ಅಳು ತಡೆಯೋಕಾಗ್ಲಿಲ್ಲ

ಅಳು ತಡೆಯೋಕಾಗ್ಲಿಲ್ಲ

ಕವನ

ಬ್ಯಾಂಕಿಗೆ ಸಾಲದ ಕಂತಿನ
ಚೆಕ್ ಕೊಡಲು ಹೋಗಿದ್ದೆ
ಅರವತ್ತರ ತಾಯಿಯೊಬ್ಬರು
ಏನಪ್ಪ ಚಲನ್ ತುಂಬಿಕೊಡ್ತೀರ?
ಇಲ್ಲವೆನ್ನಲು ಮನಸಾಗಲಿಲ್ಲ
ತುಂಬಿಕೊಟ್ಟು, ಏನಮ್ಮ
ಮಕ್ಕಳನ್ನು ಕಳಿಸೋದಲ್ವ
ಈ ಉರಿ ಬಿಸಿಲಲ್ಲಿ ನೀವು
ಬಂದಿದ್ದೀರಲ್ಲ ಎಂದೆ
ಏನ್ಮಾಡೋದಪ್ಪ ನನ್ಕರ್ಮ
ಆಂದ್ರು, ಯಾಕಮ್ಮಾಂದೆ
ಹಿರಿಮಗ ಮನೆಗೇಂತ ಸಾಲ
ತಗೊಂಡು ಅಪಘಾತಾಗಿ
ಮನೇಲಿ ಮಲ್ಗವ್ನೆ, ದುರ್ದೈವ
ಕಿರಿಯವ್ನಗೂ ಆಕ್ಸಿಡೆಂಟಾಗಿದೆ
ಯಜಮಾನ್ರಿಲ್ಲಪ್ಪ, ಸಾಲ
ಕಟ್ಟ್ಲಿಲ್ಲಾಂದ್ರೆ ಸುಮ್ನೆ ಬುಟ್ಟಾರ
ಬ್ಯಾಂಕ್ನವರು? ತಿಂಗಳ ಹದಿನೇಳ್
ಸಾವ್ರ ಕಟ್ಬೇಕಪ್ಪ, ಮಗ ಮಲಗಿ
ಆರ್ತಿಂಗ್ಳಾತು.....ಮದ್ವೆ ಬೇರೆ
ಮಾಡಿದ್ದೀನಿ, ಸೊಸೆನ ಮಾತೇ
ಆಡ್ಸಂಗಿಲ್ಲಪ್ಪ ಉರಿ ಉರಿ
ಅದ್ಸರಿ ಹೆಂಗೆ ತಿಂಗಳ ಕಂತು
ಹೊಂದಸ್ತೀರಮ್ಮ ಅಂದದ್ದಕ್ಕೆ
ದೇವರ ಆಶೀರ್ವಾದ ನಮ್
ಯಜಮಾನ್ರು ಸಾಮಿಲ್
ಬಿಟ್ಟು ಹೋಗಿದಾರೆ ನನ್
ಹೆಸ್ರಲ್ಲಿ, ಮಕ್ಕಳಿಬ್ರೂ ಅದ್ಕಾಗಿ
ಹೊಡೆದಾಡ್ತ ಬಿದ್ದವ್ರೆ
ಯಾರಿಗ್ಬೇಕಪ್ಪ ಇಂಥ ಮಕ್ಕಳು
ಅದ್ಸರಿ ನಿನ್ನೆಸ್ರೇನಪ್ಪಾಂದ್ರು
ಹರೀಶ್ ಎಂದೆ, ಅಳೋಕೆ
ಶುರು ಮಾಡಿದ್ರು ಯಾಕಮ್ಮಾಂದೆ
ನನ್ಮಗನೆಸ್ರೂ ಅದೇ ಅಂದು
ಮದ್ವೆ ಆದ್ಮೇಲೆ ಗುರ್ತಿಸ್ಲಾರ್ದಷ್ಟು
ಬದ್ಲಾಗಿದಾನಪ್ಪ, ದುರಾದೃಷ್ಟ
ಅವನ್ಸಾಲನ ನಾ ತೀರಸ್ತಿದೀನಿ
ಎಂಟೆಕ್ ಆಗಿದೆ ಯಾವ್ದಾದ್ರೂ
ಕೆಲ್ಸ ಕೊಡ್ಸಪ್ಪಾಂದು ನನ್ನ
ನಂಬರ್ ತಗೊಂಡು
ಕಣ್ಣೊರ್ಸ್ಕೊಂಡು ಹೋದ್ರು
ಅವರೋದ್ಮೇಲೆ ನನ್ಗೂ
ಅಳು ತಡೆಯೋಕಾಗ್ಲಿಲ್ಲ
ನಿನ್ ಜೊತೆ ಮಾತಾಡಿ
ಸ್ವಲ್ಪ ನೋವು ಕಡಿಮೆ
ಆದಂಗಾತಪ್ಪ ಅಂದ್ರು