ಅಹಲ್ಯಾ ಸಂಹಿತೆ - ೧೬ (ಸೂರ್ಯನೊಡನೆ ಸಮಾಲೋಚನೆ)

0

"ನರನ ತಪಸ್ಸನ್ನು ಕೆಡಿಸದೆ ಇದ್ದಿದ್ದರೆ, ಅದು ಈ ಯುಗದಲ್ಲೆ ಮುಗಿಯುತ್ತಿರಲಿಲ್ಲವೆ ಬ್ರಹ್ಮದೇವ..?" ದೇವರಾಜನ ಕಾರ್ಯದ ಬಗ್ಗೆ ತನ್ನ ಅಸಂತೃಪ್ತಿಯನ್ನು ಮುಚ್ಚಿಡದೆ ಆಡಿದ್ದ ಸೂರ್ಯ..

" ನಾನು ಸೃಜಿಸಿದ್ದ ಕವಚವನ್ನು ಬೇಧಿಸಬಲ್ಲ ಪ್ರತಿವಸ್ತು ಸೃಷ್ಟಿಯಲ್ಲಿ ನರನಾರಾಯಣರು ಯಶಸ್ಸು ಸಾಧಿಸಿದ್ದ ಕಾರಣ, ಇದೇನು ದೊಡ್ಡ ವಿಷಯವೂ ಆಗಿರಲಿಲ್ಲ ಅಲ್ಲವೆ..?"

ದೇವರಾಜನಿಗೆ ಒಳಗೊಳಗೆ ಇರಿಸುಮುರಿಸಾದರು ಮೌನದ ಸೆರಗ್ಹಿಡಿದು ಸುಮ್ಮನೆ ಕೂತುಬಿಟ್ಟಿದ್ದ ; ಬ್ರಹ್ಮದೇವ ಮೊದಲೆ ಎಚ್ಚರಿಸಿದ್ದ - ಯಾವುದೆ ಕಾರಣಕ್ಕು ಮಾತುಕಥೆಯ ಹಾದಿ ತಪ್ಪಿಸಬಾರದೆಂದು.

" ನಿಜ.. ಸೂರ್ಯದೇವ.. ಅವೆಲ್ಲ ಈಗ ಮುಗಿದುಹೋದ ಕಥೆ.. ಆಡಿ ಪ್ರಯೋಜನವಿಲ್ಲ ಅಲ್ಲವೆ? ಈಗ ನಿನ್ನನ್ನು ಕರೆಸಿದ ಕಾರಣವೆಂದರೆ - ಮುಂದಿನ ಯುಗಕ್ಕೆ ತಳ್ಳುವುದನ್ನಂತು ತಪ್ಪಿಸಲಾಗದು, ಆದರೆ ಅದರ ಪರಿಣಾಮವನ್ನು ಹೇಗೆ ಕುಗ್ಗಿಸಬಹುದೆಂಬ ಸಲಹೆ ಪಡೆಯಲು.." ಪ್ರಾಮಾಣಿಕ ಕಳಕಳಿಯ ದನಿಯಲ್ಲಿ ನುಡಿದ ಬ್ರಹ್ಮದೇವ..

ಆ ಸಂಭವದ ಬಗ್ಗೆ ಸೂರ್ಯನಿಗು ಚೆನ್ನಾಗಿ ಅರಿವಿದ್ದಂತಿತ್ತು..,"ಅದನ್ನು ನಾನೂ ಬಲ್ಲೆ ತಾತಾ.. ಮಿಕ್ಕುಳಿದ ಸಹಸ್ರಕವಚನ ಶಕ್ತಿಯನ್ನು ಸಂಹರಿಸದೆ ಬಿಟ್ಟಲ್ಲಿ ಯುಗಾಂತರದ ಮೂಸೆಯಲ್ಲಿ ಆ ಶಕ್ತಿ ಬಾಹ್ಯ-ನಿಷ್ಕ್ರಿಯವಾಗಿದ್ದರು, ಅಂತರಾಳದಲ್ಲಿ ತನ್ನ ಅಂತಃಸತ್ವವನ್ನು ನಿರಂತರ ವೃದ್ದಿಸಿಕೊಳ್ಳುತ್ತಲೆ ಇರುತ್ತದೆ.. ಹೊಸಯುಗದ ಆರಂಭಕ್ಕೆ ಮುನ್ನ ಅದರ ಶಕ್ತಿ ಅದೆಷ್ಟು ಪಟ್ಟು ಹೆಚ್ಚಿರುವುದೊ ಹೇಳಲಾಗದು.. ಆ ಪ್ರಕ್ರಿಯೆಯೆ ತಪಸ್ಸಿಗೆ ಸಮನಾದ ಕಾರಣ ಹೊಸಯುಗದಲ್ಲಿ ಜಾಗೃತಗೊಂಡಾಗ ವರ ಪಡೆದ ಹೊತ್ತಿನಷ್ಟೆ ಶಕ್ತಿಯುತವಾಗಿದ್ದರೂ ಅಚ್ಚರಿಯಿಲ್ಲ; ಅಥವಾ ಇನ್ನೂ ಮಿಗಿಲಾಗಿ ಹೊರಹೊಮ್ಮುವ ಸಾಧ್ಯತೆಯೂ ಇಲ್ಲದಿಲ್ಲ... ಖೇದವೆಂದರೆ, ಸಹಸ್ರಕವಚನ ಶಕ್ತಿಯ ಮೂಲಸತ್ವ ತಾಮಸೀ ಗುಣದ ಅಂಶವುಳ್ಳದ್ದು.. ಹೀಗಾಗಿ ಅದು ಮತ್ತೊಂದು ದಾನವ ದೈತ್ಯನಾಗಿ ಹೊರಹೊಮ್ಮುವುದೆ ಹೊರತು ಸಾತ್ವಿಕ ಸಂತನಾಗಿಯಲ್ಲ.."

'ಮತ್ತೆ ಮೊದಲಿನಷ್ಟೆ ಶಕ್ತಿಯ ಹೊಸ ಸಹಸ್ರಕವಚ' ಎಂದ ತಕ್ಷಣವೆ ಬೆಚ್ಚಿಬಿದ್ದು ನೆಟ್ಟಗೆ ಕುಳಿತ ದೇವರಾಜ.. ಮತ್ತೆ ಸಹಸ್ರ ಕವಚ, ಮತ್ತೆ ಸಹಸ್ರ ಬಾರಿಯ ಕದನ, ಮತ್ತೆ ನರನಾರಾಯಣರ ತಪಸ್ಸು...ಕೂಡದೂ ....ಕೂಡದು..!

" ಸೂರ್ಯದೇವ, ಇದರಲ್ಲಿ ಸಂಪೂರ್ಣ ನನ್ನ ತಪ್ಪಿದೆಯೆಂದು ನಾನು ಬಲ್ಲೆ.. ಆದರೆ ಪರಿಸ್ಥಿತಿಯ ವಿವಶತೆ ನನ್ನಿಂದ ತಪ್ಪು ತೀರ್ಮಾನವಾಗುವಂತೆ ಮಾಡಿಸಿಬಿಟ್ಟಿತು.. ನಿಜ ಹೇಳುವುದಾದರೆ ನರನಾರಾಯಣರ ತಪದಿಂದ ನನ್ನ ಪದವಿ ಸುರಕ್ಷಿತವಾಗುತ್ತಿತ್ತೆ ಹೊರತು ಬಾಧಿತವಾಗುತ್ತಿರಲಿಲ್ಲ... ಅದನ್ನರಿಯದ ಮೂಢತನದಿಂದ ಈ ಅಚಾತುರ್ಯ ನಡೆದುಹೋಯ್ತು.. ಈಗ ಇದರಿಂದ ಪಾರಾಗುವ ದಾರಿಯೇನೆಂದು ಹೇಳಲಾರೆಯಾ?" ಎಂದ ಹೆಚ್ಚು ಕಡಿಮೆ ಅಂಗಲಾಚುವ ದನಿಯಲ್ಲಿ.

ದೇವರಾಜ ಆ ಬಗೆಯ ಕಾಳಜಿ, ಆತಂಕ, ವಿನಯ ತೋರುವುದು ಬಲು ಅಪರೂಪ - ಅದರಲ್ಲೂ ಸೂರ್ಯದೇವನಂತಹ ಸಮಸ್ಥಾಯಿ ಸಂವಾದಿಗಳ ಜತೆ.. ಮೂಲತಃ ಸದಾಶಯ, ಸರಳಮನದ ಸೂರ್ಯದೇವನನ್ನು ಕೂಡ, ದೇವೇಂದ್ರನ ಈ ಬೇಡಿಕೆಯ ದನಿ ಚಕಿತಗೊಳಿಸಿ, ಅವನೆಡೆಗೆ ಮೆತ್ತಗಾಗುವಂತೆ ಮಾಡಿಬಿಟ್ಟಿತ್ತು...

ಅವನ ಮುಖಭಾವದಲ್ಲಾಗುತ್ತಿದ್ದ ಬದಲಾವಣೆಗಳನ್ನೆ ಗಮನಿಸುತ್ತಿದ್ದ ಸೂಕ್ಷ್ಮಗ್ರಾಹಿ ಬ್ರಹ್ಮದೇವ ತನ್ನ ಮಾತನ್ನು ಸೇರಿಸುತ್ತ, "ಹೌದು ಸೂರ್ಯದೇವ... ಈ ಸಮಸ್ಯೆಗೆ ನಾವೊಂದು ಪರಿಹಾರ ಹುಡುಕದಿದ್ದರೆ.. ಮುಂದಿನ ಯುಗಕ್ಕೆ ನಾವೆ ಹೊಸ ಸಮಸ್ಯೆ ಹುಟ್ಟುಹಾಕಿ ಕಳಿಸಿದಂತಾಗುತ್ತದೆ.. ನಿನಗರಿವಿರುವಂತೆ ಈ ಯುಗಾಂತರ ಪ್ರಕ್ರಿಯೆಯೆ ಎಳ್ಳು-ಜೊಳ್ಳನ್ನೆಲ್ಲ ಶೋಧಿಸಿ, ಶುದ್ಧವಾದ ಹೊಸ ಹರಿವಾಣದಲ್ಲಿ ಬರಿಯ ಪರಿಶುದ್ಧ ಹೂರಣವನ್ನು ಮಾತ್ರ ಮುಂದಿನ ಯುಗಕ್ಕೆ ಕೊಂಡೊಯ್ಯುವ ಹವಣಿಕೆಯಲ್ಲವೆ? ನಾವಿದಕ್ಕೆ ಪೂರಕವಾಗುವ ರೀತಿಯಲ್ಲಿ ತಾನೆ ಪ್ರವರ್ತಿಸಬೇಕು ? ಪ್ರಳಯದ ಹೆಸರಿನಲ್ಲಿ ಇಡಿ ಜಗದ ಕೆಡುಕೆಲ್ಲ ವಿನಾಶದ ಹಾದಿ ಹಿಡಿದು, ಒಳಿತಿನ ಬೀಜರೂಪ ಮಾತ್ರ ಮುಂದಿನ ಯುಗಕ್ಕೆ ಪಯಣಿಸಬೇಕೆಂದು ತಾನೆ ನಮಗಿರುವ ಆದೇಶ ? ಈ ಸಹಸ್ರಕವಚನ ಶಕ್ತಿತೇಜ ಬರಿಯ ಪ್ರಳಯದ ರಭಸಕ್ಕೆ ಬಗ್ಗುವಂತದ್ದಲ್ಲ, ಅದನ್ನು ಅಧಿಗಮಿಸಿ ಮುಂದಿನ ಯುಗಕ್ಕೆ ಕಾಲಿರಿಸಿಬಿಟ್ಟರೆ ಸಂಭಾಳಿಸುವುದೆಂತು ?" ಎಂದ.

ಅವರಿಬ್ಬರ ಮಾತನ್ನೂ ಆಲಿಸುತ್ತಿದ್ದ ಸೂರ್ಯ ಮತ್ತೆ ಅಂತರ್ಮಥನದಲ್ಲಿ ಮಗ್ನನಾಗಿ ಆಲೋಚನೆಗಿಳಿದ.

ಅವನಿಗೀಗ ಸಹಸ್ರಕವಚನ ಮೇಲಿರುವುದು ಒಂದು ಬಗೆಯ ಪುತ್ರಪ್ರೇಮ.. ತನ್ನ ಪ್ರಯೋಗಕ್ಕೆ ತನ್ನನ್ನೆ ಒಡ್ಡಿಕೊಂಡನಲ್ಲ ಎಂದು ಅದಮ್ಯ ಪುತ್ರವಾತ್ಸಲ್ಯ... ಚಿಗುರೊಡೆದ ಗಳಿಗೆಯಿಂದ ದಿನೇದಿನೇ ಬೆಳೆಯುತ್ತ ಬಂದ ಈ ಭಾವನೆ ಈಗ ಅದೆಷ್ಟು ಬಲಿಷ್ಠವಾಗಿಬಿಟ್ಟಿದೆಯೆಂದರೆ, ಅವನೀಗ ಮಾನಸಿಕವಾಗಿ ತನ್ನ ಮಗನೆ ಎಂದು ಮನಸಾರೆ ಸ್ವೀಕರಿಸುವಷ್ಟು.

ಅದರಿಂದಾಗಿಯೆ ಅವನ ದಾನವ ರೂಪಿ ಕಾರ್ಯಗಳನ್ನು ಸಹಿಸಿಕೊಂಡು ಅವನ ಪರವಾಗಿ ವಾದಿಸಿಕೊಂಡು ಬಂದಿದ್ದಾನೆ..

ಅವನನ್ನು ರಕ್ಷಿಸಿಕೊಳುವುದೆಂತು.... ?

ಅವನ ದಮನ ಗುಣವನ್ನು ಹದ್ದುಬಸ್ತಿನಲಿಟ್ಟು ಅವನು ಲೋಕಕಂಟಕನಾಗದೆ ಲೋಕಪ್ರಿಯನಾಗುವಂತೆ ಕಾಪಾಡಿಕೊಳುವುದೆಂತು ? ಅದು ನಿಜಕ್ಕೂ ಸಾಧ್ಯವೆ ? ತನ್ನ ಪ್ರಯೋಗಶಾಲೆಯ ಮತ್ತಾವುದಾದರು ಫಲಿತಾಂಶವನ್ನು ಬಳಸಿಕೊಂಡು ಏನಾದರು ಮಾಡಲಿಕ್ಕೆ ಸಾಧ್ಯವಿದೆಯೆ ?

ಮಗನೆನ್ನುವ ಮಮತೆಯ ಭಾವ ಅದೆಷ್ಟೆ ಬಲವಾಗಿದ್ದರು ಲೋಕಹಿತವು ತನ್ನ ಜವಾಬ್ದಾರಿಯಲ್ಲವೆ ? ಅದೂ ಅಲ್ಲದೆ ಈ ಕಂಟಕವನ್ನು ನಿವಾರಿಸಿಕೊಳ್ಳದಿದ್ದರೆ ಈ 'ಬೃಹತ್ಮಹಾನ್ ದೇವ ಕಾರ್ಯ'ಕ್ಕೆ ತಾನಾಗಿಯೆ ಅಡೆತಡೆಯೊಡ್ಡಿದಂತಾಗಿ ಬ್ರಹ್ಮಾಂಡಕಾರಕ ಮೂಲಪ್ರಭೃತಿಗಳ ಅವಕೃಪೆ, ಮುನಿಸಿಗೂ ತುತ್ತಾಗಿಬಿಡುವುದಿಲ್ಲವೆ ?

ಹೀಗೆಲ್ಲಾ ಯೋಚಿಸುತ್ತ ಕುಳಿತ ಸೂರ್ಯನಿಗೆ ತಟ್ಟನೆ ಗೋಚರವಾಗಿತ್ತೊಂದು ಪರಿಹಾರದ ಹಾದಿ....

ಆ ಸಾಧ್ಯತೆಗು ಅವನ ಪ್ರಯೋಗಶೀಲತೆಯ ಪ್ರಯೋಗವೊಂದು ಕಾರಣವಾಗಿದ್ದುದು ಮಾತ್ರ ಆಕಸ್ಮಿಕ ಸಂಭವವೊ ಏನೊ ?

ಈಗ ಸೂರ್ಯದೇವ ನಡೆಸುತ್ತಿರುವ ಹೊಸ ಪ್ರಯೋಗವೆಂದರೆ - ಸೃಜಿತವಾದ ಶಕ್ತಿಸ್ವರೂಪ ಯಾವುದೆ ರೀತಿಯದಾಗಿದ್ದರೂ ಅದನ್ನು ಬದಲಿಸಿ ಮತ್ತೊಂದು ರೂಪವಾಗಿಸಲು ಸಾಧ್ಯವೆ ಎನ್ನುವುದು*.. ಉದಾಹರಣೆಗೆ ತಾಮಸತ್ವದ ಜೀವಿಯೊಂದರ ಮೂಲ ಸ್ವರೂಪವನ್ನು ಬದಲಿಸಿ ಸಾತ್ವಿಕಜೀವಿಯನ್ನಾಗಿಸುವುದು ಈ ಪ್ರಯೋಗದ ಒಂದು ಉದ್ದೇಶ..

(*ಸೂಚನೆ : ಕಥೆಯ ಓಟಕ್ಕೆ ಅನಗತ್ಯ ವಿವರವೆನಿಸಿ, ಕೊಂಚ ಸಂಬಂಧಿ ತರ್ಕ, ವಿವರಗಳನ್ನು ಕೊನೆಯಲ್ಲಿ ಟಿಪ್ಪಣಿಯಾಗಿ ಸೇರಿಸಿದ್ದೇನೆ. ಅದನ್ನು ಬಿಟ್ಟೆ ಓದಿಕೊಂಡರು ಕಥೆಯ ಓಘಕ್ಕೆ ಅಡ್ಡಿಯಾಗುವುದಿಲ್ಲ ; ಆವರಣದೊಳಗಿನ ಟಿಪ್ಪಣಿಯನ್ನು ವರ್ಜಿಸಿ ಮುಂದಿನ ಭಾಗದಿಂದ ಓದಿಕೊಳ್ಳಬಹುದು - ಲೇಖಕ )

ಹಿಂದೆ ಸಹಸ್ರಕವಚನನ್ನು ಪ್ರಯೋಗಕ್ಕೆ ಬಳಸಿಕೊಂಡ ಹಾಗೆ ಈ ಬಾರಿಯೂ ಅವನನ್ನೆ ಮತ್ತೊಮ್ಮೆ ಬಳಸಿಕೊಂಡು, ಅವನ ಮಿಕ್ಕುಳಿವ ತಾಮಸೀಶಕ್ತಿಯನ್ನು ಸಾತ್ವಿಕವಾಗಿ ಬದಲಿಸಲೆತ್ನಿಸಿದರೆ ಹೇಗೆ ?

ಅದು ಯಶಸ್ವಿಯಾದಲ್ಲಿ ಅವನು ಲೋಕಕಂಟಕನಾಗುವ ಬದಲು ಲೋಕಪ್ರಿಯನಾಗುವ ಸಾಧ್ಯತೆಯಿರುತ್ತದೆಯಾಗಿ ತನ್ನ ಪುತ್ರಭಾವದ ಅನುಭೂತಿಗು ತಂಪೆರೆದಂತಾಗುತ್ತದೆ... ಜತೆಗೆ ತನ್ನ ಪ್ರಯೋಗಕ್ಕೆ ಮತ್ತೊಂದು ಸೂಕ್ತ ಪ್ರಾಯೋಗಿಕ ನೆಲೆಯೂ ಸಿಕ್ಕಂತಾಗುತ್ತದೆ..

ಹೌದು ಇದೇ ಸರಿಯಾದ ಹಾದಿ..

(ಇನ್ನೂ ಇದೆ)

-----------------
( *ಟಿಪ್ಪಣಿ :

ಮೂಲತಃ ವಸ್ತುವೊಂದು ಶಕ್ತಿಯ ಪ್ರಕಟರೂಪಗಳಾದ ಜ್ಞಾನಶಕ್ತಿ-ಇಚ್ಛಾಶಕ್ತಿ-ಕ್ರಿಯಾಶಕ್ತಿಗಳು ಹಾಗು ತ್ರಿಗುಣಗಳಾದ ಸಾತ್ವಿಕ-ರಾಜಸ-ತಾಮಸ ಗುಣಗಳ ಜತೆ ಸೇರಿ ಹೊಂದಾಣಿಕೆಯಾಗಿ ತಾನೆ ತಮ್ಮ ಜಡಶಕ್ತಿಯನ್ನು ಚಲನಾತ್ಮಕ ಶಕ್ತಿಯಾಗಿ ಮಾರ್ಪಡಿಸಿಕೊಳ್ಳುವುದು..?

ಪ್ರತಿ ತ್ರಿಶಕ್ತಿಯ ಮೂಲಸ್ವರೂಪ, ಪ್ರತಿ ತ್ರಿಗುಣದ ಮೂಲಸ್ವರೂಪದ ಜತೆ ಸಂಯೋಜಿತವಾಗಿ ಹೊಂದಿಕೊಂಡು ತಾನೆ ವಿವಿಧ ಬಗೆಯ ಗುಣಧರ್ಮದ ಶಕ್ತಿ ಸ್ವರೂಪಗಳನ್ನು ಪ್ರಕಟವಾಗಿಸುತ್ತಿರುವುದು ? ಒಂದು ರೀತಿಯಲ್ಲಿ ಮುವ್ವತ್ತಾರು ತತ್ವಗಳೆಂಬ ಹೆಸರಿನಲ್ಲಿರುವ ಸೈದ್ದಾಂತಿಕ ಮೂಲಧಾತುಗಳೆ ಈ ಶಕ್ತಿಮೂಲಗಳು ತಾನೆ ?

ಈ ಮುವ್ವತ್ತಾರರ ಮೂಲ ಸರಕೆ ಪ್ರಪಂಚದಲ್ಲಿರುವ ಮಿಕ್ಕೆಲ್ಲ ಬಗೆಯ ಜಡ, ಚೇತನಶಕ್ತಿಯ ಪ್ರಕಟರೂಪದ ಮೂಲ ಸ್ವರೂಪಗಳು. ಯಾವ ಸ್ವರೂಪ ಎಷ್ಟು ಪ್ರಮಾಣದಲ್ಲಿರುವುದೆನ್ನುವುದರ ಮೇಲೆ ಆ ಶಕ್ತಿಯ ಬಾಹ್ಯ ಸ್ವಭಾವವು ನಿರ್ಧಾರಿತವಾಗುತ್ತದೆ...

ಅದರಿಂದಾಗಿಯೆ ವಿವಿಧ ವಸ್ತುಜೀವಿಗಳ ಸ್ವಭಾವ, ಪ್ರಕ್ರಿಯೆ ಬೇರೆ ಬೇರೆಯದೆ ರೂಪದಲ್ಲಿರುವುದು.. ಅಷ್ಟೇಕೆ.. ಜೀವಕೋಶಗಳಲ್ಲಿರುವ ವರ್ಣತಂತುವಿನಲ್ಲಿ ಸೂಕ್ಷ್ಮಾತಿಸೂಕ್ಷ್ಮ ರೂಪದಲ್ಲಿ ತುಂಬಿಸಿಟ್ಟ ವಂಶವಾಹಿ ಸರಕಿಗು ಇದೆ ಮೂಲವಸ್ತು - ವರ್ಣತಂತುವಿನ ರೂಪದಲ್ಲಿ ತಂತಾನೆ ನಿರಂತರ ಸಂತತಿಯಿಂದ ಸಂತತಿಗೆ ಪ್ರವಹಿಸಿಕೊಂಡು ಹೋಗುವ ಹಾಗೆ..

ಈ ಮೂಲಸತ್ವಗಳಿಂದೊಡಗೂಡಿ ಸೃಜಿತವಾದ ವಸ್ತುಗಳಾಗಲಿ, ಜೀವಿಗಳಾಗಲಿ ತಮ್ಮ ಗುಣಧರ್ಮವನ್ನು ಪ್ರದರ್ಶಿಸುವುದು ಅವುಗಳಲ್ಲಿರುವ ಈ ಶಕ್ತಿ ಗುಣತತ್ವಗಳ ಅನುಪಾತ, ಸಾಂದ್ರತೆಯನುಸಾರ.. ಸಾತ್ವಿಕ ಸಾಂದ್ರತೆ ಹೆಚ್ಚಿದ್ದರೆ ಸಾತ್ವಿಕ ನಡೆನುಡಿ, ತಾಮಸವಿದ್ದಲ್ಲಿ ತಾಮಸೀ ಪ್ರವೃತ್ತಿ.. ಇತ್ಯಾದಿ...)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):