ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು -೫

5

ಕಂದಹಾರ್ ಏರ್ ಬೇಸ್ ಎಂಬ ಯುದ್ಧ ನಗರಿ :

ಉಸಿರು ಬಿಗಿ ಹಿಡಿದುಕೊಂಡೇ ಜರುಗಿದ ಪ್ರಯಾಣ ಮುಕ್ತಾಯ ಹಂತಕ್ಕೆ ಬಂದಿತ್ತು. ಕಂದಹಾರ್ ನಿಲ್ದಾಣದಲ್ಲಿ ಇನ್ನೇನು ಕೆಲ ನಿಮಿಷಗಳಲ್ಲಿ ಇಳಿಯುತ್ತಿದ್ದೇವೆಂಬ ಸಂದೇಶ ಕಾಕ್-ಪಿಟ್ ನೆಡೆಯಿಂದ ಬಿತ್ತರವಾಗುತ್ತಿತ್ತು. ಒಮ್ಮೆಗೇ ಎಚ್ಚೆತ್ತವರಂತೆ ಎಲ್ಲರೂ ತಮ್ಮ ಅಸ್ತ-ವ್ಯಸ್ತ ಶಿರಸ್ತ್ರಾಣಗಳನ್ನು, ದೇಹಗವಚಗಳನ್ನು ಸರಿ ಮಾಡಿಕೊಳ್ಳುತ್ತಿದ್ದರು. ಗುಜು ಗುಜು ಮಾತಿನ ಗೊಂದಲದ ಸಂತೆ ನಿರ್ಮಾಣವಾಗಿತ್ತು. ನನ್ನ ಬಲು ದೊಡ್ಡ ನಿಟ್ಟುಸಿರೊಂದು ಆ ಸಂತೆಯೊಳಗೆ ಯಾರರವಿಗೂ ಬಾರದಂತೆ ಲೀನವಾಗಿಬಿಟ್ಟಿತ್ತು. ಸರದಿಯಾಗಿ ಎಲ್ಲರೂ ಇಳಿದು ಮಿಲಿಟರಿ ಟರ್ಮಿನಲ್ ಕಡೆಗೆ ಹೆಜ್ಜೆ ಹಾಕುತ್ತಿದ್ದೆವು. ಭಾರತದ ವಿಮಾನವೊಂದು ತಾಲಿಬಾನಿಗಳಿಂದ ಅಪಹರಿಸಲ್ಪಟ್ಟು ನಿಲ್ಲಿಸಲಾಗಿದ್ದ ಸ್ಥಳದ ಹತ್ತಿರದಲ್ಲೇ ನಡೆದು ಹೋಗುತ್ತಿದ್ದೆ. ನೂರಾರು ವರ್ಷಗಳಿಂದ ಇಲ್ಲಿ ನಡೆಯುತ್ತಿರುವ ದೀರ್ಘ ಸಂಘರ್ಷವನ್ನ ನೋಡಿ ಬೇಸತ್ತ  ಆ ಪರ್ವತ ಸಾಲುಗಳು, ಅಂದು ಅಲ್ಲೇನೂ ಅಂತಹ ಮಹತ್ವದ್ದು ನಡೆಯುತ್ತಿಲ್ಲವೇನೋ ಎಂಬಂತೆ ಉದಾಸೀನವಾಗಿ ಕುಳಿತುಬಿಟ್ಟಿದ್ದವೇನೋ? ಪ್ರಾಣವನ್ನು ಮುಷ್ಟಿಯಲ್ಲಿಡಿದು, ಆ ನಿಸ್ತೇಜ ಪರ್ವತ ಸಾಲುಗಳ ದಿಗಂತವನ್ನು ಇಣುಕಿ ನೋಡುವ ಏಕತಾನತೆಯಲ್ಲೇ ವಿಮಾನದೊಳಗಿದ್ದ ಆ ಪ್ರಯಾಣಿಕರೆಲ್ಲರೂ ಲೀನವಾಗಿಬಿಟ್ಟಿದ್ದರೇನೋ? ಅದೆಲ್ಲವನ್ನೂ ಮೆಲುಕು ಹಾಕುತ್ತಿದ್ದ ಆ ಕ್ಷಣವಂತೂ ನನ್ನ ಮೈ ಝುಮ್ಮೆನ್ನಿಸುತ್ತಿತ್ತು. "ಇಂತಹ ಜಾಗಕ್ಕೆ ಬಂದ ನಾನು ಪುಣ್ಯ ಮಾಡಿದ್ದೀನೆಯೇ ಅಥವಾ ಮಹಾನ್ ಪಾಪವೇ.. ಹೇಗೆ ಅಳೆಯುವುದು? ಎಲ್ಲಾ ವಿಧಿಯಾಟವಷ್ಟೇ! ಅವನಾಡಿಸಿದ ಹಾಗೆ ಎಲ್ಲವೂ... ಇಂದು ಇಲ್ಲಿ, ನಾಳೆ ಇನ್ನೆಲ್ಲೋ..? " ತಾತ್ವಿಕವಾಗಿ ಸ್ವಗತಿಸಿಕೊಳ್ಳುತ್ತಲ್ಲೇ ನನ್ನನ್ನು ನಾನೇ ಅದೆಷ್ಟು ಬಾರಿ ಸಮಾಧಾನಿಸಿಕೊಂಡೆನೆಂದು ನನಗೇ ಗೊತ್ತು. ಟರ್ಮಿನಲ್ ನ ಹೊರ ಚಪ್ಪರದಲ್ಲಿ ಬಂದು ನಿಂತು ನಮ್ಮ ಲಗೇಜುಗಳ ನಿರೀಕ್ಷೆ ಮಾಡುತ್ತಾ ನಿಂತೆವು. ತನ್ನ ತಳಮಟ್ಟದಲ್ಲಿ ಸಣ್ಣ ಚಕ್ರಗಳೊಟ್ಟಿಗೆ ಹರವಾದ ವೇದಿಕೆಯನ್ನು ಹೊಂದಿಸಿಕೊಂಡಿದ್ದ ಪುಟ್ಟ ಟ್ರಕ್ ಒಂದು ನಮ್ಮ ಸಮಾನು-ಸರಂಜಾಮುಗಳನ್ನು ಹೊತ್ತು ತರುತ್ತಿತ್ತು.
ಅಲ್ಲಿನ ತೀಕ್ಷ್ಣ ಬಿಸಿಲಿನ ಹೊಡೆತ ತಪ್ಪಿಸಿಕೊಳ್ಳಲು ಮರ ಮತ್ತು ತಗಡಿನಿಂದ ಮಾಡಿದ ಹೊರ ಚಪ್ಪರವಿದೆ. ಚಪ್ಪರದ ಕೆಲ ಅಡಿಗಳ ಮೇಲೆ ಬಲೆಯಂತಹ ಪರದೆಯನ್ನ ಅಳವಡಿಸಿದ್ದರು. ಕಂದಹಾರ್ ನ ಕ್ಯಾಂಪಿನೊಳಗೆ ಹಲವಾರು ಕಡೆ ಆ ರೀತಿಯ ವ್ಯವಸ್ಥೆಯನ್ನ ಗಮನಿಸಿದ್ದೇನೆ. ಪ್ರಮುಖವಾಗಿ ಮಿಲಿಟರಿ ಕಚೇರಿಗಳು ಇಲ್ಲಾ ವಸತಿ ಸಮುಚ್ಚಯಗಳ ಮೇಲೆ ಹಾಗೆ ಪರದೆಯನ್ನ ಹಾಯಿ ಬಿಟ್ಟಿರುತ್ತಾರೆ. ಮೊದಮೊದಲು ಅದರ ಹಿಂದಿನ ಕಾರಣ ತಿಳಿದಿರಲಿಲ್ಲ. ಬಹುಶಃ ಅದನ್ನು ತಿಳಿಯಬೇಕೆಂಬ ಕುತೂಹಲವೂ ನನ್ನಲ್ಲಿರಲಿಲ್ಲ. ಏಕೆಂದರೆ ಮಿಲಿಟರಿಯಲ್ಲದವರಿಗೆ ಅಲ್ಲಿ ಅರ್ಥವಾಗದ ಅದೆಷ್ಟೋ ಸಂಗತಿಗಳಿರುತ್ತವೆ ಎನ್ನುವುದು ಎಲ್ಲರಿಗೂ ವೇದ್ಯವೇ. ಕಂದಹಾರ್ ಏರ್ ಬೇಸ್ ನಲ್ಲಿ ರಾಕೆಟ್ ಅಥವಾ ಶೆಲ್ ಆಕ್ರಮಣ ಸಾಮಾನ್ಯ ಸಂಗತಿ. ಎತ್ತರದ ಬೆಟ್ಟಗಳೆಡೆಯಿಂದ ಸಣ್ಣ ಪುಟ್ಟ ರಾಕೆಟ್ ಗಳು ಬಂದೆರಗುವುದು ಅಲ್ಲಿ ನಾವು ಉಸಿರಾಡುವಷ್ಟೇ ಸಾಮಾನ್ಯ. ಹಾಗೆ ಗಾಳಿಯಲ್ಲಿ ಹಾರಿಬರುವ ರಾಕೆಟ್ಟುಗಳು/ಶೆಲ್ ಗಳ ಮೂತಿಗೆ ಹಕ್ಕಿಯ ಪುಕ್ಕದ ಸಾಂದ್ರತೆಯಷ್ಟು ವಸ್ತು ತಾಗಿದರೂ ಸಾಕು, ಕಣ್ ಮಿಟುಕಿಸುವಷ್ಟರಲ್ಲಿ ಸ್ಫೋಟಿಸುತ್ತವೆ! ಪರದೆಯನ್ನ ಹಾಗೆ ಉಪಯೋಗಿಸುವುದರ ಗೂಡಾರ್ಥ ಅಷ್ಟೇ. ರಾಕೆಟ್ಟುಗಳು ಸ್ವಲ್ಪ ಎತ್ತರದಲ್ಲೇ ಸ್ಫೋಟಿಸುವಂತೆ ನೋಡಿಕೊಳ್ಳುವುದು ಮತ್ತು ಅದರ ಧ್ವಂಸ ಪ್ರಮಾಣ ತಗ್ಗಿಸುವುದು.
ಮೂವತ್ತರಿಂದ ನಲವತ್ತು ಮೈಲುಗಳ ದೂರದಿಂದ ಬರುವ ಬಹುತೇಕ ರಾಕೆಟ್ಟುಗಳು ಇಲ್ಲಿಗೆ ತಲುಪುವಷ್ಟರಲ್ಲಿ ತಮ್ಮ ಗುರಿಯನ್ನ ಮರೆತಂತೆ ಅದೆಲ್ಲೋ ನಿರ್ಜನ ಪ್ರದೇಶಕ್ಕೆರಗುತ್ತವೆ. ಹಾಗಾದರೆ ಎಲ್ಲವೂ ಸರಿ. ದುರಾದೃಷ್ಟವಶಾತ್ ಒಮ್ಮೊಮ್ಮೆ ಗುರಿ ತಲುಪಿ ಬಹಳಷ್ಟು ಸಾವು ನೋವುಗಳೂ ಸಂಭವಿಸಿದ್ದಿದೆ. ಮಿಕ್ಕೆಲ್ಲಾ ವರ್ಷಗಳಿಗೆ ಹೋಲಿಸಿದರೆ ೨೦೧೦ರಲ್ಲಿ ಹೆಚ್ಚಿನ ಆಕ್ರಮಣವಾಗಿದೆ ಎಂಬುದು ನಮ್ಮ ಕಂಪನಿಯ ಆಂತರಿಕ ಮಾಹಿತಿಯಿಂದ ತಿಳಿದ ಲೆಕ್ಕಾಚಾರ. ೨೦೧೦ರ ನವೆಂಬರ್ ನಲ್ಲಿ ನಮ್ಮ ಕಂಪನಿಯು ನಡೆಸುವ ಲಾಂಡ್ರಿಯೊಂದಕ್ಕೆ ನುಗ್ಗಿದ್ದ ರಾಕೆಟ್ ಒಂದು ಆಂಧ್ರದ ಒಬ್ಬ ಹುಡುಗನನ್ನು ಬಲಿ ತೆಗೆದುಕೊಂಡದ್ದು ಇತ್ತೀಚಿನ ಪ್ರಮುಖ ಘಟನೆ. ವಿಚಿತ್ರವೆಂದರೆ ಇದು ಸುದ್ದಿಯಾಗುವುದೇ ಇಲ್ಲ. ಮಿಲಿಟರಿಯವರಲ್ಲದೆ, ಅಮೆರಿಕೆಯ ಅಥವಾ ಯುರೋಪಿಗೆ ಸೇರಿದ ನೊಣ ಸತ್ತರೂ ಅದು ದೊಡ್ಡ ಸುದ್ದಿಯಾಗುತ್ತೆ. ಬೃಹತ್ ಮೊತ್ತದ ವಿಮೆ ಅವರ ಪರಿವಾರದ ಪಾಲಾಗುತ್ತದೆ. ಆದರೆ ಅಲ್ಲಿನ ಭಾರತೀಯ ಕೆಲಸಗಾರನ ಜೀವನ ಕೆಲಸ-ಸಂಬಳಕ್ಕಷ್ಟೇ ಸೀಮಿತ. ಅದೂ ಮಧ್ಯವರ್ತಿಗಳ ಕಮಿಶನ್ ಎಂಬ ಭೂತದ ನಂತರ. ಸತ್ತವನು ನಮ್ಮವ ಎಂದು ಯಾರೂ ಘೋಷಿಸಿಕೊಳ್ಳುವುದಿಲ್ಲ! ಯಾರಿಗೂ ರಿಸ್ಕ್ ತೆಗೆದುಕೊಳ್ಳಲು ಸುತಾರಾಂ ಇಷ್ಟವಿಲ್ಲ. ಕಂಪನಿಯು ಮಧ್ಯವರ್ತಿಗಳಿಂದ ಅವರನ್ನು ಖರೀದಿಸಿರುತ್ತಾರೆ. ಮಧ್ಯವರ್ತಿಗಳು ನಮಗಿದರ ಸಂಬಂಧವೇ ಇಲ್ಲವೆಂದು ಸುಮ್ಮನಿದ್ದುಬಿಡುತ್ತಾರೆ. ಬಹುತೇಕ ಮಧ್ಯವರ್ತಿಗಳು ಅನಧಿಕೃತ ದಂಧೆ ನಡೆಸುತ್ತಿರುವವರೇ! ನಮ್ಮ ರಾಯಭಾರಿ ಕಚೇರಿಗಳು ಅದೇನು ಮಾಡುತ್ತಿವೆಯೋ ದೇವರಿಗೇ ಗೊತ್ತು. ಇನ್ನೂ ವಿಚಿತ್ರವೆಂದರೆ ನ್ಯಾಟೊ ಅಥವಾ ಅಮೆರಿಕೆಯ ಮಿಲಿಟರಿಗೆ ಇದರ ಉಸಾಬರಿ ಬೇಕಾಗಿಲ್ಲ. ಕ್ಯಾಂಪಿನೊಳಗಿನ ಕಂಪನಿಗಳನ್ನು ಸಂಭಾಳಿಸುವ ಜವಾಬ್ದಾರಿಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡಿರುತ್ತಾರೆ. ಆ ಗುತ್ತಿಗೆದಾರ ಪ್ರಾಮಾಣಿಕನಾದರೆ ಸತ್ತವನ ದೇಹ ಅವನ ಮನೆಗೆ ತಲುಪಿ ಅವನ ಪರಿವಾರಕ್ಕೊಂದಿಷ್ಟು ವಿಮೆ ಹಣ ಸೇರುತ್ತದೆ. ಅದು ಅಪರೂಪವೇ! ಅವನ ದೇಹ ಊರು ಸೇರಿದರೇ ಹೆಚ್ಚು. 
ಕಾಬುಲ್ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಂತೆಯೇ ಕಂದಹಾರ್ ನಲ್ಲಿ ಎರಡು ಟರ್ಮಿನಲ್ ಗಳು. ಒಂದು ಸಾರ್ವಜನಿಕರಿಗಾಗಿ ಮತ್ತೊಂದು ಮಿಲಿಟರಿ ಉಪಯೋಗಕ್ಕಾಗಿ. ಇವೆರೆಡರ ಅಂತರ ಸುಮಾರು ಎರಡು ಫರ್ಲಾಂಗುಗಳಿರಬಹುದು. ಇಲ್ಲಿನ ಮಿಲಿಟರಿ ವಿಮಾನ ನಿಲ್ದಾಣ ಕಾಬೂಲ್ ನಲ್ಲಿರುವಂತೆ ಸುಸಜ್ಜಿತವಾದುದಲ್ಲ. ದಪ್ಪ ಬಲಿಷ್ಟ ಗೋಡೆಯ ಬಂಕರುಗಳಂತೆ ನಿರ್ಮಾಣ ಮಾಡಲಾಗಿದೆ. ಒಳ ಹೊಕ್ಕರೆ ಅದ್ಯಾವುದೋ ಕೋಟೆಗೆ ಬಂದೆವೆಂಬ ಅನುಭೂತಿ. ನಿರ್ಮಿಸಿ ತುಂಬಾ ವರ್ಷಗಳಾಗಿವಿಯೇನೋ ಅನ್ನಿಸುತ್ತದೆ. ನ್ಯಾಟೊ ಪಡೆ ಮತ್ತು ಅಮೆರಿಕ ಪಡೆಗೆಂದೇ ಎರಡು ಪ್ರತ್ಯೇಕ ಕೌಂಟರುಗಳಿವೆ. ವಿಮಾನದ ಸಿದ್ಧತೆಗನುಸಾರವಾಗಿ ಅಲ್ಲಿನ ಸಿಬ್ಬಂದಿ ನಿಗದಿತ ಪ್ರಯಾಣಿಕರನ್ನ ಕೂಗದ ಹೊರತು ಟರ್ಮಿನಲ್ ಒಳಗೆ ಯಾರಿಗೂ ಪ್ರವೇಶವಿಲ್ಲ. ಮೊದಲೇ ಹೇಳಿದ ಹಾಗೆ ಈ ಮಿಲಿಟರಿ ವಿಮಾನಗಳು ನಿರ್ಧಿಷ್ಟ ಸಮಯಕ್ಕೆ ಹಾರುವುದು ಇಲ್ಲಾ ಇಳಿಯುವುದು ಅಪರೂಪವೇ. ಹಾಗಾಗಿ ಕರೆ ಬರುವವರೆಗೆ ಗತ್ಯಂತರವಿಲ್ಲದೆ ಹೊರಗೆ ಕಾಯಲೇಬೇಕು. ಆದರೆ ಇದು ಹೊರಗಿನಿಂದ ಬರುವ ಪ್ರಯಾಣಿಕರಿಗೆ ಅನ್ವಯಿಸುವುದಿಲ್ಲ. ಟರ್ಮಿನಲ್ ನ ಹೊರಗಿದ್ದ ಕೌಂಟರ್ ನಲ್ಲಿ ನಮ್ಮ ಪಾಸ್-ಪೋರ್ಟ್ ಗಳನ್ನು ಒತ್ತೆಯಿಟ್ಟು ನ್ಯಾಟೊ ಮಿಲಿಟರಿಯ ಗುರುತಿನ ಚೀಟಿಯನ್ನು ಪಡೆಯಬೇಕು. ಇದು ಇಲ್ಲಿನ ವೀಸ ಇದ್ದ ಹಾಗೆ. ಗುರುತಿನ ಚೀಟಿಯನ್ನು ಪಡೆದು, ಈಗಾಗಲೇ ಮಣ ಭಾರವಿದ್ದ ದೇಹದ ಮೇಲೆ ನನ್ನ ಲಗೇಜ್ ಬ್ಯಾಗನ್ನು ಹೇರಿ ಫೆಟಾನ್ ನೊಡನೆ ಏರ್ ಬೇಸ್ ನೆಡೆಗೆ ನಡೆದೆ. ಹೊರಗೆ ದಿಲ್ಷನ್ ನಮಗಾಗಿ ಕಾಯುತ್ತಲಿದ್ದ. ನಮ್ಮ ಅವಸ್ಥೆಯನ್ನು ನೋಡಿ ನಮ್ಮೆಡೆ ಧಾವಿಸಿದ. ಲಗೇಜುಗಳನ್ನ ತನ್ನ ತೆಕ್ಕೆಗೆ ತೆಗೆದುಕೊಂಡು ಜೀಪಿನ ಹಿಂದಿನ ಭಾಗಕ್ಕೆ ಎಸೆದು ಉಸ್ಸೆಂದ. "ಪ್ರಯಾಣ ಸುಖವಾಗಿತ್ತೇ?" ಎನ್ನುತ್ತಾ ತನ್ನ ದಂತ ಪಂಕ್ತಿ ಪ್ರದರ್ಶಿಸುತ್ತಿದ್ದ ಕಡು ಕರಿಯ ದಿಲ್ಷನ್ ನ ಆ ಕ್ಷಣದ ರೂಪು ವರ್ಣಿಸಬೇಕಿಲ್ಲ! ನಾನು ಏನು ಹೇಳಬೇಕೆಂದು ತೋಚದೆ ಫೆಟಾನ್ ಮುಖವನ್ನು ನೋಡಿ ಒಮ್ಮೆ ತಿಳಿ ನಗೆ ನಕ್ಕು "ತುಂಬಾ ಚೆನ್ನಾಗಿತ್ತು" ಎಂದೆ. ಫೆಟಾನ್ ಇನ್ನೂ ಗಂಭೀರವದನನಾಗಿಯೇ ಇದ್ದ. ಸುತ್ತಲೂ ಧೂಳನ್ನೆರಚುತ್ತಾ ಆ ಜೀಪು ಕ್ಯಾಂಪ್ ನೊಳಗಿದ್ದ ನಮ್ಮ ಕಂಪನಿಯ ವಸತಿ ಸಮುಚ್ಚಯದೆಡೆಗೆ ಮುಖ ಮಾಡಿತು.
