ರುದ್ರಾಕ್ಷಿ

ನೀಲಿ ಬಣ್ಣದ ನಯವಾದ ಈ ಕಾಯಿಯೇ ಒಣ,ಮುಳ್ಳುಮುಳ್ಳಾದ ರುದ್ರಾಕ್ಷಿ ಕಾಯಿ ಆಗುವುದು. ರುದ್ರ+ಅಕ್ಷಿ -ರುದ್ರ ಅಂದರೆ ಶಿವನ ರೌದ್ರ ಅವತಾರ,ಅಕ್ಷಿ ಅಂದರೆ ಕಣ್ಣು. ಶಿವನ ಶಾಂತ ನೀಲ ಕಣ್ಣುಗಳು ರುದ್ರನ ಕಣ್ಣುಗಳಂತೆ ಆಯಿತು ಎಂದರ್ಥವೋ ಏನೋ? ನಾವು ದಕ್ಷಿಣ ಭಾರತೀಯರು ರುದ್ರಾಕ್ಷಿ ಎಂದೂ ಉತ್ತರದವರು ರುದ್ರಾಕ್ಷ ಎಂದು ಕರೆಯುವರು. ಇದು ಹಿಮಾಲಯ ಪರ್ವತದ ಸಮೀಪ ಹೆಚ್ಚಾಗಿ ನೇಪಾಳದಲ್ಲಿ ಬೆಳೆಯುವುದು.
ರುದ್ರಾಕ್ಷಿಯಲ್ಲಿ ಒಂದು ಮುಖದಿಂದ ಹಿಡಿದು ೨೧ ಮುಖದವರೆಗೆ ಭೇದಗಳಿವೆ. ೧,೧೪,೨೧ ಮುಖದ ರುದ್ರಾಕ್ಷಿ ಅಪರೂಪ. ಅದರಲ್ಲೂ ಒಂದು ಮುಖದ ರುದ್ರಾಕ್ಷಿ ಅಪರೂಪದಲ್ಲಿ ಅಪರೂಪ. ಶಿವನ ತ್ರಿಶೂಲ,ಲಿಂಗ ಸರ್ಪದ ಚಿಹ್ನೆ ಹೊಂದಿರುವ ಏಕಮುಖ ರುದ್ರಾಕ್ಷಿ ಧರಿಸಿದರೆ ಪಂಚ ಮಹಾ ಪಾತಕಗಳಲ್ಲಿ ಒಂದಾದ ಬ್ರಾಹ್ಮಣನನ್ನು ಕೊಂದ ಪಾಪವೂ ನಿವಾರಣೆಯಾಗುವುದು.
ಎರಡು ಮುಖದ ರುದ್ರಾಕ್ಷಿ ಅರ್ಧನಾರೀಶ್ವರ-ಇದನ್ನು ಧರಿಸಿದವರು ಗೊತ್ತಿದ್ದೋ,ಗೊತ್ತಿಲ್ಲದೆಯೋ ಮಾಡಿದ ತಪ್ಪು ಕ್ಷಮಿಸಲ್ಪಡುವುದು.
ಶಿವನಿಗೂ ರುದ್ರಾಕ್ಷಿಗೂ ಏನು ಸಂಬಂಧ ಎಂಬುದಕ್ಕೆ ಪುರಾಣಗಳಲ್ಲಿ ಒಂದೆರಡು ಕತೆಗಳಿವೆ-
ದೇವೀ ಭಾಗವತ ಪುರಾಣದ ಪ್ರಕಾರ:- ತ್ರಿಪುರನೆಂಬ ರಾಕ್ಷಸ ರಾಜನೊಬ್ಬನಿದ್ದ.ಅವನು ದೇವತೆಗಳನ್ನು ಸೋಲಿಸಿದ.ದೇವತೆಗಳು ಶಿವನ ಮೊರೆ ಹೋದರು.ದೇವತೆಗಳಿಗಾಗಿ ಶಿವ ಎಷ್ಟು ಕಷ್ಟಪಡುತ್ತಾರೆಂದರೆ ೧೦೦೦ ದೇವತಾ ವರ್ಷಗಳವರೆಗೆ ಕಣ್ಣನ್ನು ತೆರೆದೇ ಇಟ್ಟಿದ್ದರು! ನಂತರ ಕಣ್ಣು ಮಿಟುಕಿಸಿದಾಗ ಶಿವನ ಕಣ್ಣಿಂದ ಉದುರಿದ ಕಣ್ಣೀರೆ ರುದ್ರಾಕ್ಷಿ ಗಿಡಗಳು.
ಶಿವ ಪುರಾಣದ ಪ್ರಕಾರ ಶಿವ ೧೦೦೦ ವರ್ಷ ತಪಗೈದ ಬಳಿಕ ಕಣ್ಣು ತೆರೆದಾಗ ಕಣ್ಣೀರ ಹನಿ ನೆಲಕ್ಕೆ ಬಿತ್ತು.ಶಿವನೇ ಹೇಳಿದ್ದರಿಂದ ಇದು ನಿಜವಿರಬಹುದು.
ಬ್ರಹಜ್ಜಬಾಲ ಉಪನಿಷದ್ ಪ್ರಕಾರ ರುದ್ರ ವಿಶ್ವನಾಶಕ್ಕೆ ಮೂರನೇ ಕಣ್ಣನ್ನು ತೆರೆದ. ನಂತರ ಮುಚ್ಚಿದಾಗ ಉದುರಿದ ಕಣ್ಣೀರಿನ ಹನಿಯೇ ರುದ್ರಾಕ್ಷಿ. ಅದು ಸರಿ,ವಿಶ್ವನಾಶವಾದಾಗ ರುದ್ರಾಕ್ಷಿ ಹೇಗೆ ಬೆಳೀತು ಕೇಳಬೇಡಿ.
ಇವೆಲ್ಲಕ್ಕಿಂತ ರುದ್ ಅಂದರೆ ಹಿಂದಿಯಲ್ಲಿ ಅಳು.ಅಂದರೆ ಕಣ್ಣೀರು ಇದೇ ಸರಿಯಾದ
ಅರ್ಥವಿರಬಹುದು.ಮರದ ಬುಡದಲ್ಲಿ ಬಿದ್ದ ಈ ಕಾಯಿಗಳು ಕಣ್ಣೀರ ಹನಿಗಳಂತೆ ಕಂಡಿರಬಹುದು. ತನ್ನ ಕಾಯನ್ನು ಧರಿಸಿ ಜನ ಏನೆಲ್ಲಾ ಅನ್ಯಾಯ ಮಾಡುತ್ತಾರೆ ಎಂದು ಮರ ರೋದಿಸಿರಬಹುದು.
ಇದರ ಬಟಾನಿಕಲ್ ಹೆಸರು:-Elaeocarpus sphaericus.
ಅಸ್ತಮಾ ರೋಗದಲ್ಲಿ ಇದನ್ನು ವೈದ್ಯರು ಔಷಧಿಯಾಗಿ ಉಪಯೋಗಿಸುವರಂತೆ.
ಸಂಗ್ರಹ-ಗಣೇಶ.

- Login or register to post comments
- 447 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail





RSS: