H.S.R.Raghavendra Rao (ಲೇಖನಗಳು)
ಪದವಿ ತರಗತಿಗಳಲ್ಲಿ ಕನ್ನಡ ಶಿಕ್ಶಣ
January 30, 2007 - 11:28pm — H.S.R.Raghavend...ಕನ್ನಡವನ್ನು ಕಲಿತವರಿಗೆ, ಕಲಿಸುವವರಿಗೆ ಮತ್ತು ಇತರ ಆಸಕ್ತರಾದವರಿಗೆಂದು ಈ ಲೇಖನವನ್ನು ಇಲ್ಲಿ ಹಾಕಿದ್ದೇನೆ. ಪ್ರತಿಕ್ರಿಯೆಗಳಿಗೆ ಸ್ವಾಗತ.
ಪದವಿ ತರಗತಿಗಳಲ್ಲಿ ಭಾಷಾಶಿಕ್ಷಣ: ಕನ್ನಡ
ಈ ಬರವಣಿಗೆಯು , ಈ ಪುಸ್ತಕದಲ್ಲಿ ಇದೇ ವಿಷಯವನ್ನು ಕುರಿತಂತೆ ಬಂದಿರುವ ಇತರ ಲೇಖನಗಳ ಜೊತೆಯಲ್ಲಿ ಇರುತ್ತದೆ ಮತ್ತು ಅವುಗಳಿಗಿಂತ ಬೇರೆಯಾಗಿರುತ್ತದೆ. ಏಕೆಂದರೆ , ಕರ್ನಾಟಕದಲ್ಲಿಪದವಿ ತರಗತಿಗಳಲ್ಲಿ ಕನ್ನಡವನ್ನು ಓದುವ ಎಲ್ಲ ಹುಡುಗ-ಹುಡುಗಿಯರಿಗೂ ಕನ್ನಡವನ್ನುಮಾತನಾಡಲು ಬರುತ್ತದೆ. ಓದಲು ಮತ್ತು ಬರೆಯಲು ತಕ್ಕ ಮಟ್ಟಿಗೆ ಬರುತ್ತದೆ. ಆದರೆ , ಪಠ್ಯಪುಸ್ತಕಗಳನ್ನು ಬಿಟ್ಟರೆ , ಬೇರೆ ಏನನ್ನಾದರೂ ಅವರು ಓದುತ್ತಾರೆಯೇ , ಬರೆಯುತ್ತಾರೆಯೇ ? ಏನನ್ನು ಓದುತ್ತಾರೆ/ಬರೆಯುತ್ತಾರೆ ಎಂಬ ಪ್ರಶ್ನೆಗಳಿಗೆ ಸಂತೋಷಕರವಾದ ಉತ್ತರ ಸಿಕ್ಕುವುದಿಲ್ಲ. ನಮ್ಮ ಕಲಿಸುವಿಕೆಯು , ಭಾಷೆಯನ್ನು ಬಳಸುವ ಶಕ್ತಿಯನ್ನು ಮತ್ತು ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸದೆ ಇದ್ದರೆ , ಅಥವಾಎಲ್ಲೋ ಅಲ್ಪ-ಸ್ವಲ್ಪ ಬೆಳೆಸಿದರೆ ನಮ್ಮ ಕೆಲಸದಿಂದ ಏನು ಪ್ರಯೋಜನ ಎನ್ನುವ ಪ್ರಶ್ನೆಯುನನ್ನನ್ನು ಮೂವತ್ತಾರು ವರ್ಷಗಳಿಂದಲೂ ಕಾಡುತ್ತಿದೆ. ಇದಕ್ಕೆ ಉತ್ತರವನ್ನು ಹುಡುಕುವ , ಪರಿಹಾರಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ನಾವೆಲ್ಲರೂ ಒಟ್ಟಾಗಿ ಮಾಡಬೇಕು. ಈ ದಾರಿಯಲ್ಲಿ ಈ ಲೇಖನವು ಒಂದು ಪುಟ್ಟ ಹೆಜ್ಜೆ.
ಕಳೆದ ಮೂವತ್ತು ನಲವತ್ತು ವರ್ಷಗಳಲ್ಲಿ ನಮ್ಮ ಕನ್ನಡ ತರಗತಿಗಳ ಸ್ವರೂಪವು ಬದಲಾಗಿದೆ. ಅಲ್ಲಿ ಕಲಿಯಲೆಂದು ಬರುತ್ತಿರುವವರು , ನಮ್ಮ ಸಮಾಜದ ಬೇರೆ , ಬೇರೆಜಾತಿಗಳಿಗೆ ಸೇರಿದವರು. ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿ ಮಾತನಾಡುವ ಬೇರೆ ಬೇರೆಕನ್ನಡವನ್ನು ಬಳಸುವವರು. ಓದುಬರಹದ ಅವಕಾಶವನ್ನೇ ಪಡೆಯದ ಕುಟುಂಬಗಳಿಂದ ಬಂದವರು.ಹೆಣ್ಣುಮಕ್ಕಳು , ಹಳ್ಳಿಗಳಿಂದ ಬಂದವರು ಬಹಳ ಜನ ಇದ್ದಾರೆ. ಇವರೆಲ್ಲರಿಗೂ ಶಾಲೆ-ಕಾಲೇಜುಗಳ ಮೆಟ್ಟಿಲು ಹತ್ತಿದ ಕೂಡಲೇ ಒಂದು ಸಮಸ್ಯೆಯು ಕಾಡುತ್ತದೆ. ತಾವು ಮನೆಯಲ್ಲಿ , ಬೀದಿಯಲ್ಲಿ ಬಳಸುವ ಕನ್ನಡಕ್ಕೂ ಇಲ್ಲಿ ಓದಬೇಕಾದ-ಬರೆಯಬೇಕಾದ ಕನ್ನಡಕ್ಕೂ ಬಹಳ ಅಂತರವಿದೆ ಎನ್ನುವುದು ಸಮಸ್ಯೆಯ ಮೊದಲ ಭಾಗ. ತಮ್ಮ ಕನ್ನಡ ಸರಿಯಲ್ಲ , ಪುಸ್ತಕಗಳಲ್ಲಿ ಇರುವ ಶಿಷ್ಟ ಕನ್ನಡ ಮಾತ್ರ ಸರಿ ಎನ್ನುವ ಉಪದೇಶವು ಎರಡನೆಯ ಭಾಗ. ಇದರಿಂದ ಅವರಲ್ಲಿ ಕೀಳರಿಮೆ ಮೂಡುತ್ತದೆ. ಮಾತನಾಡುವುದು , ಬರೆಯುವುದು ಬೇಡ ಎನ್ನಿಸಿಬಿಡುತ್ತದೆ. ಹೀಗಾಗಿ , ಮೊದಲೇಅರೆಮೂಕರಾದವರು ಸಂಪೂರ್ಣವಾಗಿ ಮೂಕರಾಗುತ್ತಾರೆ. ಹೇಗೋ ಪರೀಕ್ಷೆಯಲ್ಲಿ ಪಾಸಾಗಿ ಈಓದು-ಬರೆಹಗಳಿಗೆ ಶರಣು ಹೊಡೆಯೋಣ ಎಂಬ ತೀರ್ಮಾನಕ್ಕೆ ಬರುತ್ತಾರೆ. ಹೀಗೆ , ಸಮಾನತೆಯನ್ನು ತರಬೇಕಾದ ಶಿಕ್ಷಣವು ವ್ಯತ್ಯಾಸ ಹಾಗೂ ಭೇದ ಭಾವಗಳಿಗೆ ಕಾರಣವಾಗುತ್ತದೆ. ಮುಂದೆ ಓದಿ »

ಕರ್ನಾಟಕ Vs ಕನ್ನಡ ( Unicode Version )
January 20, 2007 - 12:12am — H.S.R.Raghavend...ಕರ್ನಾಟಕ Vs ಕನ್ನಡ : ಕೆಲವು ಅನುಮಾನಗಳು ಮುಂದೆ ಓದಿ »

- Login or register to post comments
- 408 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಕರ್ನಾಟಕ Vs ಕನ್ನಡ : ಕೆಲವು ಅನುಮಾನಗಳು
January 18, 2007 - 9:16pm — H.S.R.Raghavend...ಈ ಬರವಣಿಗೆಯ ತಲೆಬರೆಹವು ಅನೇಕ ಓದುಗರ ಹುಬ್ಬುಗಳು ಮೇಲೇರುವಂತೆ ಮಾಡುತ್ತದೆ. ಕರ್ನಾಟಕ ಮತ್ತು ಕನ್ನಡಗಳು ಒಂದೇ ಎಂದು ತಿಳಿದವರಿಗೆ, ಇದು ಅಚ್ಚರಿಯನ್ನು ಉಂಟುಮಾಡುತ್ತದೆ. ಆದರೆ ನಮ್ಮ ಈ ನಾಡಿನ ನಿಜವಾದ ಸ್ಥಿತಿಗತಿಗಳನ್ನು ಗಮನಿಸಿದಾಗ ಅಂತಹ ಆಶ್ಚರ್ಯಕ್ಕೆ ಕಾರಣವಿರುವಂತೆ ತೋರುವುದಿಲ್ಲ. ಕರ್ನಾಟಕ ಎನ್ನುವುದು ಒಂದು ಭೌಗೋಳಿಕ ಪ್ರದೇಶ. ಇಲ್ಲಿನ ಬಹುಪಾಲು ಜನರು ಬಳಸುವ ಭಾಷೆಯು ಕನ್ನಡ. ಆದರೆ, ಇಲ್ಲಿ ಬೇರೆ ಬೇರೆ ಭಾಷೆಗಳನ್ನು ಮಾತನಾಡುವ ಜನರೂ ಇದ್ದಾರೆ. ಅಲ್ಲದೆ, ಕನ್ನಡಕ್ಕಿಂತ ಹೆಚ್ಚಾಗಿ ಬೇರೆ ಬೇರೆ ಭಾಷೆಗಳನ್ನು ಉಪಯೋಗಿಸುವ ಕೆಲವು ಪ್ರದೇಶಗಳೂ ಇಲ್ಲಿವೆ. ಇವುಗಳಲ್ಲಿ ಕೆಲವು ಭಾಷೆಗಳಿಗೆ, ಕರ್ನಾಟಕದ ಹೊರಗೆ ಯಾವ ಅಸ್ತಿತ್ವವೂ ಇಲ್ಲ. ತುಳು, ಕೊಡಗು, ಸೋಲಿಗ ಮುಂತಾದ ಹಲವು ಭಾಷೆಗಳು ಈ ಗುಂಪಿಗೆ ಸೇರುತ್ತವೆ. ಉರ್ದು, ತಮಿಳು, ಕೊಂಕಣಿ, ತೆಲುಗು ಮುಂತಾದ ಭಾಷೆಗಳಿಗೆ ಅಂತಹ ಅಸ್ತಿತ್ವವಿದೆ. ಆದರೆ, ಇಲ್ಲಿ ಆ ಭಾಷೆಗಳನ್ನು ಬಳಸುವವರಿಗೆ, ತಮ್ಮ ಮೂಲ ರಾಜ್ಯಗಳ ನೊಕಟ ಸಂಪರ್ಕವೇನೂ ಇಲ್ಲ. ಅವರಲ್ಲಿ ಬಹುಪಾಲು ಜನರು, ತಲೆಮಾರುಗಳಿಂದ ಕರ್ನಾಟಕದಲ್ಲಿಯೇ ಇರುವವರು. ಅವರು ನೂರಕ್ಕೆ ನೂರರಷ್ಟು ಕರ್ನಾಟಕದ ಪ್ರಜೆಗಳು. ತಾಯಿನುಡಿಯ ಅಗತ್ಯದ ಬಗ್ಗೆ ಇಷ್ಟೆಲ್ಲ ಮಾತನಾಡುವ ನಮಗೆ, ಅವರ ತಾಯಿನುಡಿಗಳನ್ನು ಕಾಪಾಡುವ ಹೊಣೆಗಾರಿಕೆಯೂ ಇದೆ. ನಾವು ಇಂಗ್ಲಿಷ್, ಹಿಂದಿ, ಸಂಸ್ಕೃತ ಮುಂತಾದ ಭಾಷೆಗಳನ್ನು ಎದುರಿಸುವಾಗ, ಮಾತೃಭಾಷೆಯೆಂಬ ಆಯುಧವನ್ನು ಬಳಸಿದರೆ, ನಮ್ಮೊಳಗೇ ಇರುವ ಇತರ ಭಾಷೆಗಳ ಪ್ರಶ್ನೆ ಬಂದಾಗ ಪ್ರಾದೇಶಿಕ ಭಾಷೆಯ ಪರವಾದ ವಾದವನ್ನು ಮಂಡಿಸುತ್ತೇವೆ. ಕರ್ನಾಟಕದಲ್ಲಿಯೇ ಇರುವ ಅನ್ಯ ಮಾತೃಭಾಷಿಕರ ಬಗ್ಗೆ ಹೆಚ್ಚಿನ ಕಾಳಜಿ ತೋರಿಸುವುದಿಲ್ಲ. ಈಚಿನ ದಿನಗಳಲ್ಲಿ, ಈ ಅನ್ಯಭಾಷಿಕರ ಸಂಸ್ಕೃತಿ ಮತ್ತು ಕಲೆಗಳನ್ನು ನಮ್ಮದಾಗಿ ಮಾಡಿಕೊಳ್ಳುವ ಪ್ರಯತ್ನದಲ್ಲಿ ಕನ್ನಡಿಗರ ಪ್ರಧಾನ ವಾಹಿನಿಯು ಅಷ್ಟೊಂದು ಆಸಕ್ತವಾಗಿಲ್ಲ. ಮುಂದೆ ಓದಿ »

ನಾವು ಹಾಗೂ ನಮ್ಮ ಸಂಪದ
January 14, 2007 - 3:28pm — H.S.R.Raghavend...ಈ ಬರಹ ಬಹಳ ಪ್ರಸ್ತುತವೆನಿಸಿದ್ದರಿಂದ ನಿರ್ವಾಹಕರಿಂದ 'ಸೂಚನಾ ಫಲಕ' ಕ್ಕೆ ಸೇರಿಸಲ್ಪಟ್ಟಿದೆ.
ಸೂ: ದಯವಿಟ್ಟು ಮಾನ್ಯರ ಕೆಳಗಿನ ಮಾತುಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಇಲ್ಲಿ ಕಾಣುವ ಎರಡು ಪ್ರಸ್ತಾವನೆಗಳು:
೧) ವೈಯಕ್ತಿಕ ದೂಷಣೆಗಳು ಬೇಡ.
೨) ಕೋಪ-ತಾಪಗಳನ್ನು ಬಿಟ್ಟು ಸದಭಿರುಚಿಯ ಚರ್ಚೆ ನಡೆಯಲಿ.
ಎಂಬುದು ಬಹಳ ಪ್ರಸ್ತುತ.
ಆತ್ಮೀಯರೇ,
ಹಲವು ದಿನಗಳಿಂದ ಸಂಪದದಲ್ಲಿ ಬರುವ ಬರೆಹಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ನೋಡುತ್ತಿದ್ದೇನೆ. ನನ್ನ ಈ ಮುಂದಿನ ಮಾತುಗಳು ನನ್ನ ಮುಖಕ್ಕೆ ಹಿಡಿದುಕೊಂಡ ಕನ್ನಡಿಯೇ ವಿನಾ ಇತರರಿಗೆ ತೋರಿಸಿದ ದಾರಿದೀಪವಲ್ಲ. ಕೆಲವು ಬಾರಿ ಇದರಲ್ಲಿ ನನ್ನ ಮುಖದಂತೆಯೇ ನಿಮ್ಮ ಮುಖವೂ ಕಾಣಬಹುದು.
ಇಂತಹ ಸಾಮೂಹಿಕ ಪ್ರಯತ್ನಗಳಿಗೆ, ವೇದಿಕೆಗಳಿಗೆ ಎರಡು ಆಯಾಮಗಳಿರುತ್ತವೆ. ನಮ್ಮ ಅಭಿಪ್ರಾಯಗಳನ್ನು ಮಂಡಿಸುವುದು ಮತ್ತು ಅವುಗಳ ಪರವಾಗಿ ವಾದಿಸುವುದು ಒಂದು ನೆಲೆಯಾದರೆ, ಇತರರಿಂದ ಕಲಿಯುವುದು ಮತ್ತು ಆ ಮೂಲಕ ನಾವೂ ಬೆಳೆಯುವುದು ಇನ್ನೊಂದು ನೆಲೆ. ಎರಡನೆಯ ನೆಲೆಗೆ ಸರಿಯಾದ ಮಹತ್ವ ಸಿಗದಿದ್ದರೆ, ನಾವು ಚರ್ಚಾಪಟುಗಳಾಗಿ ಬಿಡುತ್ತೇವೆ. ಇಲ್ಲಿ ನಡೆಯುವ ಕೆಲವು ಚರ್ಚೆಗಳಲ್ಲಿ ಅಂತಹ `ನಾನೆ ಸರಿತನ'ವು ಕಾಣಿಸಿಕೊಂಡಿದೆಯೆಂದು ನನಗೆ ತೋರುತ್ತದೆ. ಇಲ್ಲಿ ಅನೇಕ ಪೀಳಿಗೆಗಳಿಗೆ ಸೇರಿದ ಜನರು ಇರುವುದು ನಮಗೆಲ್ಲರಿಗೂ ಕಲಿಯುವ ಅವಕಾಶ. ಕಿರಿಯರಿಂದ ಅಂತೆಯೇ ಹಿರಿಯರಿಂದ. ನಮ್ಮ ಕ್ಷೇತ್ರಕ್ಕೆ ಸೇರಿದವರಿಂದ ಅಂತೆಯೇ ಅನ್ಯ ವಲಯಗಳಿಗೆ ಸೇರಿದ ಜಾಣರಿಂದ. ಕನ್ನಡ ಭಾಷೆ ಮತ್ತು ವ್ಯಾಕರಣಗಳ ಬಗ್ಗೆ ಚರ್ಚಿಸುವ ಸಾಫ್ಟ್ ವೇರ್ ಪರಿಣಿತರನ್ನು ಓದಿದಾಗ ನನಗೆ ನಿಜವಾಗಿಯೂ ಸಂತೋಷವಾಗುತ್ತದೆ. ಮಠಗಳ ಬಗ್ಗೆಯೋ ಸುಸ್ಮಿತಾ ಸೇನ್ ಬಗ್ಗೆಯೋ ಚರ್ಚೆ ನಡೆದಾಗ ಬೆಳಕಿಗಿಂತ ಹೆಚ್ಚಾಗಿ ಬೆಂಕಿ ಹುಟ್ಟಿದಂತೆ ಕಾಣುತ್ತದೆ. ನಿಜ. ಬೆಂಕಿಯಿಲ್ಲದೆ ಬೆಳಕಿಲ್ಲ. ಆದರೆ ಇದು ನಮ್ಮ ಕೋಪ-ತಾಪಗಳ ಪ್ರದರ್ಶನಕ್ಕೆ ಮೀಸಲಾದ ರಣರಂಗವಲ್ಲ. ಇಂಥ ಕಡೆ, ಕಟಕಿ, ಕಟುಮಾತು ಮತ್ತು ವೈಯಕ್ತಿಕ ಟೀಕೆಗಳು ಖಂಡಿತವಾಗಿಯೂ ಅನಗತ್ಯ. ಇಲ್ಲಿ ನಾವೆಲ್ಲರೂ ಬೆಳೆಯೋಣ, ಬದಲಾಗೋಣ. ಯಾರಿಗಾದರೂ ಇದು ಅನಗತ್ಯವಾದ ಉಪದೇಶವೆನಿಸಿದರೆ, ದಯವಿಟ್ಟು ಕ್ಷಮಿಸಿ.


RSS: