ಅರ್ಥವಿಲ್ಲದ ಹೋರಾಟ

5

ಕಗ್ಗತ್ತಲಿನ ರಣರಂಗದಲ್ಲಿ
ಕತ್ತಿಬೀಸುತ್ತಿರುವ ಕುರುಡು ಸೈನಿಕ..
ಕೇಳಿಸುತ್ತಿರುವುದು ಅವನಿಗೊಬ್ಬನಿಗೇ
ಭ್ರಮೆಯ ಕುದುರೆಯೋಟದ ಠೇಂಕಾರ
ವೈರಿ ಶಂಖನಾದದ ಝೇಂಕಾರ..
ಅವನ ರೋಷಾವೇಷಕ್ಕೆ ಹರಿಯುತ್ತಿರುವುದು
ವೈರಿ ರಕ್ತದ ಕೋಡಿಯೇನಲ್ಲ
ಅದವನ ಬೆವರಿನ ಹನಿಗಳು ಮಾತ್ರ
ಇಲ್ಲದ ರಾಜ್ಯವ ರಕ್ಷಿಸುತ್ತಿರುವವನಿಗೆ
ಇದಾವುದರ ಪರಿವೆಯೇ ಇಲ್ಲ..
ತನ್ನ ಭ್ರಮೆಯ ಅರಿವೂ ಇಲ್ಲ..
ಯಾರಿಗಾಗಿ ಹೋರಾಟ?ಏಕೆ ಈ ಯುದ್ಧ?
ತಿಳಿಯದವನ ಪಾಲಿಗದುವೇ ಕ್ಷತ್ರಿಯ ಧರ್ಮ
ಯಾರೂ ಅರಿಯಲಾರದ ವಿಧಿಯ ಮರ್ಮ..
ತಾನೆಣಿಸಿರುವ ಕರ್ತವ್ಯ ಪೂರೈಸಲು
ಹೋರಾಡುತ್ತಿರುವನು ಜೀವದ ಹಂಗು ತೊರೆದು
ಇದರಲ್ಲಿ ಮರೆತಿಹನು ತಾನೇತನ್ನ ವೈರಿಯೆಂದು..
ಭಾವಿಸಿರುವನು ತಾನೇ ಪರಾಕ್ರಮಿಯೆಂದು
ಅವನದೇ ಚಿತ್ತದ ರಣರಂಗದಲ್ಲಿ
ಸಿಲುರುವನು ತನ್ನದೇ ಚಕ್ರವ್ಯೂಹದಲ್ಲಿ..
ಕಾಲ ಕಳೆದಂತೆ ಯುದ್ಧದ ಮದವೇರಿ
ಅವನ ರೋಷದಾರ್ಭಟವೂ ಹೆಚ್ಚುತ್ತಿತ್ತು
ಅವನೆಸೆದ ಬಾಣವೇ ಅವನ ಚುಚ್ಚುತ್ತಿತ್ತು..
ಕತ್ತಲು ಕಳೆದು, ಬೆಳಕು ಹರಿದು
ಅವನೊಳಗೇ ನಡೆದ ಆ ಯುದ್ಧ ಮುಗಿದಿತ್ತು
ಕೊನೆಯಲ್ಲಿ ಕುರುಡು ಸೈನಿಕನ ತಲೆಯುರುಳಿತ್ತು..

*****

-ಸಂತೋಷ ಹೆಗಡೆ..

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.