ಇದು ಯಾವ‌ ಬಸ್ಸು ?

4.875

ಲಗ್ನ ಆದ ಕೆಲ ವರ್ಷಗಳ ಬಳಿಕ ಗಂಡ ಹೆಂಡಿರ ಮುಖ ನೋಡಲು ಒಂದೇ ತರಹದ್ದಾಗಿಬಿಡುತ್ತದೆ ಎಂಬುದು ಕೆಲವರ ಅಂಬೋಣ,ಇನ್ನು ಕೆಲವರ ಅಪಾದನೆ,ನೋವು,ಹತಾಷೆ ಇತ್ಯಾದಿ ,ಹೀಗಾಗಿ ಅವರವರ 'ಧ್ರಡ'ವಾದ ಭಾವನೆಗಳಿಗೆ ಅವರೇ ಜವಾಬ್ದಾರರು.ಇದರ ಸಾಧಕ ಬಾಧಕಗಳ ಬಗ್ಗೆ ಗಂಭೀರ ಚರ್ಚೆ ಬೇಕು ಎಂಬ ನಿಮ್ಮ ತುಡಿತವನ್ನು ಹೇಗಾದರೂ ಬದಿಗಿಟ್ಟು ಇದೆ ತರಹದ ಇನ್ನೊಂದು ವಿಷಯವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.ಮೊದಲನೆಯದು ಎರಡು ಜೀವರ ನಡುವೆ ನಡೆಯುವ ಸಂವಹನದ ಪ್ರಕ್ರಿಯೆಯಾದರೆ ಎರಡನೆಯದ್ದು ಎರಡು ಜಡವಸ್ತುಗಳಲ್ಲಿ ಗಹನಾವಾಗಿ ಬೇರು ಬಿಟ್ಟಿರುವ ಸಂಬಂಧಗಳ ಸಂಕೋಲೆ.

 
ಈ ನಿಟ್ಟಿನಲ್ಲಿ ನಮ್ಮ ಬೆಂಗಳೂರಿನ ಮಹಾನಗರಿಯ ರಿಂಗ್ ರೋಡಿನಲ್ಲಿ ಹರಿದಾಡುವ ವೋಲ್ವೋ ಬಸ್ಸುಗಳು ಹಾಗು ಐ.ಟಿ ಕಂಪನಿಗಳ ಮುಖವೂ ಒಂದೇ ಆಗಿ ಬಿಟ್ಟಿದೆ ಎಂಬುದು ನನ್ನ ಬಲವಾದ ಗುಮಾನಿ.ಈ ನನ್ನ ಅನುಮಾನಕ್ಕೆ ಕಾರಣವಾದ ಹಲವಾರು ಅನುಭವಗಳು ನಿಮ್ಮ ಮುಂದಿಡುತ್ತಿದ್ದೇನೆ.
 
ಬನಶಂಕರಿ ಹಾಗು ಹೆಬ್ಬಾಳದ ನಡುವೆ ಬೆಂಗಳೂರಿನ ಅರ್ಧ ಪ್ರದಕ್ಷಿಣೆಯನ್ನು ನಿರಂತರವಾಗಿ ಮಾಡುವ ಈ ಬಸ್ಸಿನಲ್ಲಿ ನೀವು ಪ್ರಯಾಣಿಸಿದ್ದರೆ ನಿಮಗೂ ಇದೆ ತರಹದ ಅನುಭವಗಳು ಆಗಿರಲಿಕ್ಕೆ ಬೇಕು .ಮೊದಲಿಗೆ ನಮ್ಮ ಐ.ಟಿ ಕಂಪನಿಗಳ ನೌಕರಿ ಈ ನಿಶಬ್ಧವಾಗಿ ಚಲಿಸುವ ವೋಲ್ವೋ ಬಸ್ಸುಗಳ ಹಾಗೆ ಯಾವಾಗ ಹೋಗುತ್ತದೆ ಯಾವಾಗ ಬರುತ್ತದೆ ಎಂಬುದೇ ಗೊತ್ತಾಗುವುದಿಲ್ಲಾ.ಒಂದಡಿ ಹತ್ತಿರದಿಂದಲೇ ಈ ದೈತ್ಯಾಕಾರದ ಬಸ್ಸುಗಳು ನಿಮ್ಮ ಹತ್ತಿರ ಸುಳಿಯುತ್ತಿದ್ದರೂ ನಮಗೆ ಅದರ ಪರಿವೆ ಇಲ್ಲದೆ ಒಮ್ಮೆಲೇ ಒಂದು ಹಾರ್ನ್ ಜೊತೆಗೆ 
ರಿಸೆಶನ್ನಂತೆ ಪ್ರತ್ಯಕ್ಷವಾಗುವ ಈ ದೈತ್ಯಾಕಾರದ ಬಸ್ಸುಗಳು ಯಾರನ್ನಾದರು ಸ್ವಲ್ಪ ವಿಚಲಿತರನ್ನಾಗಿ ಮಾಡುತ್ತವೆ.
 
ಬಸ್ಸಿನ ವಾತಾವರಣ ನಿಮಗೆ ಒಂದು ಸಾಫ್ಟ್ವೇರ್ ಕಂಪನಿಯ  extended ಭಾಗವಾಗಿ ಕಾಣಿಸುತ್ತದೆ.ಮೊದಲನೆಯದಾಗಿ ಬಸ್ಸಿನಲ್ಲಿ ಕಿಕ್ಕಿರಿದು ಜನ ತುಂಬಿದ್ದರೂ ಯಾರು ಪರಸ್ಪರ ಒಂದು ಮಾತನ್ನು ಕೂಡಾ ಆಡುವುದಿಲ್ಲಾ, ಕಂಡಕ್ಟರ್ ಹೊರತಾಗಿ(ಐ.ಟಿ ಕಂಪನಿಗಳಲ್ಲಿಯೂ ಹಾಗೆ,ಮ್ಯಾನೇಜರ್ ಹೊರತಾಗಿ ಯಾರು ಈ ಸಹಾಸಕ್ಕೆ ಬಹುತೇಕ ಕೈ ಹಾಕುವುದಿಲ್ಲಾ). ಅದೇ ಬೇರೆ ಬಸ್ಸುಗಳಲ್ಲಿ ಯಾವಾಗಲು ಒಂದು ಸಂತೆಯ ವಾತಾವರಣ ನಿರ್ಮಾಣವಾಗಿ ಇದರಿಂದ ಚಾಲಕನಿಗೂ ತೊಂದರೆ ಉಂಟಾಗಬಹುದೆಂದು "ದಯವಿಟ್ಟು 
ಪ್ರಯಾಣಿಕರು ಚಾಲಕನೊಂದಿಗೆ ಮಾತನಾಡಬಾರದು" ಎಂಬ ಫಲಕವನ್ನು ಮುದ್ದಾಂ ಎಲ್ಲರಿಗು ರಾಚುವಂತೆ ಬರೆದಿರುತ್ತಾರೆ.ಆದರೆ ಇಲ್ಲಿ ಹಾಗಲ್ಲಾ,ಕಂಡಕ್ಟರ್ ಬಾಯಿ ಬಿಟ್ಟು ಕೇಳಿದರು ಕೆಲವೊಬ್ಬರು ಮಾತನಾಡುವುದಿಲ್ಲಾ.ಇದಕ್ಕೆ ಎರಡು ಮುಖ್ಯ ಕಾರಣಗಳಿವೆ, 
 
ಮೊದಲನೆಯದಾಗಿ ಭಾಷೆಯ ಸಮಸ್ಯೆ.ಕನ್ನಡಿಗರೇ ಅಲ್ಪಸಂಖ್ಯಾತರಾದ ಬೆಂಗಳೂರಿನಲ್ಲಿ,ಯಾರಾದರು ಅಪ್ಪಿ-ತಪ್ಪಿ,ಭಿಡೆಗೆ ಬಿದ್ದು,ನಾಲಿಗೆ ಕಚ್ಚಿ,ಧೈರ್ಯ ಮಾಡಿ ಕನ್ನಡದಲ್ಲಿ ಮಾತನಾಡಿ,ಎದುರಿಗಿರುವ ಆಸಾಮಿಗೆ ಕನ್ನಡದ ಗಂಧ-ಗಾಳಿಯೂ ಗೊತ್ತಿಲ್ಲವೆಂದು ತಿಳಿದು,"ನಿನಗೆ ಇಂಗ್ಲಿಷ್ನಲ್ಲಿ ಮಾತನಾಡಲೂ ಬರುವುದಿಲ್ಲಾವ ?"ಎಂಬ ಒಂದು ಯಕ್ಕಶ್ಚಿತ್ತ್ ದೃಷ್ಟಿ ಬೀರುವ ಆತನಿಂದ ನಿಮಗೆ ಆಗುವ "ಅವಮಾನ" ದಿಂದ ಪಾರಾಗಲು ಎಲ್ಲರು ಬಹುತೇಕ ಇಂಗ್ಲಿಷ್,ತೆಲುಗು ಅಥವಾ ತಮಿಳ್ ಭಾಷೇಯೇ ಬಳಸುತ್ತಾರೆ.ಎರಡನೆಯದು ಎಲ್ಲರು ತಮ್ಮ-ತಮ್ಮ ಲೋಕಗಳಲ್ಲಿ ಇಷ್ಟು ಮಗ್ನವಾಗಿರುತ್ತಾರೆಂದರೆ ಅವರಿಗೆ ಯಾರ ಜೊತೆಗೂ ಮಾತನಾಡುವ ಪುರುಸೋತ್ತಿರುವುದಿಲ್ಲಾ.ಹವಾನಿಯಂತ್ರಿತ ವಾತಾವರಣದಲ್ಲಿ ಘಾಮಾಡಿಸುವ ಬಸ್ಸ್ ಹತ್ತಿ, ತಮಗೆ ಸಿಕ್ಕ ಸೀಟಿನಲ್ಲಿ ಶಿಸ್ತಿನ ಸೀಪಾಯಿಗಳಂತೆ ಕುಳಿತ ಕ್ಷಣದಿಂದ,ತಮ್ಮ ತಮ್ಮ ಗ್ಯಾಜೆಟ್ಗಳಲ್ಲಿ ಹುದುಕಿಗೊಂಡು ಬಿಡುತ್ತಾರೆ.ಸೀಟು ಸಿಗದ ಕೆಲ ನತದ್ರಷ್ಟರು ತಮ್ಮ ಮಣಭಾರದ ಲ್ಯಾಪ್-ಟಾಪ್ ಚೀಲಗಳನ್ನು ಯಾರಾದರು ತೆಗೆದುಕೊಂಡು,ಅಹಲ್ಯೆ ಶಾಪದಿಂದ ವಿಮುಕ್ತಿಗೊಳ್ಳಲು ಶ್ರೀ ರಾಮನನ್ನು ಕಾಯ್ದಂತೆ, ತಮ್ಮ ಭಾರವನ್ನು ಇಳಿಸಲು ಬಸ್ಸಿನಲ್ಲಿ 
ಕುಳಿತಿರುವ ಇತರ ಪ್ರಯಾಣಿಕರತ್ತಾ ಪಿಕಿ-ಪಿಕಿ ನೋಡುತ್ತಾ ಬಹಳ ದೈನ್ಯದಿಂದ ನಿಂತಿರುತ್ತಾರೆ.
 
ಬಸ್ಸಿನಲ್ಲಿರುವ ಪ್ರಯಾಣಿಕರ ಹಾವ-ಭಾವಗಳನ್ನು ನೀವು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದ್ದರೆ ಅವರು ಐ.ಟಿ ಕಂಪನಿಗಳಲ್ಲಿ ಅಲಂಕರಿಸಿರುವ ಹುದ್ದೆಗಳ ಸ್ಥೂಲ ಪರಿಚಯ ನಿಮಗೆ ಸಿಗುತ್ತದೆ.ನಿರಂತರವಾಗಿ ಬ್ಲ್ಯಾಕ್ ಬೇರಿಗಳಲ್ಲಿ ಬೆರಳಾಡಿಸುವುದೇ ಜೀವನದ ಪರಮಗುರಿಯೆಂದು ತಿಳಿದು,ಬಾಲ ಸುಟ್ಟ ಬೆಕ್ಕಿನಂತೆ ಸದಾ ಚಡಪಡಿಸುತ್ತಾ, ಜೀವನದಲ್ಲಿ ಜೀಗುಪ್ಸೆ ತರಿಸುವ ಮ್ಯಾನೇಜರುಗಳು. ಬಹಳ ದಿನದಿಂದ ಫಿಕ್ಸ್ ಮಾಡಲೇಬೇಕಾದ "ಬಗ್ಗಿ"ನ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡು,ಎ.ಸಿ ಬಸ್ಸಿನಲ್ಲಿಯೂ ಸಣ್ಣನೆಯ ಬೆವರಿಳಿಸಿಕೊಂಡು,ತಲೆಕುದಲನ್ನು 
ಕಿತ್ತಿಕೊಳ್ಳುತ್ತಾ ತಮ್ಮ ಲ್ಯಾಪ್-ಟಾಪಿನ ಮಾನಿಟರ್ಗಳಲ್ಲಿ ಹುದುಗಿಹೋಗಿರುವ ಎಂಜಿನಿಯರುಗಳು,ತಾವು ಕೂಡಾ ಈ ಪರಿಸರದ ಭಾಗವಾಗಬೇಕು ಎಂಬ ಒಂದಿಷ್ಟು ಖಬರ್ ಕೂಡಾ ಇಲ್ಲದೆ,ಇತ್ತಿಚೀಗಷ್ಟೇ  ಕಾಲೇಜಿನಿಂದ ಹೊರಬಿದ್ದು,ಕ್ಯಾಮ್ಪಸ್ಸ್ ಇಂಟರ್ವ್ಯೂನಲ್ಲಿ ನೌಕರಿ ಗಿಟ್ಟಿಸಿ,ಮುಂದಾಗುವ ಅನಾಹುತದ ಪರಿಚಯವೇ ಇಲ್ಲದೆ, ಕಿವಿಗೆ ಹೆಡ್-ಫೋನ್ ಚ್ಹುಚ್ಚಿಕೊಂಡು ಎಫ್.ಎಮ್ ಕೇಳುತ್ತಾ,ಕೆಲವೊಂದು ಬಾರಿ ಇರುವಷ್ಟು ಜಾಗದಲ್ಲಿಯೇ ತಮ್ಮ ಸಂಗಾತಿಯ ಜೊತೆಗೆ ಪ್ರಣಯಕ್ಕೆ ತೊಡಗುವ ಫ್ರೆಶರ್ ಗಳು ಹಾಗು ನಿಮ್ಮನ್ನೆಲ್ಲಾ ಅಪ್ರೈಸಲ್ ಗಳಲ್ಲಿ 
ನೋಡಿಕೊಳ್ಳುತ್ತೇನೆ ಎಂದು ದ್ರಷ್ಟಿ ಬೀರುವ ನಾನು ಈ ಮೊದಲೇ ತಿಳಿಸಿದ ಮ್ಯಾನೇಜರ್ಗಳೋಳಗೊಂಡ ಹುಚ್ಚರ ಸಂತೆಯಾಗಿರುವ ಬಸ್ಸಿನಲ್ಲಿ ಪ್ರಯಾಸಪಟ್ಟು ಎಲ್ಲರಿಗು ಅವರವರ ಭಾಷೆಯಲ್ಲಿ ಮಾತನಾಡಿಸಿ  ಟಿಕಿಟ್ ಕೊಟ್ಟು, ಕೊಡಬೇಕಾದ ಚಿಲ್ಲರೆಯನ್ನೂ ಬಲವಂತವಾಗಿ ಕೊಟ್ಟು ಬಸ್ಸನ್ನು ಸಂಭಾಳಿಸಿಕೊಂಡು ಹೋಗುವ ನಮ್ಮ ಕಂಡಕ್ಟರ್ ಗಳಿಗೆ ಶಭಾಸ್ಗಿರಿಯನ್ನು ಕೊಡಲೇಬೇಕು.ಕೆಲವೊಮ್ಮೆ ಜನರು ತಮ್ಮ-ತಮ್ಮ ಕೆಲಸಗಳಲ್ಲಿ ಇಷ್ಟೊಂದು ಮಗ್ನವಾಗಿರುತ್ತಾರೆಂದರೆ ತಮಗೆ ಇಳಿಯಬೇಕಾದ ಸ್ಟಾಪಿನ ಬಗ್ಗೆಯೂ ನಿರಾಸಕ್ತಿ ತಾಳಿ,ಕಂಡಕ್ಟರ್ 
ನೆನಪಿಸಿದ ಬಳಿಕವೇ, ಒಮ್ಮೆಲೇ ಗರಬಡಿದವರಂತೆ ಬೇಗ-ಬೇಗ ಇಳಿದು ಹೋಗಲು ಮುಂದಾಗುತ್ತಾರೆ.
 
ಆರಾಮದಾಯಕವಾದ ಬಸ್ಸಿನಲ್ಲಿ ತಂಗಾಳಿಗೆ ಮೈಯೊಡ್ಡಿ ಒಳಗಿದ್ದ ಪ್ರಯಾಣಿಕರು ತುಂಬಾ ಲವಲವಿಕೆಯಿಂದಿರಬಹುದು ಎಂಬ ಹೊರಗಿನವರ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಬಸ್ಸಿನಲ್ಲಿ ಒಂದು ಬಿಗುವಿನ ವಾತಾವರಣವಿರುತ್ತದೆ.ಇಂಥಾ ವಾತಾವರಣ ತನ್ನ ಪಾರಾಕಾಷ್ಟೇ ತಲುಪುವುದು ಟ್ರಾಫಿಕ್ ಜಾಮ್ ಆದ ಸಂಧರ್ಭಗಳಲ್ಲಿ. ಅದರಲ್ಲಿಯೂ ಕೆ.ಅರ್.ಪುರಂ ಜಂಕ್ಷನ್ ಅಥವಾ ಸಿಲ್ಕ್ ಬೋರ್ಡ್ ಜಂಕ್ಷನ್ ಗಳಲ್ಲಿ ಬೆಳಗಿನ ಸಮಯವಂತೂ ಒಂದು ತೇರಿಲ್ಲದ ಜಾತ್ರೆಯಂತೆ ಗಿಜುಗುಡುತ್ತಿರುವ  ಜನ  ಹಾಗು ವಾಹನ ದಟ್ಟಣೆಯಿಂದ ಎಂಥಾ 
ಶರವೇಗದಲ್ಲಿ ಹೋಗುವ ವೋಲ್ವೋ ಬಸ್ಸುಗಳು ಸಹಾ ಓಬವ್ವನ ಒನಕೆಗೆ ಸಿಕ್ಕ ಹೈದರಾಲಿಯ ಸಿಪಾಯಿಗಳಂತೆ ತಮ್ಮ ವೇಗ ಕಳೆದುಕೊಂಡು ಈ ಫ್ಲೈ-ಒವರ್ಗಳ ಕೆಳಗೆ ನುಸುಳುವ ಪ್ರಯತ್ನ ಮಾಡುವುದನ್ನು ನೋಡಿ ಒಳಗಿರುವವರ ಮನಸ್ಸು ಚುರ್ರ್ ಎನ್ನದೆ ಇರುವುದಿಲ್ಲಾ.
 
ಈ ಮೇಲಿನ ವಿಷಯಕ್ಕೆ ಪೂರ್ವಕವಾಗುವಂತೆ, ನಮ್ಮ ಉತ್ತರ ಕರ್ನಾಟಕದ ಹೆಣ್ಣು ಮಕ್ಕಳು ನಳಾ ಬಂದು ನೀರು ತುಂಬುವ ಹೊತ್ತಿಗೆ ದೇವರೆನಾದರು ಪ್ರತ್ಯಕ್ಷನಾಗಿ ನಿನಗೇ ಬೇಕಾದ ವರ ಕೇಳಿಕೊ ಎಂದು ಕೇಳಿದರೆ "ನಳಾ ಹೋದ್ಮ್ಯಾಲೆ ಬಾರಪ್ಪಾ ನಮ್ಮಪ್ಪಾ.. ಈಗ ಅಗಂಗಿಲ್ಲಾ, ನಿನ್ನ ಜೊತಿ ಮಾತಾಡ್ಕೋತ ನಿಂತ್ರೆ ನಳದ್ ಮುಂದ ಝಗಳ ಯಾರ್ ಆಡ್ಬೇಕು ? ಹಂಗೆ ನಿಂಗ ಮುಗಿಲಿಕ್ಕೆ ಕೈನು ಖಾಲಿ ಇಲ್ಲಾ" ಎಂದು ದೇವರನ್ನೇ ಹಿಂತಿರುಗಿ ಕಳಿಸುವಂತೆ ಈ ಟ್ರಾಫಿಕ್ ಜಾಮಾದ ಸಂಧರ್ಭದಲ್ಲೂ ದೇವರೆನಾದರು ಬಂದು 
ಬಸ್ಸಿನಲ್ಲೀರುವವರನ್ನು ಇದೇ ರೀತಿ ಪ್ರಶ್ನೆ ಕೇಳಿದರೆ ಅವರಿಂದಲೂ ಸಹಾ ಹೆಚ್ಹು-ಕಮ್ಮಿ ಇದೇ ರೀತಿ ಉತ್ತರ ಸಿಗಬಹುದು "ಈ ಸಿಲ್ಕ್ ಬೋರ್ಡ್ ಸಿಗ್ನಲ್ ಒಂದು ನಮ್ಮ ಬಸ್ಸ ಧಾಟಲಿ ದೇವರೇ ಆಮ್ಯಾಲೆ ನಿಟ್ಟುಸಿರು ಬಿಟ್ಟು ವರ ಕೇಳ್ತೀನಿ, ನಾ ಯಲ್ಲೂ ಓಡಿ ಹೊಗಂಗಿಲ್ಲಾ" ಎಂದು . ಯಾಕೆಂದರೆ ಪ್ರತಿ ದಿನವು ಐ.ಟಿ ಕಂಪನಿಯಲ್ಲಿ ಸಿಲುಕುವ ವತ್ತಡಗಳಿಗೆ ಪೂರ್ವಭಾರಿ ತಯ್ಯಾರಿಯಂತೆ ನಮಗೆ ಈ ಬಸ್ಸುಗಳು ಹಾಗು ನಮ್ಮ ಸುತ್ತಮುತ್ತಲಿನ ವಾತಾವರಣ ಸಿದ್ಧಪಡಿಸುತ್ತವೆ ಎಂದರೆ ತಪ್ಪಾಗಲಿಕ್ಕಿಲ್ಲಾ.
 
ರಾತ್ರಿ ಎಂಟರ ಸುಮಾರಿಗೆ ಇಂತಹದ್ದೇ ಒಂದು ವಾತಾವರಣವಿರುವ ಬಸ್ಸ ಹತ್ತಿದ ನನ್ನಂಥಹಾ ಸಹ ಪ್ರಯಾಣಿಕರಿಗೆ ಒಂದು ವಿಶಿಷ್ಠ ಅನುಭವವಾದದ್ದು ಒಬ್ಬ ಮಹಿಳಾ ಕಂಡಕ್ಟರ್ ಒಬ್ಬರಿಂದಾ.ಅಪ್ಪಟ್ಟ ಕಾರ್ನ್(ಅರಳು) ಹುರಿದಂತೆ ಅವಳು ಇಂಗ್ಲಿಷ್ ನಲ್ಲಿ ಮಾತನಾಡುವ ಪರಿ ಎಲ್ಲರನ್ನು ಸೂಜಿಗಲ್ಲಿನಂತೆ ಅವಳತ್ತ ಆಕರ್ಷಿಸುತ್ತಿತ್ತು...
 
(ಮುಂದುವರೆಯುವುದು.....)
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಮ್ಮ ನಿರೀಕ್ಷಣೆ ಅದ್ಭುತವಾಗಿದೆ... ಮುಂದಿನ ಭಾಗಕ್ಕೆ/ಗಳಿಗೆ ಕಾಯುತ್ತೇನೆ. ಬೇಗ ಹಾಕಿ . ............................. "ಲಗ್ನ ಆದ ಕೆಲ ವರ್ಷಗಳ ಬಳಿಕ ಗಂಡ ಹೆಂಡಿರ ಮುಖ ನೋಡಲು ಒಂದೇ ತರಹದ್ದಾಗಿಬಿಡುತ್ತದೆ ಎಂಬುದು ಕೆಲವರ ಅಂಬೋಣ,ಇನ್ನು ಕೆಲವರ ಅಪಾದನೆ, " ಹೊಸ ವಿಚಾರ!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮಗೆ ಲೇಖನ‌ ಇಷ್ತವಾದುದ್ದಕ್ಕೆ ಧನ್ಯವಾದಗಳು ಸರ್ :) ಇದರ‌ ಮುಂದಿನ ಭಾಗ ಇಷ್ತರಲ್ಲೆ ಬರೆಯುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮಿಶ್ರಿಕೋಟಿಯವರೆ, >>>"ಲಗ್ನ ಆದ ಕೆಲ ವರ್ಷಗಳ ಬಳಿಕ ಗಂಡ ಹೆಂಡಿರ ಮುಖ ನೋಡಲು ಒಂದೇ ತರಹದ್ದಾಗಿಬಿಡುತ್ತದೆ ಎಂಬುದು ಕೆಲವರ ಅಂಬೋಣ,ಇನ್ನು ಕೆಲವರ ಅಪಾದನೆ, " ಹೊಸ ವಿಚಾರ!!!--- http://en.wikipedia.... ಗಿರಿಯವರೆ, ಬಸ್ ಮೊದಲ ಭಾಗ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಲಗ್ನ ಆದ ಕೆಲ ವರ್ಷಗಳ ಬಳಿಕ ಗಂಡ ಹೆಂಡಿರ ಮುಖ ನೋಡಲು .... ಇದಕ್ಕೆ ಒಂದು ವೈಜ್ಞಾನಿಕ ತಳಹದಿ ಇದೆ ಎಂಬುದು ನನಗೆ ನೀವು ತೋರಿಸಿದ ವಿಕಿ ನೋಡಿಯೇ ಗೊತ್ತಾಗಿದ್ದು...ಇದು ಜನರ ಆಡು ಭಾಷೆಯಲ್ಲಿ ಬಳಕೆಯಾಗುವ ಒಂದು ಮಾತು .. ನಮ್ಮಲ್ಲಿ ಬಹಳಷ್ಟು ಹಿರಿಯರು ಹೀಗೆ ಮಾತಾಡುವುದನ್ನು ನಾನು ಕೇಳಿದ್ದೇನೆ . ನಿಜವಾಗಿಯೂ ತುಂಬಾ ಕುತೂಹಲಕಾರಿ ವಿಷಯ.ಧನ್ಯವಾಗಳು ಗಣೇಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನೀವು ಎಸಿ ಬಸ್ಸಿನ ಮತ್ತು ಅದರಲ್ಲಿನ ಪ್ರಯಾಣಿಕರ (ಟೆಕ್ಕಿಗರು )ಬಗ್ಗೆ ಹೇಳಿದ್ದು ೧೦ ೦ ೦ ೦% ಸರಿ......... ನಾ ಕೆಲವೊಮ್ಮೆ ಅನಿವಾರ್ಯವಾಗಿ ಮಾಮೂಲಿ ಬಸ್ಸಿಗೆ ಬದಲಾಗಿ ಈ ಎಸಿ ಬಸ್ಸು ಹಿಡಿಯುದು ಆಗೆಲ್ಲ ನನಗೆ ನೀವ್ ಹೇಳಿದ ಅನುಭವಗಳು ಆಗಿವೆ.... !! ಮಾಮೂಲಿ ಬಸ್ಸಲಿ ಬರುವ ಅದೇ ಜನರ ಹಾವ ಭಾವ ಮೂಡು ಈ ಎಸಿ ಬಸ್ಸು ಹತ್ತಿದ ಕೂಡಲೇ ಬದಲಾಗೋದು ಅಚ್ಚರಿ ..!! ಈ ಎಸಿ ಬಸ್ಸಲಿ ನಾವ್ ಪ್ರಯಾಣಿಸಿದರೆ ನಾವ್ ಅಪ್ಪಿ ತಪ್ಪಿ ಫಾರಿನ್ನಲ್ಲಿ ಇರುವೆವ ಎಂಬ ಭಾವ ಮೂಡದೆ ಇರದು...... !! ಓಹೋ ಎಸಿ ಕಾರಣವ? ಅಲ್ಲ ಜನರ ಆ ಮಟ್ಟದ ಸೈಲನ್ಸ್ ಅರ್ಥಾತ್ ಪ್ರಶಾಂತತೆ -ಅದೇ ಮಾಮೂಲಿ ಬಸ್ಸ್ಸಲ್ಲಿ ಯಾರದೋ ಮೊಬೈಲು ಹಾಡು ರಿಂಗಣ -ಇನ್ಯಾರದೋ ಗೊಣಗುವಿಕೆ ನಿರ್ವಾಹಕರ ಪಾ ಪಾ ಪ್ರಯಾಣಿಕರ ಜಗಳ ಒಂದೇ ಎರಡೇ ....??? ಇಲ್ಲಿ ಮಾತ್ರ ಎಲ್ಲರೂ ಅತಿ ಶಿಸ್ತು -ಸದ್ಗುಣ ಶೀಲರು -ಮುಖ ಮಾತ್ರ ಗಂಟು ... ;())) ತಮ್ ಬಸ್ಸು ಸುತ್ತ ಮುತ್ತ ಹೋಗುವ ಬರುವ ವಾಹನಗಳು ಜನರನ್ನು ಸಹಾ ನೋಡುವ ಮನಸ್ಸು ಮಾಡದ ಜನ..... ಅದೇ ಬಸ್ಸು ಇಳಿದ ಕೂಡಲೆ ಮತ್ತದೇ ಮುಂಚಿನ ಭಾವ -ಅದೇ ದೆ....!! ಇನ್ನು ಈ ಬಸ್ಸಲಿ ಹೋದರೆ ಅದೇ ನಿರ್ವಾಹಕರು ತೋರುವ ಸ್ನೇಹ ಪ್ರೀತಿ ಆ ಸೇವೆ ಅಹ... ಅಹ.... ಏನು ಹೇಳಲಿ? ಅದೇ ನ್ರ್ವಾಹಕರನ್ನ ಮಾಮೂಲಿ ಬಸ್ಸಲಿ ನೋಡಿರುವೆ -ಅಲ್ಲಿ ತದ್ವಿರುದ್ಧ ಭಾವ ಹಾವ.... . ಹೊಯ್ ಕೈ....!! ನಿಜವಾಗಿ ಹೇಳುವುದಾದರೆ ಈ ಸರಕಾರೀ ಬಸ್ಸುಗಳಲಿ ಹೋಗ್ವಾಗ ಬರವಾಗ ಆಗುವ ಅನುಭವಗಳು ವಿಭಿನ್ನ...ಮನೋರಂಜಕ ,...!! ನಿಮ್ಮ ಬರಹ ಮುಂದಿನ ಭಾಗದ ನಿರೀಕ್ಷೆಯಲ್ಲಿ .. ಶುಭವಾಗಲಿ... \।/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನೀವು ಹೇಳಿದಂತೆ ಈ ಸರಕಾರೀ ಬಸ್ಸುಗಳಲಿ ಆಗುವ ಅನುಭವಗಳು ವಿಭಿನ್ನ...ಮನೋರಂಜಕ..ಈ ನಿಟ್ಟಿನಲ್ಲಿ ಒಂದು ತಿಳಿಯಾದ ಅನುಭವ ಇಲ್ಲಿದೆ "ಹುಚ್ಹ್ ಬಸ್ಸು..." ಸ್ವಲ್ಪ ದಿನಗಳ ಹಿಂದೆ ಬರೆದದ್ದು . ಪ್ರತಿಕ್ರಿಯೆಗೆ ಧನ್ಯವಾದಗಳು ವೆಂಕಟೇಶ್ ಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬಸ್ಸಿನ‌ "ಏರ್‍ ಕ0ಡಿಶನ್ಡ್" ವಾತಾವರಣವನ್ನು ನಗರ ಜೀವನದ‌ ನಿತ್ಯ‌ ನರಕದ‌ ತಯಾರಿಯಾಗಿ ಬಹಳ‌ ಚೆನ್ನಾಗಿ ಸೆರೆ ಹಿಡಿದಿದ್ದೀರಿ. ಉಸಿರಾಡುವುದೇ ಕಷ್ಟವಾದಾಗ‌ ಮಾತು ಯಾರಾಡುತ್ತಾರೆ? ಕನ್ನಡೇತರರಿಗೆ ಕನ್ನಡ‌ ಕಲಿಯದೇ ಇರಲು ಒಳ್ಳೆಯ‌ ಸಬೂಬು (ವಿಷಾದದ‌ ನಗೆ).
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.