ಛಂದಸ್ಸು ಪ್ರಾಸ ಬೇಡವೇ?
ಪದ್ಯಗಳು ಹಾಡುವಂತಿರಬೇಕು. ಅಲ್ಲಿ ಆದಿಪ್ರಾಸವೋ, ಅಂತ್ಯಪ್ರಾಸವೋ ಅಥವಾ ಅನುಪ್ರಾಸವೋ ಅಥವಾ ಇವೆಲ್ಲವೂ ಇದ್ದು ಅದೊಂದು ಚೌಕಟ್ಟಿನಲ್ಲಿದ್ದರೆ (ಛಂದಸ್ಸು) ಹಾಡಲು ಸರಾಗ. ಸಂಗೀತಕ್ಕಳವಡಿಸಲು ಸುಲಭ. ಹಾಗಾಗಿ ಕನ್ನಡದಲ್ಲಿ ಅಕ್ಷರವೃತ್ತ, ಮಾತ್ರಾವೃತ್ತ ಹಾಗೂ ಅಂಶಗಣಗಳಿಂದ ಕೂಡಿದ ಸಾಂಗತ್ಯ ಹಾಗೂ ಪಿರಿಯಕ್ಕರವಿವೆ. ಹಾಗಂತ ನಾನೇನೂ ಈ ಇರುವ ಚೌಕಟ್ಟನ್ನೇ ಬಳಸಿ ಎನ್ನುವುದಿಲ್ಲ. ಡಿ.ವಿ.ಜಿ. ತೆಱ ತಮ್ಮದೇ ಆದ ಚೌಕಟ್ಟು (ಛಂದಸ್ಸು) ಬಳಸಿ. ಪ್ರಾಸವಂತೂ ಬೇಕೇ ಬೇಕು. ನಿಯಮಿತವಾಗಿ ಪದ್ಯದ ಸಾಲುಗಳು ಕೊನೆಗೊಳ್ಳಬೇಕು. ಇದಱ ಅವಶ್ಯಕತೆ ಪದ್ಯಕ್ಕಿದೆ. ಇಲ್ಲದಿದ್ದರೆ ಅದು ಗದ್ಯವಷ್ಟೆ. ಪದ್ಯವೆಂದರೆ ಸರಾಗವಾದ ಓಟವಿರುವ ಸಾಹಿತ್ಯವೆಂದೇ ಅರ್ಥ. ಇದು ನನ್ನನಿಸಿಕೆ. ನಿಮ್ಮನಿಸಿಕೆಗಳನ್ನು ತಿಳಿಸಿ.

- Login or register to post comments
- 261 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಛಂದಸ್ಸು ಪ್ರಾಸ ಬೇಡವೇ?
ಕನ್ನಡಕಂದರೆ, ಒಳ್ಳೆಯ ಚರ್ಚೆ ಮುಂದು ಮಾಡಿದ್ದೀರಿ. ಇಲ್ಲಿ ಯಾವ ಸಂಗೀತ ಯಾವ ಬಗೆಯದ್ದು ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಶಾಸ್ತ್ರೀಯವಾದರೆ ಪದ್ಯಗಳಿಗೆ ಚೌಕಟ್ಟು, ಪ್ರಾಸ, ಮಾತ್ರೆ ಇವುಗಳು ಇದ್ದರೆ ಸಂಗೀತಕ್ಕೆ ಚೆನ್ನಾಗಿ ಅಳವಡಿಸಬಹುದು.
ಆದರೆ, ಈ ಕಡೆ ಶಾಸ್ತ್ರೀಯವೂ ಅಲ್ಲದ, ಆ ಕಡೆ ಜನಪದವೂ ಅಲ್ಲದ ಬೇರೆಬಗೆಯ ಸಂಗೀತವೂ ಇಷ್ಟವಾಗುತ್ತದೆ. ಇವುಗಳಿಗೆ ಪ್ರಾಸಗಳು, ಚೌಕಟ್ಟು, ಮಾತ್ರೆಗಳು ಯಾವುದೂ ಬೇಕಾಗುವುದಿಲ್ಲ.
ಆದರೆ ಹೆಚ್ಚಿನ ಸಂಗೀತದಲ್ಲಿ, ಬೇರೆ ಯಾವುದು ಇಲ್ಲದಿದ್ದರೂ, ಪ್ರಾಸಗಳು ಮಾತ್ರ ಇದ್ದೇ ಇರುತ್ತದೆ.
ಉದಾ: ಇತ್ತೀಚೆಗೆ ಬಿಡುಗಡೆಯಾದ, ಗೆಳೆಯ ಸಿನಿಮಾದ ಚಾಂಗು ಭಳಾ ಚಾಂಗು ಭಳಾ ಚಾಂಗುರೆ. ಇಲ್ಲಿ ಛಂದಸ್ಸು ಇಲ್ಲದಿದ್ದರೂ ಪ್ರಾಸವಿದೆ.
ಉ: ಛಂದಸ್ಸು ಪ್ರಾಸ ಬೇಡವೇ?
ಈ ಸಿನಿಮಾ ಗೀತೆಗಳಲ್ಲೂ ಅಂಶಗಣವಿರಬಹುದೇನೋ. ಒಟ್ಟು ಸರಿಸುಮಾರು ಇಷ್ಟೆ ಮಾತ್ರೆಗಳೂ ಇರಬಹುದು. ಆ ಛಂದಸ್ಸಿಗೆ ಹೆಸರಿಡದಿರಬಹುದು. ಇದು ನನ್ನ ಅಭಿಪ್ರಾಯ. ದಾಸರ ಪದಗಳನ್ನೇ ತೆಗೆದುಕೊಳ್ಳಿ. ಅಲ್ಲಿ ಯಾವುದೇ ಛಂದಸ್ಸಿನ ಹೆಸರಿರದಿದ್ದರೂ ನಿಯಮಿತವಾಗಿ ಪದ್ಯಗಳ ಸಾಲುಗಳು ಕೊನೆಗೊಳ್ಳುತ್ತವೆ. ಎಲ್ಲಾ ದಾಸರ ಪದಗಳಲ್ಲಿ ಪ್ರಾಸವನ್ನು ಮೀಱಿರುವುದು ತೀರಾ ಕಡಿಮೆಯೇ.
ಉ: ಛಂದಸ್ಸು ಪ್ರಾಸ ಬೇಡವೇ?
ಈ ನಡುವೆ ಬರುತ್ತಿರುವ ಕನ್ನಡ ಹಾಡುಗಳನ್ನು ಸರಿಯಾದ ಅಧ್ಯಯನ ಮಾಡಿ, ನೀವು ಅವುಗಳಿಗೆ ಛಂದಸ್ಸಿನ ರೂಪ ನೀಡಿದರೆ ತುಂಬಾ ಒಳ್ಳೆಯ ಕೆಲಸ.
ದಾಸರ ಪದಗಳ ಬಗ್ಗೆ - www.haridasa.in ನಲ್ಲಿ, ಕನಕದಾಸರ ಕೆಲವೊಂದು ಪದಗಳನ್ನು ಏರಿಸುತ್ತಿದ್ದೇನೆ.
ಆರು ಬದುಕಿದರಯ್ಯಾ
ನಮ್ಮಮ್ಮ ಶಾರದೆ
ವರವ ಕೊಡು ಎನಗೆ ವಾಗ್ದೇವಿ
ದಾಸದಾಸರ ಮನೆಯ ದಾಸಿಯರ ಮಗ ನಾನು
ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ
ನಾನು ನೋಡಿದ ಎಲ್ಲ ಪದಗಳಲ್ಲಿಯೂ ಈ ಯಮಕ ಪ್ರಾಸವಿದೆ.
ಉ: ಛಂದಸ್ಸು ಪ್ರಾಸ ಬೇಡವೇ?
ಪಲ್ಲವಿ ಅನುಪಲ್ಲವಿ ಬಿಟ್ಟರೆ ಉೞಿದ ಚರಣಗಳಲ್ಲಿ ಪ್ರತಿಪಾದದಲ್ಲಿ ಕ್ರಮವಾಗಿ ೨೦, ೧೬(೧೭), ೨೦, ೧೮(೧೯) ಮಾತ್ರೆಗಳು ಕಾಣಬರುತ್ತವೆ. ಇದಕ್ಕೆ ಅಂಶಗಣಗಳನ್ನು ಮಾನ್ಯ ಬೆನಕರವರು ಜೋಡಿಸಿದರೆ ಈ ಎಲ್ಲಾ ಸರಿಸುಮಾರು ಲೆಕ್ಕಾಚಾರಗಳು ಸರಿಯಾಗುತ್ತವೆ. ಒಟ್ಟಿನಲ್ಲಿ ಇಲ್ಲೂ ಛಂದಸ್ಸನ್ನು ಅಳವಡಿಸಿಕೊಂಡಿರುವುದು ಕಾಣುತ್ತದೆ. ಈ ಕೆೞಗಿನ ಚರಣದಲ್ಲಿ ಮೊದಲ ಪಾದದಲ್ಲಿ ಕೈಯ ಶಬ್ದ ಬಿಟ್ಟರೆ ಮೇಲಿನ ಛಂದೋನಿಯಮ ಮೀಱಿದಂತಾಗುವುದಿಲ್ಲ. ಮಾನ್ಯ ಬೆನಕರವರು ಅಂಶಗಣಗಳನ್ನು ಅಳವಡಿಸಿದರೆ ಆ ಪದವನ್ನು ಇಟ್ಟುಕೊಳ್ಳಬಹುದೇನೋ?
ತಿರಿದುಂಬ ದಾಸರ(ಕೈಯ) ಕಪ್ಪವ ಕಟ್ಟಿಸಿಕೊಂಡೆ
ತಿರುಮಲಾಚಾರ್ಯ ಶ್ರೀ ಗುರುವೇ ಬಲ್ಲ
ವರ ಕಾಗಿನೆಲೆಯಾದಿ ಕೇಶವನ ಭಜಿಸಿದರೆ
ತಿರಿವೆನೆಂದರೆ ತಿರುಪೆಕೊಳ್ಪುಟ್ಟದೈ ಕೃಷ್ಣ||
ಉ: ಛಂದಸ್ಸು ಪ್ರಾಸ ಬೇಡವೇ?
ಗೆಳೆಯರೆ,
ಮೂಲ ಕವಿಯ ಆಶಯವೇನೋ ಗೊತ್ತಿಲ್ಲ; ಅಂಶಗಣಗಳನ್ನು ಇದಕ್ಕೆ ಅಳವಡಿಸಲು ಆಗುವುದೋ ಇಲ್ಲವೋ ತಿಳಿಯದು!
ಏಕೆಂದರೆ, ಕನ್ನಡದ ಮಟ್ಟಿಗೆ ಅಂಶಗಣಗಳು ವಿಶೇಷವೇ ಆದರೂ, ಸ್ವತಂತ್ರವಾಗಲ್ಲದೆ ಸಂಸ್ಕೃತದ ಅಕ್ಷರಗಣಗಳ ಜೊತೆಯಲ್ಲಿ
ಹದವಾಗಿ ಬೆರೆತು ಬಳಸಲ್ಪಡುತ್ತವೆ. ಉದಾಹರಣೆಗೆ ಬ್ರಹ್ಮಗಣವಾದ ಲಲಲ,ಲಲಗು,ಗುಗು,ಗುಲ ಗಳು ಸ್ವಯಂ-ಸಿದ್ಧವಾದರೂ
ಅಕ್ಕರಗಣದೊಡಗೂಡಿ, ಸ-ಲ, ನ-ಗು, ಯ-ಲ ಇತ್ಯಾದಿ ಎಂದು ಬಳಸಲ್ಪಡುವುವೆಂದು ತೋರುತ್ತದೆ.
ಅಂದಹಾಗೆ ಕನ್ನಡಕಂದರು ಕೇಳಿದ್ದ ಸಾಂಗತ್ಯ ಹಾಗೂ ಪಿರಿಯಕ್ಕರದ ಬಗ್ಗೆ ಅಷ್ಟೇನೂ ನನಗೆ ತಿಳಿದು ಬರಲಿಲ್ಲ ಎನ್ನಲು ವಿಷಾದಿಸುತ್ತೇನೆ.
ಸಾಂಗತ್ಯ ಎಂದರೆ ’ಸಂಗತಿ’ ಸಹಿತವಾಗಿ ಹಾಡಲ್ಪಡುವ ಪದ್ಯರೂಪ; ವಾದ್ಯಸಹಿತವಾಗಿ ಹಾಡುವ ಹಾಡುಗಬ್ಬ ಎಂದಷ್ಟೇ ತಿಳಿದುಬಂದದ್ದು.
ಪಿರಿಯಕ್ಕರ ಎಂಬ ಛಂದೋಪ್ರಕಾರದ ಬಗ್ಗೆ ನನ್ನ ಬಳಿ ಈಗ ಯಾವ ಮಾಹಿತಿಯೂ ಇಲ್ಲ. ತಿಳಿದವರು ತಿಳಿಸಿದರೆ ಉಪಕಾರವಾದೀತು.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಛಂದಸ್ಸು ಪ್ರಾಸ ಬೇಡವೇ?
"ನಮ್ಮಮ್ಮ ಶಾರದೆ" ಸರಿ ಸುಮಾರು ಸಾಂಗತ್ಯದಲ್ಲಿದೆ.
ಉ: ಛಂದಸ್ಸು ಪ್ರಾಸ ಬೇಡವೇ?
ನನ್ನ ತಾಯಿ ಸಾಂಗತ್ಯ ದಲ್ಲಿರುವ ರಚನೆಗಳನ್ನು ಹಾಡಿರುವುದನ್ನು ಕೇಳಿರುವೆ - ನೆನಪಾಗುತ್ತಿಲ್ಲ; ಭರತೇಶ ವೈಭವ ಸಾಂಗತ್ಯದಲ್ಲಿದೆ ಎನ್ನಿಸುತ್ತೆ ; ಸುನಿಲ್, ಅಥವ ವೈಭವ ಅವರು ಸರಿಯಾಗಿ ತಿಳಿಸಬಲ್ಲರು.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಛಂದಸ್ಸು ಪ್ರಾಸ ಬೇಡವೇ?
ಕಾಸು ಕೊಡುವೊಡಂ
ಪ್ರಾಸಮಂ ಬಿಡೆಂ
ಪ್ರಾಸಕ್ಕೆ ದಂಡಮೆಂದೊಡಂ
ಏಸು ಜನುಮದೊಳಂ
ಲೇಸಾಗಿ ಸಹಿಪೆಂ.
ಪದ್ಯದೊಳಾಱದೊಡೆ
ಗದ್ಯದೊಳ್ ಪೇೞ್ವೆಂ
ಮದ್ಯಮಂ ಕುಡಿಸಿದೊಡಂ
ಪದ್ಯನಿಯಮಮನಾ ಮೀಱೆಂ.
ಉ: ಛಂದಸ್ಸು ಪ್ರಾಸ ಬೇಡವೇ?
ತಾಳದಲಿ ಮೇಳದಲಿ ಸುಶ್ರಾವ್ಯಮಪ್ಪಂತೆ
ಗಾಳಿ ತಾ ಬೀಸುವಂದದಿ
ಬೀೞುಗಳೆಯದೆ ಪ್ರಾಸವನು ಛಂದವನು ನೀ
ಹೇೞೆಂದ ಕನ್ನಡಕಂದ
ಬೀಸುವ ಮೆಲ್ಗಾಳಿಯಂದದಲಿ ಸುಲಭದಲಿ
ತಾಸುಗಟ್ಟಲೆ ಹಾಡಲು
ಪ್ರಾಸದಲಿ ಛಂದದಲಿ ಕವಿತೆಯನೊರೆಯೆಂದು
ಶಾಸಿಸಿದನು ಕನ್ನಡಕಂದ
ಉ: ಛಂದಸ್ಸು ಪ್ರಾಸ ಬೇಡವೇ?
ಪ್ರಾಸವನು ಹಾಡುವೊಡೆ ನೀನೆನಿತು ಬಿಡಬೇಡ
ತ್ರಾಸಹುದು ಕಾವ್ಯದೋಟಕ್ಕೆ
ಲೇಸಾಗಿ ಸಂಗೀತಮಿಳಿತವಪ್ಪಂತೆ
ಬೀಸೊಂದು ಕವನವೆಮ್ಮೆಡೆಗೆ
ಉ: ಛಂದಸ್ಸು ಪ್ರಾಸ ಬೇಡವೇ?
ಬಹಳ ಚೆನ್ನಾಗಿವೆ ಕನ್ನಡಕಂದರೆ!
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಛಂದಸ್ಸು ಪ್ರಾಸ ಬೇಡವೇ?
ಪ್ರಾಸ ಬಿಟ್ಟು ಪದ್ಯ ಬರೆಯಲು ಮನ ಬಾರದು. ಇದಕ್ಕೆ ನೀವೇನಂತೀರಾ?