ಅಚ್ಚಳಿಯದ ಪ್ರಭಾವ ಬೀರಿದ ಅಧ್ಯಾಪಕರು

4.583335

Addoor Shivashankar Raoತೊಂಭತ್ತು ವರುಷಗಳ ನನ್ನ ಬದುಕಿನ ಹಾದಿಯಲ್ಲಿ ಹಲವರನ್ನು ಹಾದು ಬಂದಿದ್ದೇನೆ. ಅವರಲ್ಲಿ ನನ್ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದವರು ಕೆಲವೇ ಕೆಲವರು. ಅವರನ್ನು ನಾನೆಂದಿಗೂ ಮರೆಯಲಾರೆ.

ನನ್ನ ಮೇಲೆ ಪ್ರಭಾವ ಬೀರಿದ ಅಧ್ಯಾಪಕರ ಬಗ್ಗೆ ಈ ಬರಹ. ಕುಂದಾಪುರದ ಗೇಬ್ರಿಯಲ್ ಕೌಂಡ್ಸ್ ಮೊದಲಾಗಿ ನೆನಪಾಗುತ್ತಾರೆ. ಅವರೆಂದೂ ನನ್ನ ಟೀಚರ್ ಆಗಿರಲಿಲ್ಲ. ಆದರೂ ನನ್ನ ಮೇಲೆ ತೀವ್ರ ಪ್ರಭಾವ ಬೀರಿದರು. ಹಲವಾರು ವರುಷ ಕುಂದಾಪುರದ ಬೋರ್ಡ್ ಹೈಸ್ಕೂಲಿನಲ್ಲಿ ಡ್ರಾಯಿಂಗ್ ಟೀಚರ್ ಆಗಿದ್ದರು. ಕುಂದಾಪುರ ಊರಿನಲ್ಲಿ ಅವರು ಡ್ರಾಯಿಂಗ್ ಮಾಸ್ಟರ್ ಎಂದೇ ಪರಿಚಿತರು. ಅವರು ಎರಡು ತಲೆಮಾರುಗಳ ವಿದ್ಯಾರ್ಥಿಗಳಿಗೆ ಪಾಠ ಹೇಳಿದವರು. ಹಾಗಾಗಿ ಅವರ ವಿರುದ್ಧ ಹೆತ್ತವರ ಬಳಿ ವಿದ್ಯಾರ್ಥಿಗಳು ದೂರು ಕೊಟ್ಟರೆ, ಹೆತ್ತವರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಕುಂದಾಪುರದ ಎಲ್ಲರೂ, ಬಡವರಾಗಿರಲಿ, ಶ್ರೀಮಂತರಾಗಿರಲಿ, ಇವರನ್ನು ಗೌರವಿಸುತ್ತಿದ್ದರು. ಇವರ ಬಗ್ಗೆ ನಾನು ಕೇಳಿದ್ದ ಒಂದು ವಿಷಯ: ಯಾವನೇ ವಿದ್ಯಾರ್ಥಿ, ಅನಾರೋಗ್ಯ ಅಥವಾ ಬೇರೆ ಕಾರಣಕ್ಕಾಗಿ ಶಾಲೆಗೆ ಹಾಜರಾಗದಿದ್ದರೆ, ಡ್ರಾಯಿಂಗ್ ಮಾಸ್ಟರ್ ಅವನ ಮನೆಗೇ ಹೋಗಿ ಯೋಗಕ್ಷೇಮ ವಿಚಾರಿಸುತ್ತಿದ್ದರು. ಸೇವೆಯಿಂದ ನಿವೃತ್ತರಾದ ನಂತರವೂ ಡ್ರಾಯಿಂಗ್ ಮಾಸ್ಟರ್ ತಮ್ಮ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಉಳಿಸಿಕೊಂಡಿದ್ದರು - ಮುಂಬೈಯಂತಹ ದೂರದ ನಗರಗಳಿಗೆ ಹೋದವರೊಂದಿಗೂ. ಡಾ. ಕೆ. ಶಿವರಾಮ ಕಾರಂತರು ತಮ್ಮ ಆತ್ಮಕತೆಯಲ್ಲಿ ಇವರ ಬಗ್ಗೆ ಬರೆದಿದ್ದಾರೆ.


