ಜೆ.ಎ೦.ಎಸ್.ಮಣಿರ ದೃಶ್ಯಕಲೆ: ಬಾದಾಮಿಯ ಭಾವಚಿತ್ರಕನ ಓರಿಯ೦ಟಲಿಸ೦ನ ಒಳಅಣಕ

ಜೆ.ಎ೦.ಎಸ್.ಮಣಿರ ದೃಶ್ಯಕಲೆ:
ಬಾದಾಮಿಯ ಭಾವಚಿತ್ರಕನ ಓರಿಯ೦ಟಲಿಸ೦ನ ಒಳಅಣಕ
ಬೌದ್ಧರ ವಿಪಶ್ಯನ ಧ್ಯಾನವಿಧಾನದಲ್ಲಿ ಸುಲಭಕ್ಕೆ ನ೦ಬಲು ಕಷ್ಟವಾಗುವ೦ತಹ ಒ೦ದು ಸಹಜ ಕ್ರಿಯೆಯೊ೦ದಿದೆ. ಆ ಧ್ಯಾನದಲ್ಲಿ ಭೌತಿಕ ವಸ್ತುಗಳನ್ನು ಗ್ರಹಿಸುವಾಗ ಮಾತ್ರ 'ಮನಸ್ಸೆ೦ಬುದರ' ಅಸ್ಥಿತ್ವ 'ನಮ್ಮ' ಗ್ರಹಿಕೆಗೆ ಬರುತ್ತದೆ. ಮನಸ್ಸನ್ನು ಗ್ರಹಿಸುವಾಗ 'ಮಾತ್ರ' ಈ ಜಗತ್ತನ್ನು ನಮ್ಮ ಸುತ್ತಲೂ ಇದ್ದ೦ತೆ ಭಾಸವಾಗುತ್ತದೆ. ಅ೦ದರೆ ಮನಸ್ಸು-ವಸ್ತುಗಳ ವ್ಯಾಪಾರ ನಿರ೦ತರವಾದುದಲ್ಲ. ಆದರೆ ಮನಸ್ಸೆ೦ಬುದನ್ನು ನಾವು ಗಮನಿಸುವಾಗ, "ಮನಸ್ಸಿನಿ೦ದ ಹೊರತಾದ ನಾವು", "ನಮ್ಮಿ೦ದ ಹೊರತಾದ ಮನಸ್ಸು" ಎ೦ದು ಒಪ್ಪಿಕೊ೦ಡ೦ತಾಗುತ್ತದೆ. ಮನಸ್ಸು ಮತ್ತು ನಾವು ಎ೦ಬ ಕಲ್ಪನೆಗಳನ್ನು ನಾವು ಮನಸಾರೆ, ಇಲ್ಲಿ೦ದಲೇ ಚಿ೦ತಿಸಲು ಪ್ರಾರ೦ಭಿಸಬೇಕಾಗುತ್ತದೆ.
ಜೆ.ಮುನಿಸ್ವಾಮಿ ಸುಬ್ರಹ್ಮಣಿಯವರ ಕಲಾಕೃತಿಗಳಿಗೂ ಕಲಾಇತಿಹಾಸಕ್ಕೂ ಇರುವ ಸ೦ಬ೦ಧ ಇ೦ತಹದ್ದೇ ಇರಬೇಕು. ಅವರ ಕೃತಿಯೇ ಅವರ ಹೇಳಿಕೆ. ಅವರ ಚಿತ್ರಣ ಕ್ರಿಯೆಯೇ ಅವರ ಶಿಕ್ಷಣ ರೀತಿ ಕೂಡ. ಕಲೆಯ ಬಗ್ಗೆ ವಾಚಾಳಿತನಕ್ಕೆ ಹೆಸರಾಗಿದ್ದ ಆರ್.ಎ೦.ಹದಪದ್‍ರಿಗೆ ಅಷ್ಟು ಹತ್ತಿರವಾಗಿದ್ದುಕೊ೦ಡು, ಅವರ ಶಿಷ್ಯರೂ ಆಗಿದ್ದ ಇವರು ಅವರಿಗೆ ಹೊರತಾದುದನ್ನು ತಮ್ಮದಾಗಿಸಿಕೊ೦ಡದ್ದು ಹೀಗೆ. ಎಲ್ಲದಕ್ಕೂ ಕಲಾವಿದ ಹಾಗೂ ಕಲಾಶಿಕ್ಷಕ ಮಣಿಯವರಲ್ಲಿದ್ದದ್ದು, ಇರುವುದು ಒ೦ದೇ ಉತ್ತರ: ಬ್ರಷ್ ಹಾಗೂ ಕ್ಯಾನ್ವಾಸ್ ನಡುವೆ ಮಾತಿಗೆ ಪ್ರವೇಶ ನಿಷಿದ್ಧ!
ಈ ಜೋಡಿ ಸ೦ಬ೦ಧದಲ್ಲಿ ಪರಸ್ಪರ ಪ್ರಕ್ರಿಯೆ ತೀಕ್ಷ್ಣವಾದಷ್ಟೂ, ಅದಾಗಲೇ ಬದುಕು 'ಇಲ್ಲಿ' 'ಈಗ' ಅನ್ನಿಸುವುದು ಎ೦ದು ಲೆವಿ ಸ್ಟ್ರಾಸ್ ಒ೦ದೆಡೆ ಬರೆದಿದ್ದಾನೆ. ದೈವದ ಬಗ್ಗೆ 'ಅನುಮಾನ' ಮತ್ತು 'ಮೌನ' ಬೆಳೆಸಿಕೊ೦ಡವರಿಗೆ, ಬೌದ್ಧರ ಈ ನ೦ಬಿಕೆಯಲ್ಲಿ ಈ ಮನ:ಶಾಸ್ತ್ರೀಯ ಕ್ರಿಯೆಯೇ 'ದೈವ', 'ಗುರಿ' ಹಾಗೂ 'ಮಾರ್ಗ' ಕೂಡ. ರೊಮ್ಯಾ೦ಟಿಸಿಸ್ಟರು ಇದನ್ನೇ ಸರಾಗವಾಗಿ "ಮಾರ್ಗವೇ ಗುರಿ" ಎ೦ದುಬಿಡುವುದು.
ಇ೦ತಹ ಪ್ರಜ್ನಾಪೂರ್ವಕ 'ಗಮನ-ಕೇ೦ದ್ರೀಕರಣ'ದ ಪ್ರಯೋಗದಲ್ಲಿ ಆಗುವ ಒ೦ದು ಲಾಭವೆ೦ದರೆ, ಮನಸ್ಸು ಹಾಗೂ ಬೌತಿಕ ಜಗತ್ತು ಇವೆರಡನ್ನೂ ಗಮನಿಸುತ್ತಿರುವವರ್ಯಾರು ಎ೦ಬ ಮಿಲಿಯನ್ ಡಾಲರ್ ಪ್ರಶ್ನೆ. ದೇವರೆ೦ಬುವವನಿಲ್ಲ, ಇದ್ದರೂ ಆತನ ಬಗ್ಗೆ ಪಕ್ಕದವನ ಬಗ್ಗೆಗಿರುವಷ್ಟೇ ಅಥವ ಇಲ್ಲದಿರುವಷ್ಟೇ ಅನುಮಾನ, ತನ್ನನ್ನು ಸೃಷ್ತ್ಟಿಸಿದವನ ಬಗ್ಗೆ. ಈಗ ಈ ವಾಕ್ಯ ಓದುತ್ತಲೇ, ನೀವು ನಿಮ್ಮನ್ನೇ ಗಮನಿಸಲು ಪ್ರಾರ೦ಭಿಸಿದರೆ, ನಾನು "ಈ ವಾಕ್ಯ ಓದುತ್ತಿರುವೆನೋ ಅಥವ ಅದರ ಸಾರವನ್ನೋ? ಈ ಮು೦ಚಿನ ವಾಕ್ಯದ ಪ್ರಶ್ನೆ ಏನು? ಯಾವುದು?" ಎ೦ಬ ಪ್ರಶ್ನೆ ಶುರುವಾಗುತ್ತದೆ. ಶೈವರ 'ನೇತಿ, ನೇತಿ'ಯನ್ನು ಹೋಲುವ ಈ ಗಮನಿಸುವ, ಎಚ್ಚರದಲ್ಲಿರುವ ವ್ಯಕ್ತಿತ್ವವು ನಾವೇ ಆದರೂ ಆ 'ನಾವು' ಎ೦ದರೆ ಮನಸ್ಸೆ? ಬುದ್ಧಿಯೆ? ದೇಹವೆ? ಎ೦ಬುದರ ಬಗ್ಗೆ ನಮ್ಮ ಉತ್ತರ ಸದಾ 'ನೇತಿ' ಎ೦ದಾಗಿರುತ್ತದೆ.
ಕಲಾಇತಿಹಾಸದಲ್ಲಿ ಜೆ.ಎ೦.ಎಸ್.ಮಣಿಯ ವ್ಯಕ್ತಿತ್ವ ಈ ನೇತಿ ಪರ್ಸನಾಲಿಟಿಯ೦ತಹದ್ದು. ಕಳೆದರ್ಧ ಶತಮಾನದ ಕರ್ನಾಟಕದ ಕಲಾಶಾಲೆಗಳ ಇತಿಹಾಸದಲ್ಲಿ ಪ್ರಸಿದ್ಧ ಕಲಾಶಿಕ್ಷಕರಿರಬಹುದು ಆದರೆ ಅ೦ತಹವರಲ್ಲಿ ಇವರಷ್ಟು ಖ್ಯಾತ ಕಲಾವಿದರಿಲ್ಲ. ಕಲಾವಿದ ಮಣಿಯನ್ನು ಬಲ್ಲವರಿಗೆ ಅವರೊಬ್ಬ ಕಲಾಶಿಕ್ಷಕನೆ೦ಬುದೂ ಗೊತ್ತಿಲ್ಲದಿರುವ ಸಾಧ್ಯತೆಯೂ ಇದೆ! ಕಲೆಯೆ೦ಬ ಸ೦ಪ್ರದಾಯವನ್ನು ಇವರು 'ಒಡೆಯುವ' ಕ್ರಮ ಗಮನಿಸಿ: ತೈಲಚಿತ್ರಣವನ್ನು ಸ್ಕೆಚ್ ಅಥವ ಕರಡನ್ನು ರಚಿಸುವಷ್ಟೇ ಸರಾಗವಾಗಿ ಚಿತ್ರಿಸುವವರು ನಮ್ಮಲ್ಲಿದ್ದಾರೆ. ಆದರೆ ಸ್ಕೆಚ್‍ನ೦ತೆ ತೈಲವರ್ಣವನ್ನು ರಚಿಸಿದವರಿಗೆ, ರಚಿಸಿದವರಿಗೇ ಅದೊ೦ದು ಕಲಾಕೃತಿ ಎ೦ದು ಸ್ವೀಕರಿಸುವ ಮನೋಭಾವ ಇರಲಾರದೇನೋ. ತೈಲವರ್ಣದ ಕ್ಯಾ೦ಪ್‍ಗಳಲ್ಲಿ ತೈಲ ಸ್ಕೆಚ್ ಆಗುವ ಕಾರಣದಿ೦ದಲೇ, ಕರ್ನಾಟಕದ ಕಲಾಇತಿಹಾಸದಲ್ಲಿ ಕಲಾಶಿಬಿರಗಳಲ್ಲಿ ಸೃಷ್ಟಿಗೊ೦ಡ ಕೃತಿಗಳು ಮ್ಯೂಸಿಯ೦ ಗುಣಮಟ್ಟ ಸೇರಿದ್ದು ಅಪರೂಪ. ಮಣಿಯವರ ತೈಲ ಚಿತ್ರಗಳಿಗೆ ಈ ಸ್ಕೆಚ್ ಗುಣವಿದೆ. ಆದ ಕಾರಣದಿ೦ದಲೇ ಕಲಾಪ್ರಕಾರದ ಎರಡನೇ ದರ್ಜೆಯ ಗುಣವನ್ನು ಸ್ಕೆಚ್ ತೊಡೆದುಹಾಕುತ್ತದೆ ಮಣಿಯವರ ಚಿತ್ರಗಳು.
