ಅತೀಂದ್ರಿಯ ಶಕ್ತಿಯನ್ನು ತೋರಿಸಿಕೊಟ್ಟ ಒಂದು ಪ್ರಸಂಗ.

0

ಈ ಘಟನೆ ನಡೆದದ್ದು ನಮ್ಮೂರು ಕುಂಬಳೆಯಲ್ಲಿ.

ನಾನು ಜನಿಸುವುದಕ್ಕೂ ಹಿಂದೆ.

ಸುಮಾರು ೧೯೫೫ರಲ್ಲಿ ಇರಬಹುದು.

ನನ್ನ ತಂದೆ ಕೃಷ್ಣ ಭಟ್ಟರು ಹವ್ಯಾಸಿ ಯಕ್ಷಗಾನ ಭಾಗವತರಾಗಿದ್ದರು.ಅವರು ಗೆಳೆಯರೊಂದಿಗೆ ನಮ್ಮ ಮನೆಯ ಸಮೀಪವೇ ದೇವಿಮಹಾತ್ಮೆ ಯಕ್ಷಗಾನ ಪ್ರಸಂಗವನ್ನು ಬಯಲಾಟ ರೂಪದಲ್ಲಿ ಆಡಿಸಿದರು.ಆ  ಆಟದಲ್ಲಿ ರಕ್ತಬೀಜಾಸುರನ ಸಂಹಾರಕ್ಕಾಗಿ ದೇವಿಯು ರಕ್ತೇಶ್ವರಿ ರೂಪ ತಾಳುವ ಸಂದರ್ಭ ಬರುತ್ತದೆ.ಅದಕ್ಕಾಗಿ ವೇಷಧಾರಿಯೊಬ್ಬನಿಗೆ ಭೂತಾರಾಧಕರಿಂದ ತೆಂಗಿನ ಎಳೆಯ ಗರಿಗಳನ್ನು ಕಟ್ಟಿಸಿ ವೇಷ ಮಾಡಿಸಿದರು.[ತುಳುನಾಡಿನಲ್ಲಿ ಭೂತ ನರ್ತನದಲ್ಲಿ ದೈವಗಳಿಗೆ ತಿರಿ-ಅಂದರೆ ತೆಂಗಿನ ಎಳೆಯಗರಿ- ಪೋಣಿಸಿ ಸೊಂಟಕ್ಕೆ,ಕೈಗೆ ಕಟ್ಟುತ್ತಾರೆ].

ವೇಷಭೂಷಣ   ಪೂರೈಸಿ,ರಂಗಸ್ಥಳಕ್ಕೆ ಪ್ರವೇಶ ಆದಾಗ ,ವೇಷಧಾರಿಗೆ ನಿಜವಾಗಿ ಆವೇಶ ಉಂಟಾಗಿ,ದೊಂದಿಯನ್ನು ತನ್ನ ಹೊಟ್ಟೆಗೆ ಇಟ್ಟುಕೊಂಡನು.ಸುಟ್ಟ ಗಾಯಗಳಾಗಿ,ಅವನನ್ನು ದೂರಕ್ಕೆ ಸಾಗಿಸಿ ಉಪಚರಿಸಬೇಕಾಗಿ ಬಂತು.

ಇದು ಹೇಗಾಯಿತು ಎಂದು  ನನ್ನ ತಂದೆಯವರು ವಿಚಾರ ಮಾಡುವಾಗ -ಆ ವೇಷಕ್ಕೆ ತಿರಿ ಕಟ್ಟಿ ಕೊಟ್ಟ ವ್ಯಕ್ತಿಯು-"ಸ್ವಾಮೀ,ನಾನು ಭೂತಕ್ಕೆ ತಿರಿ ಕಟ್ಟುವ ಹಾಗೆ ಸರಿಯಾಗಿ ಕಟ್ಟಿ ಕೊಟ್ಟೆ.ಯಕ್ಷಗಾನದ ವೇಷಕ್ಕಾಗಿ ಕಟ್ಟುವಾಗ ಒಂದೆರಡು ತಿರಿಗಳನ್ನು ತಪ್ಪಾಗಿ ಪೋಣಿಸಬೇಕಾಗಿತ್ತು.ಇದು ನನ್ನಿಂದಾದ ತಪ್ಪು...ಅದಕ್ಕೇ ಹೀಗಾಗಿದೆ.."ಎಂದನಂತೆ.

ತಂದೆಯವರು[ಅವರು ಈಗಿಲ್ಲ] ಆಗಾಗ ಈ ಘಟನೆಯನ್ನು ಹೇಳಿ,ಆ ಜನರ ಭಯ, ಭಕ್ತಿ,ಕಾರ್ಯಶ್ರದ್ಧೆಯನ್ನೂ ದೇವಿಯ ಮಹಿಮೆಯನ್ನೂ ಕುರಿತು ವಿವರಿಸುತ್ತಿದ್ದರು.

ಈಗ ನಾವು ವಿಚಾರವಾದ,ನಾಸ್ತಿಕತೆಯ ಬಗ್ಗೆ ತಿಳಿದವರು.

ನನಗೆ ಈ ಘಟನೆಯ ಕುರಿತು ಈಗಲೂ ಅಚ್ಚರಿಯಾಗುತ್ತದೆ.

ಆ ವ್ಯಕ್ತಿಗೆ ಆವೇಶ ಬಂದದ್ದು ಆಗ ಹಾಡಲಾದ ಏರು ಪದ್ಯಕ್ಕೊ?ಚೆಂಡೆಯ ಪೆಟ್ಟನ್ನು ಕೇಳಿಯೊ?ಅವನು ಪಾತ್ರದಲ್ಲಿ ತನ್ಮಯನಾದುದಕ್ಕೊ?ಯಾ ತಿರಿಯನ್ನು ಕ್ರಮಪ್ರಕಾರ ಕಟ್ಟಿದ್ದಕ್ಕೊ?ಯಾರಿಗೂ"ಇದಮಿತ್ಥಂ" ಎಂದು ಹೇಳಲು ಅಸಾಧ್ಯ.

ಕೆಲವರು ಇದು ದೇವಿಯ ಮಹಿಮೆ ಎನ್ನಬಹುದು.ಕೆಲವರು ಇದು ಬರೇ ಆಕಸ್ಮಿಕ ಎಂದು ತಳ್ಳಿ ಹಾಕಬಹುದು.ಎಲ್ಲವೂ ಅವರವರ ನಿರ್ಧಾರಕ್ಕೆ ಬಿಟ್ಟದ್ದು.

ನನ್ನ ಮಟ್ಟಿಗೆ ಹೇಳುವುದಾದರೆ,ಈ ಲೋಕದಲ್ಲಿ ನಮ್ಮ ತಿಳಿವಿಗೂ ಮೀರಿದ ಕೆಲವು ವಿಷಯಗಳು ಇವೆ,ಯಾವುದನ್ನೂ ತಾತ್ಸಾರ ಮಾಡುವಂತಿಲ್ಲ ಎಂಬ ಎಚ್ಚರವನ್ನು ಈ ಘಟನೆ ಉಂಟುಮಾಡುತ್ತದೆ.

 

 

 

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):