ನನ್ನ ಮೇಲೆ ಅಗಾಧ ಪ್ರಭಾವ ಬೀರಿದ ಇನ್ನೊಬ್ಬರು ಅಧ್ಯಾಪಕರು ಕೆ.ಎಲ್. ಕಾರಂತರು. ಕುಂದಾಪುರದ ಬೋರ್ಡ್ ಹೈಸ್ಕೂಲಿನಲ್ಲಿ ವಿಜ್ನಾನ ಶಿಕ್ಷಕರಾಗಿದ್ದ ಇವರು ಡಾ. ಕೆ. ಶಿವರಾಮ ಕಾರಂತರ ಅಣ್ಣ. ವಿದ್ಯಾರ್ಥಿಗಳಲ್ಲಿ ವೈಜ್ನಾನಿಕ ಮನೋಭಾವ ಬೆಳೆಸಲಿಕ್ಕಾಗಿ ಅವರದು ನಿರಂತರ ಪ್ರಯತ್ನ. ಅವರು ಕುಂದಾಪುರದ ರಸ್ತೆಗಳ ಬದಿಯಲ್ಲಿ ಸಾಲು ಮರಗಳನ್ನು ನೆಟ್ಟು ಬೆಳೆಸಿದವರು. ಕಿಂಗ್ ಎಡ್ವರ್ಡ್ ಮೆಮೋರಿಯಲ್ ಕ್ಲಬ್ ಮತ್ತು ಬೋರ್ಡ್ ಹೈಸ್ಕೂಲಿನಲ್ಲಿ ಗ್ರಂಥಾಲಯ ಆರಂಭಿಸಿ ನಡೆಸಿದ ಅವರ ಬಗ್ಗೆ ವಿದ್ಯಾರ್ಥಿಗಳಿಗೆ ಬಹಳ ಗೌರವ. ಅವರೂ ನನ್ನ ಗುರುಗಳಲ್ಲ. ಆದರೂ ನನಗೆ ಅವರ ಬಗ್ಗೆ ಅಪಾರ ಗೌರವ.

ಮಂಗಳೂರಿನ ಸೈಂಟ್ ಎಲೋಸಿಯಸ್ ಕಾಲೇಜಿನ ಗಣಿತದ ಪ್ರೊಫೆಸರ್ ಕೃಷ್ಣಮೂರ್ತಿ ಅವರನ್ನು ಮರೆಯುವಂತೆಯೇ ಇಲ್ಲ. ಅವರೂ ನನ್ನ ಗುರುಗಳಲ್ಲ. ಅವರಿಗೆ ತಮ್ಮ ಕಾಲೇಜಿನಲ್ಲಿ ಮಾತ್ರವಲ್ಲ, ಮಂಗಳೂರಿನ ಬುದ್ಧಿಜೀವಿಗಳ ವಲಯದಲ್ಲಿಯೂ ಬಹಳ ಮನ್ನಣೆ.

ಸುರತ್ಕಲಿನ ಎಂ. ವಾಸುದೇವ ರಾವ್ ಮತ್ತು ಕೋಟದ ವಿವೇಕ ಹೈಸ್ಕೂಲಿನ ಕೆ. ರಾಮಚಂದ್ರ ಉಡುಪ ಅವರನ್ನು ನೆನಪು ಮಾಡಿಕೊಳ್ಳಲೇ ಬೇಕು. ದಕ್ಷಿಣಕನ್ನಡದ ಅಸಾಮಾನ್ಯ ಹೆಡ್‍ಮಾಸ್ಟರುಗಳ ಸಾಲಿಗೆ ಸೇರಿದ ಇವರಿಬ್ಬರೂ "ಶಿಕ್ಷಕರ ರಾಷ್ಟ್ರ ಪ್ರಶಸ್ತಿ" ಪಡೆದವರು.

