ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !

*
ಸೂಳೆಕೆರೆ, ಭಾರತದ ಅತಿದೊಡ್ಡಕೆರೆ. ಅಷ್ಟೇಕೆ ಏಶಿಯಾದ ಅತ್ಯಂತ ದೊಡ್ಡಕೆರೆಗಳಲ್ಲಿ ಎರಡನೆಯದು, ಸೂಳೆಕೆರೆ ಅಥವಾ ಶಾಂತ ಸಾಗರ. ೬೦ ಚದರ ಕಿ. ಮೀ. ವಿಸ್ತೀರ್ಣದ ಈ ಮಹಾಕೆರೆ, ಚಿತ್ರದುರ್ಗ, ಜಗಳೂರಿನ ಜಮೀನುಗಳಿಗೆ ನೀರಾವರಿಯ ಸೌಕರ್ಯ ಕಲ್ಪಿಸುವ ಒಂದು ಪ್ರಮುಖ ಸಾಧನವಾಗಿದೆ. ಇದು ಮಲೆನಾಡು ಮುಗಿದು ಬಯಲುನಾಡಿಗೆ ಪಾದಾರ್ಪಣೆ ಮಾಡುವ ಸ್ಥಳದಲ್ಲಿ ಇದೆ.
ಪಶ್ಚಿಮಘಟ್ಟಗಳಿಂದ ಹರಿದು ಬರುವ ನೀರು ತಗ್ಗಾದ ಬೆಟ್ಟದಡಿಯಲ್ಲಿ ನಿಲ್ಲುತ್ತದೆ. 'ಭದ್ರಾ ಛಾನಲ್' ನೀರೂ ಇಲ್ಲಿಗೆ ಸೇರುವುದಂತೆ. ವರ್ಷವಿಡೀ ನೀರು ಇಂಗದೆ ಹತ್ತಿರದ ಗ್ರಾಮಗಳಿಗೆ ಕುಡಿಯುವ ನೀರು, ವ್ಯವಸಾಯಕ್ಕೆ ಹೇಳಿಮಾಡಿಸಿದಂತೆ ಅನುಗ್ರಹ ನೀಡುತ್ತಿದ್ದ ಈ ಮಹಾಕೆರೆ ೩ ವರ್ಷಗಳಿಂದ ಸರ್ಕಾರದ ನಿರಾಸಕ್ತಿಯಿಂದ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ.( ನೀರಿನ ಮಟ್ಟ ಗಮನಾರ್ಹವಾಗಿ ತಗ್ಗಿದೆ ) ಈ ಸ್ಥಳದವರೇ ಆಗಿದ್ದ, ಹಿಂದಿನ ಮುಖ್ಯ ಮಂತ್ರಿ ಜೆ. ಎಚ್. ಪಾಟೀಲ್ , ಸ್ವಲ್ಪ ಹೆಚ್ಚಿಗೆ ನಿಗವಹಿಸಿದ್ದಿದ್ದರೆ, ಈ ಕಾರ್ಯ ಸುಗಮವಾಗುತ್ತಿತ್ತೋ ಏನೋ !
ಶಾಂತಸಾಗರದ ಚರಿತ್ರೆ ತುಂಬಾ ಆಕರ್ಷಕವಾಗಿದೆ. ಈ ಕೆರೆಯ ಹಿಂದಿನ ಹೆಸರು, ಸ್ವರ್ಗಾವತಿ. ಶಾಂತವ್ವ ಎಂಬುವರು ಈ ಸ್ಥಳದ ಸರದಾರನ ಮಗಳು . ಆಕೆಗೆ ರಾತ್ರಿ ಸಮಯಯಲ್ಲಿ ಹೊರಗೆ ಓಡಾಡುವ ಅಭ್ಯಾಸವಿತ್ತಂತೆ. [ ನಿಶಾಚರ ಸ್ವಭಾವ] ಒಮ್ಮೆ ಆಕೆಯ ತಂದೆ ಶಾಂತವ್ವ ಹೊರಗೆ ಹೋಗುತ್ತಿದ್ದಾಗ ಹಿಂಬಾಲಿಸಿ ತಾನೂ ಅವಳ ಹಿಂದೆ ಹೋದನಂತೆ. ಶಾಂತವ್ವ ಒಬ್ಬ ದೇವಮಾನವನನ್ನು ಭೇಟಿಮಾಡಿ ಅದೃಷ್ಯಳಾದದ್ದನ್ನು ಕಂಡು ಆತ ವಿಚಲಿತನಾದನಂತೆ. ತಕ್ಷಣ 'ಶಾಂತವ್ವ' ಎಂದು ಜೋರಾಗಿ ಚೀರಿ, ಮೂರ್ಛೆಹೋದನಂತೆ. ತಂದೆಯ ಮನಸ್ಸನ್ನು ಅರಿತ ಶಾಂತವ್ವ ಕಾಡಿನಲ್ಲೇ ಉಳಿದಳಂತೆ. ಅಲ್ಲಿಯೇ ಇದ್ದು ಒಂದು ಭವ್ಯವಾದ, ಅತಿ ದೊಡ್ಡ ಸಾಗರದಂತಹ ಕೆರೆ ನಿರ್ಮಿಸಿದಳೆಂದು ಸ್ಥಳ ಪುರಾಣಗಳು ಸಾರುತ್ತವೆ. ಲೋಕಾರೂಢಿಯಲ್ಲಿ ಜನ ಆ ಕೆರೆಯನ್ನು ಸೂಳೆಕೆರೆ ಯೆಂದು ಕರೆದರು. ಅದನ್ನು ಶಾಂತಸಾಗರವೆಂದೂ ಕರೆಯಲಾಯಿತು.
ಚಿತ್ರದುರ್ಗದಜನ, ನೀರಿನ ಬೇಗೆಯಿಂದ ಬೇಸತ್ತು ಬಹಳ ಸಂಕಟವನ್ನು ಅನುಭವಿಸುತ್ತಿದ್ದಾರೆ. ಕುಡಿಯುವನೀರಿನ ಪೂರೈಕೆಯನ್ನು ಗಮನದಲ್ಲಿಟ್ಟಿಕೊಂಡು, ಹಿಂದಿನ ಕರ್ನಾಟಕ ಸರ್ಕಾರ, ಸೂಳೆಕೆರೆಯ ನೀರನ್ನು ದೊಡ್ಡ ದೊಡ್ಡ ಪೈಪುಗಳ ಮೂಲಕ ಚಿತ್ರದುರ್ಗಕ್ಕೆ ಸಾಗಿಸಲು ವ್ಯವಸ್ಥೆ ಮಾಡಿತ್ತು. ಅದು ಇನ್ನು ಸರಿಯಾಗಿ ಕಾರ್ಯರೂಪಕ್ಕೆ ಬರಬೇಕು.
ಶಾಂತಸಾಗರವನ್ನು ಒಂದು ಪ್ರವಾಸಿ ತಾಣವನ್ನಾಗಿಯೂ ಮಾಡಬಹುದು. ಎರಡು ಬೆಟ್ಟಗಳ ಮಧ್ಯೆ 'ರೋಪ್ ವೇ' ಹಾಕಿಸಿದರೆ ಸಾಕು. ಹೆಚ್ಚು ನೀರು ನಿಲ್ಲಲು ಅವಕಾಶ ಮಾಡಿಕೊಡಬೇಕು. ಪ್ರವಾಸಿಕಗರಿಗೆ ಬೋಟಿನಲ್ಲಿ ಹೋಗಲು ಸೌಲಭ್ಯವನ್ನೂ ಕಲ್ಪಿಸಿ ಕೊಡಬಹುದು. ಬೇಕಾದಷ್ಟು ಕೆಲಸ ಮಾಡಬಹುದು. ಸರ್ಕಾರಕ್ಕೆ ಇಂತಹ ಜನಕಲ್ಯಾಣ ಕಾರ್ಯಕ್ರಮ ಮಾಡಲು ಪುರುಸೊತ್ತು ಬೇಕು. ರಾಜಕೀಯದ ಬಿರಿಸು ವಾತಾವರಣದಲ್ಲಿಯೂ ಸ್ವಲ್ಪ ಸಮಯ ವಿನಿಯೋಗಿಸಿ ಕರ್ನಾಟಕದ ಜನರ ಹಿತರಕ್ಷಣೆಗೆ ಗಮನ ಕೊಡುವುದು ಈಗ ನಮ್ಮ ಮುಂದಿರುವ ಪ್ರಮುಖ ಮುದ್ದೆಗಳಲ್ಲೊಂದು.
ಈಗಿನ ಸರ್ಕಾರಕ್ಕೆ ಚಿತ್ರದುರ್ಗದಂತಹ ಬೆಂಗಾಡಿಗೆ ನೀರಿನ ಪೂರೈಕೆ ಮಾಡುವ ಕೆಲಸ ಪರಮಾದ್ಯತೆಗಳಲ್ಲಿ ಒಂದು ಎಂದು ನಾವು ಮತ್ತೊಮ್ಮೆ ಮನವಿಮಾಡುತ್ತೇವೆ.
[ಚಿತ್ರದುರ್ಗದ ನಿವಾಸಿಗಳೆಲ್ಲಾ]
*ಇಲ್ಲಿ ನನಗೆ ಸಿಕ್ಕ, ಕೆರೆಯ ಚಿತ್ರ ಸುಮಾರು ಹಲವು ದಶಕಗಳ ಹಿಂದಿನದು. ಎಲ್ಲೂ ಪ್ರಸಕ್ತ ವರ್ಷದ ಚಿತ್ರ ದೊರೆಯಲಿಲ್ಲ. ಯಾರಾದರೂ ಅದನ್ನು ಒದಗಿಸಿದಲ್ಲಿ ನಾನು ಕೃತಜ್ಞ !

- Login or register to post comments
- 438 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: