ಶ್ರಾವ್ಯ (ಆಡಿಯೋ) - Podcasts
೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ
March 1, 2008 - 5:46pm — ಪ್ರಶಾಂತ.ಪಂಡಿತವಿಜ್ಞಾನ, ಪತ್ರಿಕಾ ಮಾಧ್ಯಮ, ಪರಿಸರ ಹೋರಾಟ, ಸೃಜನಶೀಲ ಬರವಣಿಗೆ ಹೀಗೆ ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದಂತೆ ತೋರುವ ಕಾರ್ಯಕ್ಷೇತ್ರಗಳಲ್ಲಿ ಕಳೆದ ಸುಮಾರು ಮೂರು ದಶಕಗಳಿಂದ ತೊಡಗಿಸಿಕೊಂಡಿರುವ ನಾಗೇಶ ಹೆಗಡೆ ನಮ್ಮ ನಡುವಿನ ಅಪರೂಪದ ಚಿಂತಕ. ಅವರ ಬರಹಗಳನ್ನು ಓದುತ್ತಾ ಬೆಳೆದಿರುವ ನನಗೆ ಅವರು ಕನ್ನಡದ ಸಂದರ್ಭದಲ್ಲಿ ಶಿವರಾಮ ಕಾರಂತ, ಗೌರೀಶ ಕಾಯ್ಕಿಣಿ, ಮೂರ್ತಿರಾಯರ ವೈಚಾರಿಕ ಪರಂಪರೆಯ ಮುಂದುವರಿಕೆಯಾಗಿ ಕಾಣುತ್ತಾರೆ. ಆದರೆ ಈ ಹಿರಿಯರಂತೆ ಕತೆ, ಕಾವ್ಯ, ಕಾದಂಬರಿಗಳನ್ನು ಬರೆಯದ ನಾಗೇಶ ಹೆಗಡೆ ಸಾಹಿತ್ಯದ ಎಲ್ಲಾ ಪ್ರಕಾರಗಳ ಸತ್ವವನ್ನು ಹೀರಿ ಭಾಷೆಯ ಸೊಗಡನ್ನೂ ಶಕ್ತಿಯನ್ನೂ ವೈಜ್ಞಾನಿಕ ಬರಹಗಳಲ್ಲಿ ತಂದವರು. ವೈಚಾರಿಕ ಲೇಖನ, ವೈಜ್ಞಾನಿಕ ಪ್ರಬಂಧಗಳನ್ನು ಹೀಗೂ ಬರೆಯಬಹುದು ಎಂದು ತೋರಿಸಿದವರು. ಗಂಭೀರ ವಿಷಯಗಳನ್ನು ಸರಳಗೊಳಿಸದೇ ಸರಳವಾಗಿ ಬರೆದವರು.
ಅವರ ಪ್ರಬಂಧವೊಂದು ನಮಗೆ ಹನ್ನೆರಡನೇ ತರಗತಿಯಲ್ಲಿ ಕನ್ನಡದ ಪಠ್ಯವಾಗಿತ್ತು. ಅದರಲ್ಲಿ ಚೆರ್ನೋಬಿಲ್ ಅಣು ದುರಂತ, ಭೋಪಾಲ್ ವಿಷಾನಿಲ ದುರಂತಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾ ಆಧುನಿಕ ಅಭಿವೃದ್ಧಿ ಮಾದರಿಗಳ ಸಾಧಕ ಬಾಧಕಗಳನ್ನು ಚರ್ಚಿಸಿದ್ದು ನನಗಿನ್ನೂ ಚೆನ್ನಾಗಿ ನೆನಪಿದೆ. ನಿಧಾನವಾಗಿ ಚಳುವಳಿಗಳೆಲ್ಲಾ ಕಾವು ಕಳೆದುಕೊಳ್ಳತೊಡಗಿದ್ದು, ನೋಡನೋಡುತ್ತಲೇ ಗ್ಲೋಬಲ್ ಎಕಾನಮಿ, ಡೆವಲಪ್ಮೆಂಟು ಇತ್ಯಾದಿಗಳು ನಮ್ಮನ್ನು ಆವರಿಸತೊಡಗಿದ್ದು ಶಾಪಿಂಗ್ ಸಂಸ್ಕೃತಿ ಇನ್ನಿಲ್ಲದಂತೆ ಹಬ್ಬುತ್ತಿರುವುದು, ಇವನ್ನೆಲ್ಲಾ ಹೇಗೆ ಅರ್ಥಮಾಡಿಕೊಳ್ಳುವುದು, ಹೇಗೆ ನಿಭಾಯಿಸುವುದು ಎಂದು ಗೊಂದಲಕ್ಕೊಳಗಾದಾಗಲೆಲ್ಲ ನನಗೆ ಅವರ ಅಂಕಣ ಬರಹಗಳು ಒಮ್ಮೊಮ್ಮೆ ಹೊಸದಾರಿಯನ್ನು ತೋರಿವೆ ಕೆಲವೊಮ್ಮೆ ಇನ್ನಷ್ಟು ಬೆಚ್ಚಿಬೀಳಿಸಿವೆ. ಅವರನ್ನು ಹಲವು ವರ್ಷಗಳಿಂದ ತಪ್ಪದೇ ಓದುತ್ತಾ ಬಂದಿರುವ ನಾನು ಬಹಳ ದಿನದಿಂದ ಈ ಎಲ್ಲಾ ವಿಷಯಗಳ ಬಗ್ಗೆ ಅವರೊಂದಿಗೆ ಚರ್ಚಿಸಬೇಕು ಎಂದುಕೊಳ್ಳುತ್ತಿದ್ದೆ. ಅಷ್ಟರಲ್ಲಿ ಹರಿ ಪಾಡ್ಕಾಸ್ಟಿನ ಐಡಿಯಾ ಮುಂದಿಟ್ಟರು. ಮೂರ್ನಾಲ್ಕು ತಿಂಗಳಿಂದ ಆಗ ಹೋಗೋಣ, ಈಗ ಹೋಗೋಣ ಎನ್ನುತ್ತಾ ಕೊನೆಗೂ ಜನವರಿಯ ಮೊದಲ ಭಾನುವಾರ ಮುಂಜಾನೆ ಅವರ ಹಳ್ಳಿಗೆ ಹೊರಟೇಬಿಟ್ಟೆವು. ಮಧ್ಯಾಹ್ನ ಅವರ ಮನೆ ತಲುಪಿದಾಗ ಸ್ವಾಗತಿಸಿದ್ದು ಹಕ್ಕಿಗಳ ಚಿಲಿಪಿಲಿ, ನಾಯಿಯ ಬೌಬೌ, ತಂಪಾದ ಗಾಳಿ. ನಾವು ಬೆಂಗಳೂರಿನ ಹೊರವಲಯದಲ್ಲೇ ಇದ್ದೇವೆಯೇ ಎಂದು ಆಶ್ಚರ್ಯಪಡುವಂತೆ ಇತ್ತು ಅಲ್ಲಿಯ ವಾತಾವರಣ. ಅವರ “ಮೈತ್ರಿ” ಫಾರಂನಲ್ಲಿ ಕುಳಿತು ನಾವು informal ಆಗಿ ಚರ್ಚಿಸಿದ್ದು ಇದೀಗ ನಿಮ್ಮ ಮುಂದಿದೆ. ಮುಂದೆ ಓದಿ »

- 9 ಪ್ರತಿಕ್ರಿಯೆಗಳು
- 1681 hits
- Email this page



೯ನೇ ಸಂಚಿಕೆ: ಕಥೆಗಾರ ವಿವೇಕ ಶಾನಭಾಗರೊಂದಿಗೆ - ಸಂದರ್ಶನ: ನರೇಂದ್ರ ಪೈ
January 16, 2008 - 11:52pm — narendra
ವಿವೇಕ್ ನಮ್ಮ ನಡುವಿನ ಅತ್ಯಂತ ಸೂಕ್ಷ್ಮಸಂವೇದನೆಯ ಕತೆಗಾರ, ಕಾದಂಬರಿಕಾರ. ಸೃಜನಶೀಲತೆ, ಸಾಹಿತ್ಯ ಸೃಷ್ಟಿಯ ಪ್ರಕ್ರಿಯೆ, ನಂತರ ಅದರ ಪ್ರಕಟಣೆ, ಮನ್ನಣೆ-ವಿಮರ್ಶೆಗಳ ಅಗತ್ಯ ಮತ್ತು ಮಿತಿಗಳು ಎಲ್ಲದರ ಕುರಿತು ಸ್ಪಷ್ಟವಾದ ಮತ್ತು ಖಚಿತವಾದ ನಿಲುವು ಉಳ್ಳವರು. ಅವರ ಮಾತುಗಳನ್ನು ಆಗಾಗ ಕೇಳುವ ಸಣ್ಣ ಪುಟ್ಟ ಅವಕಾಶ ಸಿಕ್ಕಿದ್ದ ನನಗೆ ಅವರಲ್ಲಿನ ಅನೇಕ ವಿಚಾರಗಳು ಸದ್ಯ ಬರೆಯುತ್ತಿರುವವರಿಗೆ, ಬರೆಯಬೇಕೆಂದಿರುವವರಿಗೆ ಅತ್ಯಂತ ಮಹತ್ವದವು ಎನಿಸುತ್ತಿತ್ತು. ನನ್ನ ಒಂದು ಕತೆಯನ್ನು ಓದಿ ಅವರು ಸುಮಾರು ಅರ್ಧ ಗಂಟೆಯಷ್ಟು ಕಾಲ ಫೋನಿನಲ್ಲೇ ನನಗೆ ನೀಡಿದ ಮಾರ್ಗದರ್ಶನ ನಾನು ಎಂದೂ ಮರೆಯಲಾರದ್ದು. ಮುಂದೆ ಅವರ ಬಳಿಯೇ ಕೇಳಿದ್ದೆ, ಅಸ್ವೀಕೃತವಾದ ಎಲ್ಲ ಕತೆಗಳ ಲೇಖಕರಿಗೂ ಈ ರೀತಿ ಮಾರ್ಗದರ್ಶನ ನೀಡುವ ಕ್ರಮವೇನಾದರೂ ಇದೆಯ ನಿಮ್ಮಲ್ಲಿ ಅಂತ. ಇಲ್ಲ ಮಹರಾಯ ಎಂದು ನಕ್ಕಿದ್ದರು ವಿವೇಕ್! ಆದರೆ ಅವರ ಮಾತುಗಳು ನನ್ನ ಅನೇಕ ಸಹಬರಹಗಾರರನ್ನು ತಲುಪಬೇಕು ಎಂದು ತೀವೃವಾಗಿ ಅನಿಸುತ್ತಲೇ ಇತ್ತು. ವಿವೇಕರ ಮಾತುಗಳನ್ನು ಕೇಳುತ್ತಿದ್ದರೆ ಗಹನವೂ, ನಮಗೆ ಸುಲಭಕ್ಕೆ ನಿಲುಕದ್ದೂ ಅನಿಸಿದ ಸಂಗತಿಗಳನ್ನೆಲ್ಲ ಇವರು ಇಷ್ಟು ಸರಳವಾಗಿ ಸ್ಪಷ್ಟವಾಗಿ ತೆರೆದಿಡುತ್ತಾರಲ್ಲ ಅನಿಸದಿರದು.
ಆದರೆ ಹಾಗೆ ನೋಡಿದರೆ ವಿವೇಕ್ ಮಾತನಾಡುವುದೇ ಕಡಿಮೆ. ತಮ್ಮ ಕೃತಿಗಳ ಬಗ್ಗೆ, ಪತ್ರಿಕೆ ದೇಶಕಾಲದ ಬಗ್ಗೆ ಅವರು ಹೇಳಿಕೊಂಡವರಲ್ಲ. ಹೀಗಿರುತ್ತ ನಾಡಿಗ್ ತಾವಾಗಿ ಸಂಪದಕ್ಕಾಗಿ ವಿವೇಕರನ್ನು ಸಂದರ್ಶಿಸುವ ಒಂದು ಯೋಜನೆ ರೂಪಿಸಿದಾಗ ನಾನು ಕೊಂಚ ಅತಿ ಉತ್ಸಾಹದಿಂದಲೇ ಈ ಅವಕಾಶವನ್ನು ನನ್ನದಾಗಿಸಿಕೊಂಡೆ! ಇದನ್ನು ಕೊನೆಗೂ ಸಾಧ್ಯವಾಗಿಸಿದ್ದು ನಾಡಿಗರ ತಾಳ್ಮೆ, ಪರಿಶ್ರಮ. ವಿವೇಕ್ ತಮ್ಮ ಒಂದು ಇಡೀ ದಿನವನ್ನು ನಮಗಾಗಿ ಮುಡಿಪಿಟ್ಟು ಸಹಕರಿಸಿದರು. ಇನ್ನೂ ಚೆನ್ನಾಗಿ ಮಾಡಬಹುದಿತ್ತು, ವಿವೇಕರಿಂದ ಪಡೆದುಕೊಳ್ಳುವುದು ಇನ್ನೂ ಇತ್ತು ಎನ್ನುವ ಅತೃಪ್ತಿಯೊಂದಿಗೇ ಇಷ್ಟು ಸಾಧ್ಯವಾದ ಬಗ್ಗೆ ಖುಶಿಯೂ ಸೇರಿದೆ. ಇನ್ನು ಇದು ನಿಮ್ಮದು... ಮುಂದೆ ಓದಿ »

- 2 ಪ್ರತಿಕ್ರಿಯೆಗಳು
- 1841 hits
- Email this page



ಜಿ.ಟಿ.ನಾರಾಯಣರಾವ್ ಸಂದರ್ಶನ (ಆಡಿಯೋ, ವಿಡಿಯೋ)
August 10, 2007 - 2:52am — ismail
ಸಂಪದ ತಂಡ ಹೊಸತೇನನ್ನಾದರೂ ಯೋಚಿಸಿದರೆ ಅದನ್ನು ಸಾಧ್ಯವಾಗಿಸುವುದಕ್ಕೆ ವಿಶ್ವವೇ ನಮ್ಮ ಪರವಾಗಿ ಸಂಚು ಹೂಡುತ್ತದೆ ಎನಿಸುತ್ತದೆ. ಕನ್ನಡ ವಿಜ್ಞಾನ ಸಾಹಿತ್ಯ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಜಿ.ಟಿ.ನಾರಾಯಣರಾವ್ ಅವರದ್ದೊಂದು ಪಾಡ್‌ಕ್ಯಾಸ್ಟ್ ಮಾಡಬೇಕು ಎಂಬ ಯೋಜನೆ ಬಹಳ ಹಳೆಯದು. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ನಡುವೆ ಹರಿಪ್ರಸಾದ್ ನಾಡಿಗರು ಪಾಡ್‌ಕ್ಯಾಸ್ಟ್ ಜತೆ ವಿಡಿಯೋ ಕೂಡಾ ಹಾಕಬಹುದು ಎನ್ನುತ್ತಿದ್ದರು. ಇದಕ್ಕೆ ಅಗತ್ಯವಿರುವ ಕ್ಯಾಮೆರಾ, ಧ್ವನಿಗ್ರಹಣ, ಆಮೇಲೆ ಸಂಕಲನವನ್ನೆಲ್ಲಾ ಯಾರು ಮಾಡುವುದು ಎಂಬುದು ನಮ್ಮೆದುರು ಇದ್ದ ದೊಡ್ಡ ಪ್ರಶ್ನೆಯಾಗಿತ್ತು.
ಗೆಳೆಯ ಅಭಯಸಿಂಹ ವೃತ್ತಿಯ ಕಾರಣಕ್ಕೆ ಬೆಂಗಳೂರಿಗೆ ವಾಸ್ತವ್ಯವನ್ನು ಬದಲಾಯಿಸಿದ್ದೇ ನನ್ನೆದುರು ಇದ್ದ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆತಿಬಿಟ್ಟಿತು. ಅದರ ಪರಿಣಾಮವಾಗಿ ಈ ವಿಡಿಯೋ ಹಾಗೂ ಪಾಡ್‌ಕ್ಯಾಸ್ಟ್ ನಿಮ್ಮ ಮುಂದಿದೆ.
ಜಿ.ಟಿ.ಎನ್. ನನಗೆ ಪುಸ್ತಕಗಳ ಮೂಲಕ ಬಾಲ್ಯದಲ್ಲೇ ಪರಿಚಿತರು. ನಿಮ್ಮಲ್ಲನೇಕರಿಗೂ ಅವರು ಹೀಗೆ ಪರಿಚಿತರಾಗಿರಬಹುದು. ಹತ್ತು ಹನ್ನೆರಡು ವರ್ಷಗಳಿಂದ ಅವರನ್ನು ವೈಯಕ್ತಿಕವಾಗಿ ಪರಿಚಯಿಸಿಕೊಳ್ಳಲೂ ಸಾಧ್ಯವಾಯಿತು. `ನುಡಿದಂತೆ ನಡೆಯುವುದು' ಎಂಬುದಕ್ಕೆ ಸಾಕ್ಷಿಯಾಗುವಂಥ ಬದುಕು ಜಿ.ಟಿ.ಎನ್. ಅವರದ್ದು. ವೈಜ್ಞಾನಿಕ ಮನೋಧರ್ಮ ಎಂಬುದು ಕೇವಲ ಅವರ ಬರೆವಣಿಗೆಗೆ ಸೀಮಿತವಾಗಿರುವ ವಿಷಯವಲ್ಲ. ಅದು ಅವರ ಬದುಕೂ ಕೂಡಾ. ಮುಂದೆ ಓದಿ »

- 10 ಪ್ರತಿಕ್ರಿಯೆಗಳು
- 3375 hits
- Email this page



Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ
December 17, 2006 - 6:24am — ismailಮುನ್ನುಡಿ:
ಒಮ್ಮೆ ಅನಂತಮೂರ್ತಿಯವರು "ಇಸ್ಮಾಯಿಲ್ ನಂತೆ ಸಂದರ್ಶನ ಬೇರೊಬ್ಬರು ಮಾಡಿದ್ದಿಲ್ಲ" ಎಂದಿದ್ದರು. ನಾವುಗಳು ನಸುನಕ್ಕು ಸುಮ್ಮನಾಗಿದ್ದೆವು. ಈಗ ಸಂಪದದ ೭ನೇ podcast ಹೊರತರುತ್ತಿರುವ ಸಮಯದಲ್ಲಿ ಪ್ರತಿ ಬಾರಿಯೂ "ಬಹಳ ಒಳ್ಳೆಯ ಪ್ರಶ್ನೆ" ಎಂದು ಶಹಬ್ಬಾಸ್ ಎನಿಸಿಕೊಳ್ಳುವ ಇಸ್ಮಾಯಿಲ್ ಬಗ್ಗೆ ಅನಂತಮೂರ್ತಿಯವರ ಆ ಮಾತು ಉತ್ಪ್ರೇಕ್ಷೆಯೆಂದನಿಸದು. ೭ನೇ ಕಂತು ಸಂಪದವನ್ನು ಸಂಪದವಾಗಿಸಿದ ಇಸ್ಮಾಯಿಲ್, ಓ ಎಲ್ ಎನ್, ಹಾಗೂ ಉಳಿದೆಲ್ಲ ಸ್ನೇಹಿತರಿಗೆ ಮುಡುಪು.ಗಮನಿಸಿ: ಈ ಸಂಚಿಕೆಯಿಂದ ಪ್ರಾರಂಭಿಸಿ ಸಂದರ್ಶನದ ಆಡಿಯೋ ogg vorbis ಫಾರ್ಮ್ಯಾಟಿನಲ್ಲಿ ಕೂಡ ಲಭ್ಯ. ಈ ಸಂದರ್ಶನದ ಲಿಖಿತ ರೂಪ ಕೂಡ ಲಭ್ಯವಿದೆ. ಬರೆಹ ರೂಪಕ್ಕೆ ಇಳಿಸಿದ್ದು. ಸುರೇಶ್ ಕೆ
- ಹರಿ ಪ್ರಸಾದ್ ನಾಡಿಗ್


ಹರಿಪ್ರಸಾದ್ ಮತ್ತೊಂದು ಪಾಡ್ ಕ್ಯಾಸ್ಟಿಂಗ್ ಕೂಡಾ ನನ್ನಿಂದಲೇ ಮಾಡಿಸಿಬಿಟ್ಟರು!
ಈ ಬಾರಿ ಅವರು ನನ್ನನ್ನು ಸ್ವಾವಲಂಬಿಯಾಗಲು ಪ್ರೇರಪಿಸಿದರು. ಈ ಬಾರಿ ಸಂದರ್ಶಕನೂ ನಾನೇ, ಧ್ವನಿಮುದ್ರಣ ತಂತ್ರಜ್ಞನೂ ನಾನೇ. ದೇವರು ದೊಡ್ಡವನನು (ಅವನಿದ್ದರೆ!). ಜತೆಗೆ ನನ್ನ ಗೆಳೆಯ ಹಾಗೂ ಉದಯವಾಣಿಯಲ್ಲಿ ನನ್ನ ಸಹೋದ್ಯೋಗಿ ಸುರೇಶ್ ಕೆ. ಇದ್ದರು. ನಮ್ಮ ಛಾಯಾಗ್ರಾಹಕ ಡಿ.ಸಿ.ನಾಗೇಶ್ ಇದ್ದರು. ಇಷ್ಟು ಸಾಲದು ಎಂಬಂತೆ ಈ ಟಿವಿ ಕನ್ನಡದಲ್ಲಿ ದುಡಿಯುತ್ತಿರುವ ನಮ್ಮ ಗೆಳೆಯರ ಬಳಗದ ಸದಸ್ಯೆ ಜ್ಯೋತಿ ಇರ್ವತ್ತೂರು ಕೂಡಾ ಜತೆಗೂಡಿದ್ದರು.
ಈ ಪಾಡ್ ಕ್ಯಾಸ್ಟಿಂಗ್ ನ ಬಗ್ಗೆ ನಾವ್ಯಾರೂ ಯೋಚಿಸಿರಲಿಲ್ಲ. ಶನಿವಾರ ಬೆಳಿಗ್ಗೆ (16-12-2006) 73ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ.ಕೆ.ಎಸ್. ನಿಸಾರ್ ಅಹಮದ್ ಅವರನ್ನು "ಉದಯವಾಣಿ"ಗಾಗಿ ಸಂದರ್ಶಿಸುವ ಉದ್ದೇಶದಿಂದ ನಾನು ಮತ್ತು ಸುರೇಶ್ ಅವರ ಮನೆಗೆ ಹೊರಟೆವು. ಪದ್ಮನಾಭ ನಗರದಲ್ಲಿರುವ ನಿಸಾರ್ ಅವರ ಮನೆಗೆ ಹೋಗುವ ಮುನ್ನ ದಾರಿ ಕೇಳಲು ಛಾಯಾಗ್ರಾಹಕ ಡಿ.ಸಿ ನಾಗೇಶ್ ಅವರಿಗೆ ಫೋನಾಯಿಸಿದರೆ ಅವರು ಇಲ್ಲೇ ಹತ್ತಿರ ಮೊದಲು ನಮ್ಮ ಮನೆಗೆ ಬನ್ನಿ ಎಂದರು. ನ್ಯಾಷನಲ್ ಕಾಲೇಜು ಫ್ಲೈ ಓವರ್ ಕೆಳಗಿರುವ ಅವನ ಮನೆಯಲ್ಲಿ ಒಳ್ಳೆಯ ಕಾಫೀ ಸಮಾರಾಧನೆಯ ಬಳಿಕೆ ಹೊಸ ಹೊಸ ಐಡಿಯಾಗಳು ಹೊಳೆಯತೊಡಗಿದವು. ಮೊದಲನೆಯದ್ದು ನಿಸಾರ್ ಅವರ ಹೊಸ ಭಂಗಿಯ ಫೋಟೋಗಳನ್ನು ತೆಗೆಸುವುದು. ಈ ಕುರಿತು ಚರ್ಚಿಸುತ್ತಿರುವಾಗಲೇ ಸಂಪದಕ್ಕೊಂದು ಪಾಡ್ ಕ್ಯಾಸ್ಟಿಂಗ್ ಯಾಕಾಗಬಾರದು ಎನಿಸಿತು. ತಕ್ಷಣ ಹರಿಪ್ರಸಾದ್ ಅವರಿಗೆ ಫೋನಾಯಿಸಿದರೆ ಅವರು ಪ್ರಸ್ತಾಪವನ್ನು ಒಪ್ಪಿದರು. ಆದರೆ "ನಾನು ನಿಮಗೆ ಲ್ಯಾಪ್ ಟಾಪ್ ಮತ್ತು ಮೈಕ್ ಕೊಡುತ್ತೇನೆ. ನನಗೆ ಸಂದರ್ಶನಕ್ಕೆ ಬರಲು ಸಾಧ್ಯವಿಲ್ಲ" ಎಂದರು. ಮುಂದೆ ಓದಿ »

- 11 ಪ್ರತಿಕ್ರಿಯೆಗಳು
- 3789 hits
- Email this page



Podcastingನ 6ನೇ ಸಂಚಿಕೆ: ಟಿ.ಎನ್. ಸೀತಾರಾಂ ಜತೆ ಸಂದರ್ಶನ
May 25, 2006 - 2:25pm — ismailಸಂಪದದ ಗೆಳೆಯರಿಗಾಗಿ ಈ ಬಾರಿ ಕನ್ನಡದ ಜನಪ್ರಿಯ, ಸೃಜನಶೀಲ ನಿರ್ದೇಶಕ ಟಿ ಎನ್ ಸೀತಾರಾಂರವರ ಸಂದರ್ಶನ. ರಂಗಭೂಮಿ ಹಿನ್ನೆಲೆಯಿಂದ ಬಂದ ಸ್ಪಷ್ಟ ರಾಜಕೀಯ ನಿಲುವುಗಳನ್ನು ಹೊಂದಿರುವ ಸೀತಾರಾಂ ಒಂದು ಸುಖೀ ಸಮಾಜದ ಕನಸನ್ನು ಹೊತ್ತವರು. ಅವರ ಈ ಆದರ್ಶವೇ ಅವರ ಕೃತಿಗಳ ಸಾಮಾಜಿಕ ಕಾಳಜಿಗಳ ಪ್ರೇರಣೆ. ರಂಗಭೂಮಿಯಲ್ಲಿ ತಮ್ಮ ಪ್ರತಿಭೆಯನ್ನು ಮೆರೆದ ಅವರು ಮಾಯಾಮೃಗ, ಮನ್ವಂತರಗಳಂಥ ಯಶಸ್ವೀ ಧಾರಾವಾಹಿಗಳಲ್ಲಿ ಕಿರುತೆರೆಗೂ ಸೀತಾರಾಂ ಶೈಲಿಯನ್ನು ಪರಿಚಿಯಿಸಿದರು. ಗಂಭೀರ ರಂಗಪ್ರಯೋಗಗಳಲ್ಲಿ ತೊಡಗಿಕೊಂಡವರು ಜನಪ್ರಿಯ ಮಾಧ್ಯಮಗಳನ್ನು ಕೈಗೆತ್ತಿಕೊಂಡಾಗ ಸೋಲುತ್ತಾರೆ ಎಂಬುದನ್ನೂ ಸೀತಾರಾಂ ಸುಳ್ಳು ಮಾಡಿದರು. ಮೊದಲೆರಡು ಧಾರಾವಾಹಿಗಳ ಯಶಸ್ಸಿನಾಚೆಗೆ ಅವರ `ಮುಕ್ತ' ಸಾಗಿದೆ. ಮೆಗಾ ಧಾರಾವಾಹಿಗಳ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿರುವ ಅವರು ಇತ್ತೀಚೆಗೆ ಎರಡು ಚಲನಚಿತ್ರಗಳನ್ನು ಪ್ರಕಟಿಸಿದ್ದಾರೆ. ಈ ಸಮಯದಲ್ಲಿ ಸಂಪದದ ಕೆಲ ಪ್ರಮುಖ ಸದಸ್ಯರು ಸೀತಾರಾಂರವರ ಸಂದರ್ಶನ ಮಾಡಬೇಕು ಎಂದು ಬಹಳ ಹಿಂದೆಯೇ ಆಲೋಚಿಸಿದ್ದರು, ಆದರೆ ಸಾಧ್ಯವಾಗಿದ್ದು ಹಲವು ತಿಂಗಳುಗಳ ನಂತರವೇ.
ಪ್ರತೀ ಬಾರಿಯೂ ಸಂದರ್ಶನ ನಡೆಸಲು ಹೋಗುವವರಷ್ಟೇ ಪ್ರಶ್ನೆಗಳನ್ನು ಸಿದ್ಧ ಪಡಿಸಿಕೊಂಡು ಕೇಳುತ್ತಿದ್ದರು. ಈ ಬಾರಿ ಸಂಪದ ಬಳಗದ ಸದಸ್ಯರಿಂದ ಪ್ರಶ್ನೆಗಳನ್ನು ಆಹ್ವಾನಿಸಿ ಅವುಗಳಿಗೂ ಉತ್ತರ ಪಡೆಯಲು ಪ್ರಯತ್ನಿಸಿದ್ದೇವೆ. ಸಮಯದ ಅಭಾವ ಮುಂತಾದ ಕಾರಣಗಳಿಂದ ನಿರೀಕ್ಷಿತ ಮಟ್ಟದಲ್ಲಿ ಈ ಪ್ರಯತ್ನ ಯಶಸ್ವಿಯಾಗಲಿಲ್ಲ. ಆದರೆ ನಮ್ಮ ಮಿತಿಯೊಳಗೆ ಒಳ್ಳೆಯದನ್ನು ನೀಡುವ ನಮ್ಮ ಪ್ರಯತ್ನ ವಿಫಲವಾಗಿಲ್ಲ ಎನಿಸುತ್ತಿದೆ. ಇದೆಷ್ಟರ ಮಟ್ಟಿಗೆ ನಿಜ ಎಂಬುದನ್ನು ನೀವೇ ತಿಳಿಸಬೇಕು.
ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ (೧೯ MB). ಸಂದರ್ಶನದ ದಿನ ತೆಗೆದ ಕೆಲವು ಫೋಟೋಗಳು:

- 13 ಪ್ರತಿಕ್ರಿಯೆಗಳು
- 5048 hits
- Email this page







Subscribe to the Podcasts.
RSS: