ಅಸಾಮಾನ್ಯ ಸೌಂದರ್ಯದ ‘ಕಾಮನ್ ಗ್ರೀನ್ ವಿಪ್’!

0

ಧಾರವಾಡದಲ್ಲಿ ಸಾಮಾನ್ಯ ಹಸಿರು ಚಿಣಗಿ ಹಾವು ಕಂಡು ಬರುವುದು ವಿರಳ. ಆದರೆ ಇಂದು ನಮಗೆ ಆ ಭಾಗ್ಯ ಲಭಿಸಿತ್ತು. ಪ್ರೊ. ಗಂಗಾಧರ ಕಲ್ಲೂರ ಹಾಗೂ ದಂತ ವೈದ್ಯ ಡಾ.ಮಹಾಂತೇಶ ಸರದೇಸಾಯಿ ಅವರ ಮೂಲಕ ನಾವು ಫಲಾನುಭವಿಗಳಾದೆವು. ಹರ ಸಾಹಸ ಪಟ್ಟು ಅವರು ಆ ಕಿರು ಬೆರಳು ಗಾತ್ರ ದೇಹದ ಆಗಂತುಕ ಅತಿಥಿಯನ್ನು  ಕೆಲಕಾಲ ತಾತ್ಕಾಲಿಕವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

 

ಬಾಣದಂತೆ ಮೂತಿ ತೀರ ಚೂಪು; ಕಣ್ಣುಗಳು ಮೂಗಿನ ಹೊರಳೆಗಳ ವರೆಗೆ ಹಿಗ್ಗಿದಂತೆ, ಉದ್ದ ಸುಮಾರು ಅರ್ಧ ಮೀಟರ್ ನಷ್ಟು, ಗಿಳಿ ಹಸಿರು ಮೈಬಣ್ಣದ ಈ ಹಾವು ಮಕ್ಕಳಂತೆ ದಣಿವರಿಯದ ಚಟುವಟಿಕೆ ಮೈಗೂಡಿಸಿಕೊಂಡಿತ್ತು. ಇಟ್ಟ ಜಾಗದಲ್ಲಿ ಕದಲದೇ ನಿಲ್ಲುವ ಜಾಯಮಾನಕ್ಕೆ ಅದು ಒಗ್ಗಿಕೊಂಡಂತೆ ನಮಗೆ ಕಾಣಿಸಲಿಲ್ಲ. ಸದಾ ‘ಜೆಕೋಪ್ಸನ್ ಆರ್ಗನ್’ ಅರ್ಥಾತ್ ನಾಲಿಗೆಯನ್ನು ಹೊರ ಚಾಚಿ ಸುತ್ತಲಿನ ಪರಿಸರದ ಸ್ಥಿತಿ-ಗತಿ ಅವಲೋಕಿಸುವಲ್ಲಿ ಅದು ಸದಾ ನಿರತವಾಗಿತ್ತು.

 

‘Common Green Whip Snake’ - ಸಾಮಾನ್ಯ ಹಸಿರು ಚಿಣಗಿ ಹಾವು ಎಂದು ಕರೆಯಿಸಿಕೊಳ್ಳುವ ವಿಚಿತ್ರ ಮೈ-ಮುಖಗಳ ಶೀತ ರಕ್ತ ಪ್ರಾಣಿ ಅದು. ಮೈ ಮೇಲಿನ ಹಳದಿ ಹುರುಪೆಗಳು (Scales) ಮೈ ಚರ್ಮದ ನೀಲಿ ಬಣ್ಣದೊಂದಿಗೆ ಸೆಣೆಸಿ (pigment) ಹಸುರಾಗಿ ಪರಿವರ್ತನೆಗೊಂಡು, ವೈರಿಗಳಿಂದ ರಕ್ಷಣೆ ಪಡೆಯಲು ನಿಸರ್ಗದಲ್ಲಿ ಒಂದಾಗುವ ಕಲೆ (camouflage) ಈ ಹಾವಿಗೆ ದೇವರು ಕೊಟ್ಟ ವರ. ಒಂದರ್ಥದಲ್ಲಿ ಆಕಾಶ ಬೆಳ್ಳಗಿದ್ದರೂ ನಮ್ಮ ಕಣ್ಣುಗಳಿಗೆ ನೀಲಿಯಾಗಿ ಗೋಚರಿಸುವ ಪ್ರತಿಫಲನ ಕ್ರಿಯೆ ಇದ್ದ ಹಾಗೆ. 

 

ಸಾಮಾನ್ಯ ಹಸಿರು ಚಿಣಗಿ ಹಾವಿನ ಚೂಪು ಮೊಗದ ಮತ್ತೊಂದು ಕೋನದ ಚಿತ್ರ. ಕ್ಲಿಕ್ಕಿಸಿದವರು: ಡಾ. ಮಹಾಂತೇಶ ಸರದೇಸಾಯಿ.

 

ಈ ಹಾವಿನ ನಾಲಿಗೆ ವೈಶಿಷ್ಟ್ಯತೆ ಎಂದರೆ ತಿಳಿ ಗುಲಾಬಿ ಬಣ್ಣ ತುದಿಗೆ ಮಾತ್ರ ಬಿಳಿ ಚುಕ್ಕೆ! ಬಾಯಿಯ ಅಂಗಳವೂ ಕೂಡ ತಿಳಿ ಗುಲಾಬಿ. ಬಾಲ ಸಿಲಿಂಡರ್ ಆಕಾರದಲ್ಲಿ ಸದಾ ಸುರುಳಿ ಹೊಡೆದುಕೊಂಡು ಏನನ್ನಾದರೂ ಬಂಧಿಸಲು ತವಕಿಸುತ್ತದೆ. ಬಾಲ ಮಾತ್ರ ಸಾಕಷ್ಟು ಉದ್ದವಿದ್ದು ಇಡೀ ಪುಟ್ಟ ದೇಹದ ತೂಕವನ್ನು ಹೊರಬಲ್ಲ ಶಕ್ತಿ ಅದಕ್ಕಿದೆ. ಹೊಟ್ಟೆ ಭಾಗ, ಗಂಟಲು ಬಿಳಿಯಾಗಿದ್ದರೂ ಆಕಾಶ ನೀಲಿ ಬಣ್ಣ ಹಾಗೂ ಹಳದಿ ‘ಶೇಡ್’ ನಿಂದಾಗಿ ಮೇಲೆ ಗಿಳಿ ಹಸುರು ಬಣ್ಣದ ಹೊದಿಕೆ ಹಾಕಿದಂತೆ ಕಾಣಿಸುತ್ತದೆ. ಇದು ದೇಹದ ಕೆಳಭಾಗಕ್ಕೆ ಹಾಗೂ ಹೊಟ್ಟೆಯಿಂದ ಬಾಲದ ವರೆಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಸಾಮಾನ್ಯವಾಗಿ ಇದು ಸಂಭಾವಿತ ಪ್ರಾಣಿ. ನಾಗರ, ಕೊಳಕು ಮಂಡಲದಂತೆ ತನ್ನ ಅಸ್ತಿತ್ವ ತೋರಿಸಲು ಮನುಷ್ಯರನ್ನು ಕೆಣಕಬೇಕು ಎಂಬ ಸ್ವಭಾವ ಇದರದ್ದಲ್ಲ. ಸ್ವಭಾವತ: ಸಾಧು ಪ್ರಾಣಿ.

 

ಸಾಮಾನ್ಯ ಹಸಿರು ಚಿಣಗಿ ಹಾವು ಪೊದೆ, ಕುರುಚಲು ಗಿಡ, ಹೂವಿನ ಬಳ್ಳಿ, ಗೊಂಚಲಾಗಿ ಬೆಳೆಯುವ-ನೆರಳು ನೀಡುವ ಪುಟ್ಟ ಗಿಡಗಳಲ್ಲಿ ಇದು ಖುಷಿಯಿಂದ ವಾಸಿಸುತ್ತದೆ. ಕಾಡುಗಳಲ್ಲಿ ಹೆಚ್ಚಾಗಿ ಕಂಡುಬಂದರೂ, ಇತ್ತೀಚಿನ ಬೆಳವಣಿಗೆಗಳಿಗೆ ಹೊಂದಿಕೊಂಡು ಮಾನವರೊಂದಿಗೆ ಸಹಜ ಗತಿಯಲ್ಲಿ ವಿಕಾಸ ಹೊಂದುವ ಕಲೆ ‘ಮೈಗತ’ ಮಾಡಿಕೊಂಡಿದೆ. ಮನೆಗಳ ಮುಂದಿನ ಕೈತೋಟದ ಹೂವಿನ ಗಿಡಗಳಲ್ಲಿ, ಜನ ವಸತಿ ಇರುವ ಪ್ರದೇಶದಲ್ಲಿಯೂ ಇದು ಕಾಣಸಿಗುತ್ತಿದೆ. ಗಿಡಗಳ ಅತ್ಯಂತ ಎತ್ತರದ ಪುಟ್ಟ ಕೊಂಬೆಗಳ ಮೇಲೆ ಕುಳಿತು, ಸಹಜವಾಗಿ ಕಣ್ಣಾಡಿಸುವವರಿಗೆ ಕಾಣದಂತೆ ಗಿಡದ ರೆಂಬೆಯಂತೆ ಮಲಗಿ ಬಿಡುತ್ತದೆ! ಹಾಗಂತ ಆಲಸಿ ಎಂದುಕೊಳ್ಳಬೇಡಿ..

 

ಅಪಾಯ ಎದುರಾದಾಗ, ತನ್ನ ಬೇಟೆ ಕಣ್ಣ ಮುಂದೆ ಸುಳಿದಾಗ ‘ಮೈಕ್ರೋ ಸೆಕೆಂಡ್’ ಶರ -ವೇಗದಲ್ಲಿ ಮುಂದೆ-ಹಿಂದೆ ಚಲಿಸಿ ಯಶಸ್ವಿಯಾಗಿ ಬಲೆಗೆ ಹಾಕಿಕೊಳ್ಳುತ್ತದೆ. ಅತ್ಯಂತ ಬಡುಕಾದ, ತೆಳು ಟೊಂಗೆ ಅಥವಾ ಟಿಸಿಲನ್ನು ಆಧಾರವಾಗಿಟ್ಟುಕೊಂಡು ತನ್ನ ಬೇಟೆಯನ್ನು ನಿರಾಯಾಸವಾಗಿ ಕಬಳಿಸುವಲ್ಲಿ ಚಾಣಾಕ್ಷ. ಕಣ್ಣುಗಳಂತೂ ‘ಬೈನಾಕ್ಯುಲರ್’! ಈಗಾಗಲೇ ನಾನು ಹೇಳಿದಂತೆ ಇದು ಸ್ವಭಾವತ: ಸಾಧು ಪ್ರಾಣಿಯಾದರೂ, ಯಾರಾದರೂ ಉಪಟಳ ನೀಡಿದರೆ, ಕಿರಿಕಿರಿ ಉಟುಮಾಡಿದರೆ ಅದಕ್ಕೆ ಅಸಾಧ್ಯ ಕೋಪ ಬರುತ್ತದೆ. ಆಗ ಮೈ ಬಣ್ಣ ಕಪ್ಪು-ಬಿಳುಪಿಗೆ ತಿರುಗುತ್ತದೆ. ಕಣ್ಣುಗಳು ಕೆಂಪಗಾಗುತ್ತವೆ. ವೈರಿ ಕಾಲು ಕೀಳಲು ಅದು ಸಕಾಲ. ಆದರೂ, ಎಚ್ಚರಿಕೆ ಧಿಕ್ಕರಿಸಿ ಯಾರಾದರೂ ಮುಂದು ವರೆದರೆ..ತನ್ನ ಬಾಯಿ ಅಗಲಿಸಿ, ಅರ್ಧ ಇಂಚಿನ ಚೂಪಾದ ಹಲ್ಲುಗಳನ್ನು ಮುಂದೆ ಚಾಚಿಕೊಂಡು, ನಾಲಿಗೆ ಹೊರ ತೆಗೆಯದೇ ಇಡೀ ದೇಹವನ್ನು (ಕಿರು ಬೆರಳು ಗಾತ್ರದ ದೇಹ) ಬಾಲದ ಆಧಾರದ ಮೇಲೆ ಬಾಣದಂತೆ ಸೆಟೆದು ವೈರಿಯ ದಿಕ್ಕಿನಲ್ಲಿ ನಿಲ್ಲುತ್ತದೆ. ಒಮ್ಮೆಲೇ ದೇಹವನ್ನು ಹಿಂದಕ್ಕೆಳೆದುಕೊಂಡು ಮಿಂಚಿನ ವೇಗದಲ್ಲಿ ಮೂತಿಯನ್ನು ಮುನ್ನುಗಿಸಿದರೆ ನಾವು ಕೈ ಎಳೆದುಕೊಳ್ಳುವ ಮೊದಲೇ ಕಚ್ಚಿ, ವಿಷ ಇಳಿಸಿ ತನ್ನ ಮೊದಲ ಸ್ಥಾನಕ್ಕೆ ಮರಳಿರುತ್ತದೆ!

 

ಸಾಮಾನ್ಯ ಹಸಿರು ಹಾವು ಡಾ. ಮಹಾಂತೇಶ ಸರದೇಸಾಯಿ ಅವರ ಕ್ಯಾಮೆರಾದಲ್ಲಿ ಸಮೀಪದಿಂದ ಬಂಧಿಯಾದದ್ದು ಹೀಗೆ.

 

ಉಳಿದ ಹಾವುಗಳಂತೆ ಇದು ನೆಲದ ಮೇಲೆ ಉರುಳಿಕೊಂಡಿರದ ಕಾರಣ, ನಮ್ಮ ಕಾಲುಗಳಿಗೆ, ಕೈಗೆ ಅಥವಾ ಮೈಗೆ ದಾಳಿ ನಡೆಸಿ ಕಚ್ಚುವ ಬದಲು ನೇರವಾಗಿ ಕಣ್ಣಿಗೇ ಕ್ಕುಕ್ಕಿಬಿಡುವ ಚಾಳಿ ಇದಕ್ಕಿದೆ. ಅಂತಹ ಸಾಕಷ್ಟು ಪ್ರಕರಣಗಳು ಸಹ ವರದಿಯಾಗಿವೆ. ಇದು ಈ ಹಾವಿನ ಪ್ರಬಲ ದಾಳಿ ತಂತ್ರವೂ ಹೌದು. ಹಾಗಾಗಿ ಸಾಮಾನ್ಯ ಹಸುರು ಹಾವು - Common Green Whip Snake ಗೆ ‘ಕಣ್ ಕುಕ್ಕುವ ಹಾವು’ ಎಂಬ ಅಡ್ಡ ಹೆಸರು ‘ನಿಕ್ ನೇಮ್’ ಸಹ ಇದೆ!

 

ಸಾಮಾನ್ಯವಾಗಿ ಗಿಡ-ಮರಗಳ ಪೊಟರೆಯಲ್ಲಿ ಗೂಡು ಮಾಡುವ ಅಳಿಲು, ಇಲಿಗಳಂಥ ಸ್ತನಿ ಪ್ರಾಣಿಗಳ ಮರಿಗಳು, ಪುಟ್ಟ ಪಕ್ಷಿ, ಅವುಗಳ ಮೊಟ್ಟೆ, ಕಣ್ಣು ಬಿಡದ, ರೆಕ್ಕೆ ಬಲಿಯದ ಗೂಡಿನಲ್ಲಿ ಬಂಧಿಯಾದ ಮರಿಗಳು, ಓತಿಕ್ಯಾತ, ಹಲ್ಲಿ, ಜಿರಲೆ, ಇತರೆ ಹಾವಿನ ಮರಿಗಳು ಹಾಗೂ ತರಹೇವಾರಿ ಕಪ್ಪೆಗಳು, ಅದರಲ್ಲೂ ಹಾರುವ ಕಪ್ಪೆಗಳು ಇದಕ್ಕೆ ಇಷ್ಟದ ಆಹಾರ. ತನಗೆ ಆಹಾರವಾಗಬಲ್ಲ ಪ್ರಾಣಿ ಕಂಡ ತಕ್ಷಣ ಚೂಪಾದ ಮೂತಿಯಿಂದ ಹಿಡಿದು, ದೇಹದ ಅರ್ಧ ಭಾಗ ಕೂಡಲೇ ಸಡಿಲಗೊಳ್ಳುತ್ತದೆ. ಬಾಲ ಬಿಗಿಯಾಗಿ ಪುಟ್ಟ ರೆಂಬೆಯೊಂದನ್ನು ಆಸರೆಯಾಗಿ ಬಂಧಿಸುತ್ತದೆ. ಸೂಕ್ಷ್ಮವಾಗಿ ಒಮ್ಮೆ ಜೀಕಿ ನೋಡಿ ತೋಲ ಲೆಕ್ಕಿಸುತ್ತದೆ..ಕಾರಣ ಪುಟ್ಟ ಟೊಂಗೆ ಮುರಿಯಬಾರದು ನೋಡಿ! ನಂತರ ದೇಹವನ್ನು ತುಸು ಹಿಗ್ಗಿಸಿಕೊಂಡು ಸುರುಳಿಯಾಕಾರದಲ್ಲಿ ‘coil' ಗಟ್ಟುತ್ತದೆ.

 

 

ಈ ಚಿತ್ರದಲ್ಲಿ ತಾವು ಮುಖ ಹಾಗೂ ಬಾಲ ಎರಡೂ ಗಾತ್ರಗಳನ್ನು ಗಮನಿಸಬಹುದು. ಚಿತ್ರ: ಡಾ. ಮಹಾಂತೇಶ ಸರದೇಸಾಯಿ.

 

ಬೆಳಕಿನ ವೇಗಕ್ಕೆ ಸಮನಾಗಿ ಮುನ್ನುಗ್ಗಿ ತನ್ನ ಇಷ್ಟದ ಬೇಟೆಯನ್ನು ಕಚ್ಚಿ-ಹಿಡಿದು ಎಳೆದು ತಂದು ದೇಹದ ಮಧ್ಯೆ ತೂರಿಸಿಕೊಂಡು ಸುರುಳಿಯಾಕಾರದಲ್ಲಿ ಸುತ್ತಿ ಬಿಡುತ್ತದೆ. ಬಂಧನದಲ್ಲಿ ಸಿಲಿಕಿದ ಬೇಟೆ ಹರಸಾಹಸ ಪಟ್ಟರೂ ಈ ದೇಹ ಸುರುಳಿ ಸಡಿಲಾಗುವುದಿಲ್ಲ! ಜೀವ ಬಿಟ್ಟಿದೆ ಎಂಬುದು ಖಾತ್ರಿಯಾದಾಗ ಮಾತ್ರ, ಭೋಜನಕ್ಕಾಗಿ ಬಂಧನ ಸಡಿಲಗೊಳ್ಳುತ್ತದೆ. ಹೆಣ್ಣು ಹಾವು ನೇರವಾಗಿ ತನ್ನ ಉದರದಿಂದ ಮರಿಗಳಿಗೆ ಜನ್ಮ ನೀಡುತ್ತದೆ. ಮೊಟ್ಟೆ ಇಟ್ಟು ಮರಿ ಮಾಡುವ ಹಾವುಗಳ ಕುಟುಂಬಕ್ಕೆ ಇದು ಸೇರ್ಪಡೆಯಾಗುವುದಿಲ್ಲ. ಮರಿಗಳು ಜನ್ಮವೆತ್ತಿದಾಗ ತಾಯಿಯಷ್ಟೇ ಚುರುಕಾಗಿರುತ್ತವೆ. ಕೂಡಲೇ ತಾಯಿಯನ್ನು ತ್ಯಜಿಸಿ ತಮ್ಮ ಬದುಕು ಕಟ್ಟಿಕೊಳ್ಳಲು ಹವಣಿಸಿ ‘ನಮ್ಮ ದಾರಿ ನಮಗೆ’ ಎಂಬಂತೆ ಮಾತೃ ವಾತ್ಸಲ್ಯ ಸವಿಯದೇ ಹೊರಟು ಬಿಡುತ್ತವೆ.

 

ಅಂದ ಹಾಗೆ Common Green Whip Snake ಅರ್ಥಾತ್, ಹಸಿರು ಹಾವು ತುಸು ವಿಷಕಾರಿ; ಆದರೆ, ಮಾರಣಾಂತಿಕವಲ್ಲ. ಇದು ಕಚ್ಚಿದ ಜಾಗೆ ತುಸು ಮರಗಟ್ಟಿದಂತಾಗುತ್ತದೆ. ಬಾವು ಬರುತ್ತದೆ. ೨೪ ಗಂಟೆಗಳ ಕಾಲ ನೋವಿರುತ್ತದೆ. ನಂತರ ತಾನಾಗಿಯೇ ಸಹಜ ಸ್ಥಿತಿಗೆ ನಮ್ಮ ದೇಹ ಮರಳುತ್ತದೆ. ಆದರೆ, ದುರದೃಷ್ಟವಶಾತ್ ಕಣ್ಣಿಗೆ ಅದು ದಾಳಿ ಇಟ್ಟಿದ್ದರೆ, ಕಣ್ಣಿನ ಪಾಪೆಗೆ ಧಕ್ಕೆಯಾಗಿದ್ದರೆ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಶೇಕಡ ೧೦೦ ರಷ್ಟು. ಹಾಗಾಗಿ ಈ ಹಾವನ್ನು ಹಿಡಿದು ನೋಡುವಾಗ ಆದಷ್ಟು ನಮ್ಮ ಮುಖ ದೂರವಿಟ್ಟಿರುವುದು ಕ್ಷೇಮ.

 

ಸಂಜೆ ಕರ್ನಾಟಕ ವಿಶ್ವವಿದ್ಯಾಲಯದ ‘ಬೊಟಾನಿಕಲ್ ಗಾರ್ಡನ್’ ನಲ್ಲಿ ಪ್ರೊ. ಗಂಗಾಧರ ಕಲ್ಲೂರ ಹಾಗೂ ದಂತ ವೈದ್ಯ ಡಾ.ಮಹಾಂತೇಶ ಸರದೇಸಾಯಿ ಹಸಿರು ಚಿಣಗಿ ಹಾವಿಗೆ ಸ್ವಾತಂತ್ರ್ಯ ಕರುಣಿಸಿದರು. ಕ್ಷಣ ಮಾತ್ರದಲ್ಲಿ ಗಿಡದ ತುತ್ತ ತುದಿ ಏರಿದ ಆತ..ಒಮ್ಮೆ ತಿರುಗಿ ನೋಡಿ, ಸ್ಮೈಲ್ ಕೊಟ್ಟು ಹೋದ..ಮತ್ತೆ ಯಾವಾಗ ಭೇಟಿಯೋ?

 

ಚಿತ್ರಗಳು: ಡಾ. ಮಹಾಂತೇಶ ಸರದೇಸಾಯಿ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಉತ್ತಮ ಮಾಹಿತಿಯ ಕಣಜ ನಿಮ್ಮ ಲೇಖನ ಹರ್ಷ ವರ್ಧನರೇ ಮಾಹಿತಿಗೆ ಧನ್ಯವಾದಗಳು ಅಷ್ಟೇ ಉತ್ತಮ ಚಿತ್ರಗಳನ್ನು ಒದಗಿಸಿ ಲೇಖನದ ಮೌಲ್ಯವನ್ನು ಹೆಚ್ಚಿಸಿದ ವೈದ್ಯ ಮಹಾಂತೇಶ ಸರದೇಸಾಯಿಯವರಿಗೂ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ಗೋಪಿನಾಥ್ ಸರ್, ಸಮಯ ಮೀಸಲಿಟ್ಟು ಪ್ರೀತಿಯಿಂದ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರತಿ ಸಾರಿಯೂ ಬರುವಾಗ ಉತ್ತಮ ಮಾಹಿತಿಯುಕ್ತ ಲೇಖನದೊ೦ದಿಗೆ ಬ೦ದು, ನಮಗೆ ಮಾಹಿತಿ ನೀಡುತ್ತೀರಿ. ಇದೂ ನಮಗಾಗಿ,ನಿಮ್ಮ ಮಾಹಿತಿ ಯುಕ್ತ ಲೇಖನಗಳ ಸಾಲಿಗೆ ಮತ್ತೊ೦ದು ಸೇರ್ಪಡೆ! ಧನ್ಯವಾದಗಳು ಹಸಿರು ಹಾವಿನ ಬಗ್ಗೆಗಿನ ಮಾಹಿತಿಗೆ. ನಿಮ್ಮ ಸ೦ಗಡಿಗರಿಗೂ ಸಹ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ನಾವಡರೆ, ತಾವು ತಾಳ್ಮೆಯಿಂದ ಓದಿ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಜೀವಿಗಳ ಮಿತ್ರ ಹರ್ಷವರ್ಧನರಿಗೆ ನಮಸ್ಕಾರ. ಅದ್ಭುತ ಚಿತ್ರಗಳು ಮತ್ತು ಲೇಖನಕ್ಕಾಗಿ ವಂದನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ನಾಗರಾಜ್ ಸರ್, ತಮ್ಮ ಅಭಿನಂದನೆಗಳನ್ನು ಡಾ. ಸರದೇಸಾಯಿ ಅವರಿಗೆ ರವಾನಿಸಿದ್ದೇನೆ. ಪ್ರತಿಕ್ರಿಯೆಗೆ, ತಮ್ಮ ಒಂದು ಸಹೃದಯ ಓದಿಗೆ ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

1996ರಲ್ಲಿ ಸಾತೊಡ್ಡಿ ಜಲಪಾತಕ್ಕೆ ಹೋಗುವಾಗ ಕಾಲುದಾರಿಯಲ್ಲಿ ಟೊಂಗೆಯೊಂದರಿಂದ ನೇತಾಡುತ್ತಾ ಎದುರಾಗಿತ್ತು. ಮುಂದೆ ಪ್ರವಾಸಿಗರ ಭಯಕ್ಕೆ ಇಂತದೆ ಮತ್ತೊಂದು ಹಾವು ಬಲಿಯಾಗಿತ್ತು. ಅದು ಕಣ್ಣು ಕುಕ್ಕುತ್ತೆ ಎಂಬ ಸ್ಥಳೀಯರ ಮಾತನ್ನು ಉಪೇಕ್ಷಿಸಿ ನಕ್ಕಿದ್ದೆವು. ನಿಮ್ಮ ಬರಹ ಅದು ನಿಜವೆಂದು ತಿಳಿಸಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರೀತಿಯ ಪ್ರಕಾಶ್, ನಿಸರ್ಗ ನಿಜಕ್ಕೂ ಕೌತುಕಗಳ ವಿಶಿಷ್ಟ ಆಗರ. ಆ ಸಂಕೀರ್ಣತೆ ನಮ್ಮ ಜ್ಞಾನಕ್ಷಿತಿಜಗಳ ವಿಸ್ತಾರಕ್ಕೆ ಕ್ವಚಿತ್ತಾಗಿ ಮಾತ್ರ ಮಿಂಚುತ್ತದೆ. ಹಾಗೆ ಕೇಳಿದ ಮಾತುಗಳು ನಮ್ಮ ಅನುಭವಕ್ಕೆ ಹತ್ತಿರವಾಗದ ಹೊರತು ಅದೊಂದು ನಂಬಿಕೆ ಎಂಬ ಭಾವ ನಮ್ಮಲ್ಲಿ ಬಲವಾಗಿ ಬೇರೂರಿರುತ್ತದೆ. ಅನುಭವ ಹಂಚಿಕೊಂಡಿದ್ದಕ್ಕೆ ತಮಗೆ ವಿಶೇಷ ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹರ್ಷವರ್ಧನರೆ, ಹಸಿರು ಸುಂದರಿಯ ವರ್ಣನೆ ಚೆನ್ನಾಗಿತ್ತು. prascaರವರು ಹೇಳಿದಂತೆ ನಾನೂ ಇದುವರೆಗೆ ಜನ ಹೇಳುತ್ತಿದ್ದ, ಟೊಂಗೆಯಿಂದ ಹಾರಿ ನೇರ ಕಣ್ಣು ಕುಕ್ಕುವುದು ಎಂಬ ಮಾತನ್ನು ಸುಳ್ಳು ಅಂದುಕೊಂಡಿದ್ದೆ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆದಿತ್ಯವಾರ ಕೆ ಆರ್ ಪುರ, ಬೆಂಗಳೂರಿನಲ್ಲಿ ಕೆಲವರು ಹಾವಾಡಿಸುತ್ತಿದ್ದರು. ಅವರ ಬಳಿಯು ಈ ಹಾವಿತ್ತು (ಕೊಳಕ ಮಂಡಲ ಮತ್ತು ನಾಗರ ಹಾವು ಕೂಡ ಇದ್ದವು). ಆತನು ಹಸಿರು ಹಾವು ಕಣ್ಣು ಅಥವಾ ಕಿವಿಗೆ ತನ್ನ ಬಾಯಿಯಿಂದ ಹೊಡೆಯುವುದಾಗಿಯು ಹೇಳುತ್ತಿದ್ದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮ್ಮೂರ ಕಡೆ "ಬಿಲ್ಲು ಮರಿ" ಮತ್ತು "ಪಚ್ಚೆ ಮರಿ" ಅನ್ನುವ ಹಾವು ಬಹುಷಃ ಇದೇ ಇರಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮ್ಮೂರ್ಕಡೆ ಬಿಲ್ಲೂರದ (ಬಿಲ್ಲು ಹುರಿ, ಬಿಲ್ಲಿಗೆ ಕಟ್ಟುವ ಹುರಿಯಂತಿರುತ್ತದೆ ಎಂಬ ಅರ್ಥದ್ದು) ಹಾವು ಅಂತರೆ, ಆದ್ರೆ ಇದು ಅದಲ್ಲ. ಅದು ಹಸಿರು ಬಣ್ಣದ್ದಲ್ಲ. ಮೂತಿಯೂ ಇಷ್ಟುದ್ದ ಇರುವುದಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಉತ್ತಮ ಮಾಹಿತಿಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.