ಅನುದಿನದ ವ್ಯಾಲೆಂಟೈನೆ ಗೃಹಿಣಿಗೆ ..

4

ನಿನ್ನೆಯ ದಿನ ಇಣುಕಿದ ವ್ಯಾಲೆಂಟೈನಿನ ದಿನದಲಿ ಈ ಬಾರಿ ಒಂದು ಕುತೂಹಲಕಾರಿ ಅಂಶ ಸೇರಿಕೊಂಡಿತ್ತು. ಪಾಶ್ಚಾತ್ಯರ ವ್ಯಾಲೆಂಟೈನಿನ ದಿನದಂತೆಯೆ ಚೈನೀಸರ ಹೊಸ ವರ್ಷದ ಕಡೆಯ ದಿನ (ಅಂದರೆ ಹದಿನೈದನೆ ದಿನ) ಚೈನೀಸ್ ವ್ಯಾಲಂಟೈನ್ ದಿನವಾಗಿ ಆಚರಿಸುತ್ತಾರೆ...ಈ ಬಾರಿ ಎರಡೂ ಒಂದೆ ದಿನದಲ್ಲಿ ಬಂದಿರುವುದು ಕಾಕತಾಳೀಯ ವಿಶೇಷ. ಅದನ್ನು ಓದುತ್ತಿದ್ದಂತೆ ಇನ್ಯಾವ್ಯಾವ ಸಂಸ್ಕೃತಿಯಲ್ಲಿ ಇನ್ನೇನೇನು ಹೆಸರಿನಲ್ಲಿ ಇದರ ಆಚರಣೆ ನಡೆದಿರಬಹುದು ಎಂಬ ಪ್ರಶ್ನೆಯ ತುಣುಕು ಹಾದು ಹೋಯ್ತು. ಅದರ ಹಿಂದೆಯೆ ಮೂಡಿದ ಮೊದಲ ಭಾವ - ಈ ಪ್ರೀತಿ, ಪ್ರೇಮದ ಹೆಸರನ್ನು ಹೇಗೆ ವಾಣಿಜ್ಯೋದ್ಯಮಕ್ಕೆ ಅನುಕೂಲಕರವಾಗಿ ಒದಗಿ ಬರುವಂತೆ ತಿರುಗಿಸಿಬಿಡುತ್ತಾರೆ ಎನ್ನುವ ವಿಸ್ಮಯ. ಇಷ್ಟೊಂದು ಜಾಹೀರಾತು, ಪ್ರೇರೇಪಣೆಗಳ ವೆಚ್ಚವನ್ನೆಲ್ಲ ಪ್ರೀತಿ, ಪ್ರೇಮದ ನವಿರು ಭಾವನೆಯೊಂದಿಗೆ ಸೂಕ್ಷ್ಮವಾಗಿ ಬೆರೆಸಿ ತನ್ಮೂಲಕ ವಾಣಿಜ್ಯ ಜಗದ ಹಿತಾಸಕ್ತಿಯ ಮೂಲ ಸರಕಾಗಿಸಿಕೊಳ್ಳುವ ಹುನ್ನಾರ ಅಂತರ್ಗತವಾಗಿ ಹುದುಗಿದ್ದರೂ ಮೇಲ್ನೋಟಕ್ಕೆ ಕಾಣದಂತೆ ಸೊಗಸಾಗಿ ಪ್ಯಾಕೇಜಾಗಿಬಿಡುತ್ತದೆ. ಭಾವನೆಗಳ ಬಂಡವಾಳದ ಜತೆಗೆ ಜೇಬಿನ ಭಾರ ಹಗುರವಾಗಿಸುವ ಈ ಪರಿ ಬರಿ ಇದೊಂದು ಹಬ್ಬಕ್ಕೆ ಮಾತ್ರವಲ್ಲ, ಇಂತಹ ಹಲವಾರು ಹಬ್ಬಗಳಲ್ಲಿ ಸಹಜವಾಗಿ ಕಾಣುವ ನೋಟ (ಸ್ಥಳೀಯದ್ದಿರಲಿ, ಬಾಹ್ಯದ್ದಿರಲಿ). ಇದೆಲ್ಲ ಗೋಜು ಗದ್ದಲದ ನಡುವೆಯೆ ಖರ್ಚು ವೆಚ್ಚಗಳ ಗದ್ದಲವಿರದೆ ದಿನವೂ ನಡೆಯುವ / ನಡೆಯುತ್ತಲೆ ಬಂದಿರುವ ವ್ಯಾಲೆಂಟೈನುಗಳು (ಆ ಹೆಸರಿನಿಂದ ಕರೆಯಲ್ಪಡದಿದ್ದರೂ) ಯಾರ ಕಣ್ಣಿಗೂ ಬೀಳುವುದಿಲ್ಲ - ಯಾಕೆಂದರೆ ಅಲ್ಲಿ ವಾಣಿಜ್ಯದ ಹಿತಾಸಕ್ತಿಯನ್ನು ಕಾಯುವ ಯಾವುದೆ ಆಡಂಬರ, ಆಕರ್ಷಣೆಯಿರದೆ ಬರಿ ಸ್ವಚ್ಚ ಪ್ರೀತಿ, ಪ್ರೇಮದ ನಿಚ್ಚಳ ಪ್ರದರ್ಶನವಷ್ಟೆ ಅಡಗಿರುತ್ತದೆ, ಯಾವುದೆ ತೋರಿಕೆಯ ಹೊದರಿಲ್ಲದೆ. ಅಂತಹ ಒಂದು ಸರಳ ಚಿತ್ರಣದ  ಹುನ್ನಾರ ಈ ಪುಟ್ಟ, ಸರಳ ಕವಿತೆಯದು. ಕೆಲಸ ಮುಗಿಸಿ ಮನೆಗ್ಹೊರಟ ಸಾಧಾರಣ ಪುರುಷನೊಬ್ಬನ ಮನದ ಚಿಂತನೆಯ ಜಾಡು ಹಿಡಿದು ನಡೆವ ಭಾವ - ಈ ಅಧುನಿಕ ದಿನಗಳಲ್ಲಿ ಇನ್ನು ಅದೆಷ್ಟರ ಮಟ್ಟಿಗೆ ಉಳಿದಿದೆಯೊ ಹೇಳಬರದಿದ್ದರೂ, ವ್ಯಾಲೆಂಟೈನಿನ ನಿಜವಾದ ಅರ್ಥಕ್ಕೆ ಇದಕ್ಕಿಂತ (ಈ ಸಹಜ ಸಾಧಾರಣ ನಡುವಳಿಕೆಯ ಪ್ರಕ್ರಿಯೆಗಿಂತ) ದೊಡ್ಡ ವಾಖ್ಯೆ ಬೇರಾವುದೂ ಇರಲಾರದು ಅನಿಸುತ್ತದೆ.

ಅನುದಿನದ ವ್ಯಾಲೆಂಟೈನೆ 
_________________

ಬೆಳಗಿಂದ ಬೈಗಿನತನಕ
ದುಡಿತಾನೆ ಮೈಮುರಿದು
ಮುಗಿದಾಗ ಸಂಜೆ ಹೊತ್ತು
ನಡೆದಾನೆ ಮನ ಕಡೆ ಚಿತ್ತ ||

ಬಿಟ್ಟಿರಬೇಕೀಗಾಗಲೆ ಶಾಲೆ
ಮಕ್ಕಳೀಗಾಗಲೆ ಮನೆಯಲಿ
ಬಂದು ಕಾದಿರಬೇಕು ಕಾತರ
ತರಬಹುದೇನೆಂಬಾ ಆತುರ ||

ಅರಿವಿಲ್ಲದಿರುವುದೆ ನಿರೀಕ್ಷೆ?
ಸಂತೃಪ್ತಿಗೊಳಿಸುವ ಕರುಳು
ಮಿಡಿದು ಹುರಿಗಾಳಾಗಿ ಮನ
ದಾರಿಯುದ್ದಕು ಹುಡುಕಿದನ ||

ಸಿಹಿದ್ರಾಕ್ಷಿಯೊ ಗೊಡಂಬಿಯೊ
ಕಿತ್ತಳೆ ಸೇಬು ಮೂಸಂಬಿಯೊ
ತುಂಟ ಹುಡುಗರ ಆಟಿಕೆಗು ಸರಿ
ಏನಾದರೂ ಕೊಂಡು ನಡೆಯೊ ||

ಕುರುಕು ತಿಂಡಿಯ ಪೊಟ್ಟಣ
ಕುಡಿವ ಪಾನೀಯಗಳ ಶೀಷೆ
ಟೇಪು ಬ್ರೋಚು ಪೆನ್ನು ಪೆನ್ಸಿಲ್ಲು
ಕಥೆ ಪುಸ್ತಕಗಳ ಜತೆ ಪರಿಷೆ ||

ಮರೆತಿದ್ದ ಎಣ್ಣೆ ಕೊಬ್ಬರಿ ಬೆಲ್ಲ
ದಿನಸಿ ಸಾಮಾನಿನ ತರಲೆ
ಕಟ್ಟಿಸೆಲ್ಲ ಪೊಟ್ಟಣ ನಡೆದವ
ಬಗಲಿನ ಕೈ ಚೀಲ ಹಿಡಿದವ ||

ತೂಗಾಡಿದ ಸಾಮಾನಿನ ಜತೆ
ನಡೆದಾ ಮನೆಯತ್ತ ಸಂಪ್ರೀತ
ಹಾದಿಬೀದಿ ಗಲ್ಲಿ ಆಟೊ ಸೈಕಲ್ಲು
ಸಮವಸ್ತ್ರ ಅವಿತಿಡದೆ ಗುರುತ ||

ಕೊನೆ ತಿರುವಿನತ್ತ ಬಂದಾಗ 
ನೆನಪಾಗುವುದು ತಂಬಾಕು
ಎಲೆಯಡಿಕೆ ಜತೆ ಸಿಗರೇಟು
ಜೇಬು ಸೇರಿದ ಪ್ಯಾಕೆಟ್ಟು ||

ಪೆಟ್ಟಿಗೆಯಂಗಡಿ ಬಾಳೆಗೊನೆ
ನೆನಪಿಸಿದಾಗ ರಸಬಾಳೆ ಚಿಪ್ಪು
ಸೇರಾಯಿತೆಲ್ಲ ಪೊಟ್ಟಣ ಚೀಲ
ದಿನದಂತೆ ಮುಗುಳ್ನಕ್ಕ ನಿರಾಳ ||

ಹತ್ತೆ ಹೆಜ್ಜೆಯ ದೂರಕೆ ಮುನ್ನ
ತಟ್ಟನೆ ನೆನಪಾಗಿ ಮುಡಿ ಮಲ್ಲಿಗೆ
ಕಟ್ಟೆಯ ಬುಟ್ಟಿಯಲೊಂದು ಮೊಳ
ಅನುದಿನದ ವ್ಯಾಲೆಂಟೈನೆ ಗೃಹಿಣಿಗೆ ||

------------------------------------------------------------------------------------
ನಾಗೇಶ ಮೈಸೂರು, ೧೪. ಫೆಬ್ರವರಿ. ೨೦೧೪, ಸಿಂಗಪುರ
-------------------------------------------------------------------------------------

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

...ಇಷ್ಟೊಂದು ಜಾಹೀರಾತು, ಪ್ರೇರೇಪಣೆಗಳ ವೆಚ್ಚವನ್ನೆಲ್ಲ ಪ್ರೀತಿ, ಪ್ರೇಮದ ನವಿರು ಭಾವನೆಯೊಂದಿಗೆ ಸೂಕ್ಷ್ಮವಾಗಿ ಬೆರೆಸಿ ತನ್ಮೂಲಕ ವಾಣಿಜ್ಯ ಜಗದ ಹಿತಾಸಕ್ತಿಯ ಮೂಲ ಸರಕಾಗಿಸಿಕೊಳ್ಳುವ ಹುನ್ನಾರ ಅಂತರ್ಗತವಾಗಿ ಹುದುಗಿದ್ದರೂ ಮೇಲ್ನೋಟಕ್ಕೆ ಕಾಣದಂತೆ ಸೊಗಸಾಗಿ ಪ್ಯಾಕೇಜಾಗಿಬಿಡುತ್ತದೆ..
ವಾಣಿಜ್ಯ‌ ವ್ಯಾಲಂಟೈನ್ ಗೂ ಅನುದಿನದ‌ ವ್ಯಾಲಂಟೈನ್ ಗೂ ವ್ಯತ್ಯಾಸ‌ ಇದೇ..ಅಲ್ಲಿ ಆಡಂಬರದ‌ ವಜ್ರದ‌ ಉಂಗುರ‍...ಇಲ್ಲಿ ನೀವಂದಂತೆ "ಮುಡಿ ಮಲ್ಲಿಗೆ
ಕಟ್ಟೆಯ ಬುಟ್ಟಿಯಲೊಂದು ಮೊಳ
ಅನುದಿನದ ವ್ಯಾಲೆಂಟೈನೆ ಗೃಹಿಣಿಗೆ"
ಕವನ‌ ಸೂಪರ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹೌದು ಗಣೇಶ್ ಜಿ, ಪ್ರೀತಿ ಪ್ರೇಮದಂತಹ ನವಿರಾದ ಅನುಭೂತಿಯನ್ನು ಸೂಕ್ಷ್ಮ ಸ್ತರದಲ್ಲಿ ಕಂಡೂ ಕಾಣದಂತೆ ಆಡಂಬರವಿಲ್ಲದೆ ಪ್ರದರ್ಶಿಸುವ ರೀತಿಯೆ ಅನನ್ಯ - ಇದರಿಂದಾಗಿ ಅದರಲ್ಲಿರಬಹುದಾದ ತೋರಿಕೆಯ ಅಂಶಗಳು ಮರೆಯಾಗಿ, ಪ್ರತಿಫಲಾಪೇಕ್ಷೆಯಿರದ ರೀತಿಯಲ್ಲಿ ವ್ಯಕ್ತವಾಗುತ್ತದೆ. ಪ್ರತಿದಿನ ಹೊಸತಾಗಿ ಅರಳಿ ತಂತಾನೆ ನವೀಕರಿಸಿಕೊಳ್ಳುವ ಹೂವಿನ ಹಾಗೆ ಪ್ರೀತಿಯೂ ಅನುದಿನ ನವೀಕರಿಸಿಕೊಳ್ಳುವ ಅಂತರ್ಗತ ಭಾವ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶಬ್ದಕೋಶದಲ್ಲಿ ವ್ಯಾಲೆಂಟೈನ್ ಪದಕ್ಕೆ ಪ್ರೇಮಪತ್ರ ಎಂದಿರುವುದು ಕಂಡು ಬಂದಿತು. ಇಂದಿನ ಯುವ ಪೀಳಿಗೆ ಪ್ರೇಮವೆಂದರೆ ಕಾಮ ಮಾತ್ರವೆಂದು, ಅಥವ ಕಾಮದೊಡಗೂಡಿದ ಪ್ರೇಮವೆಂದು ತಿಳಿದಿರುವಂತಿದೆ.
ನನ್ನ ಮೊಮ್ಮಗಳು (ಏಳು ವರ್ಷದವಳು) ಮೊನ್ನೆ ಬೆಳಿಗ್ಗೆ ಫೋನು ಮಾಡಿ 'ಸಾರಿ ತಾತ' ಎಂದಳು. 'ಏಕಮ್ಮಾ?' ಅಂದದ್ದಕ್ಕೆ 'ನಿನ್ನೆ ವ್ಯಾಲೆಂಟೈನ್ ಡೇ ದವಸ ನಿನಗೆ ವಿಶ್ ಮಾಡಲಾಗಲಿಲ್ಲ' ಅಂದಳು. ನಾನು ನಗುತ್ತಾ 'ನೀನು ಫೋನೆ ಮಾಡೇ ಹೇಳಬೇಕಿಲ್ಲ ಕಣಮ್ಮಾ, ನನಗೆ ನೀನು ಅಂದುಕೊಂಡದ್ದು ಗೊತ್ತಾಗಿ ಹೋಗಿತ್ತು' ಅಂದೆ. ಅವಳು 'ಹೌದಾ ತಾತ? ಐ ಲವ್ ಯು ವೆರಿ ವೆರಿ ಮಚ್'' ಎಂದು ಫೋನಿನಲ್ಲೇ ಮುತ್ತು ಕೊಟ್ಟಳು. ಅವಳ ಅಮ್ಮ ಫೋನು ತೆಗೆದುಕೊಂಡು, 'ನಿನ್ನೆ ರಾತ್ರಿ ಹನ್ನೊಂದು ಗಂಟೆಗೆ ನಿನಗೆ ಫೋನು ಮಾಡಲು ಹೊರಟಿದ್ದಳು. ನಾನು ಬೈದು ಮಲಗಿಕೋ ಅಂದಿದ್ದೆ. ಅವಳು ಸಿಟ್ಟು ಮಾಡಿಕೊಂಡೇ ಮಲಗಿದ್ದವಳು, ಬೆಳಿಗ್ಗೆ ಎದ್ದ ತಕ್ಷಣ ನಿನಗೆ ಫೋನು ಮಾಡುತ್ತಿದ್ದಾಳೆ.' ಅಂದಿದ್ದಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿಗಳೆ, ಈಗ ವ್ಯಾಲೆಂಟೈನಿನ ನೈಜ್ಯಾರ್ಥಕ್ಕಿಂತ ಅದು ಒದಗಿಸುವ ಅವಕಾಶ, ನೆಪವೆ ಪ್ರಮುಖ. ಆ ಸಂತೆಯಲ್ಲಿ ಎಲ್ಲರಿಗೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಅವಕಾಶ - ವಾಣಿಜ್ಯದವರಿಂದ ಹಿಡಿದು ವ್ಯಕ್ತಿಗಳ ಮಟ್ಟದವರೆಗೆ. ಕೆಲ ಯುವಜನಾಂಗಕ್ಕೆ ಒಂದು ರೀತಿಯ ವೇದನಾ ನಿವೇದನಾ ದಿನವೂ ಹೌದು. ಒಟ್ಟಾರೆ ಕಾಲಾಯ ತಸ್ಮೈ ನಮಃ..:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.