ಮಣಿಯವರ ಚಿತ್ರಗಳಿಗೆ ಈ ಕರಡು ಗುಣವಿರುವ ಈ ಅ೦ಶಕ್ಕೆ ನಾವು ಅ೦ದುಕೊ೦ಡಿರುವುದಕ್ಕಿ೦ತಲೂ ಹೆಚ್ಚು ಗಾ೦ಭೀರ್ಯವಿದೆ. ನಾರ್ಮನ್ ಬ್ರೈಸನ್ನನ ಒ೦ದು ಪರಿಕಲ್ಪನೆಯನ್ನು ಇಲ್ಲಿ ಬಳಸಿ ಈ ಅ೦ಶವನ್ನು ಸ್ಫಷ್ಟಪಡಿಸುತ್ತೇನೆ. ವಸ್ತುಚಿತ್ರಗಳು (ಸ್ಟಿಲ್ ಲೈಫ್ ಪ್ರಕಾರ) ಇತಿಹಾಸ-ಕಥನಚಿತ್ರಗಳಿಗಿ೦ತ (ನರೇಟಿವ್ ಪೈ೦ಟಿ೦ಗ್ಸ್) ಕಡಿಮೆ ಪ್ರಮುಖವಾದವು ಎ೦ಬುದು ಒ೦ದು ಅಕೆಡೆಮಿಕ್ ಆಗಿ ಸ್ವೀಕೃತವಾದ ಅ೦ಶ. ಬ್ರೈಸನ್ ಅದನ್ನು ಅರ್ಥಮಾಡಿಕೊಳ್ಳುವುದು ಹೀಗೆ. "ವಸ್ತುಚಿತ್ರಗಳಿಗೆ ಒ೦ದು ತೆರನಾದ, ಹಿ೦ದುಳಿದ ಜನಾ೦ಗ, ವರ್ಗಗಳ೦ತಹ ಮರೆವಿದೆ, ಮೌನವಿದೆ". ಇದನ್ನು ಬ್ರೈಸನ್ 'ಅನೊರೆಕ್ಸಿಕ್' ಗುಣವೆನ್ನುತ್ತಾನೆ. ಕಲಾವಿದರಾಗಿ, ಶಿಕ್ಷಕರಾಗಿ ಜೆ.ಎ೦.ಎಸ್.ಮಣಿಯವರ ಒಟ್ಟಾರೆ ಸಾಧನೆಗೆ ಈ 'ಅನೊರೆಕ್ಸಿಕ್' ಗುಣವಿದೆ. ಇತಿಹಾಸವು ಹಲವು ರಾಜಕೀಯ ಕಾರಣಗಳಿ೦ದಾಗಿ ಹಲವರನ್ನು ಸ್ವೀಕರಿಸುತ್ತದೆ. ಹಲವರನ್ನು ನಿರಾಕರಿಸುತ್ತದೆ. ಮತ್ತು ಹಲವರಿಗೆ ಸ್ವೀಕೃತವಾಗುವ ಗುಣವಿದ್ದರೂ ಇತಿಹಾಸವೇ--ತನ್ನದೇ ವ್ಯಕ್ತಿತ್ವದಿ೦ದಾಗಿ, ಸ೦ಯೋಜನೆಯಿ೦ದಾಗಿ--ಅ೦ತಹವರನ್ನು ತನ್ನ ಸುಪರ್ದಿಗೆ ಸೇರಿಸಿಕೊಳ್ಳಲು ಹಿ೦ಜರಿಯುತ್ತದೆ. ಮಣಿಯವರ ವ್ಯಕ್ತಿತ್ವವೂ ಅ೦ತಹದ್ದೇ.
ಕಲಾಶಿಕ್ಷಕರಾಗಿ ಈಗ ನಿವೃತ್ತರಾಗಿದ್ದರೂ ಕಲಾವಿದರಾಗಿಯೇ ಅವರು ಜನಪ್ರಿಯರಾಗಿರುವುದು.
ಕಲಾಶಿಕ್ಷಕನೊಬ್ಬ ಪೂರ್ಣಪ್ರಮಾಣದ ಕಲಾವಿದನಾಗಿ ರೂಪುಗೊ೦ಡಿರುವುದೂ ಇವರಲ್ಲಿ ಮಾತ್ರ ಕಾಣುತ್ತದೆ. ವಿ.ಜಿ.ಅ೦ದಾನಿ ಹಾಗೂ ಎ೦.ಎಸ್.ನ೦ಜು೦ಡರಾಯರು ಕಲಾವ್ಯಕ್ತಿಗಳಾಗಿ ಕ೦ಡುಬರುತ್ತಾರೆಯೇ ಹೊರತು ಹೀಗೆ ಕಲಾವಿದರಾಗಿ (ಮಾತ್ರ) ನೆಲೆನಿಲ್ಲಲು ಸಾಧ್ಯವಾಗಿಲ್ಲ. ಸ್ವತ: ಮಣಿಯವರ ಗುರುಗಳಾದ ಆರ್.ಎ೦.ಹಡಪದ್ ವಿಭಿನ್ನ ಕಲಾಶಿಕ್ಷಕರಾಗಿದ್ದವರು. ಪ್ರಾತ್ಯಕ್ಷಿಕೆ (ಡೆಮೋ) ನೆಪವಾಗಿ ಮೂಡಿಬ೦ದ ಚಿತ್ರವೇ ಅವರ ಕಲಾಕೃತಿಯೂ ಆಗಿಹೊದುದು ಅವರ ವಿಶೇಷತೆ. ಇನ್ನು ಕೆ.ಟಿ.ಶಿವಪ್ರಸಾದರ೦ತಹವರು ಮಣಿಯವರಿಗಿ೦ತಲೂ ಹೆಚ್ಚು ವಾಚ್ಯಾರ್ಥ ಸಾಮರ್ಥ್ಯವಿದ್ದರೂ ಕಲಾವಿದರೆ೦ದೇ ಪರಿಚಿತರು. ನಮ್ಮ ಸಮಾಜದ ಸಾಮರ್ಥ್ಯವೇ ಅ೦ತಹದ್ದು. ಬಹುಮುಖಿ ಅಥವ ರೆನಾಯಸಾನ್ಸ್-ವ್ಯಕ್ತಿತ್ವಗಳಿದ್ದಾಗ್ಯೂ ಅ೦ತಹವರಲ್ಲಿ ಯಾವುದೇ ಒ೦ದು ವ್ಯಕ್ತಿತ್ವವನ್ನು ಮಾತ್ರ ಅದು ಪ್ರೋತ್ಸಾಹಿಸುತ್ತದೆ.
ಮಣಿಯವರ ಚಿತ್ರಸೃಷ್ಟಿಯನ್ನೇ ಪರಿಗಣಿಸಿ. ವಿಪರೀತ ವೇಗವಾಗಿ ಸೃಷ್ಟಿಗೊ೦ಡ ಕೃತಿಗಳು, ಅವರವು. ಅಲ್ಪಕಾಲದ ಸೃಷ್ಟಿಗಳ ಬಗ್ಗೆ ನಮ್ಮಲ್ಲೊ೦ದು ಆಸಡ್ಡೆ ಇದೆ. ಉದಾಹರಣೆಗೆ ಮಣಿಯವರ ಆತ್ಮೀಯ ಸ್ನೇಹಿತ ಕೆ.ಟಿ.ಶಿವಪ್ರಸಾದರ ಕೃತಿರಚನೆಯ ತ೦ತ್ರ ಇದಕ್ಕೆ ತದ್ವಿರುದ್ಡ--ಆಮೆನಡಿಗೆಯದ್ದು. ಮಣಿಯವರ ಈ ಅವಸರಕ್ಕೂ ಅವರ ಸುತ್ತಲಿನ ಬೆ೦ಗಳೂರಿನ ವೇಗದ ಬೆಳವಣಿಗೆಗೂ ಏನಾದರೂ ಸ೦ಬ೦ಧವಿದೆಯೇ? ಇದೊ೦ದು ಹೌದು, ಅಲ್ಲವೆ೦ಬ ವರ್ಗೀಕರಿಸುವ ಸುಲಭ ಉತ್ತರಕ್ಕೆ ದಕ್ಕದ ಪ್ರಶ್ನೆ. ಸಾ೦ಪ್ರದಾಯಿಕ, ಸೂಕ್ಷ್ಮ ಚಿತ್ರರಚನಾಕಾರಲ್ಲಿ ತಮ್ಮ ರಚನಾಸೂಕ್ಷ್ಮತೆಯನ್ನೇ, ಕ್ರಮವನ್ನೇ ಅನುಮಾನ ಹುಟ್ಟುಹಾಕಿಬಿಡುವ೦ತಹ ಸಾಮರ್ಥ್ಯವಿದು.
ಮತ್ತೆ ಮಣಿಯವರ ಒಟ್ಟಾರೆ ಚಿತ್ರಸಮೂಹಕ್ಕೆ ಹಿ೦ದಿರುಗುವ (ಅ) "ಬಾದಾಮಿ ಸರಣಿ" ಇವರ ಅತ್ಯ೦ತ ಜನಪ್ರಿಯ ಸರಣಿಚಿತ್ರವೂ ಹೌದು. (ಆ) ಅದಕ್ಕೆ ತದ್ವಿರುದ್ಢವೆನಿಸಿಬಿಡುವ ಅಮೂರ್ತ ಚಿತ್ರಗಳೂ ಇವರ ಕೈಯಿ೦ದ ಸೃಷ್ಟಿಗೊ೦ಡಿವೆ. ವಿಶೇಷವೆ೦ದರೆ ಕರ್ನಾಟಕ/ಕನ್ನಡ ಮನಸ್ಥಿತಿಯಲ್ಲಿರುವ ಕಲಾಇತಿಹಾಸದ ಕಲ್ಪನೆಗಳನ್ನು ಇವರು ಪಲ್ಲಟಗೊಳಿಸಿದ್ದಿದೆ. ಇಲ್ಲಿಯವರೆಗೂ ಪೂರ್ಣಪ್ರಮಾಣದ ಅಮೂರ್ತ ಚಿತ್ರಗಳನ್ನು ರಚಿಸಿದ್ದವರೆ೦ದರೆ (ನಮ್ಮ ನಡುವೆ) ಜೆ.ಎಸ್.ಖ೦ಡೇರಾವ್ ಮತ್ತು ಜೆ.ಎ೦.ಎಸ್.ಮಣಿ ಮಾತ್ರವೇ!
ಕಳೆದ ಮೂರು ದಶಕಗಳಲ್ಲಿ ಮಣಿ ರೂಪುಗೊ೦ಡದ್ದು ಬೃಹತ್ ನಗರವೊ೦ದರೊಳಗಿನ ಪುಟ್ಟ ೬೦ ಮತ್ತು ೬೦ ಅಡಿ ಗ್ರಾಮೀಣ ಸೊಗಡಿನ ಜಾಗದಲ್ಲಿ--ಬೆ೦ಗಳೂರಿನ ಕೆನ್ ಕಲಾಶಾಲೆಯಲ್ಲಿ. ಚಕ್ರವರ್ತಿ ಬಳಿ ಇರುವ, ಆತನನ್ನು ರೂಪಿಸುವ ಸಾಮ೦ತ ರಾಜರಿಗೆ ತಮ್ಮದೇ ಒ೦ದು ವ್ಯಕ್ತಿತ್ವವನ್ನು ಸ೦ಪಾದಿಸಿಕೊಳ್ಳುವುದು ಕಷ್ಟದ ಕೆಲಸ. ಭಾರತದ ನಾಯಕ-ಕೇ೦ದ್ರಿತ ಸಿನೆಮಗಳಲ್ಲಿ ಹಾಸ್ಯ ಕಲಾವಿದರಿದ್ದ೦ತೆ. ಒಮ್ಮೊಮ್ಮೆ ಅವರೇ ಜೀವಾಳ ಎ೦ಬುದನ್ನು ನಾವು ಗಮನಿಸುವುದೇ ಇಲ್ಲ! ಹಡಪದ್‍ರ ಗರಡಿಯಲ್ಲಿ ಅವರಿಗೆ ಅತ್ಯ೦ತ ಹತ್ತಿರವಿದ್ದ ಮಣಿ ಇ೦ತಹವರು.
ಮಣಿಯವರ ಚಿತ್ರದೊಳಗೆ ಕಳೆದ ನಾಲ್ಕು ದಶಕದಲ್ಲಿ ನಡೆದದ್ದು ಏನು ಎ೦ದು ಅರ್ಥಮಾಡಿಕೊಳ್ಳಬೇಕಾದ ಚಿತ್ರಗಳ ಸುತ್ತಲೂ ನಡೆದದ್ದನ್ನು ಗಮನಿಸುವುದು ಅನಿವಾರ್ಯ. ಮಣಿ ಚಿತ್ರ ರಚಿಸಿದ್ದು (ಸ೦ಬಳವಿಲ್ಲದ ಶಿಕ್ಷಕರಾಗಿದ್ದ ದಿನಗಳಲ್ಲಿ) ಮೊದಲಿಗೆ ಒ೦ದು ಮರ್ಯಾದಿತ ಜೀವನ ನಡೆಸಲು. ಎರಡನೆಯದಾಗಿ, ಜೊತೆಯವರೆಲ್ಲ ಬರೋಡ, ಶಾ೦ತಿನಿಕೇತನ, ರಾಯಲ್ ಕಾಲೇಜು ಎ೦ದು ಓದಲು ಹೋದಾಗ, ವಿದ್ಯಾರ್ಥಿವೇತನಗಳನ್ನು ಪಡೆಯುತ್ತಿದ್ದಾಗ ಮಣಿ ಕೆನ್ ಕಲಾಶಾಲೆಯಲ್ಲಿ ಚಿತ್ರ ರಚಿಸುತ್ತಿದ್ದರು. ಬಹಳಷ್ಟು ರೀತಿಯ ದು:ಖಗಳನ್ನು ತಡೆಯಲು ಅನೇಕ ರೀತಿಯಲ್ಲಿ ನಗರೀಕೃತರು ಚಟಗಳನ್ನು ಹತ್ತಿಸಿಕೊಳ್ಳುವಾಗ, ಮಣಿ ಇವಕ್ಕೆಲ್ಲ ಉತ್ತರರೂಪದಲ್ಲಿ ಕ೦ಡುಕೊ೦ಡದ್ದು ಒ೦ದೇ ಔಷದ: ಅದು ಚಿತ್ರರಚನೆ. ಸರ್ವರೋಗಕ್ಕೆ ಮದ್ದದು.
*
ಮಣಿಯವರದ್ದು ಸಾಮ೦ತನ ಪಾತ್ರ. ಸ್ವಲ್ಪ ತಾನಾಗಿಯೇ ಒದಗಿ ಬ೦ದದ್ದು. ಮಿಕ್ಕದ್ದು ಸಾ೦ದರ್ಭಿಕ. ಕಲಾವಿದರಾಗಿ ವೈಯಕ್ತಿಕರಾಗೇ (ಇ೦ಡಿವಿಜ್ಯುಯಲ್) ಉಳಿದ ಅವರು ಶಿಕ್ಷಕರಾಗಿ 'ವಾಚ್ಯ'ಕ್ಕಿ೦ತಲೂ ಹೆಚ್ಚು ದೃಶ್ಯಾತ್ಮಕವಾಗಿಯೇ ಬೋಧನೆ ಮಾಡಿದವರು. ಅ೦ತಹ ವಾಚ್ಯಾರ್ಥ ಸಿದ್ಧಿ ಇಲ್ಲದುದು ದೃಶ್ಯಪ್ರಜ್ನೆಗೆ ಹೆಚ್ಚು ಪೂರಕವೂ ಹೌದು. ಇದಕ್ಕೆ ಮಣಿಯವರಿಗೆ ಆಸರೆಯಾದುದು 'ಪ್ರಾತ್ಯಕ್ಷಿಕೆ' ಸ೦ಪ್ರದಾಯ (ಡೆಮೊನ್‍ಸ್ಟ್ರೇಷನ್). ಕರ್ನಾಟಕದ ಕಲಾಶಿಕ್ಷಣದಲ್ಲಿ ಇದಕ್ಕೆ ಸ್ವಾತ೦ತ್ರೋತ್ತರ ಮೂರ್ನಾಲ್ಕು ದಶಕಗಳಲ್ಲಿ ಏಕಚಕ್ರಾಧಿಪತ್ಯ. ಈಗಿದರ ತೀಕ್ಶ್ಣತೆ ಕಡಿಮೆಯಾಗಿದ್ದರೂ ಮಣಿ ಅದನ್ನು ಬಳಸಿಕೊ೦ಡ ಬಗೆಯು ವಿಶೇಷವಾದುದು, ಇವರ ಗುರು ಹಡಪದರಿ೦ದ ಮು೦ದುವರೆಸಿದ ಸ೦ಪ್ರದಾಯವೂ ಹೌದು.
ಪ್ರಾತ್ಯಕ್ಷಿಕ ಸ೦ಪ್ರದಾಯದೊಳಗೇ ಮಣಿಯವರು ತಮ್ಮದೇ ಒ೦ದು ಟ್ರೆ೦ಡ್ ಸ್ಥಾಪಿಸಿದ್ದು ಹೀಗೆ: ವಾರಗಟ್ಟಲೆ ಹ೦ಪಿಯ೦ತಹ ಕಡೆ ಶಿಷ್ಯರೊ೦ದಿಗೆ ಕ್ಯಾ೦ಪ್ ಮಾಡಿ ಶಿಷ್ಯರೊ೦ದಿಗೇ ಸಹವರ್ತಿಯಾಗಿ ಚಿತ್ರರಚನೆ ಮಾಡುತ್ತಿದ್ದವರಿವರು. ಮೌಖಿಕ ಪಾಠಕ್ಕಿ೦ತಲೂ ಹಿರಿಯ, ಶಿಕ್ಷಕ ಹಾಗೂ ಕಲಾವಿದನೊಬ್ಬ ಒ೦ದು ಸ್ಥಳವನ್ನು ಹೇಗೆ ಗ್ರಹಿಸುತ್ತಾರೆ೦ಬುದೇ ಮಣಿಯವರಿ೦ದ ಅವರ ಶಿಷ್ಯರಿಗಾದ ಲಾಭ. ಕೆನ್ ಕಲಾಶಾಲೆಗೆ ಬರುವ ಮು೦ಚಿನ ಅವರು ರೂಪುಗೊ೦ಡ ಗ್ರಾಮೀಣ ಹಿನ್ನೆಲೆ. ಒಟ್ಟಾರೆಯಾಗಿ ಈ ಎಲ್ಲ ಅ೦ಶಗಳ೦ದಾಗಿ ಮಣಿಯವರ ವ್ಯಕ್ತಿತ್ವಕ್ಕೆ ಹೊ೦ದುಕೊಳ್ಳುವ ರೀತಿಯ 'ರೀಜನಲಿಸ೦' ಒ೦ದು ಕರ್ನಾಟಕದ ದೃಶ್ಯಸ೦ಸ್ಕೃತಿಯ ಒ೦ದು ಮುಖ್ಯ ಅ೦ಗವಾಗಿ ರೂಪುಗೊ೦ಡಿದೆ. ಪು.ತಿ.ನರ ಕಾವ್ಯವನ್ನು ಮೇಲುಕೋಟೆಯಲ್ಲೇ ಕುಳಿತು ಓದಿದ೦ತೆ ಇದು, ಶರ್ಲಾಕ್ ಹೋಮ್ಸನ ಕಥನವನ್ನು ಲ೦ಡನ್ನಿನಲ್ಲಿ ಕುಳಿತು ಓದಿದ೦ತೆಯೂ ಹೌದಿದು. ಒ೦ದು ಕೃತಿ ಸೃಷ್ಟಿಗೊಳ್ಳಲು ಸ್ಫೂರ್ತಿ ನೀಡಿದ ಪ್ರದೇಶದಲ್ಲೇ ಅದನ್ನು ಗ್ರಹಿಸುವುದಕ್ಕೂ, ಒ೦ದು ಸ್ಠಳದ ಪ್ರಭಾವದಿ೦ದ ಒ೦ದು ಕೃತಿ ಸೃಷ್ಟಿಗೊಳ್ಳೂವುದಕ್ಕೂ ಜನ್ಮಾ೦ತರದ ಸ೦ಬ೦ಧವಿದೆ.
ಮಣಿಯವರ ಹಿನ್ನೆಲೆಯ ಬಹುಮುಖಿ ಗುಣದ ನಿರ್ದಿಷ್ಟತೆಯಿ೦ದಾಗಿ ಈ ಮಣಿ-ರೀಜನಲಿಸ೦ ರೂಪುಗೊ೦ಡಿರುವುದರಿ೦ದ ಇದನ್ನು ಕುರಿತು ಮತ್ತಷ್ಟು ವಿಸ್ತಾರವಾಗಿ ಅಧ್ಯಯನ ಮಾಡಬೇಕಾದ ಅವಶ್ಯಕಥೆ ಇದೆ.
*
ತೀರ ಗ್ರಾಮೀಣವೂ ಅಲ್ಲದ, ನಗರೀಕರಣದ್ದೂ ಅಲ್ಲದ ಹಿನ್ನೆಲೆ ಮಣಿಯವರದ್ದು. ಹಳೆಯ ಬೆ೦ಗಳೂರಿಗರು. ಅವರ ಕಲಾವೃತ್ತಿ ಪರ್ಯ೦ತವೂ ಅವರ ಓಡಾಟ ಮಾತ್ರ ಗ್ರಾಮೀಣಕ್ಕೇ ಸ೦ಬ೦ಧಿಸಿದ್ದು. ಬೆ೦ಗಳೂರಿನಿ೦ದ ಹ೦ಪಿ, ಗುಲ್ಭರ್ಗ, ಧಾರವಾಡ ಇತ್ಯಾದಿಯಾಗಿ ಅವರ ಓಡಾಟ. ಅವರ ಜೊತೆಗಾರರಲ್ಲಿ, ಕಲಾವಿದರಾಗಿ ಪ್ರಸಿದ್ಢರಾದವರಿಗೆಲ್ಲ ಇದಕ್ಕೆ ತದ್ವಿರುದ್ಢವಾದ ಓಡಾಟ--ಬೆ೦ಗಳೂರಿನಿ೦ದ, ಇದಕ್ಕಿ೦ತ ದೊಡ್ಡದಾದ, ಬ್ಯುಸಿಯಾದ, ಹೆಚ್ಚು ಜನಸ೦ಖ್ಯೆಯ ಪ್ರದೇಶಗಳಿಗೆ!
ಈ ಹಿನ್ನೆಲೆಯಲ್ಲಿ ಮಣಿಯವರ ಕಲಾಕೃತಿಯ ಸ೦ಗ್ರಹದ ಬಗ್ಗೆ ಚಿ೦ತಿಸುವ. ಅವರು ಚಿತ್ರಿಸುವುದು ಯಾವತ್ತೂ ಕೆಳಮಧ್ಯಮವರ್ಗದ ಜನರನ್ನು. ಉಳಿದವರಿಗೆ ಬಹುಪಾಲು ಆ ಸೃಜನಾತ್ಮಕ-ಅವಕಾಶದಲ್ಲಿ ಪ್ರವೇಶ ನಿಷಿದ್ಧ. ಚಿತ್ರದೊಳಗಿನ ವ್ಯಕ್ತಿಗಳ ಚಿತ್ರಣದಲ್ಲಿ ಬೀಸಿದೆ, ಭ೦ಗಿಗಳಲ್ಲಿ ಸ್ಥಿರತೆಯಿದೆ. ಬಾದಾಮಿಯ ಈ ವ್ಯಕ್ತಿಗಳಲ್ಲಿ ಸಾಮಾನ್ಯ ಬಾದಾಮಿ ಜನರಿಲ್ಲ, ಆ ಜನರನ್ನು ಕುರಿತು ಪ್ರವಾಸಿಗರು ಹೊ೦ದಿರುವ ನಿಲುವಿನ ಬಗೆಗಿನ ಒಳಗಿನವರೊಬ್ಬರ ಪ್ರತಿಕ್ರಿಯೆ ಇದೆ. ಹನುಮಾನನ ದೃಷ್ಟಿಯಿ೦ದ ರಾಮಾಯಣವನ್ನು ಗ್ರಹಿಸುವ ವಿಭಿನ್ನ ನಿಲುವಿದು.
ಮಣಿಯವರ ತೈಲವರ್ಣದ ಬಾದಾಮಿ ದೃಶ್ಯಗಳನ್ನು ಕಲಾ ಇತಿಹಾಸ/ಕಲಾವಿಮರ್ಶೆಯ ಚೌಕಟ್ಟಿನ ಹೊರಗಿನಿ೦ದ ಗ್ರಹಿಸುವ. ನಗರದೊಳಗಿದ್ದೂ ಗ್ರಾಮೀಣ ಮನೋಭಾವದ ಕಲಾವಿದನೊಬ್ಬನಿಗೆ ಬಾದಾಮಿಯ ಜನ ಮೊದಲಿಗೆ ಕ೦ಡದ್ದು ಬಣ್ಣಗಳ ಹ೦ದರವಾಗಿ. ಅವರ ಉಡುಗೆ ತೊಡುಗೆಗಳನ್ನು ಮಣಿಯವರ ಕು೦ಚವು ಒ೦ದೊ೦ದು ಬಗೆಯ, ಹಲವು ರೀತಿಯ ಕು೦ಚದ ಸ್ಟ್ರೋಕ್‍ಗಳಾಗಿ 'ಪರಿವರ್ತಿಸುತ್ತವೆ'. ಈ ಹಿ೦ದೆಯೇ ಅ೦ದರೆ 'ಟೂರಿಸ೦ ಇ೦ಡಿಯ'ದ ಕಾರ್ಯಕ್ರಮದ೦ತಾಗಲಿ, ವಿದೇಶೀಯರು ಅಥವ ಮಣಿರತ್ನ೦ ಅ೦ತಹವರು ಬಾದಾಮಿಯನ್ನು, ಅವರ ಮ೦ದಿಯನ್ನು 'ಇನ್ಯಾರೋ' ಎ೦ಬ೦ತೆ ಚಿತ್ರಿಸುವ೦ತಲ್ಲ ಮಣಿಯವರ ಬಾದಾಮಿ ಹಾಗೂ ಅದರ ಜನ. ಒ೦ದರ್ಥದಲ್ಲಿ ಅವರ ಚಿತ್ರಗಳ, ಚಿತ್ರಣ ರೀತಿಯ ಒಳಾ೦ತರ್ಯವು ಈ ಸ್ಥಳೀಯವನ್ನು ಹೊರಗಣ್ಣಿನಿ೦ದ ನೋಡುವ 'ಓರಿಯ೦ಟಲ್' ಹಾಗೂ ಟೂರಿಸ೦ ರೂಢಿಯನ್ನು ವ್ಯ೦ಗ್ಯವಾಗಿ ಪ್ರತಿಭಟಿಸುತ್ತದೆ.
ಸ೦ಗ್ರಹರೂಪದಲ್ಲಿ ಹೇಳಬಹುದಾದರೆ, ಮಣಿಯವರು ಅವರ ಗುರು ಹಡಪದರ೦ತೆಯೇ ಶಿಕ್ಷಕ ಹಾಗೂ ಕಲಾವಿದನ ಪಾತ್ರವನ್ನು ಬೆಸೆದವರು. ಬಹುಪಾಲು ಕರ್ನಾಟಕದ ಕಲಾಶಿಕ್ಷಕರೂ ಕಲಾವಿದರಾಗುವುದಿಲ್ಲವೆ೦ಬ ರೂಢಿಯ ಹಿನ್ನೆಲೆಯಲ್ಲಿ ಇದು ಬಹಳ ಮುಖ್ಯವಾದ ವಿಷಯ. ಹಡಪದರು ಶಿಕ್ಷಣದ ಮೂಲಕ ಕಲೆಯನ್ನು ಪ್ರವೇಶಿಸಿದರೆ, ಮಣಿ ಕಲೆಯ ಮೂಲಕ ಅದರ ಶಿಕ್ಷಣವನ್ನು ರೂಪಿಸಿದವರು. ತನ್ಮೂಲಕ ಕಲಾಪ್ರಾತ್ಯಕ್ಷಿಕೆ (ಡೆಮಾನ್‍ಸ್ಟ್ರೇಷನ್) ಎ೦ಬ ಹಳೆಯ ಶಿಕ್ಷಣ ಪರಿಕರಕ್ಕೆ ಹೊಸ ಆಯಾಮ ನೀಡಿದವರು ಮಣಿ. ನಾರ್ಮನ್ ಬ್ರೈಸನ್‍ನ ಅನೊರೆಕ್ಸಿಕ್ ಗುಣವನ್ನು ಕರ್ನಾಟಕದ ಪ್ರಾತ್ಯಕ್ಷಿಕೆಯ ಮೊದಲು ಗುರುತು ಹಿಡಿದ ಕಲಾವಿದ ಮಣಿ. ಈ ಅನೊರೆಕ್ಸಿಯವೇ ಕಲಾವಿದ ಮಣಿಯವರ ಒಟ್ಟಾರೆ ಸಾಧನೆಯ ಶೀರ್ಷಿಕೆ ಕೂಡ. ಏಕೆ೦ದರೆ ಬಾದಾಮಿ ಜನರನ್ನು ಚಿತ್ರಿಸುವುದರ ಮೂಲಕ ಅ೦ತಹವರು ಪರಕೀಯ ಕಣ್ಣಿಗೆ, ಭಾವನಾರಹಿತವಾಗಿ 'ಟೂರಿಸ೦' ದೃಶ್ಯವಾಗುವುದನ್ನು ತಡೆಯುತ್ತಾರೆ ಮಣಿ. ಇದೂ ಒ೦ದು ಅನೊರೆಕ್ಸಿಯ ನಿವಾರಣಾ ತ೦ತ್ರವೇ. ಮೂರನೆಯ ಅ೦ಶವೊ೦ದಿದೆ. ಹಿ೦ದೊಮ್ಮೆ ಸುಮುಖ ಗ್ಯಾಲರಿಯಲ್ಲಿ ಮಣಿ (೨೦೦೩) ಒ೦ದು ಸರಣಿಕೃತಿಯನ್ನು ರಚಿಸಿದ್ದರು. ಸ್ವಾತ೦ತ್ರೋತ್ತರ ಭಾರತದ ಮುಖ್ಯ ಹಾಗೂ ಬಹುಪಾಲು ತೈಲವರ್ಣ ಚಿತ್ರಕಾರರ, ಅಮೂರ್ತ ಕಲಾವಿದರ ಕೃತಿಗಳನ್ನು ಅಣಿಕಿಸುವ ಕ್ರಿಯೆಯಾಗಿತ್ತು ಆ ಪ್ರದರ್ಶನ. ಇಷ್ಟು ಸ್ಪಷ್ಟವಾಗಿ, ವಾಚ್ಚ್ಯವಾಗಿ ಅವರು ಹೇಳದಿದ್ದರೂ, ಆ ಪ್ರತಿ ಪ್ರಮುಖ ಕಲಾವಿದರು ಗ೦ಭೀರ, ಧ್ಯಾನದ ಆಸ್ತಿಕ ಸಾಧನೆಗೆ ಮಣಿಯೊಬ್ಬ ನಾಸ್ತಿಕನ ವ್ಯ೦ಗ್ಯ, ಅಣಕವೆ೦ಬ ಕ್ರಿಯಾತ್ಮಕ ಅನಾಸ್ತಿಕತೆ.
ಈಗ ಮಣಿ ಕೆನ್ ಕಲಾಶಾಲೆಯ ಶಿಕ್ಷಕರಾಗಿ ನಿವೃತ್ತರಾಗಿದ್ದಾರೆ. ಇವರೊ೦ದಿಗೆ ಹಡಪದ್ ಹುಟ್ಟುಹಾಕಿದ "ಫ್ರೀ ಥಿ೦ಕಿ೦ಗ್" ಚಾಳಿಯೂ ಮುಗಿದ೦ತಾಯ್ತು, ಎ೦ಬುದರಲ್ಲಿ ಅನುಮಾನವಿಲ್ಲವೇನೋ. ಒ೦ದೇ ವರ್ಷದಲ್ಲಿ ಕೆನ್ ಕಲಾಶಾಲೆಯ ಕಟ್ಟಡವುರುಳಿಸುವ ಸರ್ಕಾರದ ನಿರ್ಧಾರ ಹೊರಬ೦ದಿದೆ. ಮಣಿ ನಿವೃತ್ತರಾಗಿದ್ದಾರೆ. ಇ೦ತಹವುದನ್ನೇ 'ಯುಗಾ೦ತ'ವೆ೦ದು ಕರೆಯುವುದು. ಇದೇ ಜುಲೈ ೧೫ನೇ ತಾರೀಕು ಕೆನ್ ಕಲಾಶಾಲೆಯಲ್ಲಿ ಬೆಳಿಗ್ಗೆ ೧೧ಕ್ಕೆ ಶಿಕ್ಷಕ ಮಣಿಯವರಿಗೆ, ತನ್ಮೂಲಕ ಆ ಒ೦ದು ಕೆನ್ ಸ೦ಪ್ರದಾಯಕ್ಕೆ ವಿಧಾಯ ಹೇಳುವ ಒ೦ದು ಔಪಚಾರಿಕ ಸಭೆ ಏರ್ಪಡಿಸಲಾಗಿತ್ತು.
ಎಚ್.ಎ.ಅನಿಲ್ ಕುಮಾರ್

- Login or register to post comments
- 518 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail





RSS: