ಮುಂಬೈಯಲ್ಲಿ ಕನ್ನಡದ ಪ್ರಚಾರ!
ಇವತ್ತು ಮುಂಬೈಯಲ್ಲಿ ನಾನು ಮನೆ ಬಿಟ್ಟು ಹೊರಬೀಳುವಾಗ 'ಹೊಸಗನ್ನಡ ಸಾಹಿತ್ಯದ ಉದಯಕಾಲ( ಉತ್ತರ ಕರ್ನಾಟಕವನ್ನು ಅನುಲಕ್ಷಿಸಿ)' ಎಂಬ ಪುಸ್ತಕವೊಂದನ್ನು ಇಟ್ಟುಕೊಂಡೆ. ಅದರಲ್ಲಿನ ಅನೇಕವಿಷಯಗಳು ಬಹುತೇಕ ಕನ್ನಡಿಗರಿಗೆ ಗೊತ್ತಿಲ್ಲ. ಅದನ್ನು ಸಂಪದದಲ್ಲಿ ಹಾಕಬೇಕೆಂದು ರೈಲಿನಲ್ಲಿ ಓದಲು ಹೊರತೆಗೆದೆ. ಅದರಲ್ಲಿ ಮುಖ್ಯವಾಗಿ ಕನ್ನಡ ಭಾಷೆಯ ಪ್ರಾರಂಭಿಕ ಬೆಳವಣಿಗೆಯ ಸಂಕ್ಷಿಪ್ತ ಪರಿಚಯದ ನಂತರ ೩-೪ ಶತಮಾನ ಹೇಗೆ ಕತ್ತಲಯುಗವನ್ನು ಕಂಡಿತು ( ವಿಶೇಷತ: ಉತ್ತರ ಕರ್ನಾಟಕದಲ್ಲಿ ) , ಅದರಿಂದ ಹೇಗೆ ಹೊರಬಂದು ಇಂದಿನ ಸ್ಥಿತಿ ತಲುಪಿತು . ಅದಕ್ಕೆ ಯಾರು ಯಾರು ಕೊಡುಗೆ ಸಲ್ಲಿಸಿದರು . ಎಂಬ ಬಗ್ಗೆ ಕುತೂಹಲಕರ ವಿವರಗಳಿವೆ. ಈ ಪುಸ್ತಕವನ್ನು ಶ್ರೀ ರಾ.ಯ.ಧಾರವಾಡಕರ ಅವರು ಬರೆದಿದ್ದು . ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣೆಯಾಗಿದೆ. ( ಈ ಪುಸ್ತಕ ಯಾರದೋ ಮನೆಯಲ್ಲಿ ಸುಮ್ಮನೆ ಬಿದ್ದಿತ್ತು. ಅವರು ನನ್ನ ಮೂಲಕ ಅನೇಕ ಪುಸ್ತಕಗಳನ್ನು ವಿಲೇವಾರಿ ಮಾಡುತ್ತಿದ್ದಾಗ ನಾನು ಎತ್ತಿಟ್ಟುಕೊಂಡಿದ್ದೇನೆ ಅಂದರೆ ಕದ್ದಿದ್ದೇನೆ. - ಬೆಗ್, ಬೈ , ಬಾರೋ ಆರ್ ಸ್ಟೀಲ್ ಎಂದು ನಾಣ್ಣುಡಿಯೇ ಇದೆಯಲ್ಲ?!) . ತುಂಬ ಅಮೂಲ್ಯ ಪುಸ್ತಕವೇ ಸರಿ.
ಪಕ್ಕದಲ್ಲಿ ಒಬ್ಬ ಹಿರಿಯರು . ಸುಮಾರು ೬೦ ವರ್ಷದವರು. ಪುಸ್ತಕದ ಕಡೆ ಅಗಾಗ ನೋಟ ಹರಿಸುತ್ತಿದ್ದರು. ( ಮುಂಬೈಯಲ್ಲಿ ಹೀಗೆ ಮಾಡುವದು ಅಪೇಕ್ಷಣೀಯವಲ್ಲ; ಕಣ್ಣಿಗೆ ಕಣ್ಣು ಸೇರಿಸುವ ಪದ್ಧತಿ ಸಹಿತ ಇಲ್ಲ. ಇನ್ನು ಅನಗತ್ಯ ಮಾತನಾಡುವದಂತೂ ಇಲ್ಲವೇ ಇಲ್ಲ . ಎಷ್ಟೋ ವ್ಯವಹಾರಗಳು ಸನ್ನೆಯಿಂದಲೇ ಅಥವಾ 'ಶ್ಶ್ ಶ್ಶ್' ಎಂಬ ಭಾಷಾತೀತ ನೆಲೆಯಿಂದಲೇ ನಡೆಯುತ್ತವೆ!.) ಅಲ್ಲಲ್ಲಿ ಇಂಗ್ಲೀಷ್ ಉದ್ಧೃತ ವಾಕ್ಯಗಳಿದ್ದವು. ( ಹೀಗೆ ವಾಕ್ಯಗಳನ್ನು ಎತ್ತಿಕೊಡುವದಕ್ಕೆ ಏನನ್ನುತ್ತಾರೆ? ಉದ್ಧರಣೆ?! ಉದ್ಧಾರ?! ) ಕೊನೆಗೆ ಕೇಳಿದರು ಇಂಗ್ಲೀಷಿನಲ್ಲಿ . ಅದು ಕನ್ನಡವೇ ? ಇತಿಹಾಸದ ಪುಸ್ತಕವೇ ? ಅಂತ. ನಾನೂ ಉತ್ತರಿಸಿದೆ ( ಇದೆಲ್ಲ ಮಾತುಕತೆ ಇಂಗ್ಲೀಷಿನಲ್ಲಿ ಆಯಿತು) 'ಹೌದು , ಕಳೆದ ಎರಡು ಶತಮಾನಗಳ ಭಾಷೆಯ ಬದಲಾವಣೆಗಳ ಬಗ್ಗೆ ಇದೆ' ಅಂದೆ. ' ಹೌದಾ ? ೧೩ ನೇ ಶತಮಾನದ ಭಾಷೆ ಅಲ್ಲವೇ?' ಅಂದರು. ಮನಸ್ಸಿನಲ್ಲಿ -ಅಹಾ, ಒಬ್ಬರ ತಪ್ಪು ಕಲ್ಪನೆಯನ್ನಾದರೂ ದೂರ ಮಾಡಿ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿವ ಅವಕಾಶ ನನಗೆ ಸಿಕ್ಕಿತು- ಎಂದುಕೊಂಡೆ. ' ಅಲ್ಲ, ೨೦೦೦ ವರ್ಷ ಹಳೆಯದು. ೫ ನೇ ಶತಮಾನದ ಶಾಸನಗಳಿವೆ' ಎಂದೆ. ಸ್ವಲ್ಪ ತಡೆದು ' ನಿಜ ಹೇಳಬೇಕೆಂದರೆ ಇಲ್ಲಿಯ ಭಾಷೆ ಕನ್ನಡವೇ ಆಗಿತ್ತು . ಮರಾಠಿ ೧೨ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬರುವ ಮೊದಲು, ಸಂತ ಜ್ಞಾನೇಶ್ವರರ ಕಾಲಕ್ಕೆ ಜನ ವೈದಿಕ ಸಂಸ್ಕೃತಿಯ ಪುನರುಜ್ಜೀವನಕಾಲಕ್ಕೆ ಕನ್ನಡವನ್ನು ಜೈನರ ಭಾಷೆಯೆಂದು ಕೈಬಿಟ್ಟರು. ಇಷ್ಟಕ್ಕೂ ಜನರಿಗೆ ಭಾಷೆಗಿಂತ ಧರ್ಮ ಮುಖ್ಯ ' ಎಂದು ಹೇಳಿದೆ . ' ಇಲ್ಲಿ ಯೂನಿವರ್ಸಿಟಿಯ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಹಾವನೂರರು ತಮಗೆ ಪರಿಚಯ ಎಂದು ಹೇಳಿದರು. ಹಾಗೆಯೇ ' ಪೋರ್ತುಗೀಸರ ಕಲಕ್ಕೆ ಮುಂಬೈಯಲ್ಲಿ ಕೊಂಕಣಿ, ಇಂಗ್ಲೀಷ , ಪೋರ್ಚುಗೀಸ್ , ಕನ್ನಡ ಭಾಷೆಗಳು ಅಧಿಕೃತ ಭಾಷೆಗಳಾಗಿದ್ದವು . ಜನರು ತಮ್ಮ ಮನವಿಗಳನ್ನು ಈ ಭಾಷೆಗಳಲ್ಲಿ ಸಲ್ಲಿಸಬೇಕಾಗಿತ್ತು. ' ಎಂದೂ ಹೇಳಿದೆ. ಎಲ್ಲ ಕಾಲಕಾಲಕ್ಕೆ ಬದಲಾಗುತ್ತ ಇರುತ್ತದೆ ಎಂದೂ ಟಿಪ್ಪಣಿ ಸೇರಿಸಿದೆ. ಅಷ್ಟರಲ್ಲಿ ಅವರು ಇಳಿಯಬೇಕಾದ ಸ್ಥಳ ಬಂದಿತು . ಇಳಿದು ಹೋದರು.
ಆಮೇಲೆ ನೆನಪಾಯಿತು. ಮರಾಠಿ ಭಾಷೆಯ ತಳಹದಿ ದ್ರಾವಿಡ ಅಂದರೆ ಕನ್ನಡವೇ ಆಗಿದೆ. ಕ್ರಿ.ಶ. ೫೦೦-೧೫೦೦ ಅವಧಿಯಲ್ಲಿ ಇಂದಿನ ಮಹಾರಾಷ್ಟ್ರವನ್ನು ಕನ್ನಡ ಅರಸರು ಆಳುತ್ತಿದ್ದರು. ಕನ್ನಡದ ಹೆಚ್ಚು ಶಾಸನಗಳು ಸಿಕ್ಕಿರುವದು ಮಹಾರಾಷ್ಟ್ರದಲ್ಲಿಯೇ .ಮಹಾರಾಷ್ಟ್ರದಲ್ಲಿ ಸಿಕ್ಕಿರುವ ೨೦೦೦ ಶಾಸನಗಳಲ್ಲಿ , ೧೭೫ ಮಾತ್ರ ಮರಾಠಿಯವು . ಇವಷ್ಟು ಹೇಳದೆ ಉಳಿದ ಮುಖ್ಯ ವಿಷಯಗಳು.
ಇಲ್ಲಿ ಇದನ್ನೆಲ್ಲ ಏಕೆ ಬರೆದಿದ್ದೇನೆಂದರೆ ಸಂಪದ ಓದುಗರಿಗೂ ಈ ವಿಷಯಗಳು ಗೊತ್ತಿರಲಿಕ್ಕಿಲ್ಲ , ಅವರಿಗೂ ಕನ್ನಡದ ಭವ್ಯ ಇತಿಹಾಸದ ಅರಿವಾಗಲಿ. ಇಂತಹ ಅರಿವಿನಿಂದ ಹೆಮ್ಮೆ ಮೂಡಲಿ . ಕನ್ನಡದ ಪ್ರಚಾರ ಹೆಚ್ಚು ಹೆಚ್ಚು ಆಗಲಿ ಎಂಬ ಆಶಯವೇ ಆಗಿದೆ.

- Login or register to post comments
- 1293 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಅ: ಮುಂಬೈಯಲ್ಲಿ ಕನ್ನಡದ ಪ್ರಚಾರ!
ಹೀಗೆ ವಾಕ್ಯಗಳನ್ನು ಎತ್ತಿಕೊಡುವದಕ್ಕೆ "ಉದ್ಧರಿಸು" ಎನ್ನುವರು. ಅಲ್ಲಿ "ಧ"ಒತ್ತು ಇರುದು.
ನಿಮ್ಮ ಲೇಖನ ಮತ್ತು ಭಾಷಾಶೈಲಿ ಬಹಳ ಚೆನ್ನಾಗಿದೆ.
ಶ್ರೀಕಾಂತರಿಗೆ ಧನ್ಯವಾದಗಳು..
ಇಲ್ಲಿ ಗಮನಿಸಿ...
ನೃಪತುಂಗನ "ಕವಿರಾಜಮಾರ್ಗ"ದಲ್ಲಿ ಕನ್ನಡನಾಡು ಗೋದಾವರಿಯಿಂದ ಕಾವೇರಿಯವರೆಗೆ ವಿಸ್ತರಿಸಿತ್ತು ಎಂದು ಹೇಳಿದೆ. ಅಂದರೆ ಇಂದಿನ ವಿದರ್ಭಪ್ರದೇಶದ ವರೆಗೆ.
ಆಮೇಲೆ ಕೃಷ್ಣದೇವರಾಯನ ಕಾಲದಲ್ಲಿ ಅದು ಭೀಮೆ/ಕೃಷ್ಣೆಯಿಂದ ಕಾವೇರಿವರೆಗಿತ್ತು.
ಒಡೆಯರಕಾಲದಲ್ಲಿ ತುಂಗೆಯಿಂದ ಕಾವೇರಿವರೆಗಿತ್ತು.
ಈಗ ಮತ್ತೆ ಭೀಮೆ/ಕೃಷ್ಣೆಯಿಂದ ಕಾವೇರಿವರೆಗಿದೆ.
ಪಯಸ್ವಿನಿ
ಮಹೇಶ್ ಅವರೆ,ಭಾರತದ ಈ ಭೂಪಟ ಎಲ್ಲಿ ಸಿಕ್ಕಿತು.ಹೆಚ್ಚಾಗಿ ಕರ್ನಾಟಕದ ನಕ್ಷೆಯಲ್ಲು ಪಯಸ್ವಿನಿ ನದಿಯನ್ನು ನಾವು ಕಾಣುವುದಿಲ್ಲ.
.ಕರ್ನಾಟಕದ ಮುಖ್ಯ ನದಿಗಳ ಬಗ್ಗೆ ಮಾತನಾಡುವಾಗ ದಕ್ಷಿಣ ಕನ್ನಡ ಜಿಲ್ಲೆಯನ್ನು ನೇತ್ರಾವತಿ ಮತ್ತು ಕುಮಾರಧಾರ ನದಿಗಳು ಪ್ರತಿನಿಧಿಸುತ್ತವೆ.
ಪಯಸ್ವಿನಿಯು ಕೊಡಗು ಜಿಲ್ಲೆಯ ಮದೆನಾಡು ಎಂಬಲ್ಲಿ ಹುಟ್ಟಿ ,(ನಮ್ಮ) ಸುಳ್ಯದ ಮೂಲಕ ಹರಿದು , ಅರಬ್ಬೀ ಸಮುದ್ರವನ್ನು ಕೇರಳ ರಾಜ್ಯದಲ್ಲಿ ಸೇರುತ್ತದೆ.
ಉ:ಪಯಸ್ವಿನಿ
ಚಿತ್ರವು ಇಲ್ಲಿ ದೊರೆಯಿತು....
http://www.indianmirror.com/geography/rivers.jpg
ಪಯಸ್ವಿನಿ ನದಿಯ ಮಾಹಿತಿಗಾಗಿ ಧನ್ಯವಾದ.. ನನಗೆ ತಿಳಿದಿರಲಿಲ್ಲ.
Re: ಪಯಸ್ವಿನಿ
ಇದನ್ನು ಕೇರಳದಲ್ಲಿ ಚಂದ್ರಗಿರಿ ಎಂದು ಕರೆಯುತ್ತಾರೆ.
ಅಂದ ಹಾಗೆ ನಾನು ಸುಳ್ಯದ ಸಮೀಪದವನು. ಸುಳ್ಯದಲ್ಲಿ 9ನೇ ತರಗತಿಯಂದ ಪಿಯುಸಿ ತನಕ ಕಲಿತಿದ್ದೆ.
ಸಿಗೋಣ,
ಪವನಜ
Re;Re:ಪಯಸ್ವಿನಿ
ಪವನಜ ಅವರೆ, 'ನುಡಿ' ಸಾಫ್ಟ್‌ವೇರ್‌ನ ವಿವಾದದ ಸಮಯದಲ್ಲೇ ನಿಮ್ಮ ಬಗ್ಗೆ ಗೊತ್ತಾಯಿತು(ಬಹುಶಃ ಸುಮಾರು ೨ ವರ್ಷಗಳ ಹಿಂದೆ)..ನಾನು ಹುಟ್ಟಿದ್ದು,ಓದಿದ್ದು(೧ ರಿಂದ ಇಂಜಿನಿಯರಿಂಗ್) ಎಲ್ಲಾ ಸುಳ್ಯದಲ್ಲಿ.ಈಗ ಐಟಿಐ ,ಲಿಮಿಟೆಡ್,ಬೆಂಗಳೂರುನಲ್ಲಿ ಉದ್ಯೋಗದಲ್ಲಿ ಇದ್ದೇನೆ.ಸುಳ್ಯದಲ್ಲಿ ಎಲ್ಲಿ ಓದಿದ್ದು, ಎನ್.ಎಮ್.ಸಿಯಲ್ಲಾ ಅಥವಾ ಸರಕಾರಿ ಜೂನಿಯರ್ ಕಾಲೇಜ್‌ನಲ್ಲಾ?
ಇವುಗಳೆರಡರಲ್ಲೂ ನಾನು ಹಳೇ ವಿದ್ಯಾರ್ಥಿ.
Re:ಪಯಸ್ವಿನಿ
ಸರಕಾರಿ ಜ್ಯೂನಿಯರ್ ಕಾಲೇಜು. ಎನ್.ಎಂ.ಸಿ. ಪ್ರಾರಂಭವಾದುದೇ ನಾನು ಸುಳ್ಯ ಬಿಟ್ಟ ಮೇಲೆ.
ಸಿಗೋಣ,
ಪವನಜ
ಪಯಸ್ವಿನಿ..
ಸದಾ ಮತ್ತು ಪವನಜರಿಗೆ ಒಂದು ಮನವಿ!!!
ದಯೆಯಿಟ್ಟು ಎಲ್ಲರಿಗೆ ಸಂಬಂಧಿಸಿದ ವಿಷಯವನ್ನು ಇಲ್ಲಿ ಬರೆಯಿರಿ.
ಖಾಸಗಿ ಮಾತುಕತೆಗಳಿಗೆ, ಖಾಸಗಿ ಸಂದೇಶಗಳನ್ನು ಬಳಸಬಹುದಲ್ಲವೆ.................
ಇದನ್ನು ತಪ್ಪು ತಿಳಿಯಬೇಡಿರಿ...
ಉ: ಮುಂಬಯಿಯಲ್ಲಿ ಕನ್ನಡ
ಡಾ. ಶ್ರೀನಿವಾಸ ಹಾವನೂರ ಅವರು ಮುಂಬಯಿ ವಿಶ್ವವಿದ್ಯಾಲಯದಿಂದ ನಿವೃತ್ತರಾಗಿ ಸುಮಾರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಈಗ ಮಂಗಳೂರಿನಲ್ಲಿದ್ದಾರೆ. ಅವರು ಮುಂಬಯಿ ಬಿಟ್ಟು ಬೆಂಗಳೂರಿಗೆ ಬಂದಾಗ ಬೆಂಗಳೂರಿನವರಲ್ಲಿ ಕಂಡ ವಿಚಿತ್ರ ಗುಣಗಳನ್ನು ಈ ಲೇಖನದಲ್ಲಿ ದಾಖಲಿಸಿದ್ದಾರೆ.
ಪಾಪು ಅವರು ಕನ್ನಡಿಗರ ಇತಿಹಾಸದ ಬಗ್ಗೆ ಬರೆದಿರುವ ಪುಸ್ತಕ ಓದಿದ್ದೀರಾ?
ಸಿಗೋಣ,
ಪವನಜ
-----------
Vishva Kannada
Think globally, Act locally