿರಬಹುದು. ಆದರೆ ನಾನು ಕನ್ನಡವನ್ನು ಬೇರೆಯವರಿಗೆ (ತಮ್ಮಂದಿರಿಗೆ, ಬೇರೆನುಡಿಯವರಿಗೆ) ಹೇಳಿಕೊಡುವಾಗ ಅವರಿಗೆ ಆದ ಕಶ್ಟವನ್ನು ನೋಡಿ ಹೇಳುತ್ತಿರುವುದು. ಒಬ್ಬ ೨ನೇ ತರಗತಿಯವನಿಗೆ "ಅದು ವಿಶಯ ಅಲ್ಲಪ್ಪಾ, ವಿಷಯ ಅಂತ ಬರೀಬೇಕು, ಅದು ಸಂಸ್ಕೃತ, ಇದು ಕನ್ನಡ" ಅಂತ ಚಿಕ್ಕಂದಿನಲ್ಲಿ ಸಿಕ್ಕಾಪಟ್ಟೆ ಕನ್ಫ್ಯೂಸ್ ಮಾಡಿಸದೆ, ಕನ್ನಡದಲ್ಲಿ ಆಸಕ್ತಿ ಹುಟ್ಟಿಸಿ. ಅದು ಬಿಟ್ಟು, "ಶ" ಬರೆದರೆ ೧ ಅಂಕ ಕಟ್ ಆಗತ್ತೆ, "ಷ" ಬರೆಯಬೇಕು ಅನ್ನೋ ಮನಸ್ಥಿತಿ ಇದ್ರೆ, ಒಂದು ಮಗುವಿಗೆ ಈ ಕಡೆ ಕನ್ನಡದ ಮೇಲೆ ಆಸಕ್ತಿಯೂ ಹೋಗತ್ತೆ, ಅಂಕಗಳೂ ಬರಲ್ಲ.
ಹೌದಾ. ನಿಮಗೆ ಸ್ಕೂಟರ್ ಬೇಕಾ. ಹಾಗಾದರೆ, ಚುಕೂಟರ್, ಕೂಟರ್ ಎಂದು ಕನ್ನಡೀಕರಿಸಿ ಹೇೞಿ!!!!
ಉ: ಕನ್ನಡಕ್ಕೆ ಕೆಲವು ಅಕ್ಷರಗಳು ಬೇಡವೇ?
ಸುನಿಲರೆ,
ನೀವು ಹೀಗಂದ್ರಿ:
ಇದು ಕನ್ನಡದ ಮೇಲೆ ಸಂಸ್ಕೃತ ಪಂಡಿತರು(?) ಮಾಡಿದ್ದ ದಬ್ಬಾಳಿಕೆ ಅನ್ನೋದಕ್ಕೆ ಸಾಕ್ಷಿ ಇದೆಯೇ?
ನನಗೆ ತಿಳಿದ ಹಾಗೆ ( ನನ್ನ ತಿಳುವಳಿಕೆ ತಪ್ಪಿರಬಹುದು - ಹಾಗಿದ್ದರೆ, ಅದನ್ನು ಬದಲಾಯಿಸಿಕೊಳ್ಳಲು ನಾನು ತಯಾರು) - ಹರಿಹರ ರಾಘವಾಂಕರೇ ಮೊದಲಿಗೆ ೞ್ ಎಂಬ ಅಕ್ಷರಕ್ಕೂ ಳ್ ಎಂಬಕ್ಷರಕ್ಕೂ ಮಾತಿನಲ್ಲಿ ವ್ಯತ್ಯಾಸ ಉಳಿದಿಲ್ಲ, ಹಾಗಾಗಿ ಎರಡನ್ನೂ ಳ್ ದಿಂದಲೇ ತೋರಿಸಬಹುದು ಎನ್ನುವ ಬದಲಾವಣೆಯನ್ನು ತರುವಲ್ಲಿ ಮುಂದೆ ನಿಂತವರು.
(ಅವರು ಸಂಸ್ಕೃತ ಪಂಡಿತರಾಗಿದ್ದರೋ ಇಲ್ಲವೋ, ಆದರೆ ಹೆಸರಾಂತ ಕನ್ನಡ ಕವಿಗಳು ಅಲ್ಲವೇ?)
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಕನ್ನಡಕ್ಕೆ ಕೆಲವು ಅಕ್ಷರಗಳು ಬೇಡವೇ?
ಹಂಸಾನಂದಿ, ನಾನು ಬೆಂಗಳೂರಿನಲ್ಲಿ ಕೆಲವೊಂದು ಉಪನ್ಯಾಸ ಅಟೆಂಡ್ ಮಾಡ್ತಾ ಇರ್ತೀನಿ. ಉಪನ್ಯಾಸ ಕಾಳಿದಾಸನ ಕಾವ್ಯದ ಮೇಲೆಯೋ, ಹಳಗನ್ನಡದ ಮೇಲೆಯೋ, ಅಲಂಕಾರ ಶಾಸ್ತ್ರ ಹೀಗೆ ಬೇರೆ ಏನೋ ಟಾಪಿಕ್ ಮೇಲೆ ಇರತ್ತೆ. ಆದರೆ ಕೆಲವೊಮ್ಮೆ ಏನಾಗುತ್ತದೆ ಎಂದರೆ, ಮೂಲ ವಿಷಯವನ್ನೇ ಬದಿಗಿಟ್ಟು, ಕನ್ನಡ-ಸಂಸ್ಕೃತ ಅನ್ನೋ ಚರ್ಚೆಯನ್ನು ಉಪನ್ಯಾಸಕಾರರೇ ಶುರುಮಾಡಿಬಿಡ್ತಾರೆ. ಹೀಗಿರತ್ತೆ ಅದರ ಧಾಟಿ, "ಇತ್ತೀಚೆಗೆ ಮೈಸೂರಿನ ಒಬ್ಬರು ಶಂಕರ ಭಟ್ ಅನ್ನೋವ್ರು, ಕನ್ನಡಿಗರಿಗೆ ಋ ಕಷ್ಟ ಆಗಿಬಿಟ್ಟಿದೆ, ಷ ಕಷ್ಟ ಆಗಿಬಿಟ್ಟಿದೆ, ಅದು ಕನ್ನಡವೇ ಅಲ್ಲ, ಅದು ಸಂಸ್ಕೃತ, ಅದನ್ನು ತೆಗೆದುಬಿಡಿ ಅಂತ ಬೊಬ್ಬೆ ಹಾಕ್ತಾ ಇದ್ದಾರೆ. ಅಕ್ಷರಗಳ ಬದಲಾವಣೆ ಏನು ಹೊಸತಲ್ಲ. ಹಿಂದೆ ಹರಿಹರ ರಾಘವಾಂಕರು ಕೂಡ ತಮ್ಮ ಕಾವ್ಯದ ಮೂಲಕ ರಳ, ಕುಳಗಳನ್ನು ಒಂದಾಗಿಸಿದ್ದಾರೆ. ಅದಕ್ಕೆ ಒಂದು ಘನತೆಯಿದೆ. ಆದರೆ ಈ ಶಂಕರ ಭಟ್ಟರಂತ ಕೂಚುಭಟ್ಟರು, ಋ ಬೇಡ, ಷ ಬೇಡ ಅಂದ್ರೆ, ಕನ್ನಡದ ಎಷ್ಟೋ ಕಾವ್ಯಗಳನ್ನ ಸುಡಬೇಕಷ್ಟೇ. ಕನ್ನಡಿಗರೇನು ಎರಡು ಅಕ್ಷರ ಕಲಿಯಲಾರದಷ್ಟು ದಡ್ಡರೇ. ಆ ಶಂಕರಭಟ್ ಹೆಸರನ್ನು ಚಂಕರಪಟ್ಟ ಅಂತ ಬರೀಬೇಕು" ಹಾಗೆ ಹೀಗೆ ಅಂತೆಲ್ಲ ಹೇಳಿ ಉಪನ್ಯಾಸ ಕೇಳುತ್ತಿರುವವರನ್ನು ತಪ್ಪು ದಾರಿಗೆ ತಳ್ತಾ ಇರ್ತಾರೆ. ಈ ರೀತಿಯ ಮಾತನ್ನು ಬೇರೆ ಬೇರೆ ಉಪನ್ಯಾಸಗಳಲ್ಲಿ, ನಾಲ್ಕು ಬಾರಿ ಡೈರೆಕ್ಟಾಗಿ ಕೇಳಿದ್ದೀನಿ. ಹೀಗೆ ಸೂಕ್ತವಲ್ಲದ ವೇದಿಕೆಯಲ್ಲಿ ಈ ರೀತಿ ಹೇಳೋದು "ಕೀಳುಮಟ್ಟದ ಡಬಲ್ ಸ್ಟಾಂಡರ್ಡ್" ಅಂತ ನನಗೆ ಅನ್ನಿಸತ್ತೆ. ಅದಕ್ಕೆ ಆ ಮೇಲಿನ ರೀತಿಯ ಅಭಿಪ್ರಾಯ ನನ್ನಲ್ಲಿರುವುದು.
ಹರಿಹರ ರಾಘವಾಂಕರು ಹಿಂದೆ ಳ, ೞಗಳನ್ನು ಒಂದಾಗಿಸಿದರು ಅಂತಿಟ್ಟುಕೊಳ್ಳೋಣ. ಅದೇ ಈಗ "ಋ" ಮತ್ತು "ರು" ಬಗ್ಗೆ ತಲೆಕೆಡಿಸಿಕೊಳ್ಳೋದು ಬೇಡ ಅಂದ್ರೆ ಬಿಡ್ತಾರಾ. ಈಗ್ಗೆ ಮೂರು-ನಾಲ್ಕು ವರ್ಷದ ಹಿಂದೆ ಎಂ.ಎಸ್.ಕೃಷ್ಣ ಸರ್ಕಾರ ಇದ್ದಾಗ ಎಷ್ಟೆಲ್ಲ ಗಲಾಟೆ ಆಯ್ತು ಗೊತ್ತಾ. ಭಾವುಕವಾಗಿ ಹರಿಹರ ರಾಘವಾಂಕರಿಗೆ ಭೇಷಗಿರಿ ಕೊಡಬಹುದು, ಆದರೆ ಅವರು ಹಾಕಿಕೊಟ್ಟ ಪಂಕ್ತಿಯನ್ನು ಈ ಕಾಲಕ್ಕೆ ತಕ್ಕಂತೆ ಅನುಸರಿಸಲು ಹೋದರೆ, ಅಸಂಸ್ಕೃತ, ಸಂಸ್ಕೃತವಿರೋಧಿ, ಸಂಸ್ಕೃತಿಯ ಅವಹೇಳನಕಾರಿ, ಹಳ್ಳಿಗೌಡ...ಇನ್ನೂ ಏನೇನೋ ಅಹಂಕಾರದ ತುಂಬಿದ ಕೆಟ್ಟ ಬಯ್ಗುಳಗಳಿಂದ ದೊಡ್ಡವರೆನಿಸಿಕೊಂಡವರಿಂದ ಬಯ್ಸಿಕೊಳ್ಳಬೇಕಾಗುತ್ತದೆ. ಹೊಸ ಹೊಸ ಜ್ಞಾನವನ್ನು ಸಂಪಾದಿಸದಿದ್ದರೂ ಪರವಾಗಿಲ್ಲ, ಕನ್ನಡಿಗರು ಋ, ಷಗಳನ್ನು ಸರಿಯಾಗಿ ಉಚ್ಚರಿಸಲೇಬೇಕು!!!!!
ಉ: ಕನ್ನಡಕ್ಕೆ ಕೆಲವು ಅಕ್ಷರಗಳು ಬೇಡವೇ?
ಇದು ಸಾರ್ವತ್ರಿಕವಾಗಬೇಕಿಲ್ಲ. ನೀವು ಒಮ್ಮೆ ಉರ್ದು ಫಾರ್ಸಿ ಭಾಷೆಯ ಶಬ್ದಗಳ ಬಗ್ಗೆ ಗಮನ ಹರಿಸಿ. ನೀವು "ಖುರ್ಸಿ" ಅಂತೀರೋ ಅತ್ವಾ "ಕುರ್ಚಿ" ಅಂತೀರೋ ?
ಉ: ಕನ್ನಡಕ್ಕೆ ಕೆಲವು ಅಕ್ಷರಗಳು ಬೇಡವೇ?
’ಶ’ಕಾರ ’ಷ’ ಕಾರದ ಬಗ್ಗೆ ಭಾಷಾತಜ್ಞ ಡಾ. ಕೆ ವಿ ನಾರಾಯಣರು ಏನು ಹೇಳುತ್ತಾರೆ, ನೋಡುತ್ತೀರಾ?
ಹಾಗಿದ್ದೆ ಇಲ್ಲಿ ಚಿಟುಕಿಸಿ.
http://www.prajavani.net/Content/Jul62008/weekly2008070586809.asp
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಕನ್ನಡಕ್ಕೆ ಕೆಲವು ಅಕ್ಷರಗಳು ಬೇಡವೇ?
ಏನೇ ವಾದ ಮಾಡಿದರೂ ನಮಗೆಲ್ಲರಿಗೂ z, f, ಱ, ೞ, ಶ, ಷ ಉಚ್ಚರಿಸಲು ಕಷ್ಟವೇನಿಲ್ಲ.