ಅಬ್ಬಬ್ಬಾ ಬೆಂಗಳೂರಿನ ಭಯಾನಕ ಟ್ರಾಫಿಕ್

ಅಬ್ಬಬ್ಬಾ ಬೆಂಗಳೂರಿನ ಭಯಾನಕ ಟ್ರಾಫಿಕ್

ಬರಹ

ಪ್ರಪಂಚದ ಯಾವುದೋ ಒಂದು  ಮೂಲೆಯಲ್ಲಿ ನೀವು ಪ್ರಯಾಣ ಮಾಡುತ್ತಿರುವಿರಿ ಎಂದು ಒಂದು ಕ್ಷಣ ಯೋಚಿಸಿ.ಅಲ್ಲಿ ನಿಮಗೆ ಅಕಸ್ಮಾತ್ ಒಬ್ಬರು ಬೆಂಗಳೂರಿನ ಮಹಾನ್ ಪ್ರಜೆ ದೊರೆತರೆ, ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಮೊದಲಿಗೆ ನಾವು ಮತ್ತು ಅವರು ಪರಸ್ಪರ ಪರಿಚಯ ಮಾಡಿಕೊಳ್ಳುವುದೇ ಇಲ್ಲ, ಅದು ಬಿಟ್ಟು, ನಾಲಿಗೆ ಆದಷ್ಟು ಹೊರಚಾಚಿ ನಮ್ಮ ಬೆಂದಕಾಳೂರಿನ ಹದಗೆಟ್ಟ ಟ್ರಾಫಿಕ್ ಬಗ್ಗೆಯೇ ಗಂಟೆಗಟ್ಟಲೆ ಕಂಠ ಶೋಷಣೆ ಮಾಡುತ್ತೇವೆ ವಿನ:, ಪ್ರಜೆಗಳಾಗಿ ನಾವು ಮಾಡಬೇಕಾದ ಕೆಲಸವನ್ನು ಮರೆಯುತ್ತೇವೆ.  "ಭಾರತದಲ್ಲೂ" ಮುಖ್ಯವಾಗಿ ಪಟ್ಟಣಗಳಲ್ಲಿ, ರಸ್ತೆಯಲ್ಲಿ ವಾಹನ ಚಲಾಯಿಸಲು ಸಂಚಾರ ಪೊಲೀಸರು ನಿಗದಿ ಪಡಿಸಿದ ಬಹಳಷ್ಟು ನಿಯಮಗಳನ್ನು ಪಾಲಿಸಲೇ ಬೇಕು. ಇಲ್ಲದ್ದಿದ್ದರೆ ರಸ್ತೆಯಲ್ಲಿ ಓಡಾಡುವ ಎಲ್ಲರಿಗೂ ತೊಂದರೆಯಾಗುತ್ತದೆ. ಅಫಘಾತಗಳಾಗಿ ನಮ್ಮ ಬಂಧುಗಳನ್ನು ಕಳೆದು ಕೊಳ್ಳಬೇಕಾಗುತ್ತದೆ. ಬೇರೆ ವಾಹನ ಚಾಲಕನು ಮಾಡಿದ ಸಣ್ಣ ತಪ್ಪಿನಿಂದ ಎಂಟು ವರುಷಗಳ ಹಿಂದೆ ನನ್ನ ಸೋದರಮಾವ ಇದೇ ತರಹ ರಸ್ತೆ ಅಫಘಾತದಲ್ಲಿ ತೀರಿಕೊಂಡರು. ಅದರಿಂದ ಅವರ ಕುಟುಂಬದವರು ಪಟ್ಟ ಕಷ್ಟ ಇನ್ನೂ ನನ್ನ ಕಣ್ಣಂಚಿನಿಂದ ಮರೆಯಾಗಿಲ್ಲ. ಎರಡು ವರುಷದ ಹಿಂದೆ ನಾನೂ ಸಹ , ನನ್ನ ಮಗಳು  ನಮ್ಮ ಊರಿಂದ ಬರಬೇಕಾದರೆ, ಬೇರೆ ಲಾರಿ ಚಾಲಕನ ತಪ್ಪಿಂದ ಅಫಘಾತಕ್ಕೆ ಒಳಗಾದೆವು. ದಿನನಿತ್ಯ ಸಮಾಚಾರ ಪತ್ರಿಕೆಗಳಲ್ಲಿ  ಅಫಘಾತಕ್ಕೆ ಒಳಗಾಗಿ ಸಾವು ನೋವು ಅನುಭವಿಸುತ್ತಿರುವವರ ಬಗ್ಗೆ ಓದುತ್ತಲೇ ಇರುತ್ತೇವೆ, ಪುನ: ರಸ್ತೆಗೆ ಇಳಿದ ತಕ್ಷಣ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ನಮಗೆ ಇಷ್ಟ ಬಂದ ರೀತಿಯಲ್ಲಿ ವಾಹನ ಚಲಾಯಿಸಿ ಮಜಾ ಉಡಾಯಿಸುತ್ತೇವೆ. ನಾನು ತುಂಬ ಊರುಗಳಲ್ಲಿ ಪ್ರಯಾಣ ಮಾಡಿದ್ದೇನೆ. ಆದರೆ ಬೆಂಗಳೂರಿನಂಥ ಹುಚ್ಹು ಟ್ರಾಪಿಕ್ ಮಾತ್ರ ಎಲ್ಲೂ ಇಲ್ಲ. ಲೈನ್ ಡಿಸಿಪ್ಲಿನ್ ಇಲ್ಲ. ಸಂಚಾರ ವ್ಯವಸ್ಥೆಯಲ್ಲಿರುವ ದೀಪದ ಸಂಜ್ಞೆಯನ್ನು, ಏಕಮುಖ ಸಂಚಾರದ ಆಜ್ಞೆಯನ್ನು, ಹೆಲ್ಮೆಟ್ ಧಾರಣೆಯನ್ನು ಅನುಸರಿಸುವುದಿಲ್ಲ. ಹೀಗೆ ನೂರಾರು ಸಮಸ್ಯೆಗಳು. ಇವುಗಳಿಗೆ ಪರಿಹಾರ ನಮ್ಮಿಂದಲೇ ಅಲ್ಲವೇ? ನಮ್ಮ ಮನೆಯ ಮುಂದೆ ಬಿದ್ದಿರುವ ಹೆಣವನ್ನು ಸಾಗಿಸುವ ತಕ್ಕ ವ್ಯವಸ್ಥೆ ನಾವೇ ಮಾಡಬೇಕಲ್ಲವೇ?