ರಘುನಾಥ ರಾವ್ ಎಂಬ ಅಸಾಮಾನ್ಯ ಹೆಡ್‍ಮಾಸ್ಟರರಿಗೆ ಸಂಬಂಧಿಸಿದ ಘಟನೆಯೊಂದನ್ನು ನಾನಿಲ್ಲಿ ಬರೆಯಲೇ ಬೇಕು. (ಅವರು ಕುಂದಾಪುರದ ಬೋರ್ಡ್ ಹೈಸ್ಕೂಲಿನ ಹೆಡ್‍ಮಾಸ್ಟರ್ ಆಗಿದ್ದವರು.) ಅದು ನಾನೊಮ್ಮೆ ಮಂಗಳೂರು ರೈಲು ನಿಲ್ದಾಣಕ್ಕೆ ಹೋಗಿದ್ದಾಗ ನಡೆದ ಘಟನೆ. ಆ ಸಂದರ್ಭದಲ್ಲಿ ವೈಸರಾಯರ ಎಕ್ಸಿಕ್ಯೂಟಿವ್ ಕೌನ್ಸಿಲಿನಲ್ಲಿ ರೈಲ್ವೇಯ ಆರ್ಥಿಕ ಆಯುಕ್ತರಾಗಿದ್ದ ಪಣಂಬೂರು ರಾಘವೇಂದ್ರ ರಾವ್ ಅವರು ರೈಲ್ವೇ ನಿಲ್ದಾಣಕ್ಕೆ ಬಂದಿದ್ದರು. ಪ್ಲಾಟ್‍ಫಾರಂನಲ್ಲಿ ನಿಂತಿದ್ದ ಅವರನ್ನು ಹಲವರು ಸುತ್ತುವರಿದಿದ್ದರು. ಮುದುಕರೊಬ್ಬರು ರಾಘವೇಂದ್ರ ರಾಯರ ಹತ್ತಿರ ಹೋಗಲು ಪ್ರಯತ್ನಿಸುತ್ತಿದ್ದರೆ, ಅಧಿಕಾರಿಗಳು ಅವರನ್ನು ತಡೆಯುತ್ತಿದ್ದರು. ಅದು ಹೇಗೋ ಮಾಡಿ ಆ ಮುದುಕರು ಜನಸಂದಣಿಯ ನಡುವೆ ಒಳಬಂದು ರಾಘವೇಂದ್ರ ರಾಯರನ್ನು ಹೆಸರು ಹಿಡಿದು ಕರೆದರು. ಕೋಟು ತೊಟ್ಟು ಶುಭ್ರವಸನಧಾರಿಗಳಾಗಿದ್ದ ಆ ಗಣ್ಯವ್ಯಕ್ತಿ ತತ್‍ಕ್ಷಣವೇ ಫ್ಲಾಟ್‍ಫಾರಂನ ನೆಲದಲ್ಲಿಯೇ ಆ ಮುದುಕರ ಪಾದಗಳಿಗೆರಗಿ ನಮಸ್ಕರಿಸಿದರು. ಅಲ್ಲಿ ನೆರೆದಿದ್ದ ಎಲ್ಲರಿಗೂ ನನಗೂ ಅಚ್ಚರಿ. ಅ ಮುದುಕರು ಬೇರಾರೂ ಅಲ್ಲ, ಅವರೇ ರಘುನಾಥ ರಾವ್. ಅವರು ರಾಘವೇಂದ್ರರಾಯರ ಶಾಲಾದಿನಗಳ ಗುರುಗಳು. ವಿದ್ಯಾರ್ಥಿಯು ತನ್ನ ವೃತ್ತಿಯಲ್ಲಿ ಎಷ್ಟೇ ಉನ್ನತ ಹಂತಕ್ಕೆ ಏರಿದರೂ, ಒಳ್ಳೆಯ ಗುರುಗಳು ಹೇಗೆ ವಿದ್ಯಾರ್ಥಿಯ ಗೌರವಕ್ಕೆ ಪಾತ್ರರಾಗುತ್ತಾರೆ ಎಂಬುದಕ್ಕೆ ಈ ಘಟನೆ ಒಂದು ನಿದರ್ಶನ. ಗುರುಶಿಷ್ಯರ ಸಂಬಂಧಕ್ಕೆ ಇದೊಂದು ಮಾದರಿ.

ಅಧ್ಯಾಪನ ವೃತ್ತಿಯಲ್ಲಿ ಪ್ರಸಿದ್ಧರಾದ ಇನ್ನೂ ಹಲವರಿದ್ದಾರೆ. ಅವರಲ್ಲಿ ಆರ್. ಎನ್. ಭಿಡೆ ಮತ್ತು ಎಂ. ಶಿರಿ ಇವರು ತಮ್ಮ ಸಮಾಜ ಸೇವೆಗೆ ಹೆಸರಾದವರು. ಇವರಂತೆಯೇ ಹೆಸರಾದ  ಇನ್ನೊಬ್ಬರು ವಿಜ್ನಾನ ಶಿಕ್ಷಕ ಹೆಜಮಾಡಿ ಮುದ್ದಣ್ಣ  ಶೆಟ್ಟಿ. ಇಂತಹ ಇನ್ನೂ ಅನೇಕರು ಇರಬಹುದು. ಆದರೆ ನನಗೆ ಅವರ ಬಗ್ಗೆ ತಿಳಿದಿಲ್ಲ.

ಹೈಸ್ಕೂಲಿನಲ್ಲಿ ವಿಜ್ನಾನ ಶಿಕ್ಷಕರಾಗಿದ್ದ ಮುದ್ದಣ್ಣ ಶೆಟ್ಟಿ ಅನಂತರ ಸರಕಾರಿ ಸೇವೆ ಸೇರಿದರು. ನಾನು ಕೃಷಿಗೆ ತೊಡಗಿದಾಗ ಅವರು ಮಂಗಳೂರಿನ ಬಿಡಿಓ (ಬ್ಲಾಕ್ ಡೆವಲಪ್‍ಮೆಂಟ್ ಆಫೀಸರ್).   ವೈಜ್ನಾನಿಕ ಕೃಷಿಯ ವಿಷಯಗಳನ್ನು ವಿಜ್ನಾನದಂತೆಯೇ ವಿವರಿಸಿ, ಎಲ್ಲರಿಗೂ ಮನದಟ್ಟು ಮಾಡುತ್ತಿದ್ದರು. ಕೃಷಿಕರಿಗೆ ಅವು ಯಾಕೆ ಪ್ರಯೋಜನಕಾರಿ ಎಂದು ತಿಳಿಸುತ್ತಿದ್ದರು. ಭತ್ತದ ಕೃಷಿಯ ಜಪಾನೀ ಪದ್ಧತಿಯಲ್ಲಿ ಅವರು ಪರಿಣತರು. ಮಂಡಿಯ ತನಕ ಪ್ಯಾಂಟ್ ಮೇಲಕ್ಕೆ ಮಡಚಿ ಕೆಸರು ತುಂಬಿದ ಗದ್ದೆಗಿಳಿದು ಸಾಲಿನಲ್ಲಿ ಭತ್ತದ ಸಸಿ ನೆಡಲು ಸಹಕರಿಸುತ್ತಿದ್ದರು. ಹೆಸರುವಾಸಿ ಕೃಷಿಕರಾದ ಮಂಜೇಶ್ವರ ಫಿರ್ಕಾದ ಕುಣಿಬೈಲು ಸೀತಾರಾಮ ಶೆಟ್ಟಿ, ಮಣೇಲಿನ ವಿಟ್ಟಪ್ಪ ನಾಯಕ್, ನೀರುಮಾರ್ಗದ ಜೇಮ್ಸ್ ಡಿ’ಸೋಜ ಹಾಗೂ ಇತರ ಹಲವರು ಅವರ ಶಿಷ್ಯರು.

ಮಂಗಳೂರಿನ ಬಿಇಎಂ ಹೈಸ್ಕೂಲಿನ ವಿಜ್ನಾನ ಶಿಕ್ಷಕರಾಗಿದ್ದು ನಿವೃತ್ತರಾದವರು ಆರ್. ಎಂ. ಶಿರಿ. ಅನಂತರ ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನ ಸೇರಿದರು. ಇವರೂ ವೈಜ್ನಾನಿಕ ಕೃಷಿ ಪದ್ದತಿಗಳನ್ನು  ಜನಪ್ರಿಯಗೊಳಿಸಲು ಶ್ರಮಿಸಿದರು.

ಆದರ್ಶ ಅಧ್ಯಾಪಕರೆಂದು ನೆನಪಾಗುವ ಮಗದೊಬ್ಬರು ದಿವಂಗತ ಆರ್. ಎನ್. ಭಿಡೆ. ತನ್ನ ನೇರನುಡಿಗಳಿಂದಾಗಿ ಅವರು ಕೆಲವರನ್ನು ನೋಯಿಸಿರಲೂ ಬಹುದು. ಉಜಿರೆಯ "ರತ್ನಮಾನಸ" ಕೃಷಿ ವಸತಿ ಶಾಲೆಗೆ ಇವರೇ ಪ್ರೇರಣೆ. ಆದರ್ಶ ಉದ್ದೇಶಗಳೊಂದಿಗೆ ಎರಡು ಶಾಲೆಗಳನ್ನು ತನ್ನ ಜೀವಿತಾವಧಿಯಲ್ಲಿ ಆರಂಭಿಸಿದರು. ಒಂದು ಮಾದರಿ ಕೃಷಿಫಾರ್ಮ್ ಸ್ಥಾಪಿಸಬೇಕೆಂದು ತನ್ನದೆಲ್ಲವನ್ನೂ ಧಾರೆಯೆರೆದರು; ಆದರೆ ಅದು ಯಶಸ್ವಿ ಅಗಲಿಲ್ಲ ಎಂಬುದು ನೋವಿನ ಸಂಗತಿ. ದಕ್ಷಿಣಕನ್ನಡದಲ್ಲಿ ಪರಿಸರ ಆಂದೋಲನಕ್ಕೂ ಅವರೇ ಪ್ರೇರಣೆ. ನಮ್ಮ ಜಿಲ್ಲೆಯಲ್ಲಿ ತೋರಿಕೆಯ ಗಾಂಧೀವಾದಿಗಳು ಹಲವರಿದ್ದಾರೆ; ಆರ್. ಎನ್. ಭಿಡೆ ಅಂಥವರಲ್ಲ. ಅವರೊಬ್ಬ ಪರಿಪೂರ್ಣ ಗಾಂಧಿವಾದಿ ಎನ್ನಬಹುದು. ಎಲ್ಲರೂ ಮೆಚ್ಚಿ ಗೌರವಿಸುವ ವ್ಯಕ್ತಿಯಾಗಿ ಅವರು ಬದುಕಿ ಬಾಳಿದರು.

ಇವರು ಯಾರೂ ನನಗೆ ಶಾಲೆಯಲ್ಲಿ ಪಾಠ ಕಲಿಸಲಿಲ್ಲ. ಆದರೂ ಈ ಹಿರಿಯರಿಂದ ನಾನು ಜೀವನದ ಪಾಠಗಳನ್ನು ಕಲಿತೆ. ಈಗಿನ ಯುವಸಮುದಾಯದವರು ಇವರೆಲ್ಲರಿಂದ ಜೀವನದ ಮೌಲ್ಯಗಳನ್ನು ತಿಳಿಯುವಂತಾಗಲಿ ಎಂಬ ಆಶಯ ನನ್ನದು.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಒಂದು ರೀತಿ ಟೀಚರುಗಳೂ ಮತ್ತು ನಾನೂ ವಿರುದ್ಧ ಧ್ರುವಗಳು. ಹೆಚ್ಚಿನ ಅಧ್ಯಾಪಕರ ಪೂರ್ವಾಗ್ರಹ ಪೀಡಿತ ಯೋಚನೆಗಳು ನನಗೆ ಒಗ್ಗಿದ್ದೇ ಇಲ್ಲ. ಆದರೂ ಕೆಲವು ಅಧ್ಯಾಪಕರು ಇಷ್ಟವಾಗಿದ್ದಾರೆ. ಪದವಿಯಲ್ಲಿ ಎಲ್ಲರೂ ಸ್ನೇಹಿತನಂತೆಯೇ ನನ್ನ ನೋಡುತ್ತಿದ್ದರಿಂದ ಪದವಿಯ ಎಲ್ಲಾ ಅಧ್ಯಾಪಕರೂ ಅಚ್ಚುಮೆಚ್ಚು. ಬದುಕನ್ನು ಬದಲಿಸಿದ ಗುರು ಶ್ರೀಧರ ಮೂರ್ತಿ ಈಗಲೂ ಸಂಪರ್ಕದಲ್ಲಿದ್ದಾರೆ. ಮತ್ತೆ ಹೈ ಸ್ಕೂಲು ಮತ್ತು ಅದರ ಕೆಳಗೆ ಎಲ್ಲಾ ಯೋಚಿಸುವುದೇ ಬೇಡ. ಒಂದು ತಲೆಯನ್ನು ಕಂಡರೂ ನನಗಾಗದು! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹಿರಿಯರೇ, ತರಗತಿಯಲ್ಲಿ ಪಾಠ ಹೇಳಿದವರು ಮಾತ್ರವೇ ಗುರುಗಳಲ್ಲ. ಜೀವನ ಪಾಠ ಶಾಲೆಯಲ್ಲಿ ಮಾದರಿ ಯಾದವರು. ಜೀವನವನ್ನು ರೂಪಿಸಿಕೊಳ್ಳಲು ಆದರ್ಶವಾದವರೂ ನಮ್ಮ ನಿಜವಾದ ಗುರುಗಳೆಂಬ ವಿಚಾರವನ್ನು ಸೊಗಸಾಗಿ ತಿಳಿಸಿದ್ದೀರಿ. ನಿಮ್ಮ ನೆನಪಿನ ಶಕ್ತಿಗೆ ಕೋಟಿ ಕೋಟಿ ನಮನ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀ ಗುರುಭ್ಯೋ ನಮಃ. ಒಳ್ಳೆಯ ನೆನಪುಗಳು. ಶಿಕ್ಷಕರಲ್ಲಿ ಸಮಾಜಕ್ಕೆ ಒಳ್ಳೆಯ ಪ್ರಜೆಗಳನ್ನು ರೂಪಿಸುವ ಗುಣವಿರುವವರು ಗೌರವಾನ್ವಿತರಾಗಿ ಉಳಿಯುತ್ತಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

.ಶಿವಶಂಕರರ ಅಡ್ಡೂರರಿಗೆ ನಮಸ್ಕಾರಗಳು. ಪದ್ಮಾ ಮೇಡಮ್ ಅವರ ಈ ಕೆಳಗಿನ ಪ್ರತಿಕ್ರಿಯೆಗೆ ನನ್ನ ಸಹಮತವಿದೆ. <<ಜೀವನ ಪಾಠ ಶಾಲೆಯಲ್ಲಿ ಮಾದರಿ ಯಾದವರು. ಜೀವನವನ್ನು ರೂಪಿಸಿಕೊಳ್ಳಲು ಆದರ್ಶವಾದವರೂ ನಮ್ಮ ನಿಜವಾದ ಗುರುಗಳೆಂಬ ವಿಚಾರವನ್ನು ಸೊಗಸಾಗಿ ತಿಳಿಸಿದ್ದೀರಿ.>> 'ಗುರು'ವನ್ನು 'ಲಘು'ವಾಗಿ ಕಾಣುವ ಈ ಜಮಾನಕ್ಕೆ 'ಗುರುತ್ವ'ದ ಬಗ್ಗೆ ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ; ಅದಕ್ಕೆ ನನ್ನ ಅನಂತ ನಮನಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+1 ಹಿರಿಯರೇ- ತಮ್ಮ ಅನುಭವದ ಬುತ್ತಿಯಲ್ಲಿರುವ ಇನ್ನಸ್ತು ಈ ತರಹದ ಬರಹಗಳಿಗಾಗಿ ಎದುರುನೋಡುತ್ತಿರುವೆ... ಶುಭವಾಗಲಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ರಾಯರೇ, "ಕುಂದಾಪುರದ ಬೋರ್ಡ್ ಹೈಸ್ಕೂಲಿನಲ್ಲಿ ವಿಜ್ನಾನ ಶಿಕ್ಷಕರಾಗಿದ್ದ ಇವರು ಡಾ. ಕೆ. ಶಿವರಾಮ ಕಾರಂತರ ಅಣ್ಣ. ವಿದ್ಯಾರ್ಥಿಗಳಲ್ಲಿ ವೈಜ್ನಾನಿಕ ಮನೋಭಾವ ಬೆಳೆಸಲಿಕ್ಕಾಗಿ ಅವರದು ನಿರಂತರ ಪ್ರಯತ್ನ. ಅವರು ಕುಂದಾಪುರದ ರಸ್ತೆಗಳ ಬದಿಯಲ್ಲಿ ಸಾಲು ಮರಗಳನ್ನು ನೆಟ್ಟು ಬೆಳೆಸಿದವರು" ಸಾಲನ್ನು ಓದಿ ಈಗಿನ ಕುಂದಾಪುರವನ್ನ ನೆನೆದರೆ ಮನಸ್ಸಿಗೆ ಬಹಳ ಬೇಸರ ವಾಗುತ್ತದೆ. ಈಗ ಆ ಮರಗಳು ಇಲ್ಲ, ಆ ಪರಿಸರವು ಇಲ್ಲ...!! ( ಎಲ್ಲಾ ಕಾಲದ ಮಹಿಮೆ..). ಅಲ್ಲಿನ ಅನೇಕ ಹಿರಿಯರು (ನನ್ನ ಬಂಧುಗಳು ಸೇರಿ... ನಾನು ಸಹ ಅದೇ ಊರಿನವನು..) ಈಗಲೂ ತಮ್ಮ ಗುರುಗಳ ಬಗ್ಗೆ ಮೆಚ್ಚಿನ ಮಾತುಗಳನ್ನಾಡುವುದನ್ನು ನಾನು ಕೇಳಿದ್ದೇನೆ. ಅದಕ್ಕೆ ಏನೋ ಬಹು ವರುಷ ಕಾಲ ಉಡುಪಿ ಕುಂದಾಪುರ ಪರೀಕ್ಷಾ ಫಲಿತಾಂಶಗಳಲ್ಲಿ ಮುಂದಿದ್ದದ್ದು... --ವಿನಯ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹಿರಿಯರೆ ತರಗತಿಗಳಲ್ಲಿ ಪಾಠ ಮಾಡದೆ ನಮಗೆ ಕಲಿಸಿದ ಗುರುಗಳು ಹಲವರು.ಎಂದರೋ ಮಹಾನುಭಾವುಲು ಅಂದರಿಕಿ ವಂದನಮು. ನಿಮ್ಮಂತಹವರಿಂದಲೂ ನಾವು ಕಲಿಯುವುದು ಬಹಳಸ್ಟಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಿದ್ಯಾದಾನದಂಥ ಮಹತ್ಕಾರ್ಯ ಮಾಡುತ್ತಾ ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದ ಹಲವು ಶ್ರೇಷ್ಠ ಗುರುಗಳ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಹಿರಿಯರಿಗೆ ಧನ್ಯವಾದಗಳು. ಇದನ್ನು ಓದುತ್ತಲೇ ನನಗೆ ನನ್ನ ಬದುಕನ್ನು ರೂಪಿಸಿಕೊಳ್ಳಲು ನೆರವಾದ ಅನೇಕ ಗುರುಗಳು ನೆನಪಾದರು. ಅವರಲ್ಲಿ ಒಬ್ಬರಾದ‌ ನಮ್ಮ ಪದ್ಮ ಮೇಡಂ ನನ್ನಂಥ ಅದೆಷ್ಟೋ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಪ್ರತೀಕ.. ನಮ್ಮಲ್ಲಿ ಸಾಹಿತ್ಯದ ಆಸಕ್ತಿ ಕೆರಳಿಸಿ, ವಿಭಿನ್ನ ದ್ರುಷ್ಟಿಕೋನಗಳಲ್ಲಿ ಚಿಂತನೆಗೆ ಹಚ್ಚಿ, ಬದುಕಿಗೊಂದು ಸುಂದರ ರೂಪ ಕಲ್ಪಿಸಿದವರು.. ಅವರ ಅರ್ಥಗರ್ಭಿತ ಶಿಕ್ಷಣದ ಜೈತ್ರ ಯಾತ್ರೆ ಹೀಗೇ ಯಶಸ್ವಿಯಾಗಿ ಸಾಗಲಿ ಎಂಬುದೇ ಈ ವಿದ್ಯಾರ್ಥಿನಿಯ ಹಾರೈಕೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.