ಬೆಂಗಳೂರಿನ 'ಉದಯಭಾನು ಕಲಾಸಂಘ' (ನೋಂ ) ಪ್ರೊ. ಶ್ರೀ ರಾಮಕೃಷ್ಣರಾಯರನ್ನು ಸನ್ಮಾನಿಸಿತು !

'ಬೆಂಗಳೂರು ದರ್ಶನ'ದ ಎರಡು ಸಂಪುಟಗಳ ಪ್ರತಿಗಳನ್ನು ನೋಡಿದವರು ಇದರ ಪ್ರಕಾಶಕರು ಯಾರು ? ಎಂದು ಹುಬ್ಬೇರಿಸಿ ಕೇಳದಿದ್ದರೆ, ಅವರು ನಿಜವಾದ ಗುಣಗ್ರಾಹಿ ಓದುಗರಲ್ಲವೆನ್ನುವುದು ನಿಮಿಷಾರ್ಧದಲ್ಲಿ ತಿಳಿದುಹೋಗುತ್ತದೆ ! ಇದನ್ನು ಓದಿದವರಿಗೆ 'ವಿಶ್ವಕೋಶ'ವನ್ನು ಓದಿದ ಅನುಭವವಾಗುತ್ತದೆ. ಬೆಂಗಳೂರು ನಗರ ಬೆಳೆದ ಬಗೆಯನ್ನು, ಅದರ ಬಹುಮುಖ ಸಾಧನೆಗಳನ್ನು ಮತ್ತು ವಿವರಗಳನ್ನು ಅತ್ಯಂತ ಸಮರ್ಥವಾಗಿ ಖಚಿತವಾಗಿ ಅದ್ಭುತವಾಗಿ ದಾಖಲಿಸಿರುವುದೇ ಇದರ ವಿಶಿಷ್ಟತೆಗಳಲ್ಲೊಂದು ! ಇದರ ಪ್ರಧಾನ ಸಂಪಾದಕರು, ಡಾ. ಶ್ರೀ ಎಲ್. ಎಸ್. ಶೇಷಗಿರಿರಾಯರು.
ಹೌದು. ಅದರ ಪ್ರಕಾಶಕರು " ಉದಯಭಾನು ಕಲಾವಿದರ ಸಂಘ, ಬೆಂಗಳೂರು. ಇಷ್ಟೇ ಅಲ್ಲ. ಈ ಕಲಾಸಂಘದ ವ್ಯಾಪ್ತಿ, ಉದ್ದಗಲ, ಆಳಗಳನ್ನು ಬರೆಯಲು ಹಲವು ಪುಟಗಳೇ ಬೇಕಾಗುತ್ತವೆ. ಈ ಜನೋಪಕಾರಿ ಸಮಾಜಸೇವಾ ಮನೋಭಾವದ ಸಂಘ ಅಸ್ತಿತ್ವಕ್ಕೆ ಬಂದದ್ದು, ೧೨-೦೬-೧೯೬೫ ರಲ್ಲಿ. ಸಾರ್ವಜನಿಕ, ಗಣೇಶೋತ್ಸವ ಮತ್ತು ಅದರ ಜೊತೆಗೆ ಹೊಂದಿಕೊಂಡ ಉಚಿತ ವಾಚನಾಲಯವನ್ನು ಉದ್ಘಾಟಿಸಿದವರು ಶ್ರೀ. ದಾಶರಥಿ ದೀಕ್ಷಿತ್ ರವರು. ಆ ದಿನದ ಸಮಾರಂಭದ ಅಧ್ಯಕ್ಷರು ಶ್ರಿ. ನಾಡಿಗೇರ ಕೃಷ್ಣರಾಯರು. ಗಣೇಶೊತ್ಸವದಿಂದ ಪ್ರಾರಂಭವಾಗಿ ಕಳೆದ ೪ ದಶಕಗಳಿಂದ ಸಮಾಜದ ಸೇವೆಯೇ ಮೂಲ ಉದ್ದ್ಯೇಶವೆಂದು ಪರಿಗಣಿಸಿ ಕಳಕಳಿಯಿಂದ ದುಡಿಯುತ್ತಿರುವ ಬೆಂಗಳೂರಿನ ಸಂಸ್ಥೆಗಳಲ್ಲಿ ಉದಯಭಾನು ಕಲಾಸಂಘವೂ ಒಂದು ! ಇದರ ವ್ಯಾಪ್ತಿ ವಿದ್ಯಾಭಿವೃದ್ಧಿ, ವೈದ್ಯಕೀಯ- ನಾಗರಿಕ ಸಾಮಾಜಿಕ ನಗರ ಕಲ್ಯಾಣ, ಕ್ರೀಡೆಗಳಿಗೆ ಪ್ರೊತ್ಸಾಹ, ಪುಸ್ತಕ ಭಂಡಾರ ಉಚಿತ ವಚನಾಲಯ, ಪರಿಸರ ಸಂರಕ್ಷಣೆ, ಸಾಂಸ್ಕೃತಿಕ ಭವನದ ನಿರ್ಮಾಣ ಕಾರ್ಯ, ಆರೊಗ್ಯ ಸೇವೆ, ಇತ್ಯಾದಿ.
ಬೆಂಗಳೂರಿನ ಕೆಂಪೇಗೌಡ ನಗರದಲ್ಲಿ, ರಾಮಕೃಷ್ಣ ಬಡಾವಣೆಯಲ್ಲಿರುವ, 'ಉದಯ ಭಾನು ಕಲಾಸಂಘ ' [ನೋಂ.] ಸಮಾಜಸೇವೆಯನ್ನು ನಿರಂತರವಾಗಿ ೪೦ ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ. ಈ ಸಂಸ್ಥೆಯ ಈಗಿನ ಅಧ್ಯಕ್ಷರು, ಶ್ರೀ ಎನ್. ಆರ್. ಚಂದ್ರನ್ ಮತ್ತು ಸಂಸ್ಥಾಪಕ ಗೌ.ಕಾರ್ಯದರ್ಶಿಗಳು, ಎಂ.ನರಸಿಂಹರವರುಗಳು. ಬೆಂಗಳೂರು ನಗರದ ಸರ್ವತೊಮುಖ ಬೆಳವಣಿಗೆಯನ್ನು ದಾಖಲಿಸುವುದರ ಜೊತೆಗೆ, ನಗರದ ಸಾಂಸ್ಕೃತಿ ಸಾಹಿತ್ಯಗಳನ್ನು, ಸಮಾಜಸೇವೆಗಳನ್ನು ಗುರುತಿಸುವ, ಪ್ರೊತ್ಸಾಹಿಸುವ, ಗುರುತರ ಜವಾಬ್ದಾರಿಯನ್ನು ಸಂಘ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಅದರಲ್ಲಿ ಪ್ರಮುಖವಾದದ್ದು, ಭೌತಶಾಸ್ತ್ರದ ಪ್ರೊ. ಶ್ರೀ ರಾಮಕೃಷ್ಣರಾಯರನ್ನು "ಉದಯಭಾನು ವಿದ್ಯಾರತ್ನ" ರೆಂದು ಗುರುತಿಸಿ ಸನ್ಮಾನಿಸಿದ್ದು ! ವಿಜ್ಞಾನ ಕ್ಷೇತ್ರದ ಪ್ರಾಮಾಣಿಕ ಪರಿಚಾಲಕ, ಪ್ರಾಮಾಣಿಕ ಕಳಕಳಿಯ ಚಿಂತಕರೂ ಭೌತ ವಿಜ್ಞಾನದ ಪ್ರಾಧ್ಯಾಪಕರು ಆದ ಪ್ರೊ. ಶ್ರೀ ರಾಮಕೃಷ್ಣರಾಯರಿಗೆ 'ಉದಯ ಭಾನು ವಿದ್ಯಾರತ್ನ ಅಭಿನಂದನಾ ಪತ್ರ' ದಿಂದ ದಂಪತಿಗಳನ್ನು, ಅವರ 'ಅಮೃತೋತ್ಸವ ಸಮಾರಂಭ'ದಂದು ಗೌರವಿಸಿದ್ದು ನಿಜವಾಗಿಯೂ ಸ್ಮರಣೀಯವಾದ ಘಟನೆ !
ಶ್ರೀ. ರಾಮಕೃಷ್ಣರಾಯರು, ಹೊಳಲ್ಕೆರೆ ಜಿಲ್ಲೆಯ ಚೀರನಹಳ್ಳಿ, ಮತ್ತು ಕುಡಿನೀರಕಟ್ಟೆ ಗ್ರಾಮಗಳ ಶ್ಯಾನುಭೋಗರಾಗಿದ್ದ, ಸುಂಕದ ವಂಶದ, ಶ್ರೀ. ಎಚ್. ವಿ. ರಂಗರಾಯರ ಪುತ್ರರು. ತಾಯಿ, ಮಹಾಸಾಧ್ವಿ ರಾಧಮ್ಮನವರು. ಜನನ ೩೦ ಮೇ ೧೯೩೫ ರಲ್ಲಿ. ಸೆಕೆಂಡರಿ ಶಿಕ್ಷಣ, ಊರಿನಲ್ಲಿ ನಡೆಯಿತು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಇಂಟರ್ಮೀಡಿಯೇಟ್ ಪಾಸ್ ಮಾಡಿ, ಸೆಂಟ್ರಲ್ ಕಾಲೇಜಿನಲ್ಲಿ B.Sc; M.Sc; ಪದವಿಗಳನ್ನು ಪಡೆದರು. ನ್ಯಾಷನಲ್ ಕಾಲೇಜಿನಲ್ಲಿದ್ದಾಗ ಡಾ.ಎಚ್ .ಎನ್ ಅವರಿಂದ ಪ್ರಭಾವಿತರಾದರೆ, ಸೆಂಟ್ರೆಲ್ ಕಾಲೇಜಿನಲ್ಲಿ ಪ್ರೊ.ರಾಜರತ್ನಂ, ಪ್ರೊ. ವೀ.ಸೀ , ಅವರ ಮೇಲೆ ಗಾಢವಾದ ಪರಿಣಾಮ ಬೀರಿದರಂತೆ !
ಸೆಂಟ್ರಲ್ ಕಾಲೇಜ್ ಕರ್ಣಾಟಕಸಂಘದ ಸೆಕ್ರೆಟರಿಯಾಗಿ, ಆಯ್ಕೆಯಾದರು. ಸೆಂಟ್ರಲ್ ಕಾಲೇಜಿನ ಸಾಂಸ್ಕೃತಿಕ ಪರಿಸರ, ರಾಮಕೃಷ್ಣರಾಯರಿಗೆ ಕನ್ನಡದ ಮೇಲಿನ ಆಸಕ್ತಿ ಪ್ರೀತಿಗಳ "ಮೊಳಕೆ ಒಡೆದ ತಾಣ" ವೆಂದು ರಾಯರು ಯಾವಾಗಲೂ ಸ್ಮರಿಸಿಕೊಳ್ಳುತ್ತಾರೆ.
ವಿದ್ಯಾಭ್ಯಾಸದ ತರುವಾಯ ಅವರು ಪಾದಾರ್ಪಣೆ ಮಾಡಿದ್ದು, ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ; ಉಪಾಧ್ಯಾಯರಾಗಿ ಸೇರಿದ ಅವರು ಭೌತಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗಗಳ ಮುಖ್ಯಸ್ಥರಾಗಿ ಕೆಲಸಮಾಡಿ ಅತ್ಯಂತ ಪ್ರಭಾವೀ ಶಿಕ್ಷಕರೆಂದು ಹೆಸರು ಪಡೆದರು. ಪ್ರೊ. ರಾಜು, ಪ್ರೊ. ರಾಘವೇಂದ್ರರಾಯರು ಮತ್ತು ಇತರರೊಡಗೂಡಿ, "ಕ್ರೈಸ್ಟ್ ಕಾಲೇಜ್ ಕನ್ನಡ ಸಂಘ" ವನ್ನು ಹುಟ್ಟುಹಾಕುವಲ್ಲಿ ಮುಖ್ಯರಾದರು. ಇಂದಿಗೆ ಕ್ರೈಸ್ಟ್ ಕಾಲೇಜ್ ಕನ್ನಡ ಸಂಘ, ೧೦೦ ಕ್ಕು ಹೆಚ್ಚು ಕನ್ನಡ ಪುಸ್ತಕಗಳನ್ನು ಪ್ರಕಟಿಸಿ ಮಂಚೂಣಿಯಲ್ಲಿದೆ. ವಿಜ್ಞಾನವನ್ನು ಜನಪ್ರಿಯ ಮಾಡಲು ಅವರು ಪಟ್ಟ ಶ್ರಮ ಸ್ತುತ್ಯಾರ್ಹ !
ಕಾಲೇಜ್ ನೌಕರಿಯಿಂದ ನಿವೃತ್ತರಾದ ಮೇಲೂ ವೈಜ್ಞಾನಿಕ ಪ್ರವೃತ್ತಿಯನ್ನು ಬೆಳೆಸಿಕೊಂಡೇ ಬಂದರು. ಬೆಂಗಳೂರಿನಿಂದ ಪ್ರಸಾರವಾದ AIR ನ ವಿಜ್ಞಾನ ಕಾರ್ಯಕ್ರಮದಲ್ಲಿ ೧೫೦ ಕ್ಕೂ ಹೆಚ್ಚು ಉಪನ್ಯಾಸಗಳನ್ನು ಕೊಟ್ಟಿದ್ದಾರೆ. ಟೀ.ವಿ ಮತ್ತು ದೂರದರ್ಶನದಲ್ಲಿ ಹಿರಿಯ ವಿಜ್ಞಾನಿಗಳಾದ, ಡಾ ರಾಜಾರಾಮಣ್ಣ, ಡಾ. ಸಿ.ಎನ್.ಆರ್ ರಾವ್, ಡಾ. ಯು ಆರ್. ರಾವ್, ಡಾ. ಎಮ್. ಆರ್. ಶ್ರೀನಿವಾಸನ್, ಮುಂತಾದವರ ಜೊತೆ ಸಂವಾದವನ್ನು ಮಾಡಿ ಕಾರ್ಯಕ್ರಮಗಳನ್ನು ಕೊಟ್ಟರು. 'ಕಾಸ್ ಮಾಸ್' ಮತ್ತು 'ನಮ್ಮ ವಿಶ್ವ' ಎಂಬ 'ಸಾಕ್ಷಿಚಿತ್ರ'ಗಳನ್ನು ಮಾಡಿದರು.
'ರಾಮನ್ ಶತಮಾನೋತ್ಸವ'ದ ವಿಶೇಷ ಸಮಾರಂಭದಲ್ಲಿ ದೆಹಲಿ ದೂರದರ್ಶನಕ್ಕೆ ಮಾಡಿದ "Raman,The natural Philosopher "ಎಂಬ 'ಸಾಕ್ಷಿ ಚಿತ್ರ' ಎಲ್ಲರ ಮನ್ನಣೆ ಪಡೆಯಿತು. 'ನಿಮಗೆ ತಿಳಿದಿರಲಿ' ಎಂಬ ಧ್ವನಿ ಸುರಳಿ [CD] ಬಿಡುಗಡೆಮಾಡಿದರು. ಅಮೆರಿಕ ದೇಶದ ಬಾನುಲಿ ಕೇಂದ್ರದಲ್ಲಿ ವಿಜ್ಞಾನದ ಬಗ್ಗೆ ಉಪನ್ಯಾಸ ನೀಡಿ, ಅಲ್ಲಿನ ಜನರ ಆಸಕ್ತಿಗಳಿಗೆ ಸ್ಪಂದಿಸಿದರು.
ಬೆಂಗಳೂರಿನ ಪಿ .ಯು ವಿಧ್ಯಾರ್ಥಿಗಳಿಗಾಗಿಯೇ ವಿಶೇಷವಾಗಿ ಬರೆದ ಭೌತಶಾಸ್ತ್ರದ ಪಠ್ಯ ಪುಸ್ತಕಗಳು ಬಹಳ ಹೆಸರುವಾಸಿಯಾಗಿವೆ. 'The Quest'- A Biography of a Scientist, ಕೃತಿಯಲ್ಲದೆ, ಅಂತರಿಕ್ಷ, ಶುಕ್ರ, ಸಂಕ್ರಮಣ, ಒಲವಿನ ಶಿಲೆ-ಅಯಸ್ಕಾಂತ, ನಂಬಿಕೆ- ಮೂಢನಂಬಿಕೆ, ಕಲಾಂ ಮೇಷ್ಟ್ರು- [ಮಕ್ಕಳಿಗಾಗಿಯೇ ಬರೆದ ಪುಸ್ತಕ.] ಇವಲ್ಲದೆ, ರಾಯರು ಸಂಪಾದಿಸಿದ ಕೃತಿಗಳು- ನಿಶ್ಯಬ್ದದೊಳಗಿನ ಶಬ್ದ, ಶಕ್ತಿಗಾಥೆ, ಪರಮಾಣು ಪ್ರಪಂಚ, ಅದೃಷ್ಯ ಬೆಳಕು-ಎಕ್ಸ್ -ರೇ.ಮುಂತಾದವುಗಳು.
ಓದುವುದರ ಜೊತೆಗೆ ನೈಸರ್ಗಿಕ ಪ್ರದೇಶಗಳಿಗೆ 'ಚಾರಣ' ಮತ್ತು ಆಸಕ್ತ ವಿಶಯಗಳ ವಿಶೇಷ ಅಧ್ಯಯನಕ್ಕೆ ವಿದೇಶ ಪ್ರವಾಸ- ಇವು ರಾಯರ ಹವ್ಯಾಸಗಳು. ಉದಯಭಾನು ಸಂಸ್ಥೆಯಲ್ಲಿ ನಡೆಸಿದ ಉಚಿತ ಪದವಿ ಪೂರ್ವ ತರಗತಿಗಳಿಗೆ, ಭೌತ ಶಾಸ್ತ್ರದ ಗೌರವವ ಪ್ರಾಧ್ಯಾಪಕರಾಗಿ ಸತತವಾಗಿ ೧೦ ವರ್ಷ ದುಡಿದಿದ್ದಾರೆ ಮತ್ತು ವಿದ್ಯಾರ್ಥಿಗಳ, ಪೊಷಕರ ಮೆಚ್ಚುಗೆ ಗಳಿಸಿದ್ದಾರೆ. [ಈಗ ಅವರು ೭೨ ವರ್ಷದ ಹರೆಯ ಮೇಷ್ಟ್ರು !] ವೈಜ್ಞಾನಿಕ ಮನೊವೃತ್ತಿಯನ್ನು ಚಿಕ್ಕಂದಿನಿಂದಲೇ ಮೈಗೂಡಿಸಿಕೊಂಡು ವಿಜ್ಞಾನದ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಂದಿಗೂ ನಸುಕಿನಲ್ಲಿ ಎದ್ದು ಸದ್ದಿಲ್ಲದೆ 'ವಾಯುವಿಹಾರ' ಮಾಡಿ ಮತ್ತೆ ಕೃತಿ ಅಭ್ಯಾಸದಲ್ಲಿ ತೊಡಗುತ್ತಾರೆ.
ಶ್ರಿಮತಿ. ಲಲಿತಾರವರೊಡನೆ ೪/೧/೨ ದಶಕಗಳ ಕಾಲದ ವೈವಾಹಿಕ ಜೀವನದಲ್ಲಿ ರಾಯರ ೩ ಹೆಣ್ಣು ಮಕ್ಕಳು ಮದುವೆಯಾಗಿ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ.

- Login or register to post comments
- 403 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail





RSS: