ಆಷಾಡದ ಮುಂಜಾವು..

4

ಓ ಮನಸೆ ಪಾಕ್ಷಿಕದ 103ನೆ ಸಂಚಿಕೆಯಲ್ಲಿ 'ಮುಂಜಾವು' ಎನ್ನುವ ಹೆಸರಿನಲ್ಲಿ ಈ ಕೆಳಗಿನ ಕವಿತೆಯ ಪರಿಷ್ಕೃತ ಅವೃತ್ತಿ ಪ್ರಕಟವಾಗಿತ್ತು. ಆಷಾಢ ಮಾಸದಲ್ಲಿ ಪ್ರಕಟಿಸಲಾಗದ ಕಾರಣಕ್ಕೇನೊ, ಆ ಆಷಾಢದ ಪ್ರಸ್ತಾಪವಿದ್ದ ಸಾಲನ್ನು ತಿದ್ದಿ ಪ್ರಕಟಿಸಲಾಗಿತ್ತು. ಆ ಪದ್ಯದ ಮೂಲ ರೂಪ ಈ ಕೆಳಗಿದೆ 'ಆಷಾಢದ ಮುಂಜಾವು' ಎನ್ನುವ ತಲೆ ಬರಹದಡಿಯಲ್ಲಿ. 

ಆಷಾಡದ ಮುಂಜಾವು..
_________________________________

ಚುಮು ಚುಮು ಬೆಳಕ ಕಿವುಚಿ ಆಷಾಡದ ಕಾಳಿ
ಹಿಪ್ಪೆ ಹಿಂಡಿ ರಸ ತೆಗೆದ ಮಸುಕು ಮಸುಕ ಬೇಲಿ
ಹರಿದಂತೆ ಕನ್ನೆ ಮುಗ್ದತೆಯ ಆವರಣ ಕುಲುಕಿ
ಪಲುಕು ಪಲುಕಾಗರಳುತಿದೆ ಮನದ್ಯುತಿ ಕಲಕಿ ||

ಸಿಲುಕಿ ಹೋದ ಅರೆ ಮಬ್ಬಲಿ ಕಳುವಾದ ಹೊತ್ತು
ಬೆಳಕು ಹರಿವುದೊ ತೊರೆವುದೊ ಯಾರಿಗೆ ಗೊತ್ತು?
ಮುಸುಕಲಿ ಕವಿದ ಮೋಡ ಗಿಡ ಮರವೂ ನಿಗೂಢ
ಭೂತಾಕಾರದಿ ಹೊತ್ತ ಆಕಾರಗಳೆ ಭೀತಿಯ ಗಾಢ ||

ಅಲ್ಲೆಲ್ಲೊ ಮಾಮರ ಯಾತನೆ ಇಲ್ಲೆಲ್ಲೊ ಕಲರವ
ಗಿಡಗಂಟಿಗಳ ಬೆರೆಸಿ ನಿಸರ್ಗದ ಚಿತ್ತಾರ ನಿರ್ಭಾವ
ಹುಡುಕುತಲದರೊಳಗೇನನೊ ನಡೆದಿಹ ಅವನೊಬ್ಬ
ಕವಿಯೊ ಜ್ಞಾನಿ ವಿಜ್ಞಾನಿಯೊ ಕೊಲೆಗಡುಕಗು ಹಬ್ಬ ||

ಸವರಿ ತಂಗಾಳಿ ಚಲನೆ ಮುತ್ತಿಟ್ಟಂತೆ ಪ್ರಿಯ ಲಲನೆ
ಕಚಗುಳಿಯಿಟ್ಟಾಡಿಸುತ ಕುರುಳಿಗೆ ಸ್ವೇಚ್ಛಾ ಸಂಚಲನೆ
ಸುಯ್ದೆ ದಣಿದು ಬೇಸತ್ತು ಬೆವರಿ ಹನಿ ಪೋಣಿಸಿ ಇಬ್ಬನಿ
ಒಡಲ ನೋವೆಲ್ಲ ಧಾರೆ ಹುಲ್ಲುಲ್ಲು ಗರಿಕೆಯಲು ಕಂಬನಿ ||

ಭೀತಿ ನಿರ್ಭೀತಿ ಭಾವ ಕೊಳಚೆ, ಬೆಳಕಾಯ್ತು ಒಗೆಯಾಚೆ
ಅದುರಿಸುವ ಚಳಿಯ ಹೊದ್ದ ಸಖಿಗು ಬಿಡದೆ ಕಂಪಿಸುತೆ
ಮೆಲ್ಲಮೆಲ್ಲನೆ ಕಿರಣ ಅರಳರಳಿ, ಮಳ್ಳಿಯ ಮೈಗಾಭರಣ
ಸರಿದು ಹತ್ತಿರ ಅಪ್ಪುಗೆ, ಚುಂಬನದೆ ಕದಪಲಿ ತೋರಣ ||

------------------------------------------------------- 
ನಾಗೇಶ ಮೈಸೂರು
-------------------------------------------------------

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾಗೇಶ ಮೈಸೂರು ರವರಿಗೆ ವಂದನೆಗಳು
'ಆಷಾಡದ ಮುಂಜಾವು' ಕವನ ಸೊಗಸಾಗಿ ಮೂಡಿ ಬಂದಿದೆ. ಓ ಮನಸೆ ಪತ್ರಿಕೆಯಲ್ಲಿ ಈ ಕವನ ಪ್ರಕಟಗೊಂಡದ್ದು ಕೇಳಿ ಸಂತಸವಾಯಿತು. ನಿಮ್ಮ ಕವನ ಮತ್ತು ಬರಹಗಳು ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಯೋಗ್ಯತೆ ಇರುವಂತಹವು. ತಮ್ಮ ಕಾವ್ಯ ಪಯಣ ಹೀಗೆಯೆ ಮುಂದುವರಿಯಲಿ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾಟೀಲರೆ ನಮಸ್ಕಾರ. ನಿಮ್ಮಂತಹ ಹಿರಿಯ ಮತ್ತು ಅನುಭವಿ ಕವಿಹೃದಯದ ಮೆಚ್ಚುಗೆಗಿಂತ ಮತ್ತಾವ ಪಾರಿತೋಷಕ ಬೇಕು? ತಮ್ಮ ಆದರದ ಪ್ರತಿಕ್ರಿಯೆಗೆ ಎಂದಿನಂತೆ ಹೃತ್ಪೂರ್ವಕ ಧನ್ಯವಾದಗಳು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.