"ಐ ಯಾಮ್ ’ಹೆಟ್ಟಿ ಹೆವೇಜ್ ದಿಲ್ಷನ್ ’, ಪರ್ಸನಲ್ ಅಡ್ಮಿನಿಸ್ಟ್ರೇಟರ್ ಫಾರ್ ಕಂದಹಾರ್ ಆಫೀಸ್"... ಹೊಸದಾಗಿ ಕಂದಹಾರ್ ಏರ್ ಬೇಸ್ ಗೆ ಬರುವವರೆಲ್ಲರೊಡನೆಯೂ ಈ ಪ್ರವರವನ್ನು ಪಠಿಸಿಯೇ ತನ್ನನ್ನು ಪರಿಚಯಿಸಿಕೊಳ್ಳುತ್ತಿದ್ದ ದಿಲ್ಷನ್. ಹದಿನೈದು ದಿನಗಳ ಹಿಂದೆ ದುಬೈನಿಂದ ನಾನಿಲ್ಲಿಗೆ ಬಂದಾಗಲೂ ಇದೇ ರೀತಿ ಪರಿಚಯಿಸಿಕೊಂಡಿದ್ದ. ಈಗಾಗಲೇ ನಾನವನಿಗೆ ಹಳಬ, ಮತ್ತೊಮ್ಮೆ ಪ್ರವರಿಸುವ ಅವಶ್ಯಕತೆ ಅವನಿಗಿರಲಿಲ್ಲ. ಇಪ್ಪತ್ತಾರರ ಹರೆಯ ಆತನದು. ಸ್ವಲ್ಪ ಚಂಚಲ ಸ್ವಭಾವದ ವ್ಯಕ್ತಿತ್ವ. ಕೊಲಂಬೊ ಬಳಿಯ ಯಾವುದೋ ಚಿಕ್ಕ ಪಟ್ಟಣದವನಂತೆ. ಅವನ ಅಸ್ಖಲಿತ ಆಂಗ್ಲ ಭಾಷೆ ಕೇಳುವುದಕ್ಕೆ ತುಂಬಾ ಚೆಂದ. ಅಷ್ಟೇ ಸೊಗಸಾಗಿ ತಮಿಳು ಮಾತನಾಡಬಲ್ಲ. ಇಲ್ಲಿಗೆ ಬಂದು ಎರಡೂವರೆ ವರ್ಷವಾಗಿದೆ. ಇಲ್ಲಿನ ೨೫ ಚದರ ಕಿಲೋ ಮೀಟರ್ ವಿಸ್ತಾರದ ಮೂಲೆ ಮೂಲೆಯೂ ಅವನಿಗೆ ಪರಿಚಿತ. ಒಮ್ಮೆಯಾದರೂ ಭಾರತಕ್ಕೆ ಬರಬೇಕೆಂಬ ಹಂಬಲ ಆತನದು. ಬಹುಶಃ ಅವನೊಬ್ಬನೇ ಶ್ರೀಲಂಕಾ ಪ್ರಜೆ ನಮ್ಮ ಕಂಪನಿಯಲ್ಲಿದ್ದದ್ದು. ಮಾರ್ಕೆಟಿಂಗ್ ನಲ್ಲಿ ಕೆಲಸ ಅರಸಿ ದುಬೈಗೆ ಬಂದ ಆತ ಈಗ ಇಲ್ಲಿದ್ದಾನೆ. ಅದ್ಯಾವ ಶಕ್ತಿ ಅವನನ್ನ ಇಲ್ಲಿಗೆ ಕರೆ ತಂದಿದಿಯೋ ಗೊತ್ತಿಲ್ಲ. "ಇನ್ನೆರಡು ವರ್ಷ ಸಾಕು. ಅಕಸ್ಮಾತ್ ಬದುಕುಳಿದರೆ, ಕೊಲಂಬೋಗೆ ಹೊರಟು ಹೋಗ್ತೀನಿ".. ಸಾಕು ದುಡಿದದ್ದು. ಅನ್ನುತ್ತಿದ್ದ. ಅದೇನೋ ಗೊತ್ತಿಲ್ಲ, ಅಲ್ಲಿನ ವಿಶೇಷ ಅಂದರೆ ಯಾರನ್ನೂ ಕೇಳಿದರೂ ಒಂದೆರಡು ವರ್ಷ ಸಾಕು, ಆಮೇಲೆ ಹೊರಟು ಹೋಗೋದೇ.. ಅನ್ನುತ್ತಿದ್ದರು.
ಸುಮಾರು ನಲವತ್ತು ಸಾವಿರ ಜನರು ವಾಸಿಸುತ್ತಿರುವ ಬಹು ದೊಡ್ಡ ಮಿಲಿಟರಿ ಯುದ್ಧ ಕ್ಯಾಂಪ್ ಆ ಕಂದಹಾರ್ ಏರ್ ಬೇಸ್. ಪ್ರತಿಶತ ೭೦ರಷ್ಟು ಮಿಲಿಟರಿಯವರು ಹಾಗೂ ೩೦ರಷ್ಟು ಇತರೆ ನಾಗರೀಕರು. ಏರ್ ಬೇಸ್ ನ ಆಡಳಿತ ಜವಾಬ್ದಾರಿ ನ್ಯಾಟೊ ಪಡೆಯಾದ್ದರಿಂದ ನ್ಯಾಟೊ ಪಡೆಯ ಸೈನಿಕರೇ ಹೆಚ್ಚು. ಬಹುತೇಕ ಯೂರೋಪಿನ ಎಲ್ಲಾ ರಾಷ್ತ್ರಗಳೂ ಸೇರಿದಂತೆ, ಆಸ್ಟ್ರೇಲಿಯ, ಕೆನಡ, ಕೆಲ ಗಲ್ಫ್ ರಾಷ್ಟ್ರಗಳು ಹಾಗೂ ಅಮೆರಿಕೆಯ ಸೈನಿಕ ಪಡೆಗಳು ನ್ಯಾಟೊ ಪಡೆಯ ಸದಸ್ಯರು. ಆದ್ದಾಗ್ಯೂ ಅಲ್ಲಿ ಅಮೆರಿಕೆಯ ಸೈನಿಕರ ಪ್ರಭಾವ ಹೆಚ್ಚೆಂದೇ ನನ್ನ ಅನುಭವಕ್ಕೆ ಬಂದ ವಿಚಾರ. ಆಗ ತಾನೇ ಇರಾಕಿನ ಯುದ್ಧ ಮುಗಿಸಿ ಆಫ್ಘಾನ್ ನೆಡೆಗೆ ಸಮರೋಪಾದಿಯಲ್ಲಿ ಸಮರ ಸನ್ನದ್ಧತೆಗೆ ಆಗಮಿಸುತ್ತಿದ್ದರು. ಇವರಿಂದಾಗಿಯೇ ತಾನೇ ನಾನಿಲ್ಲಿಗೆ ಬರುವ ಪ್ರಮೇಯವೊದಗಿಬಂದದ್ದು! ಸೈನಿಕರಲ್ಲಿ ಮಹಿಳೆಯರೂ ಇದ್ದದ್ದು ನನಗೆ ತಕ್ಕ ಮಟ್ಟಿಗಿನ ಆಶ್ಚರ್ಯವೇ ಸರಿ. ಮತ್ತೆಲ್ಲಾ ದೇಶಗಳಿಗೆ ಹೋಲಿಸಿದರೆ ಅಮೆರಿಕೆಯ ಮಹಿಳಾ ಸೈನಿಕರ ಸರಾಸರಿ ಹೆಚ್ಚು. ಕೆಲ ಮಹಿಳಾ ಕೆಲಸಗಾರರೂ ಅಲ್ಲಿ ಇದ್ದದ್ದು ಅವರ ಗಂಡೆದೆಗೆ ಸಾಕ್ಷಿಯೇನೋ! ಮಿಲಿಟರಿ ಪಡೆಗಳ ಪ್ರತಿಯೊಂದು ಸೇವೆಗೂ ಹಲವಾರು ಖಾಸಗಿ ಕಂಪನಿಗಳ ಕೆಲಸಗಾರರು ಹಗಲು-ರಾತ್ರಿಯೆನ್ನದೆ, ವಾರಂತ್ಯದ ವಿಶ್ರಾಂತಿಯಿಲ್ಲದೆ ದುಡಿಯುತ್ತಿದ್ದ ಪರಿ ಅಚ್ಚರಿಯೇ ಸರಿ. ಬಹುತೇಕ ಕೆಲಸಗಾರರು ಭಾರತ, ನೇಪಾಳ, ಶ್ರೀಲಂಕಾ, ಫಿಲಿಪ್ಪೈನ್ಸ್, ಕೀನ್ಯ, ಉಗಾಂಡ, ಟರ್ಕಿ ಹಾಗೂ ಯೂರೋಪಿನ ಕೆಲ ಬಡ ರಾಷ್ಟ್ರದವರು. ನನ್ನಂತೆ ಕಾರ್ಯಾಧಾರಿತ, ನಿಯಮಿತ ಅಥವಾ ನಿಗದಿತ ಭೇಟಿಗೆಂದು ಬರುತ್ತಿದ್ದವರೂ ವಿಧ-ವಿಧ ದೇಶದ ಅನೇಕ ಮಂದಿ. ಕೇವಲ ಇಪ್ಪತ್ತೈದು ಚದರ ಕಿಲೊಮೀಟರ್ ವ್ಯಾಪ್ತಿಯಲ್ಲಿ ಪ್ರಪಂಚದ ೫೪ಕ್ಕೂ ಹೆಚ್ಚು ರಾಷ್ಟ್ರದ ನಲವತ್ತು ಸಾವಿರ ಮಂದಿ ಬದುಕುತ್ತಿದ್ದಾರೆಂದರೆ, ನನಗಂತೂ ಅದೊಂದು ನಿಜವಾದ ’ಗ್ಲೋಬಲ್ ವಿಲೇಜ್’ಅನಿಸುತ್ತಿತ್ತು.
ಕಾಬೂಲ್ ಏರ್ಪೋರ್ಟ್ ಸುತ್ತಲಿದ್ದ ಆಳೆತ್ತರದ ಸುರುಳಿ ತಂತಿ ಬೇಲಿಯ ಮಾದರಿಯೇ ಕಂದಹಾರ್ ಏರ್ ಬೇಸಿನ ಗಡಿಯನ್ನು ಆವರಿಸಿದ್ದದ್ದು. ಅದೂ ಕೂಡ ಎರಡು ಸುತ್ತಿನ ಬೇಲಿಯ ಕೋಟೆ. ಎರಡರ ಮಧ್ಯೆ ಐದಾರು ಮೀಟರ್ ಅಗಲದ ಬಹು ಆಳ ಕಂದಕ. ಬೇಲಿಯೋಲ್ಲಂಘನ ಎಂಥವರಿಂದಲೂ ಅಸಾಧ್ಯವಷ್ಟೆ. ಅದು ಆಗಸ್ಟ್ ತಿಂಗಳು. ಬೇಸಿಗೆ ಪ್ರಖರವಾಗಿತ್ತು. ಗಡಿ ಬೇಲಿಗೊಂದಿಕೊಂಡಂತೆ ಸಮಾನಾಂತರವಾಗಿದ್ದ ಒಳ ರಸ್ತೆಯುದ್ದಕ್ಕೂ ಕಂಪನಿಯ ಕಾರಿನಲ್ಲಿ ಒಮ್ಮೆ ಸುತ್ತು ಬಂದಿದ್ದೆ. ಅರ್ಧ ರಸ್ತೆಗೆ ಡಾಂಬರೀಕರಣವಾಗಿದೆ. ಮತ್ತರ್ಧ ರಸ್ತೆಯ ಸವಾರಿ ಸಿಮೆಂಟ್ ನಂತಹ ಧೂಳಿನೊಂದಿಗೆ ಸರಸವಾಡುತ್ತಾ ಮಾಡಬೇಕು. ಅಲ್ಲಿಯ ವಾತಾವರಣ ಹಾಗೂ ರಸ್ತೆಗಳೊಟ್ಟಿಗೆ ಹಲವಾರು ವರ್ಷ ಜಿದ್ದಿಗೆ ಬಿದ್ದಿದ್ದ ಕಾರಿನ ಹವಾ ನಿಯಂತ್ರಣ ಸಾಧನ ನಿಯಂತ್ರಿಸಲಾಗದಂತಹ ಸ್ಥಿತಿ ತಲುಪಿತ್ತು. ಕಿಟಕಿ ಮೇಲೇರಿಸಿದರೂ ಕಷ್ಟ, ಇಳಿಸಿದರೂ ಕಷ್ಟ! ಹತ್ತಾರು ಮೈಲು ದೂರ ಸಾಗುವಷ್ಟರಲ್ಲಿ ಮಣ್ಣಿನ ಮಗನಾಗಿಬಿಟ್ಟಿದ್ದೆ. ಬೇಲಿಯ ಹೊರಗೆ ವಿಶಾಲ ಹೊಲದಲ್ಲಿ ಕಲ್ಲಂಗಡಿ ಬೆಳೆಯಲಾಗಿತ್ತು. ಅನತಿ ದೂರದಲ್ಲಿ ಮಣ್ಣಿನ ಮನೆಗಳು ಗೋಚರಿಸುತ್ತಿದ್ದವು. ಬಹುಶಃ ತೋಟದ ಮನೆಯಂತಹಾ ಮನೆಯೇನೋ? ಅಲ್ಲಿ ಮನುಷ್ಯ ವಾಸವಿರುವ ಲಕ್ಷಣ ಕಾಣಿಸುತ್ತಿರಲಿಲ್ಲ. ಮಣ್ಣಿನ ಗೋಡೆಗಳು ಬಹುತೇಕ ಕರಗಿಹೋಗಿದ್ದವು. ನೀಲ ಬುರ್ಖಾದಲ್ಲಿದ್ದ ಕೆಲ ಮಹಿಳೆಯರು ಕಲ್ಲಂಗಡಿ ಕುಯ್ಲಿನಲ್ಲಿ ತಲ್ಲೀನರಾಗಿದ್ದರು. ಅದು ಅಲ್ಲಿನ ಬಹು ಮುಖ್ಯ ಬೆಳೆಯೆಂದು ನನಗೆ ಕಾಬೂಲಿನಲ್ಲಿದ್ದಾಗ ಆದ ಅನುಭವ. ಭಾಗಶಃ ಒಣಭೂಮಿಯದು. ಬಟಾ ಬಯಲಿನ ದಿಗಂತ ಅನತಿ ದೂರದಲ್ಲಿನ ಬೆತ್ತಲೆ ಬೆಟ್ಟಗಳ ಸಾಲುಗಳನ್ನ ತಬ್ಬಿಕೊಂಡಿತ್ತು. ಅಲ್ಲಿ ವ್ಯವಸಾಯಕ್ಕೆ ನೀರು ಹೇಗೆ ಒದಗಿಬರುತ್ತದೋ ಗೊತ್ತಿಲ್ಲ. ನೀರಿನ ಮೂಲ, ಕಾಲುವೆ, ಬೋರ್ ವೆಲ್ ನಂತಹ ವ್ಯವಸ್ಥೆ, ಯಾವ ಕಾಲದಲ್ಲಿ ಯಾವ್ಯಾವ ಬೆಳೆ? ಇನ್ನೆಷ್ಟೋ ವಿಷಯಗಳನ್ನ ತಿಳಿಯಬೇಕೆಂಬ ಹಂಬಲವಿತ್ತು. ಆ ಕ್ಷಣ ಅದು ದುಸ್ಸಾಧ್ಯವೇ ನಿಜ. ಇದು ಕಂದಹಾರ್ ಏರ್ ಬೇಸ್ ನ ಒಂದು ಮಗ್ಗುಲಿನ ಚಿತ್ರಾವಳಿಯಾದರೆ, ಇನ್ನೊಂದು ಮಗ್ಗುಲು ಅತೀ ಭಯಂಕರ. ಗಡಿ ಸರಹದ್ದಿನ ಒಳ-ಹೊರ ವಲಯಗಳಲ್ಲಿ ಬರೀ ಧ್ವಂಸದ ಕುರುಹುಗಳು. ಅರ್ಧಂಬರ್ಧ ಸುಟ್ಟು ಕರಕಲಾದ ವಿಮಾನಗಳ ರೆಕ್ಕೆಗಳು, ರಾಕೆಟ್ ನ ಲೋಹದ ಹೊರ ಕವಚಗಳು, ಗುರುತು ಸಿಗದಂತಹ ಅದೇನೇನೋ ವಸ್ತುಗಳ ರಾಶಿ. ಬಹು ದೊಡ್ಡ ಸಂಗ್ರಾಮವೇರ್ಪಟ್ಟುದುದಕ್ಕಿದ್ದ ಸಜೀವ ನಿದರ್ಶನವದು. ಯುಧ್ಧ ಶೇಷವೆಲ್ಲವನ್ನೂ ಅಲ್ಲಲ್ಲಿ ಅವ್ಯವಸ್ಥಿತವಾಗಿ ಸುರಿಯಲಾಗಿತ್ತೋ ಅಥವಾ ಅವನ್ನು ಇದ್ದಲ್ಲಿಯೇ ಹಾಗೆಯೇ ಬಿಟ್ಟಿದ್ದಾರೆಯೇ ತಿಳಿಯದು.  
ಅರೆ ಕ್ಷಣವೂ ಶಾಂತಿಯಿಂದಿರದ ವಾತಾವರಣವದು. ಗಾಳಿಯನ್ನು ಸೀಳಿ ಸುಯ್..... ಎನ್ನುವ ಯುದ್ಧ ವಿಮಾನಗಳ ಕಿವಿಗಡಚಿಕ್ಕುವ ಸದ್ದು. ಕಟ-ಕಟ ಎನ್ನುವ ಹೆಲಿಕಾಪ್ಟರುಗಳ ಗಿರಗಿಟ್ಲೆಯ ಸದ್ದು. ಇದ್ದಕ್ಕಿದ್ದಂತೆ ಹಾರುತ್ತವೆ! ಇದ್ದಕ್ಕಿದ್ದಂತೆ ಇಳಿಯುತ್ತಿರುತ್ತವೆ! ಬಾನೆತ್ತರಕ್ಕೆ ಚುಂಬಿಸುತ್ತಿದ್ದಂತೆಯೇ ಮತ್ತು ಬಂದಂತೆ ಡೋಲಾಯಮಾನವಾಗಿ ಓಲಾಡುತ್ತಾ ಎತ್ತೆತ್ತಲೋ ತಿರುಗಿ ಕ್ಷಣವೊಂದರಲ್ಲಿ ದಿಗಂತದಲ್ಲಿ ಲೀನವಾಗುವ ಪರಿ ನಿಮಿಷಕ್ಕೊಮ್ಮೆ ಲಭ್ಯ. ಅವೆಲ್ಲಿಗೆ ಹೋಗುತ್ತವೆಯೋ? ಯಾವ ಜಾಗದಲ್ಲಿ ಧ್ವಂಸ ಮಾಡಬೇಕೋ? ನನ್ನಂತಹ ಸಾಮಾನ್ಯನ ಅರಿವಿಗೆ ಅದಷ್ಟು ಸುಲಭವಾಗಿ ಬರುವಂತಹುದಲ್ಲ. ಜೀವನದಲ್ಲೆಂದೂ ನೋಡಿರದ ವಿಚಿತ್ರ ಯುದ್ಧ ವಿಮಾನಗಳು. ಕೆಲವು ಗಾತ್ರದಲ್ಲಿ ಅತ್ಯಂತ ಹಿರಿದಾದರೆ, ಕೆಲವಂತೂ ಕೇವಲ ಒಬ್ಬ ಕುಳಿತು ಚಲಾಯಿಸಬಹುದಾದ ಅತೀ ಸಣ್ಣ ಯುದ್ಧ ವಿಮಾನಗಳು. ಚಾಲಕ ರಹಿತ ’ಡ್ರೋನ್’ ಯುದ್ಧ ವಿಮಾನವಂತೂ ಸುಮಾರು ಎರಡು ಮೀಟರ್ ಉದ್ದ, ಅರ್ಧ ಮೀಟರ್ ಅಗಲದ ಏರೊಪ್ಲೇನ್ ಚಿಟ್ಟಿಯಂತೆ ಕಾಣಿಸುತ್ತಿತ್ತು. ಎರೆಡೆರೆಡು ಬೃಹತ್ ತಿರುಗು ಚಕ್ರಗಳನ್ನು ತನ್ನ ತಲೆಯ ಮೇಲೆ ಸಿಂಗರಿಸಿಕೊಂಡಿದ್ದ ಅಗಾಧ ಗಾತ್ರದ ಹೆಲಿಕಾಪ್ಟರುಗಳು ನನಗೆ ಡೈನೋಸಾರ್ ನಂತೆ ಭಾಸವೀಯುತ್ತಿದ್ದವು. ಬಹುತೇಕ ವಿಮಾನಗಳು ಹಾಗೂ ಹೆಲಿಕಾಪ್ಟರುಗಳನ್ನು ರನ್ ವೇಯ ಸಮಾನಾಂತರವಾಗಿ ಅದರುದ್ದಕ್ಕೂ ನಿಲ್ಲಿಸಲಾಗಿತ್ತು. ವಿಮಾನಗಳಿಗಿಂತಲೂ ಬೃಹತ್ತಾದ ಟೆಂಟ್ ಹ್ಯಾಂಗರ್ ಗಳನ್ನು(ತಾತ್ಕಾಲಿಕ ವಿಮಾನಾಶ್ರಯ ತಾಣ) ರನ್ ವೇಯ ಇಕ್ಕೆಲಗಳಲ್ಲಿ ಜೋಡಿಸಿಟ್ಟಂತೆ ಕಾಣುತ್ತಿತ್ತು. ಕಂದಹಾರ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಥವಾ ಹಾರುವಾಗ ಸುತ್ತಮುತ್ತಲಿನ ದೃಶ್ಯಾವಳಿಗಳನ್ನು ನೋಡಬೇಕು. ಸಾವಿರ ಸಾವಿರ ಯುದ್ಧ ವಿಮಾನಗಳು ಆಟಿಕೆ ಜೋಡಿಸಿಟ್ಟ ಹಾಗೆ ಕಾಣುತ್ತವೆ. ತನ್ನ ಸಾಲಿನಿಂದ ವಿಮುಖವಾಗಿ ರನ್ ವೇಯತ್ತ ಧಾವಿಸುತ್ತಿದ್ದ ವಿಮಾನಗಳು ಕೆಲವಾದರೆ, ಎಲ್ಲಿಂದಲೋ ರೊಯ್ಯನೆ ಇಳಿದ ಕೆಲವು ನಿಗದಿತ ಸಾಲಿನಲ್ಲಿ ಸೇರಿಕೊಳ್ಳಲು ಧಾವಿಸುತ್ತಿದ್ದ ದೃಶ್ಯ ಅಲ್ಲಿನ ಸೇನಾ ಶಿಸ್ತಿನ ಒಂದು ಮುಖವಷ್ಟೆ.
ಅದೊಂದು ಪೂರ್ವ ನಿಯೋಜಿತವಾಗಿ ಕಟ್ಟಲ್ಪಟ್ಟ ತಾತ್ಕಾಲಿಕ ಯುದ್ಧ ನಗರಿ. ಕಾಬೂಲಿನ ಏರ್ ಬೇಸ್ ನಲ್ಲಿ ಕಂಡಂತಹುದೇ ಯೋರೋಪಿನ ಮಾದರಿ ಶೈಲಿಯ ವಸತಿ ಸಮುಚ್ಚಯಗಳನ್ನು ಇಲ್ಲಿಯೂ ಕಾಣಬಹುದಾಗಿತ್ತು. ಎರಡರಿಂದ ಮೂರಂತಸ್ತಿನ ಕಟ್ಟಡಗಳವು. ಸೈನಿಕರಿಗೆ ಬಂಕರ್ ಗಳಂತೆ ಸುರಕ್ಷೆ ಯನ್ನೊದಗಿಸಲು ಸಂಪೂರ್ಣ ಕಾಂಕ್ರೀಟಿನಿಂದ ಇಂತಹ ಕಟ್ಟಡಗಳನ್ನು ನಿರ್ಮಿಸಿದ್ದರು. ಹೊರಗಿನ ಗೋಡೆಯ ಕವಚವನ್ನು ಕಡು ಕೆಂಪು ಬಣ್ಣದ ಸಣ್ಣ-ಸಣ್ಣ ಟೈಲ್ ನಂತಹ ಇಟ್ಟಿಗೆಗಳಿಂದ ಸಿಂಗರಿಸಿದ್ದರು. ಹೊರಗಿನಿಂದ ಇದು ಸಾಮಾನ್ಯ ಕಟ್ಟಡದಂತೆ ಕಾಣುತ್ತಿತ್ತು. ಈ ಮಾದರಿಯ ಒಂದು ಕಟ್ಟಡವನ್ನು ಸೈನಿಕ ಆಸ್ಪತ್ರೆಗೆ ಮೀಸಲಿಡಲಾಗಿತ್ತು. ಅದೊಂದು ಸುಸಜ್ಜಿತ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ. ಸೈನಿಕರಿಗಷ್ಟೇ ಅಲ್ಲದೆ ಅಲ್ಲಿರುವ ಪ್ರತಿಯೊಬ್ಬರಿಗೂ ಒಂದೇ ತೆರನಾದ ಚಿಕಿತ್ಸೆ ಲಭ್ಯ. ಅಮೆರಿಕೆಯ ಸೈನ್ಯದ ಉಸ್ತುವಾರಿಯಲ್ಲಿದ್ದ ಆಸ್ಪತ್ರೆಯದು. ಅಲ್ಲಿರುವ ವೈದ್ಯ, ಶುಶ್ರೂಷಕರೆಲ್ಲರೂ ಅಮೆರಿಕೆಯವರು. ಮುಂದೊಂದು ದಿನ ಈ ಆಸ್ಪತ್ರೆಯಲ್ಲಿ ನನ್ನ ಜೀವನದಲ್ಲಿ ಕಂಡಿರದಂತಹ ಕ್ಷಣಗಳನ್ನು ನೋಡಲಿದ್ದೇನೆ ಎಂದು ಮೊದಲ ಬಾರಿ ಅಲ್ಲಿಗೆ ಭೇಟಿಯಿತ್ತಾಗ ಅಂದುಕೊಂಡಿರಲಿಲ್ಲ.
ಬೆಂಕಿಪೊಟ್ಟಣಗಳನ್ನು ಅಡ್ಡುದ್ದ ಸಾಲಾಗಿ ಜೋಡಿಸಿದಂತೆ ಕಾಣುವ ಪುಟ್ಟ್-ಪುಟ್ಟ ಸೈನಿಕರ ವಸತಿ ಸಮುಚ್ಚಯಗಳೂ ಹೇರಳವಾಗಿ ಅಲ್ಲಿದ್ದವು. ಇವು ಉಕ್ಕಿನ ತಗಡು ಮತ್ತು ಫೈಬರ್ ಸಿಮೆಂಟ್ ನಿಂದ ತಯಾರದ ತಾತ್ಕಾಲಿಕ ಶೆಡ್ ನಂತಹ ಕಟ್ಟಡಗಳು. ಅಲ್ಲಿ ವಾಸಿಸುತ್ತಿರುವ ಎಲ್ಲಾ ಕೆಲಸಗಾರರಿಗೂ ಇಂತಹುದೇ ಮಾದರಿಯ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಹಗುರ ಉಕ್ಕಿನ ಹಾಳೆಗಳು ಮತ್ತು ಗ್ಲಾಸ್ ವೂಲ್ ಇನ್ಸುಲೇಶನ್ ಎಂಬ ವಸ್ತುವಿನ ಸ್ಯಾಂಡ್ ವಿಚ್ ನಿಂದ ತಯಾರಾದ ೨೦ x ೮ ಅಡಿ ವಿಸ್ತೀರ್ಣದ ಕಂಟೈನರ್ ಮಾದರಿ ಕೊಠಡಿಗಳನ್ನು ಒಂದಕ್ಕೊಂದರಂತೆ ಬಗ್ಗುಲಿಗೆ ಮತ್ತು ನೆತ್ತಿಯ ಮೇಲೆ ಸಾಲಾಗಿ ಜೋಡಿಸಿ ನಿರ್ಮಿಸಲಾಗಿದ್ದ ಕಟ್ಟಡಗಳವು. ಆಯಾ ಕಂಪನಿಗಳ ಅಗತ್ಯಕ್ಕೆ ತಕ್ಕಂತೆ ಒಂದರಿಂದ ಗರಿಷ್ಟ ಮೂರು ಅಂತಸ್ತಿನವರೆಗೆ, ೪೦ರಿಂದ ೧೨೦ ಮೀಟರ್ ಗಳವರೆಗೆ ಹರಡಿಕೊಂಡಿದ್ದವು. ಇಂತಹ ಕಟ್ಟಡಗಳು ಅಲ್ಲಿ ಅಷ್ಟೊಂದು ಸುರಕ್ಷಿತವಲ್ಲ. ಆದರೆ ಇವುಗಳ ಸುತ್ತ ಮೂರ್ನಾಲ್ಕು ಮೀಟರ್ ಎತ್ತರದ ಬಲಿಷ್ಟ ಕಾಂಕ್ರೀಟಿನ 'T - wall' ಗಳನ್ನು ಒಂದರ ಮಗ್ಗುಲಿಗೊಂದರಂತೆ ಜೋಡಿಸಿರಲಾಗುತ್ತದೆ. ಯಾವುದೇ ತೆರನಾದ ನಿರ್ಧಿಷ್ಟ ಎತ್ತರದ ಪಾರ್ಶ್ವ ಧ್ವಂಸವನ್ನು ಮಾತ್ರ ತಡೆಯಬಲ್ಲವು. ಆದರೆ ರಾಕೆಟ್ ಧಾಳಿ ಸ್ವಲ್ಪ ಎತ್ತರದಲ್ಲಿ ಅಥವಾ ಚಾವಣಿ ಮೇಲೆಯೇ ಆದಲ್ಲಿ ಅದೆಷ್ಟು ಪ್ರಾಣಗಳು ಮುಕ್ತಿ ಹೊಂದುತ್ತವೋ ಗೊತ್ತಿಲ್ಲ. ನನಗೆ ಇಂತಹುದೇ ಕಟ್ಟಡದಲ್ಲಿ ನೆಲ ಅಂತಸ್ತಿನ ಕೋಣೆಯನ್ನು ನೀಡಲಾಗಿತ್ತು. ಮೊದಲೇ ಹೇಳಿದ ಹಾಗೆ ಅಮೆರಿಕೆಯ ಸೈನಿಕರು ತಂಡೋಪ ತಂಡವಾಗಿ ಇಲ್ಲಿಗೆ ಬರುತ್ತಿದ್ದರಾದ್ದರಿಂದ ಅವರ ಸೇವೆಗೆ ನಿಯೋಜಿಸಿದ್ದ ಕೆಲಸಗಾರರೂ ದುಪ್ಪಟ್ಟಾಗುತ್ತಿದ್ದ ಸಮಯ. ೨೦ x ೮ ಅಡಿ ವಿಸ್ತೀರ್ಣದ ಕಂಟೈನರ್ ಮಾದರಿ ಕೊಠಡಿಗಳಲ್ಲಿ ಹೆಚ್ಚೆಂದರೆ ಇಬ್ಬರು ಇರಬಹುದೆನ್ನುವ ನ್ಯಾಟೊ ನಿಯಮವಿದೆ. ಅದೆಲ್ಲವನ್ನೂ ಗಾಳಿಗೆ ತೂರಿದ್ದ ಕಂಪನಿಗಳು ನಾಲ್ಕು ಐದು ಜನರನ್ನು ಕುರಿ ಕೊಟ್ಟಿಗೆಗೆ ದೂಡಿದ ಹಾಗೆ ತುಂಬುತ್ತಿದ್ದವು. ಅಲ್ಪ ಕಾಲದ ಅತಿಥಿಯಾಗಿದ್ದ ನನಗೆ ವ್ಯವಸ್ಥಿತವಾದ ಸಕಲ-ಸೌಕರ್ಯಗಳನ್ನೊದಗಿಸಲು ಅಲ್ಲಿನ ನಿರ್ವಾಹಕರಿಗೆ ಅಸಾಧ್ಯದ ಮಾತೇ ಸರಿ. ನಾನೂ ಪರಿಸ್ಥಿತಿಯ ತಲೆ ಬಾಗಿ ಹೊಂದುಕೊಳ್ಳುವುದರ ಹೊರತು ಮತ್ಯಾವ ದಾರಿಯಿರಲಿಲ್ಲ. ನಾಲ್ಕನೇ ಕುರಿಯಾಗಿ ಕೊಟ್ಟಿಗೆಗೆ ನಾನೂ ನುಗ್ಗಿದ್ದೆ.

 

ಚಿತ್ರ ಕೃಪೆ : http://www.contractmedic.com/

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮ್ಮ ಅನುಭವ ನಿಜಕ್ಕೂ ಅದ್ಭುತವಾಗಿದೆ. ಇಂದಿನ ಅಲ್ಲಿನ ಇಂತಹ ವಾತಾವರಣ, ಸ್ಥಿತಿ, ಇತ್ಯಾದಿಗಳೆಲ್ಲವೂ ಯಾರಿಗಾಗಿ, ಯಾವ ಘನ ಉದ್ದೇಶಕ್ಕಾಗಿ ಎಂದು ಚಿಂತಿಸುವವರು ಇದ್ದಾರೆಯೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

"ಇಂದಿನ ಅಲ್ಲಿನ ಇಂತಹ ವಾತಾವರಣ, ಸ್ಥಿತಿ, ಇತ್ಯಾದಿಗಳೆಲ್ಲವೂ ಯಾರಿಗಾಗಿ, ಯಾವ ಘನ ಉದ್ದೇಶಕ್ಕಾಗಿ ಎಂದು ಚಿಂತಿಸುವವರು ಇದ್ದಾರೆಯೇ?" ಮಹತ್ತರ ಉದ್ದೇಶವಿದೆಯಂತೆ. ಈ ವಿಷಯದ ಬಗ್ಗೆ ಇಲ್ಲಿನವರು ಮಾತಾನಾಡಿಕೊಳ್ಳುವ ಗಾಳಿಸುದ್ದಿಗಳನ್ನು ಮುಂದಿನ ಕಂತುಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡುತ್ತೇನೆ. ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.