ಅನರ್ಥಕೋಶ ೩

ಅನರ್ಥಕೋಶ ೩

ಬರಹ


ಕಗ್ಗತ್ತಲು-ಬೆಳ್ಗತ್ತಲಿನ ವಿರುದ್ಧಪದ
ಕಚೇರಿ-ನಿದ್ದೆ ಮಾಡಲು ಸೊಂಪಾದ ಸ್ಥಳ
ಕಟ್ಟಪ್ಪಣೆ-ಹೆಂಡತಿಯ ಜೊತೆ ಮಾತ್ರ ತಿರುಗಾಡುವುದು
ಕಟ್ಟುಕತೆ-ರಾಜಕಾರಣಿಗಳ ಭಾಷಣ
ಕಡತ-ಬೆಂಕಿಯಲ್ಲಿ ಸುಡಲು ತಯಾರಿಸುವ ಕಾಗದಪತ್ರಗಳು. ಉದಾ: ಕಡತ ಯಜ್ಞ
ಕಡೆಗಣ್ಣು-ಕೊನೆಯ ನೋಟ, ಸಾವಿನ ಸಂದರ್ಭದ ನೋಟ
ಕಡೆಗಾಲ-ಆದಾಯ ತೆರಿಗೆಯವರ ದಾಳಿ
ಕಣ್ಕಟ್ಟು-ಮನೆಯಲ್ಲಿ ಪ್ಯಾಂಟಿನಲ್ಲಿಟ್ಟ ಹಣ ಮಾಯವಾಗುವುದು.
ಕಣ್ಣೀರು-ಹೆಣ್ಣುಮಕ್ಕಳ ಬ್ರಹ್ಮಾಸ್ತ್ರ. ಗುಬ್ಬಿಗಳ ಮೇಲೆಯೇ ಇದು ಹೆಚ್ಚು ಪ್ರಯೋಗವಾಗುವುದು.
ಕತ್ತಲು-ಕಣ್ಣು ಮುಚ್ಚಿಕೊಳ್ಳುವುದು
ಕತ್ತುರಿ-ಕತ್ತಿನ ಉರಿ. ಬೇರೆಯವರು ಆಭರಣ ಧರಿಸಿದಾಗ ಹೆಣ್ಣುಮಕ್ಕಳ ಕತ್ತಿನಲ್ಲಿ ಕಾಣಿಸಿಕೊಳ್ಳುವ ಕಾಯಿಲೆ.
ಕತ್ತೆ-ಬೈಗುಳ ಪದ
ಕದ-ಸರಳುಗಳಿಲ್ಲದೆ ಸಲೀಸಾಗಿ ಓಡಾಡಬಹುದಾದ ದೊಡ್ಡ ಗಾತ್ರದ ಕಿಟಕಿ
ಕದನ-ಉಚಿತ ಮನರಂಜನೆ
ಕನಸು-ಒಬ್ಬರು ನೋಡಬಹುದಾದ ಸಿನಿಮಾ
ಕನಿಷ್ಠ-ಸಿನಿಮಾ ತಾರೆಯರ ಉಡುಪು
ಕನ್ನಡ-ಬೆಂಗಳೂರಿನಲ್ಲಿ ಆಗಾಗ ಬಳಸುವ ಭಾಷೆ
ಕನ್ನಡಕ-ಕನ್ನಡವನ್ನು ಹುಡುಕಲು ಬಳಸುವ ಸಾಧನ
ಕನ್ನಡಿಗ-ಕರ್ನಾಟಕ ರಾಜ್ಯೋತ್ಸವದಂದು ಮಾತ್ರ ನೋಡಲು ಸಿಗುವ ಒಂದು ಜನಾಂಗ
ಕಬ್ಬಿಗ-ಕಬ್ಬು ಮಾರುವವ. ಉದಾ: ಹಾವಾಡಿಗ, ಹೂವಾಡಿಗ, ಮದುವಣಿಗ ಮುಂತಾದವು.
ಕಬ್ಬಿಣ-ಕೊರಳಲ್ಲಿ ಬೆರಳಲ್ಲಿ ಧರಿಸಲಿಕ್ಕೆ ಬಾರದ ಕಪ್ಪು ಬಂಗಾರ. ನೋಡಿ: ಕರಿ+ಪೊನ್=ಕರ್ಬೊನ್=ಕಬ್ಬುನ=ಕಬ್ಬಿಣ
ಕರಪತ್ರ-ಪ್ರಿಯತಮ ಪ್ರಿಯತಮೆಗೆ ಕೈಯಿಂದ ಕೈಗೆ ಕೊಡುವ ಪತ್ರ
ಕರ್ತವ್ಯ-ಊಟ, ನಿದ್ದೆ, ಲಂಚ, ಬಾಸ್ ಹೇಳಿದಂತೆ ಕೇಳುವುದು, ನಡುನಡುವೆ ಆಗಾಗ ಕಚೇರಿ ಕೆಲಸ ಮಾಡುವುದು
ಕಲಿಯುಗ-ಕಲಿಯುವ ಯುಗ
ಕವಿಸಮಯ-ಕವಿಗೋಷ್ಠಿಗಳಲ್ಲಿ ಅಧ್ಯ್ಕಕ್ಷರ, ಕೇಳುಗರ ಅಪ್ಪಣೆಯಿಲ್ಲದೆ ೩-೪ ಕವನಗಳನ್ನು ಓದುವುದು.
ಕಹಿ-ಸಿಹಿಯ ವಿರುದ್ಧಪದ
ಕಲಾವಿದ-ಬಡವ
ಕಾಗುಣಿತ-ಕಾಗೆ+ಕುಣಿತ=ಕಾಗೆಯಂತೆ ನರ್ತಿಸುವುದು.
ಕಾರ್ಖಾನೆ-ಕಾರು ನಿಲ್ಲಿಸುವ ಸ್ಥಳ
ಕಾಲದೂತ-ಬಿಟಿಎಸ್ ಬಸ್
ಕಾಲ್ದಳ-ಕನ್ನಡ ಶಾಲೆಯ ಮಕ್ಕಳು. ವಾಯುದಳ-ಕಾನ್ವೆಂಟ್ ಶಾಲೆಯ ಮಕ್ಕಳು
ಕಾಶ್ಮೀರ್-ಕೆಟ್ಟುಹೋಗಿರುವ ಭಾರತದ ತಲೆ
ಕಾಳಸಂತೆ-ಕಾಳನ್ನು ಮಾರುವ ಸಂತೆ
ಕಿವಿ-ಬೂಟ್ ಪಾಲಿಶ್ ಹೆಸರು
ಕುಪಿತ-ಕು+ಪಿತ=ಕೆಟ್ಟ ತಂದೆ, ಸು+ಪಿತ=ಒಳ್ಳೆಯ ತಂದೆ
-ಸಿದ್ಧರಾಮ ಹಿರೇಮಠ.